7

ಇನ್ನಷ್ಟು ದಿನ ಏರಿಳಿತ ಸಾಧ್ಯತೆ

ಕೆ. ಜಿ. ಕೃಪಾಲ್
Published:
Updated:
ಇನ್ನಷ್ಟು ದಿನ ಏರಿಳಿತ ಸಾಧ್ಯತೆ

ಷೇರುಪೇಟೆಯಲ್ಲಿ  ಸಂವೇದಿ ಸೂಚ್ಯಂಕ ಸಾಮಾನ್ಯವಾಗಿ ಒಮ್ಮೆ ದಾಖಲೆ ಮಟ್ಟಕ್ಕೆ ತಲುಪಿದ ನಂತರ ಮತ್ತೊಮ್ಮೆ ಹೊಸ ದಾಖಲೆಗೆ ಜಿಗಿತ ಕಾಣಲು ಸಮಯಾವಕಾಶ ಬೇಕಾಗುತ್ತದೆ. ಶುಕ್ರವಾರ ಷೇರುಪೇಟೆ ಚುರುಕಾದ ಏರಿಕೆ ಕಂಡರೂ ಸಂವೇದಿ ಸೂಚ್ಯಂಕ 30,176 ರವರೆಗೂ ತಲುಪಿ, 29,824 ಅಂಶಗಳಿಗೆ  ಕುಸಿದು 29,859ಕ್ಕೆ ಕೊನೆಯಾದ ಅಂಶ ಇದನ್ನು ಪುಷ್ಟೀಕರಿಸುತ್ತದೆ. 

ಇದುವರೆಗೂ ಪ್ರಕಟವಾದ ಕಾರ್ಪೊರೇಟ್ ಫಲಿತಾಂಶ ಹೆಚ್ಚು ನಕಾರಾತ್ಮಕವಾಗಿರದೆ ಇರುವುದು, ಪೇಟೆಯೊಳಗೆ ನುಸುಳಿ ಬರುತ್ತಿರುವ ಹಣದ ಒಳ ಹರಿವು  ಚಟುವಟಿಕೆಗಳನ್ನು ವರ್ಣರಂಜಿತವಾಗಿ ಮಾಡಿದೆ. 

ಈ ಸಂದರ್ಭದಲ್ಲಿ ಗಮನಿಸಬೇಕಾದ ಅಂಶವೆಂದರೆ ಈಗಲೂ ಚಟುವಟಿಕೆ ಹೆಚ್ಚಾಗಿ ಊಹಾತ್ಮಕವಾಗಿದ್ದು,  ವಿಲೇವಾರಿಯಾಗುತ್ತಿರುವ ಷೇರುಗಳ ಪ್ರಮಾಣ ಬಹಳ ಕಡಿಮೆ ಪ್ರಮಾಣದಲ್ಲಿದೆ. ಉದಾಹರಣೆಗೆ ಕೆನರಾ ಬ್ಯಾಂಕ್ ಷೇರು ಶುಕ್ರವಾರ ಭಾರಿ ಏರಿಳಿತ ಪ್ರದರ್ಶಿತವಾದ ದಿನ  ಶೇ 4.86ರಷ್ಟು ಮಾತ್ರ ವಿಲೇವಾರಿಯಾಗಿ ಉಳಿದಂತೆ ದಿನನಿತ್ಯದ ಚುಕ್ತಾ ವ್ಯಾಪಾರವಾಗಿದೆ. 

ಐಸಿಐಸಿಐ ಬ್ಯಾಂಕ್ ಷೇರು ಅಂದು ತನ್ನ ವಾರ್ಷಿಕ ಗರಿಷ್ಠ  ₹ 301.85 ನ್ನು ತಲುಪಿ ನಂತರ ₹294.5 ಗೆ ಕುಸಿದು ₹298 ರ ಸಮೀಪ ಕೊನೆಗೊಂಡರೂ ಶೇ 60 ರಷ್ಟು ವಹಿವಾಟು ವಿಲೇವಾರಿಯೊಂದಿಗೆ ನಡೆದಿದೆ.

ಶುಕ್ರವಾರ ನಡೆದ ವಹಿವಾಟಿನಲ್ಲಿ ಹೆಚ್ಚಿನ ಸರ್ಕಾರಿ ಬ್ಯಾಂಕಿಂಗ್ ವಲಯದ ಷೇರುಗಳು ವಾರ್ಷಿಕ ಗರಿಷ್ಠ ತಲುಪಿದವು. ಈ ಬೆಳವಣಿಗೆಯಲ್ಲಿ  ಕಳೆದ ಒಂಬತ್ತು ವರ್ಷಗಳ ನಂತರ ₹1,400 ದಾಟಿದೆ ಎಂದು ಪ್ರಚಾರ ಪಡೆದುಕೊಂಡ ರಿಲಯನ್ಸ್ ಇಂಡಸ್ಟ್ರೀಸ್‌ನ ತಿಂಗಳ ಕನಿಷ್ಠ ಬೆಲೆ ₹1,325ರ ಬೆಲೆಗೆ ಕುಸಿಯಿತು.  

ಪೇಟೆಯಲ್ಲಿ ಷೇರು ಖರೀದಿಸುವಾಗ ಕೇವಲ ಒಂದು ಸಂಗತಿಯನ್ನಷ್ಟೇ ಗಣನೆಗೆ ತೆಗೆದುಕೊಳ್ಳುವುದು ಸರಿಯಲ್ಲ.  ಮುಂದಿನ ದಿನಗಳಲ್ಲಿ ಹೆಚ್ಚಿನ ಕಂಪೆನಿಗಳು ತಮ್ಮ ತ್ರೈಮಾಸಿಕ / ವಾರ್ಷಿಕ ಫಲಿತಾಂಶಗಳನ್ನು ಪ್ರಕಟಿಸಲಿರುವುದರಿಂದ ಏರಿಳಿತ ವಾತಾವರಣ ಮುಂದುವರೆಯುವ ಸಾಧ್ಯತೆ ಹೆಚ್ಚು.ಗುರುವಾರದ ವಹಿವಾಟು ರಭಸವಾಗಿದ್ದು, ಸರ್ಕಾರಿ ಸ್ವಾಮ್ಯದ  ಎಸ್‌ಬಿಐ, ಕೆನರಾ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಯೂನಿಯನ್ ಬ್ಯಾಂಕ್‌ ಚುರುಕಾದ ಏರಿಕೆ ಪ್ರದರ್ಶಿಸಿದವು.  ಖಾಸಗಿ ವಲಯದ ಐಸಿಐಸಿಐ ಬ್ಯಾಂಕ್, ಆ್ಯಕ್ಸಿಸ್ ಬ್ಯಾಂಕ್ ಉತ್ತಮ ಏರಿಕೆ ಕಂಡವು. 

ಸೋಜಿಗದ ಸಂಗತಿ ಎಂದರೆ,  ಬುಧವಾರ ತನ್ನ ಫಲಿತಾಂಶ ಪ್ರಕಟಿಸಿದ ಐಸಿಐಸಿಐ ಬ್ಯಾಂಕ್ ಗಳಿಸಿದ ಬಡ್ಡಿ ಇಳುವರಿಯ ಪ್ರಮಾಣ ಉತ್ತಮವಾಗಿದ್ದರೂ, ಎನ್‌ಪಿಎ ಪ್ರಮಾಣ ಹೆಚ್ಚಾಗಿದ್ದರು ಸಹ ಗುರುವಾರದ ವಹಿವಾಟಿನಲ್ಲಿ ಷೇರಿನ ಬೆಲೆ ಸುಮಾರು ಶೇ10 ರಷ್ಟು ಅಂದರೆ ಹಿಂದಿನ ದಿನದ

₹272.75ರ ಸಮೀಪದಿಂದ ₹299.90 ರವರೆಗೂ ಏರಿಕೆ ಕಂಡು ವಾರ್ಷಿಕ ದಾಖಲೆ ನಿರ್ಮಿಸಿತು.  ಕಳೆದ ಒಂದು  ವರ್ಷದಲ್ಲಿ ಐಸಿಐಸಿಐ ಬ್ಯಾಂಕ್ ಕೇವಲ ಶೇ 7ರಷ್ಟು ,  ಬ್ಯಾಂಕ್ ಆಫ್ ಬರೋಡ ಶೇ 15 ರಷ್ಟು ಮಾತ್ರ  ಏರಿಕೆ   ಕಂಡ ಅಂಶ ಗಮನಿಸಿದಾಗ  ವಹಿವಾಟುದಾರರು ಬ್ಯಾಂಕಿನ ಎನ್‌ಪಿಎ ಹೆಚ್ಚಿದ್ದರೂ ಚಟುವಟಿಕೆಗೆ ಆಯ್ಕೆ ಮಾಡಿಕೊಂಡಿದ್ದೇಕೆ ಎಂಬುದರ ಅರಿವಾಗುವುದು. 

ಹಿಂದಿನ ಒಂದು ವರ್ಷದಲ್ಲಿ ಬ್ಯಾಂಕಿಂಗ್ ವಲಯದ ಎಚ್‌ಡಿಎಫ್‌ಸಿ ಬ್ಯಾಂಕ್ ಶೇ40, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶೇ 48, ಇಂಡಸ್ ಇಂಡ್ ಬ್ಯಾಂಕ್ ಶೇ 48, ಎಸ್ ಬ್ಯಾಂಕ್ ಶೇ 77 ರ ಜಿಗಿತದಿಂದ ಮಿಂಚಿವೆ.  ಗುರುವಾರ ಸಂವೇದಿ ಸೂಚ್ಯಂಕ ಕಂಡಿರುವ 231 ಅಂಶಗಳ ಏರಿಕೆಯಲ್ಲಿ ಐಸಿಐಸಿಐ ಬ್ಯಾಂಕ್ ಷೇರಿನ ಕೊಡುಗೆಯು 160 ಅಂಶಗಳಷ್ಟಿರುವುದು ಮಹತ್ವದ ವಿಷಯ.  ಮತ್ತೊಂದು ವಿಸ್ಮಯಕಾರಿ ಅಂಶವೆಂದರೆ ಬುಧವಾರ ಪೇಟೆಯ ವಹಿವಾಟಿನ ಗಾತ್ರ ₹3.97 ಲಕ್ಷ ಕೋಟಿಯಷ್ಟಿದ್ದರೆ, ಗುರುವಾರ  ವಹಿವಾಟಿನ ಗಾತ್ರ ₹8.07 ಲಕ್ಷ ಕೋಟಿಗೆ ಏರಿಕೆ ಕಂಡಿದೆ.   ಅಂದು  ವಹಿವಾಟಾದ  ಐಸಿಐಸಿಐ ಬ್ಯಾಂಕ್  ಶೇ60 ರಷ್ಟು  ವಿಲೇವಾರಿಯಾಗಿರುವ ಅಂಶ ಆಸಕ್ತಿದಾಯಕವಾಗಿದೆ. ಕೆನರಾ ಬ್ಯಾಂಕ್ ಶೇ 13.68ರಷ್ಟು ವಿಲೇವಾರಿ ವಹಿವಾಟು ನಡೆದಿದೆ. ಎಂಆರ್ಎಫ್ ಷೇರಿನ ಬೆಲೆಯು ದಿನದ ಅಂತಿಮ ಕ್ಷಣಗಳಲ್ಲಿ ₹2,000 ದಷ್ಟು  ಕುಸಿಯುವಂತೆ  ಮಾಡಿತು .

ಸ್ಪೆಷಾಲಿಟಿ ಕೆಮಿಕಲ್ಸ್ ಕಂಪೆನಿ ಬಿಎಎಸ್ಎಫ್ ಲಿಮಿಟೆಡ್ ಕಂಪೆನಿಯ ಷೇರಿನ ಬೆಲೆಯು ಗುರುವಾರ ಪ್ರಕಟಿಸಿದ ಫಲಿತಾಂಶಕ್ಕಿಂತ ಮುಂಚೆ ₹1,325ರ ಸಮೀಪವಿದ್ದು, ಪ್ರಕಟಣೆ ನಂತರ ತ್ವರಿತ  ಕುಸಿತಕ್ಕೊಳಗಾಗಿ ₹1,305ರ ಸಮೀಪಕ್ಕೆ  ಬಂದು ನಿಂತಿತು. ಅಷ್ಟೇ ವೇಗವಾಗಿ ಚೇತರಿಕೆ ಕಂಡು ಕೇವಲ ಹತ್ತರಿಂದ ಹದಿನೈದು ನಿಮಿಷಗಳಲ್ಲಿ ₹ 1,384 ರವರೆಗೂ ಜಿಗಿತ ಕಂಡಿತು.  ಹಿಂದಿನ ವಾರದಲ್ಲಿ ಟಿವಿಎಸ್ ಮೋಟಾರ್ ಷೇರಿನ ರೀತಿ ಈ ಷೇರು ಚಲಿಸಿರುವುದು ಗಮನಾರ್ಹ ಸಂಗತಿಯಾಗಿದೆ.

ಅದೇ ರೀತಿ ಫಲಿತಾಂಶ ಪ್ರಕಟಣೆಯ ನಂತರ ಕೋರಮಂಡಲ್ ಇಂಟರ್ ನ್ಯಾಷನಲ್ ₹ 400 ರ ಗಡಿ ದಾಟಿತ್ತು.  ಪೇಟೆಯತ್ತ ಹರಿದುಬರುತ್ತಿರುವ ಹಣವು ಉತ್ತಮ ಸಾಧನೆಯಾಧಾರಿತ ಕಂಪೆನಿಗಳತ್ತ ಸಾಗುತ್ತಿರುವುದು ಅಲ್ಟ್ರಾ ಮರೈನ್ ಪಿಗ್ಮೆಂಟ್ಸ್, ಹಿಂದೂಸ್ತಾನ್ ಯುನಿಲಿವರ್, ಕಾಲ್ಗೇಟ್‌ನಂತಹ ಎಫ್ಎಂಸಿಜಿ ವಲಯದ ಕಂಪೆನಿ ಷೇರುಗಳ ಬೆಲೆ ಜಿಗಿತದಿಂದ ತಿಳಿಯುತ್ತದೆ.

ಒಟ್ಟಾರೆ ವಾರದಿಂದ ವಾರಕ್ಕೆ ಸಂವೇದಿ ಸೂಚ್ಯಂಕ ಸುಮಾರು 60 ಅಂಶಗಳ ಇಳಿಕೆ ಕಂಡರೆ ಮಧ್ಯಮ ಶ್ರೇಣಿ ಸೂಚ್ಯಂಕ 80 ಅಂಶಗಳ  ಕೆಳಮಧ್ಯಮ ಶ್ರೇಣಿಯ ಸೂಚ್ಯಂಕ 17 ಅಂಶಗಳ ಇಳಿಕೆ ಕಂಡವು. 

ವಿದೇಶಿ ವಿತ್ತೀಯ ಸಂಸ್ಥೆಗಳು ತಮ್ಮ ಮಾರಾಟದ ಹಾದಿಯಲ್ಲಿ ಒಟ್ಟು ₹2,094 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದರೆ ಸ್ವದೇಶಿ ವಿತ್ತೀಯ ಸಂಸ್ಥೆಗಳು ₹1,875 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿವೆ. ಷೇರುಪೇಟೆ ಬಂಡವಾಳೀಕರಣ ಮೌಲ್ಯ ಗುರುವಾರ  ₹125.61 ಲಕ್ಷ ಕೋಟಿ ತಲುಪಿ ಸಾರ್ವಕಾಲಿಕ ದಾಖಲೆ ನಿರ್ಮಿಸಿ, ₹124.44 ಲಕ್ಷ ಕೋಟಿಯಲ್ಲಿ ವಾರಾಂತ್ಯ ಕಂಡಿದೆ.

ಬೋನಸ್ ಷೇರು: ಐಸಿಐಸಿಐ ಬ್ಯಾಂಕ್ 1:10 ರ ಅನುಪಾತದ ಬೋನಸ್ ಷೇರು ಪ್ರಕಟಿಸಿದೆ. ಟ್ರೇಡ್ ಟು ಟ್ರೇಡ್ ವಿಭಾಗದ ಶಾಂತಾಯ್ ಇಂಡಸ್ಟ್ರೀಸ್ ಕಂಪೆನಿಯು 2:1 ರ ಅನುಪಾತದ ಬೋನಸ್ ಪ್ರಕಟಿಸಿದೆ.

ಹೊಸ ಷೇರು: 46 ವರ್ಷ ಇತಿಹಾಸ ಹೊಂದಿರುವ  ಸರ್ಕಾರಿ ಸ್ವಾಮ್ಯದ ಮಿನಿ ನವರತ್ನ ಕಂಪೆನಿ ಹೌಸಿಂಗ್ ಅಂಡ್ ಅರ್ಬನ್ ಡೆವೆಲಪ್ ಮೆಂಟ್ ಕಾರ್ಪೊರೇಷನ್ ಲಿಮಿಟೆಡ್  ₹10 ರ ಮುಖಬೆಲೆಯ ಷೇರುಗಳು ಮೇ 8ರಿಂದ ಪ್ರತಿ ಷೇರಿಗೆ ₹56 ರಿಂದ ₹60 ರ ಅಂತರದಲ್ಲಿ ಸಾರ್ವಜನಿಕ ವಿತರಣೆಗೆ ತೆರೆದಿದೆ. ಅರ್ಜಿಯನ್ನು 200 ಷೇರುಗಳ ಗುಣಕಗಳಲ್ಲಿ ಸಲ್ಲಿಸಬೇಕು.  ರಿಟೇಲ್ ಹೂಡಿಕೆದಾರರಿಗೆ ಪ್ರತಿ ಷೇರಿಗೆ ₹2ರ ರಿಯಾಯಿತಿ ಲಭ್ಯವಿದೆ.

ಕೋಲ್ಕತ್ತಾ ಷೇರು ವಿನಿಮಯ ಕೇಂದ್ರದಲ್ಲಿ ವಹಿವಾಟಿಗೆ ನೋಂದಾಯಿಸಿಕೊಂಡಿರುವ ಕ್ಲಾಸಿಕ್ ಲೀಸಿಂಗ್ ಅಂಡ್ ಫೈನಾನ್ಸ್ ಲಿಮಿಟೆಡ್ ಕಂಪೆನಿ ಷೇರುಗಳು ಮುಂಬೈ  ಷೇರು ವಿನಿಮಯ ಕೇಂದ್ರದ ಎಕ್ಸ್ ಟಿ ವಿಭಾಗದಲ್ಲಿ ಮೇ 4 ರಿಂದ ವಹಿವಾಟಿಗೆ ಬಿಡುಗಡೆಯಾಗಿದೆ.

ವಾರದ ವಿಶೇಷ

ತಕ್ಷಿಲ್ ಸೊಲ್ಯೂಷನ್ಸ್ ಲಿಮಿಟೆಡ್  ಷೇರುಗಳು ಸೆಪ್ಟೆಂಬರ್ 2011 ರಲ್ಲಿ ವರ್ಣರಂಜಿತ ವಿವರಗಳೊಂದಿಗೆ  ಪ್ರತಿ ಷೇರಿಗೆ ₹150 ರಂತೆ ಆರಂಭಿಕ ಷೇರು ವಿತರಣೆಯಾಗಿದ್ದವು. ಆ ಸಂದರ್ಭದಲ್ಲಿ ರೇಟಿಂಗ್ ಕಂಪೆನಿ  ಕೇರ್ ಗ್ರೇಡ್ -2 ರೇಟಿಂಗ್ ಕೊಟ್ಟಿತ್ತಾದರೂ ಸುಮಾರು ಮೂರು ಪಟ್ಟು ಹೆಚ್ಚು  ಸಂಗ್ರಹವಾಯಿತು.   ಷೇರು ವಿನಿಮಯ ಕೇಂದ್ರದ ಮೊದಲ ದಿನದ ವಹಿವಾಟಿನಲ್ಲಿ ಷೇರಿನ ದರವು ₹185ರವರೆಗೂ ಏರಿಕೆ ಕಂಡಿತ್ತು.  

ಆರಂಭದ ದಿನದ ವಹಿವಾಟು ಅಗಾಧವಾಗಿ ವಿತರಿಸಿದ 55 ಲಕ್ಷ ಷೇರಿಗೆ ಬದಲಾಗಿ ಎರಡು ವಿನಿಮಯ ಕೇಂದ್ರಗಳಲ್ಲಿ ಒಟ್ಟು 9 ಕೋಟಿಗೂ ಮೀರಿದ ಸಂಖ್ಯೆಯ ವಹಿವಾಟಾಗಿದ್ದು, ನಿಯಂತ್ರಕರ ಕೆಂಗಣ್ಣಿಗೆ ಗುರಿಯಾಗಬೇಕಾಯಿತು. ತನಿಖೆಯಿಂದ  ಕಂಪೆನಿಯು ಸತ್ಯಾಂಶಗಳನ್ನು ತಡೆಹಿಡಿದಿರುವ ವಿಚಾರ ಬೆಳಕಿಗೆ ಬಂತಲ್ಲದೆ ಸ್ವಹಿತಾಸಕ್ತ ಚಟುವಟಿಕೆ ನಡೆಸಿರುವ ಕಾರಣ ನಿಯಂತ್ರಕ ‘ಸೆಬಿ’ ದಂಡ ವಿಧಿಸಿತು. 

2013ರ ವೇಳೆಗಾಗಲೇ ಕಂಪೆನಿಯ ಷೇರಿನ ಬೆಲೆಯು ಒಂದಂಕಿಗೆ ಕುಸಿದು, ಐಪಿಒನಲ್ಲಿ ಅಲಾಟ್‌ಮೆಂಟ್ ಪಡೆದವರಿಗೆ ಅಗಾಧ ಹಾನಿಯುಂಟು ಮಾಡಿತು.  ತದನಂತರ ಷೇರನ್ನು ಅಮಾನತು ಮಾಡಲಾಗಿದೆ.  ಈಗ ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್ ಮೇ 12 ರಿಂದ ಷೇರುಗಳನ್ನು ಡಿ ಲಿಸ್ಟ್ ಮಾಡಲಿದೆ.  ಈ ಷೇರು ಹೊಂದಿರುವವರು ಹೊರಬರುವ ಅವಕಾಶದಿಂದ ವಂಚಿತರಾದಂತೆಯೇ ಸರಿ. 

ಇದು ಅರಿಯದೆ ಎಲ್ಲವನ್ನೂ ಪೇಟೆಯ ಚಟುವಟಿಕೆಯ ಗಾತ್ರ, ದರಗಳ ಆಧಾರದ ಮೇಲೆ ಕಂಪೆನಿಯ ಗುಣಮಟ್ಟ ನಿರ್ಧರಿಸುವುದು ಸರಿಯಲ್ಲವೆಂದು ತಿಳಿಹೇಳುತ್ತದೆ.  ಪೇಟೆಗಳು ಗರಿಷ್ಟದಲ್ಲಿದ್ದಾಗ ಇಂತಹ ಕೆಳಮಟ್ಟದ ಶ್ರೇಣಿ ಕಂಪೆನಿಗಳೂ ಮಾರಾಟಮಾಡಿ ಹೊರಬಂದರೆ ಬಂಡವಾಳ ಸುರಕ್ಷಿತವಾಗಿರುತ್ತದೆ.

ಕಂಪೆನಿಗಳ ಲಾಭಾಂಶ  ವಿವರ

ಪ್ರಾಕ್ಟರ್ ಅಂಡ್ ಗ್ಯಾಂಬಲ್ ಪ್ರತಿ ಷೇರಿಗೆ ₹362,  ಐಷರ್ ಮೋಟಾರ್  ₹100, ವಿಕ್ಟೋರಿಯಾ ಮಿಲ್ಸ್  ₹100, ಎಂಆರ್ಎಫ್  ₹54,  ಇಂಡಸ್ಟ್ರಿಯಲ್ ಅಂಡ್ ಪ್ರುಡೆನ್ಸಿಯಲ್  ₹25,  ಎನ್ಐಐ ಟಿ ಟೆಕ್ನಾಲಜಿಸ್ ₹12.50,  ಸಿರಾ ಸ್ಯಾನಿಟರಿ  ₹12, ಎಲ್ ಅಂಡ್ ಟಿ ಇನ್ಫೋಟೆಕ್  ₹9.70, ಗ್ರೇಟ್ ಈಸ್ಟರ್ನ್ ಶಿಪ್ಪಿಂಗ್  ₹650, ಟಾಟಾ ಕಮ್ಯುನಿಕೇಶನ್  ₹6,  ಇಮಾಮಿ  ₹5.25, ಅಲೆಂಬಿಕ್ ಫಾರ್ಮ  ₹4, ಎಚ್‌ಡಿಎಫ್‌ಸಿ ಲಿಮಿಟೆಡ್, ಬ್ಲೂ ಡಾರ್ಟ್ ಲಿಮಿಟೆಡ್, ಮಾನ್ಸಾಂಟೊ ಲಿಮಿಟೆಡ್,  ಎಂಸಿಎಕ್ಸ್  ಕಂಪೆನಿಗಳು   ₹15, ಅಪೋಲೋ ಟೈರ್,  ಐಜಿ ಪೆಟ್ರೋ ,  ಡೈಚಿ ಕರ್ಕಾರಿಯಾ ಕಂಪೆನಿ ₹3, ಉಳಿದಂತೆ ಐಸಿಐಸಿಐ ಬ್ಯಾಂಕ್, ಕನ್ಸಾಯಿ ನೆರೊಲ್ಯಾಕ್   ₹2.50, ಶಂಕರ  ಬಿಲ್ಡಿಂಗ್ ಪ್ರಾಡಕ್ಟ್ಸ್  ₹2.75, ದಾಲ್ಮಿಯಾ ಭಾರತ್ ಶುಗರ್  ₹2, ಒಬೆರಾಯ್ ರಿಯಾಲ್ಟಿ ಪ್ರತಿ ಷೇರಿಗೆ ₹2,  ಆರ್‌ಬಿಎಲ್ ಬ್ಯಾಂಕ್  ₹1.80,  ಗ್ರೀವ್ಸ್ ಕಾಟನ್  ₹1.50, ಇಂಡಾಗ್ ರಬ್ಬರ್  ₹1.50,  ಅಸ್ಟೆಕ್ ಲೈಫ್ ಸೈನ್ಸ್  ₹1.50.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry