7

ತಂತ್ರಜ್ಞಾನದಿಂದ ಪ್ರಹಸನ, ನೃತ್ಯದವರೆಗೆ...

Published:
Updated:
ತಂತ್ರಜ್ಞಾನದಿಂದ ಪ್ರಹಸನ, ನೃತ್ಯದವರೆಗೆ...

ಬೆಂಗಳೂರು: ನಗರದ ಅರಮನೆ ಮೈದಾನದಲ್ಲಿ ನಾಲ್ಕು ದಿನಗಳಿಂದ ನಡೆಯುತ್ತಿದ್ದ ‘ಬೆಂಗಳೂರು ಆರೋಗ್ಯ ಉತ್ಸವ’ ಭಾನುವಾರ ಕೊನೆಗೊಂಡಿತು.

ಹೊಸ ಬಗೆಯ ಚಿಕಿತ್ಸೆಗಳು, ಅತ್ಯಾಧುನಿಕ ವೈದ್ಯಕೀಯ ಪರಿಕರಗಳು, ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಯಿಂದ ಆರೋಗ್ಯ ಸೇವೆಯಲ್ಲಿ ಆಗುತ್ತಿರುವ ಸುಧಾರಣೆಗಳು, ಹೊಸ ಔಷಧಗಳು, ಆರೋಗ್ಯಕ್ಕೆ ಪೂರಕ ಆಹಾರ, ವಿಮಾ ಯೋಜನೆಗಳು... ಹೀಗೆ ಆರೋಗ್ಯ  ಕ್ಷೇತ್ರದ ನವನವೀನ ವಿಚಾರಗಳನ್ನು ಒಂದೇ ಸೂರಿನಡಿ ಒದಗಿಸಲಾಗಿತ್ತು. ಉತ್ಸವದಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದರು.

ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಅನಂತಕುಮಾರ್‌ ಉತ್ಸವದಲ್ಲಿ ಪಾಲ್ಗೊಂಡು ವಿವಿಧ ಮಳಿಗೆಗಳನ್ನು ವೀಕ್ಷಿಸಿದರು.

ವಿವಿಧ ಪ್ರಶಸ್ತಿ ಪ್ರದಾನ: ಮೈ ಕ್ಲಿನಿಕ್‌ ಕೇರ್‌ಗೆ ‘ತಾಯಂದಿರಿಗೆ ಹೆಚ್ಚು ಉಪಯುಕ್ತ ಮಳಿಗೆ’ ಪ್ರಶಸ್ತಿ, ಇಯರಿಂಗ್‌ ಕ್ಲಿನಿಕ್‌ಗೆ ‘ಆಸಕ್ತಿಕರ ಮಳಿಗೆ’, ಆಯುಷ್‌ ಇಲಾಖೆಯ ಮಳಿಗೆಗೆ ‘ಹೆಚ್ಚು ಸಕ್ರಿಯ ಮಳಿಗೆ’, ಮೈಕ್ರೊ ಲ್ಯಾಬ್ಸ್‌ಗೆ ‘ಹೆಚ್ಚು ವೈವಿಧ್ಯಮಯ ಮಳಿಗೆ’, ರಾಷ್ಟ್ರೀಯ ಆರೋಗ್ಯ ಅಭಿಯಾನಕ್ಕೆ  ‘ಜನಸಾಮಾನ್ಯರಿಗೆ ಉಪಯುಕ್ತ ಮಳಿಗೆ’ ಹಾಗೂ ಆರೋಗ್ಯ ಇಲಾಖೆಯ ಮಳಿಗೆಗೆ ‘ಉತ್ತಮ ಪ್ರದರ್ಶನದ ಮಳಿಗೆ’ ಪ್ರಶಸ್ತಿಯನ್ನು ಅವರು ಪ್ರದಾನ ಮಾಡಿದರು.

ಪ್ರಮಾಣಪತ್ರ ವಿತರಣೆ: ನಾಟಕ, ನೃತ್ಯ, ಪ್ರಹಸನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟ ಬೆಂಗಳೂರು ವೈದ್ಯಕೀಯ ಕಾಲೇಜಿನ ಅಪಘಾತ ಮತ್ತು ತುರ್ತು ಚಿಕಿತ್ಸಾ ವಿಭಾಗದ ವಿದ್ಯಾರ್ಥಿಗಳು, ವಾಣಿ ವಿಲಾಸ ಆಸ್ಪತ್ರೆಯ ವಿದ್ಯಾರ್ಥಿಗಳು, ಸಮಾಧಾನ್‌ ಸೆಂಟರ್‌ ಫಾರ್‌ ಲೈಫ್‌ ಸ್ಕಿಲ್‌, ಮಂಡ್ಯದ ಸಮರ್ಪಣಾ ಕಲಾ ತಂಡ, ಚಾಮರಾಜಪೇಟೆಯ ಕರ್ನಾಟಕ ಜನಪದ ಕಂಸಾಳೆ ಕಲಾವಿದರ ಸಂಘಕ್ಕೆ ಪ್ರಮಾಣಪತ್ರಗಳನ್ನು ನೀಡಲಾಯಿತು.

ಅನಂತಕುಮಾರ್‌ ಮಾತನಾಡಿ, ‘ನಗರದಲ್ಲಿ ಇತ್ತೀಚೆಗೆ ಔಷಧ ಮತ್ತು ವೈದ್ಯಕೀಯ ಉಪಕರಣಗಳ ಕುರಿತ ವಸ್ತುಪ್ರದರ್ಶನ ಮತ್ತು ಸಮಾವೇಶ ‘ಇಂಡಿಯಾ ಫಾರ್ಮಾ–2017’ ಆಯೋಜಿಸಲಾಗಿತ್ತು. ಮುಂದಿನ ವರ್ಷದಿಂದ ಈ ಕಾರ್ಯಕ್ರಮದ ಜತೆಗೆ ಆರೋಗ್ಯ ಉತ್ಸವವನ್ನು ಸೇರಿಸಿಕೊಳ್ಳುತ್ತೇವೆ’ ಎಂದು ಹೇಳಿದರು.

ವೈದ್ಯರ ಮೇಲೆ ಹಲ್ಲೆ: ಕಳವಳ

‘ಭಾರತದಲ್ಲಿ ವೈದ್ಯಕೀಯ ಕಾನೂನು ಸಮಸ್ಯೆಗಳು’ ವಿಷಯದ ಕುರಿತು ಸಂವಾದ ನಡೆಯಿತು.

ಮಣಿಪಾಲ್‌ ಆಸ್ಪತ್ರೆಯ ಸಮೂಹ ವೈದ್ಯಕೀಯ ನಿರ್ದೇಶಕ ಡಾ. ಎಸ್‌.ಸಿ. ನಾಗೇಂದ್ರ ಸ್ವಾಮಿ ಮಾತನಾಡಿ, ‘ನಿರ್ಲಕ್ಷ್ಯದ ಆರೋಪದಡಿ ವೈದ್ಯರ ಮೇಲೆ ಹಲ್ಲೆ ಮಾಡುವುದು, ಆಸ್ಪತ್ರೆಯ ಸ್ವತ್ತುಗಳಿಗೆ ಹಾನಿ ಉಂಟು ಮಾಡುವುದು ಕಾನೂನು ಪ್ರಕಾರ ಅಪರಾಧ. ಇದನ್ನು ಜನಸಾಮಾನ್ಯರು ಅರ್ಥ ಮಾಡಿಕೊಳ್ಳಬೇಕು’ ಎಂದರು.

‘ಅಪಘಾತ, ಕೊಲೆಯಂತಹ ಪ್ರಕರಣಗಳಲ್ಲಿ ವೈದ್ಯರು ಕೆಲ ನಿಯಮಗಳನ್ನು ಅನುಸರಿಸಬೇಕು. ಉದ್ದೇಶಪೂರ್ವಕವಾಗಿ ವೈದ್ಯರು ರೋಗಿಗಳಿಗೆ ತೊಂದರೆ ನೀಡುವುದಿಲ್ಲ. ಆದರೆ, ಇದನ್ನು ಅರ್ಥ ಮಾಡಿಕೊಳ್ಳದ ರೋಗಿಗಳ ಪೋಷಕರು ವೈದ್ಯರ ಮೇಲೆ ಹಲ್ಲೆಗೆ ಮುಂದಾಗುತ್ತಾರೆ. ಇದಕ್ಕೆ ಕಡಿವಾಣ ಹಾಕಬೇಕು’ ಎಂದು ಒತ್ತಾಯಿಸಿದರು.

ರಾಷ್ಟ್ರೀಯ ಕಾನೂನು ಶಾಲೆಯ ಪ್ರಾಧ್ಯಾಪಕ ಜೋಗ ರಾವ್‌, ‘ವೈದ್ಯರ ಸುರಕ್ಷತೆ ಹಾಗೂ ರಕ್ಷಣೆಗಾಗಿ ಕಾಯ್ದೆಗಳಿವೆ. ವೈದ್ಯರ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಜಾಮೀನುರಹಿತ ಪ್ರಕರಣ ದಾಖಲಿಸಿಕೊಳ್ಳಲಾಗುತ್ತದೆ. ಹೀಗಾಗಿ ರೋಗಿಗಳ ಸಂಬಂಧಿಗಳು ಸಂಯಮದಿಂದ ವರ್ತಿಸಬೇಕು’ ಎಂದರು.

ಬೆಂಗಳೂರು ನಗರ ಜಿಲ್ಲೆಯ ಕುಟುಂಬ ಕಲ್ಯಾಣ ಅಧಿಕಾರಿ ಡಾ. ಮಮತಾ, ‘ನಿರ್ಲಕ್ಷ್ಯದ  ಆರೋಪದಡಿ ರೋಗಿಗಳ ಪೋಷಕರು ವೈದ್ಯರ ಮೇಲೆ ಹಲ್ಲೆ ನಡೆಸುತ್ತಾರೆ. ವಾಸ್ತವದಲ್ಲಿ ಏನಾಗಿದೆ ಎಂಬುದನ್ನು ಪರಾಮರ್ಶಿಸಿ ನೋಡದೆ  ಏಕಾಏಕಿ ಹಲ್ಲೆ ನಡೆಸುವುದು ಸರಿಯಲ್ಲ’ ಎಂದು ಹೇಳಿದರು.

‘ಖಾಸಗಿ ಆಸ್ಪತ್ರೆಗಳಿಗಿಂತ ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸದ ಒತ್ತಡ ಹೆಚ್ಚಾಗಿದೆ. ಇದರಿಂದ ವೈದ್ಯರು ರೋಗಿಗಳೊಂದಿಗೆ ಸರಿಯಾಗಿ ಮಾತನಾಡಲು ಸಾಧ್ಯವಾಗದೇ ಇರಬಹುದು. ಇದನ್ನು ಅರ್ಥ ಮಾಡಿಕೊಂಡು, ವೈದ್ಯರಿಗೆ ಅಗತ್ಯ ಸಹಕಾರ ನೀಡಬೇಕು’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry