ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೆಬ್‌ಸೈಟ್‌ನಲ್ಲೂ ಸಿಗಲಿದೆ ಪಿಯು ಪಠ್ಯ!

Last Updated 7 ಮೇ 2017, 19:36 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಥಮ ಮತ್ತು ದ್ವಿತೀಯ ಪಿಯು ಪಠ್ಯಪುಸ್ತಕಗಳನ್ನು ಕೊಳ್ಳಲು ವಿದ್ಯಾರ್ಥಿಗಳು ಮಾರುಕಟ್ಟೆಗಳಲ್ಲಿ ಅಂಗಡಿಯಿಂದ ಅಂಗಡಿಗೆ ಅಲೆಯಬೇಕಾದ ಅಗತ್ಯವಿಲ್ಲ.  ಈ ಬಾರಿ ವೆಬ್‌ಸೈಟ್‌ನಿಂದಲೇ ಡೌನ್‌ಲೋಡ್‌  ಮಾಡಿಕೊಳ್ಳಬಹುದು.

ಮುದ್ರಕರ ಲಾಬಿ ಹಾಗೂ ದರ ನಿಯಂತ್ರಣ ಮಾಡುವ ಪ್ರಯತ್ನವಾಗಿ  ಪದವಿ ಪೂರ್ವ ಶಿಕ್ಷಣ ಇಲಾಖೆ ಮೊದಲ ಬಾರಿಗೆ ಪಠ್ಯ ಪುಸ್ತಕಗಳನ್ನು ವೆಬ್‌ಸೈಟ್‌ಗೆ ಅಪ್‌ಲೋಡ್‌ ಮಾಡಲು ತೀರ್ಮಾನಿಸಿದೆ.

ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕೋರ್ಸ್‌ಗೆ ಸಂಬಂಧಿಸಿದ ಎಲ್ಲ ಪುಸ್ತಕಗಳನ್ನು ಈ ಬಾರಿಯ ಶೈಕ್ಷಣಿಕ ವರ್ಷ ಆರಂಭ ಆಗುವುದರೊಳಗೆ ವೆಬ್‌ಸೈಟ್‌ಗೆ (http://www.pue.kar.nic.in) ಹಾಕಲಾಗುತ್ತದೆ.

ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ (ಎನ್‌ಸಿಇಆರ್‌ಟಿ) ಈಗಾಗಲೇ 1ರಿಂದ 12ನೇ ತರಗತಿವರೆಗಿನ ಎಲ್ಲ ಪುಸ್ತಕಗಳನ್ನು ವೆಬ್‌ಸೈಟ್‌ನಲ್ಲಿ ಮುಕ್ತವಾಗಿರಿಸಿದೆ. ಅದೇ ಮಾದರಿಯನ್ನು ಪಿಯು ಇಲಾಖೆ ಅನುಸರಿಸುತ್ತಿದೆ. 

ಮುದ್ರಕರ ಲಾಬಿ ನಿಯಂತ್ರಣ: ವಿಜ್ಞಾನ ಕೋರ್ಸ್‌ನ ಭೌತವಿಜ್ಞಾನ, ರಸಾಯನ ವಿಜ್ಞಾನ, ಗಣಿತ ಹಾಗೂ ಜೀವ ವಿಜ್ಞಾನ ವಿಷಯಗಳಿಗೆ ಸಂಬಂಧಿಸಿದ ಎನ್‌ಸಿಇಆರ್‌ಟಿ ಪಠ್ಯಗಳನ್ನು 2012–13ರಿಂದ ಯಥಾವತ್‌ ಆಗಿ ಅಳವಡಿಸಿಕೊಳ್ಳಲಾಗಿದೆ. ಈ ವರ್ಷದಿಂದ ವಾಣಿಜ್ಯ ವಿಷಯದ ಲೆಕ್ಕಶಾಸ್ತ್ರ, ಅರ್ಥಶಾಸ್ತ್ರ ಮತ್ತು ವ್ಯವಹಾರ ಅಧ್ಯಯನ  ವಿಷಯಗಳ ಪಠ್ಯಗಳನ್ನು ಯಥಾವತ್‌ ಆಗಿ ಅಳವಡಿಸಿಕೊಳ್ಳಲಾಗುತ್ತದೆ.


ಇಂಗ್ಲಿಷ್ ಪುಸ್ತಕಗಳನ್ನು ಎನ್‌ಸಿಇಆರ್‌ಟಿ ಮೂಲಕವೇ ಖರೀದಿಸಲಾಗುತ್ತದೆ. ಅಲ್ಲದೆ, ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗಾಗಿ ಈ ಪುಸ್ತಕಗಳನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ   ಕನ್ನಡಕ್ಕೆ ಭಾಷಾಂತರಿಸಿದ್ದು, ಅವುಗಳನ್ನು ಕರ್ನಾಟಕ ಪಠ್ಯ ಪುಸ್ತಕ ಸಂಘ ಮುದ್ರಿಸುತ್ತಿದೆ.  ತಮಿಳು, ತೆಲುಗು, ಮರಾಠಿ ಸೇರಿದಂತೆ ಭಾಷಾ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೂ ಅವರ ಭಾಷೆಯಲ್ಲಿಯೇ ಪುಸ್ತಕ ಪೂರೈಸಲಾಗುತ್ತಿದ್ದು, ಅವುಗಳನ್ನು ಸರ್ಕಾರಿ ಮುದ್ರಣಾಲಯ ಅಚ್ಚು ಹಾಕುತ್ತಿದೆ.

ಕನ್ನಡ, ಇಂಗ್ಲಿಷ್‌, ಇತಿಹಾಸ, ರಾಜ್ಯಶಾಸ್ತ್ರದಂಥ ಸಾಮಾನ್ಯ ವಿಷಯಗಳ ಪಠ್ಯಗಳನ್ನು  ಪದವಿ ಪೂರ್ವ ಶಿಕ್ಷಣ ಇಲಾಖೆ ನೀಡುತ್ತದೆ. ಇದನ್ನು ಖಾಸಗಿ ಮುದ್ರಕರು ಮುದ್ರಿಸಿ, ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ. ಇದಕ್ಕೆ ದರ ನಿಗದಿ ಮಾಡುವುದಕ್ಕೂ ಅವರು ಸ್ವತಂತ್ರರು.   ಅಲ್ಲದೆ, ಖಾಸಗಿ ಕಾಲೇಜುಗಳೊಂದಿಗೆ ಒಪ್ಪಂದ ಮಾಡಿಕೊಂಡು ಇಂತಹ ಮುದ್ರಕರಿಂದಲೇ ಪುಸ್ತಕ ಖರೀದಿಸ ಬೇಕು ಎಂದು ಒತ್ತಡ ಹೇರುತ್ತಾರೆ. ಇದನ್ನು ತಪ್ಪಿಸುವ ಉದ್ದೇಶದಿಂದ ವೆಬ್‌ಸೈಟ್‌ನಲ್ಲಿ  ಪುಸ್ತಕಗಳು ಲಭ್ಯ ವಾಗುವಂತೆ ಮಾಡಲಾಗುತ್ತಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.
ಮೇ ಅಂತ್ಯದೊಳಗೆ ಎಲ್ಲ ಪುಸ್ತಕಗಳು ಮಾರುಕಟ್ಟೆಯಲ್ಲಿ ಲಭ್ಯ ಇರಬೇಕು. ಅದರೆ, ಅನೇಕ ಬಾರಿ ವಿಳಂಬ ಆಗಿ ಪಾಠ ಪ್ರವಚನಗಳು ವೇಳಾಪಟ್ಟಿ ಪ್ರಕಾರ ನಡೆಯುವುದಿಲ್ಲ. ಶಿಕ್ಷಣ ಇಲಾಖೆ ಕ್ರಮದಿಂದ ಇನ್ನು ಮುಂದೆ ಇದು ತಪ್ಪಲಿದೆ.

ಪಠ್ಯಪುಸ್ತಕಗಳ ಮುದ್ರಣ ನಡೆಯುತ್ತಿದೆ. ಶೈಕ್ಷಣಿಕ ವರ್ಷ ಆರಂಭ ಆಗುವುದರೊಳಗೆ ಎಲ್ಲ ಪುಸ್ತಕಗಳು   ವೆಬ್‌ಸೈಟ್‌ನಲ್ಲೂ ಲಭ್ಯವಾಗಲಿವೆ
ಸಿ.ಶಿಖಾ
ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT