ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಗಾರಿಕೆಗಳ ವಿರುದ್ಧ ಕ್ರಮಕ್ಕೆ ನಿರ್ಧಾರ

Last Updated 7 ಮೇ 2017, 20:03 IST
ಅಕ್ಷರ ಗಾತ್ರ

ಬೆಂಗಳೂರು: ಬಿಡದಿ ಸಮೀಪದ ಬೈರಮಂಗಲ ಕೆರೆಯ ಮಾಲಿನ್ಯಕ್ಕೆ ಕಾರಣವಾಗುತ್ತಿರುವ ಕೈಗಾರಿಕೆಗಳ ಮೇಲೆ ಕ್ರಮ ಕೈಗೊಳ್ಳಲು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ನಿರ್ಧರಿಸಿದೆ.

ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಆದೇಶದ ಬಳಿಕ ಬೆಳ್ಳಂದೂರು ಕೆರೆಯ ಜಲಾನಯನ ಪ್ರದೇಶದ 485 ಕೈಗಾರಿಕೆಗಳನ್ನು ಸ್ಥಗಿತಗೊಳಿಸಲು ಮಂಡಳಿ ಆದೇಶಿಸಿದೆ. ಅದೇ ಮಾದರಿಯಲ್ಲಿ ಬೈರಮಂಗಲ ಕೆರೆಯ ವಿಷಯದಲ್ಲೂ ಕ್ರಮ ಕೈಗೊಳ್ಳಲು ತೀರ್ಮಾನಿಸಿದೆ.

‘ಬೆಳ್ಳಂದೂರು ಕೆರೆಗೆ ತ್ಯಾಜ್ಯ ನೀರು ಹೋಗದಂತೆ ತಡೆಯಲು ಕೈಗೊಂಡ ಕ್ರಮಗಳನ್ನೇ ಅಲ್ಲೂ ಮುಂದುವರಿಸುತ್ತೇವೆ. ಕೆರೆ ಅಚ್ಚುಕಟ್ಟು ಪ್ರದೇಶದಲ್ಲಿರುವ ಕೈಗಾರಿಕೆಗಳನ್ನು ಗುರುತಿಸಿ ಶೀಘ್ರ ಪಟ್ಟಿ ಪ್ರಕಟಿಸುತ್ತೇವೆ’ ಎಂದು ಮಂಡಳಿ ಅಧ್ಯಕ್ಷ ಲಕ್ಷ್ಮಣ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಜುಲೈನಲ್ಲಿ ಕಾರ್ಯಾಚರಣೆ ಪ್ರಾರಂಭಿಸುತ್ತೇವೆ. ತ್ಯಾಜ್ಯ ನೀರು ಶುದ್ಧೀಕರಣ ಘಟಕ (ಎಸ್‌ಟಿಪಿ) ಅಳವಡಿಸಿಕೊಳ್ಳದೆ ತ್ಯಾಜ್ಯ ನೀರನ್ನು ನೇರವಾಗಿ ಕೆರೆಗೆ ಹರಿಸುತ್ತಿರುವ ಕೈಗಾರಿಕೆಗಳನ್ನು ಸ್ಥಗಿತಗೊಳಿಸುವಂತೆ ನೋಟಿಸ್‌ ನೀಡುತ್ತೇವೆ’ ಎಂದರು.

‘ಕೆರೆ ಆಸುಪಾಸಿನಲ್ಲಿ ನೂರಾರು ಎಕರೆ ಪ್ರದೇಶದಲ್ಲಿ ತಂಪು ಪಾನೀಯ ಮತ್ತು ಕಾರು ಉತ್ಪಾದನಾ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಇಲ್ಲಿರುವ ಬಹುತೇಕ ಕಾರ್ಖಾನೆಗಳು ನೀರನ್ನು ಸಂಸ್ಕರಿಸದೆ ನೇರವಾಗಿ ಜಲಮೂಲಕ್ಕೆ ಹರಿಸುತ್ತಿವೆ. ಕಾಲುವೆಗಳಲ್ಲಿ ಘನ ತ್ಯಾಜ್ಯವನ್ನು ಸುರಿಯುತ್ತಿರುವುದರಿಂದ ಕೆರೆಯಲ್ಲಿ ಭಾರಿ ಪ್ರಮಾಣದ ಹೂಳು ತುಂಬಿದೆ’ ಎಂದು ಮಂಡಳಿ ಅಧಿಕಾರಿಯೊಬ್ಬರು ತಿಳಿಸಿದರು.

ಮಾಲಿನ್ಯದ ಹಾದಿ:  ವೃಷಭಾವತಿ ನದಿಯ  ನೀರು ಸಂಗ್ರಹಿಸಲು 1942ರಲ್ಲಿ ಬ್ರಿಟಿಷರು ಈ ಕೆರೆ ಕಟ್ಟಿದ್ದರು. 412 ಹೆಕ್ಟೇರ್ ಪ್ರದೇಶದಲ್ಲಿರುವ ಈ ಕೆರೆ, ಸುತ್ತಲಿನ ಹಳ್ಳಿಗಳ ಸುಮಾರು 1,600 ಹೆಕ್ಟೇರ್ ಪ್ರದೇಶಕ್ಕೆ ನೀರು ಉಣಿಸುತ್ತಿತ್ತು.  ಸ್ಫಟಿಕದಷ್ಟು ಸ್ವಚ್ಛವಾಗಿದ್ದ ಈ ಜಲಮೂಲ, 1960ರ ದಶಕದ ಬಳಿಕ ಹಂತ-ಹಂತವಾಗಿ ಮಲಿನಗೊಳ್ಳುತ್ತಾ ಹೋಯಿತು.

ಬೈರಮಂಗಲ, ಅಂಚಿಪುರ, ಬೆಣ್ಣಿಗೆರೆ, ಮರಿಗೌಡನ ದೊಡ್ಡಿ, ಸಣ್ಣಮಂಗಲ, ಕುಂಟನಹಳ್ಳಿ, ಪರಸನಪಾಳ್ಯ, ತಿಮ್ಮೇಗೌಡನ ದೊಡ್ಡಿ ಮತ್ತು ವೃಷಭಾವತಿಪುರ ಹಳ್ಳಿಗಳ ಜನರಿಗೆ ಈ ಜಲಮೂಲ ಜೀವಸೆಲೆಯಾಗಿತ್ತು. ಸಾವಿರಾರು ಕುಟುಂಬಗಳ ನಿತ್ಯದ ಉಪಜೀವನಕ್ಕೂ ನೆರವಾಗಿತ್ತು. ಹದಿನೈದು ವರ್ಷದ ಹಿಂದೆ ಸಮೃದ್ಧವಾಗಿ ಕೃಷಿ ಚಟುವಟಿಕೆ ನಡೆಯುತ್ತಿದ್ದ ಪ್ರದೇಶ ಈಗ ಬರಡಾಗಿದೆ.

‘ಭತ್ತ ಬೇಸಾಯ ಶೇ 90ರಷ್ಟು ನಾಶವಾಗಿದೆ. ಒಂದು ವೇಳೆ ಬೆಳೆದರೂ ಜೊಳ್ಳಾಗುತ್ತದೆ. ಇಲ್ಲವೇ ಬೂದಿ ರೋಗಕ್ಕೆ ತುತ್ತಾಗಿ ಗಿಡಗಳೇ ಸುಟ್ಟು ಹೋಗುತ್ತವೆ. ತೆಂಗಿನ ಮರಗಳು ರೋಗಗ್ರಸ್ತವಾಗಿವೆ. ಮರದ ಗರಿಗಳು ಸುಟ್ಟು ಕರಕಲಾಗಿವೆ. ಹಲವು ತೆಂಗಿನ ಮರಗಳ ಸುಳಿಗಳು ಸುಟ್ಟು ಭಸ್ಮವಾಗಿವೆ’ ಎಂದು ಸ್ಥಳೀಯರು ಅಳಲು ತೋಡಿಕೊಳ್ಳುತ್ತಾರೆ.

ರಾಸಾಯನಿಕಯುಕ್ತ ನೀರು: ‘ಇದರ ನೀರಿನಲ್ಲಿ ಕ್ಯಾಲ್ಸಿಯಂ,  ಸೋಡಿಯಂ, ಪೋಟಾಸಿಯಂ ಪ್ರಮಾಣ ಗರಿಷ್ಠ ಪ್ರಮಾಣದಲ್ಲಿ ಇದೆ. ಪಾಸ್ಫೇಟ್, ಸಲ್ಫೇಟ್, ನೈಟ್ರೇಟ್, ಫ್ಲೋರೈಡ್, ಕ್ಲೋರೈಡ್, ಜಿಂಕ್, ಕಬ್ಬಿಣ ಮತ್ತು ಸೀಸ ಪದಾರ್ಥಗಳು ನೀರಿನಲ್ಲಿ ಕಂಡುಬಂದಿವೆ’ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಪರಿಸರ ವಿಜ್ಞಾನ ವಿಭಾಗದ ತಜ್ಞರ ತಂಡ ಈ ಹಿಂದೆ ವರದಿ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT