ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶಸ್ತಿ ಮೌಲ್ಯ ಕುಸಿಯಲು ಸಾಹಿತಿಗಳೇ ಕಾರಣ

ವೀಚಿ ಸಾಹಿತ್ಯ ಪ್ರಶಸ್ತಿ–2016 ಪ್ರದಾನ ಕಾರ್ಯಕ್ರಮ: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿದ್ದರಾಮಯ್ಯ ಅಭಿಪ್ರಾಯ
Last Updated 8 ಮೇ 2017, 6:54 IST
ಅಕ್ಷರ ಗಾತ್ರ
ತುಮಕೂರು: ‘ರಾಜ್ಯ ಸರ್ಕಾರ ನೀಡುವ ಕೆಲವು ಪ್ರಶಸ್ತಿಗಳ ಮೌಲ್ಯ ಕುಸಿಯುತ್ತಿದೆ ಮತ್ತು ಸೂಕ್ತ ಆಯ್ಕೆಗಳು ನಡೆಯುತ್ತಿಲ್ಲ ಎನ್ನುವ  ಆರೋಪಗಳು ಕೇಳಿ ಬರುತ್ತಿವೆ. ಒಂದು ವೇಳೆ ಈ ಪ್ರಶಸ್ತಿಗಳು ಮೌಲ್ಯ ಕಳೆದುಕೊಂಡಿದ್ದರೆ ಅದಕ್ಕೆ ಸಾಹಿತಿಗಳೇ ಕಾರಣ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್‌.ಜಿ. ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
 
ನಗರದ ರವೀಂದ್ರ ಕಲಾನಿಕೇತನಲ್ಲಿ ಭಾನುವಾರ ನಡೆದ ‘ವೀಚಿ ಸಾಹಿತ್ಯ ಪ್ರಶಸ್ತಿ–2016’ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು. ‘ಸರ್ಕಾರ ನೀಡುವ ಪ್ರಶಸ್ತಿಗಳಲ್ಲಿ ಯಾವ ರಾಜಕಾರಣಿಯೂ ಮೂಗು ತೂರಿಸುವುದಿಲ್ಲ. 
 
ಪ್ರಶಸ್ತಿ ಆಯ್ಕೆ ಸಮಿತಿಯನ್ನು ರೂಪಿಸುವುದು ಅಧಿಕಾರಿಗಳು. ಇವರು ಸಾಹಿತಿಗಳ ಮರ್ಜಿಗೆ ಬಿದ್ದಾಗ ಆಯ್ಕೆ ಸೂಕ್ತವಾಗಿ ನಡೆಯುವುದಿಲ್ಲ. ಪ್ರಶಸ್ತಿ ಪಡೆದುಕೊಂಡಿದ್ದಲ್ಲ ಹೊಡೆದುಕೊಂಡಿದ್ದು ಎನ್ನುವ ಚಂದ್ರಶೇಖರ ಪಾಟೀಲರ ಮಾತು ಇಲ್ಲಿ ಅನ್ವಯವಾಗುತ್ತದೆ’ ಎಂದು ತಿಳಿಸಿದರು.
 
‘ವೀಚಿ ಪ್ರಶಸ್ತಿಗೆ ಆಯ್ಕೆ ಸಮಿತಿಗೆ ಲೇಖಕರು ಕಳುಹಿಸಿಕೊಟ್ಟ ಪುಸ್ತಕಗಳಲ್ಲದೆ ಕಳುಹಿಸದೇ ಇರುವ ಪುಸ್ತಕಗಳನ್ನೂ ಪರಿಗಣಿಸಿದ್ದೇವೆ. ಷ.ಶೆಟ್ಟರ್, ಕೆ.ವಿ.ನಾರಾಯಣ, ನಟರಾಜ ಬೂದಾಳ್,  ಬಿ.ಎನ್.ಸುಮಿತ್ರಾ ಬಾಯಿ ಅವರು ಪುಸ್ತಕಗಳನ್ನೇ ಆಯ್ಕೆ ಸಮಿತಿಗೆ ಕಳುಹಿಸಿರಲಿಲ್ಲ. ಆದರೂ ಇವರ ಪುಸ್ತಕಗಳನ್ನು ಗುರುತಿಸಿ ಪ್ರಶಸ್ತಿ ನೀಡಲಾಗಿದೆ’ ಎಂದು ಹೇಳಿದರು.
 
‘ಇದು ವೀಚಿ ಅವರ ವ್ಯಕ್ತಿತ್ವ ಮತ್ತು ಪ್ರಶಸ್ತಿಯ ಘನತೆಯನ್ನು ಹೆಚ್ಚಿಸಿದೆ ಮತ್ತು ಗೌರವಿಸಿದೆ. ಈ ದೃಷ್ಟಿಯಲ್ಲಿ ನೋಡುವುದಾದರೆ ಇಂದಿಗೂ ಕೆಲವು ಪ್ರತಿಷ್ಠಾನಗಳು ನೀಡುವ ಪ್ರಶಸ್ತಿಗಳು ಘನತೆಯನ್ನು ಉಳಿಸಿಕೊಂಡಿವೆ. ವೀಚಿ ಸಾಹಿತ್ಯ ಪ್ರಶಸ್ತಿಗೆ ತನ್ನದೇ ಆದ ಘನತೆ ಇದೆ’ ಎಂದು ತಿಳಿಸಿದರು.
 
‘ದೊಡ್ಡ ಪ್ರಶಸ್ತಿಗಳನ್ನು ನೀಡುವ ವಿಚಾರಕ್ಕೆ ಹೋಲಿಸಿದರೆ ಪುಸ್ತಕ ಬಹುಮಾನಗಳಲ್ಲಿ ಎಲ್ಲೂ ಲೋಪ ಆಗಿಲ್ಲ. ರಾಜ್ಯ ಮಟ್ಟದ ಪ್ರಶಸ್ತಿಗಳನ್ನು ಪಡೆದವರು ಒಂದು ಪುಸ್ತಕಕ್ಕೂ ಬಹುಮಾನ ಪಡೆಯದೇ ಇರುವ ಉದಾಹರಣೆಗಳು ನಮ್ಮ ಮುಂದೆ ಇವೆ’ ಎಂದರು.
 
ಹಿರಿಯ ವಿಮರ್ಶಕ ಪ್ರೊ.ಎಂ.ಎಚ್.ಕೃಷ್ಣಯ್ಯ ಅವರು ಸುಮಿತ್ರಾ ಬಾಯಿ ಅವರ ‘ಸ್ತ್ರೀದರ್ಪಣದಲ್ಲಿ ನಾಟ್ಯ ಶಾಸ್ತ್ರ’ ಮತ್ತು ಕೆ.ವಿ.ಮುದ್ದವೀರಪ್ಪ ಅವರ ‘ತಪಸ್ಸಿಗಿಳಿದ ಮಳೆ’ ಕೃತಿ ಹಾಗೂ ಜಯಮ್ಮ ರಾಮಕೃಷ್ಣಪ್ಪ ಅವರ ಓಬಳಾಪುರ ಅವರ ಕುರಿತು ಮಾತನಾಡಿದರು.
 
ವೀಚಿ ಸಾಹಿತ್ಯ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಎಸ್.ನಾಗಣ್ಣ ಅಧ್ಯಕ್ಷತೆ ವಹಿಸಿದ್ದರು. ಪ್ರತಿಷ್ಠಾನದ ಅಧ್ಯಕ್ಷ ಎಂ.ಬಸವಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. 
 
ವೀಚಿ ಪ್ರತಿಷ್ಠಾನದ ಎಂ.ಎಚ್‌.ನಾಗಾರಾಜ್‌, ರಾಣಿ ಚಂದ್ರಶೇಖರ್‌, ಮಲ್ಲಿಕಾರ್ಜುನ ಹೆಬ್ಬಾಕ ಇದ್ದರು. ಪ್ರಶಸ್ತಿ ಪುರಸ್ಕೃತರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
****
ಪ್ರಶಸ್ತಿ ಪ್ರದಾನ
ಬಿ.ಎನ್.ಸುಮಿತ್ರಾ ಬಾಯಿ ಅವರ ‘ಸ್ತ್ರೀದರ್ಪಣದಲ್ಲಿ ನಾಟ್ಯ ಶಾಸ್ತ್ರ’ ಕೃತಿಗೆ 2016ನೇ ಸಾಲಿನ ವೀಚಿ ಸಾಹಿತ್ಯ ಪ್ರಶಸ್ತಿ, ನಾಗಣ್ಣ ಕಿಲಾರಿ ಅವರ ‘ತಪಸ್ಸಿಗಿಳಿದ ಮಳೆ’ ಕೃತಿಗೆ ವೀಚಿ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿ ಮತ್ತು ಜಯಮ್ಮ ರಾಮಕೃಷ್ಣಪ್ಪ ಓಬಳಾಪುರ ಅವರಿಗೆ ವೀಚಿ ಜಾನಪದ ಕಲಾ ಪ್ರಶಸ್ತಿ ಪ್ರದಾನ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT