ಬೆಟ್ಟಕೋಟೆ ಕೆರೆಯ ಒಡಲಿಗೆ ರನ್‌ವೇ ನೀರು: ಜಲ ತಜ್ಞ ಎಸ್‌.ವಿಶ್ವನಾಥ್‌ ನೆರವು

4

ಬೆಟ್ಟಕೋಟೆ ಕೆರೆಯ ಒಡಲಿಗೆ ರನ್‌ವೇ ನೀರು: ಜಲ ತಜ್ಞ ಎಸ್‌.ವಿಶ್ವನಾಥ್‌ ನೆರವು

Published:
Updated:
ಬೆಟ್ಟಕೋಟೆ ಕೆರೆಯ ಒಡಲಿಗೆ ರನ್‌ವೇ ನೀರು: ಜಲ ತಜ್ಞ ಎಸ್‌.ವಿಶ್ವನಾಥ್‌ ನೆರವು

ಬೆಂಗಳೂರು: ದೇವನಹಳ್ಳಿ ಬಳಿಯ ಬೆಟ್ಟಕೋಟೆ ಕೆರೆಯನ್ನು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು (ಕೆಐಎಎಲ್‌) ಪುನಶ್ಚೇತನಗೊಳಿಸಿದೆ.

ನಗರೀಕರಣ ಹಾಗೂ ರನ್‌ವೇ ನಿರ್ಮಾಣಕ್ಕಾಗಿ ಕೆರೆ ಸುತ್ತಮುತ್ತಲಿನ ಪ್ರದೇಶ ಬಳಕೆಯಾಗಿದೆ.  ಮಳೆನೀರು ಸೇರುವ ಮಾರ್ಗಗಳು ಮುಚ್ಚಿದ್ದರಿಂದ  ಕೆರೆಗೆ ಬತ್ತಿಹೋಗಿತ್ತು. ಇದನ್ನು ಪುನರುಜ್ಜೀನಗೊಳಿಸುವ ಉದ್ದೇಶದಿಂದ ಕೆಐಎಎಲ್‌, ರನ್‌ವೇ ಮೇಲೆ ಬಿದ್ದ ಮಳೆಯ ನೀರನ್ನು ಕೆರೆಗೆ ಹರಿಸಲು ಕ್ರಮ ಕೈಗೊಂಡಿದೆ.

‘ಸುಸ್ಥಿರ ಪರಿಸರ ಅಭಿವೃದ್ಧಿಯು ಕೆಐಎಎಲ್‌ನ ಧ್ಯೇಯಗಳಲ್ಲಿ ಒಂದು. ಇದಕ್ಕೆ ಪೂರಕವಾಗಿ ಹಸಿರೀಕರಣ, ಮಳೆನೀರು ಸಂಗ್ರಹ, ನೀರು ಸಂರಕ್ಷಣೆ, ಘನ ತ್ಯಾಜ್ಯ ನಿರ್ವಹಣಾ ಯೋಜನೆಗಳು, ನವೀಕರಿಸಬಹುದಾದ ಇಂಧನ ಯೋಜನೆ ಹಾಗೂ ಸ್ವಚ್ಛತಾ ನಿರ್ವಹಣೆಗೆ

ಸಂಬಂಧಿಸಿದ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಅಂತೆಯೇ ಬೆಟ್ಟಕೋಟೆ ಕೆರೆ ಪುನಶ್ಚೇತನಕ್ಕೂ ಆದ್ಯತೆ ನೀಡಲಾಗಿದೆ’ ಎಂದು ಕೆಐಎಎಲ್‌ ಅಧಿಕಾರಿಯೊಬ್ಬರು ತಿಳಿಸಿದರು.

(ಕೆರೆಗೆ ಮಳೆ ನೀರು ಹರಿಯುತ್ತಿರುವುದು)

‘ಕೆರೆ ಪುನರುಜ್ಜೀವನಗೊಳಿಸಲು ಜಲ ತಜ್ಞ ಎಸ್‌.ವಿಶ್ವನಾಥ್‌ ಸಹಾಯ ಪಡೆಯಲಾಗಿದೆ. ಅವರ ಮಾರ್ಗದರ್ಶನದಲ್ಲಿ ಯೋಜನೆ ರೂಪಿಸಲಾಗಿದೆ’ ಎಂದರು.

‘ಮೊದಲ ರನ್‌ವೇ ಮೇಲೆ ಬೀಳುವ ಮಳೆ ನೀರನ್ನು ಶುದ್ಧೀಕರಿಸಿ ನಿಲ್ದಾಣದ ಅಗತ್ಯಗಳಿಗೆ  ಬಳಸಲಾಗುತ್ತಿದೆ. ಹೆಚ್ಚುವರಿ ನೀರು ಕೆರೆಗೆ ಹರಿಯುವಂತೆ ವ್ಯವಸ್ಥೆ ಮಾಡಲಾಗಿದೆ’ ಎಂದರು.

‘ಎರಡನೇ ರನ್‌ವೇ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಇಲ್ಲಿ ಬಿದ್ದ ನೀರನ್ನು ಕೆರೆ ಹಾಗೂ ಸುತ್ತಮುತ್ತಲಿನ ಅಂತರ್ಜಲ ಮರುಪೂರಣಕ್ಕೆ ಬಳಸಿಕೊಳ್ಳಲು  ಯೋಜನೆ ರೂಪಿಸಲಾಗುತ್ತಿದೆ’ ಎಂದು ತಿಳಿಸಿದರು.

‘ಫ್ರೆಂಡ್ಸ್‌ ಆಫ್‌ ಲೇಕ್ಸ್‌’ನ ಸಂಚಾಲಕ ರಾಮಪ್ರಸಾದ್‌ ಅವರು ಕೆಐಎಎಲ್‌ನ ಈ ಉಪಕ್ರಮವನ್ನು ಶ್ಲಾಘಿಸಿದ್ದಾರೆ.

‘ಕೆರೆ ಅಭಿವೃದ್ಧಿಯಿಂದ ಹೈನುಗಾರಿಕೆ ಹಾಗೂ ಮೀನುಗಾರಿಕೆ ಹೆಚ್ಚಾಗಲಿದೆ. ಈ ಅಭಿವೃದ್ಧಿ ಮಾದರಿಯು ಒಳ್ಳೆಯದು. ಇದೇ ರೀತಿಯಲ್ಲಿ ಇತರೆ ಕೆರೆಗಳನ್ನು ಅಭಿವೃದ್ಧಿಪಡಿಸಬೇಕು’ ಎಂದು ಅವರು ಒತ್ತಾಯಿಸುತ್ತಾರೆ.

ನಮ್ಮ ಬೆಂಗಳೂರು ಪ್ರತಿಷ್ಠಾನದ ಸಿಇಒ ಶ್ರೀಧರ್‌ ಪಬ್ಬಿಸೆಟ್ಟಿ, ‘ಇದೇ ಮಾದರಿಯನ್ನು ಉಳಿದ ಕೆರೆಗಳಿಗೂ ಅನುಸರಿಸಬೇಕು’ ಎಂದು  ಹೇಳುತ್ತಾರೆ.

‘ನಗರದ ಬಡಾವಣೆಗಳ ಯಾವುದೇ ಅಭಿವೃದ್ಧಿಯು ಜಯನಗರದ ರೀತಿಯಲ್ಲಿ ಇರಬೇಕು. ಭವಿಷ್ಯವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಈ ಬಡಾವಣೆಯನ್ನು ನಿರ್ಮಿಸಲಾಗಿದೆ. ಹೀಗಾಗಿ ಅಂತರ್ಜಲ ಮರುಪೂರಣ ಹಾಗೂ ನೀರು ಪೂರೈಕೆಗೆ ಇಲ್ಲಿ ಯಾವುದೇ ತೊಂದರೆ ಉಂಟಾಗಿಲ್ಲ. ಕೆರೆ ಹಾಗೂ ಜಲಾನಯನ ಪ್ರದೇಶಗಳನ್ನು ಅಭಿವೃದ್ಧಿಪಡಿಸುವಾಗ ಸಮಗ್ರವಾದ ವಿಧಾನವನ್ನು ಅನುಸರಿಸಬೇಕು. ಕೆಐಎಎಲ್‌ ಈ ನಿಟ್ಟಿನಲ್ಲಿ ಉತ್ತಮ ಕೆಲಸ ಮಾಡಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

**

‘ನೀರಿನ ಅಭಾವ ನೀಗಲಿದೆ’

‘ಬೆಟ್ಟಕೋಟೆ ಕೆರೆಯ ನೀರನ್ನು ದೇವನಹಳ್ಳಿಯ ಜನರ ಕುಡಿಯುವ ಹಾಗೂ ಕೃಷಿ ಉದ್ದೇಶಕ್ಕೆ ಬಳಸಲಾಗುತ್ತಿತ್ತು. ಆದರೆ, ಜೀವಜಲ ಕಣ್ಮರೆ ಆಗಿದ್ದರಿಂದ ಕುಡಿಯುವ ನೀರಿಗೂ ತತ್ವಾರ ಎದುರಾಗಿತ್ತು. ಈ ಭಾಗದ ಕೊಳವೆಬಾವಿಗಳೂ ಬತ್ತಿದ್ದವು. ಇದರಿಂದ ಕೃಷಿ ಚಟುವಟಿಕೆಯೂ ಕುಂಠಿತಗೊಂಡಿತ್ತು. ಕೆರೆ ತುಂಬಿದರೆ ದೇವನಹಳ್ಳಿ ಸುತ್ತಮುತ್ತಲಿನ ಗ್ರಾಮಗಳ ನೀರಿನ ಅಭಾವ ನೀಗಲಿದೆ’ ಎಂದು ಸ್ಥಳೀಯ ನಿವಾಸಿಯೊಬ್ಬರು ವಿಶ್ವಾಸ ವ್ಯಕ್ತಪಡಿಸಿದರು.

‘ಈ ಭಾಗದ ಅಂತರ್ಜಲ ಮಟ್ಟ ವೃದ್ಧಿಯಾಗಿ, ಬತ್ತಿ ಹೋಗಿರುವ ಕೊಳವೆಬಾವಿಗಳು ಮರುಜೀವ ಪಡೆದುಕೊಳ್ಳಲಿವೆ. ಇದರಿಂದ ರೈತರು ವಿವಿಧ ಬೆಳೆಗಳನ್ನು ಬೆಳೆದು ಆರ್ಥಿಕವಾಗಿ ಸ್ವಾವಲಂಬಿಗಳಾಗಬಹುದು’ ಎಂದರು.

*

ಅಂಕಿಅಂಶ

300ಎಕರೆ: ಕೆರೆಯ ವಿಸ್ತೀರ್ಣ

20 ವರ್ಷಗಳಿಂದ ತುಂಬಿಲ್ಲ ಕೆರೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry