ಹುಳಗೋಳ: ಸಾಕಷ್ಟು ನೀರಿದ್ದರೂ ಕುಡಿಯುವ ಹಾಗಿಲ್ಲ

7
ನಿತ್ಯ ಸಮಸ್ಯೆಗಳ ಮಧ್ಯೆ ಬದುಕು ಸಾಗಿಸುವ ಗ್ರಾಮಸ್ಥರು

ಹುಳಗೋಳ: ಸಾಕಷ್ಟು ನೀರಿದ್ದರೂ ಕುಡಿಯುವ ಹಾಗಿಲ್ಲ

Published:
Updated:
ಹುಳಗೋಳ: ಸಾಕಷ್ಟು ನೀರಿದ್ದರೂ ಕುಡಿಯುವ ಹಾಗಿಲ್ಲ

ಸೇಡಂ: ಗ್ರಾಮದಲ್ಲಿ 4ಕ್ಕಿಂತ ಹೆಚ್ಚು ತೆರೆದ ಬಾವಿ ಹಾಗೂ ಮೂರ್ನಾಲ್ಕು ಕೊಳವೆ ಬಾವಿಗಳಿವೆ. ಆದರೂ, ಇಲ್ಲಿನ ಜನರು ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿಯನ್ನು ಹಲವು ವರ್ಷಗಳಿಂದ ಎದುರಿಸುತ್ತಿದ್ದಾರೆ.‘ಬಾವಿಗಳಲ್ಲಿರುವ ನೀರು ಕುಡಿಯಲು ಯೋಗ್ಯವಿಲ್ಲ. ಆದ್ದರಿಂದ ನಾವು ಸೇವಿಸುವುದಿಲ್ಲ. ಇರುವ ಕುಂಬಾರ ಬಾವಿಯಲ್ಲಿನ ನೀರನ್ನು ಮಾತ್ರ ಸೇವಿಸುತ್ತೇವೆ’ ಎಂದು ಗ್ರಾಮಸ್ಥರು ಹೇಳುತ್ತಾರೆ. 

 

ತಾಲ್ಲೂಕಿನಿಂದ ಸುಮಾರು 20ಕಿ.ಮಿ ದೂರದಲ್ಲಿರುವ ಹುಳಗೋಳ ಗ್ರಾಮದ ಪರಿಸ್ಥಿತಿ ಹೇಳತೀರದಂತಾಗಿದೆ. ಅಧಿಕಾರಿಗಳ ನಿರ್ಲಕ್ಷತೆ ಹಾಗೂ ಜನಪ್ರತಿನಿಧಿಗಳ ನಿರಾಸಕ್ತಿಯಿಂದ ಇಂದಿಗೂ ಜನರು ಕಲುಷಿತ ನೀರನ್ನೇ ಕುಡಿದು ಜೀವನ ಸಾಗಿಸುತ್ತಿದ್ದಾರೆ.

 

2 ಸಾವಿರಕ್ಕಿಂತಲೂ ಅಧಿಕ ಜನಸಂಖ್ಯೆ ಹೊಂದಿರುವ ಗ್ರಾಮವು, ಗ್ರಾಮ ಪಂಚಾಯಿತಿಯ ನಾಲ್ಕು  ಸದಸ್ಯರನ್ನು ಹೊಂದಿದೆ. ಹಂದರಕಿ ಗ್ರಾಮ ಪಂಚಾಯಿತಿಗೆ ಒಳಪಡುವ ಗ್ರಾಮಕ್ಕೆ ಪಂಚಾಯಿತಿ ಅಧಿಕಾರಿಗಳು ನಿರ್ಲಕ್ಷ ತೋರುತ್ತಿದ್ದಾರೆ ಎನ್ನುವುದು ಗ್ರಾಮಸ್ಥರ ಅಳಲು. 

 

‘ಕೆಲ ವರ್ಷಗಳ ಹಿಂದೆ ಕಲುಷಿತ ನೀರು ಸೇವಿಸಿ ಸುಮಾರು 20ಕ್ಕೂ ಹೆಚ್ಚು ಮಂದಿ ಅಧಿಕ ವಾಂತಿ–ಬೇಧಿಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯರು ಸಹ ಕಲುಷಿತ ನೀರಿನ ಸೇವನೆಯೇ ಇದಕ್ಕೆ ಕಾರಣವೆಂದು ಸ್‍ಪಷ್ಟನೆ ನೀಡಿದ್ದರು. ನೀರನ್ನು ಕಾಯಿಸಿ, ಆರಿಸಿ ಸೋಸಿ ಕುಡಿಯುವಂತೆ ತಿಳಿಸಿದ್ದರು.ಅದರಂತೆ ಪ್ರತಿದಿನ ನಮಗೆ ಮಾಡಲು ಸಾಧ್ಯವಿಲ್ಲ. ನೀರನ್ನು ಹಾಗೆಯೇ ದಿನನಿತ್ಯ ಸೇವಿಸುತ್ತೇವೆ. ಈಗಲೂ ಸಹ ಆಗಾಗ ಕಲುಷಿತ ನೀರಿನ ಸೇವನೆಯಿಂದ ರೋಗಗಳು ಬರುತ್ತವೆ. ಆದರೆ, ಅವು ನಮಗೆ ತಿಳಿದುಬರುತ್ತಿಲ್ಲ’ ಎಂದು ಗ್ರಾಮದ ಮಲ್ಲಿಕಾರ್ಜುನ ದಳಪತಿ ‘ಪ್ರಜಾವಾಣಿ’ಗೆ ತಿಳಿಸುತ್ತಾರೆ.

 

‘ಕುಡಿಯುವ ನೀರಿನ ಸಮಸ್ಯೆ ಕುರಿತು ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗುತ್ತಿಲ್ಲ. ಕಳೆದ ವರ್ಷ ಕುಂಬಾರ ಬಾವಿ ನೀರು ಬತ್ತಿದಾಗ ಗ್ರಾಮದಲ್ಲಿ ಸಮಸ್ಯೆ ಎದುರಾಗಿತ್ತು. ಆಗ ತಾಲ್ಲೂಕು ಆಡಳಿತ ನೀರು ಪೂರೈಸಿತ್ತು. ನೀರಿನ ಮೂಲಗಳು ಸಾಕಷ್ಟು ಪ್ರಮಾಣದಲ್ಲಿ ಇದ್ದರು ಸಹ ನೀರು ಉಪಯೋಗಕ್ಕೆ ಬಾರದೆ ಇರುವುದರಿಂದ ಜನರು ಸಮಸ್ಯೆ ಎದುರಿಸುವಂತಾಗಿದೆ.

 

ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಸಿ ಹಲವು ತಿಂಗಳುಗಳು ಕಳೆದಿವೆ. ಅದು ಇಲ್ಲಿಯವರೆಗೂ ಉಪಯೋಗಕ್ಕೆ ಬಾರದೆ ಪಾಳು ಬಿದ್ದಿದೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಆಸಕ್ತಿ ವಹಿಸಿ ದುರಸ್ತಿ ಮಾಡಿದರೆ ಜನರಿಗೆ ಅನುಕೂಲವಾಗುತ್ತದೆ ಎಂದು ಗ್ರಾಮದ ಮಾಣಿಕ್ಯಪ್ಪ ಕುಂಬಾರ ಮತ್ತು ಚಂದ್ರಪ್ಪ ಕಳ್ಳಿ ಹೇಳುತ್ತಾರೆ.

 

ಗ್ರಾಮದ ಕೆಲ ಬಡಾವಣೆಗಳಲ್ಲಿ ಮಾತ್ರ ಸಿ.ಸಿ ರಸ್ತೆ ಕಾಣಸಿಗುವುದು ಬಿಟ್ಟರೆ ಬಹುತೇಕ ಬಡಾವಣೆಗಳು ರಸ್ತೆಗಳು ಹಾಗೇ ಉಳಿದಿವೆ. ಇದರಿಂದ ಮಳೆಗಾಲದಲ್ಲಿ ಜನರ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಸಿಸಿ ರಸ್ತೆಗೆ ಹೊಂದಿಕೊಂಡಂತೆ ಚರಂಡಿ ವ್ಯವಸ್ಥೆಯೂ ಕಾಣುತ್ತಿಲ್ಲ. ಇದರಿಂದಾಗಿ ಬಚ್ಚಲು ನೀರೇ ರಸ್ತೆಗೆ ಹರಿದು ಜನಸಂಚಾರಕ್ಕೆ ಅಡ್ಡಿಯಾಗುತ್ತಿದೆ.

 

ಅಲ್ಲದೆ, ಗ್ರಾಮದಲ್ಲಿ ಸಾರ್ವಜನಿಕ ಶೌಚಾಲಯ ಪಾಳು ಬಿದ್ದಿರುವುದರಿಂದ ಗ್ರಾಮದ ಜನರು ಬಯಲು ಶೌಚವನ್ನೇ ಹೆಚ್ಚಾಗಿ ಆವಲಂಬಿಸಿದ್ದಾರೆ. ಗ್ರಾಮದ ಕೆಲವರು ವೈಯಕ್ತಿಕ ಶೌಚಾಲಯ ನಿರ್ಮಿಸಿದರೂ ಸಹ ಅವರಿಗೆ ಪಂಚಾಯಿತಿ ವತಿಯಿಂದ ಸಿಗಬೇಕಾದ ಅನುದಾನ ಬಿಡುಗಡೆಯಾಗಿಲ್ಲ. ಇದರಿಂದಾಗಿ ಗ್ರಾಮಸ್ಥರು ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಲು ಮುಂದೆ ಬರುತ್ತಿಲ್ಲ.

 

1ರಿಂದ 7ನೇ ತಗರಗತಿಯವರೆಗೆ ಹೊಂದಿರುವ ಸರ್ಕಾರಿ ಶಾಲೆಯಲ್ಲಿ ಶೌಚಾಲಯದ ಸಮಸ್ಯೆ ಇದೆ. ಶೌಚಾಲಯ ಕಟ್ಟಡವಿದ್ದರೂ ಸಹ ನೀರಿನ ಸಮಸ್ಯೆಯಿಂದ ಉಪಯೋಗಕ್ಕೆ ಬರುತ್ತಿಲ್ಲ. ಆದ್ದರಿಂದ ಶಾಲೆಗೆ ಸಮರ್ಪಕವಾಗಿ ನೀರು ಪೂರೈಕೆಯಾಗಬೇಕು ಎನ್ನವುದು ಸ್ಥಳೀಯರ ಒತ್ತಾಸೆಯಾಗಿದೆ.  

****

ಶುದ್ಧ ಕುಡಿಯುವ ನೀರಿನ ಘಟಕವನ್ನು ದುರಸ್ತಿಪಡಿಸುವಂತೆ ಮನವಿ ಮಾಡಲಾಗಿದೆ.  ಟೆಂಡರ್ ಪ್ರಕ್ರಿಯೆಯಲ್ಲಿದ್ದು, ಶೀಘ್ರ ದುರಸ್ತಿ ಮಾಡುವ ಸಾಧ್ಯತೆ ಇದೆ.

ಜಗದೀಶ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry