ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಚಾಯತ್‌ರಾಜ್‌: ಮೌನ ಕ್ರಾಂತಿಯ ರಜತ ವರ್ಷ

Last Updated 9 ಮೇ 2017, 19:30 IST
ಅಕ್ಷರ ಗಾತ್ರ

ರಾಜ್ಯದಲ್ಲಿ 1983ರ ವಿಧಾನಸಭಾ ಚುನಾವಣೆ ಐತಿಹಾಸಿಕ. ಆ ಚುನಾವಣೆಯ ಬಳಿಕ ರಾಜ್ಯದಲ್ಲಿ ಮೊತ್ತಮೊದಲ ಕಾಂಗ್ರೆಸ್ಸೇತರ ಸರ್ಕಾರ ಅಧಿಕಾರಕ್ಕೆ ಬಂತು.
ಮುಖ್ಯಮಂತ್ರಿಯಾದ ರಾಮಕೃಷ್ಣ ಹೆಗಡೆ ಅವರು, ಯಾವುದೇ ಸದನದ ಸದಸ್ಯರಲ್ಲದ ನಜೀರ್‌ಸಾಬರನ್ನು ಸಂಪುಟ ದರ್ಜೆ ಸಚಿವರನ್ನಾಗಿ ಮಾಡಿದರಲ್ಲದೆ,  ಅವರ ಅಪೇಕ್ಷೆಯಂತೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯಿತಿರಾಜ್‌ ಖಾತೆ ನೀಡಿದರು.

ನಾನು 1975ರಿಂದಲೇ ನಜೀರ್‌ಸಾಬರ ಜೊತೆ ಬಹು ಆತ್ಮೀಯ ಸಂಬಂಧ ಹೊಂದಿದ್ದೆ. ಹಾಗಾಗಿ ಅವರು ಮಂತ್ರಿಯಾದ ಕೂಡಲೇ ಅವರನ್ನು ಭೇಟಿಮಾಡಿ, ‘ಹೊಸ ಪಂಚಾಯಿತಿ ರಾಜ್‌ ವ್ಯವಸ್ಥೆ ರೂಪಿಸಿದಾಗ ರಾಜಕೀಯ ಅಧಿಕಾರ ಕೇವಲ ಸಾಂಪ್ರದಾಯಿಕ ಬಲಿಷ್ಠ ವರ್ಗದವರಾದ ಪಟೇಲರು, ಶಾನುಭೋಗರು, ಶ್ರೀಮಂತರಿಗೆ ಮೀಸಲಾಗಬಾರದು, ಜನ ಸಂಖ್ಯೆಯನ್ನಾಧರಿಸಿ ಎಲ್ಲ ವರ್ಗ ಹಾಗೂ ಶ್ರೇಣಿಯ ಜನರಿಗೆ ಅಧಿಕಾರ, ಸ್ಥಾನಮಾನ ದೊರೆಯಬೇಕು. ಜನಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರೂ ಸಹ ಅಧಿಕಾರದಲ್ಲಿ ಪಾಲು ಪಡೆಯುವಂತೆ ವ್ಯವಸ್ಥೆ ರೂಪಿಸಬೇಕು’ ಎಂದು ವಿನಂತಿಸಿದೆ. ಅದಕ್ಕೆ ಪ್ರತಿಕ್ರಿಯಿಸಿದ ನಜೀರ್‌ಸಾಬರು, ‘Population will be reflected in power sharing’ ಎಂದು ಭರವಸೆ ನೀಡಿದರು.
ನಜೀರ್‌ಸಾಬರನ್ನು ಬಹು ಕಾಲದಿಂದ ಬಲ್ಲವನಾಗಿದ್ದ ನನಗೆ ಅವರು ನೀಡಿದ್ದ ಭರವಸೆ ಈಡೇರುತ್ತದೆ ಎಂಬ ವಿಶ್ವಾಸವಿದ್ದಿತು. ಆದರೆ ಕಾನೂನು ರೂಪುಗೊಂಡಾಗ ನಾನು ಭ್ರಮನಿರಸನಗೊಂಡೆ.

ಹೊಸ ಕಾನೂನು ಜಾರಿಗೆ ಬಂದ ನಂತರ ನಜೀರ್‌ಸಾಬರನ್ನು ಭೇಟಿಮಾಡಿ, ‘ವಿಕೇಂದ್ರೀಕೃತ ವ್ಯವಸ್ಥೆಯಲ್ಲಿ ಮತ್ತೆ ಪಟೇಲ, ಶಾನುಭೋಗ, ಬಲಿಷ್ಠ, ಶ್ರೀಮಂತರ  ಆಡಳಿತಕ್ಕೆ ದಾರಿ ಮಾಡಿಕೊಡಲಾಗಿದೆ’ ಎಂದು ಆಕ್ಷೇಪ ವ್ಯಕ್ತಪಡಿಸಿದೆ. ಆಗ ನಜೀರ್‌ಸಾಬರು, ‘ಈ ಸರ್ಕಾರದಲ್ಲಿ ಈಗ ಮಾಡಿದ್ದೇ ದೊಡ್ಡದು, ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಮಾತ್ರ ನೀನು ಹೇಳಿದಂತೆ ಬದಲಾವಣೆ ತರಲು ಸಾಧ್ಯ’ ಎಂದರು.

ಆಗ ಜಾರಿಗೊಳಿಸಿದ ಕಾಯ್ದೆಯಲ್ಲಿ ಪರಿಶಿಷ್ಟರಿಗೆ ಹಾಗೂ ಮಹಿಳೆಯರಿಗೆ  ಸದಸ್ಯ ಸ್ಥಾನಗಳಿಗೆ ಮಾತ್ರ ಮೀಸಲು ಕಲ್ಪಿಸಲಾಗಿತ್ತು. ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ಇರಲಿಲ್ಲ. ಅಧಿಕಾರದ ವಿಕೇಂದ್ರೀಕರಣವಾಗಿತ್ತು, ಹಂಚಿಕೆ ಆಗಿರಲಿಲ್ಲ.
ಹೊಸ ಕಾಯ್ದೆಯಂತೆಯೇ 1986–87 ಡಿಸೆಂಬರ್–ಜನವರಿಯಲ್ಲಿ ಜಿಲ್ಲಾ ಪರಿಷತ್‌ಗಳಿಗೆ ಚುನಾವಣೆಗಳು ನಡೆದವು.  ನನ್ನ ಗ್ರಾಮ ಹುಲಕೋಟಿ, ಪರಿಶಿಷ್ಟರಿಗೆ ಮೀಸಲಾಗಿದ್ದಿತು. ಸೊರಟೂರ ಮತಕ್ಷೇತ್ರದಿಂದ ಸ್ಪರ್ಧಿಸುವಂತೆ ನನಗೆ ಪಕ್ಷದಿಂದ  ಒತ್ತಾಯಬಂತು. ಇದಕ್ಕೆ  ಮಣಿದು, ಸ್ಪರ್ಧಿಸಿ ವಿಭಜನಾಪೂರ್ವ ಧಾರವಾಡ ಜಿಲ್ಲಾ ಪರಿಷತ್ ಸದಸ್ಯನಾದೆ. ಜೊತೆಗೆ ಜಿಲ್ಲಾ ಪರಿಷತ್ತಿನಲ್ಲಿ ವಿರೋಧ ಪಕ್ಷದ ನಾಯಕನಾದೆ.

ಇಂದಿರಾಗಾಂಧಿ ಅವರ ಹತ್ಯೆಯ ನಂತರ ದೇಶದಲ್ಲಿ ರಾಜೀವ್ ಗಾಂಧಿ ಅವರ ಯುಗಾರಂಭವಾಗಿತ್ತು. ದೂರದೃಷ್ಟಿಯ ಚಿಂತಕ ರಾಜೀವ್‌ಗಾಂಧಿ ಅವರು ಕ್ರಾಂತಿಕಾರಕ ಸುಧಾರಣೆಗಳನ್ನು ಮಾಡಿದರು. ವಾಟರ್ ಮಿಷನ್, ಆಯಿಲ್ ಸೀಡ್ಸ್ ಮಿಷನ್, ಅಪರೇಶನ್ ಬ್ಲ್ಯಾಕ್‌ ಬೋರ್ಡ್‌ ಮೊದಲಾದವುಗಳ ಮೂಲಕ, ಕಾಲಮಿತಿಗೊಳಪಟ್ಟು ಯೋಜನೆಗಳನ್ನು ಅನುಷ್ಠಾನಗೊಳಿಸುವ ಕೆಲಸ ಆರಂಭಿಸಿದರು. ಈ ಕಾಲದಲ್ಲಿಯೇ ಅವರು, ‘ಅಭಿವೃದ್ಧಿಗಾಗಿ ಕೇಂದ್ರ ನೀಡುವ ಒಂದು ರೂಪಾಯಿಯಲ್ಲಿ 16 ಪೈಸೆ  ಮಾತ್ರ ಫಲಾನುಭವಿಗೆ ದೊರೆಯುತ್ತದೆ’ ಎಂದು ಹೇಳಿದ್ದರು.  ಜನರಿಗೆ ತಲುಪಬೇಕಾದ ಹಣವನ್ನು ವ್ಯವಸ್ಥೆಯೇ ನುಂಗಿಹಾಕುವುದನ್ನು ತಪ್ಪಿಸಲು ಗ್ರಾಮ ಪಂಚಾಯಿತಿಗಳಿಗೆ ನೇರವಾಗಿ ಅನುದಾನ ಬಿಡುಗಡೆ ಮಾಡಿದರು.

ಅಧಿಕಾರ ವಿಕೇಂದ್ರೀಕರಣದಲ್ಲಿ ವಿಶ್ವಾಸವಿಟ್ಟಿದ್ದ ನಜೀರ್‌ಸಾಬರು ರಾಜ್ಯದಲ್ಲಿ ಗ್ರಾಮಸಭೆ ಕಲ್ಪನೆಯನ್ನು ಜಾರಿಗೆ ತಂದರು. ಗ್ರಾಮಸಭೆಗಳ ಬಗ್ಗೆ ಜನರು ಪ್ರಾರಂಭದಲ್ಲಿ ಬಹಳ ಆಸಕ್ತಿ ಹಾಗೂ ಆಶಾಭಾವನೆ ಹೊಂದಿದ್ದರು. ಆದರೆ ಗ್ರಾಮಸಭೆಗಳ ನಿರ್ಣಯಗಳು, ಅನುಷ್ಠಾನಗೊಳ್ಳದೆ ಅಲ್ಪ ಕಾಲದಲ್ಲಿಯೇ ಜನರು ಭ್ರಮನಿರಸನಗೊಂಡರು. ಗ್ರಾಮ ಪಂಚಾಯಿತಿಗಳಿಗೆ ಹಣಕಾಸು ಒದಗಿಸುತ್ತಿರಲಿಲ್ಲ. ಬರುವ ಹಣ ವಿದ್ಯುತ್ ಬಿಲ್‌, ಕುಡಿಯುವ ನೀರು ಸರಬರಾಜು ವೆಚ್ಚ ಸರಿದೂಗಿಸಲು ಸಾಕಾಗುತ್ತಿರಲಿಲ್ಲ. ಪ್ರಧಾನಿ ರಾಜೀವ್‌ಗಾಂಧಿ ಅವರು ಮಂಡಲ ಪಂಚಾಯಿತಿಗಳಿಗೆ ನೇರವಾಗಿ ಅನುದಾನ ಬಿಡುಗಡೆ ಮಾಡಿದ್ದರಿಂದ ಅವುಗಳಿಗೆ ಮಾತ್ರ ಅನುಕೂಲವಾಗಿತ್ತು.

ನಮ್ಮ ರಾಜ್ಯದಲ್ಲಿ ನಡೆದ ಅಧಿಕಾರ ವಿಕೇಂದ್ರೀಕರಣ ಪ್ರಯೋಗ ಮತ್ತು ಪಶ್ಚಿಮ ಬಂಗಾಳದ ಪಂಚಾಯಿತಿ ವ್ಯವಸ್ಥೆಗಳಿಂದ
ಪ್ರಭಾವಿತರಾಗಿದ್ದ ರಾಜೀವ್‌ಗಾಂಧಿ  ಅವರು, ಸ್ಥಳೀಯ ಆಡಳಿತ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ತರಲು, ದೇಶದಾದ್ಯಂತ ಅಧ್ಯಯನ ಪ್ರವಾಸ ಕೈಗೊಂಡರು. ದಕ್ಷಿಣ ಭಾರತದ ಚಿಂತನ-ಮಂಥನ ಸಭೆಯನ್ನು ಬೆಂಗಳೂರಲ್ಲಿ ಆಯೋಜಿಸಲಾಗಿತ್ತು. ಈ ಸಭೆಗೆ ರಾಜ್ಯದ ಎಲ್ಲ ಜಿಲ್ಲಾ ಪರಿಷತ್ತುಗಳ ಅಧ್ಯಕ್ಷರನ್ನು ಹಾಗೂ ವಿರೋಧ ಪಕ್ಷದ ನಾಯಕರನ್ನು ಆಹ್ವಾನಿಸಲಾಗಿತ್ತು. ನಾನು ಧಾರವಾಡ ಜಿಲ್ಲಾ ಪರಿಷತ್ತಿನ ವಿರೋಧ ಪಕ್ಷದ ನಾಯಕನಾಗಿ ಈ ಸಭೆಯಲ್ಲಿ  ಪಾಲ್ಗೊಂಡೆ.

‘ಪಂಚಾಯಿತಿ ರಾಜ್‌ ವ್ಯವಸ್ಥೆಯಲ್ಲಿ ಸದಸ್ಯ ಸ್ಥಾನಕ್ಕೆ ಮಾತ್ರ ಮೀಸಲಾತಿ ನೀಡುವುದರಿಂದ, ಸಮಾಜದ ಬಲಿಷ್ಠ ವರ್ಗ ಅಥವಾ ಕೋಮಿನವರೇ, ಅಧಿಕಾರ ಗದ್ದುಗೆಗೇರುತ್ತಾರೆ. ಇದು ತಪ್ಪು, ಶ್ರೀಸಾಮಾನ್ಯರು, ಬಡವರು, ಪರಿಶಿಷ್ಟರು, ಹಿಂದುಳಿದ ವರ್ಗದವರು ಹಾಗೂ ಮಹಿಳೆಯರಿಗೆ ಅಧಿಕಾರ ಸ್ಥಾನಗಳಲ್ಲಿಯೂ  ಮೀಸಲಾತಿ ನೀಡಬೇಕು’ ಎಂದು ಬಲವಾಗಿ ವಾದ ಮಂಡಿಸಿದೆ. ರಾಜೀವ್‌ಗಾಂಧಿ  ಅವರಿಗೆ ನನ್ನ ಸಲಹೆ ಹಿಡಿಸಿತು. ಅವರು ತಮ್ಮ ನೋಟ್‌ ಪ್ಯಾಡ್‌ನಲ್ಲಿ ಟಿಪ್ಪಣಿ ಮಾಡಿಕೊಂಡಿದ್ದನ್ನು ನಾನು ನೋಡಿದೆ. ಅನಂತರ ರೂಪಿಸಿದ ಸಂವಿಧಾನ ತಿದ್ದುಪಡಿ ಮಸೂದೆಯಲ್ಲಿ ಅಧಿಕಾರ ಸ್ಥಾನಗಳಿಗಳಿಗೂ ಮೀಸಲಾತಿ ನೀಡಲಾಗಿತ್ತು. ಈ ಸಂವಿಧಾನ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಸರಳವಾಗಿ ಅಂಗೀಕಾರವಾಯಿತು. ಆದರೆ ಎಲ್ಲ ವಿರೋಧ ಪಕ್ಷಗಳ ಸಂಘಟಿತ ವಿರೋಧದಿಂದಾಗಿ ರಾಜ್ಯಸಭೆಯಲ್ಲಿ ಪರಾಭವಗೊಂಡಿತು. ಇದರಿಂದ ರಾಜೀವ್‌ಗಾಂಧಿ  ತುಂಬ ನೊಂದಿದ್ದರು.
ಸಂವಿಧಾನ ತಿದ್ದುಪಡಿ ಮಸೂದೆ ಸಿದ್ಧಪಡಿಸುವಲ್ಲಿ, ಅಂದು ರಾಜೀವ್‌ಗಾಂಧಿ  ಅವರ ಕಚೇರಿಯಲ್ಲಿ ವಿಶೇಷಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಮಣಿಶಂಕರ ಅಯ್ಯರ್‌ ಅವರ ಪಾತ್ರವೂ ಮಹತ್ವದ್ದಾಗಿತ್ತು.

1989ರಲ್ಲಿ ಕೇಂದ್ರದಲ್ಲಿ ವಿ.ಪಿ. ಸಿಂಗ್‌ ನೇತೃತ್ವದಲ್ಲಿ ಕಾಂಗ್ರೆಸ್ಸೇತರ ಸರ್ಕಾರ ಅಧಿಕಾರಕ್ಕೆ ಬಂದಿತು. ಇವರಿಗೆ ಬಿಜೆಪಿ, ಕಮ್ಯುನಿಸ್ಟ್‌ ಸೇರಿ ಹಲವು ಪಕ್ಷಗಳು ಬೆಂಬಲಿಸಿದ್ದವು. ಇವರ ಅಧಿಕಾರದ ಅವಧಿಯಲ್ಲಿ ರಾಜೀವ್‌ಗಾಂಧಿ  ಕಾಲದಲ್ಲಿ ರೂಪಿಸಿದ್ದ ಸಂವಿಧಾನ ತಿದ್ದುಪಡಿ ಮಸೂದೆ ಸಂಸತ್ತಿನ ಮುಂದೆ ಬರಲೇ ಇಲ್ಲ.

ಮಂಡಲ- ಕಮಂಡಲಗಳ ತಿಕ್ಕಾಟದಲ್ಲಿ, ಸರ್ಕಾರ ಪತನಗೊಂಡು, 1991ರಲ್ಲಿ ಪಾರ್ಲಿಮೆಂಟ್‌ಗೆ ಚುನಾವಣೆ ನಡೆಯುತ್ತಿದ್ದ ಕಾಲದಲ್ಲಿ, ರಾಜೀವ್‌ಗಾಂಧಿ  ಅವರು ತಮಿಳುನಾಡಿನ ಶ್ರೀಪೆರಂಬುದೂರ್‌ನಲ್ಲಿ ಹತ್ಯೆಯಾದರು. ಆ ಚುನಾವಣೆ ನಂತರ ಕಾಂಗ್ರೆಸ್‌ ಪುನಃ ಅಧಿಕಾರಕ್ಕೆ ಬಂತು. ಅನುಭವಿ ರಾಜಕಾರಣಿ,  ಮುತ್ಸದ್ದಿ  ಪಿ. ವಿ. ನರಸಿಂಹರಾವ್‌ ಅವರು ಪ್ರಧಾನಿಯಾದರು.  ರಾಜೀವ್‌ಗಾಂಧಿ  ಅವರ ಕನಸಿನ ಪಂಚಾಯಿತಿರಾಜ್‌ ವ್ಯವಸ್ಥೆ ರೂಪಿಸಲು, ಸಂವಿಧಾನ ತಿದ್ದುಪಡಿ ಮಸೂದೆ ಮತ್ತೆ ಮುಂಚೂಣಿಗೆ ಬಂತು. 1992ರ      ಡಿಸೆಂಬರ್‌ 22 ಮತ್ತು 23ರಂದು ಕ್ರಮವಾಗಿ ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಒಪ್ಪಿತವಾಗಿ, 1993ರ ಏಪ್ರಿಲ್‌ 24ರಂದು ಗೆಜೆಟ್‌ನಲ್ಲಿ ಪ್ರಕಟವಾಯಿತು.

ನಜೀರ್‌ಸಾಬರು ‘ಕಾಂಗ್ರೆಸ್ ಪಕ್ಷದ ಸಾಮಾಜಿಕ ನ್ಯಾಯದ ಬದ್ಧತೆ’ಯ ಬಗ್ಗೆ 1985ರಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯ ನಿಜವಾಯಿತು.
ನನ್ನ ಚಿಕ್ಕಪ್ಪನವರ ನಿಧನದಿಂದ ತೆರವಾದ ಗದಗ ಮತಕ್ಷೇತ್ರದಿಂದ ನಾನು, 1992ರ ಜೂನ್‌ನಲ್ಲಿ ಶಾಸಕನಾಗಿ ವಿಧಾನಸಭೆ ಪ್ರವೇಶಿಸಿದ್ದೆ. ಆಗ ಸಂವಿಧಾನದ 73ನೇ ತಿದ್ದುಪಡಿಗೆ ರಾಜ್ಯ ವಿಧಾನಮಂಡಲಗಳ ಒಪ್ಪಿಗೆ ಪಡೆಯುವ ಪ್ರಕ್ರಿಯೆ ನಡೆದಿತ್ತು. ರಾಜ್ಯದ ವಿಧಾನಸಭೆಯಲ್ಲಿ ಚರ್ಚೆ ನಡೆಯುತ್ತಿದ್ದಾಗ ಅಂದಿನ ವಿಧಾನಸಭಾಧ್ಯಕ್ಷ ವಿ.ಎಸ್. ಕೌಜಲಗಿ ಅವರಿಗೆ ನಾನು ಚೀಟಿ ಕಳಿಸಿ, ನನಗೆ ಮಾತನಾಡಲು ಅವಕಾಶ ನೀಡಲು ವಿನಂತಿಸಿದೆ. ಅವರು ಅವಕಾಶ ಕೊಟ್ಟರು. ನನ್ನ ಅಂದಿನ ಭಾಷಣದಲ್ಲಿಯೂ ಅಧಿಕಾರ ಸ್ಥಾನಗಳಿಗೆ  ಮೀಸಲಾತಿ ನಿಗದಿ ಮಾಡಿದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದೆ. ಇದಾದ ಮರುದಿನ ಅಂದಿನ ಪಂಚಾಯಿತಿರಾಜ್‌ ಸಚಿವರಾದ ಎಂ.ವೈ. ಘೋರ್ಪಡೆ ಅವರನ್ನು ಭೇಟಿಯಾಗಿ, ‘ಸಂವಿಧಾನದ 73ನೇ ತಿದ್ದುಪಡಿ ಜಾರಿಗೆ ಬರುವುದು ನಿಶ್ಚಿತವಾದಾಗ, ಈ ತಿದ್ದುಪಡಿಯ ಆಶಯಗಳನ್ನು ಈಡೇರಿಸುವ, ರಾಜ್ಯದ ಕಾನೂನು ರಚನೆಯಾಗಬೇಕು ಹಾಗೂ ಅದು ರಾಷ್ಟ್ರದಲ್ಲಿ ಮೊಟ್ಟ ಮೊದಲಿಗೆ ಜಾರಿಗೆ ತಂದ ಕೀರ್ತಿ ತಮ್ಮದಾಗಬೇಕು’ಎಂದು ಕೋರಿದೆ.

ತಿದ್ದುಪಡಿ ಮಸೂದೆಯಲ್ಲಿ ಪರಿಶಿಷ್ಟರು ಹಾಗೂ ಮಹಿಳೆಯರಿಗೆ ಅಧಿಕಾರ ಸ್ಥಾನಗಳಲ್ಲಿಯೂ ಮೀಸಲಾತಿ ನೀಡಲಾಗಿದ್ದಿತು. ಆದರೆ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡುವ ಅಧಿಕಾರ ರಾಜ್ಯಗಳಿಗೆ ನೀಡಲಾಗಿತ್ತು. ಮಂಡಲ ವರದಿಯ ಶಿಫಾರಸುಗಳನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡಾಗ  ರಾಷ್ಟ್ರದಾದ್ಯಂತ ಮೀಸಲು ವಿರೋಧಿ ಚಳವಳಿ ಆರಂಭವಾಗಿತ್ತು.

ಸರ್ಕಾರವನ್ನು ಬೆಂಬಲಿಸುವ ಪಕ್ಷವೇ ಹೋರಾಟಕ್ಕೆ ಇಳಿದಿತ್ತು. ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಸಹಜವಾಗಿ ಒಪ್ಪಿಕೊಳ್ಳುವ ದೃಷ್ಟಿಯಿಂದ ಅದರ ವ್ಯಾಖ್ಯೆಯಲ್ಲಿ ಬಡ ಒಕ್ಕಲಿಗ ಹಾಗೂ ಲಿಂಗಾಯತ ಸಮುದಾಯದವರು ಬರುವಂತೆ ಮಾಡಿದ್ದು ಆಗಿನ ಸರ್ಕಾರದ ಜಾಣ್ಮೆಯ ನಡೆಯಾಗಿದ್ದಿತು.  ಅವಕಾಶ ವಂಚಿತರಿಗೆ ಅಧಿಕಾರ ಗದ್ದುಗೆಯಲ್ಲಿ ಕೂಡಿಸುವ ಗುರಿ ಸಾಧನೆಯಲ್ಲಿ ಅಂದಿನ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಹಾಗೂ ಇಲಾಖೆಯ ಸಚಿವ ಎಂ.ವೈ. ಘೋರ್ಪಡೆ ಅವರ ಜಾಣ್ಮೆ ಹಾಗೂ ಬದ್ಧತೆ ಮೆಚ್ಚುವಂಥದ್ದು.

ರಾಜ್ಯದಲ್ಲಿ 1993ರ ಕರ್ನಾಟಕ ಪಂಚಾಯಿತಿರಾಜ್‌ ಅಧಿನಿಯಮವನ್ನು  1993ರ ಮೇ 10ರಂದು ಜಾರಿಗೊಳಿಸಲಾಯಿತು. ಕ್ರಾಂತಿಕಾರಿ ಕಾಯ್ದೆ ಜಾರಿಯಾದ ಐತಿಹಾಸಿಕ ದಿನ ಇದಾಯಿತು. ‘ರಕ್ತರಹಿತ ಸಾಮಾಜಿಕ ಮೌನ ಕ್ರಾಂತಿ’ಗೆ ಕಾರಣವಾದ ಕಾಯ್ದೆ ಜಾರಿಯಾದ ಪುಣ್ಯದಿನವಿದು. ಈ ಹೊಸ ಕಾನೂನಿನನ್ವಯ ಅವಕಾಶ ವಂಚಿತರೆಲ್ಲಾ ಅಧಿಕಾರ ಪಡೆದುಕೊಂಡಿದ್ದು ಇತಿಹಾಸ.  ಗ್ರಾಮದಲ್ಲಿಯ ಬಲಿಷ್ಠರ ಅಧಿಕಾರ ಕಿತ್ತು, ಅವಕಾಶವಂಚಿತರಿಗೆ ಅಧಿಕಾರ ನೀಡಿದ್ದರಿಂದ ಅಲ್ಲಿಯವರೆಗೆ ಅಧಿಕಾರ ಅನುಭವಿಸಿದ ಜನರು ಸಿಟ್ಟಾಗಿದ್ದರು. ಪರಿಣಾಮ 1994ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪರಾಭವಗೊಂಡಿತು. ಎಚ್‌.ಡಿ. ದೇವೇಗೌಡರ ನೇತೃತ್ವದಲ್ಲಿ ಜನತಾ ಪಕ್ಷದ ಸರ್ಕಾರ ರಚನೆಯಾಯಿತು. ಅವರ ಸರ್ಕಾರ ಹಿಂದುಳಿದ ವರ್ಗದವರ ಮೀಸಲಾತಿಯನ್ನು ಮತ್ತೆ ವಿಭಾಗಿಸಿ, ಅತಿ ಹಿಂದುಳಿದ ಜಾತಿಯವರಿಗೆ ಶೇ 80 ಹಾಗೂ ಒಕ್ಕಲಿಗ, ಲಿಂಗಾಯತ, ಇತರ ಅವಕಾಶ ಪಡೆದ ಜಾತಿಗಳ ಬಡವರಿಗೆ ಶೇ 20 ಮೀಸಲಾತಿ ನೀಡಿತು.

ಹಿಂದೆ, ಗ್ರಾಮದ ಮುಖ್ಯಸ್ಥರು ಕೂಡುವ ಕಟ್ಟೆಯ ಮೇಲೆ ಸಹ ಕೂಡಲು ಸಾಧ್ಯವಾಗದಿದ್ದ ಪರಿಶಿಷ್ಟ ಜಾತಿಯ ಜನ, ಬಲಿಷ್ಠರ ಮುಂದೆ ಅಂಜುತ್ತ ಕೈ ಕಟ್ಟಿ ನಿಲ್ಲುತ್ತಿದ್ದ ಜನ, ತಲೆಮೇಲೆ ಸೆರಗು ಹೊತ್ತು ಬಾಯಿ ಮುಚ್ಚಿಕೊಂಡಿರುತ್ತಿದ್ದ  ಮಹಿಳೆಯರು, ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿಗಳಲ್ಲಿ ಅಧ್ಯಕ್ಷ, ಉಪಾಧ್ಯಕ್ಷರಾಗಿದ್ದಾರೆ. ಈ ಸಾಮಾಜಿಕ ಬದಲಾವಣೆಗೆ ಕಾರಣವಾದ ಮೇ 10 ಅವಿಸ್ಮರಣೀಯ ದಿನ. ಅದಕ್ಕಾಗಿ 2017ರ ಮೇ 10 ರಿಂದ 2018ರ ಮೇ 9 ರವರೆಗೆ ‘ಸಮಾನತೆಯ ರಕ್ತರಹಿತ ಮೌನ ಕ್ರಾಂತಿಯ ರಜತ ಮಹೋತ್ಸವ’ವನ್ನಾಗಿ ಆಚರಿಸಬೇಕಾಗಿದೆ. ತನ್ಮೂಲಕ ಯುವಜನಾಂಗದಲ್ಲಿ ಈ ವ್ಯವಸ್ಥೆ ರೂಪುಗೊಂಡ ಹಿನ್ನೆಲೆ ಹಾಗೂ ಹೋರಾಟದ ಬಗ್ಗೆ ಜಾಗೃತಿ ಮೂಡಿಸಬೇಕು.

ಈ ಹೋರಾಟ ನಿರಂತರವಾಗಿ ನಡೆಸಲು ಹಾಗೂ ಈಗಿರುವ ವ್ಯವಸ್ಥೆ ಬಲಪಡಿಸಲು ರಜತಮಹೋತ್ಸವ ವರ್ಷ ಪರ್ವಕಾಲವಾಗಲೆಂದು ಹಾರೈಸುವೆ.  ಎಲ್ಲೆಡೆ ಪಂಚಾಯಿತಿ ರಾಜ್‌ ವ್ಯವಸ್ಥೆಯ ಅರಿವಿನ ಹರಿವು ವಿಸ್ತರಿಸಲಿ. ಗಾಂಧೀಜಿಯವರ ಕನಸಿನ ಗ್ರಾಮಸ್ವರಾಜ್ಯ ಅಸ್ತಿತ್ವಕ್ಕೆ ಬರಲಿ.

-ಡಿ.ಆರ್. ಪಾಟೀಲ
( ಲೇಖಕ ಮಾಜಿ ಶಾಸಕ,  ಗದಗ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT