7

ಸ್ವಲ್ಪ ದುಬಾರಿ ಫ್ಯಾಬ್ಲೆಟ್‌

ಯು.ಬಿ. ಪವನಜ
Published:
Updated:
ಸ್ವಲ್ಪ ದುಬಾರಿ ಫ್ಯಾಬ್ಲೆಟ್‌

ಸ್ಯಾಮ್‌ಸಂಗ್ ಕಂಪೆನಿ ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಸದ್ಯದಲ್ಲಿ ಮೊದಲ ಸ್ಥಾನದಲ್ಲಿದೆ. ಭಾರತೀಯ ಸಂದರ್ಭದಲ್ಲಿ ಸ್ಯಾಮ್‌ಸಂಗ್‌ನವರ ಉತ್ಪನ್ನಗಳು ದುಬಾರಿ ಎಂದೇ ಹೇಳಬಹುದು. 6 ಇಂಚು ಗಾತ್ರದ ಪರದೆಯ ಫೋನ್‌ಗಳಿಗೆ ಫ್ಯಾಬ್ಲೆಟ್ ಎಂಬ ಹೆಸರಿದೆ. ಅಂದರೆ ಫೋನ್ ಮತ್ತು ಟ್ಯಾಬ್ಲೆಟ್‌ಗಳ ಮಧ್ಯದವು ಎಂದು.

ಸ್ಯಾಮ್‌ಸಂಗ್ ಕಂಪೆನಿ ಈ ಮಾದರಿಯ ಸಾಧನಗಳನ್ನೂ ತಯಾರಿಸುತ್ತಿದೆ. ಅವು ಕೂಡ ಸ್ವಲ್ಪ ದುಬಾರಿ ಎಂದೇ ಹೇಳಬಹುದು. ಅಂತಹ ಒಂದು ಉತ್ಪನ್ನ ಸ್ಯಾಮ್‌ಸಂಗ್ ಗ್ಯಾಲಕ್ಸಿ ಸಿ 9 ಪ್ರೊ (Samsung Galaxy C9 Pro) ನಮ್ಮ ಈ ವಾರದ ಗ್ಯಾಜೆಟ್.ಗುಣವೈಶಿಷ್ಟ್ಯಗಳು

1.95 ಗಿಗಾಹರ್ಟ್ಸ್ ವೇಗದ ನಾಲ್ಕು ಹೃದಯಗಳ ಮತ್ತು 1.4 ಗಿಗಾಹರ್ಟ್ಸ್ ವೇಗದ ನಾಲ್ಕು ಹೃದಯಗಳ ಪ್ರೊಸೆಸರ್ (ಸ್ನಾಪ್‌ಡ್ರಾಗನ್ 653), ಗ್ರಾಫಿಕ್ಸ್‌ಗಾಗಿ ಅಧಿಕ ಪ್ರೊಸೆಸರ್, 6+64 ಗಿಗಾಬೈಟ್ ಮೆಮೊರಿ, ಅಧಿಕ ಮೆಮೊರಿಗೆ ಮೈಕ್ರೊಎಸ್‌ಡಿ ಕಾರ್ಡ್ ಹಾಕಿಕೊಳ್ಳುವ ಸೌಲಭ್ಯ ಇದೆ.6 ಇಂಚು ಗಾತ್ರದ 1920 X 1080 ಪಿಕ್ಸೆಲ್ ರೆಸೊಲೂಶನ್‌ನ ಸೂಪರ್ ಅಮೋಲೆಡ್ ಪರದೆ, ಗೊರಿಲ್ಲ-4 ಗಾಜು, 16 ಮೆಗಾಪಿಕ್ಸೆಲ್‌ನ ಪ್ರಾಥಮಿಕ ಕ್ಯಾಮೆರಾ, ಅದಕ್ಕೆ ಎಲ್‌ಇಡಿ ಫ್ಲಾಶ್, 16 ಮೆಗಾಪಿಕ್ಸೆಲ್‌ನ ಇನ್ನೊಂದು ಎದುರುಗಡೆಯ ಸ್ವಂತಿ ಕ್ಯಾಮೆರಾ, ಮೂರು ಮೈಕ್‌ಗಳು, 2G/3G/4G ನ್ಯಾನೋ ಸಿಮ್‌, VoLTE, ವೈಫೈ, ಅಕ್ಸೆಲೆರೋಮೀಟರ್, ಬೆರಳಚ್ಚು ಸ್ಕ್ಯಾನರ್, ಯುಎಸ್‌ಬಿ ಓಟಿಜಿ, ಎನ್‌ಎಫ್‌ಸಿ, 4000mAh ಬ್ಯಾಟರಿ, 162.9 x 80.7 x 6.9 ಮಿ.ಮೀ. ಗಾತ್ರ, 189 ಗ್ರಾಂ ತೂಕ, ಆಂಡ್ರಾಯ್ಡ್‌ 6.0.1, ಇತ್ಯಾದಿ. ಎರಡು ಬಣ್ಣಗಳಲ್ಲಿ ಲಭ್ಯ. ನಿಗದಿತ ಬೆಲೆ ₹38,900.ಇದರ ರಚನೆ ಮತ್ತು ವಿನ್ಯಾಸ ಒಂದು ಮೇಲ್ದರ್ಜೆಯ ಫೋನಿನಂತೆಯೇ ಇದೆ. ನನಗೆ ವಿಮರ್ಶೆಗೆ ಬಂದದ್ದು ಕಪ್ಪು ಬಣ್ಣದ್ದು. ನೋಡಲು ಬಹುಮಟ್ಟಿಗೆ ಇದು ಇತರೆ ಗ್ಯಾಲಕ್ಸಿ ಫೋನ್‌ಗಳಂತೆಯೇ ಇದೆ. ಲೋಹದ ಫ್ರೇಂ ಇದೆ. ಹಿಂಭಾಗದ ಕವಚ ತೆಗೆಯಲು ಬರುವುದಿಲ್ಲ. ಅದನ್ನು ಲೋಹದಿಂದ ತಯಾರಿಸಿದಂತಿದೆ. ಈ ಕವಚ ತುಂಬ ನಯವೂ ಅಲ್ಲ, ದೊರಗೂ ಅಲ್ಲ ಎಂಬಂತಿದೆ.

ಇದರ ಗಾತ್ರ ದೊಡ್ಡದು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಒಂದು ಕೈಯಲ್ಲಿ ಹಿಡಿದುಕೊಂಡು ಕೆಲಸ ಮಾಡಲು ಕಷ್ಟ. ಬಲಭಾಗದಲ್ಲಿ ಆನ್/ಆಫ್ ಸ್ವಿಚ್, ಎಡಭಾಗದಲ್ಲಿ ವಾಲ್ಯೂಮ್ ಬಟನ್‌ಗಳಿವೆ. ಬಲ ಭಾಗದಲ್ಲಿ ಸಿಮ್ ಕಾರ್ಡ್ ಮತ್ತು ಮೆಮೊರಿ ಕಾರ್ಡ್ ಹಾಕಲು ಹೊರಬರುವ ಎರಡು ಬೇರೆ ಬೇರೆ ಟ್ರೇಗಳು ಇವೆ. ಅಂದರೆ ಮೆಮೊರಿ ಕಾರ್ಡ್ ಹಾಕುವಾಗ ಒಂದು ಸಿಮ್ ಕಡಿಮೆಯಾಗುವುದಿಲ್ಲ.ಎರಡು ಸಿಮ್ ಮತ್ತು ಮೆಮೊರಿ ಕಾರ್ಡ್ ಒಟ್ಟಿಗೆ ಬಳಸಬಹುದು. ಅವನ್ನು ತೆಗೆಯಲು ಚಿಕ್ಕ ಪಿನ್ ಬಳಸಬೇಕು. ಕೆಳಭಾಗದಲ್ಲಿ ಯುಎಸ್‌ಬಿ-ಸಿ ಕಿಂಡಿ ಮತ್ತು 3.5 ಮಿ.ಮೀ. ಇಯರ್‌ಫೋನ್ ಕಿಂಡಿ ನೀಡಿದ್ದಾರೆ. ಅವುಗಳನ್ನು ಪಕ್ಕಪಕ್ಕದಲ್ಲೇ ನೀಡಿದ್ದು ನನಗೇನೋ ಅಷ್ಟೊಂದು ಹಿಡಿಸಲಿಲ್ಲ.

ಯುಎಸ್‌ಬಿ ಓಟಿಜಿ ಬೆಂಬಲ ಇರುವುದರಿಂದ ಅಂತಹ ಡ್ರೈವ್ ಜೋಡಿಸಿದರೆ ಆಗ 90 ಡಿಗ್ರಿ ಕೋನದಲ್ಲಿ ಬಾಗಿರುವ ಇಯರ್‌ಫೋನ್ ಕನೆಕ್ಟರ್ ಜೋಡಿಸಲಿಕ್ಕೆ ಸ್ವಲ್ಪ ಕಷ್ಟಪಡಬೇಕಾಗುತ್ತದೆ. ಮುಂಭಾಗದಲ್ಲಿ ಕೆಳಗಡೆ ಮಧ್ಯದಲ್ಲಿ ಬೆರಳಚ್ಚು ಸ್ಕ್ಯಾನರ್ ಇದೆ. ಅದು ಬಟನ್ ಆಗಿಯೂ ಕೆಲಸ ಮಾಡುತ್ತದೆ. ಉದಾಹರಣೆಗೆ ಅದನ್ನು ಎರಡು ಸಲ ಒತ್ತಿದರೆ ಕ್ಯಾಮೆರಾ ಪ್ರಾರಂಭ ಆಗುತ್ತದೆ.
ಇದರ ಪ್ರೊಸೆಸರ್ ಅಂತಹ ಮೇಲ್ದರ್ಜೆಯದ್ದೇನೂ ಅಲ್ಲ. ಈ ಫೋನಿನ ಅಂಟುಟು ಬೆಂಚ್‌ಮಾರ್ಕ್ 83515 ಇದೆ. ಅಂದರೆ ಇದು ಮಧ್ಯಮ ವೇಗದ ಫೋನ್ ಎನ್ನಬಹುದು. ಆದರೆ ಇದರಲ್ಲಿ 6 ಗಿಗಾಬೈಟ್ ಮೆಮೊರಿ ಇರುವ ಕಾರಣ ಹಲವು ಅಪ್ಲಿಕೇಶನ್‌ಗಳನ್ನು ಏಕಕಾಲದಲ್ಲಿ ತೆರೆದು ಬಳಸಬಹುದು. ಹಾಗೆ ಮಾಡುವುದರಿಂದ ಬಳಕೆಯಲ್ಲಿ ಏನೂ ತೊಂದರೆ ಕಂಡುಬರುವುದಿಲ್ಲ. ಎಲ್ಲ ನಮೂನೆಯ ಆಟಗಳನ್ನು ಆಡುವ ಅನುಭವ ಚೆನ್ನಾಗಿಯೇ ಇದೆ. ತುಂಬ ಹೊತ್ತು ಬಳಸಿದರೆ ಫೋನ್ ಬಿಸಿಯಾಗುತ್ತದೆ.

6 ಇಂಚು ಗಾತ್ರದ ಹೈಡೆಫಿನಿಶನ್ ಅಮೋಲೆಡ್ ಪರದೆ ಇರುವುದರಿಂದ ಸಿನಿಮಾ ವೀಕ್ಷಣೆಗೆ ಇದು ಹೇಳಿ ಮಾಡಿಸಿದಂತಿದೆ. ಹೈಡೆಫಿನಿಶನ್ ಮಾತ್ರವಲ್ಲ 4k ವಿಡಿಯೊ  ಕೂಡ ಚೆನ್ನಾಗಿ ಪ್ಲೇ ಆಗುತ್ತದೆ. ಆದರೆ ಇದರ ಆಡಿಯೊ ಇಂಜಿನ್ ಅಷ್ಟಕ್ಕಷ್ಟೆ. ಇದರ ಅರ್ಧ ಬೆಲೆಗೆ ದೊರೆಯುವ ಕೆಲವು ಚೀನಾ ಫೋನ್‌ಗಳಲ್ಲಿ ಇದಕ್ಕಿಂತ ಉತ್ತಮ ಆಡಿಯೊ ಇಂಜಿನ್ ಇದೆ. ಇಯರ್‌ಬಡ್ ನೀಡಿದ್ದಾರೆ. ಆದರೆ ಒಂದೇ ಪ್ರತಿ ಕುಶನ್ ನೀಡಿದ್ದಾರೆ. ಇಯರ್‌ಬಡ್‌ನ ಗುಣಮಟ್ಟವೂ ಚೆನ್ನಾಗಿಲ್ಲ. ಸುಮಾರು 38 ಸಾವಿರ ರೂಪಾಯಿ ಬೆಲೆಯ ಫೋನಿನ ಜೊತೆ ಕನಿಷ್ಠ ಸಾವಿರ ಬೆಲೆಯ ಇಯರ್‌ಬಡ್‌ ನೀಡಬೇಕಿತ್ತು.

ಇದರ ಕ್ಯಾಮೆರಾ ಚೆನ್ನಾಗಿದೆ. ತುಂಬ ಬೆಳಕಿದ್ದಲ್ಲಿ ಫೋಟೊ ಚೆನ್ನಾಗಿ ತೆಗೆಯುತ್ತದೆ. ಹಲವು ಸವಲತ್ತುಗಳನ್ನೂ ನೀಡಿದ್ದಾರೆ. ಆದರೆ ಕಡಿಮೆ ಬೆಳಕಿನಲ್ಲಿ ಫೋಟೊ ಚೆನ್ನಾಗಿ ಬರುವುದಿಲ್ಲ. ವಿಡಿಯೊ ಚಿತ್ರೀಕರಣವೂ ಅಷ್ಟೆ. ಹೈಡೆಫಿನಿಶನ್ ವಿಡಿಯೊ ಮಾಡಬಹುದು. ಆದರೆ 4k ವಿಡಿಯೊ ಚಿತ್ರೀಕರಣ ಸಾಧ್ಯವಿಲ್ಲ.
4000mAh ಶಕ್ತಿಯ ಬ್ಯಾಟರಿ ಇರುವುದರಿಂದ ಒಂದೂವರೆ ಅಥವಾ ಎರಡು ದಿನ ಬಳಸಬಹುದು. ಇದರಲ್ಲಿ ಕ್ವಿಕ್ ಚಾರ್ಜ್ ಸವಲತ್ತು ಕೂಡ ಇದೆ. ಇದಕ್ಕೆ ಸರಿಹೊಂದುವ ಚಾರ್ಜರ್ ಜೋಡಿಸಿದರೆ ಬಹಳ ಬೇಗ ಚಾರ್ಜ್ ಆಗುತ್ತದೆ.

ಕನ್ನಡದ ತೋರುವಿಕೆ ಸರಿಯಾಗಿದೆ ಮಾತ್ರವಲ್ಲ ಸಂಪೂರ್ಣ ಕನ್ನಡ ಯೂಸರ್ ಇಂಟರ್‌ಫೇಸ್ ಕೂಡ ಇದೆ. ಸ್ಯಾಮ್‌ಸಂಗ್‌ನವರದೇ ಆದ ಕೀಲಿಮಣೆ ಇದೆ. ಆದರೆ ಅದರ ವಿನ್ಯಾಸ ಮಾತ್ರ ಸ್ವಲ್ಪ ವಿಚಿತ್ರವಾಗಿದೆ.

ಒಟ್ಟಿನಲ್ಲಿ ಹೇಳುವುದಾದರೆ ದುಬಾರಿಯಾದ ಉತ್ತಮವಾದ ಫೋನ್ ಎನ್ನಬಹುದು. ಆದರೆ 30 ಸಾವಿರಕ್ಕೆ ದೊರೆಯುವ ಒನ್‌ಪ್ಲಸ್ 3ಟಿ ಇದಕ್ಕಿಂತ ಉತ್ತಮವಾದ ಫೋನ್‌ ಎಂದು ನಿರ್ದಾಕ್ಷಿಣ್ಯವಾಗಿ ಹೇಳಬಹುದು. ಇದರ ವಿಡಿಯೊ ವಿಮರ್ಶೆ ನೋಡಬೇಕಿದ್ದರೆ bit.ly/gadgetloka277v ಜಾಲತಾಣಕ್ಕೆ ಭೇಟಿ ನೀಡಿ. 

*

ವಾರದ ಆ್ಯಪ್ -ವಿಸಿಟಿಂಗ್ ಕಾರ್ಡ್ ಸ್ಕ್ಯಾನರ್ 
ನಿಮಗೆ ಯಾರಾದರೂ ಅವರ  ವಿಸಿಟಿಂಗ್ ಕಾರ್ಡ್ ಅನ್ನು ನೀಡಿದರೆ ಏನು ಮಾಡುತ್ತೀರಿ? ಅದರಲ್ಲಿರುವ ಮಾಹಿತಿಯನ್ನು  ನಿಮ್ಮ ಸ್ಮಾರ್ಟ್‌ಫೋನಿಗೆ ನೀವೇ ಬೆರಳಚ್ಚು ಮಾಡಿ ಊಡಿಸುತ್ತೀರಿ ತಾನೆ? ಎಲ್ಲ ಫೋನ್‌ಗಳಲ್ಲೂ ಕ್ಯಾಮೆರಾ ಇದೆ. ಅದನ್ನು ಬಳಸಿ ಕಾರ್ಡನ್ನು ಸ್ಕ್ಯಾನ್ ಮಾಡಿ ಮಾಹಿತಿಯನ್ನು ಸೇರಿಸುವಂತಿದ್ದರೆ ಒಳ್ಳೆಯದು ಎಂದು ಯಾವತ್ತಾದರೂ ನಿಮಗೆ ಅನ್ನಿಸಿದ್ದಿದೆಯೇ?

ಹೌದು ಎಂದಾದಲ್ಲಿ ನಿಮಗೆ ಗೂಗಲ್‌ ಪ್ಲೇ ಸ್ಟೋರಿನಲ್ಲಿ ಅಂತಹ ಕಿರುತಂತ್ರಾಂಶಗಳು (ಆ್ಯಪ್) ಬೇಕಾದಷ್ಟು ದೊರೆಯುತ್ತವೆ. ಅಂತಹ ಒಂದು ಕಿರುತಂತ್ರಾಂಶ ಬೇಕಿದ್ದಲ್ಲಿ ಗೂಗಲ್‌ ಪ್ಲೇ ಸ್ಟೋರಿನಲ್ಲಿ CamCard Free-Business Card R ಎಂದು ಹುಡುಕಿ ಅಥವಾ bit.ly/gadgetloka277 ಜಾಲತಾಣಕ್ಕೆ ಭೇಟಿ ನೀಡಿ. ಇದು ಬಹುಮಟ್ಟಿಗೆ ಎಲ್ಲ ಕಾರ್ಡ್‌ಗಳನ್ನೂ ಸ್ಕ್ಯಾನ್ ಮಾಡಿ ಪಠ್ಯವನ್ನಾಗಿಸಿ ವಿಳಾಸ ಪುಸ್ತಕಕ್ಕೆ ಸರಿಯಾಗಿ ಸೇರಿಸುತ್ತದೆ. ಇದರ ಉಚಿತ ಆವೃತ್ತಿಯಲ್ಲಿ 200 ಕಾರ್ಡ್ ಮಾತ್ರ ಸ್ಕ್ಯಾನ್ ಮಾಡಬಹುದು.

*

ಗ್ಯಾಜೆಟ್‌ ಸುದ್ದಿ - ಗಾಳಿಯಲ್ಲಿ ಕೈ ಆಡಿಸಿ ಆಜ್ಞೆ ನೀಡಿ
ಪ್ರಯೋಗಶಾಲೆಯಲ್ಲಿ ಒಂದು ಹೊಸ ಸಾಧನ ಸಿದ್ಧವಾಗುತ್ತಿದೆ. ವೆಲ್ಲ ಹೆಸರಿನ ಇದು ನಿಮ್ಮ ಕೈಯ ಚಲನೆಯನ್ನು ಅರ್ಥಮಾಡಿಕೊಳ್ಳುತ್ತದೆ.  ಆಧುನಿಕ ಸ್ಮಾರ್ಟ್‌ ಮನೆಗಳಲ್ಲಿ ಇದನ್ನು ಹಲವು ಕೆಲಸಗಳನ್ನು ಮಾಡಲು ಬಳಸಬಹುದು. ಕೈ ಆಡಿಸಿಯೇ ದೀಪಗಳ ಪ್ರಖರತೆಯನ್ನು ಹೆಚ್ಚು ಕಡಿಮೆ ಮಾಡುವುದು, ಪರದೆ ಮೇಲೆ ಕೆಳಗೆ ಮಾಡುವುದು, ಹೀಗೆ ಹಲವು ಕೆಲಸಗಳನ್ನು ಮಾಡಬಹುದು. ಪ್ರಸೆಂಟೇಶನ್  ಮಾಡುವಾಗ ದೂರ ನಿಯಂತ್ರಣವಾಗಿಯೂ ಬಳಸಬಹುದು. ಇದು ಶ್ರವಣಾತೀತ ತರಂಗಗಳ ಮೂಲಕ ಕೆಲಸ ಮಾಡುತ್ತದೆ. ಇದು ಇನ್ನೂ ಮಾರುಕಟ್ಟೆಗೆ ಬಂದಿಲ್ಲ.

*
ಗ್ಯಾಜೆಟ್‌ ಸಲಹೆ - ಸಂತೋಷ ಕಾಂಗೋಡು ಅವರ ಪ್ರಶ್ನೆ: ಶಿಯೋಮಿ ರೆಡ್‌ಮಿ ನೋಟ್ 4ರಲ್ಲಿ ಗೊರಿಲ್ಲ ಗಾಜು ಇದೆಯಾ?
ಉ:  ಇಲ್ಲ.

*
ಗ್ಯಾಜೆಟ್‌ ತರ್ಲೆ -ಪ್ರ: ಕಟ್ಟಪ್ಪ ಯಾಕೆ ಬಾಹುಬಲಿಯನ್ನು ಕೊಂದ?

ಉ: ಯಾಕೆಂದರೆ ಬಾಹುಬಲಿ ಕಟ್ಟಪ್ಪನಿಗೆ ತನ್ನ ವೈಫೈ ಪಾಸ್‌ವರ್ಡ್ ಕೊಡಲು ಒಪ್ಪಿರಲಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry