7
X

'ಪ್ರಜಾವಾಣಿ'ಯ ಜಾಲತಾಣವನ್ನು ಹೆಚ್ಚು ಓದುಗ ಸ್ನೇಹಿಯಾಗಿಸುವ ಉದ್ದೇಶದಿಂದ ಹೊಸ ವಿನ್ಯಾಸವನ್ನು ರೂಪಿಸಲಾಗಿದೆ.
ಈ ವಿನ್ಯಾಸದ ಕುರಿತ ನಿಮ್ಮ ಅಭಿಪ್ರಾಯಗಳನ್ನು ಇಲ್ಲಿರುವ ಲಿಂಕ್ ಕ್ಲಿಕ್ಕಿಸುವ ಮೂಲಕ ನಮಗೆ ತಿಳಿಸಬಹುದು

webfeedback@prajavani.co.in

ಪೋಷಕರಿಗೊಂದು ಪತ್ರ

Published:
Updated:
ಪೋಷಕರಿಗೊಂದು ಪತ್ರ

ಆತ್ಮೀಯರೇ,

ನಿಮ್ಮ ಮಗಳ ಅಥವಾ ಮಗನ  ಫಲಿತಾಂಶ ಇನ್ನೇನು ಪ್ರಕಟವಾಗಲಿದೆ. ನೀವು ತುಂಬಾ ಆತಂಕಕ್ಕೊಳಗಾಗಿರಬಹುದು. ನಿಮ್ಮ ಮಕ್ಕಳು ಗಳಿಸುವ ಶೇಕಡಾವಾರು ಅಂಕಗಳ ಲೆಕ್ಕಾಚಾರವನ್ನು ನೀವಾಗಲೇ ಮಾಡಿರಬಹುದು. ಪೋಷಕರಾದ ನಿಮಗೇ ಇಷ್ಟು ಆತಂಕವಿರಬೇಕಾದರೆ ಇನ್ನು  ಎಡೆಬಿಡದೆ ತಯಾರಿ ನಡೆಸಿ, ಪರೀಕ್ಷೆ ಬರೆದಿರುವ ಮಕ್ಕಳಲ್ಲಿ  ಎಷ್ಟು ಆತಂಕ ಮನೆ ಮಾಡಿರಬಹುದೆಂಬುದನ್ನು ಊಹಿಸುವಿರಾ?

ಶಿಕ್ಷಕರು, ಪೋಷಕರು ಹಾಗೂ ನೆರೆಯವರ ನಿರೀಕ್ಷೆಗಳ ಭಾರ ಮಕ್ಕಳ ಮೇಲಿದೆ. ಪರೀಕ್ಷೆಯ ಫಲಿತಾಂಶ ಬರುವ ದಿನವು ನಿರ್ಣಾಯಕವಾದ ದಿನವೇ ಆಗಿದೆ. ಆದರೆ ನಿಮ್ಮ ನಿರೀಕ್ಷೆ, ಕನಸು, ಕಾತರಕ್ಕೆ  ತಕ್ಕಂತೆ ಫಲಿತಾಂಶ ಬಾರದೇ ಹೋದರೆ ನೀವು ಯಾವ ರೀತಿ ಪ್ರತಿಕ್ರಿಯಿಸುತ್ತೀರಾ ಎಂಬ ಬಗ್ಗೆ ಆಲೋಚನೆ ಮಾಡಿರುವಿರಾ?

ಮಕ್ಕಳ ಫಲಿತಾಂಶಕ್ಕೆ ನೀವು ತೋರುವ ಪ್ರತಿಕ್ರಿಯೆಯೇ ಅವರ  ಭವಿಷ್ಯದ ದೃಷ್ಟಿಯಿಂದ ನಿರ್ಣಾಯಕವಾಗಲಿದೆ ಎನಿಸುವುದಿಲ್ಲವೇ? ಸೋಲು, ವೈಫಲ್ಯ, ಅವಮಾನ, ನೋವು ಕಲಿಸುವ ಪಾಠ ಜಗತ್ತಿನ ಯಾವ ವಿಶ್ವವಿದ್ಯಾಲಯವೂ ಕಲಿಸುವುದಿಲ್ಲ ಎಂಬುದು ನಿಮಗೆ ತಿಳಿಯದ ವಿಷಯವಲ್ಲ. ನಿಮ್ಮ ಮಗ ನಿಮ್ಮ ನಿರೀಕ್ಷೆಯಷ್ಟು ಅಂಕ ಗಳಿಸದಿದ್ದಲ್ಲಿ ಅಥವಾ ಒಂದೊಮ್ಮೆ ಪರೀಕ್ಷೆಯಲ್ಲಿ ಯಶಸ್ಸು ಗಳಿಸಲು ವಿಫಲವಾದಲ್ಲಿ ಪೋಷಕರಾದ ನಿಮಗೆ ಅವಮಾನವಾಗುವುದು ಸಹಜವೇ ಆಗಿದೆ. ಆದರೆ ನೋವು, ವೈಫಲ್ಯಗಳ ಪಾಠವನ್ನು ನೀವು ಅರಗಿಸಿಕೊಳ್ಳಲು ಸಾಧ್ಯವಾಗದಿದ್ದಲ್ಲಿ ನಿಮ್ಮ ಮಗನಿಂದ ನಿರೀಕ್ಷಿಸುವುದು ಸಾಧ್ಯವಿಲ್ಲ ತಾನೇ?

ಪರೀಕ್ಷೆಯಲ್ಲಿ ನಿಮ್ಮ ಮಕ್ಕಳ ಸಾಧನೆ  ನಿಮಗೆ ತೃಪ್ತಿ ತಾರದೇ ಇದ್ದಲ್ಲಿ, ನೀವು ವಿದ್ಯಾರ್ಥಿಯಾಗಿದ್ದಾಗ ಪರೀಕ್ಷೆಗಳಲ್ಲಿ ನೀವು ಮಾಡಿದ ಸಾಧನೆಗಳನ್ನು ನೆನಪು ಮಾಡಿಕೊಳ್ಳಿ. ಈ ಮಾತನ್ನು ನಾನು ನಿಮಗೆ ಹೇಳಿದಾಗ ನಿಮ್ಮ ಉತ್ತರ ಏನಿರಬಹುದೆಂಬುದನ್ನು ಊಹಿಸಬಹುದು. ‘ನಾನು ಚೆನ್ನಾಗಿ ಓದಲು ಸಾಧ್ಯವಾಗಲಿಲ್ಲ. ನಮ್ಮ ಮಗುವಾದರೂ ಚೆನ್ನಾಗಿ ಓದಲಿ. ನಮಗೆ ನಮ್ಮ ಕಾಲದಲ್ಲಿ ಇಷ್ಟೆಲ್ಲಾ ಬೆಂಬಲ ಇರಲಿಲ್ಲ, ಇದ್ದ ಪ್ರೋತ್ಸಾಹದಲ್ಲೇ ಅಷ್ಟು ಸಾಧನೆ ಮಾಡಿದೆವು’ ಎನ್ನುತ್ತೀರಾ ತಾನೇ?

ಹೌದು! ನಾವು ಮಕ್ಕಳಾಗಿದ್ದಾಗ ಮಾಡಲು ಸಾಧ್ಯವಾಗದ ಸಾಧನೆಗಳಿಗೆ ನೆಪಗಳನ್ನು ನಾವೆಲ್ಲಾ ಎಷ್ಟು ಸಹಜವಾಗಿ ಹೇಳುತ್ತೇವಲ್ಲವೇ? ಅದೇ ನಮ್ಮ ಮಕ್ಕಳ ವಿಷಯಕ್ಕೆ ಬಂದಾಗ ನಾವು ಮಾಡಲು ಸಾಧ್ಯವಾಗದ ಸಾಧನೆಗಳನ್ನು ಮಾಡಲಿ ಎಂದು ನಿರೀಕ್ಷಿಸುತ್ತೇವೆ. ಇರಲಿ! ಎಲ್ಲ ತಂದೆ-ತಾಯಿಯರಿಗಿರಬೇಕಾದ ಆಸೆ, ನಿರೀಕ್ಷೆಗಳು ನಿಮ್ಮಲ್ಲೂ ಇರುವುದು ತಪ್ಪಲ್ಲ. ಆದರೆ, ನೀವು ನಿಮ್ಮ ಮಕ್ಕಳ ಸ್ಥಾನದಲ್ಲಿ ನಿಂತು ಸ್ವಲ್ಪ ಯೋಚಿಸಿ. ನಿಮ್ಮ ಆಸೆ, ನಿರೀಕ್ಷೆಗಳ ಭಾರದಿಂದ  ನಿಮ್ಮ ಮಗಳಿಗೋ ಮಗನಿಗೋ ಆಯಾಸವಾಗದಂತೆ ನೋಡಿಕೊಳ್ಳುವ ಹೊಣೆಯೂ ನಿಮ್ಮ ಮೇಲಿದೆಯಲ್ಲವೇ? ಪರೀಕ್ಷೆಯ ಫಲಿತಾಂಶದ ದಿನ ಮಕ್ಕಳ ಮನಸ್ಸು ತುಂಬಾ ಸೂಕ್ಷ್ಮವಾಗಿರುತ್ತದೆ. ನಿಮ್ಮ ಕಟುಮಾತುಗಳನ್ನು ತಾಳಿಕೊಳ್ಳುವ ಶಕ್ತಿ  ಮಕ್ಕಳಿಗಿಲ್ಲದೇ ಹೋಗಬಹುದು. ಪತ್ರಿಕಾ ವರದಿಯ ಪ್ರಕಾರ 2013ರಲ್ಲಿ ಪರೀಕ್ಷಾ ಫಲಿತಾಂಶದ ಕಾರಣಕ್ಕಾಗಿ ದೇಶದಾದ್ಯಂತ 2471 ಆತ್ಮಹತ್ಯೆಯ ಪ್ರಕರಣಗಳು ವರದಿಯಾಗಿರುವ ವಿಷಯವನ್ನು ನಿಮಗೆ ನೆನಪಿಸುತ್ತೇನೆ.

ಪರೀಕ್ಷೆಯ ಫಲಿತಾಂಶಕ್ಕಿಂತ ಮಕ್ಕಳ  ಜೀವ-ಜೀವನ ದೊಡ್ಡದಲ್ಲವೇ? ಇಂದಿನ ಸೋಲಿನ ಕಹಿಯನ್ನು ಗೆದ್ದು, ಗೆಲುವಿನ ಸಿಹಿಯನ್ನು ನಿಮಗೆ ಉಣಬಡಿಸುವ ಸಾಮರ್ಥ್ಯ ಎಲ್ಲಾ ಮಕ್ಕಳಿಗಿರುವಂತೆ ನಿಮ್ಮ ಮಗುವಿಗೂ ಇದೆ. ಅದಕ್ಕೆ ಕಾಯುವ ತಾಳ್ಮೆ, ವ್ಯವಧಾನಗಳು ಬೇಕು. ಮಕ್ಕಳ ಫಲಿತಾಂಶ ಏನೇ ಆದರೂ ಅವರನ್ನು ಮುಕ್ತವಾಗಿ ಪ್ರೀತಿಸಿ, ಮುಂದೆ ಕರೆದೊಯ್ಯುವ ಜಾಣ್ಮೆಯನ್ನು ಮೆರೆಯುವತ್ತ ಆಲೋಚಿಸಿ.  ಫಲಿತಾಂಶದ ನೆಪವಿಟ್ಟುಕೊಂಡು, ನಿಮ್ಮ ಕುಡಿಯನ್ನು ಮೂದಲಿಸುವ, ಅವಮಾನ ಮಾಡುವ ಸಾಹಸಗಳಿಗೆ ಕೈಹಾಕದಿರಿ. 

ನಿಮ್ಮ ಕುಡಿ ನಿಮಗೆ ಬೇಕಾದಷ್ಟು ಅಂಕಗಳನ್ನು ತೆಗೆದಿಲ್ಲವೆಂಬ ನೋವು ನಿಮಗಿದೆ ತಾನೇ? ಎಷ್ಟು ಅಂಕ ಬಂದರೆ ನಿಮಗೆ ತೃಪ್ತಿಯಾಗಬಹುದು? ನಿಮ್ಮ ಕುಡಿಯನ್ನು ಅಂಕ ಗಳಿಸುವ ಯಂತ್ರವೆಂದು ನಿರೀಕ್ಷೆ ಮಾಡದಿರಿ. ಒಂದಷ್ಟು ಕಡಿಮೆ ಅಂಕ  ಗಳಿಸಿದರೂ ಆದೀತು ಅಥವಾ ಒಂದೊಮ್ಮೆ ಆಕಸ್ಮಿಕ ಕಾರಣಗಳಿಂದ ವಿಫಲನಾದರೆ ಅದನ್ನು ತಾಳಿಕೊಳ್ಳುವ ಉದಾರ ಧೋರಣೆಯಿರಲಿ. ಅಂಕಗಳೇ ಎಲ್ಲವೂ ಅಲ್ಲವೆಂಬುದನ್ನು ನಾವೆಲ್ಲ ಮರೆಯಬಾರದಲ್ಲವೇ?

ಈ ಅಂಕಗಳ ಗಳಿಕೆಯ ಸ್ಪರ್ಧೆಯಾಚೆಗಿನ ಜೀವನವನ್ನು ನೀವು ನೀಡುವ ಜೊತೆ ನಿಮ್ಮ ಕುಡಿಯೂ ಆ ಕುರಿತು ಚಿಂತಿಸುವಂತೆ ಮಾಡಬಹುದಲ್ಲವೇ? ಪೋಷಕರಾದ ನಮ್ಮ ವಿಪರೀತದ ನಿರೀಕ್ಷೆಗಳು ಮಕ್ಕಳಲ್ಲಿ ಎಂತಹ ಭಯ, ಭೀತಿಗಳನ್ನು ಸೃಷ್ಟಿಸಬಹುದೆಂಬುದನ್ನು ಸ್ವಲ್ಪ ಅಂದಾಜಿಸಿ, ಸ್ವಲ್ಪ ಸಡಿಲಿಕೆಗಳನ್ನು ನೀಡುವುದು ಉತ್ತಮವೆಂದು ನನ್ನ ಭಾವನೆ.

ಪರೀಕ್ಷೆಯ ಫಲಿತಾಂಶ ಎಂದ ತಕ್ಷಣ ನನ್ನ ಜೀವನದಲ್ಲಿ ನಡೆದ ಘಟನೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನಿಸುತ್ತಿದೆ. ಅದು 1986ನೇ ಇಸವಿ. ನಾನು ಅಂತಿಮ ಬಿ.ಎಸ್ಸಿಯಲ್ಲಿ ಓದುತ್ತಿದ್ದ ಸಮಯ. ಆವರೆಗೆ ಎಲ್ಲಾ ತರಗತಿಗಳಲ್ಲೂ ಮೊದಲನೇ ದರ್ಜೆಯಲ್ಲಿಯೇ ಪಾಸಾಗುತ್ತಿದ್ದ ನಾನು ಗಣಿತ ವಿಷಯದಲ್ಲಿ ಫೇಲಾಗಿದ್ದನ್ನು ನನಗೆ ನಂಬಲಾಗಲೇ ಇಲ್ಲ. ಉತ್ತಮವಾಗಿ ತಯಾರಿ ನಡೆಸಿ, ಉತ್ತಮವಾಗಿಯೇ ಪರೀಕ್ಷೆ ಬರೆದಿದ್ದ ನಾನು ಹೇಗೆ ಫೇಲಾದೆ ಎಂಬುದನ್ನು ಆಲೋಚಿಸಿ, ನನ್ನ ತಂದೆಯವರನ್ನು ಎದುರಿಸುವುದು ಹೇಗೆಂದು ಊಹಿಸಿ, ನಡುಗಿಹೋದೆ.ತಂದೆಯವರು ಬೈದು, ಅವಮಾನಿಸಿದರೆ ಮನೆಬಿಟ್ಟು ಹೋಗಬೇಕೆಂಬ ಆಲೋಚನೆ ಮಾಡಿಕೊಂಡೇ ಮನೆಯೊಳಗೆ ಕಾಲಿಟ್ಟೆ. ಆದರೆ ತಂದೆಯವರು ನನ್ನ ನಿರೀಕ್ಷೆಗೆ ಬದಲಾಗಿ, ನನಗೆ ಧೈರ್ಯ ತುಂಬಿ, ಮುಂದಿನ ಪರೀಕ್ಷೆಗೆ ಚೆನ್ನಾಗಿ ತಯಾರಿ ಮಾಡಲು ತಿಳಿಸಿದರು. ನಂತರ ನಡೆದ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆದು, ಪಾಸಾದೆ.  ಪರೀಕ್ಷೆಯ ತಯಾರಿಯ ದಿನಗಳಲ್ಲಿ ಕಠಿಣವಾಗಿಯೇ ಇರುತ್ತಿದ್ದ ತಂದೆಯವರು ಪರೀಕ್ಷಾ ಫಲಿತಾಂಶದ ದಿನ ತೋರಿದ ಪ್ರತಿಕ್ರಿಯೆಯು ನನ್ನ ಜೀವನವನ್ನೇ ಬದಲಿಸಿತು.ನಿಮಗೆ ಹೆಚ್ಚು ತಿಳಿಸಿ ಹೇಳುವಷ್ಟು ನಾನು ಶಕ್ಯನಲ್ಲ. ನನ್ನ ವಿನಮ್ರ ಮನವಿಯಿಷ್ಟೇ: ನಿಮ್ಮ ಮಕ್ಕಳ ಪರೀಕ್ಷಾ ಫಲಿತಾಂಶ ಬಂದ ಹೊತ್ತಿನಲ್ಲಿ ಯಾರು ಅವರ ಜೊತೆಯಿಲ್ಲದಿದ್ದರೂ ನೀವು ಅವರ ಜೊತೆಗಿರಿ. ಅವರಿಗೆ ಒತ್ತಾಸೆಯಾಗಿ ನಿಲ್ಲಿ. ಅವರಿಗೆ ಸ್ಫೂರ್ತಿ ತುಂಬಿ. ಗಳಿಸಿದ ಅಂಕ–ಫಲಿತಾಂಶಕ್ಕೆ ಅಭಿನಂದನೆ ಸಲ್ಲಿಸಿ, ಹೆಚ್ಚಿನ ಸಾಧನೆಗೆ ಹುರಿದುಂಬಿಸಿ. ಇಂತಹ ನೂರಾರು ಪರೀಕ್ಷೆಗಳನ್ನು ಯಶಸ್ವಿಯಾಗಿ ಗೆದ್ದು ಬರುವ ಸಾಮರ್ಥ್ಯ ನಿಮ್ಮ ಮಗಳಿಗೆ, ಮಗನಿಗೆ ಇದೆ ಎಂಬ ವಿಶ್ವಾಸ ನನ್ನಲ್ಲಿದೆ.

  ವಂದನೆಗಳೊಂದಿಗೆ,

ನಿಮ್ಮ ಶ್ರೇಯೋಭಿಲಾಷಿ

ಡಾ.ಎಚ್.ಬಿ. ಚಂದ್ರಶೇಖರ್, ಬೆಂಗಳೂರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry