ಕೆರೆ ನಿರ್ಮಿಸಿ ಜಲ ಸ್ವಾವಲಂಬನೆ!

7

ಕೆರೆ ನಿರ್ಮಿಸಿ ಜಲ ಸ್ವಾವಲಂಬನೆ!

Published:
Updated:
ಕೆರೆ ನಿರ್ಮಿಸಿ ಜಲ ಸ್ವಾವಲಂಬನೆ!

ಬಳ್ಳಾರಿ: ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಹಲವು ರೈತರು ತಮ್ಮ ಜಮೀನುಗಳಲ್ಲಿ ಸುಕೋ ಬ್ಯಾಂಕ್‌ ನೀಡಿರುವ ಕೃಷಿ ಆಧಾರಿತ ಸಾಲದಲ್ಲಿ ಕೆರೆಗಳನ್ನು ನಿರ್ಮಿಸಿಕೊಂಡು ಜಲ ಸ್ವಾವಲಂಬನೆ ಸಾಧಿಸಿದ್ದಾರೆ.

ಬಳ್ಳಾರಿಯಲ್ಲಿ ಪ್ರಧಾನ ಕಚೇರಿ ಹೊಂದಿರುವ ಸುಕೋ ಬ್ಯಾಂಕ್, ತನ್ನ ಮೊದಲ ಶಾಖೆಯಾದ ಸಿಂಧನೂರು ತಾಲ್ಲೂಕಿನಲ್ಲಿ ಹತ್ತು ರೈತರಿಗೆ ಸಾಲ ನೀಡಿದೆ. ಅವರೆಲ್ಲರೂ ಕೆರೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಸಾಲವನ್ನೂ ಸಕಾಲಕ್ಕೆ ಮರುಪಾವತಿ ಮಾಡುತ್ತಿದ್ದಾರೆ.

₹1.75 ಕೋಟಿ: ಸಿಂಧನೂರು ತಾಲ್ಲೂಕಿನ ತುರುವಿಹಾಳ್‌ ಪಟ್ಟಣ ಪಂಚಾಯಿತಿ ಕೇಂದ್ರದಿಂದ ಮೂರು ಕಿ.ಮೀ ದೂರದ ಕಪ್ಪು ಮಣ್ಣಿನ ಮೂರು ಎಕರೆ ಜಮೀನಿನಲ್ಲಿ ರೈತ ಶರಣ ಬಸವ ಸಾಹುಕಾರ್‌ ಬ್ಯಾಲಿಹಾಳ್‌ ₹ 20 ಲಕ್ಷ ಸಾಲದ ಹಣದಲ್ಲಿ 3 ಎಕರೆ ವಿಸ್ತೀರ್ಣದಲ್ಲಿ ಕೆರೆ ನಿರ್ಮಿಸಿಕೊಂಡಿದ್ದಾರೆ. ಈಗಲೂ ಕರೆಯಲ್ಲಿ 25 ಅಡಿಯಷ್ಟು ನೀರು ತುಂಬಿದೆ. ಒಟ್ಟು 60 ಎಕರೆ ಜಮೀನಿಗೆ ಅವರು, ಇದೇ ನೀರನ್ನು ಉಣಿಸಿ ಬೆಳೆ ತೆಗೆಯಲು ಸಜ್ಜಾಗಿದ್ದಾರೆ.  ತುಂಗಭದ್ರಾ ಎಡದಂಡೆ ಕಾಲುವೆ ಅವರ ಹೊಲದ ಬಲಕ್ಕೆ ಇರುವುದರಿಂದ ಅವರಿಗೆ ಕಾಲುವೆ ನೀರು ಸಿಗುತ್ತಿರಲಿಲ್ಲ. ಹೀಗಾಗಿ ಮಳೆ ನೀರು ಸಂಗ್ರಹ ಅನಿವಾರ್ಯವಾಗಿತ್ತು. ಕೆರೆ ನಿರ್ಮಿಸಲು ಅವರು ಎರಡು ವರ್ಷ ಶ್ರಮಿಸಿದ್ದಾರೆ.

ಅದೇ ಗ್ರಾಮದಲ್ಲಿ 12 ಎಕರೆ ಜಮೀನುಳ್ಳ ಶರಣಪ್ಪಗೌಡ ₹ 10 ಲಕ್ಷ ಸಾಲ ಪಡೆದಿದ್ದು, 20 ಗುಂಟೆಯಲ್ಲಿ ಪುಟ್ಟ ಕೆರೆ ನಿರ್ಮಿಸಿಕೊಂಡಿದ್ದಾರೆ. ಪಕ್ಕದಲ್ಲೇ ಈಗ ಹೆಚ್ಚುವರಿಯಾಗಿ ಐದು ಗುಂಟೆಗೆ ವಿಸ್ತರಿಸಿದ್ದಾರೆ.

ಹನುಮನಗೌಡ ಅವರು ₹ 5 ಲಕ್ಷ ಸಾಲ ಪಡೆದು 10 ಗುಂಟೆಯಲ್ಲಿ ಕೆರೆ ನಿರ್ಮಿಸಿದ್ದಾರೆ. ಆರು ಎಕರೆ ಜಮೀನಿನಲ್ಲಿ ಕೆರೆ ನೀರನ್ನು ಬಳಸಿಯೇ ಭತ್ತದ ಎರಡನೇ ಬೆಳೆ ತೆಗೆದಿದ್ದಾರೆ, ಒಟ್ಟು  20 ಎಕರೆ ಜಮೀನಿಗೆ ಅದೇ ನೀರು ಬಳಸುತ್ತಿದ್ದಾರೆ. ಕೆರೆ ನಿರ್ಮಿಸಲು ಬ್ಯಾಂಕ್‌ ಒಟ್ಟಾರೆ ₹ 1.75 ಕೋಟಿ ಸಾಲ ವಿತರಿಸಿದೆ.

‘ಪ್ರಜಾವಾಣಿ’ ಪ್ರತಿನಿಧಿ ಮಂಗಳವಾರ ಈ ಕೆರೆಗಳಿಗೆ ಭೇಟಿ ನೀಡಿದ ವೇಳೆ ರೈತರು ಸಂಭ್ರಮದಲ್ಲಿದ್ದರು. ಕೆರೆಯಲ್ಲಿರುವ ನೀರು ಅವರಲ್ಲಿ ಆತ್ಮವಿಶ್ವಾಸ ಹೆಚ್ಚಿಸಿತ್ತು.

‘ಮೂರು ವರ್ಷದಿಂದ ಎರಡನೇ ಬೆಳೆ ಇಲ್ಲದ್ದರಿಂದ ರೈತರು ಸರಿಯಾಗಿ ಸಾಲ ಮರುಪಾವತಿ ಮಾಡುತ್ತಿರಲಿಲ್ಲ. ಆಗ, ಅವರಿಗೆ ನೀವೇಕೆ ಕೆರೆ ನಿರ್ಮಿಸಬಾರದು? ಅದಕ್ಕೆ ನಾವು ಸಾಲವನ್ನು ನೀಡುತ್ತೇವೆ ಎಂದು ಅವರಿಗೆ ಸಲಹೆ ನೀಡಿದೆವು. ಸಾಲ ಪಡೆದು ಹಲವರು ಕೆರೆ ನಿರ್ಮಾಣ ಮಾಡಿಕೊಂಡಿದ್ದಾರೆ’ ಎಂದು ಶಾಖೆಯ ಹಿಂದಿನ ಹಿರಿಯ ವ್ಯವಸ್ಥಾಪಕ ಹಾಗೂ ಬ್ಯಾಂಕಿನ ಆಡಳಿತ ಮಂಡಳಿಯ ಕಾರ್ಯದರ್ಶಿ ವೆಂಕಟೇಶರಾವ್‌ ಕುಲಕರ್ಣಿ ತಿಳಿಸಿದರು.

ಮನವಿ: ಕೆರೆಗಳ ನಿರ್ಮಾಣದಿಂದ ಪ್ರೇರಣೆಗೊಂಡಿರುವ ಹಲವು ರೈತರು ಕೆರೆ ನಿರ್ಮಾಣಕ್ಕೆ ಸಾಲ ಕೋರಿ ಅರ್ಜಿ ಸಲ್ಲಿಸುತ್ತಿದ್ದಾರೆ. ಸಾಲ ವಿತರಿಸುವ ಪ್ರಕ್ರಿಯೆ ಚಾಲನೆಯಲ್ಲಿದೆ’ ಎಂದು ಈಗಿನ ವ್ಯವಸ್ಥಾಪಕ ಬಿ.ಹನುಮಂತ ತಿಳಿಸಿದರು.

ಕೆರೆ ನಿರ್ಮಾಣಕ್ಕೆ ಸುಕೋ ಬ್ಯಾಂಕ್‌ ನೀಡಿದ ಸಾಲ ನೆಮ್ಮದಿ ತಂದಿದೆ. ಈ ಯೋಜನೆ ಸಣ್ಣ ರೈತರಿಗೂ ತುಂಬುವಂತಿದೆ

ಶರಣಬಸವ ಸಾಹುಕಾರ್‌ ಬ್ಯಾಲಿಹಾಳ್‌

ತುರುವಿಹಾಳ್

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry