ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

58 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ

Last Updated 11 ಮೇ 2017, 20:15 IST
ಅಕ್ಷರ ಗಾತ್ರ

ಬೆಂಗಳೂರು: ‘ನಗರ ಜಿಲ್ಲೆಯ 58 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಈ ಗ್ರಾಮಗಳಿಗೆ ಕೂಡಲೇ ಶಾಶ್ವತ ನೀರಿನ ವ್ಯವಸ್ಥೆ ಕಲ್ಪಿಸುವ ಯೋಜನೆ ಕೈಗೊಳ್ಳಬೇಕು’ ಎಂದು ಬೆಂಗಳೂರು ನಗರ ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಆನೇಕಲ್ ತಾಲ್ಲೂಕಿನ ರಾಮಕೃಷ್ಣಾಪುರ, ಮರಸೂರು, ಕುಂಬಾರನಹಳ್ಳಿ ಹಾಗೂ ವನಕನಹಳ್ಳಿ ಗ್ರಾಮಗಳಿಗೆ ಗುರುವಾರ ಭೇಟಿ ನೀಡಿದ ಅವರು ಕುಡಿಯುವ ನೀರಿನ ವ್ಯವಸ್ಥೆ, ಜಾನುವಾರು ಮೇವು ವಿತರಣೆ ಹಾಗೂ ಅಭಿವೃದ್ಧಿ ಕಾಮಗಾರಿಗಳ ವೀಕ್ಷಣೆ  ಮಾಡಿದರು.

ಬಳಿಕ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ‘ಬರಪರಿಸ್ಥಿತಿ ನಿಭಾಯಿಸಲು ಕಾರ್ಯಪಡೆ ರಚಿಸಲಾಗಿದೆ. ಕುಡಿಯುವ ನೀರು ಮತ್ತು ಜಾನುವಾರು ಮೇವು ವಿತರಣೆಗೆ ಹಾಗೂ ಪ್ರಕೃತಿ ವಿಕೋಪ ಪರಿಹಾರ ಕಾರ್ಯಕ್ರಮದಡಿ ₹ 18 ಕೋಟಿ ಅನುದಾನ ಇದೆ. ಹೀಗಾಗಿ ಬರಪರಿಸ್ಥಿತಿ ನಿಭಾಯಿಸಲು ಹಣದ ಸಮಸ್ಯೆ ಇಲ್ಲ’ ಎಂದರು.

‘ಬರಪರಿಹಾರ ಕಾಮಗಾರಿಗೆ ಬಿಡುಗಡೆ ಮಾಡಿದ್ದ ₹ 9 ಕೋಟಿ ಅನುದಾನದಲ್ಲಿ ₹5 ಕೋಟಿ ಖರ್ಚಾಗಿದೆ. ಪ್ರಕೃತಿ ವಿಕೋಪ ಪರಿಹಾರ ಕಾರ್ಯಕ್ರಮದಡಿ ಬಿಡುಗಡೆಯಾಗಿದ್ದ ₹ 9.60 ಕೋಟಿ ಅನುದಾನದಲ್ಲಿ ₹ 2 ಕೋಟಿ ಖರ್ಚಾಗಿದೆ. ಜಿಲ್ಲಾ ಪಂಚಾಯ್ತಿ ಮೂಲಕ ₹ 60 ಲಕ್ಷ ವೆಚ್ಚದಲ್ಲಿ 123 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ’ ಎಂದು ತಿಳಿಸಿದರು.  

‘637 ಟನ್ ಮೇವನ್ನು ಖರೀದಿಸಿ ರೈತರಿಗೆ ವಿತರಿಸಲಾಗಿದೆ. ಮೇವು ಬೆಳೆಯುವಂತೆ ಉತ್ತೇಜಿಸಲು ಜಿಲ್ಲಾ ವ್ಯಾಪ್ತಿಯಲ್ಲಿ 6,000 ರೈತರಿಗೆ 14,000 ಮೇವಿನ ಕಿಟ್‌ಗಳನ್ನು ವಿತರಿಸಲಾಗಿದೆ. ಆನೇಕಲ್ ತಾಲ್ಲೂಕಿನ ರೈತರಿಗೆ ಮತ್ತೊಮ್ಮೆ ಮೇವು ವಿತರಿಸಬೇಕು’ ಎಂದು ಆದೇಶಿಸಿದರು.
‘ನೀರಿನ ಸಮಸ್ಯೆ ನೀಗಿಸಲು 856 ಕೊಳವೆಬಾವಿಗಳನ್ನು ಕೊರೆಯಲಾಗಿದೆ. ಇವುಗಳಲ್ಲಿ 644 ಕೊಳವೆಬಾವಿಗಳಲ್ಲಿ ನೀರು ಸಿಕ್ಕಿದೆ’ ಎಂದು ಸಭೆಗೆ ಎಂಜಿನಿಯರ್ ಮಾಹಿತಿ ನೀಡಿದರು.

ಈ ವೇಳೆ ಜಿಲ್ಲಾ ಪಂಚಾಯಿತಿ ಸದಸ್ಯರು ‘ನೀರು ಬಂದಿದೆ.  ಆದರೆ, ಪಂಪ್‌ಸೆಟ್‌ಗಳನ್ನು ಅಳವಡಿಸಿಲ್ಲ’  ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ‘ಬರಪರಿಹಾರಕ್ಕೆ ನೀಡಿದ ಅನುದಾನ ಅಥವಾ ಜಿಲ್ಲಾ ಪಂಚಾಯ್ತಿ ಅನುದಾನದಲ್ಲಿ ಪಂಪ್‌ಸೆಟ್‌ ಅಳವಡಿಸಿ’ ಎಂದು ಸೂಚನೆ ನೀಡಿದರು.
‘ಆನೇಕಲ್ ತಾಲ್ಲೂಕಿನ 64 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ರೂಪಿಸಲಾಗಿದೆ. ಗುರುತಿಸಿರುವ ಕೆರೆಗಳ ಸರ್ವೆ ಕಾರ್ಯ ತ್ವರಿತವಾಗಿ ಮುಗಿಸಬೇಕು’ ಎಂದು ಅವರು ಹೇಳಿದರು.

ಜಿಲ್ಲಾಧಿಕಾರಿ ವಿ.ಶಂಕರ್, ‘ಜಿಲ್ಲೆಯ 8,391 ರೈತರಿಗೆ ₹ 3.72 ಕೋಟಿ ಬೆಳೆ ಹಾನಿ ಪರಿಹಾರವನ್ನು ಆನ್‌ಲೈನ್ ಮೂಲಕ ಅವರ ಬ್ಯಾಂಕಿನ ಖಾತೆಗಳಿಗೆ ಜಮೆ ಮಾಡಲಾಗಿದೆ’ ಎಂದು  ತಿಳಿಸಿದರು.

ಸಂಸದ ಡಿ.ಕೆ.ಸುರೇಶ್, ‘ಗುರುತಿಸಿದ ಕೆರೆಗಳ ಸರ್ವೆಯನ್ನು ಆದ್ಯತೆ ಮೇಲೆ ಮಾಡಿ, ನೀರು ತುಂಬಿಸುವ ಕಾರ್ಯಕ್ಕೆ ಮುಂದಾಗಬೇಕು’ ಎಂದರು.
ಶಾಸಕ ಶಿವಣ್ಣ, ‘ಕುಡಿಯುವ ನೀರಿನ ಸಮಸ್ಯೆ ಕಂಡುಬಂದ ಕೂಡಲೇ  ಕಾರ್ಯಪಡೆಯ ಸಮಿತಿ ಸಭೆಯಲ್ಲಿ ಅನುಮೋದನೆ ನೀಡಿ ತಕ್ಷಣವೇ ಪರಿಹಾರ ಕಲ್ಪಿಸುತ್ತೇವೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT