6

ಭಿಕ್ಷೆ, ಭಿಕ್ಷು ಹಾಗೂ ಬುದ್ಧಿಜೀವಿ...

ಪ್ರಸನ್ನ
Published:
Updated:
ಭಿಕ್ಷೆ, ಭಿಕ್ಷು ಹಾಗೂ ಬುದ್ಧಿಜೀವಿ...

ಬುದ್ಧಿಜೀವಿ ನಂಬಿಕಾರ್ಹತೆ ಕಳೆದುಕೊಂಡಿದ್ದಾನೆ. ಆತನ ಅಥವಾ ಆಕೆಯ ಬುದ್ಧಿವಾದವು ಸರಿಯಾಗಿದ್ದಾಗ ಕೂಡ ಸಾಮಾನ್ಯರು ಅದನ್ನು ಸ್ವೀಕರಿಸದೆ ನಡೆಯುತ್ತಿದ್ದಾರೆ. ರಾಜಕಾರಣ, ಧರ್ಮಕಾರಣ, ಸಮಾಜಕಾರಣ ಎಲ್ಲ ರಂಗಗಳಲ್ಲೂ ಸಾಮಾನ್ಯರು ಬುದ್ಧಿಜೀವಿಯ ಸೂಚನೆಗೆ ವ್ಯತಿರಿಕ್ತವಾಗಿ ನಡೆದುಕೊಳ್ಳತೊಡಗಿದ್ದಾರೆ. ವಿಮರ್ಶಕ, ವಿಚಾರವಾದಿ, ವಿಜ್ಞಾನಿ ಇತ್ಯಾದಿಯಾಗಿ ಎಲ್ಲ ಆಧುನಿಕ ಬುದ್ಧಿಜೀವಿಗಳನ್ನು ಕಾಡುತ್ತಿರುವ ಒಂದು ಗಂಭೀರ ಸಮಸ್ಯೆ ‘ತಿರಸ್ಕಾರ’ವಾಗಿದೆ.

ಇದು ಕೇವಲ ಎಡಪಂಥೀಯನ ಸಮಸ್ಯೆ ಎಂದು, ಇತ್ತೀಚಿನ ದಿನಗಳಲ್ಲಿ ರಾಜಕೀಯ ಹಿನ್ನಡೆ ಅನುಭವಿಸಿರುವ  ಎಡಪಂಥೀಯ ಭಾವಿಸುತ್ತಾನೆ. ವಿಚಾರವಾದಿಯ ಸಮಸ್ಯೆ ಎಂದು, ಮೂಢನಂಬಿಕೆಗಳ ವಿರುದ್ಧ ಹೋರಾಡುತ್ತಿರುವ ವಿಚಾರವಾದಿ ಭಾವಿಸುತ್ತಾನೆ. ವಿಜ್ಞಾನಿಯ ಸಮಸ್ಯೆ ಎಂದು, ತಂತ್ರಜ್ಞಾನದ ದುರುಪಯೋಗದ ವಿರುದ್ಧ ಹೋರಾಡುತ್ತಿರುವ ವಿಜ್ಞಾನಿ ಭಾವಿಸುತ್ತಾನೆ. ಹಾಗೇನಿಲ್ಲ. ಬಲಪಂಥೀಯ ಬುದ್ಧಿಜೀವಿ ಕೂಡ  ಮೂಲೆಗುಂಪಾಗಿದ್ದಾನೆ, ತನ್ನದೇ ಸರ್ಕಾರ ಆಳ್ವಿಕೆ ಮಾಡುತ್ತಿರುವಾಗಲೂ ಆತ–ಆಕೆ ಮೂಲೆಗುಂಪಾಗಿದ್ದಾರೆ. ಉದಾಹರಣೆಗೆ, ಸ್ವದೇಶಿ ಚಿಂತಕರಾದ ಗೋವಿಂದಾಚಾರ್ಯ, ಮುರಳಿ ಮನೋಹರ ಜೋಷಿ ಇತ್ಯಾದಿ ಬಲಪಂಥೀಯ ಬುದ್ಧಿಜೀವಿಗಳ ಬುದ್ಧಿವಾದವನ್ನು ಅವರದ್ದೇ ಸರ್ಕಾರ ಕಡೆಗಣಿಸುತ್ತಿದೆ. ಕಡೆಗಣಿಸಿ, ಸ್ಮಾರ್ಟ್ ಸಿಟಿಗಳ ಹುಯಿಲೆಬ್ಬಿಸಿ, ವಿದೇಶಿ ಬಂಡವಾಳವನ್ನು ಕುಣಿಸುತ್ತಿದೆ ದೇಶೀಯವಾದಿ ಸರ್ಕಾರ.

ಹಾಗಿದ್ದರೆ ಏನಿದು ಸಮಸ್ಯೆ? ಇದು ಜನರ ಸಮಸ್ಯೆಯೇ, ಅಥವಾ ಬುದ್ಧಿಜೀವಿಯ ಸಮಸ್ಯೆಯೇ? ವ್ಯವಸ್ಥೆಯ ಸಮಸ್ಯೆ ಅಂದರೆ ಸರಿಯಾದೀತು. ಹೌದು ಇಂದಿನ ವ್ಯವಸ್ಥೆ ಬುದ್ಧಿ ಹಾಗೂ ಅನುಭವಗಳನ್ನು ಪ್ರತ್ಯೇಕಿಸಿ ಒಡೆದಿದೆ. ಬುದ್ಧಿಜೀವಿಯನ್ನು ಒಬ್ಬ ಅನುಭವಹೀನ ಜೀವಿಯನ್ನಾಗಿಸಿದ್ದರೆ, ಜನಸಾಮಾನ್ಯನನ್ನು ಒಬ್ಬ ಬುದ್ಧಿಗೇಡಿ ಗ್ರಾಹಕನನ್ನಾಗಿಸಿದೆ ಇಂದಿನ ವ್ಯವಸ್ಥೆ.

ಮತ್ತೊಂದು ಸಮಸ್ಯೆ ಇದೆ. ಬುದ್ಧಿಜೀವಿ ಸುಸ್ಥಿರಜೀವಿ. ಶಿಕ್ಷಕ, ವಿಜ್ಞಾನಿ, ತತ್ವಜ್ಞಾನಿ, ಸಮಾಜಶಾಸ್ತ್ರಜ್ಞ, ಲೇಖಕ, ಕಲಾವಿದ, ಅಷ್ಟೇ ಏಕೆ, ರಾಜಕೀಯ, ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರಗಳ ಕಾರ್ಯಕರ್ತ ಕೂಡ, ಸಾಮಾನ್ಯರ ಹೋಲಿಕೆಯಲ್ಲಿ ಸುಸ್ಥಿರ ಜೀವಿ. ಸ್ಥಿರವಾದ ಸಂಬಳ, ಸ್ಥಿರವಾದ ವ್ಯವಸ್ಥೆ, ಸ್ಥಿರವಾದ ಉದ್ಯೋಗ ಲಭಿಸುತ್ತಿದೆ ಇವರಿಗೆ. ಇವರ ಹೋಲಿಕೆಯಲ್ಲಿ ಸಾಮಾನ್ಯರು ಅಸ್ಥಿರಜೀವಿಗಳು. ಅಂತಸ್ತಿನ ಈ ಅಂತರವು ಬುದ್ಧಿಜೀವಿಯ ನಂಬಿಕಾರ್ಹತೆಯನ್ನು ಕಡಿಮೆ ಮಾಡಿದೆ. ಅನುಭವದ ಕೊರತೆಯು ಬುದ್ಧಿಯ ಆಳವನ್ನು, ಹೂಳುತುಂಬಿದ ಕೆರೆಯಂತೆ ಕಿರಿದಾಗಿಸಿದೆ. ಇವರ ಅಭಿಪ್ರಾಯಗಳು ಇವರಿಗೆ ಪುಸ್ತಕದ ಮೂಲಕ ಅಥವಾ ಇಂಟರ್‌ನೆಟ್ ಎಂಬ ವಿಷಯಜಾಲದ ಮೂಲಕ ಸುಲಭವಾಗಿ ಸಿಕ್ಕಿಬಿಡುತ್ತವೆ. ಹಾಗಾಗಿ ಇವರು ಸುಲಭ ಉತ್ತರ ನೀಡುವ ಸುಲಭಜೀವಿಗಳಾಗಿದ್ದಾರೆ.

ನನ್ನ ಈ ಮಾತಿಗೆ ಅಪವಾದವಿಲ್ಲ ಎಂದೇನಲ್ಲ. ಇಂದಿನ ದಿನಮಾನಗಳಲ್ಲೂ ಸಹ ಅನೇಕ ಬುದ್ಧಿಜೀವಿಗಳು ತಮ್ಮ ಪ್ರಾಣವನ್ನು ಪಣಕ್ಕೊಡ್ಡಿ ಸತ್ಯದ ಹುಡುಕಾಟ ನಡೆಸಿದ್ದಾರೆ. ಆದರೆ ಅವರೂ ಸಹ ಮೂಲೆಗುಂಪಾಗುತ್ತಿದ್ದಾರೆ. ಸತ್ಯ ಬೆಳಕಿಗೆ ಬರಲಾರದ ಪರಿಸ್ಥಿತಿ ಇಂದಿನದ್ದು.

ಹಿಂದೆಲ್ಲ ಬುದ್ಧಿಜೀವಿಗಳನ್ನು ಬುದ್ಧಿಜೀವಿ ಎಂದು ಕರೆಯುತ್ತಿರಲಿಲ್ಲ. ಉದಾಹರಣೆಗೆ ಹೇಳುವುದಾದರೆ, ಜೀವನವಿಡೀ ಸಾಧನೆ ಮಾಡಿ ಸತ್ಯ ನುಡಿದ ಬುದ್ಧನನ್ನು ಯಾರೂ ಬುದ್ಧಿಜೀವಿ ಎಂದು ಕರೆಯಲಿಲ್ಲ. ಭಿಕ್ಷುವೆಂದು ಕರೆದೆವು. ವ್ಯಾಕರಣಶಾಸ್ತ್ರ ಬರೆದ ಪಾಣಿನಿ, ಗಣಿತಶಾಸ್ತ್ರದಲ್ಲಿ ಕೆಲಸ ಮಾಡಿದ ಭಾಸ್ಕರಾಚಾರ್ಯ ಇತ್ಯಾದಿ ಯಾರನ್ನೂ ನಾವು ಬುದ್ಧಿಜೀವಿ ಎಂದು ಕರೆಯಲಿಲ್ಲ, ಋಷಿಗಳೆಂದು ಕರೆದೆವು. ನನ್ನ ಮಾತಿನ ಅರ್ಥ ಇಷ್ಟೇ. ಭಿಕ್ಷುತನ ಅಥವಾ ಋಷಿತನವೆಂಬುದು ಹಿಂದಣ ಬುದ್ಧಿಜೀವಿಯ ಬದುಕಿನ ಒಂದು ಪ್ರಾಥಮಿಕ ಶಿಸ್ತಾಗಿತ್ತು. ಸರಳ ಬದುಕು, ಆಶ್ರಮಜೀವನ ಹಾಗೂ ಭಿಕ್ಷಾಟನೆಯ ಶಿಸ್ತು ಆ ಹಿಂದಣ ಬುದ್ಧಿಜೀವಿಗೆ ಅನಿವಾರ್ಯವಾಗಿತ್ತು. ಅಷ್ಟೇ ಅಲ್ಲ, ನಿರೀಶ್ವರವಾದಿಗಳೂ ಹಾಗೂ ಚಾರುವಾಕರನ್ನ ಸಹ ನಾವು ಋಷಿಗಳೆಂದೇ ಕರೆದು ಗೌರವಿಸಿದ್ದೆವು. ಇರಲಿ.

ಈಗ ಬುದ್ಧನ ಉದಾಹರಣೆಗೆ ಮರಳೋಣವಂತೆ. ಬುದ್ಧ ತನ್ನ ಪೂರ್ವಾಶ್ರಮದಲ್ಲಿ ಒಬ್ಬ ಸುಸ್ಥಿರಜೀವಿಯೇ ಆಗಿದ್ದ. ಶ್ರೀಮಂತ ಹಿನ್ನೆಲೆಯಿಂದ ಬಂದಿದ್ದ. ಶಿಕ್ಷಣ, ಆಸ್ತಿ, ಅಂತಸ್ತು, ರಾಜ್ಯಾಧಿಕಾರ ಎಲ್ಲವನ್ನೂ ಹೊಂದಿದ್ದ. ಬುದ್ಧನಾಗಬೇಕು ಎಂದನ್ನಿಸಿದಾಗ ಆತ ಮಾಡಿದ ಮೊದಲ ಕೆಲಸವೆಂದರೆ, ತನ್ನ ಸುಸ್ಥಿರ ಬದುಕನ್ನು ಕಳಚಿ ಹೊರಬಂದದ್ದು. ಬುದ್ಧನಾಗುವ ಪರಿ ಇದು. ಕೇವಲ ಓದಿ ಬುದ್ಧನಾಗಲು ಬರುವುದಿಲ್ಲ. ನಿಜಕ್ಕೂ ಭಿಕ್ಷುಕನಾಗಬೇಕು. ನಾಥನಾಗಿದ್ದವನು ಅನಾಥನಾಗಬೇಕು. ರಾಜವಸ್ತ್ರ ಕಳಚಿ, ಹೆಣದವಸ್ತ್ರ ತೊಟ್ಟು, ಬೀದಿ ಬೀದಿ ಅಲೆಯಬೇಕು. ವ್ಯವಸ್ಥಿತ ಸಮಾಜವು ಯಾವುದನ್ನು ಹೀನಾಯದ ಬದುಕು ಎಂದು ತಿಳಿಯುತ್ತದೆಯೋ, ಯಾವುದರಿಂದ ಅದು ಮುಖ ತಿರುಗಿಸಿ ನಿಲ್ಲುತ್ತದೆಯೋ ಅಂತಹ ಬದುಕನ್ನು ಸ್ವಇಚ್ಛೆಯಿಂದ ಸ್ವೀಕರಿಸಿಬೇಕು ಬುದ್ಧನಾಗಲು. ತಪಸ್ಸನ್ನು ಅನಗತ್ಯವಾಗಿ ವೈಭವೀಕರಿಸುತ್ತಿದೆ, ತಪಸ್ಸೆಂಬುದು ಅನುಭವಹೀನ ಅವಸ್ಥೆ ಎಂದು ಪ್ರಚಾರ ಮಾಡುತ್ತಿದೆ. ಡೊಳ್ಳು ಹೊಟ್ಟೆಯ ಜಂಗಮರು, ದುಂಡು ದೇಹದ ಪುರೋಹಿತರು, ಬಿಳಿಬಿಳಿ ಪಾದ್ರಿಗಳು ಹಾಗೂ ಕಾರಿನಲ್ಲಿ ಅಡ್ಡಾಡುವ ಸುಲಭಜೀವಿಗಳನ್ನೆಲ್ಲ ಬುದ್ಧಿಜೀವಿಗಳೆಂದು ಪರಿಗಣಿಸುತ್ತಿದೆ ಇಂದಿನ ವ್ಯವಸ್ಥೆ.

ವಿಮರ್ಶಕ ಎಂಬ ಹೆಸರಿನ ಒಬ್ಬ ಹೊಸ ಬುದ್ಧನನ್ನು ಸೃಷ್ಟಿಸಿದೆ ಆಧುನಿಕ ವ್ಯವಸ್ಥೆ. ಈತನನ್ನು ಎರಡು ಸಮಸ್ಯೆಗಳು ಕಾಡಿವೆ. ಸುಸ್ಥಿರತೆಯ ಸಮಸ್ಯೆಯನ್ನು ಈಗಾಗಲೇ ಚರ್ಚಿಸಿದ್ದಾಗಿದೆ. ಎರಡನೆಯ ಸಮಸ್ಯೆ ವಿಮರ್ಶಾ ವಿಧಾನಕ್ಕೆ ಸಂಬಂಧಪಟ್ಟದ್ದು. ಆಧುನಿಕ ವಿಮರ್ಶೆ ವಿಷಯಗಳನ್ನು ಪ್ರತ್ಯೇಕಿಸಿ ನೋಡುತ್ತದೆ. ಪ್ರತ್ಯೇಕ ಪ್ರತ್ಯೇಕ ತಜ್ಞರನ್ನು ಇದು ಸೃಷ್ಟಿಸುತ್ತದೆ. ಪ್ರತ್ಯೇಕತಾ ವಿಧಾನದಿಂದ ಸತ್ಯವನ್ನು ಅರಿಯುವುದು ಅಸಾಧ್ಯ. ಸತ್ಯ ಪ್ರತ್ಯೇಕವಾದದ್ದಲ್ಲ. ಅದು ಸಮಗ್ರವಾದದ್ದು.

ಹೀಗೆ ಮಾಡಿ ಆಧುನಿಕ ವಿಮರ್ಶೆಯು ಪ್ರತ್ಯೇಕ ಅಹಂಕಾರಗಳನ್ನು ಸೃಷ್ಟಿಸಿದೆ. ಕಾವ್ಯವಿಮರ್ಶೆ ಪ್ರತ್ಯೇಕ, ಜಾನಪದ ವಿಮರ್ಶೆ ಪ್ರತ್ಯೇಕ, ಕಾದಂಬರಿ ವಿಮರ್ಶೆ ಪ್ರತ್ಯೇಕ, ಇತ್ಯಾದಿ. ಅಥವಾ ಹಲ್ಲಿಗೊಬ್ಬ ತಜ್ಞ, ನಾಲಿಗೆಗೊಬ್ಬ ತಜ್ಞ, ಹೃದಯ–ಯಕೃತ್ತು–ಮೂತ್ರಪಿಂಡಗಳಿಗೆ ಪ್ರತ್ಯೇಕ ಪ್ರತ್ಯೇಕ ತಜ್ಞರು ಇತ್ಯಾದಿ. ರಾಜಕೀಯಕ್ಕೆ ಬೇರೆ, ಸಮಾಜ ನಿರ್ವಹಣೆಗೆ ಬೇರೆ, ಆರ್ಥಿಕ ನಿರ್ವಹಣೆಗೆ ಬೇರೆ ಇತ್ಯಾದಿ. ಹೀಗೆ ಪ್ರತ್ಯೇಕಿಸಿ ನೋಡಿದಾಗ ಹೆಚ್ಚೆಂದರೆ ವಾಸ್ತವ ಸ್ಥಿತಿ ಅರಿವಾಗುತ್ತದೆಯೇ ಹೊರತು ಸತ್ಯವಲ್ಲ. ನನಗನ್ನಿಸುತ್ತದೆ, ಆಧುನಿಕ ಜ್ಞಾನವ್ಯವಸ್ಥೆ ಜಾತಿವ್ಯವಸ್ಥೆ ಇದ್ದಂತೆ. ಪ್ರತಿಯೊಂದು ಜ್ಞಾನವಿಭಾಗವೂ ಒಂದು ಪ್ರತ್ಯೇಕ ಜಾತಿಯಂತೆ ಕಾರ್ಯನಿರ್ವಹಿಸತೊಡಗಿದೆ. ಈ ವ್ಯವಸ್ಥೆ ಅಗಾಧವಾದದ್ದು. ಮಾತ್ರವಲ್ಲ, ಅಗಾಧವಾಗುತ್ತಲೇ ನಡೆದಿರುವಂತಹದ್ದು. ಇಂದಿನ ಬೌದ್ಧಿಕ ವ್ಯವಸ್ಥೆಯ ಸಮಸ್ಯೆ ಅಗಾಧವಾದ ಪ್ರತ್ಯೇಕತೆಯದ್ದು.

ಭಿಕ್ಷೆ, ಭಿಕ್ಷು ಹಾಗೂ ಬುದ್ಧಿಜೀವಿಯ ನಡುವಣ ಅಂತರ್‌ಸಂಬಂಧ ಮಹತ್ತರವಾದದ್ದು. ಈ ಅಂತರ್‌ಸಂಬಂಧ ಹಿಂದೆಯೂ ಹಾಳಾದದ್ದಿದೆ. ಹಾಳಾದ ಸಂಬಂಧವನ್ನು ಹಿಂದಿನವರೂ ಸರಿಪಡಿಸಿದ್ದಿದೆ. ನಿಮಗೆ ತಮಾಷೆಯಾಗಿ ಕಂಡೀತು, ವಿಪರೀತವಾಗಿ ಕಂಡೀತು. ಆದರೆ ಅಂತರ್‌ಸಂಬಂಧ ಹಾಳಾದಾಗ ಅಂತಹ ಸಂದರ್ಭಗಳಲ್ಲಿ ಋಷಿಗಳೇ ವಿಪರೀತವಾಗಿ ನಡೆದುಕೊಳ್ಳುತ್ತಾರೆ, ಅಸಭ್ಯರಾಗಿ ನಡೆದುಕೊಳ್ಳುತ್ತಾರೆ. ಅತಿರೇಕದ ನಡವಳಿಕೆ ತೋರಿಸುತ್ತಾರೆ. ಅಲ್ಲಮ ಕುಡುಕನಂತೆ ಕಾಣಿಸಿಕೊಳ್ಳುತ್ತಾನೆ. ಅಕ್ಕಮಹಾದೇವಿ ಬತ್ತಲೆ ತಿರುಗುತ್ತಾಳೆ, ನಾಗಲಿಂಗಯತಿ ಭಿಕ್ಷೆ ನೀಡಿದವರ ಮನೆಯ ಚಾಪೆಯ ಮೇಲೆಯೇ ಹೇತು ಬರುತ್ತಾನೆ, ಜೈನ ಸನ್ಯಾಸಿ ಒದೆಯುತ್ತಾನೆ, ಇತ್ಯಾದಿ. ಯಾವುದನ್ನು ವ್ಯವಸ್ಥೆಯು ಸಭ್ಯತೆ ಎಂದು ತಿಳಿಯುತ್ತದೆಯೋ ಅದು ಪೊಳ್ಳುತನವಾದಾಗ, ಬೌದ್ಧಿಕತೆಯು ಬರಿದೆ ಬೊಗಳೆಯಾದಾಗ ಋಷಿಗಳಿಗೆ ಬೇರೆ ಮಾರ್ಗವಿರುವುದಿಲ್ಲ. ಅತಿರೇಕದ ಪರಿಸ್ಥಿತಿಯನ್ನು ಅತಿರೇಕ ಮಾಡಿ ನಿರ್ವಹಿಸುತ್ತಾರೆ ಋಷಿಗಳು.

ಕನ್ನಡದಲ್ಲಿ ಭಿಕ್ಷೆ, ಭಿಕ್ಷು ಹಾಗೂ ಬುದ್ಧಿಜೀವಿಯ ನಡುವಣ ಅಂತರ್‌ಸಂಬಂಧವನ್ನು ಮರುಸ್ಥಾಪಿಸುವ ಒಂದು ಮಹತ್ತರವಾದ ಪ್ರಯೋಗ ಈ ಹಿಂದೆ ನಡೆಯಿತು. ಹದಿನೆಂಟು– ಹತ್ತೊಂಬತ್ತನೆಯ ಶತಮಾನದಲ್ಲಿ ನಡೆಯಿತು. ಆರೂಢರು ತತ್ವಪದಕಾರರು ಎಂದು ಹೆಸರಾಗಿರುವ ಸಾಮಾಜಿಕ ವಿಮರ್ಶಕರು ತಮ್ಮ ವಿಚಿತ್ರ ಜೀವನಶೈಲಿ ಹಾಗೂ ವಿಚಿತ್ರ ನಡವಳಿಕೆಗಳ ಮೂಲಕ ಸಮಾಜವನ್ನು ತಿದ್ದಿದರು. ಬೇಕೆಂದೇ ಸಭ್ಯ ಸಮಾಜದ ಎಲ್ಲ ರೀತಿನೀತಿಗಳನ್ನು ತಿರಸ್ಕರಿಸಿದರು. ವಿಚಿತ್ರವೇಷ ಧರಿಸಿದರು, ಗುಡಿಗುಡಿ ಸೇದಿದರು, ಭಿಕ್ಷುಕರಂತೆ, ದರಿದ್ರರಂತೆ, ವಿಕ್ಷಿಪ್ತರಂತೆ ಅಲೆದರು. ಚಟ್ಟ ಏರಿ ಮೆರವಣಿಗೆ ಮಾಡಿಸಿಕೊಂಡರು, ವಿಕ್ಟೋರಿಯ ರಾಣಿಯ ವೇಷತೊಟ್ಟು ಭಿಕ್ಷೆ ಬೇಡಿದರು. ವ್ಯವಸ್ಥೆಯು ಏತಿ ಎಂದಾಗಲೆಲ್ಲ ಇವರು ಪ್ರೇತಿ ಎಂದರು.

ಇವರ ಮಾತುಕತೆ ವಿಚಿತ್ರವಾಗಿರುತ್ತಿತ್ತು. ಬೇಕೆಂದೇ ತಾರ್ಕಿಕ ಭಾಷೆ ತಿರಸ್ಕರಿಸಿದರು. ಸಿದ್ಧಮಾದರಿಗಳನ್ನು ತಿರಸ್ಕರಿಸಿದರು. ಸಮಾಜದ ಗೌರವ ಹಾಗೂ ಪುರಸ್ಕಾರಗಳನ್ನು ಬೇಕೆಂದೇ ತುಚ್ಛೀಕರಿಸಿದರು. ಇತರೆ ಸಂಸ್ಕೃತಿಗಳಲ್ಲೂ ಇದು ನಡೆದಿದೆ. ಸೂಫಿಗಳು ಹೀಗೆಯೇ ಮಾಡಿ ಮುಸಲ್ಮಾನ ಸಭ್ಯತೆಗಳನ್ನು ತಿದ್ದಿದ್ದಾರೆ. ಕ್ರೈಸ್ತ ಸನ್ಯಾಸಿಗಳು ಹೀಗೆಯೇ ಮಾಡಿ ಕ್ರೈಸ್ತ ಸಭ್ಯತೆಗಳನ್ನು ತಿದ್ದಿದ್ದಾರೆ. ಮಾತ್ರವಲ್ಲ, ಪರಸ್ಪರರನ್ನು ಪ್ರಭಾವಿಸಿದ್ದಾರೆ. ಇವರೂ ಬುದ್ಧಿಜೀವಿಗಳೇ ಹೌದು. ಇವರ ನಡುವೆ ಸಂಬಂಧವಿರುತ್ತಿತ್ತು, ಸಂಪರ್ಕವಿರುತ್ತಿತ್ತು. ಆಗಾಗ ಸೇರುತ್ತಿದ್ದರು, ಪದ್ಯ ರಚಿಸುತ್ತಿದ್ದರು, ಚರ್ಚಿಸುತ್ತಿದ್ದರು. ಆಶ್ಚರ್ಯಕರ ಸಂಗತಿಯೆಂದರೆ, ಸಾಮಾನ್ಯರು ಇವರ ಅತಿರೇಕವನ್ನು ಅರ್ಥ ಮಾಡಿಕೊಂಡರು. ಇವರೇನು ಹೇಳಲು ಬಯಸುತ್ತಿದ್ದಾರೆ ಎಂದು ತಿಳಿದುಕೊಂಡರು. ಬಡರೈತ, ಗೃಹಿಣಿ, ಕುಶಲಕರ್ಮಿ ಇವರನ್ನು ಸ್ವೀಕರಿಸಿದರು, ಗೌರವಿಸಿದರು. ಇವರಿಗೆ ಬೇಕಿದ್ದದ್ದು ಅದೇ ಆಗಿತ್ತು. ಸಭ್ಯ ಸಮಾಜದಿಂದ ಮರೆಯಾಗಿ ಹೋದರು ಇವರು. ಆದರೆ ಕೊಳಕು ತುಂಬಿದ ಬಡವರ ಕೇರಿಗಳಲ್ಲಿ ಹೇಳಹೆಸರಿಲ್ಲದೆ ಅಲೆದರು. ಕುಷ್ಠರೋಗಿಗಳ ಸೇವೆ ಮಾಡಿದರು, ಚಪ್ಪಲಿ ಹೊಲೆದರು, ಚಪ್ಪಲಿ ಮಾರಿದರು. ಮುಂದಿನ ಅನ್ನ ಎಲ್ಲಿಂದ ಬಂದೀತು ಎಂಬ ಹೆದರಿಕೆ ಇರಲಿಲ್ಲ ಇವರಿಗೆ.

ಟಾಲ್‌ಸ್ಟಾಯ್ ಉದಾಹರಣೆ ತೆಗೆದುಕೊಳ್ಳಿ. ಆ ವೇಳೆಗಾಗಲೇ ಟಾಲ್‌ಸ್ಟಾಯ್ ಮಧ್ಯವಯಸ್ಕನಾಗಿದ್ದ. ವಿಶ್ವದ ಅತಿಯಶಸ್ವಿ ಹಾಗೂ ಅತಿಶ್ರೀಮಂತ ಬುದ್ಧಿಜೀವಿಯಾಗಿದ್ದ. ಆಗ ಅವನಿಗೆ ತನ್ನ ಬಗ್ಗೆಯೇ  ಅನುಮಾನ ಶುರುವಾಯಿತು. ತೀವ್ರತರವಾದ ವ್ಯಾಕುಲತೆಗೆ ಒಳಗಾದ ಅವನು. ಆತ್ಮಹತ್ಯೆ ಮಾಡಿಕೊಳ್ಳಬೇಕನ್ನಿಸುವಷ್ಟು ಗಾಢವಾದ ವ್ಯಾಕುಲತೆಯದು. ಆ ಬಗ್ಗೆ ಬರೆದುಕೊಂಡಿದ್ದಾನವನು. ದಿಗಿಲು ಬೀಳಿಸುವಂತಹ ಒಂಟಿತನ, ಹತಾಶೆ ಹಾಗೂ ನಿರರ್ಥಕತೆಯ ಭಾವನೆಗಳು ಅವನನ್ನು ಕಾಡಿ ಕೆರಳಿಸಿದವು. ಸಂಕಟದ ಶಿಖರದ ಮೇಲೆ ಅಂಗಾತ ತೂಗುತ್ತ ಮಲಗಿದ್ದೇನೆ ತಾನು, ಯಾವುದೇ ಗಳಿಗೆ ಸಾವಿನ ಪ್ರಪಾತದೊಳಗೆ ಉರುಳಿ ಬೀಳುತ್ತೇನೆ ಎಂದು ದಿಗಿಲುಪಡುತ್ತ ವರ್ಷ ಕಳೆದ ಅವನು. ಅಂತೂ ಕೊನೆಗೊಮ್ಮೆ ಹೊರಬಂದ.

ಹೊರಬಂದಾಗ ಅವನಿಗೆ ಕಂಡ ದಿವ್ಯ ಬೆಳಕು ಶ್ರಮಜೀವನವಾಗಿತ್ತು. ಶ್ರಮಜೀವನದ ಅನುಭವವೇ ದೇವರು ಅನ್ನಿಸಿತು ಟಾಲ್‌ಸ್ಟಾಯ್‌ಗೆ. ಆನಂತರ ಅವನು ಬಡರೈತನಂತೆ ಬದುಕುವ ಯತ್ನ ನಡೆಸಿದ. ಚರ್ಕವರ್ತಿಯ ಸಂಬಂಧಿಯೂ, ಸಾವಿರಾರು ಎಕರೆ ಜಮೀನಿನ ಮಾಲೀಕನೂ, ಯಶಸ್ವಿ ಬರಹಗಾರನೂ, ಶ್ರೀಮಂತನೂ ಆದ ಟಾಲ್‌ಸ್ಟಾಯ್ ನಂತರದ ಬದುಕಿನಲ್ಲಿ ಚಿಂದಿಯುಟ್ಟು ಜೀವಿಸಿದ. ಬಡರೈತರ ಬಗ್ಗೆ, ಕುಶಲಕರ್ಮಿಗಳ ಬಗ್ಗೆ ಪುಸ್ತಕಗಳನ್ನು ಬರೆದ. ರೈತಾಪಿ ಬದುಕಿನ ಸುಧಾರಣೆಯ ಬಗ್ಗೆ ಪ್ರಣಾಳಿಕೆಗಳನ್ನು ಬಿಡುಗಡೆ ಮಾಡಿದ. ತನ್ನೆಲ್ಲ ಮಹಾನ್ ಕೃತಿಗಳನ್ನೂ, ಮಹಾನ್ ಗೌರವಗಳನ್ನೂ ಬದಿಗೆ ಸರಿಸಿ ಬದುಕಿದ ಟಾಲ್‌ಸ್ಟಾಯ್.

ದುರಂತವೆಂದರೆ, ನಮ್ಮ ದೇಶದಲ್ಲಿ ಬುದ್ಧಿಜೀವಿಗಳದ್ದೇ ಒಂದು ಜಾತಿಯಾಯಿತು. ಅವರು ಬ್ರಾಹ್ಮಣರಾದರು. ಬ್ರಾಹ್ಮಣರು ಹೇಗೆ ಹಾಳಾದರು ಎಂಬುದನ್ನು ಗಮನಿಸಿ. ಭಿಕ್ಷೆ ಮರೆತರು. ಭಿಕ್ಷೆಯನ್ನೇ ದಾನವಾಗಿ ಪಡೆಯಲಿಕ್ಕೆ ಶುರುಮಾಡಿದರು. ತಾನಿದ್ದಲ್ಲಿಗೇ ದಾನ ಹರಿದು ಬರುವಂತಹ ವ್ಯವಸ್ಥೆ ಮಾಡಿಕೊಂಡರು. ಜ್ಞಾನವನ್ನು ಉರು ಹೊಡೆದರು. ಉರು ಹೊಡೆದ ಜ್ಞಾನವನ್ನು ಮಂತ್ರವೆಂದು ಕರೆದರು. ಉರುಹೊಡೆದದ್ದು ಪವಿತ್ರವಾದದ್ದು, ಮತ್ತಾರೂ ಮುಟ್ಟಲಾಗದ್ದು ಎಂದು ಸಾರಿದರು. ದಾನ ಪಡೆಯುವುದು ಹಾಗೂ ಜ್ಞಾನ ಹರಡುವುದು ತನ್ನ ಹಕ್ಕು ಎಂದು ಸಾಧಿಸಿದರು. ಹೀಗೆ, ಸತ್ಯಶೋಧನೆಯೆಂಬುದು ಒಂದು ಕ್ಷುದ್ರ ಜಾತಿ ವ್ಯವಸ್ಥೆಯಾಯಿತು. ಬ್ರಾಹ್ಮಣನು ತಿರಸ್ಕಾರಯೋಗ್ಯ ಪುರೋಹಿತನಾದ.

ಇಂದಿನ ಬುದ್ಧಿಜೀವಿಯೂ ಅದೇ ಆಗಿದ್ದಾನೆ. ಶ್ರಮವನ್ನು ಮರೆತಿರುವ ಶೂದ್ರ ಬುದ್ಧಿಜೀವಿ ಸಹ ಅದೇ ಆಗಿದ್ದಾನೆ. ನಾವೆಲ್ಲರೂ ತಿರಸ್ಕಾರ ಯೋಗ್ಯ ಯೂನಿವರ್ಸಿಟಿ ಪುರೋಹಿತರಾಗಿದ್ದೇವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry