7

ಮರೀಚಿಕೆಯಾದ ರಾಜಕೀಯ ಮಧ್ಯಪ್ರವೇಶ

Published:
Updated:
ಮರೀಚಿಕೆಯಾದ ರಾಜಕೀಯ ಮಧ್ಯಪ್ರವೇಶ

ಕೆಲವು ತಿಂಗಳುಗಳಿಂದ ಕಾಶ್ಮೀರ ಪ್ರಕ್ಷುಬ್ಧಗೊಂಡಿದೆ. ವಿದ್ಯಾರ್ಥಿ ಸಮುದಾಯ ಈಗ ಪೊಲೀಸರ ಜೊತೆ ಸಂಘರ್ಷಕ್ಕೆ ಇಳಿದಿದೆ. ವಿದ್ಯಾರ್ಥಿಗಳ ಪ್ರತಿಭಟನೆಯ ವೇಳೆ ‘ಆಜಾದಿ’ ಎಂಬ ಪದ ಅನುರಣಿಸುತ್ತಿದೆ. ಅವರು ರಾಜಕೀಯವಾಗಿ ಪ್ರಬುದ್ಧರೋ, ಅಪ್ರಬುದ್ಧರೋ ಎಂಬುದು ಬೇರೆ ವಿಚಾರ. ಆದರೆ, ಇಡೀ ಕಾಶ್ಮೀರ ಭಾರತದಿಂದ ಪ್ರತ್ಯೇಕಗೊಂಡಂತಿದೆ.

ಶ್ರೀನಗರ ಲೋಕಸಭಾ ಕ್ಷೇತ್ರಕ್ಕೆ ಏಪ್ರಿಲ್ 9ರಂದು ನಡೆದ ಉಪ ಚುನಾವಣೆಯಲ್ಲಿ ಶೇಕಡ 7ರಷ್ಟು ಮಾತ್ರ ಮತದಾನ ಆಗಿದ್ದು ಇದಕ್ಕೆ ಸಾಕ್ಷಿಯೆಂಬಂತೆ ಇತ್ತು. ವ್ಯಾಪಕ ಪ್ರತಿಭಟನೆ ಹಾಗೂ ಹತ್ಯೆಗಳ ನಂತರ ಅನಂತನಾಗ್ ಕ್ಷೇತ್ರದ ಚುನಾವಣೆಯನ್ನು ಮುಂದೂಡುವುದು ಅನಿವಾರ್ಯವಾಯಿತು. ಪರಿಸ್ಥಿತಿಯನ್ನು ‘ಭದ್ರತಾ ಸಮಸ್ಯೆ’ಯ ಕನ್ನಡಕದ ಮೂಲಕ ನೋಡಿದ್ದರಿಂದ ಪ್ರಯೋಜನ ಆಗಿಲ್ಲ.

‘ಪರಿಸ್ಥಿತಿ ಹದಗೆಡಲು ಕಾರಣ ಬೆರಳೆಣಿಕೆಯಷ್ಟು ಜನ ಮಾತ್ರ, ಕಾಶ್ಮೀರದ ಶೇಕಡ ಐದರಷ್ಟು ಜನ ಮಾತ್ರ ಹೀಗೆ ಮಾಡುತ್ತಿದ್ದಾರೆ’ ಎಂಬ ವಾದ ಭಾರತದಲ್ಲಿ ವ್ಯಾಪಕವಾಗಿರುವ ಕಾರಣ ಕಾಶ್ಮೀರದ ಪರಿಸ್ಥಿತಿ ತಿಳಿಗೊಳಿಸಲು ರಾಜಕೀಯ ಮಧ್ಯಪ್ರವೇಶ ಮರೀಚಿಕೆಯಾಗಿ ಉಳಿದಿದೆ. ಕಾಶ್ಮೀರದ ಜನರೆಡೆ ಸ್ನೇಹದ ಹಸ್ತ ಚಾಚುವ ಹೊಣೆ ಕೇಂದ್ರ ಸರ್ಕಾರದ್ದು. ಈಗ ನಡೆಯುತ್ತಿರುವ ಪ್ರತಿಭಟನೆಗಳಿಗೆ ಪರಿಹಾರ ಕಂಡುಕೊಳ್ಳುವುದು ಹೇಗೆ ಎಂಬುದನ್ನೂ ಅದು ಹೇಳಬೇಕು. ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿರುವ ಪೀಪಲ್ಸ್‌ ಡೆಮಾಕ್ರಟಿಕ್ ಪಕ್ಷಕ್ಕೆ ತನ್ನ ರಾಜಕೀಯ ಕಾರ್ಯಸೂಚಿ ಪಾಲಿಸಲು ಆಗಿಲ್ಲ. ಈ ನಡುವೆ, ಕಾಶ್ಮೀರದಲ್ಲಿ ಶಾಂತಿ ನೆಲೆಸುವಂತೆ ಮಾಡಲು ‘ಇನ್ಸಾನಿಯತ್, ಜಮೂರಿಯತ್ ಮತ್ತು ಕಾಶ್ಮೀರಿಯತ್’ (ಮಾನವೀಯತೆ, ಪ್ರಜಾತಂತ್ರ ಮತ್ತು ಕಾಶ್ಮೀರಿ ಅಸ್ಮಿತೆ) ಚೌಕಟ್ಟಿನ ಅಡಿ ಕ್ರಿಯಾಶೀಲವಾಗುವ ಮಾತನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹಲವು ಬಾರಿ ಹೇಳಿದ್ದಾರೆ.

ಈ ಪದಗಳು ಕಾಶ್ಮೀರದ ಸಾಮಾನ್ಯ ನಾಗರಿಕನಲ್ಲಿ ಧ್ವನಿಸುವ ಅರ್ಥಗಳೇನು? ಈ ಪದಗಳು ಅವರಿಗೆ ಏಕೆ ಹತ್ತಿರವಾಗುತ್ತಿಲ್ಲ? ಪದಗಳು ಧ್ವನಿಸುವ ಆಶಯವನ್ನು ಪಾಲಿಸದಿರುವುದು ಅವುಗಳು ಅರ್ಥ ಕಳೆದುಕೊಳ್ಳಲು ಕಾರಣ. ಹಾಗಾಗಿ, ಈ ಪದಗಳು ಮಾತುಕತೆಗೆ ಅಗತ್ಯವಿರುವ ವಾತಾವರಣ ಸೃಷ್ಟಿಸಿಲ್ಲ.

ಬಹುಕಾಲದಿಂದ ಹಾಗೇ ಉಳಿದುಕೊಂಡಿರುವ ರಾಜಕೀಯ ವಿವಾದಕ್ಕೆ ಪರಿಹಾರ ಬಯಸುತ್ತಿದ್ದ ಜನರ ಭಾವನೆಗಳನ್ನು ತಣ್ಣಗಾಗಿಸುವ ಉದ್ದೇಶದಿಂದ ಅಟಲ್ ಬಿಹಾರಿ ವಾಜಪೇಯಿ ಅವರು ಈ ಪದಗುಚ್ಛವನ್ನು ಮೊದಲ ಬಾರಿಗೆ ಬಳಸಿದರು. ಅವರು ಈ ಮಾತುಗಳನ್ನು ಪ್ರಾಮಾಣಿಕವಾಗಿ ಹೇಳಿದ್ದರು ಎಂಬುದನ್ನು ಬಹುತೇಕರು ಒಪ್ಪುವುದಿಲ್ಲ. ಆದರೆ, ಶಾಶ್ವತವಾದ ಪರಿಹಾರವೊಂದನ್ನು ಕಂಡುಕೊಳ್ಳಬೇಕು ಎಂಬ ವಿಚಾರದಲ್ಲಿ ಭಾರತ ಮತ್ತು ಪಾಕಿಸ್ತಾನ ಬದ್ಧತೆ ತೋರಿದ್ದರಿಂದ, ವಾಜಪೇಯಿ ನಡೆ ಪರಿಹಾರದತ್ತ ಸಾಗುವಂಥದ್ದಾಗಿತ್ತು.

ನರೇಂದ್ರ ಮೋದಿ ಅವರು 2013ರ ಡಿಸೆಂಬರ್‌ ನಂತರ, ವಾಜಪೇಯಿ ಅವರ ಮಾತುಗಳನ್ನು ಕನಿಷ್ಠ ಏಳು ಬಾರಿ ಆಡಿದ್ದಾರೆ. ಪ್ರಧಾನಿಯಾಗುವ ಐದು ತಿಂಗಳ ಮೊದಲಿನಿಂದಲೂ ಅವರು ಈ ಮಾತು ಹೇಳುತ್ತಿದ್ದಾರೆ. ಮೋದಿ ಅವರು ‘ಬಲಿಷ್ಠ’ ಪ್ರಧಾನಿ, ಆದರೆ ವಾಜಪೇಯಿ ಹಾಗಿರಲಿಲ್ಲ. ‘ಬಲಿಷ್ಠ’ ಪ್ರಧಾನಿಯು ಎಲ್ಲ ಲೋಪಗಳನ್ನು ಸರಿಪಡಿಸುವರು ಎಂಬ ನಿರೀಕ್ಷೆ ಇತ್ತು. ಆದರೆ ಮೋದಿ ಅವರಲ್ಲಿ ಆ ಇರಾದೆ ಇಲ್ಲದಿರುವುದು ಸ್ಪಷ್ಟವಾಗಿದೆ. ವಾಜಪೇಯಿ ಮಾತುಗಳಿಗೆ ಹೊಂದಿಕೆಯಾಗುವ ಯಾವುದೇ ಕ್ರಮವನ್ನು ಮೋದಿ ಅವರು ಎರಡು ವರ್ಷಗಳ ಅವಧಿಯಲ್ಲಿ ಕೈಗೊಂಡಿಲ್ಲ. ಕಾಶ್ಮೀರದ ಸಾಮಾನ್ಯ ನಾಗರಿಕ ಅನ್ಯಾಯ ಹಾಗೂ ಹಕ್ಕುಗಳ ದಮನದ ವಿರುದ್ಧ ಪ್ರತಿಭಟನೆಗೆ ಮುಂದಾದಾಗಲೆಲ್ಲ ಈ ಪದಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ.

ವಾಜಪೇಯಿ ಮಾತುಗಳನ್ನು ಉಚ್ಚರಿಸುವುದು ಬಾಯುಪಚಾರಕ್ಕೆ ಮಾತ್ರ ಎಂಬುದನ್ನು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸಾಬೀತು ಮಾಡಿದೆ. ‘ಕೇಂದ್ರ ಸರ್ಕಾರಕ್ಕೆ ಯಾರೊಬ್ಬರ ಜೊತೆಯೂ ಮಾತುಕತೆ ನಡೆಸುವ ಇರಾದೆ ಇಲ್ಲ’ ಎಂದು ಅಟಾರ್ನಿ ಜನರಲ್ ಮುಕುಲ್ ರೋಹಟಗಿ ಅವರು ಸುಪ್ರೀಂ ಕೋರ್ಟ್‌ಗೆ ಈಚೆಗೆ ಹೇಳಿದಾಗ ಇದು ಸ್ಪಷ್ಟವಾಗಿದೆ. ಅವರ ಮಾತಿನ ಅರ್ಥವೆಂದರೆ, ಕಾಶ್ಮೀರದ ಪ್ರಬಲ ಭಾವನೆಗಳನ್ನು ಪ್ರತಿನಿಧಿಸುವ ಪ್ರತ್ಯೇಕತಾವಾದಿ ಹುರಿಯತ್ ಕಾನ್ಫರೆನ್ಸ್ ಜೊತೆ ಮಾತುಕತೆ ನಡೆಸುವ ಇರಾದೆ ಕೂಡ ಕೇಂದ್ರಕ್ಕಿಲ್ಲ. ಸಮಸ್ಯೆಗೆ ರಾಜಕೀಯ ಪರಿಹಾರ ಬೇಕು ಎಂಬುದು ಕಾಶ್ಮೀರದ ಪ್ರಬಲ ಭಾವನೆ. ಏಕೆಂದರೆ, ನವದೆಹಲಿ ಜೊತೆಗಿನ ಈ ಹಿಂದಿನ ಒಡನಾಟಗಳು ‘ಭಗ್ನಗೊಂಡ ಭರವಸೆಗಳ’ ಅಧ್ಯಾಯ ಎಂಬ ಭಾವನೆ ಕಾಶ್ಮೀರಿಗಳಲ್ಲಿದೆ.

ರಾಜ್ಯಕ್ಕೆ ಈಚೆಗೆ ಭೇಟಿ ನೀಡಿದ್ದ ಪ್ರಧಾನಿ ಮೋದಿ, ‘ಭಯೋತ್ಪಾದನೆ ಅಥವಾ ಪ್ರವಾಸೋದ್ಯಮದ ನಡುವೆ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕು’ ಎಂದು ಯುವಕರಿಗೆ ಕರೆ ನೀಡಿದ್ದರು. ಅಂದರೆ ಅವರು ಭಯೋತ್ಪಾದನೆಯನ್ನೂ ಒಂದು ಆಯ್ಕೆಯನ್ನಾಗಿ ನೀಡಿದ್ದರು. ಇದು ಅಲ್ಲಿನ ಜನರನ್ನು ಸಂದಿಗ್ಧಕ್ಕೆ ಸಿಲುಕಿಸಿತು. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಮಾತುಕತೆ ಆರಂಭಿಸುವುದಕ್ಕೆ ಗೌರವ ನೀಡದಿರುವುದು ಪರಿಸ್ಥಿತಿಯನ್ನು ಸಂಕೀರ್ಣಗೊಳಿಸಿದೆ.

ಕಾಶ್ಮೀರದಲ್ಲಿ ಸೇನೆ ಹಾಗೂ ಅರೆಸೇನಾ ಪಡೆಗಳು ದೊಡ್ಡ ಸಂಖ್ಯೆಯಲ್ಲಿ ಇರುವ ಕಾರಣ ಪರಿಸ್ಥಿತಿಯನ್ನು ಸಹಜವಾಗಿಸಬಹುದು ಎಂದು ಕೇಂದ್ರ ಭಾವಿಸಿರಬೇಕು. ಆದರೆ ಅಲ್ಲಿ ಶಾಂತಿ ಸ್ಥಿರವಾಗಿ ನೆಲೆಯಾಗಿಲ್ಲ ಎಂಬುದಕ್ಕೆ ಇತಿಹಾಸದಲ್ಲಿ ಸಾಕಷ್ಟು ನಿದರ್ಶನಗಳಿವೆ. ಭದ್ರತಾ ಪಡೆಗಳನ್ನು ಮೊದಲ ಹಾಗೂ ಕಡೆಯ ಆಯ್ಕೆಯನ್ನಾಗಿ ಇಟ್ಟುಕೊಳ್ಳುವುದರಿಂದ ಪರಿಸ್ಥಿತಿಯನ್ನು ಪೂರ್ತಿಯಾಗಿ ತಿಳಿಗೊಳಿಸಲು ಸಾಧ್ಯವಿಲ್ಲ. ‘ಮಾತುಕತೆಗೆ ಪರ್ಯಾಯ ಇಲ್ಲ’ ಎಂಬುದನ್ನು ಭಾರತ ಮತ್ತು ಪಾಕಿಸ್ತಾನದ ನಡುವೆ ಮಾತುಕತೆಗಳು ಆರಂಭವಾದ ಸಂದರ್ಭ, ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವೆ 2003ರಿಂದ ಮಾತುಕತೆ ಆರಂಭವಾದ ಸಂದರ್ಭವು ತೋರಿಸಿಕೊಟ್ಟಿದೆ. ಸಮಸ್ಯೆಯ ಆಂತರಿಕ ಹಾಗೂ ಬಾಹ್ಯ ಆಯಾಮಗಳಿಗೆ ಮದ್ದು ನೀಡುವುದು ಮಾತ್ರ ಈಗಿರುವ ಆಯ್ಕೆ.

**

ಕಾಶ್ಮೀರ ಎಂದರೆ ಬರೀ ಭೂಪ್ರದೇಶವಲ್ಲ...

ಬಿಜೆಪಿ ಜೊತೆ ಮೈತ್ರಿ ಸರ್ಕಾರ ನಡೆಸುತ್ತಿರುವ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರಿಗೆ ಅಧಿಕಾರ ಇಲ್ಲದಂತಾಗಿದೆ. ಕಳೆದ ತಿಂಗಳು ಪ್ರಧಾನಿಯವರನ್ನು ಭೇಟಿಯಾಗಿದ್ದ ಮೆಹಬೂಬಾ ಅವರು ಪಾಕಿಸ್ತಾನ ಹಾಗೂ ಕಾಶ್ಮೀರದ ಪ್ರತ್ಯೇಕತಾವಾದಿಗಳ ಜೊತೆ ಮಾತುಕತೆ ಆರಂಭಿಸಲು ಮುಂದಾಗುವಂತೆ ಒತ್ತಾಯಿಸಿದ್ದರು. ಆದರೆ, ಇದಾದ ಕೆಲವೇ ಹೊತ್ತಿನಲ್ಲಿ ಬಿಜೆಪಿ ಮಾತುಕತೆಯ ಸಾಧ್ಯತೆಯನ್ನು ಅಲ್ಲಗಳೆಯಿತು. ಇದು ಮುಖ್ಯಮಂತ್ರಿಯವರ ಪ್ರತಿಷ್ಠೆಗೆ ಮಸಿ ಬಳಿಯಿತು.

ಪರಿಸ್ಥಿತಿ ಈಗ ಸಂಕೀರ್ಣವಾಗಿದೆ. ಕೇಂದ್ರ ಸರ್ಕಾರ ಹಾಗೂ ಬಲಪಂಥೀಯ ಶಕ್ತಿಗಳ ಪ್ರಚೋದನೆ ಇದಕ್ಕೆ ಕಾರಣ ಎಂಬುದು ವಾಸ್ತವ. ಆದರೆ ಇದನ್ನು ಅಲ್ಲಗಳೆಯುವುದರಿಂದ ಪ್ರತ್ಯೇಕತಾವಾದಕ್ಕೆ ಬಲ ಬಂದಿದೆ. ಪಿಡಿಪಿಯ ಮುಂದೆ ಆಯ್ಕೆಗಳು ಇಲ್ಲದಂತೆ ಆಗಿದೆ. ಪ್ರತ್ಯೇಕತಾವಾದಿಗಳ ಬಗ್ಗೆ ಮೃದು ಧೋರಣೆ ಹೊಂದಿದ್ದಾರೆ ಎಂದು ಒಂದು ಕಾಲದಲ್ಲಿ ಹೆಸರಾಗಿದ್ದ ಮೆಹಬೂಬಾ ಅವರು ಮಾತುಕತೆ ಆರಂಭಕ್ಕೆ ಮನವಿ ಮಾಡುತ್ತಿದ್ದಾರೆ. ಆದರೆ ಕೇಂದ್ರ ಕಣ್ತೆರೆಯುತ್ತಿಲ್ಲ.

ಸೇನೆ ಮತ್ತು ಅರೆಸೇನಾ ಪಡೆ ಬಳಸಿಕೊಂಡು ಕೇಂದ್ರ ಸರ್ಕಾರವು ಕಾಶ್ಮೀರದಲ್ಲಿ ನಿಯಂತ್ರಣ ಸಾಧಿಸಲು ಯತ್ನಿಸುತ್ತದೆ ಎಂಬ ಭಾವನೆ ಬಲಗೊಳ್ಳುತ್ತಿದೆ. ಜನರ ಬಗ್ಗೆ ಕಳಕಳಿ ತೋರದೆ, ಕಾಶ್ಮೀರವನ್ನು ಭೂಪ್ರದೇಶವನ್ನಾಗಿ ಮಾತ್ರ ನೋಡುವುದು ಅಪಾಯಕಾರಿ.

**

-ಶುಜಾತ್ ಬುಖಾರಿ

ಪ್ರಧಾನ ಸಂಪಾದಕ ರೈಸಿಂಗ್‌ ಕಾಶ್ಮೀರ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry