7

ಸ್ವಾರ್ಥ ಸಾಧನೆಗೆ ವಿದ್ಯಾರ್ಥಿಗಳ ಬಳಕೆ?

Published:
Updated:
ಸ್ವಾರ್ಥ ಸಾಧನೆಗೆ ವಿದ್ಯಾರ್ಥಿಗಳ ಬಳಕೆ?

ಕಾಶ್ಮೀರ ಕಣಿವೆಯ ಕೆಲವೆಡೆ ವಿದ್ಯಾರ್ಥಿಗಳು ಭದ್ರತಾ ಪಡೆಗಳೊಂದಿಗೆ ಘರ್ಷಣೆಗೆ ಇಳಿದಿದ್ದಾರೆ. ಇದು ಪ್ರತ್ಯೇಕತಾವಾದ, ಭಯೋತ್ಪಾದನಾ ಚಟುವಟಿಕೆಗಳಿಂದ ಸದಾ ಸುದ್ದಿಯಲ್ಲಿರುವ ಜಮ್ಮು ಕಾಶ್ಮೀರದಲ್ಲಿನ ಹೊಸ ವಿದ್ಯಮಾನ. ಕಾಶ್ಮೀರ ಸಮಸ್ಯೆಗೆ ಮತ್ತೊಂದು ಸೇರ್ಪಡೆ.

ಪಾಠ ಪ್ರವಚನ, ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿರಬೇಕಾದ ವಿದ್ಯಾರ್ಥಿಗಳು ತರಗತಿಗಳನ್ನು ಬಹಿಷ್ಕರಿಸಿ. ಕ್ಯಾಂಪಸ್‌ಗಳಿಂದ ಹೊರ ಬಂದು ಪೊಲೀಸರೊಂದಿಗೆ, ಅರೆ ಸೇನಾಪಡೆ ಸಿಬ್ಬಂದಿಯೊಂದಿಗೆ, ಸೈನಿಕರೊಂದಿಗೆ ಘರ್ಷಣೆ ನಡೆಸುತ್ತಿದ್ದಾರೆ. ಇದೇನು ಕಾಶ್ಮೀರ ಕಣಿವೆಯಲ್ಲಿ ಪ್ರತ್ಯೇಕತಾವಾದಿಗಳ ಪ್ರಭಾವ, ಪ್ರಚೋದನೆಗಳಿಂದ ವಿದ್ಯಾರ್ಥಿಗಳು ಸಾರ್ವತ್ರಿಕವಾಗಿ ದಂಗೆ ಏಳುವುದರ ಸೂಚನೆಯೇ ಅಥವಾ ರಾಜಕೀಯ ಸ್ವಾರ್ಥಕ್ಕೆ ವಿದ್ಯಾರ್ಥಿಗಳನ್ನು ಬಳಸಿಕೊಳ್ಳುವ ಪುಢಾರಿಗಳ ಸಮಯಸಾಧಕತನವೇ? ಈ ಎರಡೂ ಅಂಶಗಳನ್ನು ಪೂರ್ತಿಯಾಗಿ ತಳ್ಳಿ ಹಾಕಲು ಬರುವುದಿಲ್ಲ.

ಜಿಲ್ಲಾ ಕೇಂದ್ರ ಪುಲ್ವಾಮಾ ಪಟ್ಟಣದಲ್ಲಿ ಬಾಲಕರ ಸರ್ಕಾರಿ ಕಾಲೇಜಿನ ಕ್ಯಾಂಪಸ್ ಮುಂದೆ ಜಮ್ಮು ಕಾಶ್ಮೀರ ಪೊಲೀಸರು ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆ ಸೇರಿ ತಪಾಸಣಾ ಚೌಕಿಯನ್ನು ಆರಂಭಿಸಿದ್ದರು. ಇದನ್ನು ಪ್ರತಿಭಟಿಸಿ ವಿದ್ಯಾರ್ಥಿಗಳು ಏ. 15 ರಂದು ರಸ್ತೆಗಿಳಿದರು. ಅವರನ್ನು ತಡೆದ ಭದ್ರತಾ ಪಡೆ ಸಿಬ್ಬಂದಿ ಮೇಲೆ ಕಲ್ಲು ತೂರಾಟ ನಡೆಸಿದರು. ಪೊಲೀಸರು ಮತ್ತು ಕೇಂದ್ರ ಮೀಸಲು ಪೊಲೀಸ್‌ ಪಡೆ ಸಿಬ್ಬಂದಿ ಲಾಠಿ ಪ್ರಹಾರ ಮಾಡಿ, ಅಶ್ರುವಾಯು ಶೆಲ್‌ಗಳನ್ನು ಪ್ರಯೋಗಿಸಿ ವಿದ್ಯಾರ್ಥಿಗಳನ್ನು ಚದುರಿಸಿದ್ದರು. ಈ ಘರ್ಷಣೆಯಲ್ಲಿ ಅನೇಕ ವಿದ್ಯಾರ್ಥಿಗಳು ಗಾಯಗೊಂಡಿದ್ದರು. ‘ವಿದ್ಯಾರ್ಥಿಗಳ ಮೇಲೆ ಭದ್ರತಾ ಪಡೆಗಳ ದೌರ್ಜನ್ಯ’ ಎಂದು ಖಂಡಿಸಿ ಕಾಶ್ಮೀರ ಕಣಿವೆಯ ವಿವಿಧೆಡೆ ವಿದ್ಯಾರ್ಥಿಗಳು ಬೀದಿಗಿಳಿಯಲು ಇದು ಕಾರಣವಾಯಿತು.

ನ್ಯಾಷನಲ್ ಕಾನ್ಫರೆನ್ಸ್‌ನ ಕಾರ್ಯಾಧ್ಯಕ್ಷ ಒಮರ್ ಅಬ್ದುಲ್ಲಾ ಮತ್ತು ಕಾಂಗ್ರೆಸ್‌ನ ಮುಖಂಡರು ವಿದ್ಯಾರ್ಥಿಗಳ ಪ್ರತಿಭಟನೆಗೆ ಸಹಾನುಭೂತಿ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರವಾಗಲೀ, ಅಧಿಕಾರಾರೂಢ ಮೈತ್ರಿ ಕೂಟ ಪೀಪಲ್‌್ಸ ಡೆಮಾಕ್ರೆಟಿಕ್ ಪಾರ್ಟಿ ಮತ್ತು ಬಿಜೆಪಿ ಮುಖಂಡರಾಗಲೀ ವಿದ್ಯಾರ್ಥಿಗಳೊಂದಿಗೆ ನೇರ ಮಾತುಕತೆಗೆ ಇನ್ನೂ ಮುಂದಾಗಿಲ್ಲ. ಕೆಲವೆಡೆ ಪ್ರತಿಭಟನಾನಿರತ ವಿದ್ಯಾರ್ಥಿಗಳೊಂದಿಗೆ ಸ್ಥಳೀಯ ಕೆಲ ಯುವಕರು ತೂರಿಕೊಂಡು ಭಾರತ ವಿರೋಧಿ ಘೋಷಣೆಗಳನ್ನು ಕೂಗಿದ್ದಾರೆ. ವಿದ್ಯಾರ್ಥಿಗಳನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳುವ ಪ್ರತ್ಯೇಕತಾವಾದಿಗಳ ಮತ್ತು ರಾಜಕೀಯ ಮುಖಂಡರ ಹುನ್ನಾರ ಇದರಲ್ಲಿದೆ  ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ.

ವಿದ್ಯಾರ್ಥಿಗಳು ಅಶಾಂತಿ ಉಂಟುಮಾಡುತ್ತಿರುವುದರಲ್ಲಿ ಬಾಹ್ಯ ಶಕ್ತಿಗಳ ಕೈವಾಡ, ಪ್ರಚೋದನೆ ಇದೆ  ಎಂದಿದ್ದಾರೆ ಕಾಶ್ಮೀರ ವಲಯದ ಇನ್‌ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ಸೈಯದ್ ಜಾವಿದ್ ಮುಜ್ತಬ ಗಿಲಾನಿ. ಅವರ ಪ್ರಕಾರ ಕಾಶ್ಮೀರ ಕಣಿವೆಯಲ್ಲಿ ಸುಮಾರು 200 ಉಗ್ರಗಾಮಿಗಳು ಸಕ್ರಿಯರಾಗಿದ್ದಾರೆ. ಇವರಲ್ಲಿ ಸುಮಾರು 110 ಜನ ಸ್ಥಳೀಯರು. ಉಳಿದವರು ಹೊರಗಿನವರು. ಕಳೆದೊಂದು ವರ್ಷದಲ್ಲಿ ಸುಮಾರು 95 ಸ್ಥಳೀಯ ಯುವಕರು ವಿವಿಧ ಉಗ್ರಗಾಮಿ ಸಂಘಟನೆಗಳನ್ನು ಸೇರಿದ್ದಾರೆ.

ವಿದ್ಯಾರ್ಥಿಗಳ ಪ್ರತಿಭಟನೆಯೂ ದಕ್ಷಿಣ ಕಾಶ್ಮೀರದಲ್ಲೇ ಹೆಚ್ಚಾಗಿ ನಡೆಯುತ್ತಿದೆ. ಪುಲ್ವಾಮಾದಲ್ಲಿ ಮತ್ತು ರಾಜ್ಯದ ಬೇಸಿಗೆ ರಾಜಧಾನಿ ಶ್ರೀನಗರ ಪಟ್ಟಣದಲ್ಲಿ ವಿದ್ಯಾರ್ಥಿನಿಯರೂ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.

ಕಾಶ್ಮೀರ ಕಣಿವೆಯಲ್ಲಿ ಶೇ 5 ರಷ್ಟು ಶಿಕ್ಷಣ ಸಂಸ್ಥೆಗಳಲ್ಲಿ, ಅದೂ ಕೂಡ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಗಳು ಮತ್ತು ಕಾಲೇಜುಗಳ ಕ್ಯಾಂಪಸ್‌ಗಳಲ್ಲಿ ಅಶಾಂತಿಯ ವಾತಾವರಣ ಇದೆ. ಶೇ 95 ರಷ್ಟು ಶಾಲೆಗಳಲ್ಲಿ ಪಾಠ ಪ್ರವಚನಗಳು ನಡೆಯುತ್ತಿವೆ. ಗಲಭೆ ನಡೆದ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು ತಪ್ಪು ಹಾದಿ ತುಳಿಯದಂತೆ ಅವರಿಗೆ ಆಪ್ತ ಸಮಾಲೋಚನೆ ನಡೆಸಲಾಗುತ್ತಿದೆ. ಮಕ್ಕಳ ಚಟುವಟಿಕೆ ಬಗ್ಗೆ ನಿಗಾ ವಹಿಸುವಂತೆ ಪೋಷಕರಿಗೂ ತಿಳಿಸಲಾಗಿದೆ ಎಂದು ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.

ವಿದ್ಯಾರ್ಥಿಗಳು ಅಶಾಂತಿ ಹಬ್ಬುವುದನ್ನು ತಡೆಯಲು ಫೇಸ್‌ಬುಕ್, ಟ್ವಿಟರ್ ಮತ್ತು ಯುಟ್ಯೂಬ್ ಸೇರಿದಂತೆ 22 ಸಾಮಾಜಿಕ ಜಾಲತಾಣಗಳ ಬಳಕೆಯನ್ನು ರಾಜ್ಯದಲ್ಲಿ ಒಂದು ತಿಂಗಳು ನಿಷೇಧಿಸಲಾಗಿದೆ. ಅಂತರ್ಜಾಲದಲ್ಲಿ 2ಜಿ ತರಂಗ ಮಾತ್ರ ಲಭ್ಯ ಇದೆ. ಆದರೂ ಯುವಕರನ್ನು ಪ್ರಚೋದಿಸುವ ವಿಡಿಯೊಗಳನ್ನು ಕೆಲವು ಸಾಮಾಜಿಕ ಜಾಲ ತಾಣಗಳಲ್ಲಿ ಹಾಕುವಲ್ಲಿ ಉಗ್ರಗಾಮಿಗಳು ಯಶಸ್ವಿಯಾಗಿದ್ದಾರೆ ಎನ್ನುತ್ತವೆ ಪೊಲೀಸ್‌ ಮೂಲಗಳು.

ಜಮ್ಮು ಕಾಶ್ಮೀರದಲ್ಲಿ ಕೇಂದ್ರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅನುಮತಿ ಇಲ್ಲದ, ಪಾಕಿಸ್ತಾನ ಮತ್ತು ಸೌದಿ ಅರೇಬಿಯಾದ ಕೆಲವು ನಿರ್ದಿಷ್ಟ ಟಿ.ವಿ. ವಾಹಿನಿಗಳ ಪ್ರಸಾರ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರವು ಜಿಲ್ಲಾಧಿಕಾರಿಗಳಿಗೆ ಆದೇಶಿಸಿದೆ.

ಕಾಶ್ಮೀರ ಸಮಸ್ಯೆ ಇಂದು ನಿನ್ನೆಯದಲ್ಲ. ಸ್ವಾತಂತ್ರ್ಯ ಪೂರ್ವದಿಂದಲೂ ಇದೆ. ಪ್ರತ್ಯೇಕತಾವಾದಿಗಳಿಗೆ ಕಾಶ್ಮೀರ ಹೋರಾಟ ಎಂದರೆ ಸ್ವಾತಂತ್ರ್ಯಕ್ಕಾಗಿ ನಡೆಸುವ ಹೋರಾಟ. ಇದಕ್ಕಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಹೋರಾಟಕ್ಕಾಗಿ ಪ್ರತ್ಯೇಕತಾವಾದಿಗಳ ವಿವಿಧ ಬಣಗಳ ಮುಖಂಡರು ಸೇರಿ  ‘ಜಂಟಿ ಪ್ರತಿರೋಧ ನಾಯಕತ್ವ’ವನ್ನು ರೂಪಿಸಿಕೊಂಡಿದ್ದಾರೆ. ಅಲ್ ಕೈದಾ, ಲಷ್ಕರ್ ಎ- ತಯಬಾ ಮುಂತಾದ ಭಯೋತ್ಪಾದಕರ ಸಂಘಟನೆಗಳೊಂದಿಗೆ ಕಾಶ್ಮೀರ ಚಳವಳಿಗಾರರಿಗೆ ಯಾವುದೇ ಸಂಬಂಧ ಇಲ್ಲ ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ ಭದ್ರತಾ ಪಡೆಗಳ ಕಾರ್ಯಾಚರಣೆಗಳಲ್ಲಿ ಸಾಯುವ ಉಗ್ರಗಾಮಿಗಳನ್ನು ಅವರು ‘ಹುತಾತ್ಮ’ ಎಂದು ಬಣ್ಣಿಸುತ್ತಾರೆ. ಕೆಲವಡೆ ಉಗ್ರಗಾಮಿಗಳು ಇಂಥ ‘ಹುತಾತ್ಮ’ರ ಅಂತ್ಯಕ್ರಿಯೆಗಳಲ್ಲಿ ‘ಗನ್ ಸೆಲ್ಯೂಟ್’ನ ಗೌರವ ಕೊಡುವುದಿದೆ. ಇಂಥ ಅಂತ್ಯಕ್ರಿಯೆಗಳಲ್ಲಿ ಪ್ರತ್ಯೇಕತಾವಾದಿ ಮುಖಂಡರೂ ಪಾಲ್ಗೊಳ್ಳುವುದಿದೆ. ಹೀಗಾಗಿ ಪ್ರತ್ಯೇಕತಾವಾದಿಗಳ ಹೋರಾಟವನ್ನು ರಾಜಕೀಯ ಹೋರಾಟ ಎಂದು ಸರ್ಕಾರವಾಗಲೀ ಮುಖ್ಯ ವಾಹಿನಿಯಲ್ಲಿರುವ ರಾಜಕೀಯ ಪಕ್ಷಗಳಾಗಲೀ ಪರಿಗಣಿಸಿಲ್ಲ.

ಕಾಶ್ಮೀರ ಸಮಸ್ಯೆಯನ್ನು ಕೇವಲ ಕಾನೂನು ಸುವ್ಯವಸ್ಥೆ ಸಮಸ್ಯೆ ಎಂದು ನೋಡದೆ ಅದನ್ನು ಬಗೆಹರಿಸಲು ಸಂಬಂಧಪಟ್ಟ ಎಲ್ಲರೊಂದಿಗೆ ರಾಜಕೀಯ ಅನುಸಂಧಾನ ನಡೆಸಬೇಕು ಎಂದು ನ್ಯಾಷನಲ್ ಕಾನ್ಫರೆನ್‌್ಸ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಹೇಳುತ್ತಾರೆ. ಶ್ರೀನಗರ ಲೋಕಸಭಾ ಕ್ಷೇತ್ರದಲ್ಲಿ ಏಪ್ರಿಲ್‌ನಲ್ಲಿ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿ ರಾಜ್ಯದ ಅಧಿಕಾರಾರೂಢ ಪಿಡಿಪಿ–ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿಯನ್ನು ಪರಾಭವಗೊಳಿಸಿದ ಅವರು ಇತ್ತೀಚೆಗೆ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದಾಗಲೂ ಇದನ್ನೇ ಹೇಳಿದ್ದಾರೆ ಎಂದು ವರದಿಯಾಗಿದೆ.

ಪ್ರತ್ಯೇಕತಾವಾದಿಗಳೊಂದಿಗೆ ಸಂಧಾನ ಮಾತುಕತೆಗೆ ಕೇಂದ್ರ ಸರ್ಕಾರ ಅನೇಕ ಪ್ರಯತ್ನಗಳನ್ನು ನಡೆಸಿದೆ. ಆದರೆ ಫಲ ನೀಡಿಲ್ಲ. ಪ್ರತ್ಯೇಕತಾವಾದಿ ಮುಖಂಡರು ಕೆಲವು ತಿಂಗಳ ಹಿಂದೆ ಮಾತುಕತೆಗಾಗಿ ಬಂದ ಕೇಂದ್ರದ ಸಂಸದೀಯ ನಿಯೋಗಕ್ಕೇ ಬೆನ್ನು ತೋರಿಸಿದ್ದರು. ಪ್ರತ್ಯೇಕತಾವಾದಿಗಳು ಪಾಕಿಸ್ತಾನದ ಮಾತನ್ನಷ್ಟೇ ಕೇಳುತ್ತಾರೆ ಎಂಬುದು ಸರ್ವವಿದಿತ. ‘ಓ ಸಿರ್ಫ್‌ ಪಡೋಸೀ ಕಾ ಬಾತ್ ಮಾನ್‌ತೆ ಹೈ’ (ಅವರು ನೆರೆಯ ಪಾಕಿಸ್ತಾನದ ಆಣತಿಯಂತೆ ನಡೆದುಕೊಳ್ಳುತ್ತಾರೆ) ಎಂದು ಕಾಶ್ಮೀರದಲ್ಲಿ ಜನಸಾಮಾನ್ಯರೂ ಆಡಿಕೊಳ್ಳುತ್ತಿದ್ದಾರೆ.

ಪಾಕಿಸ್ತಾನದ ಕುಮ್ಮಕ್ಕಿನಿಂದಲೇ ಕಾಶ್ಮೀರದಲ್ಲಿ ಹಿಂಸಾಚಾರ ಮುಂದುವರಿಯುತ್ತಿದೆ. ಪರಿಸ್ಥಿತಿ ಶಮನಗೊಳ್ಳುವ ಲಕ್ಷಣ ಕಾಣಿಸುತ್ತಿದ್ದಂತೆ ಪಾಕಿಸ್ತಾನದ ಸೈನಿಕರು ಕದನ ವಿರಾಮವನ್ನು ಉಲ್ಲಂಘಿಸಿ ನಮ್ಮ ಸೈನಿಕರ ಮೇಲೆ ದಾಳಿ ಮಾಡುತ್ತ ಕೆಣಕುತ್ತಲೇ ಇರುತ್ತಾರೆ. ವಿದ್ಯಾರ್ಥಿಗಳು ಭದ್ರತಾ ಪಡೆಗಳೊಂದಿಗೆ ನಡೆಸುತ್ತಿರುವ ಸಂಘರ್ಷವು ಕಾಶ್ಮೀರ ಕಣಿವೆಯಲ್ಲಿ ಪ್ರವಾಸೋದ್ಯಮವನ್ನು ಬಿಟ್ಟರೆ ಬೇರೆ ಯಾವುದರ ಮೇಲೂ ಅಷ್ಟು ದುಷ್ಪರಿಣಾಮ ಬೀರಿಲ್ಲ. ಕಾಶ್ಮೀರ ಕಣಿವೆಯಲ್ಲಿ ಹವಾಮಾನ ಆಹ್ಲಾದಕರವಾಗಿದ್ದರೂ ಅಲ್ಲಲ್ಲಿ ಗಲಭೆ, ಹಿಂಸಾಚಾರ ಸಂಭವಿಸುತ್ತಿರುವುದರಿಂದ ಪ್ರವಾಸಿಗರು ದೊಡ್ಡ ಸಂಖ್ಯೆಯಲ್ಲಿ ಬರಲು ಇನ್ನೂ ತೊಡಗಿಲ್ಲ.

**

ತುರ್ತು ಕ್ರಮ  ಅಗತ್ಯ

ಹಿಂದೆ ಕಾಶ್ಮೀರ ಕಣಿವೆಯಿಂದ ಪಂಡಿತರನ್ನು ಬಡಿದೋಡಿಸಿದ್ದು ತಪ್ಪು ಎಂಬುದು ನಿಜ. ಆದರೆ ಅವರೆಲ್ಲ ಒಮ್ಮೆ ಕಷ್ಟ ಅನುಭವಿಸಿದರು. ವಲಸೆ ಹೋದಲ್ಲಿ ಕಷ್ಟವಾದರೂ ನಂತರ ಸರ್ಕಾರದ ನೆರವಿನಿಂದ ಮೇಲೆ ಬಂದರು.

ಹೋದಲ್ಲಿ ಅವರ ಮಕ್ಕಳಿಗೆ ಒಳ್ಳೆಯ ಶಿಕ್ಷಣ ದೊರೆಯಿತು. ದೇಶ, ವಿದೇಶಗಳಲ್ಲಿ ಉತ್ತಮ ಹುದ್ದೆಗಳು ಸಿಕ್ಕಿ ಚೆನ್ನಾಗಿದ್ದಾರೆ. ಹುಟ್ಟೂರಿನ ಆಸ್ತಿ ಮಾರಬೇಕಾಗಿ ಬಂದರೂ ಅದಕ್ಕೆ ಒಳ್ಳೆಯ ಬೆಲೆ ದೊರೆಯಿತು. ಆದರೆ ಇಲ್ಲಿ  ಹೆಚ್ಚುಕಡಿಮೆ ದಿನ ಬಿಟ್ಟು ದಿನ ಕರ್ಫ್ಯೂ, ಹರತಾಳಗಳಿಂದಾಗಿ ಶಾಲೆಗಳು ಸರಿಯಾಗಿ ನಡೆಯುತ್ತಿಲ್ಲ.

ಪ್ರತ್ಯೇಕತಾವಾದಿಗಳೊಂದಿಗೆ ನಿಂತವರಿಗೆ ದೂಸ್ರಾ ಪೈಸಾ, ಹವಾಲಾ ಪೈಸಾ (ಐಎಸ್‌ಐ ಹಣ) ಸಿಕ್ಕಿ ಆಸ್ತಿಪಾಸ್ತಿ ಮಾಡಿಕೊಂಡರು. ಅಂಥವರು ಮಕ್ಕಳನ್ನು ಬೇರೆ ರಾಜ್ಯಗಳಲ್ಲಿ ವಸತಿಶಾಲೆಗಳಲ್ಲಿ ಓದಿಸುತ್ತಿದ್ದಾರೆ. ಇಲ್ಲಿ ಮುಖ್ಯವಾಹಿನಿಯಲ್ಲಿ ನಿಂತ ಬಡ ಕಾಶ್ಮೀರಿಗಳ ಕಷ್ಟ ಸುಖಗಳನ್ನು ಕೇಳುವವರಿಲ್ಲ. ಈಗ ನಿಜವಾಗಿ ಕಷ್ಟಕ್ಕೆ ಸಿಲುಕಿರುವವರು ನಾವು. ಸರ್ಕಾರವು ಕಾಶ್ಮೀರಿ ಪಂಡಿತರಿಗೆ ನೆರವಾದಂತೆ ಮುಖ್ಯ ವಾಹಿನಿಯೊಂದಿಗೆ ನಿಂತ ಬಡ ಕಾಶ್ಮೀರಿಗಳಿಗೂ ನೆರವಿನ ಹಸ್ತ ಚಾಚಬೇಕು. ವಿದ್ಯಾರ್ಥಿಗಳ ಅಶಾಂತಿ ಹಬ್ಬದಂತೆ ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕು ಎಂಬುದು ಕಾಶ್ಮೀರ ಕಣಿವೆಯ ಜನ ಸಾಮಾನ್ಯರ ಒಟ್ಟಾರೆ ಅನಿಸಿಕೆ.

**ರವಿ ವೈ. ಪ್ರಜಾವಾಣಿ, ಶ್ರೀನಗರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry