ಸೋಮವಾರ, ಮಾರ್ಚ್ 27, 2023
21 °C

ಚೇತರಿಕೆ: ಮಠಕ್ಕೆ ಮರಳಿದ ಶಿವಕುಮಾರ ಸ್ವಾಮೀಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೇತರಿಕೆ: ಮಠಕ್ಕೆ ಮರಳಿದ ಶಿವಕುಮಾರ ಸ್ವಾಮೀಜಿ

ತುಮಕೂರು: ಪಿತ್ತನಾಳದ ಸೋಂಕಿನಿಂದ ಬಳುತ್ತಿದ್ದ ಸಿದ್ದಗಂಗಾಮಠದ ಡಾ. ಶಿವಕುಮಾರ ಸ್ವಾಮೀಜಿ ಅವರ ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ ಕಂಡು ಬಂದಿದ್ದರಿಂದ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಿಂದ ಶನಿವಾರ ಮಧ್ಯಾಹ್ನ 1.30ರ ಹೊತ್ತಿಗೆ ಮಠಕ್ಕೆ ಹಿಂತಿರುಗಿದರು.

ಹಳೇ ಮಠದಲ್ಲಿರುವ ಸ್ವಾಮೀಜಿಯವರ ಕೊಠಡಿಗೆ ಗಾಲಿ ಕುರ್ಚಿಯಲ್ಲಿ ಕರೆದುಕೊಂಡು ಹೋಗಲಾಯಿತು. ಆ ಹೊತ್ತಿಗೆ ಮಠದ ಅಂಗಳದಲ್ಲಿ ಶ್ರೀಗಳ ದರ್ಶನಕ್ಕೆ ನೂರಾರು ಭಕ್ತರು ಕಾದು ನಿಂತಿದ್ದರು.

‘ಸ್ವಾಮೀಜಿಯವರಿಗೆ ಪ್ರಯಾಣದಲ್ಲಿ ಸ್ವಲ್ಪ ಆಯಾಸ ಆಗಿದೆ. ವಿಶ್ರಾಂತಿಯ ಅಗತ್ಯವಿದೆ. ಭಕ್ತರು ಸಹಕರಿಸಬೇಕು’ ಎಂದು ಆಡಳಿತ ಮಂಡಳಿಯವರು ಮನವಿ ಮಾಡಿದರು.

ಸ್ವಲ್ಪ ಹೊತ್ತಿನ ನಂತರ ಭಕ್ತರಿಗೆ ದೂರದಿಂದಲೇ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಭಕ್ತರೂ ಸಾಲುಗಟ್ಟಿ ನಿಂತು ದೂರದಿಂದಲೇ ದರ್ಶನ ಪಡೆದರು.

ವಿಶ್ರಾಂತಿ ಅಗತ್ಯ: ಸುದ್ದಿಗಾರರೊಂದಿಗೆ ಮಾತನಾಡಿದ ಮಠದ ಅಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ, ‘ಶಿವಕುಮಾರ ಸ್ವಾಮೀಜಿಯವರು ಚೇತರಿಸಿಕೊಂಡಿದ್ದಾರೆ. ಆದಾಗ್ಯೂ ಅವರಿಗೆ ಒಂದು ವಾರ ವಿಶ್ರಾಂತಿ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ. ಯಾವುದೇ ರೀತಿ ಸೋಂಕು ಅವರಿಗೆ ಉಂಟಾಗದಂತೆ ಎಚ್ಚರಿಕೆ ವಹಿಸಲು  ಸೂಚಿಸಿದ್ದಾರೆ’ ಎಂದು ಹೇಳಿದರು.

‘ಸ್ವಾಮೀಜಿಯವರಿಗೆ ಭಕ್ತರನ್ನು ಕಂಡರೆ ಬಹುಪ್ರೀತಿ. ಭಕ್ತರೂ ಸಹ ಅವರ ದರ್ಶನ ಪಡೆಯದೇ ಇರಲಾರರು. ಆದರೆ, ಈಗ ಸ್ವಾಮೀಜಿ ಅವರ ಆರೋಗ್ಯದ ದೃಷ್ಟಿಯಿಂದ ವೈದ್ಯರ ಸಲಹೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗಿದೆ. ಅದಕ್ಕಾಗಿ ದೂರದಿಂದಲೇ ಹಳೇ ಮಠದಲ್ಲಿ ಭಕ್ತರಿಗೆ ಸ್ವಾಮೀಜಿ ದರ್ಶನಕ್ಕೆ ಸ್ವಲ್ಪ ಹೊತ್ತು ಅವಕಾಶ ಮಾಡಿಕೊಡಲಾಗಿದೆ. ಭಕ್ತರೂ ಸಹಕರಿಸಬೇಕು’ ಎಂದು ಮನವಿ ಮಾಡಿದರು.

‘ಬಿಜಿಎಸ್ ಆಸ್ಪತ್ರೆ ವೈದ್ಯರಾದ ಡಾ.ಶಾಲಿನಿ, ಡಾ.ಪರಮೇಶ್ವರ್ ಅವರು ಮಠದಲ್ಲಿಯೇ ಸ್ವಾಮೀಜಿ ಅವರಿಗೆ ಚಿಕಿತ್ಸೆ ಮುಂದುವರೆಸಲಿದ್ದಾರೆ’ ಎಂದು ತಿಳಿಸಿದರು.

ಬೆಂಗಳೂರು ವರದಿ: ‘ಸ್ವಾಮೀಜಿ ಅವರ ಪಿತ್ತನಾಳದಲ್ಲಿ ಅಳವಡಿಸಿದ್ದ ಸ್ಟೆಂಟ್‌ ಬ್ಲಾಕ್‌ ಆಗಿದ್ದರಿಂದ ಶ್ವಾಸಕೋಶ, ಯಕೃತ್‌ ಹಾಗೂ ಮೇದೋಜೀರಕ ಗ್ರಂಥಿಗಳಲ್ಲಿ ಸೋಂಕು ಕಂಡುಬಂದಿತ್ತು. ಹೀಗಾಗಿ ಎಂಡೋಸ್ಕೋಪಿ ಚಿಕಿತ್ಸೆ ನೀಡಲು ನಿರ್ಧರಿಸಿದೆವು. ಶ್ರೀಗಳಿಗೆ 110 ವರ್ಷಗಳಾಗಿದ್ದ ಕಾರಣ ಚಿಕಿತ್ಸೆ ನೀಡುವುದು ದೊಡ್ಡ ಸವಾಲಾಗಿತ್ತು. ಅವರಿಗೆ ಇಆರ್‌ಸಿಪಿ ಪರೀಕ್ಷೆ, ಅರಿವಳಿಕೆ ನೀಡುವುದು ಕಷ್ಟಕರವಾಗಿತ್ತು. ಎಲ್ಲ ಪರೀಕ್ಷೆಗಳಿಗೆ ಶ್ರೀಗಳು ಸ್ಪಂದಿಸಿದರು’ ಎಂದು ಆಸ್ಪತ್ರೆಯ ಜಠರ ಮತ್ತು ಪಿತ್ತಕೋಶ ತಜ್ಞ ಡಾ.ಬಿ.ಎಸ್‌.ರವೀಂದ್ರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ಶ್ರೀಗಳು ದೈನಂದಿನ ಕೆಲಸಗಳನ್ನು ಉತ್ತಮವಾಗಿ ನಿರ್ವಹಿಸಿದರು. ಅವರ ಆರೋಗ್ಯ ವಿಚಾರಿಸಲು ಬಂದ ಭಕ್ತರಿಗೆ ದರ್ಶನ ನೀಡಿದರು. ಮಠಕ್ಕೆ ತೆರಳುತ್ತೇನೆ ಎಂದು ಶ್ರೀಗಳು ಬಯಸಿದರು. ಹೀಗಾಗಿ ಅವರನ್ನು ಕಳುಹಿಸಲು ನಿರ್ಧರಿಸಿದೆವು.’

‘ಶ್ರೀಗಳು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಅವರಿಗೆ ಕೆಲ ದಿನಗಳವರೆಗೆ ಔಷಧೋಪಚಾರ ಮಾಡಬೇಕಿದೆ’ ಎಂದು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.