ಸೋಮವಾರ, ಮಾರ್ಚ್ 27, 2023
22 °C

ಎಸ್ಸೆಸ್ಸೆಲ್ಸಿ: ಗ್ರಾಮೀಣ, ವಿದ್ಯಾರ್ಥಿನಿಯರ ಮೇಲುಗೈ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಸ್ಸೆಸ್ಸೆಲ್ಸಿ: ಗ್ರಾಮೀಣ, ವಿದ್ಯಾರ್ಥಿನಿಯರ ಮೇಲುಗೈ

ಹಾವೇರಿ: ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿನಿಯರು ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿದ್ದಾರೆ. ಅನುದಾನಿತ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳೇ ಉತ್ತಮ ಸಾಧನೆ ಮಾಡಿವೆ.

ಪರೀಕ್ಷೆ ಬರೆದ 19,665 ವಿದ್ಯಾರ್ಥಿಗಳ ಪೈಕಿ 13,856 ಮಂದಿ ತೇರ್ಗಡೆ ಹೊಂದಿದ್ದು, ಶೇ 70.46 ಫಲಿತಾಂಶ ಬಂದಿದೆ. ಈ ಪೈಕಿ ಸರ್ಕಾರಿ ಶಾಲೆಗಳಲ್ಲಿ ಶೇ 71.45, ಅನುದಾನಿತ ಶಾಲೆಗಳಲ್ಲಿ ಶೇ 65.11 ಹಾಗೂ ಅನುದಾನ ರಹಿತ ಶಾಲೆಗಳಲ್ಲಿ 80.61 ಫಲಿತಾಂಶ ಬಂದಿದೆ.

ಜಿಲ್ಲೆಯ 12 ಅನುದಾನ ರಹಿತ, 10 ಸರ್ಕಾರಿ ಹಾಗೂ 1 ಅನುದಾನಿತ ಶಾಲೆಗಳು ಶೇ 100 ಫಲಿತಾಂಶ ಪಡೆದಿವೆ. 120 ಸರ್ಕಾರಿ, 89 ಅನುದಾನಿತ ಹಾಗೂ 55 ಅನುದಾನ ರಹಿತ ಶಾಲೆಗಳು ಶೇ 60ಕ್ಕಿಂತ ಹೆಚ್ಚು ಫಲಿತಾಂಶ ಪಡೆದಿವೆ. ಈ ಬಾರಿ ಯಾವುದೇ ಶಾಲೆಗಳು ಶೂನ್ಯ ಫಲಿತಾಂಶ ಪಡೆಯದಿರುವುದು ಶಿಕ್ಷಕರು ನಿಟ್ಟುಸಿರು ಬಿಡುವಂತೆ ಮಾಡಿದೆ.

ಜಿಲ್ಲೆಯಲ್ಲಿ ಒಟ್ಟು 704 ಮಕ್ಕಳು ಅತ್ಯುನ್ನತ (ಶೇ 90+), 2,169 ಉನ್ನತ (ಶೇ 80 ರಿಂದ 89), 7,477 ಪ್ರಥಮ, 2,905 ದ್ವಿತೀಯ, 601 ತೃತೀಯ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ಪಾಸಾದ 13,856 ಮಕ್ಕಳಲ್ಲಿ 10,350 ಮಕ್ಕಳು (ಶೇ 74.69) ಶೇ 40 ಕ್ಕಿಂತ ಅಧಿಕ ಫಲಿತಾಂಶ ಪಡೆದಿರುವುದು ಹೆಮ್ಮೆಯ ವಿಷಯವಾಗಿದೆ.

ವಿದ್ಯಾರ್ಥಿನಿಯರ ಮೇಲುಗೈ:  ಜಿಲ್ಲೆಯಲ್ಲಿ ಈ ಬಾರಿಯೂ ವಿದ್ಯಾರ್ಥಿಗಳಿಗಿಂತ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ.  ಪರೀಕ್ಷೆ ಬರೆದ 9,410 ವಿದ್ಯಾರ್ಥಿಗಳ ಪೈಕಿ 6,098 ಮಂದಿ ಪಾಸಾಗಿದ್ದು, ಶೇ 64.80 ಫಲಿತಾಂಶ ಬಂದಿದೆ. 10, 255 ವಿದ್ಯಾರ್ಥಿನಿಯರಲ್ಲಿ 7,758  ಪಾಸಾಗಿದ್ದು, ಶೇ  75.65 ಫಲಿತಾಂಶ ಬಂದಿದೆ. ನಗರದಲ್ಲಿ ಶೇ 69.75 ಹಾಗೂ ಗ್ರಾಮೀಣ ಭಾಗದಲ್ಲಿ ಶೇ 70.79 ಫಲಿತಾಂಶ ಬಂದಿದೆ. 

‘ಜಿಲ್ಲೆಯಲ್ಲಿ ಜನವರಿಯಿಂದ ಮಾರ್ಚ್‌ 27ರ ವರೆಗೆ ವಿದ್ಯಾರ್ಥಿಗಳಿಗೆ ಪುನರ್‌ ಅವಲೋಕನ, ಪ್ರಶ್ನೆ ಪತ್ರಿಕೆ ಬಿಡಿಸುವುದು, ಸರಣಿ ಪರೀಕ್ಷೆ ನಡೆಸುವುದು, ರಸ ಪ್ರಶ್ನೆ, ಗುಂಪು ಚರ್ಚೆ ನಡೆಸಲಾಗಿತ್ತು. ಅಲ್ಲದೇ, ತಾಯಂದಿರ ಸಭೆ, ಮನೆ ಭೇಟಿ, ದೂರವಾಣಿ ಮೂಲಕ ಸಲಹೆ ಮುಂತಾದ ಕಾರ್ಯ ಕ್ರಮಗಳನ್ನು ನಡೆಸಲಾಗಿತ್ತು. ಆದರೂ ನಿರೀಕ್ಷಿತ ಫಲಿತಾಂಶ ಸಾಧ್ಯವಾಗಿಲ್ಲ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಶಿವನಗೌಡ ಪಾಟೀಲ ತಿಳಿಸಿದ್ದಾರೆ.

‘ಜಿಲ್ಲೆಯ ಶಿಕ್ಷಕರು ಪರಿಣಾಮಕಾರಿ ಯಾಗಿ ಪ್ರಯತ್ನಿಸಿದ್ದು, ಫಲಿತಾಂಶ ಸುಧಾರಣೆಗೆ ಇನ್ನೂ ಕ್ರಿಯಾತ್ಮಾಕ ಶೈಕ್ಷಣಿಕ ಕಾರ್ಯಕ್ರಮಗಳನ್ನು ಯೋಜಿಸಲಾಗುವುದು. ಲಯನ್ಸ್ ಪೃಥ್ವಿ ಆರ್. ಮಾಂಡ್ರೆ ಜಿಲ್ಲೆಗೆ ಅಧಿಕ ಅಂಕ ಪಡೆದಿದ್ದಾಳೆ. ಇದು ಈ ತನಕ ಜಿಲ್ಲೆಯಲ್ಲಿ ವಿದ್ಯಾರ್ಥಿಗಳು ಪಡೆದ ಅಂಕಗಳಿಗಿಂತ ಅತಿ ಹೆಚ್ಚಿನ ಅಂಕವಾಗಿದೆ’ ಎಂದು ಅವರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.