7

ತ್ವರಿತ ಬದಲಾವಣೆ ತಾತ್ಕಾಲಿಕ!

ಕೆ. ಜಿ. ಕೃಪಾಲ್
Published:
Updated:

ಷೇರುಪೇಟೆಯ ಚಾಲನೆ ಎಷ್ಟು ಹರಿತವಾಗಿರುತ್ತದೆ ಎನ್ನುವುದಕ್ಕೆ ಗುರುವಾರ ಫಾರ್ಮಾ ವಲಯದ ಇಂಡೋಕೋ ರೆಮಿಡೀಸ್ ಕಂಡ ಏರಿಳಿತ ವೇಗ

ನಿದರ್ಶನವಾಗಿದೆ.ಈ ಹಿಂದೆ ಅಮೆರಿಕದ ಎಫ್‌ಡಿಎ ಕೆಲವು ಆಕ್ಷೇಪಣೆ ಎತ್ತಿದ ಕಾರಣ ಭಾರಿ ಕುಸಿತಕ್ಕೊಳಗಾಗಿದ್ದ ಇಂಡೋಕೋ ರೆಮಿಡೀಸ್ ಲಿಮಿಟೆಡ್‌ ಷೇರಿನ ಬೆಲೆ ದಿಢೀರನೆ ಏರಿಕೆ ಕಂಡು ₹250ರ ಹಂತ ತಲುಪಿ ನಂತರ ಹಿಂದಿನ ದರಕ್ಕೆ ಮರಳಿತು. ಏರಿಕೆ ಮತ್ತು ಇಳಿಕೆಯ ಅತಿಯಾದ ವೇಗ ನಿರ್ಧರಿಸಲು ಸಮಯ ನೀಡದಷ್ಟು ತ್ವರಿತವಾಗಿತ್ತು. ಈ ರೀತಿಯ ಏರಿಳಿತದ ಹಿಂದೆ ಮತ್ತೊಮ್ಮೆ ಈ ಕಂಪೆನಿಯ ಉತ್ಪಾದನೆಯೊಂದಕ್ಕೆ ಅಮೆರಿಕದ ಎಫ್‌ಡಿಎಯ ಅನುಮತಿ ದೊರೆತಿದೆ ಎಂಬ ಕಾರಣವಿರುವುದು ಗಮನಾರ್ಹ.ದೇಶದಲ್ಲಿ ಮುಂಗಾರು ಈ ಹಿಂದಿನಂತೆ ಸಾಮಾನ್ಯವಾಗಿರುತ್ತದೆ ಎಂದು ಹವಾಮಾನ ಇಲಾಖೆಯ ಮುನ್ಸೂಚನೆ ನೀಡಿದೆ. ಅಂತರ ರಾಷ್ಟ್ರೀಯ ಪೇಟೆಗಳು ಚುರುಕಾಗಿದ್ದ ಕಾರಣ, ಸಂವೇದಿ ಸೂಚ್ಯಂಕ 315 ಅಂಶ ಏರಿಕೆ ಕಂಡಿತು. ಈ ವರದಿಯು ಮುಂದಿನ ವರ್ಷದವರೆಗೂ ಅನ್ವಯವಾಗುವಂತಿದ್ದರೂ ಪೇಟೆಯ ಸ್ಪಂದನ ಕೇವಲ ಆ ದಿನಕ್ಕೆ ಮಾತ್ರ ಸೀಮಿತವಾಗಿದ್ದು, ನಂತರದ ದಿನ ತಟಸ್ಥ ವಾತಾವರಣ ನಿರ್ಮಿಸಿತ್ತು. ಅಂದರೆ ಯಾವುದೇ ಒಂದು ಸಕಾರಾತ್ಮಕ ಅಥವಾ ನಕಾರಾತ್ಮಕ ಸುದ್ದಿಗಳಿಗೆ ದೊರೆಯುವ ತ್ವರಿತ ಬದಲಾವಣೆ  ತಾತ್ಕಾಲಿಕ. ಪ್ರತಿ ಷೇರಿಗೆ ಎರಡರಂತೆ

( 2:1 ರ ಅನುಪಾತ) ಬೋನಸ್ ಷೇರು ಪ್ರಕಟಿಸಿದ ಬಯೋಕಾನ್ ಷೇರು ಬೆಲೆ  ಬೋನಸ್ ಪ್ರಕಟಣೆಗಿಂತ ಮುಂಚೆಯೇ ₹1,185 ತಲುಪಿ ಪ್ರಕಟಣೆಯ ನಂತರ ಕುಸಿಯುತ್ತಿದೆ. ಇದಕ್ಕೆ ಅಮೆರಿಕದ ಎಫ್‌ಡಿಎ ಆಕ್ಷೇಪಣೆ ಪೂರಕ ಅಂಶವಾಗಿವೆ.ಸತತ ಇಳಿಕೆಯಿಂದ ₹981ರ ಸಮೀಪ ವಾರಾಂತ್ಯ ಕಂಡಿದೆ. ಮುಂದಿನ ತಿಂಗಳು ಬೋನಸ್ ಷೇರು ವಿತರಣೆಗೆ ಷೇರುದಾರರ ಅಂಚೆ ಮತದಾನದ ಮೂಲಕ ಒಪ್ಪಿಗೆ ಪಡೆಯಲು ಕೊನೆಯದಿನವಾದ್ದರಿಂದ ಮುಂದಿನ ದಿನಗಳಲ್ಲಿ ಏರಿಕೆಯ ಸಾಧ್ಯತೆ  ಇದೆ.ಒಂದೇ ತಿಂಗಳಲ್ಲಿ ಗರಿಷ್ಠದಿಂದ ಕನಿಷ್ಟ: ಷೇರುಪೇಟೆಯಲ್ಲಿ ಕ್ಷಿಪ್ರವಾಗಿ ಹಣಮಾಡಿದೆವೆಂದು ಹೇಳಿಕೊಳ್ಳುವರು, ಅಷ್ಟೇ  ವೇಗದಲ್ಲಿ ಹಣ ಹೇಗೆ ಕರಗುವುದೆಂದು ಕಲ್ಪಿಸಿಕೊಂಡಿರಲಿಕ್ಕಿಲ್ಲ. ಕೆಳಮಧ್ಯಮ ಶ್ರೇಣಿ ಕಂಪೆನಿ  ಶಿಲ್ಪಿ ಕೇಬಲ್ ಟೆಕ್ನಾಲಜಿಸ್ ಲಿಮಿಟೆಡ್ ಷೇರಿನ ಬೆಲೆ ಒಂದು ತಿಂಗಳ ಹಿಂದಷ್ಟೇ ಅಂದರೆ ಏಪ್ರಿಲ್‌13 ರಂದು ₹252ರಲ್ಲಿ ವಾರ್ಷಿಕ ಗರಿಷ್ಠದ ದಾಖಲೆ ನಿರ್ಮಿಸಿತು. ಆದರೆ,  ಅಲ್ಲಿಂದ ನಿರಂತರವಾಗಿ ಕುಸಿಯುತ್ತಾ ಸರಿಯಾಗಿ ಒಂದು ತಿಂಗಳಲ್ಲಿ ಅಂದರೆ ಮೇ 12ರಂದು ವಾರ್ಷಿಕ ಕನಿಷ್ಠ ₹67.45ಕ್ಕೆ ಕುಸಿದಿದೆ.   ಕಂಪೆನಿಯ ವಿರುದ್ಧ ರಾಷ್ಟ್ರೀಯ ಕಂಪೆನಿ ಕಾನೂನು ನ್ಯಾಯಮಂಡಳಿಯಲ್ಲಿ  ದಿವಾಳಿ ಕಾಯ್ದೆ ಅಡಿಯಲ್ಲಿ ದೂರು ದಾಖಲು ಮಾಡಿರುವುದು ಈ ಭಾರಿ ಕುಸಿತಕ್ಕೆ ಕಾರಣವಾಗಿದೆ. ಈ ಮಧ್ಯೆ ಕಂಪೆನಿಯ ಆಡಳಿತ ಮಂಡಳಿ ಸಭೆಯನ್ನು ಕೋರಂ ಕೊರತೆಯ ಕಾರಣ  ಒಂದು ವಾರ  ಮುಂದೂಡಿತ್ತಾದರೂ  ಮತ್ತೆ  ಏ.25 ರಂದು  ಅದೇ ಕಾರಣಕ್ಕಾಗಿ ರದ್ದುಪಡಿಸಲಾಯಿತು. 2004 ರಲ್ಲಿ 1: 1 ರ ಅನುಪಾತದ ಬೋನಸ್ ವಿತರಿಸಿದ್ದ ಈ ಕಂಪೆನಿ ಈಗ ಮತ್ತೊಮ್ಮೆ 28 ರಂದು ಬೋನಸ್ ಷೇರು ವಿತರಿಸುವ ಕಾರ್ಯಸೂಚಿ ಪ್ರಕಟಿಸಿದೆ. ಈ ಗೊಂದಲದ ವಾತಾವರಣದಲ್ಲಿ ಕಂಪೆನಿಯ ಸೆಕ್ರೇಟರಿ ಮತ್ತು ಮುಖ್ಯ ಹಣಕಾಸು ಅಧಿಕಾರಿ ಜತೆಗೆ ಇಬ್ಬರು ಸ್ವತಂತ್ರ ನಿರ್ದೇಶಕರು ರಾಜೀನಾಮೆ ನೀಡಿದ್ದಾರೆ.ಪೇಟೆಯ ವಹಿವಾಟು ಸೋಮವಾರ ₹3.26 ಲಕ್ಷ ಕೋಟಿಯಾದರೆ ಮಂಗಳವಾರ ಅದು ₹3.58 ಲಕ್ಷ ಕೋಟಿಯಾಗಿತ್ತು. ಆದರೆ, ಬುಧವಾರ ಸಂವೇದಿ ಸೂಚ್ಯಂಕ 315 ಅಂಶ ಏರಿಕೆ ಕಂಡ ದಿನ ₹4.82 ಲಕ್ಷ ಕೋಟಿ ತಲುಪಿತು.

ಸೋಜಿಗವೆಂದರೆ ಗುರುವಾರ ವಹಿವಾಟಿನ ಗಾತ್ರ ₹779 ಲಕ್ಷ ಕೋಟಿಗೆ ಜಿಗಿಯಿತಾದರೂ ಶುಕ್ರವಾರ ಮತ್ತೊಮ್ಮೆ ₹4.01 ಲಕ್ಷ ಕೋಟಿಗೆ ಇಳಿಯಿತು. ಅಂದರೆ ಸಂವೇದಿ ಸೂಚ್ಯಂಕ ದಾಖಲೆಯ ಮಟ್ಟಕ್ಕೆ ತಲುಪಿದಾಗ ಹೆಚ್ಚಿನ ಪ್ರಮಾಣದ ಮಾರಾಟ ಪ್ರಕ್ರಿಯೆ ನಡೆದಿರಲುಬಹುದು.ಒಟ್ಟಾರೆ ಈ ವಾರ ಗುರುವಾರ ಮಧ್ಯಂತರದಲ್ಲಿ ಸಂವೇದಿ ಸೂಚ್ಯಂಕ 30,366 ಅಂಶ ತಲುಪಿ ಉನ್ನತ ಮಟ್ಟದ ಸರ್ವಕಾಲೀನ ದಾಖಲೆ ನಿರ್ಮಿಸಿದೆ.  ಅಲ್ಲದೆ ಅಂದಿನ ಪೇಟೆಯ ಬಂಡವಾಳೀಕರಣ ಮೌಲ್ಯ ₹126.69 ಲಕ್ಷ ಕೋಟಿಯಲ್ಲಿದ್ದುದು ಸಹ ಸಾರ್ವಕಾಲೀಕ ದಾಖಲೆಯಾಗಿದೆ. ಮಾಧ್ಯಮ ಶ್ರೇಣಿಯ ಮತ್ತು ಕೆಳಮಧ್ಯಮ ಶ್ರೇಣಿಯ ಸೂಚ್ಯಂಕ ಸಹ ಸರ್ವಕಾಲೀನ ಗರಿಷ್ಠ ಮಟ್ಟ ತಲುಪಿವೆ.  ವಿದೇಶಿ ವಿತ್ತೀಯ ಸಂಸ್ಥೆಗಳು ₹3,917 ಕೋಟಿ ಮೌಲ್ಯದ ಷೇರು ಖರೀದಿಸಿದರೆ, ಇದುವರೆಗೂ ಸತತವಾದ ಕೊಳ್ಳುವಿಕೆಯಲ್ಲಿದ್ದ ಸ್ಥಳೀಯ ವಿತ್ತೀಯ ಸಂಸ್ಥೆಗಳು ₹1,297 ಕೋಟಿ ಮೌಲ್ಯದ ಷೇರು ಮಾರಾಟಮಾಡಿವೆ. ಬೋನಸ್ ಷೇರು: ಪೆಟ್ರೋನೆಟ್ ಎಲ್‌ಎನ್‌ಜಿ, ಗೋದ್ರೇಜ್ ಕನ್ಸೂಮರ್ ಪ್ರಾಡಕ್ಟ್ಸ್, ಪ್ಲಾಸ್ಟಿಬೆಂಡ್ಸ್ ಇಂಡಿಯಾ  ಕಂಪೆನಿಗಳು 1:1 ರ ಅನುಪಾತದ ಬೋನಸ್ ಷೇರು ಪ್ರಕಟಿಸಿವೆ.ಕಲ್ಲಂ ಸ್ಪಿನ್ನಿಂಗ್ ಮಿಲ್ಸ್ ಲಿಮಿಟೆಡ್ 27 ರಂದು ಮತ್ತು ಶಿಲ್ಪಿ ಕೇಬಲ್ ಟೆಕ್ನಾಲಜಿಸ್ 28 ರಂದು ಬೋನಸ್ ಷೇರು ವಿತರಣೆ ಪರಿಶೀಲಿಸಲಿವೆ.ಹಕ್ಕಿನ ಷೇರು: ಪಿನ್ ಕಾನ್ ಸ್ಪಿರಿಟ್ಸ್ ಲಿಮಿಟೆಡ್  22 ರಂದು ಹಕ್ಕಿನ ಷೇರು ವಿತರಣೆ ಬಗ್ಗೆ ನಿರ್ಧರಿಸಲಿದೆ.ಮುಖಬೆಲೆ ಸೀಳಿಕೆ:  ಅಡ್ವಾನ್ಸ್  ಎಂಜೈಮ್‌ ಟೆಕ್ನಾಲಜಿಸ್ ಲಿಮಿಟೆಡ್‌ ಷೇರಿನ ಮುಖಬೆಲೆಯನ್ನು ₹10 ರಿಂದ ₹2 ಕ್ಕೆ ಸೀಳಲು ಮೇ 26 ನಿಗದಿತ ದಿನವಾಗಿದೆ.ಪೋಕರ್ಣ ಲಿಮಿಟೆಡ್‌ ಕಂಪೆನಿ ಷೇರಿನ ಮುಖಬೆಲೆಯನ್ನು ₹10 ರಿಂದ ₹2 ಕ್ಕೆ ಸೀಳಲಿದೆ. ಬೊರೊಸಿಲ್ ಗ್ಲಾಸ್ ವರ್ಕ್ಸ್ 13 ರಂದು ಷೇರಿನ ಮುಖಬೆಲೆ ಸೀಳಿಕೆ ಪರಿಶೀಲಿಸಲಿದೆ.ಜಮುನಾ ಆಟೋ ಲಿಮಿಟೆಡ್‌ ಕಂಪೆನಿಯು 20 ರಂದು ಷೇರಿನ ಮುಖಬೆಲೆ ಸೀಳಿಕೆ ಪರಿಶೀಲಿಸಲಿದೆ. ಸಫಾರಿ ಇಂಡಸ್ಟ್ರೀಸ್ ಇದೇ 23 ರಂದು ಷೇರಿನ ಮುಖಬೆಲೆ ಸೀಳಿಕೆಯನ್ನು ಪರಿಶೀಲಿಸಲಿದೆ.

ವಾರದ ವಿಶೇಷ

ಲಾಭಾಂಶ ವಿತರಣೆ


ಗ್ಲಾಕ್ಸೋ ಸ್ಮಿಥ್ ಕ್ಲೈನ್ ಕನ್ಸೂಮರ್ ಪ್ರತಿ ಷೇರಿಗೆ ₹70,  ಇಂಟರ್ ಗ್ಲೋಬಲ್ ಏವಿಯೇಷನ್ ₹34, ಹೀರೊ ಮೋಟೊಕಾರ್ಪ್ ₹30 (ಮುಖ ಬೆಲೆ ₹2), ಇಕ್ರಾ  ₹27.00, ಪಿರಾಮಲ್  ಎಂಟರ್ ಪ್ರೈಸಸ್  ₹21,  ಡಾಕ್ಟರ್ ರೆಡ್ಡಿಸ್ ಲ್ಯಾಬ್  ₹20,  ಹಿಂದೂಜಾ ವೆಂಚರ್ಸ್  ₹17.50,  ಬಲ್ಮರ್ ಲೌರಿ ₹17,  ನೆಸ್ಲೆ  ₹15, ಬನಾರಸ್ ಹೋಟೆಲ್  ₹15.  ಟ್ರೈಟಾನ್ ವಾಲ್ವ್  ₹15,  ಅಟೋಮೊಬೈಲ್ ಕಾರ್ಪೊರೇಷನ್ ಆಫ್ ಗೋವಾ ₹12.50, ಆರ್ಎಸ್‌ಡಬ್ಲ್ಯೂಎಂ ಲಿಮಿಟೆಡ್  ₹12.50,  ಗಾಡ್ರೇಜ್ ಕನ್ಸೂಮರ್ಸ್ ₹12,  ಫೋರ್ಸ್ ಮೋಟಾರ್ಸ್ ಮತ್ತು ಪ್ಯಾನಾಸೋನಿಕ್‌ ಕಾರ್ಬನ್ ಕಂಪೆನಿ ₹10,  ಎಸ್ಎಂಎಲ್ ಇಸುಜು  ₹8, ಗ್ಲೊಸ್ಟರ್ ಮತ್ತು ಬ್ಲೂ ಸ್ಟಾರ್  ₹7.50 (ಮುಖ ಬೆಲೆ ₹2),  ಗ್ಲೊಸ್ಟರ್ ಲಿಮಿಟೆಡ್‌  ₹7.50, ಏಶಿಯನ್ ಪೇಂಟ್ಸ್  ₹7.65, ಸೆಂಚುರಿ ಎಂಕ, 8ಕೆ ಮೈಲ್ಸ್ ನೀಲಕಮಲ್ ಕಂಪೆನಿ ತಲಾ ₹7, ಇಗಾರ್ಷಿ ಮೋಟಾರ್  ₹661, ಹೆಚ್‌ಸಿಎಲ್ ಟೆಕ್  ₹6 (₹2), ಶ್ರೀ ಕಾಳಹಸ್ತಿ ಪೈಪ್ಸ್  ₹6, ಪಿ ಎನ್ ಬಿ ಹೌಸಿಂಗ್ ಫೈನಾನ್ಸ್  ₹6, ಸೆಂಚುರಿ ಟೆಕ್ಸ್ ಟೈಲ್ಸ್  ₹5.50, ಪೆಟ್ರೋನೆಟ್ ಎಲ್ಎನ್‌ಜಿ, ಓಸಿ ಎಲ್ ಇಂಡಿಯಾ, ಥೈರೊಕೆರ್, ಓಸಿ ಎಲ್ ಇಂಡಿಯಾ, ವ್ಯಾಲಿಯೆಂಟ್ ಆರ್ಗ್ಯಾನಿಕ್ಸ್ ಮತ್ತು ಕಿರ್ಲೋಸ್ಕರ್ ಇಂಜಿನ್ ಪ್ರತಿ ಷೇರಿಗೆ ₹5, ಸಂಬಂಧಂ ಸ್ಪಿನ್ನಿಂಗ್ ಮಿಲ್ಸ್, ಸ್ವರಾಜ್ ಅಟೋಮೊಟಿವ್ಸ್ ಮತ್ತು ಭಾರ್ತಿ ಇನ್ಫ್ರಾಟಲ್ ₹4,  ಹ್ಯಾವೆಲ್ಸ್  ₹3.50 (₹3.50), ಜಿಎಂಡಿಸಿ, ಪೋಕರ್ಣ, ಪೌಷಕ್, ಅಡೂರ್ ಇನ್ಫೋಟೆಕ್, ಫುಡ್ಸ್ ಅಂಡ್ ಇನ್ಸ್  ₹3.

ಗೂಳಿ–ಕರಡಿಯಲ್ಲ, ಕದುರೆ–ಕುರಿ!

ಷೇರುಪೇಟೆಯ ಚಟುವಟಿಕೆ ದಿನದ ಆರಂಭದಿಂದ ಮಧ್ಯಾಹ್ನ 3.30 ರವರೆಗೂ ವೈವಿಧ್ಯಮಯ ಕಾರಣಗಳಿಗೆ ಸ್ಪಂದಿಸಿ ವಿಭಿನ್ನ ರೀತಿಯ ಏರಿಳಿತ ಪ್ರದರ್ಶಿಸುತ್ತದೆ.  ಹಾಗಾಗಿ ದಿನದ ಮಧ್ಯಂತರದಲ್ಲೂ ಅವಕಾಶಗಳನ್ನು ಕಲ್ಪಿಸುವುದು. ಈ ಕಾರಣಕ್ಕಾಗಿ ಷೇರುಗಳ ಏರಿಳಿತಗಳ ಬಗ್ಗೆ ಮಾಹಿತಿ ಅಗತ್ಯ. 

ಈ ದಿಶೆಯಲ್ಲಿ ಪೇಟೆಯ ಮಧ್ಯವರ್ತಿಗಳಾದ ದಲ್ಲಾಲರು, ಉಪದಲ್ಲಾಲರು, ಫ್ರಾಂಚೈಸಿ, ಅಧಿಕೃತ ವ್ಯಕ್ತಿಗಳ ಸಹಾಯ ಪಡೆಯುವುದು ಅನಿವಾರ್ಯವಾಗಿದೆ.  ಪೇಟೆಯ ಚಟುವಟಿಕೆಯಲ್ಲಿ ಗೂಳಿ - ಕರಡಿ ಎಂದು ಬಿಂಬಿಸುವುದು ಹಳೆಯ ರೀತಿಯಾಗಿ,  ಈಗ ಅದನ್ನು 'ಕುದುರೆ- ಕುರಿ' ಎನ್ನುವ ಹಂತಕ್ಕೆ ಬದಲಾವಣೆಗಳಾಗಿವೆ. ಪೇಟೆಯ ಚಲನೆಯ ವೇಗವು ಕುದುರೆಯಂತಿದ್ದು, ಕುಸಿತದ ಸಮಯದಲ್ಲಿ ಕುರಿಗಳಂತಾಗುವುದನ್ನು ಕಾಣಬಹುದಾಗಿದೆ.  ಈ ವಾರ  ಪ್ರಮುಖ ಕಂಪೆನಿಗಳಾದ ಪ್ರಾಕ್ಟರ್ ಅಂಡ್ ಗ್ಯಾಂಬಲ್,  ಎಬಿಬಿ,  ಕೇರ್ ರೇಟಿಂಗ್ಸ್,  ಹ್ಯಾವೆಲ್ಸ್,  ಭಾರತಿ ಏರ್ಟೆಲ್, ಇನ್ಫೊಸಿಸ್, ಚೆನ್ನೈ  ಪೆಟ್ರೋ, ರಿಲಯನ್ಸ್ ಇನ್ಫ್ರಾ, ಎವರೆಸ್ಟ್ ಇಂಡಸ್ಟ್ರೀಸ್ ರೀತಿಯ ಕಂಪೆನಿಗಳು ಆಕರ್ಷಕ ಏರಿಕೆ ಕಂಡವು. ಆದರೆ, ಕಂಪೆನಿಗಳಾದ ಗ್ಲೇನ್ ಮಾರ್ಕ್ ಫಾರ್ಮಾ, ಬಯೋಕಾನ್, ಯಸ್ ಬ್ಯಾಂಕ್, ಸಿಂಜಿನ್ ಇಂಟರ್‌ನ್ಯಾಷನಲ್ ಮುಂತಾದ ಕಂಪೆನಿಗಳು ಕುಸಿದ ರೀತಿ ಆಘಾತಕಾರಿಯಾಗಿತ್ತು.ಸುದ್ದಿಗಳಿಗೆ, ಬೆಳವಣಿಗೆಗಳಿಗೆ ಪೇಟೆಯು ಸ್ಪಂದಿಸುವ ರೀತಿ ಉತ್ಪ್ರೇಕ್ಷಿತವಾಗಿರುತ್ತದೆ. ಹಾಗಾಗಿ ಅದು ಸ್ಥಿರತೆ ಕಾಣದೆ ಹಿಂದಿರುಗುತ್ತದೆ.  ಶುಕ್ರವಾರ ಯಸ್ ಬ್ಯಾಂಕ್ ಕುಸಿದ ರೀತಿಯಾಗಲಿ, ಅಥವಾ ಗ್ಲೇನ್ ಮಾರ್ಕ್ ಫಾರ್ಮಾ ಕುಸಿದ ರೀತಿಯಾಗಲಿ ಇಂತಹವರನ್ನು ಎದೆಗುಂದಿಸುವಂತಿತ್ತು. ಅಖಾಡಕ್ಕೆ ಧುಮುಕುವ ಮುನ್ನ ಎಚ್ಚರ: ಪೇಟೆಯಲ್ಲಿ ಷೇರಿನ ಬೆಲೆಗಳು ಗರಿಷ್ಠ ಮಟ್ಟದಲ್ಲಿರುವಾಗ ಹೆಚ್ಚು ಸೂಕ್ಷ್ಮತೆ ಮೈಗೂಡಿಸಿಕೊಂಡಿರುತ್ತದೆ.  ಏಕೆ ಈ ರೀತಿಯ ಅಸಹಜ ಏರಿಳಿತ  ಪ್ರದರ್ಶಿತವಾಗುತ್ತದೆ ಎಂದರೆ  ಷೇರುಪೇಟೆಯ ಪ್ರಮುಖ ಗುಣ ಶೀಘ್ರ ನಗದೀಕರಣವಾಗಿರುತ್ತದೆ.ಈ ಕಾರಣ ಅಲ್ಪಕಾಲೀನ ನಗದು ಪೇಟೆಯತ್ತ ಹರಿದುಬಂದು ಲಾಭಗಳಿಕೆಯ ಕಾರ್ಯ ಸಿದ್ಧಿಸಿಕೊಳ್ಳಲು ಪ್ರಯತ್ನಿಸುವುದು.  ಬ್ಯಾಂಕ್ ಬಡ್ಡಿದರಕ್ಕಿಂತ ಉತ್ತಮ ಲಾಭ ಗಳಿಸಿಕೊಳ್ಳುವ ಪ್ರಯತ್ನವು ಏರಿಳಿತಗಳಿಗೆ ಕಾರಣವಾಗುತ್ತದೆ.

ಮತ್ತೊಂದು ಸಹಜವಾದರೂ ಆಶ್ಚರ್ಯಕರ ಸುದ್ಧಿಯೆಂದರೆ ಹೊರಗೆ ಬಿಸಿಲಿನ ತಾಪ ಹೆಚ್ಚಾಗಿರುವುದರಿಂದ ಮನೆಯಲ್ಲೇ / ಕಚೇರಿಯಲ್ಲೇ ಕುಳಿತು ಷೇರು ವ್ಯಾಪಾರ ನಡೆಸಲು ಅನುಕೂಲಕರವಾಗಿರುವುದರಿಂದ ವೃತ್ತಿಪರರು ಹೆಚ್ಚು ತೊಡಗಿಸಿಕೊಳ್ಳುವರು. ಈ ಎಲ್ಲ ಕಾರಣಗಳು ಅಲ್ಪಕಾಲೀನ ಅವಕಾಶ ಸೃಷ್ಟಿಸಿ ಆಕರ್ಷಿಸುತ್ತವೆ. ಚಟುವಟಿಕೆಯ ಅಖಾಡಕ್ಕೆ ಧುಮುಕುವ ಮುನ್ನ ಎಚ್ಚರಿಕೆ ವಹಿಸಿರಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry