ಕಲ್ಯಾಣಿ ಕಟ್ಟಿದ ಶ್ರೀರಾಮಚಂದ್ರ ಮಿಷನ್‌ ಧ್ಯಾನಕೇಂದ್ರ!

7

ಕಲ್ಯಾಣಿ ಕಟ್ಟಿದ ಶ್ರೀರಾಮಚಂದ್ರ ಮಿಷನ್‌ ಧ್ಯಾನಕೇಂದ್ರ!

Published:
Updated:
ಕಲ್ಯಾಣಿ ಕಟ್ಟಿದ ಶ್ರೀರಾಮಚಂದ್ರ ಮಿಷನ್‌ ಧ್ಯಾನಕೇಂದ್ರ!

ಮೈಸೂರು: ‘ಬೋರ್‌ವೆಲ್‌ ಯುಗದಲ್ಲಿ ಕಲ್ಯಾಣಿ ಕಟ್ಟಿಸ್ತೀರಾ? ಹುಚ್ಚರು ಎಂದು ನಕ್ಕವರು ಅನೇಕರು. ಈಗ ಈ ಕಲ್ಯಾಣಿ ನೋಡಿ ನಾವು ನಗುತ್ತಿದ್ದೇವೆ’ ಎಂದು ಪರಿಸರವಾದಿ ಯು.ಎನ್‌.ರವಿ ಹೆಮ್ಮೆಯಿಂದ ಹೇಳಿದರು.

ನಗರದ ಕೂರ್ಗಳ್ಳಿ ಕೈಗಾರಿಕೆ ಪ್ರದೇಶಕ್ಕೆ ಹೊಂದಿಕೊಂಡಿರುವ ಲಿಂಗದೇವರಕೊಪ್ಪಲಿಗೆ ಸೇರಿದ ಶ್ರೀರಾಮಚಂದ್ರ ಮಿಷನ್‌ ಎಂಬ ಧ್ಯಾನಕೇಂದ್ರದಲ್ಲಿ ಕಲ್ಯಾಣಿ ನಳನಳಿಸುತ್ತಿದೆ. 1.80 ಕೋಟಿ ಲೀಟರ್ ಸಂಗ್ರಹ ಸಾಮರ್ಥ್ಯದ ಈ ಕಲ್ಯಾಣಿಯಲ್ಲಿ ಈಗಾಗಲೇ 30 ಲಕ್ಷ ಲೀಟರ್‌ ಸಂಗ್ರಹವಾಗಿದೆ. ಇದರಿಂದ ಅಂತರ್ಜಲ ಹೆಚ್ಚಿ, ಬತ್ತಿಹೋಗಿದ್ದ 2 ಕೊಳವೆ ಬಾವಿಗಳಲ್ಲಿ ನೀರು ಬರುತ್ತಿದೆ. ವಿವಿಧ ಬಗೆಯ ಪಕ್ಷಿಗಳು ಬರುತ್ತಿವೆ. ಮುಖ್ಯವಾಗಿ 22 ಎಕರೆಯ ಈ ಧ್ಯಾನಕೇಂದ್ರದಲ್ಲಿ ಮಳೆ ನೀರು ಈ ಕಲ್ಯಾಣಿಗೆ ಹರಿದುಬಂದು ಸಂಗ್ರಹವಾಗಲಿದೆ. ಇದರ ಪಕ್ಕದಲ್ಲಿರುವ ಲಿಂಗದೇವರಕೊಪ್ಪಲು ಕೆರೆ ತುಂಬಲೂ ಸಾಧ್ಯವಾಗುತ್ತಿದೆ. ತೆಂಗು, ಸಪೋಟಾ, ಮಾವು ಮೊದಲಾದ ಹಣ್ಣು, ಹೂವನ ಸೇರಿದಂತೆ 1 ಸಾವಿರಕ್ಕೂ ಅಧಿಕ ಗಿಡಗಳಿಗೆ ನೀರು ಉಣಿಸಲು ಸಾಧ್ಯವಾಗುತ್ತಿದೆ. ಜತೆಗೆ, ಈ ಧ್ಯಾನಕೇಂದ್ರಕ್ಕೆ ಬರುವವರಿಗೆ ಆಕರ್ಷಕ ತಾಣವಾಗಿದೆ.

‘18 ಅಡಿ ಆಳವಿರುವ ಕಲ್ಯಾಣಿಯೊಳಗೆ ಸಣ್ಣ ಹೊಂಡವಿದ್ದು, ಇದನ್ನು ಕಲ್ಯಾಣಿಯ ಕಣ್ಣು ಎನ್ನುತ್ತೇವೆ. ಇದು ಜಲದ ಮೂಲವಾಗಿದ್ದು ಬತ್ತು

ವುದೇ ಇಲ್ಲ. ಆಗೀಗ ಸುರಿಯುವ ಮಳೆನೀರು ಹರಿದು ಬಂದು ಇಲ್ಲಿ ಸಂಗ್ರಹವಾಗುತ್ತಿದೆ. ಇದನ್ನು ಕಟ್ಟಿದ್ದು ಕಳೆದ ವರ್ಷದ ಅಕ್ಟೋಬರ್ ತಿಂಗಳಲ್ಲಿ. ಮಳೆ ಕಡಿಮೆಯಾದ ಕಾರಣ ಗಿಡಗಳನ್ನು ಉಳಿಸಿಕೊಳ್ಳಲು 70–80 ಟ್ಯಾಂಕರ್ ಮೂಲಕ ನೀರು ಉಣಿಸುತ್ತಿದ್ದೆವು. ಇದಕ್ಕಾಗಿ ಕಲ್ಯಾಣಿ ಕಟ್ಟಲು ಮುಂದಾದೆವು’ ಎನ್ನುತ್ತಾರೆ ಧ್ಯಾನ ಕೇಂದ್ರದ ವಲಯ ಸಂಚಾಲಕ ಮಧುಸೂದನ್.

‘ಬರುವ ಮಳೆನೀರನ್ನು ಹಿಡಿದಿಟ್ಟುಕೊಳ್ಳಲು ಹೊಂಡ ಮಾಡಲು ಮುಂದಾದೆವು. ಯು.ಎನ್‌.ರವಿ ಅವರ ಸಲಹೆ ಮೇರೆಗೆ ಕಲ್ಯಾಣಿ ಕಟ್ಟಿಸಿದೆವು. ಎತ್ತಿದ ಮಣ್ಣನ್ನು ಬೇರೆಲ್ಲೋ ಹಾಕದೆ ಸುತ್ತ ಹಾಕಿಸಿದೆವು. ಗೋಡೆಗೆ ಸಿಮೆಂಟ್‌ ಬದಲು ಕಲ್ಲು ಬಳಸಿದ್ದೇವೆ. ಇದರಿಂದ ವಾತಾವರಣ ತಂಪಾಗಿದೆ. ನೈಸರ್ಗಿಕ ಸೌಂದರ್ಯ ಸವಿಯಲು ಸಾಧ್ಯವಾಗುತ್ತಿದೆ. ಇನ್ನೊಂದು ಸಾವಿರ ಗಿಡ ನೆಡಲು ಸಜ್ಜಾಗಿದ್ದೇವೆ’ ಎಂದು ಅವರು ಮಾಹಿತಿ ನೀಡಿದರು.

ಕಲ್ಯಾಣಿ ಸುತ್ತ ಬಯಲು ರಂಗಮಂದಿರ ಸಿದ್ಧಗೊಂಡಿದೆ. ಸಭೆ, ಸಮಾರಂಭ, ಸಂಗೀತ ಕಾರ್ಯಕ್ರಮ ಏರ್ಪಡಿಸಲು ಅನುಕೂಲವಾಗಿದೆ. ಇದರೊಂದಿಗೆ ಸಹಜಮಾರ್ಗದ ಧ್ಯಾನ ಪದ್ಧತಿಯೊಂದಿಗೆ ನೀರು ಸಂಗ್ರಹ, ನೀರಿನ ನಿರ್ವಹಣೆಯನ್ನೂ ಹೇಳಿಕೊಡಲಾಗುತ್ತಿದೆ. ಜತೆಗೆ, ನೀರಿನ ನಿರ್ವಹಣೆಯ ಪ್ರಾಯೋಗಿಕವೂ ಇಲ್ಲಿ ನಡೆಯುತ್ತಿದೆ. ಕೈ ತೊಳೆಯುವ ನೀರು ಶುದ್ಧವಾಗಿ ಸಂಗ್ರಹಿಸಬೇಕೆಂದು ನಲ್ಲಿಗಳ ಕೆಳಗೆ ನೈಲಾನ್ ಜಾಲರಿ ಅಳವಡಿಸಲಾಗಿದೆ. ತಿಂಡಿ ತಿಂದಾದ ಮೇಲೆ ಅವರವರೇ ತಟ್ಟೆಗಳನ್ನು ತೊಳೆಯಬೇಕು. ಇದಕ್ಕಾಗಿ ಹಂತ ಹಂತವಾಗಿ ತೊಳೆಯುವ ಪ್ರಕ್ರಿಯೆ ಇದೆ. ಮೊದಲು ಡಬ್ಬಿಯೊಂದರಲ್ಲಿ ಮುಸುರೆ ಹಾಕಿದ ಮೇಲೆ ಟಬ್‌ವೊಂದರಲ್ಲಿ ತಟ್ಟೆ ಎದ್ದಬೇಕು. ಎರಡನೆಯ ಟಬ್‌ನಲ್ಲಿ ಸ್ಪಂಜ್‌ ಬಳಸಿ ಜಿಡ್ಡು ತೆಗೆಯುವ ಸೋಪಿನ ನೀರಲ್ಲಿ ಅದ್ದಬೇಕು. ಮೂರನೆಯ ಟಬ್‌ನಲ್ಲಿರುವ ಬಿಸಿನೀರಲ್ಲಿ ಅದ್ದಿ ತೆಗೆಯುವುದರಿಂದ ಜಿಡ್ಡು ಹೋಗುತ್ತದೆ. ಹೀಗೆ 120 ಜನರು ಕೇವಲ 150 ಲೀಟರ್ ನೀರಲ್ಲಿ ತಟ್ಟೆ ತೊಳೆದಿಡುತ್ತಾರೆ. ಇದರಿಂದ ಒಂದೊಂದು ತಟ್ಟೆಗೂ ಖರ್ಚಾಗುವ ನೀರನ್ನು ಉಳಿಸಿದಂತಾಗುತ್ತದೆ ಎಂದು ಅವರು ಹೇಳಿದರು.

* ನೀರನ್ನು ಸಂಪಾದಿಸುವುದರ ಜತೆಗೆ ನಿರ್ವಹಣೆಯೂ ಗೊತ್ತಿರಬೇಕು. ಜೋರಾಗಿ ಮಳೆ ಬಂತೆಂದು ಹೆಚ್ಚು ಖರ್ಚು ಮಾಡುವುದಲ್ಲ. ಜೋಪಾನವಾಗಿ ಬಳಸಬೇಕು

–ಯು.ಎನ್‌.ರವಿ, ಪರಿಸರವಾದಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry