ಎಟಿಎಂ ಯಂತ್ರ ಒಡೆದು ಕಳವು ಯತ್ನ

ಚಿಕ್ಕಬಳ್ಳಾಪುರ: ನಗರದ ಶಿಡ್ಲಘಟ್ಟ ರಸ್ತೆಯಲ್ಲಿ ಸೇಂಟ್ ಜೋಸೆಫ್ ಕಾಲೇಜಿನ ಬಳಿ ಇರುವ ಆಕ್ಸಿಸ್ ಬ್ಯಾಂಕ್ ಎಟಿಎಂ ಕೇಂದ್ರದಲ್ಲಿ ದುಷ್ಕರ್ಮಿಯೊಬ್ಬ ಶನಿವಾರ ರಾತ್ರಿ ಎಟಿಎಂ ಯಂತ್ರ ಒಡೆದು ಹಣ ಕಳವಿಗೆ ನಡೆಸಿದ ಯತ್ನ ವಿಫಲಗೊಂಡಿದೆ.
ದುಷ್ಕೃತ್ಯದ ಸುಳಿವು ಸಿಗಬಾರದೆಂದು ಚಾಲಾಕಿ ಕಳ್ಳ ಕೇಂದ್ರದಲ್ಲಿ ಅಳವಡಿಸಿದ್ದ ಸಿ.ಸಿ ಟಿವಿ ಕ್ಯಾಮೆರಾ ಮತ್ತು ಅದರ ಮಾಹಿತಿ ಸಂಗ್ರಹಿಸಲು ಇಟ್ಟಿದ್ದ ಹಾರ್ಡ್‌ಡಿಸ್ಕ್ ತೆಗೆದುಕೊಂಡು ಪರಾರಿಯಾಗಿದ್ದಾನೆ. ಕೇಂದ್ರದ ಭದ್ರತಾ ಸಿಬ್ಬಂದಿ ಭಾನುವಾರ ನಸುಕಿನ ಜಾವ 4 ಗಂಟೆ ಸುಮಾರಿಗೆ ಕೇಂದ್ರಕ್ಕೆ ಬಂದು ನೋಡಿದಾಗ ಈ ಘಟನೆ ಬೆಳಕಿಗೆ ಬಂದಿದೆ.
ಘಟನೆ ಕುರಿತು ಭದ್ರತಾ ಸಿಬ್ಬಂದಿ ನಾರಾಯಣಸ್ವಾಮಿ ಅವರು ಪೊಲೀಸರಿಗೆ ಮಾಹಿತಿ ನೀದ್ದಾರೆ. ಬೆಳಿಗ್ಗೆ 6 ಗಂಟೆ ಸುಮಾರಿಗೆ ಎಸ್‌ಪಿ ಕಾರ್ತಿಕ್ ರೆಡ್ಡಿ, ಡಿವೈಎಸ್‌ಪಿ ಎಂ.ಎಲ್. ಪುರುಷೋತ್ತಮ್ ಮತ್ತು ನಗರಠಾಣೆ ಎಸ್‌ಐ ರಾಮಪ್ರಸಾದ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
‘ಭದ್ರತಾ ಸಿಬ್ಬಂದಿ ಅನಾರೋಗ್ಯದ ಕಾರಣ ರಾತ್ರಿ 11.30ರ ಸುಮಾರಿಗೆ ಎಟಿಎಂ ಕೇಂದ್ರದ ಬಾಗಿಲು ಮುಚ್ಚಿ ಬೀಗ ಹಾಕದೆ ಮನೆಗೆ ತೆರಳಿದ್ದಾರೆ. ಇದನ್ನು ಗಮನಿಸಿರುವ ಕಳ್ಳ ಮಧ್ಯರಾತ್ರಿ ಕೇಂದ್ರಕ್ಕೆ ನುಗ್ಗಿ ರಾಡ್‌ನಿಂದ ಎಟಿಎಂ ಯಂತ್ರ ಒಡೆದು ಹಣ ದೋಚಲು ಪ್ರಯತ್ನಿಸಿದ್ದಾನೆ. ಅದು ಸಾಧ್ಯವಾಗದಿದ್ದಾಗ ಸಿ.ಸಿಟಿವಿ ಕ್ಯಾಮೆರಾ ಮತ್ತದರ ಹಾರ್ಡ್‌ಡಿಸ್ಕ್ ಕಿತ್ತುಕೊಂಡು ಪರಾರಿಯಾಗಿದ್ದಾನೆ’ ಎಂದು ಪೊಲೀಸರು ಮಾಹಿತಿ ನೀಡಿದರು.
‘ಎಟಿಎಂ ಕೇಂದ್ರದ ಏಜೆನ್ಸಿಯವರು ಸಂಪರ್ಕಿಸಲು ಪ್ರಯತ್ನಿಸಲಾಯಿತು. ಆದರೆ ರಜೆ ಕಾರಣಕ್ಕೆ ಅವರು ಸಂಪರ್ಕಕ್ಕೆ ಸಿಗುತ್ತಿಲ್ಲ. ಸೋಮವಾರ ಏಜೆನ್ಸಿ ಮತ್ತು ಬ್ಯಾಂಕ್ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಕಲೆ ಹಾಕಲಾಗುತ್ತದೆ’ ಎಂದು ತಿಳಿಸಿದರು. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.