3

ಕಾನೂನಿನ ಸ್ಫಟಿಕಸ್ಪಷ್ಟ ‘ಅಮ್ಮ’ ಲೀಲಾ ಸೇಠ್‌

Published:
Updated:
ಕಾನೂನಿನ ಸ್ಫಟಿಕಸ್ಪಷ್ಟ ‘ಅಮ್ಮ’ ಲೀಲಾ ಸೇಠ್‌

ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ತಪ್ಪಿತಸ್ಥರಿಗೆ ದೆಹಲಿ ಹೈಕೋರ್ಟ್‌ ವಿಧಿಸಿದ್ದ ಮರಣ ದಂಡನೆಯನ್ನು ಸುಪ್ರೀಂ ಕೋರ್ಟ್‌ ಮೇ 5ರ ಶುಕ್ರವಾರ ಎತ್ತಿ ಹಿಡಿಯಿತು. ಈ ತೀರ್ಪು ಹೊರಬಿದ್ದ ರಾತ್ರಿಯೇ ನ್ಯಾಯಮೂರ್ತಿ ಲೀಲಾ ಸೇಠ್ (1930–2017) ಅವರೂ ತೀರಿಕೊಂಡಿದ್ದು ಕಾಕತಾಳೀಯ.2012ರ ಡಿಸೆಂಬರ್ 16ರಂದು ನಿರ್ಭಯಾ ಮೇಲೆ ನಡೆದ ಸಾಮೂಹಿಕ  ಅತ್ಯಾಚಾರ  ಹಾಗೂ ನಂತರ ಆಕೆಯ ಸಾವಿನ ಹಿನ್ನೆಲೆಯಲ್ಲಿ ಅತ್ಯಾಚಾರ ಕಾನೂನುಗಳ ಮರು ಪರಿಶೀಲನೆಗೆ ನೇಮಕವಾಗಿದ್ದ ನ್ಯಾಯಮೂರ್ತಿ ಜೆ.ಎಸ್. ವರ್ಮಾ ಸಮಿತಿಯ ಮೂವರು ಸದಸ್ಯರಲ್ಲಿ ಲೀಲಾ ಸೇಠ್ ಅವರೂ ಒಬ್ಬರಾಗಿದ್ದರು ಎಂಬುದು ಇಲ್ಲಿ ಮನನೀಯ. ಆದರೆ ಲೀಲಾ ಸೇಠ್, ಗಲ್ಲು ಶಿಕ್ಷೆಯ ಪರವಾಗಿರಲಿಲ್ಲ. ‘ಜೀವ ತೆಗೆಯಲು ನಾನು ಯಾರು? ನಾನೇನು ದೇವರೆ?’ ಎಂಬುದು ಅವರು ಮಂಡಿಸುವ ವಾದವಾಗಿತ್ತು.ನ್ಯಾಯಮೂರ್ತಿ ವರ್ಮಾ ನೇತೃತ್ವದ ಸಮಿತಿಯು, ಕೇವಲ 29 ದಿನಗಳಲ್ಲೇ 631 ಪುಟಗಳ ವರದಿಯನ್ನು 2013ರ ಜನವರಿ 23ರಂದು ನೀಡಿತ್ತು. ಈಗ ನ್ಯಾಯಮೂರ್ತಿ ವರ್ಮಾ ಅವರೂ ನಮ್ಮ ಜೊತೆಗಿಲ್ಲ. ‘ಕೆಲವು ವಿಚಾರಗಳ ಬಗ್ಗೆ ಲೀಲಾ ಸೇಠ್ ವಾದಗಳು ಚೆನ್ನಾಗಿ ಗೊತ್ತಿರುವಂತಹದ್ದೇ ಆಗಿದ್ದರೂ ಪೂರ್ವಗ್ರಹರಹಿತ ದೃಷ್ಟಿಕೋನಗಳಿಗೆ ಅವರು ಸದಾ ಮುಕ್ತ ಮನಸ್ಸು ಹೊಂದಿರುತ್ತಿದ್ದರು.

ನಿರ್ದಿಷ್ಟವಾಗಿ ವೈವಾಹಿಕ ಅತ್ಯಾಚಾರವನ್ನೂ ಪ್ರಮುಖ ಅಪರಾಧ ವಿಚಾರವಾಗಿ ಸಮಿತಿಯ ವರದಿಯಲ್ಲಿ ಸೇರಿಸಲು ನಾವೆಲ್ಲರೂ ನಿರ್ಧರಿಸಿದ್ದು  ಅವರಿಗೆ ತುಂಬಾ ಸಂತಸ  ತಂದಿತ್ತು’ ಎಂದು ಸಮಿತಿಯ ಮತ್ತೊಬ್ಬರು ಸದಸ್ಯರಾದ ಮಾಜಿ ಸಾಲಿಸಿಟರ್ ಜನರಲ್ ಗೋಪಾಲ್ ಸುಬ್ರಮಣಿಯಂ ಅವರು ಲೀಲಾ ಸೇಠ್ ಅವರನ್ನು ನೆನಪಿಸಿಕೊಂಡಿದ್ದಾರೆ.ಈ ಸಮಿತಿ ಮಾಡಿದ ಶಿಫಾರಸುಗಳು ಅಪರಾಧ ಕಾನೂನು (ತಿದ್ದುಪಡಿ) ಕಾಯಿದೆ– 2013ಕ್ಕೆ ಕಾರಣವಾಯಿತು. ಇದರಿಂದಾಗಿ ಅತ್ಯಾಚಾರದ ವ್ಯಾಖ್ಯೆಯೇ ಬದಲಾಯಿತು. ಆದರೂ ‘ವೈವಾಹಿಕ ಅತ್ಯಾಚಾರ’ ಶಿಕ್ಷಾರ್ಹಗೊಳಿಸುವುದು ಹಾಗೂ ತೀವ್ರತರ ಅತ್ಯಾಚಾರ ಪ್ರಕರಣಗಳಲ್ಲೂ ಶಿಕ್ಷೆಯನ್ನು ಜೀವಾವಧಿ ಸೆರೆವಾಸಕ್ಕೆ ಸೀಮಿತಗೊಳಿಸುವ ಕೆಲವು ಶಿಫಾರಸುಗಳು ಸರ್ಕಾರದಿಂದ ಅನುಮೋದನೆಗೊಂಡಿಲ್ಲ. ಹಾಗೆಯೇ  ಅತ್ಯಾಚಾರ ಲಿಂಗ ನಿರ್ದಿಷ್ಟವಾದುದಲ್ಲ ಎಂಬುದೂ ವರ್ಮಾ ಸಮಿತಿಯ ವಾದವಾಗಿತ್ತು.

ಪುರುಷರು ಹಾಗೂ ಲಿಂಗತ್ವ ಅಲ್ಪಸಂಖ್ಯಾತರಾದ ಸಲಿಂಗ ಕಾಮಿಗಳು ಮತ್ತು ಲಿಂಗ ಪರಿವರ್ತಿತ ಸಮುದಾಯದವರೂ ಸಂತ್ರಸ್ತರಾಗಬಹುದು ಎಂಬಂಥ ವರ್ಮಾ ಸಮಿತಿ ಶಿಫಾರಸನ್ನೂ ಹೊಸ ಕಾನೂನು ಅಳವಡಿಸಿಕೊಳ್ಳಲಿಲ್ಲ.ಸಾಂಪ್ರದಾಯಿಕ ಕೈಮಗ್ಗ ರೇಷ್ಮೆ ಸೀರೆ, ದೊಡ್ಡ ಕುಂಕುಮ ಹಾಗೂ ಮಂಗಳಸೂತ್ರ ಧರಿಸಿದ  ಸರಾಸರಿ ಎತ್ತರದ   ಲೀಲಾ ಸೇಠ್ ಅವರು ನೋಡಲು ಸಾಂಪ್ರದಾಯಿಕ ಗೃಹಿಣಿಯಾಗಿ ಕಂಡುಬರುತ್ತಿದ್ದರು. ಆದರೆ ಅವರು ತಮ್ಮ ವೃತ್ತಿಬದುಕಿನುದ್ದಕ್ಕೂ ಏರಿದ ಎತ್ತರಗಳು ಅನನ್ಯ.  ನಮ್ಮ  ನಾಲ್ಕು ಪ್ರಮುಖ ಹೈಕೋರ್ಟ್‌ಗಳಲ್ಲಿ ಈಗ ಮಹಿಳಾ ಮುಖ್ಯ ನ್ಯಾಯಮೂರ್ತಿಗಳಿದ್ದಾರೆ.

ಆದರೆ 1991ರಲ್ಲಿ ಹಿಮಾಚಲ ಪ್ರದೇಶದ ಮುಖ್ಯ ನ್ಯಾಯಮೂರ್ತಿಯಾಗಿ ಅವರು ನೇಮಕವಾದಾಗ ಲಿಂಗತ್ವ ಪೂರ್ವಗ್ರಹಗಳ ಅಗೋಚರ ‘ಗಾಜಿನ ಛಾವಣಿ’ಯನ್ನು ಭೇದಿಸಿದ್ದ ಮೊದಲ ಮಹಿಳೆಯಾಗಿದ್ದರು.

ಭಾರತದಲ್ಲೇ ರಾಜ್ಯ ಹೈಕೋರ್ಟ್ ಒಂದರ ಪ್ರಥಮ ಮಹಿಳಾ ಮುಖ್ಯ ನ್ಯಾಯಮೂರ್ತಿ ಎಂಬ ದಾಖಲೆ ಸ್ಥಾಪಿಸಿದರು.  ದೊಡ್ಡ ಕೋರ್ಟ್ ಹಾಲ್‌ನಲ್ಲಿ ವಕೀಲರಿಗೆ ಹಾಗೂ ಮೊಕದ್ದಮೆಗಳನ್ನು ಹೂಡಿದವರಿಗೆ ಗೋಚರವಾಗುವುದಕ್ಕಾಗಿ ಕುರ್ಚಿಯಲ್ಲಿ ಹೆಚ್ಚಿನ ಕುಷನ್‌ಗಳನ್ನು ಇಡಬೇಕಾಗುತ್ತಿತ್ತಂತೆ.ಲೀಲಾ ಸೇಠ್ ಅವರು ಕಾನೂನು ಕ್ಷೇತ್ರಕ್ಕೆ ಬಂದಿದ್ದೇ ಅನಿರೀಕ್ಷಿತವಾಗಿ. 1951ರಲ್ಲಿ ಅವರು ಬಾಟಾ ಷೂ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಪತಿ ಪ್ರೇಮ್ ಸೇಠ್ ಜೊತೆ  ಕೊಲ್ಕತ್ತಾದಲ್ಲಿ ಜೀವನಯಾನ ಆರಂಭಿಸಿದ ಗೃಹಿಣಿಯಾಗಿದ್ದರು ಅಷ್ಟೆ. 1954ರಲ್ಲಿ ಪತಿಗೆ ಲಂಡನ್‌ಗೆ ವರ್ಗಾವಣೆಯಾಗುತ್ತದೆ. 

ಆಗ ಆರು ತಿಂಗಳ ಮಾಂಟೆಸರಿ ಕೋರ್ಸ್ ಮಾಡಲು ಅವರು ನಿರ್ಧರಿಸಿದ್ದರು. ಇದರಿಂದ ಭಾರತಕ್ಕೆ ವಾಪಸಾದಾಗ ನರ್ಸರಿ ಸ್ಕೂಲ್ ಆರಂಭಿಸ ಬಹುದೆಂಬುದು ಅವರ ಆಲೋಚನೆಯಾಗಿತ್ತು. ಆದರೆ ಪತಿಯ ಪ್ರೋತ್ಸಾಹ ಹಾಗೂ ಇನ್ನೂ ಹೆಚ್ಚಿನ ಸವಾಲಿ ನದನ್ನು ಯಾಕೆ ಪ್ರಯತ್ನಿಸಬಾರದು ಎಂಬಂಥ  ಅಂತಃ ಪ್ರೇರಣೆಯೂ ನಿರ್ಧಾರ ಬದಲಿಸಲು ಕಾರಣವಾಯಿತು.

ಮೂರು ವರ್ಷದ ಮಗು ವಿಕ್ರಂ ಸೇಠ್‌ನನ್ನು ನೋಡಿಕೊಳ್ಳ ಬೇಕಾದುದರಿಂದ ತರಗತಿಗಳಿಗೆ ಕಟ್ಟುನಿಟ್ಟಾದ ಹಾಜರಾತಿ ಇಲ್ಲದಿದ್ದರೂ  ನಡೆಯುತ್ತದೆ ಎಂಬ ಕಾರಣಕ್ಕಾಗಿ ಅವರು ಕಾನೂನು ತರಗತಿಗಳಿಗೆ ಸೇರಿಕೊಂಡರು.ಕಾನೂನು ಪರೀಕ್ಷೆ ಎದುರಾದಾಗ ಎರಡನೇ ಮಗು ಶಾಂತುಂಗೆ ಕೇವಲ ಆರು ತಿಂಗಳಾಗಿತ್ತು.  ಕಾನೂನು ಪರೀಕ್ಷೆಯ ಫಲಿತಾಂಶ ಪ್ರಕಟವಾದಾಗ ಅವರು ಮೊದಲ ಸ್ಥಾನ ಗಳಿಸಿದ್ದರು. ಈ ಸಾಧನೆ ಗೌರವಿಸಿ ಲಂಡನ್‌ನ ‘ಸ್ಟಾರ್’ ಪತ್ರಿಕೆಯಲ್ಲಿ  28 ವರ್ಷದ ಲೀಲಾ ಸೇಠ್ ಅವರು 6 ತಿಂಗಳ ಮಗುವನ್ನೆತ್ತಿ ಕೊಂಡಿದ್ದ  ಚಿತ್ರ ಪ್ರಕಟಿಸಿ ‘ಮದರ್ ಇನ್ ಲಾ’ (ಕಾನೂನಿನ ಅಮ್ಮ) ಎಂಬ ಚಿತ್ರಶೀರ್ಷಿಕೆ ಕೊಡಲಾಗಿತ್ತು.ಆದರೇನು? ಭಾರತಕ್ಕೆ ಹಿಂದಿರುಗಿದಾಗ ಕಾನೂನು ಕ್ಷೇತ್ರಕ್ಕೆ ಪ್ರವೇಶ ಗಿಟ್ಟಿಸಿಕೊಳ್ಳುವುದು ಸುಲಭವೇನಾಗಿರಲಿಲ್ಲ.  1958ರಲ್ಲಿ ಕೋಲ್ಕತ್ತದಲ್ಲಿ ಹಿರಿಯ ವಕೀಲರೊಬ್ಬರ ಬಳಿಗೆ ಹೋದಾಗ ‘ಕಾನೂನು ವೃತ್ತಿ ಸೇರುವ ಬದಲು ವಿವಾಹವಾಗುವುದು ಲೇಸು’ ಎನ್ನುತ್ತಾರೆ. ‘ಆದರೆ ಸರ್, ನನಗೀಗಾಗಲೇ ವಿವಾಹವಾಗಿದೆ’ ಎಂದು ಲೀಲಾ ಸೇಠ್ ಹೇಳಿದಾಗ ‘ಹಾಗಿದ್ದರೆ ಮಗು ಪಡೆದುಕೊಳ್ಳುವುದು ಒಳ್ಳೆಯದು’ ಎನ್ನುತ್ತಾರೆ.

‘ನನಗೀಗಾಗಲೇ ಮಗುವಿದೆ’ ಎಂದರೆ ‘ಒಂದೇ  ಮಗು ಒಳ್ಳೆಯದಲ್ಲ. ಇನ್ನೊಂದು ಮಗು ಬೇಕು’ ಎನ್ನುತ್ತಾರೆ . ‘ನನಗೀಗಾಗಲೇ ಇಬ್ಬರು ಮಕ್ಕಳಿದ್ದಾರೆ’ ಎಂದಾಗ ಅಚ್ಚರಿಗೊಳ್ಳುವ ವಕೀಲರು ‘ಪಟ್ಟು  ಬಿಡದ ಮಹಿಳೆಯಾಗಿ ಕಾಣುತ್ತೀರಿ ನೀವು. ಕಾನೂನು ವೃತ್ತಿಯಲ್ಲೂ ಒಳ್ಳೆಯದು ಸಾಧಿಸಬಹುದು’  ಎಂದು ಕಾನೂನು ವೃತ್ತಿಗೆ ಪ್ರವೇಶ ಒದಗಿಸಿಕೊಡುತ್ತಾರೆ. ನಂತರ ಹಲವು ವಿಧಗಳಲ್ಲಿ ಕಲಿಕೆಗೂ ನೆರವಾಗುತ್ತಾರೆ.1959ರಲ್ಲಿ  ಪಟ್ನಾ ಹೈಕೋರ್ಟ್‌ನಲ್ಲಿ ವೃತ್ತಿ ಆರಂಭಿಸುತ್ತಾರೆ. ಇವರಿಗೂ ಮುಂಚೆ ಅಲ್ಲಿ ಯಶಸ್ವಿ ವಕೀಲರಾಗಿ ಕಾರ್ಯ ನಿರ್ವಹಿಸುತ್ತಿದ್ದ ಮಹಿಳೆ  ಧರ್ಮಶಿಲಾ ಲಾಲ್. ಶೌಚಾಲಯ ಸಮಸ್ಯೆಯಿಂದ ಹಿಡಿದು ಯಾವುದೇ ವೃತ್ತಿಯಲ್ಲಿ ಮೊದಲ ಪೀಳಿಗೆಯ ಮಹಿಳೆಯರು ಎದುರಿಸು ವಂತಹ  ಅನೇಕ ತಾರತಮ್ಯ ಧೋರಣೆಗಳಿಗೆ ಮುಖಾಮುಖಿಯಾಗುತ್ತಲೇ ವೃತ್ತಿಯಲ್ಲಿ ಪ್ರತಿಪಾದಿಸಿ ಕೊಳ್ಳುತ್ತಾ ಸಾಗುವುದು ಲೀಲಾ ಸೇಠ್ ಗೆ ಅನಿವಾರ್ಯವಾಗುತ್ತದೆ. 1969ರಲ್ಲಿ ಪಟ್ನಾ ಬಿಟ್ಟು ಕೊಲ್ಕತ್ತಾ ಹೈಕೋರ್ಟ್‌ನಲ್ಲಿ ವಕೀಲ ವೃತ್ತಿ ಶುರುಮಾಡಿದಾಗಲೂ ಪುರುಷ ಸಹೋದ್ಯೋಗಿಗಳ ಮನ್ನಣೆ ಪಡೆದುಕೊಳ್ಳಲು  ಪರಿಶ್ರಮ ಪಡಬೇಕಾಗುತ್ತದೆ. ವಿವಾಹ, ವಿಚ್ಛೇದನ, ಮಕ್ಕಳ ಪೋಷಕತ್ವಕ್ಕೆ ಸಂಬಂಧಿಸಿದಂತಹ ಮೊಕದ್ದಮೆಗಳನ್ನು ಲೀಲಾ ಸೇಠ್ ಪ್ರಜ್ಞಾಪೂರ್ವಕವಾಗಿಯೇ ತೆಗೆದುಕೊಳ್ಳುತ್ತಿರಲಿಲ್ಲ. ಯಾಕೆಂದರೆ ಇಂತಹ ಮೊಕದ್ದಮೆಗಳು ಮಹಿಳಾ ವಕೀಲರಿಗೇ ಸೇರಿದ್ದು ಎಂಬ ಭಾವನೆ ಇತ್ತು. ಹೀಗಾಗಿ ಅವರು ತೆರಿಗೆ ವಕೀಲರಾಗಿ ಹೆಸರು ಮಾಡಿದರು.1972ರಿಂದ 1978ರವರೆಗೆ ದೆಹಲಿ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್‌ ಗಳಲ್ಲೂ ವಕೀಲಿ ವೃತ್ತಿ ನಿರ್ವಹಿಸಿದರು. ತೆರಿಗೆ, ರಿಟ್ ಅರ್ಜಿ, ಸಾಂವಿಧಾನಿಕ, ಸಿವಿಲ್ ಹಾಗೂ ಕ್ರಿಮಿನಲ್ ಮೇಲ್ಮನವಿಗಳನ್ನೂ ನಿರ್ವಹಿಸಿದರು.ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಇಂದಿರಾಗಾಂಧಿ ಮನೆಗೆ ತಾನು ನಿಯಮಿತವಾಗಿ ಹೋಗುತ್ತಿದ್ದೆ ಎಂಬಂತಹ ವದಂತಿಗಳು 1977ರ ಚುನಾವಣೆಗಳಲ್ಲಿ ಜನತಾ ಪಕ್ಷ ಅಧಿಕಾರಕ್ಕೆ ಬಂದ ನಂತರ ಹಬ್ಬಿಕೊಳ್ಳುವುದನ್ನು ತಮ್ಮ ಆತ್ಮಚರಿತ್ರೆ ‘ಆನ್ ಬ್ಯಾಲೆನ್ಸ್‌’ನಲ್ಲಿ ಲೀಲಾ ಸೇಠ್ ನೋವಿನಿಂದ ವಿವರಿಸುತ್ತಾರೆ. ಈ ಕಾರಣದಿಂದಾಗಿ ಪತಿ ನರಳ ಬೇಕಾಗುತ್ತದೆ.

ಖಾಸಗಿ ವಲಯದ ಬಾಟಾ ಕಂಪೆನಿ ಕೆಲಸ ಬಿಟ್ಟು ಸ್ಟೇಟ್ ಟ್ರೇಡಿಂಗ್ ಕಾರ್ಪೊರೇಷನ್ ನಿರ್ದೇಶಕ ಹುದ್ದೆಗೆ ಸೇರಿಕೊಂಡಿದ್ದ ಪತಿ ಪ್ರೇಮ್ ವಿರುದ್ಧ ಯಂತ್ರೋ ಪಕರಣ ಖರೀದಿಗೆ ಸಂಬಂಧಿಸಿದಂತೆ ತನಿಖೆ ನಡೆಸುವುದಕ್ಕಾಗಿ ಮೂರು ತಿಂಗಳ ರಜೆ ಮೇಲೆ ಹೋಗಲು ಹೇಳಲಾಗುತ್ತದೆ. ಲೀಲಾ ಸೇಠ್ ಬರೆಯುತ್ತಾರೆ: 1977ರ ಜುಲೈ 27ರಂದು ಸಿಬಿಐ ನಮ್ಮ ಮನೆಯ ಮೇಲೆ ದಾಳಿ ನಡೆಸಿತು.  ಫೋನ್  ಕದ್ದು ಕೇಳಲಾಯಿತು. ಅಂಚೆ  ಪತ್ರಗಳನ್ನು ತೆರೆದು ಓದಲಾಯಿತು. ಕಡೆಗೆ ಬ್ರಿಟನ್‌ನ ಲೈಸೆಸ್ಟರ್‌ ನಲ್ಲಿದ್ದ ಮಗ ಶಾಂತುಂ ಅನ್ನೂ  ಪೊಲೀಸ್ ಠಾಣೆಗೆ ಕರೆದು ವಿಚಾರಣೆ ನಡೆಸಲಾಯಿತು. 10 ತಿಂಗಳ ವಿಚಾರಣೆ ನಂತರ ಎಲ್ಲಾ ಆರೋ ಗಳಿಂದ ಪ್ರೇಮ್ ಮುಕ್ತರಾದರು.ಅದಾದ ನಂತರ ಸರ್ಕಾರದ ಕೈಮಗ್ಗ ರಫ್ತು ಕಾರ್ಪೊರೇಷನ್ ಎಂಡಿ ಆಗಿ ಅಧಿಕಾರ ವಹಿಸಿಕೊಳ್ಳಲು ಕೇಳಲಾಯಿತು. ಆದರೆ ನನ್ನ ಒತ್ತಾಯದಿಂದ ಸರ್ಕಾರಿ ಹುದ್ದೆಯಿಂದಲೇ  ಹೊರಬಂದು ಖಾಸಗಿ ವಲಯದ ಟಾಟಾ ಸಂಸ್ಥೆಯಲ್ಲಿ ಪ್ರೇಮ್  ಮತ್ತೆ ಉದ್ಯೋಗ ಪಡೆದುಕೊಂಡರು.’ಲೀಲಾ ಸೇಠ್ ಅವರು ‘ಆನ್ ಬ್ಯಾಲೆನ್ಸ್’ ಪುಸ್ತಕ ಬರೆದದ್ದೂ ಅಚಾನಕ್ಕಾಗಿ. 1992ರಲ್ಲಿ ಪೆಂಗ್ವಿನ್ ಪ್ರಕಾಶನ ಸಂಸ್ಥೆಯಲ್ಲಿದ್ದ   ಡೇವಿಡ್ ಡಾವಿಡಾರ್ ಅವರು ಅನುಭವಗಳನ್ನು ದಾಖಲಿಸಬೇಕೆಂದು ಲೀಲಾ ಸೇಠ್‌ಗೆ ಒತ್ತಾಯಿಸುತ್ತಾರೆ. ನಂತರ ಈಗ 94 ವರ್ಷದವರಾಗಿರುವ ತಮ್ಮ ಪತಿಗೆ 80ನೇ ವರ್ಷದ ಹುಟ್ಟುಹಬ್ಬದ ಉಡುಗೊರೆಯಾಗಿ 2003ರಲ್ಲಿ ಲೀಲಾ ಸೇಠ್  ಅವರು ಬರೆದ  ಆತ್ಮಚರಿತ್ರೆ  ಈಗ ಹಿಂದಿ ಭಾಷೆಗೂ ಅನುವಾದವಾಗಿದೆ.1978ರಲ್ಲಿ ದೆಹಲಿ ಹೈಕೋರ್ಟ್‌ನ ಮೊದಲ  ಮಹಿಳಾ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದ ಲೀಲಾ ಸೇಠ್ ಅವರಿಗೆ ಸುಪ್ರೀಂ ಕೋರ್ಟ್‌ನ ಮೊದಲ ಮಹಿಳಾ ನ್ಯಾಯಮೂರ್ತಿಯಾಗಿ ನೇಮಕವಾಗುವ ಅವಕಾಶವೂ ಇತ್ತು.

1988ರಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಆರ್.ಎಸ್. ಪಾಠಕ್ ಅವರೂ ಈ ಸಾಧ್ಯತೆ ಬಗ್ಗೆ ಇಂಗಿತ ನೀಡಿದ್ದರು. ಆದರೆ ಉನ್ನತ ನ್ಯಾಯಾಂಗಕ್ಕೆ ನೇಮಕಾತಿ ರಾಜಕೀಯದಿಂದಾಗಿ  ಕಡೆಗೂ ಅವಕಾಶ ಸಿಗಲಿಲ್ಲ,ನಿವೃತ್ತಿಯ ನಂತರ ಲೀಲಾ ಸೇಠ್ 15ನೇ ಭಾರತ ಕಾನೂನು ಆಯೋಗದ ಸದಸ್ಯೆಯಾಗಿದ್ದರು. ಹಿಂದೂ ಉತ್ತರಾಧಿಕಾರ ಕಾಯಿದೆಯಲ್ಲಿ ಹಲವು ಬದಲಾವಣೆ ಗಳಿಗೆ ಕಾರಣರಾದರು. ಇದರಿಂದಾಗಿ ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣುಮಕ್ಕಳಿಗೆ ಹಕ್ಕು ನೀಡಲಾಯಿತು. ಜೀವಿತದ ಕಡೆಯವರೆಗೂ ಕಾನೂನು ವಲಯದಲ್ಲಿ ಸಕ್ರಿಯರಾಗಿಯೇ ಇದ್ದ ಲೀಲಾ ಸೇಠ್ ಒಟ್ಟು ಮೂರು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಮಕ್ಕಳಿಗೆ ಸಂವಿಧಾನವನ್ನು ವಿವರಿಸುವ ಪುಸ್ತಕ– ‘ವಿ ದಿ ಚಿಲ್ಡ್ರನ್ ಆಫ್ ಇಂಡಿಯಾ’ 2010ರಲ್ಲಿ ಪ್ರಕಟವಾಯಿತು. 2014ರಲ್ಲಿ ಕಡೆಯ ಪುಸ್ತಕ  ‘ಟಾಕಿಂಗ್ ಆಫ್ ಜಸ್ಟೀಸ್: ಪೀಪಲ್ಸ್ ರೈಟ್ಸ್ ಇನ್ ಮಾಡರ್ನ್ ಇಂಡಿಯಾ’ ಬರೆದಾಗ ಅವರ ವಯಸ್ಸು 84. ಐವತ್ತು ವರ್ಷಗಳ ವೃತ್ತಿಯಲ್ಲಿ  ಅನುಭವಿಸಿದ  ವಿಚಾರಗಳ ವಿಶ್ಲೇಷಣೆ ಇಲ್ಲಿದೆ.ಸಲಿಂಗ ಕಾಮ ಅಪರಾಧವಾಗಿಸುವ  ಸೆಕ್ಷನ್ 377ಕ್ಕೆ ಸುಪ್ರೀಂ ಕೋರ್ಟ್  ಮರುಜೀವ   ನೀಡಿದಾಗ ಇದು ತನ್ನನ್ನು ನ್ಯಾಯಮೂರ್ತಿಯಾಗಷ್ಟೇ ಅಲ್ಲ ತಾಯಿಯಾಗಿಯೂ ಏಕೆ ಕಾಡಿತ್ತು ಎಂಬುದನ್ನು ಅವರು ಹೀಗೆ ಹೇಳಿದ್ದರು: ನಮ್ಮ ಮಕ್ಕಳು ಕಷ್ಟಪಡುವವರು, ಪ್ರಪಂಚದಲ್ಲಿ ಏನಾದರೂ ಒಳ್ಳೆಯದು ಮಾಡಲು ಯತ್ನಿಸುತ್ತಿರುವ ಪ್ರೀತಿ ಪಾತ್ರ ಜನರೆಂಬುದು ಗೊತ್ತಿದೆ. ಆದರೆ ನಮ್ಮ ಪುತ್ರ ವಿಕ್ರಂ ಸೇಠ್ (ಪ್ರಸಿದ್ದ ಇಂಗ್ಲಿಷ್ ಕಾದಂಬರಿಕಾರ) ಈಗ ಅಪರಾಧಿ, ಬಂಧನಕ್ಕೊಳಗಾಗದ ಘೋರ ಪಾತಕಿ. ಏಕೆಂದರೆ ಲಕ್ಷಾಂತರ ಭಾರತೀಯರಂತೆ ಅವನು ಸಲಿಂಗ ಕಾಮಿ (ಗೇ). ಸಾಂಪ್ರದಾಯಿಕ ಅರ್ಥದಲ್ಲಿ ತನ್ನ ಮಕ್ಕಳು ನೆಲೆ ನಿಲ್ಲಲಿಲ್ಲ ಎಂಬ ಬಗ್ಗೆಯೂ ಅವರಿಗೆ ಯೋಚನೆಯಾಗಿತ್ತು. ‘ಪುಸ್ತಕಗಳನ್ನು ಬರೆಯುತ್ತಾ ವಿಕ್ರಂ ಮನೆಯಲ್ಲೇ ಇರುತ್ತಿದ್ದ. ಇನ್ನೊಬ್ಬ ಮಗ ಶಾಂತುಂ ಬೌದ್ಧ ಗುರುವಾಗಲು ತರಬೇತಿ ಪಡೆಯುತ್ತಾ ಹಿತ್ತಲಲ್ಲಿ ಧ್ಯಾನ ಮಾಡುತ್ತಿರುತ್ತಿದ್ದ. ಮಗಳು ಆರಾಧನಾ ಬಾಯ್‍ ಫ್ರೆಂಡ್‌ಗಳ  ಜೊತೆ ಸಿನಿಮಾ ನಿರ್ದೇಶನ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುತ್ತಿದ್ದಳು. ಹೀಗಾಗಿ ಯಾವ ಮಕ್ಕಳೂ ಏನೂ ಕೆಲಸ ಮಾಡುವುದಿಲ್ಲ.ಅಪ್ಪ ಅಮ್ಮ ಮಾತ್ರ ದುಡಿಯುತ್ತಲೇ ಇದ್ದಾರೆ ಎಂದು ಕುಟುಂಬದ ಕಾರು ಚಾಲಕ ತನ್ನ ಸಹೋದ್ಯೋಗಿಗಳಿಗೆ ಹೇಳಿದ್ದುದನ್ನೂ ಲೀಲಾ ಸೇಠ್  ಸಭೆಯೊಂದರಲ್ಲಿ ಸ್ಮರಿಸಿಕೊಂಡಿದ್ದರು. ಈ ಕಥೆಗೆ ಜನ ಬಿದ್ದು ಬಿದ್ದು ನಕ್ಕಿದ್ದರು. ಆದರೆ ಆ ನಂತರವೂ ಅವರು ಹೇಳಿದ್ದ ಮಾತುಗಳಿವು: ‘ನಾನು ಸರಿಯಾಗಿ ಮಕ್ಕಳನ್ನು ಬೆಳೆಸಲಿಲ್ಲವೆ? ಇಲ್ಲ. ಮತ್ತೆ ನಾನು ಮಕ್ಕಳನ್ನು ಬೆಳೆಸಬೇಕೆಂದರೆ ಹೀಗೆಯೇ ಬೆಳೆಸುವೆ.’ಪ್ರತಿ ವಿಷಯಕ್ಕೂ ಸ್ಪಷ್ಟತೆ, ನೇರವಂತಿಕೆ ಭಾವತೀವ್ರತೆತುಂಬುವ ಲೀಲಾ ಸಾವಿನಲ್ಲೂ ಉನ್ನತ ಆದರ್ಶ ಮೆರೆದಿದ್ದಾರೆ. ಅವರ ದೇಹವನ್ನು  ಸಂಶೋಧನೆಗಾಗಿ ವೈದ್ಯಕೀಯ ವಿಜ್ಞಾನಗಳ ಸೇನಾ ಕಾಲೇಜಿಗೆ ದಾನ ನೀಡಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry