ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಟುಬಂದಿ ಮತ್ತದರ ಪ್ರಭಾವ

Last Updated 16 ಮೇ 2017, 19:30 IST
ಅಕ್ಷರ ಗಾತ್ರ
ಈಚೆಗೆ ನಡೆದ ನೋಟುಬಂದಿ ಮತ್ತು ಕಪ್ಪುಧನದ ಬಗ್ಗೆ ಸ್ಕ್ರೋಲ್ ಪತ್ರಿಕೆಯ ಓದುಗರ ಸಂಪಾದಕ ರಾಮ್ ಮನೋಹರ್ ರೆಡ್ಡಿ  ಅವರು ಒಂದು ಪುಸ್ತಕ ಬರೆದಿದ್ದಾರೆ. ಅದಕ್ಕೆ ರಿಸರ್ವ್ ಬ್ಯಾಂಕಿನ ಮಾಜಿ ಗವರ್ನರ್ ವೈವಿ ರೆಡ್ಡಿ ಅವರು ಒಂದು ದೀರ್ಘ ಮುನ್ನುಡಿಯನ್ನೂ ಬರೆದಿದ್ದಾರೆ. ನೋಟುಬಂದಿಯ ಹಿಂದಿನ ಆಲೋಚನೆ ಏನಿದ್ದಿರಬಹುದು, ಅದರ ಪ್ರಭಾವವೇನು, ಕಪ್ಪು ಧನದ ಆಯಾಮಗಳೇನು – ಹಾಗೂ ಕಪ್ಪುಧನಕ್ಕೂ ನೋಟುಬಂದಿಗೂ ಇರುವ ಸಂಬಂಧವೇನು ಎನ್ನುವುದನ್ನು ಈ ಪುಸ್ತಕ ಪದರ ಪದರವಾಗಿ ಬಿಡಿಸಿ ಹೇಳುತ್ತದೆ.
 
ನೋಟುಬಂದಿಯ ಉದ್ದೇಶವೇನಿತ್ತು. ಮೊದಲಿಗೆ ಆ ಉದ್ದೇಶವನ್ನು ಪ್ರಧಾನ ಮಂತ್ರಿಗಳು ಹೇಗೆ ವ್ಯಾಖ್ಯಾನಿಸಿದರು, ಆ ವ್ಯಾಖ್ಯಾನ ಹೇಗೆ ಬದಲಾಯಿತು, ವ್ಯಾಖ್ಯಾನಕ್ಕೂ ನೋಟುಬಂದಿಗೂ ಇರುವ ಸಂಬಂಧದ ಪದರಗಳೇನು ಎನ್ನುವುದನ್ನು ರಾಮ್ ಬಿಡಿಸುತ್ತಾ ಹೋಗುತ್ತಾರೆ. ಆ ಕಥೆಯನ್ನು ವ್ಯಾಖ್ಯಾನಿಸಲು ಅವರು ಮಾಹಿತಿಯನ್ನು ಸಮರ್ಪಕವಾಗಿ ಉಪಯೋಗಿಸುತ್ತಾರೆ.  

ನಡೆದ ಘಟನಾವಳಿಯನ್ನು ಸರಳವಾಗಿ ವಿವರಿಸುತ್ತಾ ಹೋಗುತ್ತಾರೆ ವಿನಾ ತಮ್ಮ ನಿಲುವನ್ನು ಎಲ್ಲಿಯೂ ಸ್ಪಷ್ಟವಾಗಿ ಹೇಳುವುದಿಲ್ಲ. ನೋಟುಬಂದಿಯನ್ನು ಟೀಕಿಸುವುದೂ ಇಲ್ಲ, ಅದರಿಂದ ಒಳಿತಾಯಿತೆಂದು ಹೊಗಳುವುದೂ ಇಲ್ಲ.
 
ಇದರಿಂದ ಆಗುವ ತೊಂದರೆಯಿಷ್ಟೇ – ನೋಟುಬಂದಿಯ ಬಗ್ಗೆ ಈಗಾಗಲೇ ಒಂದು ಸ್ಪಷ್ಟ ನಿಲುವನ್ನು ತಳೆದಿರುವ ನನ್ನಂತಹವರಿಗೆ ಈ ಪುಸ್ತಕ ಪರೋಕ್ಷವಾಗಿ ಮಾಹಿತಿಯನ್ನು ಒದಗಿಸುತ್ತದೆಯೇ ಹೊರತು – ನನ್ನ ನಿಲುವನ್ನು ಸಮರ್ಥಿಸಿಕೊಳ್ಳುವ ಅಥವಾ ಬದಲಾಯಿಸಿಕೊಳ್ಳುವ ಯಾವುದೇ ಒತ್ತಾಯಪೂರ್ವಕ ಅಭಿಪ್ರಾಯವನ್ನೂ ಪ್ರತ್ಯಕ್ಷವಾಗಿ ಪ್ರತಿಪಾದಿಸುವುದಿಲ್ಲ.
 
ರಾಮ್, ಮೊದಲಿಗೆ ಪ್ರಧಾನಿ ಮೋದಿ ವ್ಯಾಖ್ಯಾನಿಸಿದ ಮೂರು ಮುಖ್ಯ ಅಂಶಗಳನ್ನು ಪ್ರಸ್ತಾವಿಸಿ ಚರ್ಚಿಸುತ್ತಾರೆ. ಕಪ್ಪುಧನದ ಮೇಲಿನ ಸಮರ, ಆತಂಕವಾದಿಗಳ ಆರ್ಥಿಕತೆಯ ನಾಶ, ಜಾಲಿ ನೋಟುಗಳನ್ನು ಚಲಾವಣೆಯಿಂದ ತೆಗೆಯುವುದು – ಈ ಮೂರು ವಿಷಯಗಳನ್ನು ಪ್ರಧಾನಿ ಪ್ರಸ್ತಾಪಿಸಿದ್ದರು. ರಾಮ್ ಇದರಲ್ಲಿ ಎರಡು ವಿಷಯಗಳನ್ನು ಆಯ್ದು, ಈ ಸಮಸ್ಯೆಯನ್ನು ಎದುರಿಸಲು ಇದ್ದ ಪರಿಕರಗಳೇನು ಎನ್ನುವುದನ್ನು ವಿವರಿಸುತ್ತಾರೆ.
 
ಕಪ್ಪು ಧನದ ಬಗೆಗಿನ ರೂಪುರೇಷೆಗಳ ಭಾಗವನ್ನು ಅದರ ವಿವರಣೆಯನ್ನು ನೋಟುಬಂದಿಯ ಸಂದರ್ಭವನ್ನು ಮೀರಿಯೂ ಓದಬಹುದಾಗಿದೆ. ಇದರಲ್ಲಿ ರಾಮ್ ರೆಡ್ಡಿ ಅವರ ವಿಚಾರದೊಂದಿಗೇ ವೈ. ವಿ. ರೆಡ್ಡಿ ಅವರು ಕಪ್ಪುಧನದ ಬಗ್ಗೆ ಬರೆದಿರುವ ಲೇಖನಗಳ ಸಾರಾಂಶವೂ ನಮಗೆ ಸಿಗುತ್ತದೆ. ಕಪ್ಪುಧನದ ಪರಿಭಾಷೆಯನ್ನು ಅರ್ಥಮಾಡಿಕೊಳ್ಳಲು ಅವರು ಬಳಸುವ ಉದಾಹರಣೆಗಳು ಸರಳವಾಗಿವೆ.
 
ಕಪ್ಪುಧನ ಅನ್ನುವುದರ ಪರಿಭಾಷೆ ಅದರ ಉಪಯೋಗಕ್ಕೆ ತಕ್ಕಂತೆ ಬದಲಾಗುತ್ತದೆ. ಹಾಗೂ ದ್ರವ್ಯತೆ ರೂಪದಲ್ಲಿರುವ ಕಪ್ಪುಧನ ಸ್ಥಾಯಿ ಮೊತ್ತವಲ್ಲ ಎನ್ನುವುದನ್ನು ರಾಮ್ ನಿರೂಪಿಸುತ್ತಾರೆ. ಕಪ್ಪುಧನಕ್ಕೂ ರಾಜಕೀಯಕ್ಕೂ ಇರುವ ನಂಟನ್ನು ಹಾಗೂ ಕಪ್ಪುಧನಕ್ಕೂ ಚಿನ್ನಕ್ಕೂ ಇರುವ ನಂಟನ್ನು ಎರಡು ಭಿನ್ನ ಅಧ್ಯಾಯಗಳಲ್ಲಿ ರಾಮ್ ಚರ್ಚಿಸುತ್ತಾರೆ. ನೋಟುಬಂದಿಯಿಂದ ಕೇವಲ ಧನರೂಪದಲ್ಲಿದ್ದ ಕಪ್ಪುಧನದ ದಾಸ್ತಾನಿನ ಮೇಲೆ ತುಸುಕಾಲದ ಮಟ್ಟಿಗೆ ಮಾತ್ರ ಪ್ರಭಾವ ಆಗಿರಬಹುದು, ಆದರೆ, ಸಮಸ್ಯೆಯ ಮೂಲ ಹಾಗೇ ಇದೆ ಎನ್ನುವ ವಾದವನ್ನು ಅವರು ಪ್ರತಿಪಾದಿಸುತ್ತಾರೆ.
 
ಕಪ್ಪುಧನ ಎಷ್ಟು ಸಂಕೀರ್ಣವಾದ ಆರ್ಥಿಕ ವಿಚಾರ ಎನ್ನುವುದನ್ನು ನಿರೂಪಿಸಿ – ಅದರ ಮೇಲೆ ಸಮರ ಸಾರಲು ಇದ್ದ ಇತರ ಪರಿಕರಗಳನ್ನು ಚರ್ಚಿಸುತ್ತಾರೆ. ಕಪ್ಪುಧನದ ವಿರುದ್ಧ ಸಮರ ಕೈಗೊಳ್ಳಲು ಇದ್ದ ಪರಿಕರಗಳಲ್ಲಿ ನೋಟುಬಂದಿಯೇನೂ ಪ್ರಭಾವೀ ಪರಿಕರವಾಗಿರಲಿಲ್ಲ ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕು.
 
ಜಾಲೀ ನೋಟುಗಳ ಸಮಸ್ಯೆಯನ್ನು, ನೋಟು ಮುದ್ರಣದ ತಂತ್ರಜ್ಞಾನದಿಂದ ಹಿಡಿದು, ಅದಕ್ಕೆ ಆಮದು ಮಾಡುವ ಯಂತ್ರಾಂಗ, ಕಾಗದ, ಶಾಯಿಯ ಬಗ್ಗೆ ರಾಮ್‌ ಚರ್ಚಿಸುತ್ತಾರೆ. ಎಲ್ಲೆಲ್ಲಿ ಜಾಲಿ ನೋಟುಗಳು  ತಯಾರಿಸಬಹುದು ಎನ್ನುವುದರ ವಿವರವನ್ನೂ ಕೊಡುವುದಲ್ಲದೇ, ನೋಟು ಬಂದಿಯಿಂದ ದಾಸ್ತಾನಿದ್ದ ಜಾಲೀ ನೋಟುಗಳನ್ನು ಚಲಾವಣೆಯಿಂದ ತೆಗೆಯಬಹುದಾಗಲೀ ಹೊಸ ಜಾಲೀನೋಟುಗಳ  ತಯಾರಿಕೆಗೆ ಈ ಕಾರ್ಯಕ್ರಮ ಯಾವ ಅಡ್ಡಿಯನ್ನೂ ಒದಗಿಸುವುದಿಲ್ಲ ಎಂದು ವಾದಿಸುತ್ತಾರೆ.
 
ಈ ಪುಸ್ತಕದ ಒಂದು ಅಪರೂಪದ ಅಧ್ಯಾಯವೆಂದರೆ ನೋಟುಬಂದಿಯಿಂದ ರಿಸರ್ವ್ ಬ್ಯಾಂಕಿಗೆ ಏನಾದರೂ ಲಾಭವಾಯಿತೇ – ಅದರ ಆಸ್ತಿ-ಬಾಧ್ಯತೆಗಳ ಪಟ್ಟಿಗೆ ನೋಟುಬಂದಿಯ ಪರಿಣಾಮವೇನಿರಬಹುದು ಎನ್ನುವ ಗಮ್ಮತ್ತಿನ ವಿಚಾರವನ್ನೂ – ಅದರಿಂದ ಸರಕಾರದ ಬೊಕ್ಕಸಕ್ಕೆ ಯಾವ ರೀತಿಯಾದ ಲಾಭವಾಗಿರಬಹುದು ಎನ್ನುವ ವಿಚಾರವನ್ನೂ ಅವರು ಚರ್ಚಿಸುತ್ತಾರೆ.
 
ಆದರೆ, ಈ ಎಲ್ಲ ಚರ್ಚೆಯಲ್ಲಿ ವಾಪಸ್ಸಾಗದೇ ಉಳಿದ ಕಪ್ಪುಹಣದಿಂದ ಎಷ್ಟು ಲಾಭವಾಗಿರಬಹುದು ಎನ್ನುವ ಚರ್ಚೆಯಿದೆಯೇ ಹೊರತು, ಈ ಒಂದು ತೀರ್ಮಾನದಿಂದ ಆದ ಖರ್ಚಿನ ಪ್ರಸ್ತಾಪ ಎಲ್ಲೂ ಇಲ್ಲ. ರಿಸರ್ವ್ ಬ್ಯಾಂಕು ಮತ್ತು ಸರಕಾರದ ಮುದ್ರಣಾಲಯಗಳು ಅಹರ್ನಿಶಿ ದುಡಿದವು,  ಎಟಿಎಂಗಳನ್ನು ರಾತ್ರೋರಾತ್ರಿ ಕ್ಯಾಲಿಬರೇಟ್ ಮಾಡಬೇಕಾಯಿತು.  ಈ ಸಕಲಕ್ಕೂ ಸರಕಾರದ ಮತ್ತು ರಿಸರ್ವ್ ಬ್ಯಾಂಕಿನಿಂದ ಎಷ್ಟು ಖರ್ಚಾಯಿತು ಎನ್ನುವ ಅಂದಾಜು ಮಾತ್ರ ಎಲ್ಲೂ ಸಿಗುವುದೂ ಇಲ್ಲ, ಚರ್ಚೆಗೂ ಒಳಪಟ್ಟಿಲ್ಲ. ಇದು ಈ ಪುಸ್ತಕದ ಮಿತಿಯಲ್ಲವಾದರೂ, ನೋಟುಬಂದಿಯ ನಂತರದ ಚರ್ಚೆಯಲ್ಲಿರುವ ಒಂದು ಮಿತಿಯೆಂದೇ ಹೇಳಬಹುದು.
 
ಎರಡನೇ ಹಂತದಲ್ಲಿ ಪ್ರಧಾನಿ  ವ್ಯಾಖ್ಯಾನಿಸಿದ ನಗದು ರಹಿತ ವ್ಯವಹಾರವನ್ನೂ  , ಅದನ್ನು ಸಾಧಿಸಲು ಉಪಯೋಗಿಸಬಹುದಾದ ಚರ್ಯೆ-ಪರಿಕರಗಳ ಬಗ್ಗೆ ಚರ್ಚಿಸುತ್ತಾರೆ. ಬೆಟ್ಟವನ್ನು ಬಗೆದು ಇಲಿಯನ್ನು ಹಿಡಿಯುವ ಪ್ರಕ್ರಿಯೆಯಲ್ಲಿ ಬೆಟ್ಟವನ್ನು ಬಗೆಯುವ ಪ್ರಕ್ರಿಯೆ, ಅದಕ್ಕೆ ಮಾಡಬೇಕಿದ್ದ ತಯಾರಿ, ಅದರಿಂದ  ಜನರಿಗಾದ ಕಷ್ಟನಷ್ಟಗಳನ್ನು ರಾಮ್ ವಿವರವಾಗಿ ದಾಖಲಿಸಿದ್ದಾರೆ. ಮೂಲಭೂತವಾಗಿ ಅವರು ಹೇಳದೇ ಹೇಳುವ ವಿಚಾರವೆಂದರೆ ಇಷ್ಟೆಲ್ಲಾ ಬೆಟ್ಟವನ್ನು ಬಗೆದ ಮೇಲೂ ಇಲಿ ಸಿಗಲಿಲ್ಲ ಎನ್ನುವ ಮಾತನ್ನು ಪರೋಕ್ಷವಾಗಿ ಹೇಳುತ್ತಾರೆಯೇ ಹೊರತು ಸ್ಪಷ್ಟವಾಗಿ ಎಲ್ಲೂ ಹೇಳುವುದಿಲ್ಲ. ನೋಟುಬಂದಿ ಒಂದು ಅರ್ಥರಹಿತ ಕಾರ್ಯಕ್ರಮವಾಗಿತ್ತು.  ಅದರ ವ್ಯಾಖ್ಯಾನಿತ ಉದ್ದೇಶಗಳನ್ನು ಸಾಧಿಸಲು ಇನ್ನೂ ಸಶಕ್ತವಾದ ಹತಾರಗಳಿದ್ದುವು ಎನ್ನುವುದು ಅವರ ವಿಶ್ಲೇಷಣೆಯಿಂದ ತಿಳಿದು ಬರುತ್ತದೆ.
 
ರಿಸರ್ವ್ ಬ್ಯಾಂಕು, ನೋಟಿನ ದಾಸ್ತಾನು, ಮುದ್ರಣದ ಪ್ರಕ್ರಿಯೆ, ಸರ್ಕಾರದ ಪಾತ್ರ, ಇದರಿಂದ ಜನರಿಗಾದ ಕಷ್ಟನಷ್ಟಗಳು, ಬ್ಯಾಂಕಿಂಗ್ ಕ್ಷೇತ್ರದ ಮೇಲೆ ಪ್ರಭಾವ – ಈ ಎಲ್ಲವನ್ನೂ ರಾಮ್ ವಿವರವಾಗಿ, ಸರಳವಾಗಿ ದಾಖಲಿಸಿದ್ದಾರೆ. ಒಂದು ರೀತಿಯಿಂದ ಈ ಪುಸ್ತಕವನ್ನು ನೋಟುಬಂದಿಗೆ ಮೊದಲು ಪ್ರಧಾನಿಯವರು ಓದಿ-ಒಪ್ಪಿದ್ದರೆ ಅವರು ಸಾಧಿಸ ಹೊರಟ ವಿಷಯಗಳನ್ನು ಸಾಧಿಸಲು ಬೇರೊಂದೇ ಮಾರ್ಗವನ್ನು ಅನುಸರಿಸುತ್ತಿದ್ದರೇನೋ.
 
ಹಾಗೆ ಅನುಸರಿಸಲು ಇದ್ದ ಅನೇಕ ಮಾರ್ಗಗಳ ಕೈಪಿಡಿಯ ಅಂಶಗಳು ಈ ಪುಸ್ತಕದಲ್ಲಿವೆ. ಈಗಲೂ ನೋಟುಬಂದಿಯಿಂದ ಸರ್ಕಾರವು ನಮಗೆ ಹೇಳಿದ ಅನೇಕ ಉದ್ದೇಶಗಳನ್ನು ಸಾಧಿಸಿದ್ದಾಗಿದೆ ಎನ್ನುವ ಯಾವ ಮಾಹಿತಿಯೂ ಲಭ್ಯವಾಗಿಲ್ಲವಾದ್ದರಿಂದ ಹೆಚ್ಚಿನ ಸಾಧನೆಯೇನೂ ಆಗಿಲ್ಲ ಎಂದು ನಾವು ನಂಬಬಹುದಾಗಿದೆ. ಹೀಗಿರುವಾಗ ಆ ಸಮಸ್ಯೆಗಳನ್ನು ಪರಿಹರಿಸುವ ಯತ್ನಗಳತ್ತ ಹೊರಡುವ ಸರಕಾರಕ್ಕೆ ಇರುವ ಮಾರ್ಗಗಳ ಸೂಚಿ ಈ ಪುಸ್ತಕದಲ್ಲಿದೆ.
ಇಲ್ಲಿ ನಾವು ಓದಲೇಬೇಕಾದ ಭಾಗವೆಂದರೆ ವೈ.ವಿ.  ರೆಡ್ಡಿ ಅವರ ದೀರ್ಘ ಮುನ್ನುಡಿ.
 
ರೆಡ್ಡಿ ಅವರು ನೋಟುಬಂದಿಯ ಬಗ್ಗೆ ಬರೆಯುವುದಲ್ಲದೇ –  ಆಭೂತಪೂರ್ವ ಮತ್ತು ತುಂಬಾ ಕಷ್ಟದ ನಿರ್ಧಾರವೊಂದು ಹೆಚ್ಚು ಜನರ ವಿರೋಧವಿಲ್ಲದೇ ಸುಸೂತ್ರವಾಗಿ ಸರಿದು ಹೋದದ್ದರ ಬಗ್ಗೆ ಅಚ್ಚರಿಯನ್ನೂ, ಅದನ್ನು ಸಾಧಿಸಿದ ನಾಯಕತ್ವದ ವ್ಯಾಖ್ಯಾನ ಚತುರತೆಯನ್ನೂ ಹಾಗೂ ನೋಟಬಂದಿಯಂತಹ ಯಾವ ತರ್ಕಕ್ಕೂ ನಿಲುಕದ ಒಂದು ನಿರ್ಧಾರವು ಒಂದು ರೀತಿಯಿಂದ ಜನಪ್ರಿಯವೂ – ಸಹನಶೀಲವೂ ಆಗಿರುವದಕ್ಕೆ ಇರಬಹುದಾದ ಭ್ರಷ್ಟಾಚಾರ, ಕಾಳಧನಗಳ ಬಗ್ಗೆ ಇರುವ ಸಿಟ್ಟು ಮತ್ತು ಹಿಂದೆ ಯಾರೂ ಯಾವುದೇ ದೊಡ್ಡ ನಿರ್ಧಾರವನ್ನು ಕೈಗೊಳ್ಳಲಾರದ ಅಸಹಾಯಕತೆಯ ಬಗೆಗಿನ ಚಡಪಡಿಕೆಯನ್ನೂ ತೋರಿಸುತ್ತದೆಂದೂ ವಿಶ್ಲೇಷಿಸುತ್ತಾರೆ.
 
ರಾಮ್, ನಿಲುವುಗಳನ್ನು ತೆಗೆದುಕೊಳ್ಳುವುದಿಲ್ಲವಾದರೂ, ರೆಡ್ಡಿಯವರ ಒಳನೋಟಗಳು ನಮ್ಮನ್ನು ಒಂದು ನಿಲುವು ತೆಗೆದುಕೊಳ್ಳುವತ್ತ ಕರೆದೊಯ್ಯುತ್ತವೆ.  ರೆಡ್ಡಿಯವರು ತಮ್ಮ ಟಿಪ್ಪಣಿಯನ್ನು ಪರಿಸ್ಥಿತಿಯ ವಿಶ್ಲೇಷಣೆಗೆ ಸೀಮಿತಗೊಳಿಸದೇ ಮುಂದೇನು ಮಾಡಬಹುದು ಎನ್ನುವತ್ತಲೂ ಮುಂದುವರೆಸಿರುವುದನ್ನು ನಾವು ಸ್ವಾಗತಿಸಬೇಕು. ನೋಟುಬಂದಿಯ ಬಗ್ಗೆ ಒಳನೋಟಗಳುಲ್ಲ, ಮಾಹಿತಿಯನ್ನಾಧರಿಸಿ ಬರೆದ ಈ ವಿಶ್ಲೇಷಣಾತ್ಮಕ ಪುಸ್ತಕ – ಈ ಚರ್ಯೆಯ ಮಿತಿಗಳನ್ನೂ, ಸಾಧ್ಯತೆಗಳನ್ನೂ ವಿವರಿಸುವುದರಲ್ಲಿ ಸಫಲವಾಗಿದೆ. ಇಬ್ಬರಿಗೂ ಅಭಿನಂದನೆಗಳು ಸಲ್ಲಬೇಕಿದೆ. 
 

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT