ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದಿಲ್‌ಶಾಹಿ ಅರಸರ ಕಾಲದ ಬಾವಿಗಳಿಗೆ ಕಾಯಕಲ್ಪ

ಸಮರೋಪಾದಿಯಲ್ಲಿ ಸ್ವಚ್ಛತಾ ಕಾಮಗಾರಿ: ಮಾಸಾಂತ್ಯದೊಳಗೆ ಪೂರ್ಣಗೊಳಿಸಲು ನಿರ್ಧರಿಸಿರುವ ಪಾಲಿಕೆ
Last Updated 16 ಮೇ 2017, 19:30 IST
ಅಕ್ಷರ ಗಾತ್ರ

ವಿಜಯಪುರ: ಆದಿಲ್‌ಶಾಹಿ ಅರಸರು ತಮ್ಮ ಆಳ್ವಿಕೆಯ ಅವಧಿಯಲ್ಲಿ ನಗರದಲ್ಲಿ ನಿರ್ಮಿಸಿದ್ದ ಬಾವಡಿಗಳ (ತೆರೆದ ಬಾವಿ) ಸ್ವಚ್ಛತಾ ಕಾರ್ಯ, ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಸಮರೋಪಾದಿಯಲ್ಲಿ ನಡೆದಿದೆ.

ನಗರದಲ್ಲಿ 140 ಬಾವಿಗಳಿದ್ದು,  ₹4.5 ಕೋಟಿ ವೆಚ್ಚದಲ್ಲಿ 20 ಬಾವಿಗಳಿಗೆ ಕಾಯಕಲ್ಪ ಕಲ್ಪಿಸುವ ಖಾಸಗಿ ಸಹಭಾಗಿತ್ವದ ಯೋಜನೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ನೇತೃತ್ವದಲ್ಲಿ ಬಿರುಸಿನಿಂದ ಆರಂಭವಾಗಿದೆ.

ಮುಂಗಾರು ಆರಂಭಗೊಳ್ಳುವ ವೇಳೆಗೆ ಎಲ್ಲ ಬಾವಿಗಳ ಸ್ವಚ್ಛತಾ ಕಾರ್ಯ ಪೂರ್ಣಗೊಳಿಸಬೇಕು ಎಂಬ ಗುರಿಯನ್ನು ಪಾಲಿಕೆ ಆಡಳಿತ ಹಾಕಿಕೊಂಡಿದೆ. ಬಾವಿಯೊಳಗೆ ಬಹು ವರ್ಷಗಳಿಂದ ಸಂಗ್ರಹಗೊಂಡಿದ್ದ ಅಶುದ್ಧ ನೀರು, ಹೂಳನ್ನು ಬೃಹತ್‌ ಯಂತ್ರೋಪಕರಣ ಬಳಸಿ ಹೊರ ತೆಗೆಯಲಾಗುತ್ತಿದೆ. ಕಾರ್ಪೊರೇಟ್‌ ಕಂಪೆನಿಗಳ ಸಿ.ಎಸ್‌.ಆರ್‌ ನಿಧಿ (ಕಾರ್ಪೊರೇಟ್‌ ಸೋಷಿಯಲ್‌ ರೆಸ್ಪಾನ್ಸಿಬಿಲಿಟಿ ಫಂಡ್‌), ಗುತ್ತಿಗೆದಾರರು ಮತ್ತು ಉದ್ಯಮಿಗಳಿಂದ ದೇಣಿಗೆ ಪಡೆದು ಈ ಕೆಲಸ ಕೈಗೆತ್ತಿಕೊಳ್ಳಲಾಗಿದೆ.

ನೀರಿನ ಝರಿ: ಬಾವಿಯೊಳಗೆ ತುಂಬಿದ್ದ ತ್ಯಾಜ್ಯ ತೆರವುಗೊಳಿಸುವ ಪ್ರಕ್ರಿಯೆಗೆ ಚಾಲನೆ ಸಿಗುತ್ತಿದ್ದಂತೆಯೇ, ಜಲ ಮೂಲಗಳಿಂದ ನೀರು ಉಕ್ಕುತ್ತಿದೆ. ನೀರಿನ ಝರಿಗಳು ಬಂಡೆಗಳ ಸಂದಿಯಿಂದ ಕೆಲವೆಡೆ ಚಿಮ್ಮುತ್ತಿದ್ದರೆ, ಹಲವೆಡೆ ಬಸಿಯುತ್ತಿದೆ. ಇದು ಸುತ್ತಲಿನ ನಿವಾಸಿಗಳ ಸಂತಸವನ್ನು ಇಮ್ಮಡಿಗೊಳಿಸಿದೆ.

ಕಾಳಿಕಾದೇವಿ ದೇಗುಲ ಬಳಿಯ ಗುಂಡ ಬಾವಡಿ, ಅಂಚೆ ಇಲಾಖೆಯ ಕೇಂದ್ರ ಕಚೇರಿ ಆವರಣದಲ್ಲಿರುವ ಪೋಸ್ಟ್‌ ಬಾವಡಿ ಸ್ವಚ್ಛಗೊಂಡ ಕೆಲ ದಿನಗಳಲ್ಲೇ 20–30 ಅಡಿ ಶುದ್ಧ ನೀರು ಸಂಗ್ರಹಗೊಂಡಿದ್ದು, ಸುತ್ತಲಿನ ಜನತೆ ಸಂತಸದಿಂದ ಮನೆಗಳಲ್ಲಿ   ಬಳಸುತ್ತಿದ್ದಾರೆ.

ಹಲವು ವರ್ಷಗಳಿಂದ ತ್ಯಾಜ್ಯ ತುಂಬಿದ್ದ ತಾಜ್ ಬಾವಡಿ, ಇಬ್ರಾಹಿಂಪುರ ಬಾವಡಿ, ರಹೀಮ್ ನಗರ ಬಾವಡಿ, ಮಾಸಾ ಬಾವಡಿ (ಮಾ ಸಾಹಿಬಾ ಬಾವಡಿ), ಗೋಳಗುಮ್ಮಟ ಬಾವಡಿ, ಗುನ್ನಾಪುರ ಬಾವಡಿ, ಸೋನಾರ ಬಾವಡಿ ಸೇರಿದಂತೆ 20 ಬಾವಿಗಳನ್ನು ಮೊದಲ ಹಂತದಲ್ಲಿ ಸ್ವಚ್ಛಗೊಳಿಸಲಾಗುವುದು.

ಶುದ್ಧ ನೀರು; ಬಳಕೆಗೆ ಚಿಂತನೆ: ‘ಸ್ವಚ್ಛಗೊಳ್ಳುತ್ತಿರುವ ತಾಜ್‌ ಬಾವಡಿ, ರಹೀಮ್‌ ನಗರ ಬಾವಡಿಯ ಜಲ ಮೂಲದಲ್ಲಿ ಬರುತ್ತಿರುವ ಹೊಸ ನೀರನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಜನ–ಜಾನುವಾರು ಕುಡಿಯಲು ಯೋಗ್ಯ ನೀರು ಎಂಬ ವರದಿ ಬಂದಿದೆ.
ನಿರೀಕ್ಷಿತ ಪ್ರಮಾಣದಲ್ಲಿ ನೀರು ಶೇಖರಣೆಗೊಂಡರೆ ಬಾವಿಗೆ ಮೋಟರ್‌ ಅಳವಡಿಸಲಾಗುವುದು. ಮೇಲ್ಭಾಗದಲ್ಲಿ ಶುದ್ಧೀಕರಣ ಘಟಕ ಸ್ಥಾಪಿಸಿ, ಸುತ್ತಲಿನ ಜನತೆಗೆ ಕುಡಿಯುವ ನೀರು ಪೂರೈಸುವ ಯೋಜನೆಯನ್ನೂ ಇದರಲ್ಲೇ ಅಡಕಗೊಳಿಸಲಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ತಿಳಿಸಿದರು.

‘ಸ್ವಚ್ಛತಾ ಕಾರ್ಯ ಪೂರ್ಣಗೊಂಡ ಬಳಿಕ ಬಾವಿಗಳ ಸುತ್ತ ತಂತಿಬೇಲಿ ಹಾಕಲಾಗುವುದು. ಚಿಕ್ಕ ಬಾವಿಗಳ ಮೇಲ್ಭಾಗಕ್ಕೆ ತಂತಿಯ ಜಾಲರಿ ಅಳವಡಿಸಲಾಗುವುದು. ಹನಿ ಹನಿ ನೀರು ಅಮೂಲ್ಯ. ನಮಗೆ ಬಾವಿಗಳಲ್ಲಿ ಯಥೇಚ್ಛವಾಗಿ ನೀರು ಸಿಗುತ್ತಿದೆ. ಸ್ಥಳೀಯರು ಬಾವಿ ಕಾಪಾಡಲು  ಸ್ವಯಂ ಪ್ರೇರಣೆಯಿಂದ ಮುಂದಾಗಬೇಕು’ ಎಂದು ನಗರದ ಜನರಲ್ಲಿ ಪಾಟೀಲ ಮನವಿ ಮಾಡಿಕೊಂಡಿದ್ದಾರೆ.

ಅಂಕಿ ಅಂಶ

140 ವಿಜಯಪುರದಲ್ಲಿರುವ  ಬಾವಿಗಳು

20 ಬಾವಿಗಳಿಗೆ ಕಾಯಕಲ್ಪ

10 ಬಾವಿ 2ನೇ ಹಂತದಲ್ಲಿ ಸ್ವಚ್ಛ

₹4.5 ಕೋಟಿ ಯೋಜನೆಯ ಮೊತ್ತ

* ಆದಿಲ್‌ಶಾಹಿ ಅರಸರ ಕಾಲದ ಪುರಾತನ ಬಾವಡಿಗಳಿಗೆ (ಬಾವಿ) ಕಾಯಕಲ್ಪ ಕಲ್ಪಿಸಬೇಕು ಎಂಬುದು ಬಹು ದಿನಗಳ ಕನಸಾಗಿತ್ತು. ಖಾಸಗಿ ಸಹಭಾಗಿತ್ವದಲ್ಲಿ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ.
–ಎಂ.ಬಿ.ಪಾಟೀಲ, ಜಲಸಂಪನ್ಮೂಲ ಸಚಿವ

* ಇಬ್ರಾಹಿಂಪುರ ಬಾವಡಿಯಲ್ಲಿ ಹೊಲಸು ತುಂಬಿತ್ತು. ಮಲ–ಮೂತ್ರ ವಿಸರ್ಜನೆಯ ತಾಣವಾಗಿತ್ತು. ನನ್ನ ಜೀವಿತಾವಧಿಯಲ್ಲಿ ಮೊದಲ ಬಾರಿಗೆ ಸ್ವಚ್ಛತಾ ಕಾರ್ಯ ನಡೆದಿದೆ.
–ಬಸಪ್ಪ ಕವಳ್ಳಿ,  ಹಿರಿಯ ನಾಗರಿಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT