7

ವಸ್ತುಗಳ ಅಂತರಜಾಲ ಇಂಟರ್‌ನೆಟ್ ಆಫ್ ಥಿಂಗ್ಸ್

ಯು.ಬಿ. ಪವನಜ
Published:
Updated:
ವಸ್ತುಗಳ ಅಂತರಜಾಲ ಇಂಟರ್‌ನೆಟ್ ಆಫ್ ಥಿಂಗ್ಸ್

ನೀವು ಗ್ಯಾಜೆಟ್‌ಲೋಕದ ಲೇಖನಗಳನ್ನು ತಪ್ಪದೆ ಓದುವವರಾಗಿದ್ದರೆ ಲೇಖನಗಳಲ್ಲಿ ಪ್ರಸ್ತಾಪಿಸಿದ ಕೆಲವು ಗ್ಯಾಜೆಟ್‌ಗಳನ್ನು ಜ್ಞಾಪಿಸಿಕೊಳ್ಳಿ. ಕೈಗೆ ಕಟ್ಟುವ ಆರೋಗ್ಯ ಪಟ್ಟಿ. ಇದು ನಿಮ್ಮ ಚಟುವಟಿಕೆಗಳನ್ನು ದಾಖಲಿಸಿ ಅವುಗಳನ್ನು ಅಂತರಜಾಲದ ಮೂಲಕ ಸಂಗ್ರಹಿಸಿಟ್ಟುಕೊಂಡು ವಿಶ್ಲೇಷಣೆ ಮಾಡಲು ಸಹಾಯಕಾರಿ.ಬುದ್ಧಿವಂತ ಪೊರಕೆ ಅರ್ಥಾತ್ ಸ್ಮಾರ್ಟ್ ವಾಕ್ಯೂಮ್ ಕ್ಲೀನರ್. ಇದನ್ನು ಅಂತರಜಾಲದ ಮೂಲಕವೂ ನಿಯಂತ್ರಿಸಬಹುದು. ಮನೆಯಲ್ಲಿ ಸ್ಥಾಪಿಸಿರುವ ಕ್ಯಾಮೆರಾವನ್ನು ಅಂತರಜಾಲಕ್ಕೆ ಸಂಪರ್ಕಿಸಿ ಕಚೇರಿಯಲ್ಲಿ ಕುಳಿತೇ ಮನೆಯಲ್ಲಿ ಏನು ನಡೆಯುತ್ತಿದೆ ಎಂಬುದನ್ನು ವೀಕ್ಷಿಸಬಹುದು. ಈ ಎಲ್ಲ ಗ್ಯಾಜೆಟ್‌ಗಳಲ್ಲಿಯ ಒಂದು ಸಮಾನ ಗುಣವೈಶಿಷ್ಟ್ಯವೆಂದರೆ ಅವೆಲ್ಲ ಅಂತರಜಾಲಕ್ಕೆ ಸಂಪರ್ಕ ಹೊಂದುವಂತಹವು. ಇಂತಹ ಸಾಧನಗಳೇ ನಮ್ಮ ಇಂದಿನ ಸಂಚಿಕೆಯ ವಸ್ತು.  

 

ವಸ್ತು ಎಂಬ ಪದ ಬಳಸಿದ್ದಕ್ಕೆ ಇನ್ನೂ ಒಂದು ಕಾರಣವಿದೆ. ಈ ರೀತಿ ಅಂತರಜಾಲದ ಮೂಲಕ ಸಂಪರ್ಕ ಹೊಂದಿರುವಂತಹ ವಸ್ತುಗಳ ಪ್ರಪಂಚಕ್ಕೆ ಇಂಗ್ಲಿಷಿನಲ್ಲಿ Internet of Things ಅಥವಾ ಚುಟುಕಾಗಿ IoT (ಐಓಟಿ) ಎಂಬ ಹೆಸರಿದೆ. ಈ ಹೆಸರನ್ನು 1999ರಲ್ಲಿ ಮೊದಲ ಬಾರಿಗೆ ಬಳಸಲಾಯಿತು. ಇದಕ್ಕೆ connected devices ಎಂಬ ಇನ್ನೊಂದು ಹೆಸರೂ ಇದೆ.

 

ಸಾಧನ, ಪರಿಕರ, ಸಂಪರ್ಕಕ್ಕೊಳಪಡಬಹುದಾದ ಗ್ಯಾಜೆಟ್‌ಗಳು, ಗಣಕ, ಸಂವೇದಕ (sensor) ಇವೆಲ್ಲ ಅಂತರಜಾಲದ ಮೂಲಕ ಸಂಪರ್ಕಗೊಂಡು ಅವುಗಳನ್ನು ವೀಕ್ಷಿಸುವುದು, ಅವುಗಳಿಂದ ಮಾಹಿತಿಯನ್ನು ಪಡೆಯುವುದು ಮತ್ತು ಅವುಗಳನ್ನು ನಿಯಂತ್ರಿಸುವುದು ಇವೆಲ್ಲ ಈ ವಿಷಯದ ವ್ಯಾಪ್ತಿಯಲ್ಲಿ ಬರುತ್ತವೆ. ಈ ವಸ್ತುಗಳು ಹಲವು ವಿಧಾನದಲ್ಲಿ ಸಂಪರ್ಕಗೊಳ್ಳಬಹುದು ಅಥವಾ ಸಂವೇದಕಗಳಾಗಿರಬಹುದು. ಉದಾಹರಣೆಗಳು – ಆರ್‌ಎಫ್‌ಐಡಿ (Radio-frequency identification - RFID), ಅತಿ ಸಮೀಪ ಸಂವಹನ (Near-field communication- NFC), ವೈಫೈ, ಇಥರ್‌ನೆಟ್, ಹೃದಯ ಬಡಿತ ದಾಖಲೆ, ಇತ್ಯಾದಿಗಳು. 

 

2020 ಇಸವಿಯ ಹೊತ್ತಿಗೆ ಸುಮಾರು 20 ಶತಕೋಟಿ ವಸ್ತುಗಳು ಅಂತರಜಾಲಕ್ಕೆ ಸಂಪರ್ಕಗೊಂಡಿರುತ್ತವೆ ಎಂದು ಒಂದು ಸಮೀಕ್ಷೆ ತಿಳಿಸುತ್ತದೆ. ಅಂದರೆ ಈ ವಸ್ತುಗಳ ಅಂತರಜಾಲಕ್ಕೆ (ಐಓಟಿಗೆ) ದೊಡ್ಡ ಭವಿಷ್ಯವಿದೆ ಎನ್ನಬಹುದು. ಈ ಐಓಟಿಯ ಕ್ಷೇತ್ರದಲ್ಲಿ ಇತರೆ ಕ್ಷೇತ್ರಗಳಲ್ಲಿರುವಂತೆ ಹಲವು ವಿಭಾಗಗಳನ್ನು ಮಾಡಬಹುದು. ಅವುಗಳಲ್ಲಿ ಕೆಲವು ಪ್ರಮುಖವಾದವು ಎಂದರೆ ಬುದ್ಧಿವಂತ ಮನೆಗಳು (home automation), ಬುದ್ಧಿವಂತ ಕಟ್ಟಡಗಳು, ಮಾಧ್ಯಮ, ಕೈಗಾರಿಕೆಗಳು ಹಾಗೂ ಯಂತ್ರಗಳ ತಯಾರಿ (Industrial IoT), ಶಕ್ತಿ, ಸಾರಿಗೆ, ಆರೋಗ್ಯ, ಇತ್ಯಾದಿ. 

 

ಬುದ್ಧಿವಂತ ಮನೆಗಳಲ್ಲಿ ಬಳಕೆಯಾಗುವ ಬಹುತೇಕ ಸಾಧನಗಳು ಅಂತರಜಾಲಕ್ಕೆ ಸಂಪರ್ಕಗೊಂಡಿರುತ್ತವೆ. ರೆಫ್ರಿಜರೇಟರ್ ತನ್ನಲ್ಲಿರುವ ವಸ್ತುಗಳ ಪಟ್ಟಿಯನ್ನು ಅಂತರಜಾಲದ ಮೂಲಕ ಅದರ ಯಜಮಾನನಿಗೆ ನೀಡುತ್ತದೆ. ಹಾಲು ಮುಗಿದಿದೆ ಎಂದು ಕಚೇರಿಯಲ್ಲಿರುವ ಮನೆ ಯಜಮಾನನಿಗೆ ಗೊತ್ತಾಗಿ ಆತ ಮನೆಗೆ ಬರುವಾಗ ಹಾಲು ತರಬಹುದು.

 

ಮನೆಯ ಹವಾನಿಯಂತ್ರಣ, ಉಷ್ಣತೆಯನ್ನು ಅಳೆಯುವುದು ಮತ್ತು ನಿಯಂತ್ರಿಸುವುದು, ಮನೆಯೊಳಗೆ ಇರುವ ದೀಪಗಳನ್ನು ನಿಯಂತ್ರಿಸುವುದು, ಇತ್ಯಾದಿಗಳೆಲ್ಲ ಬುದ್ಧಿವಂತ ಮನೆಯ ವ್ಯಾಪ್ತಿಯಲ್ಲಿ ಬರುತ್ತವೆ. ಅತಿ ಶೈತ್ಯದ ಸ್ಥಳಗಳಲ್ಲಿ ವಾಸಿಸುತ್ತಿರುವ ವ್ಯಕ್ತಿ ತನ್ನ ಮನೆಗೆ ತಲುಪುವ ಸುಮಾರು 15 ನಿಮಿಷಗಳ ಮೊದಲೇ ಮನೆಯ ಹವಾನಿಯಂತ್ರಕ, ಉಷ್ಣತೆಯ ನಿಯಂತ್ರಕ ಮತ್ತು ಮುಖ್ಯ ದೀಪಗಳ ಚಾಲನೆ ಇವನ್ನೆಲ್ಲ ಅಂತರಜಾಲದ ಮೂಲಕ ಮಾಡುತ್ತಾನೆ. ಆತ ಮನೆ ತಲುಪುವಾಗ ಆತನಿಗೆ ಆರಾಮದಾಯಕವಾದ ಉಷ್ಣತೆ, ಬೆಳಕು, ಗಾಳಿ ಎಲ್ಲ ಮನೆಯಲ್ಲಿರುತ್ತವೆ.

 

ಮನೆಯಲ್ಲಿ ಸ್ಥಾಪಿಸಿರುವ ಕ್ಯಾಮೆರಾವನ್ನು ಆತ ಕಚೇರಿಯಲ್ಲಿ ಕುಳಿತೇ ಚಾಲನೆ ಮಾಡಿ ಮನೆಯಲ್ಲಿ ಏನು ನಡೆಯುತ್ತದೆ ಎಂಬುದನ್ನು ಗಮನಿಸಬಹುದು. ಮನೆಯಲ್ಲಿ ತುಂಬ ವಯಸ್ಸಾದ, ಉತ್ತಮ ಆರೋಗ್ಯದಲ್ಲಿಲ್ಲದ ವ್ಯಕ್ತಿಗಳಿದ್ದಲ್ಲಿ ಅವರು ಮನೆಯೊಳಗೆ ಓಡಾಡುವಾಗ ಏನಾದರೂ ಎಡವಟ್ಟಾದರೆ ಆತ ಕಚೇರಿಯಲ್ಲಿ ಕುಳಿತೇ ವೀಕ್ಷಿಸಬಹುದು ಮತ್ತು ಕೂಡಲೇ ಮನೆಗೆ ವಾಪಸು ಬಂದು ಸೂಕ್ತ ಕ್ರಮ ಕೈಗೊಳ್ಳಬಹುದು.

 

ಕೈಗಾರಿಕಾ ಕ್ಷೇತ್ರದಲ್ಲಿ ಉತ್ಪನ್ನಗಳ ತಯಾರಿಯಲ್ಲಿ ಐಓಟಿಯ ಬಳಕೆಯಾದಾಗ ಅದು ಇಂಡಸ್ಟ್ರಿಯಲ್ ಐಓಟಿ (ಐಐಓಟಿ) ಎಂದೆನಿಸಿಕೊಳ್ಳುತ್ತದೆ. ಉತ್ಪನ್ನ ತಯಾರಿಕಾ ಘಟಕದಲ್ಲಿ ಬಳಸುವ ಸಂವೇದಕ, ಯಂತ್ರಗಳು, ರೋಬೋಟ್‌ಗಳು, ಎಲ್ಲ ಅಂತರಜಾಲಕ್ಕೆ ಸಂಪರ್ಕಗೊಂಡಿರುತ್ತವೆ. ಇಲ್ಲಿ ಎರಡು ಪ್ರಮುಖ ವಿಭಾಗಗಳಿವೆ. ಮೊದಲನೆಯದಾಗಿ ಎಲ್ಲ ಸಂವೇದಕಗಳ ಮೂಲಕ ಬರುತ್ತಿರುವ ಮಾಹಿತಿಗಳನ್ನು ನಿಜ ಸಮಯದಲ್ಲಿ ವಿಶ್ಲೇಷಿಸುವುದು.

 

ಎರಡನೆಯದಾಗಿ ನಿಯಂತ್ರಿಸಬಹುದಾದ ಯಂತ್ರಗಳನ್ನು ಅಂತರಜಾಲದ ಮೂಲಕ ನಿಯಂತ್ರಿಸುವುದು. ಈ ಮಾಹಿತಿಗಳನ್ನು ವಿಶ್ಲೇಷಿಸುತ್ತ ಸಮಯ ಕಳೆದಂತೆ ಉತ್ಪಾದನೆಯನ್ನು ಹೆಚ್ಚಿಸಲು ಏನೇನು ಮಾಡಬೇಕು ಎಂಬುದನ್ನು ಅದು ಕೃತಕ ಬುದ್ಧಿಮತ್ತೆಯನ್ನು ಬಳಸಿ ಸೂಚಿಸಬಹುದು. ಶಕ್ತಿಯ ಬಳಕೆಯನ್ನು ಕಡಿಮೆ ಮಾಡಿದಷ್ಟು ಉತ್ಪಾದನೆಯ ವೆಚ್ಚ ಕಡಿಮೆಯಾಗುತ್ತದೆ.

 

ಕಡಿಮೆ ಶಕ್ತಿಯನ್ನು ಬಳಸಿ ಹೆಚ್ಚು ಉತ್ಪಾದನೆ ಮಾಡಲು ಬೇಕಾದ ಆಯ್ಕೆಗಳನ್ನು ಈ ವ್ಯವಸ್ಥೆ ಸೂಚಿಸಬಹುದು. ಇತ್ತೀಚೆಗೆ ನಮ್ಮ ರಾಜ್ಯದಲ್ಲೂ ಹಲವು ಕೈಗಾರಿಕೆಗಳಲ್ಲಿ ಐಐಓಟಿಯ ಬಳಕೆ ಆಗಲು ಪ್ರಾರಂಭವಾಗಿದೆ. ಹಲವು ಕಂಪೆನಿಗಳು ಐಐಓಟಿಯ ಸಾಧನ, ಸೇವೆ ಮತ್ತು ಸವಲತ್ತುಗಳನ್ನು ನೀಡುತ್ತಿವೆ.     

ಆರೋಗ್ಯದ ಕ್ಷೇತ್ರದಲ್ಲಿ ಐಓಟಿಯು ಕ್ರಾಂತಿ ಮಾಡುತ್ತಿದೆ. ಆರೋಗ್ಯ ಪಟ್ಟಿಯಿಂದ ಹಿಡಿದು ಪೇಸ್‌ಮೇಕರ್, ರಕ್ತದೊತ್ತಡ ಅಳೆಯುವ ಯಂತ್ರ, ರಕ್ತದಲ್ಲಿರುವ ಸಕ್ಕರೆಯನ್ನು ಅಳೆಯುವ ಸಾಧನ ಎಲ್ಲ ಅಂತರಜಾಲಕ್ಕೆ ಸಂಪರ್ಕಗೊಂಡಿರುತ್ತವೆ. ಮನೆಯಲ್ಲಿರುವ ಚಿಕ್ಕ ಇಸಿಜಿಯನ್ನು ಬಳಸಿ, ಅದು ಪತ್ತೆಹಚ್ಚಿದ ಮಾಹಿತಿಯನ್ನು ಅಂತರಜಾಲದ ಮೂಲಕ ಆಸ್ಪತ್ರೆಯಲ್ಲಿರುವ ವೈದ್ಯರಿಗೆ ವರ್ಗಾಯಿಸಬಹುದು.

 

ಅವರು ಆ ಮಾಹಿತಿಯನ್ನು ಅಲ್ಲೇ ಕುಳಿತು ವಿಶ್ಲೇಷಿಸಿ ತುರ್ತು ಸಂದರ್ಭಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳಬಹುದು. ಅನಾರೋಗ್ಯದಲ್ಲಿರುವ ವ್ಯಕ್ತಿಗಳ ದೇಹಕ್ಕೆ ಜೋಡಿಸಿರುವ ಯಂತ್ರಗಳನ್ನು ಬೇಕಾದ ರೀತಿಯಲ್ಲಿ ವೈದ್ಯರು ಆಸ್ಪತ್ರೆಯಲ್ಲಿ ಕುಳಿತೇ ನಿಯಂತ್ರಿಸಬಹುದು. 

 

ಐಓಟಿಯ ಎಲ್ಲ ರೀತಿಯ ಬಳಕೆಗಳ ಬಗ್ಗೆ ವಿವರವಾಗಿ ಬರೆಯಲು ಗ್ಯಾಜೆಟ್‌ಲೋಕದ ಹಲವು ಸಂಚಿಕೆಗಳು ಬೇಕು. ಕೆಲವನ್ನು ಮಾತ್ರ ಈ ಸಂಚಿಕೆಯಲ್ಲಿ ಚಿಕ್ಕದಾಗಿ ನೀಡಲಾಗಿದೆ. ಐಓಟಿಯಲ್ಲಿ ಬಳಸುವ ಕೆಲವು ಸಾಧನ ಮತ್ತು ಸೇವೆ ಬಗ್ಗೆ ಮಾಹಿತಿ ನೀಡಲು ಗ್ಯಾಜೆಟ್‌ಲೋಕ ಅಂಕಣದಲ್ಲಿ ಪ್ರಯತ್ನಿಸಲಾಗುವುದು.

****

ವಾರದ ಆ್ಯಪ್:  ಐಓಟಿ ಟ್ಯುಟೋರಿಯಲ್

ಐಓಟಿಯ ಎಲ್ಲ ರೀತಿಯ ಬಳಕೆಗಳ  ಬಗ್ಗೆ ಕೆಲವನ್ನು ಮಾತ್ರ ಈ ಸಂಚಿಕೆಯಲ್ಲಿ ಚಿಕ್ಕದಾಗಿ ನೀಡಲಾಗಿದೆ. ಅದರ ಬಗ್ಗೆ ಇನ್ನಷ್ಟು ತಿಳಿಯಬೇಕೇ? ಹೌದಾದಲ್ಲಿ ನಿಮಗೆ ಅಂತರಜಾಲದಲ್ಲಿ ಹಲವು ಟ್ಯುಟೋರಿಯಲ್‌ಗಳು ದೊರೆಯುತ್ತವೆ. ನಿಮ್ಮ ಆಂಡ್ರಾಯ್ಡ್‌ ಫೋನ್‌ಗೆ ಕೂಡ ಹಲವು ಟ್ಯುಟೋರಿಯಲ್ ಕಿರುತಂತ್ರಾಂಶಗಳು (ಆ್ಯಪ್) ಲಭ್ಯವಿವೆ.

 

ಅಂತಹ ಒಂದು ಐಓಟಿ ಟ್ಯುಟೋರಿಯಲ್ ಕಿರುತಂತ್ರಾಂಶ ಬೇಕಿದ್ದಲ್ಲಿ ನೀವು ಗೂಗಲ್‌ ಪ್ಲೇ ಸ್ಟೋರಿಗೆ ಭೇಟಿ ನೀಡಿ Internet of Things Tutorial ಎಂದು ಹುಡುಕಬೇಕು ಅಥವಾ bitly.com/gadgetloka278 ಜಾಲತಾಣಕ್ಕೆ ಭೇಟಿ ನೀಡಬೇಕು. ಒಂದು ರೀತಿಯಲ್ಲಿ  ನೋಡಿದರೆ ಇದನ್ನು ಕಿರುತಂತ್ರಾಂಶ ಎನ್ನುವ ಬದಲು ವಿದ್ಯುನ್ಮಾನ ಪುಸ್ತಕ (ಇ-ಬುಕ್) ಎನ್ನಬಹುದು. ಯಾಕೆಂದರೆ ಇದರಲ್ಲಿ ಪುಸ್ತಕದ ಹಲವು ಅಧ್ಯಾಯಗಳಿವೆ. ಪ್ರಾರಂಭದಲ್ಲಿ ನೀಡಿರುವ ಪರಿವಿಡಿಯನ್ನು ಬಳಸಿ ನಿಮಗೆ ಇಷ್ಟವಾದ ಅಧ್ಯಾಯಕ್ಕೆ ಲಂಘನ ಮಾಡಿ ಅದನ್ನು ಓದಬಹುದು.

****

ಗ್ಯಾಜೆಟ್‌ ಸುದ್ದಿ: ಎಂಪಿ3 ನಿಧನ

ಡಿಜಿಟಲ್ ತಂತ್ರಜ್ಞಾನದಲ್ಲಿ ಹಾಡು ಕೇಳಲು ಬಳಸುವ ಎಂಪಿ3 ವಿಧಾನ ಯಾರಿಗೆ ಗೊತ್ತಿಲ್ಲ? ಬಹುತೇಕ ಮಂದಿ ಅಂದುಕೊಂಡಂತೆ ಅದು ಉಚಿತವಲ್ಲ. ಅದನ್ನು ನಿಮ್ಮ ಸಾಧನದಲ್ಲಿ ಅಳವಡಿಸಿದ್ದಾರೆ ಅಂದರೆ ಅದನ್ನು ಬಳಸಲು ಅದರ ಹಕ್ಕುಸ್ವಾಮ್ಯ ಇರುವವರಿಗೆ ಹಣ ಸಂದಾಯವಾಗಿದೆ ಎಂದು ಅರ್ಥ.ಈ ಎಂಪಿ3 ವಿಧಾನದ ಹಕ್ಕುಸ್ವಾಮ್ಯ ಈಗ ತಮ್ಮ ಬಳಿ ಇರುವ ಮತ್ತು ಅದನ್ನು ತಂತ್ರಾಂಶ (ಸಾಫ್ಟ್‌ವೇರ್) ಮತ್ತು ಯಂತ್ರಾಂಶ (ಹಾರ್ಡ್‌ವೇರ್) ತಯಾರಕರಿಗೆ ನೀಡುತ್ತಿರುವ ಫ್ರಾನ್‌ಹೋಪರ್ ಸಂಸ್ಥೆ ಅದನ್ನು ನಿಲ್ಲಿಸಿಬಿಡಲು ತೀರ್ಮಾನಿಸಿದೆ. ಇದಕ್ಕೆ ಪ್ರಮುಖ ಕಾರಣ ಎಂಪಿ3 ವಿಧಾನಕ್ಕಿಂತ ಉತ್ತಮವಾದ ಹಲವು ವಿಧಾನಗಳು ಈಗ ಲಭ್ಯವಿವೆ ಎಂಬುದು. ಆದರೂ ಎಂಪಿ3 ವಿಧಾನ ಇನ್ನೂ ತುಂಬ ಜನಪ್ರಿಯವಾಗಿದೆ.

****

ಗ್ಯಾಜೆಟ್‌ ಸಲಹೆ

ಸುನಿಲ್ ಅವರ ಪ್ರಶ್ನೆ: ಒನ್‌ಪ್ಲಸ್ 3ಟಿ, ಸ್ಯಾಮ್‌ಸಂಗ್ ಸಿ9 ಪ್ರೊ ಮತ್ತು ಎ7–ಇವುಗಳಲ್ಲಿ ಯಾವುದು ಉತ್ತಮ?

ಉ: ಒನ್‌ಪ್ಲಸ್ 3ಟಿ.

****

ಗ್ಯಾಜೆಟ್‌ ತರ್ಲೆ:  ಐಪ್ಯಾಡ್ ಮೇಲೆ ತಿಂಡಿ ಸರಬರಾಜು!

ಸಾನ್‌ಫ್ರಾನ್ಸಿಸ್ಕೊದ ಹೋಟೆಲ್ ಒಂದರಲ್ಲಿ ಐಪ್ಯಾಡ್ ಮೇಲೆ ತಿಂಡಿ ಸರಬರಾಜು ಮಾಡುತ್ತಾರೆ! ಕೆಲವು ಹೋಟೆಲುಗಳಲ್ಲಿ ತಿಂಡಿ ಆರ್ಡರ್ ಅನ್ನು ಐಪ್ಯಾಡ್ ಮೂಲಕ ತೆಗೆದುಕೊಳ್ಳುವುದನ್ನು ಗಮನಿಸಿರಬಹುದು. ಆದರೆ ಇಲ್ಲಿ ಹಾಗಲ್ಲ. ಐಪ್ಯಾಡ್ ಒಂದನ್ನು ಸಂಪೂರ್ಣವಾಗಿ ಸುರಕ್ಷಿತವಾಗಿ ಒಂದು ಚಿಕ್ಕ ಪೆಟ್ಟಿಗೆಯಲ್ಲಿಟ್ಟು ಅದರ ಮೇಲ್ಭಾಗದಲ್ಲಿ ಗಾಜು ಇದ್ದು ಪ್ಲೇಟ್‌ಬದಲಿಗೆ ಅದರ ಮೇಲೆ ತಿಂಡಿ ಇಟ್ಟು ಸರಬರಾಜು ಮಾಡುತ್ತಾರೆ.

 
ಅವರು ನೀಡುವ ಈ ವಿಶೇಷ ತಿಂಡಿಯ ಹೆಸರು A Dog in Search of Gold ಎಂದು. ತಿಂಡಿಗಾಗಿ ಹುಡುಕಾಡುವ ನಾಯಿಗಳ ವಿಡಿಯೊ ಈ ಐಪ್ಯಾಡ್ ತಟ್ಟೆಯಲ್ಲಿ ಪ್ಲೇ ಆಗುತ್ತಿರುತ್ತದೆ. ಇಷ್ಟೆಲ್ಲ ಸರ್ಕಸ್ ಮಾಡುವ ಬದಲು ತಿಂಡಿಯ ಗುಣಮಟ್ಟ ಹೆಚ್ಚಿಸಬಹುದಿತ್ತು ಅಥವಾ ಬೆಲೆ ಕಡಿಮೆ ಮಾಡಬಹುದಿತ್ತು ಎನ್ನುತ್ತಿದ್ದೀರಾ?

  

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry