3
X

'ಪ್ರಜಾವಾಣಿ'ಯ ಜಾಲತಾಣವನ್ನು ಹೆಚ್ಚು ಓದುಗ ಸ್ನೇಹಿಯಾಗಿಸುವ ಉದ್ದೇಶದಿಂದ ಹೊಸ ವಿನ್ಯಾಸವನ್ನು ರೂಪಿಸಲಾಗಿದೆ.
ಈ ವಿನ್ಯಾಸದ ಕುರಿತ ನಿಮ್ಮ ಅಭಿಪ್ರಾಯಗಳನ್ನು ಇಲ್ಲಿರುವ ಲಿಂಕ್ ಕ್ಲಿಕ್ಕಿಸುವ ಮೂಲಕ ನಮಗೆ ತಿಳಿಸಬಹುದು

webfeedback@prajavani.co.in
ಫೈನಲ್‌ನತ್ತ ಕೆಕೆಆರ್, ಮುಂಬೈ ಇಂಡಿಯನ್ಸ್‌ ಚಿತ್ತ

ಮದಗಜಗಳ ಹೋರಾಟಕ್ಕೆ ಉದ್ಯಾನನಗರಿ ಸಿದ್ಧ

Published:
Updated:
ಮದಗಜಗಳ ಹೋರಾಟಕ್ಕೆ ಉದ್ಯಾನನಗರಿ ಸಿದ್ಧ

ಬೆಂಗಳೂರು: ಪೆಟ್ಟು ತಿಂದ ಹುಲಿಯಂತಾಗಿರುವ ಮುಂಬೈ ಇಂಡಿಯನ್ಸ್‌ ಮತ್ತು  ಎಲಿಮಿನೇಟರ್‌ ಪಂದ್ಯದ  ಗೆಲುವಿನಿಂದ ಹುರುಪುಗೊಂಡಿರುವ ಕೋಲ್ಕತ್ತ ನೈಟ್‌ ರೈಡರ್ಸ್ ತಂಡಗಳು ಶುಕ್ರವಾರ ಚಿನ್ನಸ್ವಾಮಿ ಅಂಗಳದಲ್ಲಿ ಮುಖಾಮುಖಿಯಾಗಲಿವೆ.

ಇಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯ ಹತ್ತನೇ ಆವೃತ್ತಿಯ ಎರಡನೇ ಕ್ವಾಲಿಫೈಯರ್‌ನಲ್ಲಿ ಗೆದ್ದು ಫೈನಲ್‌ಗೆ ಲಗ್ಗೆ ಹಾಕಲು ಎರಡೂ ತಂಡಗಳು ಜಿದ್ದಾಜಿದ್ದಿನ ಹಣಾಹಣಿ ನಡೆಸುವ ನಿರೀಕ್ಷೆ ಇದೆ. ತಲಾ ಎರಡು ಬಾರಿ ಪ್ರಶಸ್ತಿ ಗೆದ್ದಿರುವ ಉಭಯ ತಂಡಗಳು ಮತ್ತೊಮ್ಮೆ ಪ್ರಶಸ್ತಿ ಗೆಲ್ಲುವ ಕನಸು ಕಾಣುತ್ತಿವೆ.

ಮೇ 16ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದಿದ್ದ ಮೊದಲ ಕ್ವಾಲಿಫೈಯರ್‌ನಲ್ಲಿ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡವು  ರೈಸಿಂಗ್ ಪುಣೆ ಸೂಪರ್‌ಜೈಂಟ್ ಎದುರು 20 ರನ್‌ಗಳಿಂದ ಸೋತಿತ್ತು. 

ಮುಂಬೈ ತಂಡವು ಈ ಬಾರಿಯ ಟೂರ್ನಿಯ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿ ಕ್ವಾಲಿಫೈಯರ್  ಪ್ರವೇಶಿಸಿತ್ತು.  ಆದರೆ ಪುಣೆ ಎದುರಿನ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿತ್ತು. ಅದರಿಂದಾಗಿ ಫೈನಲ್ ಸುತ್ತು ಪ್ರವೇಶಿಸಲು ಈಗ ಮತ್ತೊಂದು ಪರೀಕ್ಷೆ ಎದುರಿಸಬೇಕಿದೆ.

ಈ ಆವೃತ್ತಿಯಲ್ಲಿ ಮುಂಬೈ ತಂಡದ ನಾಯಕ ರೋಹಿತ್ ಶರ್ಮಾ ಹೆಚ್ಚು ರನ್‌ ಹೊಳೆ ಹರಿಸಿಲ್ಲ. ಅವರು 15 ಪಂದ್ಯಗಳಿಂದ ಗಳಿಸಿರುವುದು ಕೇವಲ 283 ರನ್‌ಗಳನ್ನು ಮಾತ್ರ.

ಆದರೆ ತಂಡದಲ್ಲಿರುವ ಕೀರನ್ ಪೊಲಾರ್ಡ್, ಪಾರ್ಥಿವ್ ಪಟೇಲ್,  ಅಂಬಟಿ ರಾಯುಡು, ಆಲ್‌ರೌಂಡರ್‌ ಗಳಾದ  ಕೃಣಾಲ್ ಪಾಂಡ್ಯ, ಹಾರ್ದಿಕ್ ಪಾಂಡ್ಯ, ಲೆಂಡ್ಲ್‌ ಸಿಮನ್ಸ್‌ ಅವರು ಲೀಗ್ ಹಂತದಲ್ಲಿ ತಮ್ಮ ಬ್ಯಾಟಿಂಗ್ ಮೂಲಕ ರನ್‌ಗಳ ರಾಶಿ ಪೇರಿಸಿದ್ದರು.

ಬೌಲಿಂಗ್‌ನಲ್ಲಿ ಅನುಭವಿಗಳು ಮತ್ತು ಯುವ ಬೌಲರ್‌ಗಳು ಉತ್ತಮ ಫಾರ್ಮ್‌ನಲ್ಲಿದ್ದಾರೆ. ಮಿಷೆಲ್ ಮೆಕ್‌ ಲೆಂಗಾನ್,  ಲಸಿತ್ ಮಾಲಿಂಗ,  ಕೊನೆ ಯ ಹಂತದ ಓವರ್‌ಗಳ ಪರಿಣತ  ಜಸ್‌ ಪ್ರೀತ್ ಬೂಮ್ರಾ , ಹಾರ್ದಿಕ್, ಸ್ಪಿನ್ನರ್‌ ಗಳಾದ ಕೃಣಾಲ್ ಮತ್ತು ಹರಭಜನ್ ಸಿಂಗ್ ಅವರು ಪಂದ್ಯ ಗೆಲ್ಲಿಸಿಕೊಡಬಲ್ಲ ಆಟಗಾರರು. ಕೆಕೆಆರ್ ತಂಡದ ಬಲಿಷ್ಠ  ಬ್ಯಾಟಿಂಗ್ ಬಲವನ್ನು ಕಟ್ಟಿಹಾಕುವ ಒತ್ತಡ ಈ ಬೌಲರ್‌ಗಳ ಮೇಲೆ ಇದೆ.

ಪುಣೆ ಎದುರಿನ ಪಂದ್ಯದ ಆರಂಭ ದಲ್ಲಿ ಮೇಲುಗೈ ಸಾಧಿಸಿದ್ದ ಮುಂಬೈ ಬೌಲರ್‌ಗಳು ನಂತರದ ಹಂತದಲ್ಲಿ ಮನೋಜ್ ತಿವಾರಿ ಮತ್ತು ಮಹೇಂದ್ರಸಿಂಗ್ ದೋನಿ ಅವರ ಗದಾಪ್ರಹಾರಕ್ಕೆ ಬಸವಳಿದಿದ್ದರು. ಆದ್ದರಿಂದ ಇನಿಂಗ್ಸ್‌ನ ಕೊನೆಯ ಓವರ್‌ ನವರೆಗೂ ಬಿಗುವಿನ ದಾಳಿ ನಡೆಸುವ ಸವಾಲು ಕೂಡ ಮುಂಬೈ ಬೌಲರ್‌ಗಳಿಗೆ ಇದೆ.

ಲೀಗ್ ಹಂತದಲ್ಲಿ  ಉಭಯ ತಂಡಗಳು ಎರಡು ಬಾರಿ ಮುಖಾಮುಖಿಯಾದಾಗಲೂ ಮುಂಬೈ ತಂಡವೇ ಮೇಲುಗೈ ಸಾಧಿಸಿತ್ತು.

ಕೆಕೆಆರ್‌ ಹುರುಪುಬುಧವಾರ ಇಲ್ಲಿ ನಡೆದಿದ್ದ ಎಲಿಮಿನೇಟರ್ ಪಂದ್ಯದಲ್ಲಿ ಸನ್‌ರೈಸರ್ಸ್‌ ತಂಡದ ಎದುರು ಕೆಕೆಆರ್ ತಂಡವು 7 ವಿಕೆಟ್‌ಗಳಿಂದ ಜಯಿಸಿತ್ತು.  ಮೊದಲು ಬ್ಯಾಟಿಂಗ್ ಮಾಡಿದ್ದ ಡೇವಿಡ್ ವಾರ್ನರ್‌ ಬಳಗವನ್ನು 128 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಕೆಕೆಆರ್ ಬೌಲರ್‌ಗಳು ಯಶಸ್ವಿಯಾಗಿದ್ದರು.

ನಂತರ ಮಳೆಯಿಂದಾಗಿ ಪಂದ್ಯಕ್ಕೆ ಅಡ್ಡಿಯಾಗಿತ್ತು. ಡಕ್ವರ್ಥ್ ಲೂಯಿಸ್ ನಿಯಮದನ್ವಯ ಕೆಕೆಆರ್ ತಂಡಕ್ಕೆ ಗೆಲುವಿಗಾಗಿ 6 ಓವರ್‌ಗಳಲ್ಲಿ 48 ರನ್‌ಗಳನ್ನು ಗಳಿಸುವ ಗುರಿ ನೀಡಲಾಗಿತ್ತು.

ಆದರೆ ಈ  ಹಾದಿಯಲ್ಲಿ ಕೆಕೆಆರ್ ತಂಡವು ಆರಂಭದಲ್ಲಿಯೇ ಆಘಾತ ಅನುಭವಿಸಿತ್ತು. ಮೂವರು ಪ್ರಮುಖ ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್ ಸೇರಿದ್ದರು. ಆದರೆ, ನಾಯಕ ಗಂಭೀರ್ ಅವರು ಏಕಾಂಗಿಯಾಗಿ ಹೋರಾಡಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಆದರೆ ಟೂರ್ನಿಯುದ್ದಕ್ಕೂ ಕೆಕೆಆರ್ ತಂಡದ ರಾಬಿನ್ ಉತ್ತಪ್ಪ ಮತ್ತು ಮನೀಷ್ ಪಾಂಡೆ ಉತ್ತಮವಾಗಿ ಆಡಿದ್ದರು.

ವೆಸ್ಟ್ ಇಂಡೀಸ್ ಸ್ಪಿನ್ನರ್ ಸುನಿಲ್ ನಾರಾಯಣ ಅವರು ಆರಂಭಿಕ ಬ್ಯಾಟ್ಸ್‌ಮನ್ ಆಗಿ ಪವರ್‌ಪ್ಲೇ ನಲ್ಲಿ ರನ್‌ ಹೊಳೆಯನ್ನು ಹರಿಸಿದ್ದಾರೆ. ಯೂಸುಫ್ ಪಠಾಣ್, ಕ್ರಿಸ್ ಲಿನ್, ಇಶಾಂಕ್ ಜಗ್ಗಿ ಅವರು ರನ್‌ ಗಳಿಕೆಗೆ ವೇಗ ನೀಡುವ ಸಮರ್ಥ ಬ್ಯಾಟ್ಸ್‌ಮನ್‌ಗಳಾಗಿದ್ದಾರೆ. 

ಬೌಲಿಂಗ್‌ನಲ್ಲಿಯೂ ಉತ್ತಮ ಫಾರ್ಮ್‌ನಲ್ಲಿರುವ ನೇಥನ್ ಕೌಲ್ಟರ್‌ ನೈಲ್, ಉಮೇಶ್ ಯಾದವ್‌, ಟ್ರೆಂಟ್ ಬೌಲ್ಟ್ ಮತ್ತು ಸ್ಪಿನ್ನರ್‌ಗಳಾದ ಪಿಯೂಷ್ ಚಾವ್ಲಾ, ಕುಲದೀಪ್ ಯಾದವ್ ಅವರು  ಮುಂಬೈ ತಂಡದ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಕಟ್ಟಿಹಾಕಬಲ್ಲ ಸಮರ್ಥರಾಗಿದ್ದಾರೆ. 

ಐಪಿಎಲ್‌ನ ಒಂದು ದಶಕದ ಇತಿಹಾಸದ ಪುಟಗಳ ಮೇಲೆ ಕಣ್ಣಾಡಿಸಿದರೆ ಎರಡೂ ತಂಡಗಳು ಬಹುತೇಕ ಸಮಬಲಶಾಲಿಗಳಾಗಿವೆ.   ಉದ್ಯಾನನಗರಿಯಲ್ಲಿ ಗೆದ್ದ ತಂಡವು ಮೇ 21ರಂದು ಹೈದರಾಬಾದ್‌ನಲ್ಲಿ ರೈಸಿಂಗ್ ಪುಣೆ ಎದುರು ಪ್ರಶಸ್ತಿಗಾಗಿ ಸೆಣಸಲಿದೆ.

ಪಂದ್ಯ ಆರಂಭ: ರಾತ್ರಿ 8

ನೇರಪ್ರಸಾರ: ಸೋನಿ ಸಿಕ್ಸ್

ಯಾರಿಗೆ ಒಲಿಯಲಿದೆ  ಪಿಚ್ ?

ಮೊದಲಿನಿಂದಲೂ ಬ್ಯಾಟಿಂಗ್ ಸ್ನೇಹಿ ಹಣೆಪಟ್ಟಿ ಹೊಂದಿದ್ದ ಇಲ್ಲಿಯ ಪಿಚ್ ಈ ಬಾರಿ ಬೌಲರ್‌ಗಳತ್ತ ಹೆಚ್ಚು ವಾಲಿದೆ. ಅದರಲ್ಲೂ ಸ್ಪಿನ್ನರ್‌ಗಳು ಹೆಚ್ಚು ಯಶಸ್ಸು ಸಾಧಿಸಿದ್ದಾರೆ.

ಆದರೆ ತಾಳ್ಮೆ ಮತ್ತು ಚಾಣಾಕ್ಷತನದಿಂದ ಬ್ಯಾಟ್‌ ಬೀಸುವ  ಬ್ಯಾಟ್ಸ್‌ಮನ್‌ಗಳು ಹೆಚ್ಚು ರನ್‌ ಗಳಿಸುವ ಅವಕಾಶವೂ ಇಲ್ಲಿದೆ. ಕಳೆದ ಎರಡು ದಿನವೂ ಮಳೆ ಸುರಿದಿರುವುದರಿಂದ ತಂಪು ವಾತಾವರಣದ ಇದೆ. ರಾತ್ರಿ ಹೊತ್ತಿನಲ್ಲಿ ಹೆಚ್ಚು ತೇವಾಂಶವೂ ಆಟದ ಮೇಲೆ ಪರಿಣಾಮ ಬೀರುವುದು ಖಚಿತ. ಆದ್ದರಿಂದ ಟಾಸ್ ಗೆದ್ದವರು ತೆಗೆದುಕೊಳ್ಳುವ ನಿರ್ಣಯವೇ ಅಂತಿಮವಾಗಲಿದೆ.

ಮುಖ್ಯಾಂಶಗಳು

* ಎಲಿಮಿನೇಟರ್ ಪಂದ್ಯದಲ್ಲಿ ಸನ್‌ರೈಸರ್ಸ್‌ ಎದುರು ಗೆದ್ದಿದ್ದ ಕೆಕೆಆರ್

* ಮೊದಲ ಕ್ವಾಲಿಫೈಯರ್‌ ನಲ್ಲಿ ರೈಸಿಂಗ್ ಪುಣೆ ಎದುರು ಸೋತಿದ್ದ ಮುಂಬೈ

* ಶುಕ್ರವಾರವೂ ಮಳೆ ಬರುವ ಸಾಧ್ಯತೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry