ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆನ್ನು ನೆಟ್ಟಗಾದಂತೆ...

Last Updated 19 ಮೇ 2017, 19:30 IST
ಅಕ್ಷರ ಗಾತ್ರ

ಈ ಲೇಖನ ಓದುವಾಗ ನೀವು ಬೆನ್ನು ಬಗ್ಗಿಸಿ ಕುಳಿತು ಓದುತ್ತಿರುವಿರಾ? ಹಾಗಿದ್ದರಂತೂ ಈ ಲೇಖನವನ್ನು ನೀವು ಪೂರ್ತಿ ಓದಿ ಮುಗಿಸಲೇ ಬೇಕು!  ನಮ್ಮ ದೇಹ ನಮ್ಮ ಮನಸ್ಸಿನ ಭಾವನೆಗಳನ್ನು ಹಲವು ರೀತಿಯಲ್ಲಿ ಹೊರ ಹಾಕುತ್ತದೆ.

ಹಾಗೆ ನೋಡಿದರೆ ದೇಹವೇ ಮನಸ್ಸನ್ನು ವ್ಯಕ್ತಪಡಿಸುವ ಮಾಧ್ಯಮ. ಮನಸ್ಸು ಇತರರಿಗೆ ಕಾಣುವುದಲ್ಲವಷ್ಟೆ. ಹಾಗಾಗಿ ಇತರರ ಮನಸ್ಸಿನ ಭಾವನೆಗಳನ್ನು ನಾವು ಗ್ರಹಿಸುವುದು ಅವರ ‘ದೈಹಿಕ ಭಾಷೆ’ (body language) ಮುಖಾಂತರವೇ.

ಇದರ ಬಗ್ಗೆ ಓದುತ್ತಲೇ ನೀವು ಕುಳಿತಿರುವ ಭಂಗಿಯನ್ನು ಎರಡು ನಿಮಿಷಗಳ ಕಾಲ ಬದಲಾಯಿಸಲು ಪ್ರಯತ್ನಿಸಿ. ನಿಮ್ಮ ದೇಹ ಮತ್ತು ನೀವು ಅದರಿಂದ ವ್ಯಕ್ತಪಡಿಸುವ ರೀತಿಯನ್ನು ಸರಿಯಾಗಿ ಗಮನಿಸಿ. ಬೆನ್ನು ಬಗ್ಗಿರಬಹುದು, ಕಾಲ ಮೇಲೆ ಕಾಲು ಹಾಕಿ ಕುಳಿತರಬಹುದು, ಇಡೀ ದೇಹವನ್ನು ಸಂಕುಚಿಸಿ, ಮುದುರಿ ಕುಳಿತಿರಬಹುದು.

ಕೈಗಳನ್ನು ಮಡಿಸಿ ದೇಹವನ್ನು ಮತ್ತಷ್ಟು ಚಿಕ್ಕದಾಗಿ ಮಾಡಿಕೊಂಡಿರಬಹುದು. ಕೆಲವೊಮ್ಮೆ ಎಲ್ಲರಿಗೂ ನಾವು ಕಾಣುವ ಹಾಗೆ ಮೈ ನೆಟ್ಟಗಾಗಿಸಿ ಕುಳಿತುಕೊಳ್ಳಬಹುದು. ಹೀಗೆ ನಮ್ಮ ದೇಹವನ್ನೇ ನಾವು ಗಮನಿಸಿಕೊಳ್ಳುವುದು ಏಕೆ ಮುಖ್ಯವಾಗುತ್ತದೆ ಎಂಬುದನ್ನು ನೋಡೋಣ. ನಮ್ಮ ದೇಹದ ಭಂಗಿ ನಮ್ಮ ಜೀವನವನ್ನು ಹೇಗೆ ಗಮನಾರ್ಹವಾಗಿ ಬದಲಿಸಬಹುದು ಎಂಬುದರ ಬಗೆಗೆ ಮನೋವಿಜ್ಞಾನ ಏನು ಹೇಳುತ್ತದೆ?

ಮನುಷ್ಯ ಸಹಜವಾಗಿ ನಾವು ದೇಹದ ಭಾಷೆಯ ಬಗ್ಗೆ-ಅದೂ ನಮ್ಮದಕ್ಕಿಂತ ಇನ್ನೊಬ್ಬರ ದೇಹದ ಭಾಷೆಯ ಬಗೆಗೆ ಕುತೂಹಲ-ಆಸಕ್ತಿಗಳಿಂದ ಗಮನಿಸುತ್ತೇವೆ. ಇತರರ ಮುಖಭಾವ, ದೃಷ್ಟಿ, ಕೈಕುಲುಕುವಿಕೆ, ಭುಜ ಕೊಡಹುವುದು ನಮ್ಮ ಗಮನ ಸೆಳೆಯುತ್ತದೆ.

ಮಾತನಾಡದೆಯೂ ಅದು ನಮಗೆ ಕೆಲವು ಅಂಶಗಳನ್ನು ತಿಳಿಸುತ್ತದೆ. ಸಾಮಾಜಿಕ ಮನೋವಿಜ್ಞಾನ ದೇಹದ ಭಾಷೆ -body language ಬಗ್ಗೆ ಸಾಕಷ್ಟು ತಲೆ ಕೆಡಿಸಿಕೊಂಡಿದೆ, ಸಂಶೋಧನೆಗಳನ್ನೂ ಮಾಡಿದೆ. ಕೆಲವೇ ಸೆಕೆಂಡುಗಳಷ್ಟು ಟಿ.ವಿ.ಯಲ್ಲಿ ಕಾಣುವ ಅಭ್ಯರ್ಥಿಗಳ ‘ದೇಹದ ಭಾಷೆ’ಯನ್ನು ಗ್ರಹಿಸಿಯೇ ಅಮೇರಿಕೆಯ ಸೆನೆಟ್ ಫಲಿತಾಂಶಗಳನ್ನು ಊಹಿಸಬಹುದು ಎಂದು ಸಾಬೀತಾಗಿದೆ.

ವೈದ್ಯ–ರೋಗಿಗಳ ‘ಮಾತುಕತೆ’ಯ 30 ಸೆಕೆಂಡುಗಳ ‘ಕ್ಲಿಪಿಂಗ್’ನಲ್ಲಿ ಮಾತುಗಳನ್ನು ತೆಗೆದು, ಕೇವಲ ವೈದ್ಯನ ‘ದೇಹದ ಭಾಷೆ’ಯನ್ನು ಗಮನಿಸಿ, ವೈದ್ಯನನ್ನು ಕೋರ್ಟಿಗೆಳೆಯುತ್ತಾರೆಯೇ ಇಲ್ಲವೇ ಎಂಬುದನ್ನು ಊಹಿಸಲು ಸಾಧ್ಯವಿದೆ! 

ಅಂದರೆ ಚುನಾವಣೆಯ ಅಭ್ಯರ್ಥಿಗಳಾಗಲೀ, ವೈದ್ಯರಾಗಲೀ ಎಷ್ಟು ಪರಿಣತರು ಎಂಬುದಕ್ಕಿಂತ ‘ನಮಗೆ ವ್ಯಕ್ತಿ ಇಷ್ಟವೇ’ ಮತ್ತು ನಮ್ಮೊಡನೆ ಅವರು ಸಂವಹನ ನಡೆಸಿದ ರೀತಿ ಇವೆರಡೂ ಇಲ್ಲಿ ಮುಖ್ಯ ಎಂಬುದು ಇದರ ಅರ್ಥ.

‘ದೇಹದ ಭಾಷೆ’ಯ ಬಗ್ಗೆ ನಾವು ಯೋಚಿಸುವಾಗ, ಸಾಮಾನ್ಯವಾಗಿ ನಾವು ಇತರರನ್ನು ಅದರಿಂದ ಅರ್ಥ ಮಾಡಿಕೊಳ್ಳುವ ಬಗ್ಗೆ, ಇತರರು ನಮ್ಮ ಬಗ್ಗೆ ತಿಳಿಯುವ ಕುರಿತು, ಅದರ ಪರಿಣಾಮಗಳ ಬಗೆಗೆ ಮಾತ್ರ ಗಮನಿಸುತ್ತೇವೆ.

ಸಾಧಾರಣವಾಗಿ ‘ದೇಹದ ಭಾಷೆ’ ಪರಿಣಾಮ ಬೀರುವ ಇನ್ನೊಂದು ‘ವ್ಯಕ್ತಿ’ಯ ಬಗೆಗೆ ನಾವು ಅರ್ಥಮಾಡಿಕೊಳ್ಳುವುದಿಲ್ಲ! ಯಾರು ಈ ವ್ಯಕ್ತಿ? ನಾವೇ!  ನಮ್ಮ ‘ದೇಹದ ಭಾಷೆ’ ನಮ್ಮದೇ ಯೋಚನೆಗಳು, ನಮ್ಮ ಭಾವನೆಗಳು, ನಮ್ಮ ದೇಹ ಎಲ್ಲದರ ಮೇಲೂ ಪ್ರಭಾವ ಬೀರುತ್ತದೆ. ನಮ್ಮ ‘ಬಲ’ ಎಷ್ಟೆಂಬುದನ್ನು ನಿರ್ಧರಿಸುತ್ತದೆ.

‘ಬಲ’, ‘ಪ್ರಭಾವ’ ಈ ರೀತಿಯ ವ್ಯಕ್ತಿತ್ವದ ಅಂಶಗಳಿಗೂ ತಲೆ ಎತ್ತಿ, ಬೆನ್ನು ನೆಟ್ಟಗಾಗಿಸಿ ನಡೆಯುವುದಕ್ಕೂ ಸಂಬಂಧವಾದರೂ ಎಲ್ಲಿಂದ? ಪ್ರಾಣಿಸಾಮ್ರಾಜ್ಯದಲ್ಲಿ ‘ದೇಹದ ಭಾಷೆ’ಯ ಮೂಲಕವೇ ಬಲ-ಪ್ರಭಾವ ಎಲ್ಲವೂ ನಡೆಯುತ್ತದಷ್ಟೆ. ದೇಹವನ್ನು ದೊಡ್ಡದಾಗಿಸುವುದು, ಚಾಚುವುದು, ಹೆಚ್ಚು ಜಾಗವನ್ನು ಆಕ್ರಮಿಸುವ ಅವಕಾಶಗಳು.

ಅಂದರೆ ಮೂಲಭೂತವಾಗಿ ಇವು ‘ತೆರೆದುಕೊಳ್ಳುವ’ ತಂತ್ರಗಳು. ಇದು ಮನುಷ್ಯನೆಂಬ ಪ್ರಾಣಿಯ ವಿಷಯದಲ್ಲಿಯೂ ನಿಜವೇ. ನೀವು ಆತ್ಮವಿಶ್ವಾಸ-ಧೈರ್ಯ-ಸಂತಸದಿಂದಿರುವಾಗ ಗಮನಿಸಿದರೆ, ದೇಹ ಚಾಚುವ-ವಿಸ್ತರಿಸುವ ಪ್ರಕ್ರಿಯೆ ಸುಲಭವಾಗಿ ಕಾಣುತ್ತದೆ. ಅಂದರೆ ಪ್ರಬಲತೆಯ, ಆ ಅಭಿವ್ಯಕ್ತಿ ಸಾರ್ವಕಾಲಿಕ ಮತ್ತು ಸಾರ್ವತ್ರಿಕ.

ಇದನ್ನು ನಾವು ಕೆಲವೊಮ್ಮೆ ‘ಹೆಮ್ಮೆ’ ಎಂದೂ ಕರೆಯುತ್ತೇವೆ. ಜೆಸ್ಸಿಕಾಟ್ರೇಸಿ ಎಂಬ ಸಾಮಾಜಿಕ ವಿಜ್ಞಾನಿ ‘ಹೆಮ್ಮೆ’ ಎಂಬ ಅಂಶವನ್ನೇ ಅಧ್ಯಯನ ಮಾಡಿದಳು. ಕಣ್ಣು ಕಾಣದ ಅಂಧರಲ್ಲೂ, ಕಣ್ಣಿನ ದೃಷ್ಟಿಯಿರುವವರಲ್ಲೂ ಒಂದು ಸ್ಪರ್ಧೆಯನ್ನು ಗೆದ್ದಾಗ ಅವರ ಪ್ರತಿಕ್ರಿಯೆಯನ್ನು ಗಮನಿಸಿದಳು. ಗೆಲ್ಲುವ ರೇಖೆಯನ್ನು ದಾಟಿದಾಗ, ಅವರು ಗೆದ್ದಾಗ, ಇಬ್ಬರಲ್ಲೂ (ಅಂದರೆ ಅಂಧರಿಗೆ ಅವರು ಬೇರೆಯವರು ಮಾಡುವುದನ್ನು ನೋಡದಿದ್ದರೂ) “ಕೈಗಳನ್ನು  ‘V’ ಆಕಾರದಲ್ಲಿ ಮೇಲೆತ್ತುವ, ಗಲ್ಲವನ್ನು ಮೇಲೆತ್ತುವ” ದೇಹದ ಭಾಷೆಯನ್ನು ದಾಖಲಿಸಿದಳು.

ನಮಗೆ ಈ ‘ಪವರ್’ ಇಲ್ಲದಾಗ, ಅಥವಾ ಇಲ್ಲವೆಂದು ನಮಗನ್ನಿಸಿದಾಗ ನಾವು ಏನು ಮಾಡುತ್ತೇವೆ? ಇದಕ್ಕೆ ವಿರುದ್ಧವಾದದ್ದನ್ನು ಮಾಡುತ್ತೇವೆ. ಅಂದರೆ ನಾವು ತೆರೆದುಕೊಳ್ಳುವ ಬದಲು ಮುಚ್ಚಿಕೊಳ್ಳುತ್ತೇವೆ. ನಮ್ಮನ್ನು ನಾವು ‘ಕವರ್’ ಮಾಡಿಕೊಳ್ಳುತ್ತೇವೆ.

ನಮ್ಮನ್ನು ನಾವು ‘ಸಣ್ಣ’ ಮಾಡಿಕೊಳ್ಳುತ್ತೇವೆ. ನಮ್ಮ ಸುತ್ತಮುತ್ತಲಿನ ವ್ಯಕ್ತಿಗಳಿಗೆ ಎಡತಾಕುವುದೂ ನಮಗೆ ಈ ಸಂದರ್ಭದಲ್ಲಿ ಬೇಡವೆನಿಸುತ್ತದೆ. ಮತ್ತೆ ಈ ನಡವಳಿಕೆ ಪ್ರಾಣಿಗಳಲ್ಲಿಯೂ, ಮನುಷ್ಯರಲ್ಲಿಯೂ ಒಂದೇ. ಪ್ರಬಲರನ್ನೂ ದುರ್ಬಲರನ್ನೂ ಒಟ್ಟಿಗೆ ಸೇರಿಸಿದರೆ, ಈ ದೇಹದ ಭಾಷೆ ‘ಯಾರು ಪ್ರಬಲರು’ ಎನ್ನುವುದನ್ನು ನಿರ್ಧರಿಸುವ ಪ್ರಮುಖ ಅಂಶವಾಗುತ್ತದೆ. ನಮಗಿಂತ ಪ್ರಬಲರು ನಮ್ಮ ಮುಂದಿದ್ದರೆ ನಾವು ಅವರ ‘ದೇಹದ ಭಾಷೆ’ಯನ್ನು ಅನುಸರಿಸುವುದಿಲ್ಲ, ಬದಲು ನಾವು ಅವರಿಗೆ ವಿರುದ್ಧವಾಗಿ ವರ್ತಿಸುತ್ತೇವೆ!


ದೇಹದ ಭಾಷೆಯ ವಿಷಯದಲ್ಲಿ ಗಂಡುಮಕ್ಕಳಿಗೂ, ಹೆಣ್ಣುಮಕ್ಕಳಿಗೂ ಸ್ಪಷ್ಟ ವ್ಯತ್ಯಾಸಗಳನ್ನು ಸಂಶೋಧನೆಗಳು ಗುರುತಿಸಿವೆ. ಸಂಶೋಧನೆಗಳನ್ನು ಬಿಡಿ, ನಾವೇ ಸುತ್ತಮುತ್ತ ನೋಡಿದರೂ ಇವು ನಿಚ್ಚಳವಾಗಿ ಗೋಚರಿಸುತ್ತವೆ. ದೇಹದ ಬಗೆಗಿನ ಕೀಳರಿಮೆ ಹುಡುಗಿಯರಲ್ಲಿ ಹುಡುಗರಿಗಿಂತ ಹೆಚ್ಚು.

ಹದಿಹರೆಯದಮ ಹುಡುಗಿಯರಲ್ಲಂತೂ ‘ಬೆನ್ನು ಗೂನು’ ‘ನಾರ್ಮಲ್’ ಎನ್ನುವಷ್ಟರ ಮಟ್ಟಿಗೆ ಸಾಮಾನ್ಯ. ಅಮ್ಮಂದಿರಿಗೂ ತಮ್ಮ ಹೆಣ್ಣುಮಕ್ಕಳ ಈ ‘ಗೂನುಬೆನ್ನು’, ತಲೆನೋವು ಎನಿಸಿದರೂ ಅದನ್ನು ಹೇಗೆ ತಿದ್ದಬೇಕೆನ್ನುವುದೇ ದೊಡ್ಡ ಸಮಸ್ಯೆ.

ಹದಿಹರೆಯದ ಹುಡುಗಿಯರಲ್ಲಿ ಬದಲಾಗುವ ದೇಹಚಹರೆ, ಅದನ್ನು ಇತರರು ಗಮನಿಸುವರೆಂಬ ಮುಜುಗರಗಳೂ ಈ ‘ದೇಹದ ಭಾಷೆ’ಯ ಹಿಂದಿರುತ್ತವೆ ಎಂಬುದನ್ನು ತಿಳಿಯಲೇಬೇಕು.

ಆದರೆ ಈ ‘ಗೂನುಬೆನ್ನು’ ಮತ್ತು ದೇಹವನ್ನು ಮುದುಡಿಕೊಳ್ಳುವ ‘ದೇಹದ ಭಾಷೆ’ಗಳು ಕೇವಲ ಸೌಂದರ್ಯದ ಅಂಶಗಳಲ್ಲ ಎಂಬುದು ಗಮನಾರ್ಹ ಸಂಗತಿ. ಬದಲಾಗಿ ಹುಡುಗಿಯರು ತಮ್ಮ ಮುಂದಿನ ಜೀವನದಲ್ಲಿ ಸಾಧಿಸುವುದಕ್ಕೂ, ಆತ್ಮವಿಶ್ವಾಸದಿಂದ ಬಾಳುವುದಕ್ಕೂ ಈ ‘ದೇಹದ ಭಾಷೆ’ಗೂ ಸಂಬಂಧವಿದೆ.

ನಮ್ಮ ‘ದೇಹದ ಭಾಷೆ’ ಬೇರೆಯವರ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ನಾವು ನೋಡಿದ್ದೇವೆ. ನಮ್ಮ ಮೇಲೆ ನಮ್ಮದೇ ದೇಹದ ಭಾಷೆ ಪರಿಣಾಮ ಬೀರುತ್ತದೆ ಎನ್ನುವುದಕ್ಕೆ ಏನಾದರೂ ಆಧಾರವಿದೆಯೇ? ನಾವು ಸಂತೋಷವಾದಾಗ ನಗುತ್ತೇವೆ.

ಒಂದೊಮ್ಮೆ ಬಲವಂತವಾಗಿ ನಗುವನ್ನು ಬಾಯಿ ಅಗಲಿಸಿ ತರಲು ಪ್ರಯತ್ನಿಸುವಾಗಲೂ ನಗು ಬಂದಂತಾಗಿ ಮನಸ್ಸಿಗೆ ಸಂತಸದ ಕಿಂಚಿತ್ ಅನುಭವವಾಗುತ್ತದೆ ತಾನೆ? ಇದು ‘ಪ್ರಬಲ’ತೆಯ ವಿಷಯದಲ್ಲಿಯೂ ನಿಜವೇ. ‘ಬಲವಾಗಿದ್ದೇವೆ’ ಎಂಬಂತೆ ನಟಿಸುವುದೂ ಮನಸ್ಸಿಗೆ ನಾವು ‘ಪ್ರಬಲ’ ಎಂಬ ಭಾವನೆಯನ್ನೇ ತರುತ್ತದೆ.

ಒಂದು ಆಟವಾಡುತ್ತೇವೆ ಎಂದುಕೊಳ್ಳಿ. ನಾವು ಬೆನ್ನು ನೆಟ್ಟಗಿರಿಸಿ, ದೇಹ ಮುದುರದೆ ಆರಂಭಿಸುವುದು ಆತ್ಮವಿಶ್ವಾಸ-ಆಶಾವಾದವನ್ನು ನಮ್ಮಲ್ಲಿ ಹೆಚ್ಚಿಸುತ್ತದೆ. ನಮಗೆ ‘ಈ ಆಟವನ್ನು ನಾನು ಗೆದ್ದೇ ಗೆಲ್ಲುತ್ತೇನೆ’ ಎನಿಸತೊಡಗುತ್ತದೆ. ಹೆಚ್ಚು ಅಪಾಯವನ್ನೆದುರಿಸಲು ನಾವು ಸಿದ್ಧರಾಗುತ್ತೇವೆ. ಬೇರೆ ಬೇರೆ ರೀತಿಯಲ್ಲಿ ಯೋಚಿಸಲು ಸಮರ್ಥರಾಗುತ್ತೇವೆ.

ಒತ್ತಡವನ್ನು ಏರಿಸುವ ಇಳಿದರೆ ಕಾರ್ಟಿಸಾಲ್ ಮತ್ತು ಟೆಸ್ಟೋಸ್ಟಿರಾನ್ ಹಾರ್ಮೋನು ರಕ್ತದಲ್ಲಿ ಏರುತ್ತವೆ. ಮನಸ್ಸನ್ನು ಮತ್ತಷ್ಟು ಚುರುಕುಗೊಳಿಸುತ್ತವೆ!  ಅಂದರೆ ‘ದೇಹದ ಭಾಷೆ’ ಮನಸ್ಸಿನ ರೀತಿಯನ್ನು ರೂಪುಗೊಳಿಸುತ್ತದೆ!  ದೇಹದ ಭಾಷೆ ಆತ್ಮವಿಶ್ವಾಸ ಹೆಚ್ಚಿಸುತ್ತದೆ. ಗೆಲ್ಲುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

ಹದಿಹರೆಯದ ಮಕ್ಕಳಿಗಂತೂ ಈ ಬಗೆಗೆ ಅರಿವು ವಿಶೇಷವಾಗಿ ಬೇಕು. ಇಂಟರ್‌ವ್ಯೂಗೆ, ಪರೀಕ್ಷೆಗೆ, ಗುಂಪಿನಲ್ಲಿ ಮಾತನಾಡುವಾಗ, ಬೇರೆಯವರ ಎದುರಿಗೆ ಒಮ್ಮೆ ‘Power posing’, ಎಂದರೆ ಬೆನ್ನು ನೆಟ್ಟಗಿರಿಸಿ, ಸರಿಯಾಗಿ ಕುಳಿತು/ನಿಂತು ಮಾತನಾಡಲು ಪ್ರಯತ್ನಿಸಿ. ಅದು ನಿಮಗೆ ‘ನಟನೆ’ ಎನಿಸಿದರೂ ಪರವಾಗಿಲ್ಲ, ನಟನೆ ಮುಂದುವರೆಯುತ್ತಾ ಒಂದು ದಿನ ಬೆನ್ನು ನೆಟ್ಟಗಿರುವ, ಆತ್ಮವಿಶ್ವಾಸದ ಭಂಗಿಯೇ ನಿಮ್ಮ ಸಹಜವಾದ ದೇಹದ ಭಾಷೆಯಾಗುತ್ತದೆ. ನಟನೆ ನಿಜಸ್ಥಿತಿಯಾಗುವವರೆಗೆ ನಟಿಸಿ!  ಆತ್ಮವಿಶ್ವಾಸ ಗಳಿಸಿ!

ಡಾ. ಕೆ.ಎಸ್. ಪವಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT