ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಘ ರಾಶಿಯ ಮೈದಾನದಲ್ಲಿ ವಿಜ್ಞಾನಿಗಳ ಕಸರತ್ತು

Last Updated 19 ಮೇ 2017, 19:30 IST
ಅಕ್ಷರ ಗಾತ್ರ

ಮಳೆಗಾಲಕ್ಕೆ ಮುನ್ನ ರೈತರು ಭೂಮಿ ಹದ ಮಾಡಿ ಕೃಷಿಗೆ ಬೀಜ ಬಿತ್ತನೆ ಮಾಡಿ ಮಳೆಗಾಗಿ ಕಾತರದಿಂದ ಕಾಯುತ್ತಾರೆ. ಒಂದು ವೇಳೆ ವರುಣದೇವ ಮುನಿಸಿ ಕೊಂಡು ಸುಮ್ಮಗಾದರೆ, ‘ಮೇಘ ರಾಜ’ನತ್ತ ಆಸೆ ಕಂಗಳಿಂದ ನೋಡುವುದು, ಹರಕೆ ಹೊತ್ತುಕೊಳ್ಳುವುದು, ಪ್ರಾರ್ಥಿಸುವುದು ಲಾಗಾಯ್ತಿನಿಂದ ನಡೆದುಕೊಂಡೇ ಬಂದಿದೆ.

ಮತ್ತೊಂದೆಡೆ ವಿಜ್ಞಾನಿಗಳು ಆಗಸದಲ್ಲಿ ದಟ್ಟೈಸುವ ಮೋಡಗಳ ಮೈದಾನದಲ್ಲಿ  ಹವಾಮಾನ ಮಾರ್ಪಾಡು  ಮಾಡುವ ರಾಸಾಯನಿಕ ಬಿತ್ತನೆ ಮಾಡಿ ಧರೆಗೆ ಮಳೆ ತರಿಸುವ ಪ್ರಯತ್ನವನ್ನೂ ನಡೆಸುತ್ತಲೇ ಬಂದಿದ್ದಾರೆ.

ಬರದಿಂದ ಕಂಗೆಟ್ಟಾಗ ಕೃತಕವಾಗಿ ಮಳೆ ತರಿಸುವ ‘ಮೋಡ ಬಿತ್ತನೆ’ಯ ಮಾತುಗಳು ಕೇಳಿ ಬರುತ್ತವೆ. ವಿಶ್ವದ ಹಲವು ದೇಶಗಳಲ್ಲಿ ಮೋಡ ಬಿತ್ತನೆ ಮಾಡಿ ಮಳೆ ಸುರಿಸುವ ಪ್ರಯತ್ನ ಇಂದು– ನಿನ್ನೆಯದಲ್ಲ. ಕಳೆದ ಶತಮಾನದ 50ರ ದಶಕದಿಂದಲೇ ಚಾಲನೆ ಸಿಕ್ಕಿತ್ತು. ಅದು ಯಶಸ್ವಿ ತಂತ್ರಜ್ಞಾನ ಹೌದೊ ಅಲ್ಲವೋ ಎಂಬ ತೀರ್ಮಾನಕ್ಕೆ  ಬರಲು ವಿಜ್ಞಾನಿಗಳಿಗೇ ಇನ್ನೂ ಸಾಧ್ಯವಾಗಿಲ್ಲ.

ಮೋಡ ಬಿತ್ತನೆ ಎಂದರೇನು? ಅದನ್ನು ಹೇಗೆ ನಡೆಸುತ್ತಾರೆ? ಅದರಿಂದ ಪರಿಸರಕ್ಕೆ ಹಾನಿ ಉಂಟಾಗುತ್ತದೆಯೇ? ಇಷ್ಟೆಲ್ಲ ಮಾಡಿದ ಬಳಿಕವೂ ‘ವರುಣ ದೇವ’ ಸಂತೃಪ್ತನಾಗಿ ಮಳೆ ಸುರಿಸುತ್ತಾನೆಯೇ ಎಂಬ ಸಂದೇಹಗಳ ಜನಮಾನಸದಲ್ಲಿ ಇನ್ನೂ ಉಳಿದಿವೆ. ಕೃತಕ ಮಳೆ ತರಿಸುವುದಾಗಿ ಸರ್ಕಾರಗಳ ಭರವಸೆಗಳಿಗೆ ಜನ ಆಸೆಗಣ್ಣಿನಿಂದ ನೋಡುತ್ತಾರೆ.

ಪ್ರತಿಯೊಂದು ಜೀವಿಗೂ ನೀರು ಅತಿ ಮುಖ್ಯ. ಮಳೆ ಕೈಕೊಟ್ಟು ಕೆರೆ– ಕುಂಟೆಗಳು ಬತ್ತಿ ಹೋದರೆ ಬದುಕು ಅಸಾಧ್ಯ. ಜಗತ್ತಿನಲ್ಲಿ ಮಾನವ ಸಂಖ್ಯೆ ಹೆಚ್ಚುತ್ತಾ ಹೋದಂತೆ, ಭೂ ಬಳಕೆ ವ್ಯಾಪ್ತಿಯೂ ಅಧಿಕಗೊಂಡಿತು. ಕುಡಿಯುವ ನೀರಿನ ಸಮಸ್ಯೆ ಬೃಹದಾಕಾರವಾಯಿತು. ಆಗ ಹವಾಮಾನ ವಿಜ್ಞಾನಿಗಳ ತಲೆಯಲ್ಲಿ ಹೊಳೆದ ವಿಚಾರವೆಂದರೆ, ಮೋಡಗಳ ರಾಶಿಯ ಒಡಲಲ್ಲಿ ಹುದುಗಿರುವ ಜಲವನ್ನು ಧರೆಗೆ ಇಳಿಸಲು ಸಾಧ್ಯವೇ ಎನ್ನುವುದು.

ಅದು ನಲವತ್ತರ ದಶಕ. ಅಮೆರಿಕದ  ಜನರಲ್‌ ಎಲೆಕ್ಟ್ರಿಕ್‌ ಸಂಶೋಧನಾ ಪ್ರಯೋಗಾಲಯದಲ್ಲಿ ಇರ್ವಿಂಗ್ ಲಂಗ್‌ಮುಯಿರ್‌ ಮತ್ತು ಸಹೋದ್ಯೋಗಿಗಳು ಶುಷ್ಕ ಮಂಜನ್ನು (ಡ್ರೈ ಐಸ್‌) ಸಂಶೋಧಿಸಿದರು.  ಅದನ್ನು ವಿಮಾನದ ಮೂಲಕ ಅತಿ ತಣ್ಣಗಿದ್ದ ಮೋಡಗಳ ರಾಶಿಯೊಳಗೆ ಸುರಿದಾಗ ತಕ್ಷಣವೇ ಮೋಡದಲ್ಲಿದ್ದ ನೀರು ಹಿಮವಾಗಿ  ಪರಿವರ್ತನೆಗೊಂಡಿತು. ಕ್ರಮೇಣ ಮೋಡಗಳ ರಾಶಿ  ಹರಡುತ್ತಾ ಹೋಗಿ, ಹಿಮದ ತುಂತುರು ಹನಿಗಳು ಸೃಷ್ಟಿ ಆಗಲಾರಂಭಿಸಿದವು. ಈ ಪ್ರಯೋಗವೇ ಮೋಡ ಬಿತ್ತನೆಗೆ ನಾಂದಿ ಹಾಡಿದ್ದು.

ಇದಾದ ಕೆಲವೇ ಸಮಯದಲ್ಲಿ  ಲಂಗ್‌ಮುಯಿರ್‌ ಮತ್ತು ಸಹೋದ್ಯೋಗಿಗಳು ಸಿಲ್ವರ್‌ ಅಯೋಡೈಡ್‌ ಸಂಶೋಧಿಸಿದರು. ಶುಷ್ಕ ಮಂಜಿನಲ್ಲಿರುವಂತೆ ಇದರಲ್ಲೂ ಬೀಜ ಕೇಂದ್ರ ಕಣಗಳಿದ್ದವು. ಅಲ್ಲದೆ, ಮೋಡಗಳನ್ನು  ಪ್ರಚೋದಿಸಿ ಮಳೆಯನ್ನು ತರಿಸಲು ಮೋಡಗಳ ತಳ ಭಾಗಕ್ಕೆ ಲವಣ ಕಣಗಳನ್ನು ಸೇರಿಸುವ ಪ್ರಯೋಗವೂ ಆಯಿತು. ಈ ಕ್ರಿಯೆಯಿಂದ ನೀರಿನ ಹನಿಗಳು ಸೃಷ್ಟಿಯಾದವು. ಮಳೆ ತರಿಸುವ ಸಾಧ್ಯತೆ ಇರುವ ಈ ಎರಡೂ ವಿಧಾನಗಳನ್ನು ಅನುಸರಿಸಿ  ಆ ಬಳಿಕ  ವಿಶ್ವದೆಲ್ಲೆಡೆ ಸಾಕಷ್ಟು ಪ್ರಯೋಗಗಳು ನಡೆದವು.

ಭಾರತದಲ್ಲಿ ಕೃತಕ ಮಳೆ ತರಿಸುವ ಮೊದಲ ಪ್ರಯತ್ನ ನಡೆದದ್ದು 1951ರಲ್ಲಿ. ಟಾಟಾ ಸಂಸ್ಥೆ ಈ ಸಾಹಸಕ್ಕೆ ಕೈ ಹಾಕಿತು. ಪಶ್ಚಿಮ ಘಟ್ಟದಲ್ಲಿ ಸಿಲ್ವರ್‌ ಅಯೋಡೈಡ್‌ನ್ನು ಜನರೇಟರ್‌ ಮೂಲಕ ಭೂಮಿಯಿಂದ ಮೋಡಕ್ಕೆ ಸೇರಿಸುವ ಪ್ರಯೋಗ ನಡೆಸಿತು. 1952 ರಲ್ಲಿ ಸಿಲ್ವರ್‌ ಅಯೋಡೈಡ್‌ ಮತ್ತು ಲವಣ ತುಂಬಿದ ಹೈಡ್ರೋಜನ್‌ ಬಲೂನನ್ನು ಮೋಡ ಇರುವ ಕಡೆಗೆ ಹಾರಿ ಬಿಡಲಾಯಿತು. ಟಾಟಾ ಸಂಸ್ಥೆಯ ಡಾ. ಬ್ಯಾನರ್ಜಿ  ಉಸ್ತುವಾರಿ ವಹಿಸಿದ್ದರು.

1953 ರಲ್ಲಿ  ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ, ‘ವಾತಾವರಣ ಸಂಶೋಧನಾ ಸಮಿತಿ ಮತ್ತು ಮಳೆ ಹಾಗೂ ಮೋಡ ಭೌತ ವಿಜ್ಞಾನ ಸಂಶೋಧನಾ ಘಟಕ’ವನ್ನು (ಆರ್‌ಸಿಪಿಆರ್) ಸ್ಥಾಪಿಸಿತು. ಇದರ ಮುಖ್ಯ ಕಾರ್ಯ ಮೋಡ ಭೌತ ವಿಜ್ಞಾನ ಮತ್ತು ಕೃತಕ ಮಳೆ ತರಿಸುವ ಬಗ್ಗೆ ವೈಜ್ಞಾನಿಕ ಅಧ್ಯಯನ ನಡೆಸುವುದಾಗಿತ್ತು.

ಈ ಸಂಸ್ಥೆ ಉತ್ತರ ಭಾರತದಲ್ಲಿ ದೀರ್ಘಾವಧಿ ಮೋಡ ಬಿತ್ತನೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು. 1957– 1966 ರ ಅವಧಿಯಲ್ಲಿ ಲವಣ ಕಣಗಳನ್ನು  ಬಳಸಿ ಮಳೆ ತರಿಸುವ ಪ್ರಯತ್ನ ನಡೆಸಿತು. ಇದರಿಂದ ಶೇ 20 ರಷ್ಟು ಹೆಚ್ಚು ಮಳೆ ಆಗಿದೆ ಎಂದು ಪ್ರಯೋಗ ನಡೆಸಿದ್ದ ರಾಮಮೂರ್ತಿ ಮತ್ತು ಬಿಸ್ವಾಸ್‌ ಎಂಬ ವಿಜ್ಞಾನಿಗಳು ಹೇಳಿಕೊಂಡಿದ್ದರು.

ಆರ್‌ಸಿಪಿಆರ್ ಘಟಕವನ್ನು ಬಳಿಕ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟ್ರಾಪಿಕಲ್‌ ಮೀಟಿರಾಲಜಿ (ಐಐಟಿಎಂ) ಜತೆಗೆ ಸೇರಿಸಲಾಯಿತು. ತಮಿಳುನಾಡಿನ ತಿರುವಳ್ಳೂರು (1973, 1975–1977), ಮುಂಬೈ (1973, 74), ಉತ್ತರ ಪ್ರದೇಶದ ರಿಹಾಂಡ್‌ ಅಚ್ಚುಕಟ್ಟು ಪ್ರದೇಶ (1974) ಹಾಗೂ ಕರ್ನಾಟಕದ ಲಿಂಗನಮಕ್ಕಿ ಅಚ್ಚುಕಟ್ಟು ಪ್ರದೇಶದಲ್ಲಿ (1975) ಐಐಟಿಎಂ ಮೋಡ ಬಿತ್ತನೆ ಪ್ರಯೋಗ ನಡೆಸಿತು. ಆದರೆ, ಮೋಡ ಬಿತ್ತನೆಯಿಂದ ಮಳೆ ಪ್ರಮಾಣ ಹೆಚ್ಚಾಯಿತೇ ಇಲ್ಲವೇ ಎಂಬುದನ್ನು ಪರೀಕ್ಷಿಸುವ ಗೋಜಿಗೆ ಹೋಗಲಿಲ್ಲ.

ಮಹಾರಾಷ್ಟ್ರದ ಬಾರಾಮತಿ ಪ್ರದೇಶದಲ್ಲಿ 1973–74, 1976 ಮತ್ತು 1979–86 ರ ಅವಧಿಯಲ್ಲಿ ಐಐಟಿಎಂ ಮೋಡ ಬಿತ್ತನೆ ಪ್ರಯೋಗ ನಡೆಸಿತು. ಇಲ್ಲಿ ಶೇ 24 ರಷ್ಟು ಮಳೆ ಹೆಚ್ಚಾಗಿದೆ ಎಂದು ಐಐಟಿಎಂ ಹೇಳಿಕೊಂಡಿದೆ.

1980– 1990ರ ದಶಕದಲ್ಲಿ ಮೋಡ ಬಿತ್ತನೆಯ ವೈಜ್ಞಾನಿಕ ಚಟುವಟಿಕೆ ಹೆಚ್ಚಿನ ಪ್ರಮಾಣದಲ್ಲಿ ನಡೆಯಲಿಲ್ಲ. ಇದಕ್ಕೆ ಮತ್ತೊಂದು ಕಾರಣವೆಂದರೆ, ಹೊಸ ಆವಿಷ್ಕಾರಗಳು ನಡೆಯಲಿಲ್ಲ. ಹಳೆ ಪದ್ಧತಿಯ ಯಶಸ್ಸಿನ ಮಟ್ಟ ದಾಖಲು ಮಾಡಲೂ ಸಾಧ್ಯವಾಗಲಿಲ್ಲ.

1990 ರಿಂದ 2000 ವರೆಗಿನ ಅವಧಿಯಲ್ಲಿ ಅತ್ಯಾಧುನಿಕ ವೈಮಾನಿಕ ಸಲಕರಣೆಗಳು, ರೇಡಾರ್‌, ಸಾಫ್ಟ್‌ವೇರ್‌ಗಳು ಬಳಕೆಗೆ ಬಂದವು.  ಅವುಗಳನ್ನು ಬಳಸಿಕೊಂಡು ವಿದೇಶಗಳಲ್ಲಿ ಮೋಡ ಬಿತ್ತನೆ ಚಟುವಟಿಕೆ ನಡೆಸಲಾಯಿತು.

‘ಅಮೆರಿಕದಲ್ಲಿ ಮೋಡ ಬಿತ್ತನೆ ನಡೆಸುವ ದೊಡ್ಡ ಕಂಪೆನಿಗಳೇ ಇವೆ. ಅಲ್ಲಿ ಸಾಕಷ್ಟು ಸಮಯ ಮೋಡ ಬಿತ್ತನೆ ಮಾಡಿ ಮಳೆ ತರಿಸುವ ಪ್ರಯತ್ನ ನಡೆಸಲಾಯಿತು. ಆದರೆ, ಎಲ್ಲ ಸಂದರ್ಭಗಳಲ್ಲಿ ಮಳೆ ಬರಲಿಲ್ಲ. ಇದರಿಂದಾಗಿ ಅಮೆರಿಕ ಸರ್ಕಾರ ಮೋಡ ಬಿತ್ತನೆ ಮೂಲಕ ಹಣ ಖರ್ಚು ಮಾಡುವುದನ್ನು ಕಡಿಮೆ ಮಾಡಿದೆ’ ಎನ್ನುತ್ತಾರೆ ಅಂತರರಾಷ್ಟ್ರೀಯ ಖ್ಯಾತಿಯ, ಮೋಡಗಳ ಕುರಿತು ಅಧ್ಯಯನ ನಡೆಸುತ್ತಿರುವ ವಿಜ್ಞಾನಿ ಪ್ರೊ. ರೊದ್ದಂ ನರಸಿಂಹ.

ಪುಣೆಯಲ್ಲಿರುವ ಭಾರತೀಯ ಉಷ್ಣವಲಯದ ಪವನ ವಿಜ್ಞಾನ ಸಂಸ್ಥೆಯ(Indian Institute of Tropical Meteorology) ಮೋಡ ಮತ್ತು ಮಳೆ ವಿಭಾಗದ ಯೋಜನಾ ನಿರ್ದೇಶಕಿ ಡಾ. ತಾರಾ ಪ್ರಭಾಕರನ್‌ ಅವರು ಮೋಡ ಬಿತ್ತನೆಯನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.

‘ನಮ್ಮ ಸಂಸ್ಥೆ 70 ರ ದಶಕದಲ್ಲಿ ಮೋಡ ಬಿತ್ತನೆ ಕಾರ್ಯಕ್ರಮ ಆರಂಭಿಸಿತು. 2009 ರಲ್ಲಿ ಸಾಕಷ್ಟು ಬದಲಾವಣೆಗಳು ಮತ್ತು ಆಧುನಿಕ ತಂತ್ರಜ್ಞಾನ ಬಳಸಿ ಮೋಡ ಬಿತ್ತನೆ ಪುನರುಜ್ಜೀವನಗೊಳಿಸಲಾಯಿತು. ವಿವಿಧ ರಾಜ್ಯಗಳ ಬೇಡಿಕೆ ಆಧಾರದಲ್ಲಿ ಮೋಡ ಬಿತ್ತನೆ ಕೈಗೊಳ್ಳಲಾಗುತ್ತಿದೆ. ವಿಶ್ವ ಹವಾಮಾನ ಸಂಸ್ಥೆಯ ನಿಯಮಾವಳಿ ಪ್ರಕಾರವೇ, ಮೊದಲಿಗೆ ಮೋಡಗಳು ಮತ್ತು ಅವುಗಳ ಗುಣ ಲಕ್ಷಣಗಳ ಬಗ್ಗೆ ಸಮೀಕ್ಷೆ ನಡೆಸಲಾಗುತ್ತದೆ.

ವಿವಿಧ ಬಗೆಯ ಮೋಡಗಳು ಮತ್ತು ಪರಿಸರಕ್ಕೆ ಸಂಬಂಧಿಸಿದಂತೆ ಶಿಷ್ಟಾಚಾರ ಅನುಸರಿಸಲಾಗುತ್ತದೆ. ಒಮ್ಮೆ ಮೋಡ ಬಿತ್ತನೆ ಆದ ಬಳಿಕ ಮೋಡಗಳಲ್ಲಿ ಆಗುವ ಮಾರ್ಪಾಡುಗಳನ್ನು ಪತ್ತೆ ಮಾಡಲು ಸಿ ಬ್ಯಾಂಡ್ ರೇಡಾರ್‌ ಬಳಸುತ್ತೇವೆ. ಏಕೆಂದರೆ ಹವಾಮಾನದ ಕಾರಣ ಮೋಡ ಬಿತ್ತನೆಗೆ ಒಳಪಡದ ಮೋಡಗಳೂ ಮಳೆ ಸುರಿಸಲು ಆರಂಭಿಸುವ ಸಾಧ್ಯತೆ ಇರುತ್ತದೆ. ಆದ್ದರಿಂದ ನಾವು ತುಂಬಾ ಎಚ್ಚರಿಕೆ ವಹಿಸುತ್ತೇವೆ’ ಎನ್ನುತ್ತಾರೆ ತಾರಾ.

‘ಸಿಲ್ವರ್‌ ಅಯೋಡೈಡ್‌, ಮೋಡಗಳ ಜತೆ ಸಂಪರ್ಕ ಸಾಧಿಸಿದಾಗ ಅಲ್ಲಿ ಏನು ನಡೆಯುತ್ತದೆ ಎಂಬುದನ್ನು ಅರ್ಥೈಸಲು ಪ್ರಯೋಗಗಳನ್ನು ಆರಂಭಿಸಿದ್ದೇವೆ. ಈ ಪ್ರಯೋಗ 2019 ರವರೆಗೆ ನಡೆಯುತ್ತದೆ.  ಈ ಪ್ರಯೋಗದಲ್ಲಿ ಭೌತಿಕ ಮತ್ತು ಸಂಖ್ಯಾಶಾಸ್ತ್ರೀಯ ಮೌಲ್ಯಮಾಪನವನ್ನೂ ಕೈಗೊಳ್ಳಲಾಗುತ್ತದೆ.  ಪ್ರಯೋಗದ ಬಳಿಕ ಭವಿಷ್ಯದಲ್ಲಿ ಮೋಡ ಬಿತ್ತನೆಗೆ ಮಾರ್ಗಸೂಚಿ ಮತ್ತು ಶಿಷ್ಟಾಚಾರಗಳನ್ನೂ ರೂಪಿಸಲಿದ್ದೇವೆ ಎಂದರು.

ಐಐಎಂಟಿಯು ಪರ್ವತ ಪ್ರಾಂತ್ಯದ ಮಳೆನೆರಳು (rain shadow) ಪ್ರದೇಶದಲ್ಲಿ ವಿಸ್ತೃತ  ಅವಲೋಕನ ನಡೆಸಿದೆ. ಇದರಿಂದ ಮಳೆ ಸುರಿಯದಿರಲು ವಾತಾವರಣದಲ್ಲಿನ ತೊಡಕುಗಳನ್ನು ತಿಳಿದುಕೊಳ್ಳಲು ಸಾಧ್ಯವಾಗಿದೆ. ಈ ಹಿನ್ನೆಲೆಯಲ್ಲಿ 2017 ರಿಂದ 2019 ರ ವರೆಗೆ ದೇಶದಲ್ಲಿ ಬಹು ದೊಡ್ಡ ಪ್ರಮಾಣದ ಮೋಡ ಬಿತ್ತನೆ ಯೋಜನೆಯೊಂದನ್ನು ಹಮ್ಮಿಕೊಂಡಿದ್ದೇವೆ ಎನ್ನುತ್ತಾರೆ ತಾರಾ.

****

ಮೋಡ ಬಿತ್ತನೆಯಿಂದ ಮಳೆ ಖಚಿತ
ಮೋಡ ಬಿತ್ತನೆಯಿಂದ  ಹವಾಮಾನದಲ್ಲಿ ಮಾರ್ಪಾಡು ಮಾಡಿ ಮಳೆ ತರಿಸಲು ಸಾಧ್ಯವಿದೆ. ಮುಖ್ಯವಾಗಿ ಮಳೆ  ಹನಿಗಳ ಗಾತ್ರಗಳಲ್ಲೂ ಬದಲಾವಣೆ ಮಾಡಬಹುದು. ನಮಗೆ ಬೇಕಾದ ಗಾತ್ರದ ಮಳೆ ಹನಿಗಳನ್ನು ಪಡೆಯುವಂತೆ ಮಾಡಬಹುದು. ಅಲ್ಲದೆ, ವಾತಾವರಣದಲ್ಲಿರುವ ಮಳೆ ಕಣಗಳನ್ನು  ಆಕರ್ಷಿಸಿ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನೂ ಮಳೆ ಬಿತ್ತನೆಯ ಕೋಶಗಳು ಹೊಂದಿವೆ.

ಅಮೆರಿಕದಲ್ಲಿ ನಡೆಸಿದ ಅಧ್ಯಯನದ ಪ್ರಕಾರ ಸೂಕ್ತ ವಾತಾವರಣದಲ್ಲಿ ಪರ್ವತ ಪ್ರದೇಶದಲ್ಲಿನ ಮೋಡಗಳ ಮೇಲೆ ಸಿಲ್ವರ್‌  ಅಯೋಡೈಡ್‌ ಬಿತ್ತನೆ ಮಾಡಿದಾಗ  ಶೇ 5 ರಿಂದ 10 ರಷ್ಟು ಅಧಿಕ ಮಳೆ ಆಗಿದೆ. ಮೋಡ ಬಿತ್ತನೆಯಿಂದ ಪರಿಸರದ ಮೇಲೆ ದುಷ್ಪರಿಣಾಮ ಆಗುತ್ತದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ.

ಪರಿಣಾಮಗಳ ಕುರಿತು ವೈಜ್ಞಾನಿಕವಾಗಿ ಪತ್ತೆ ಮಾಡುವುದು ಅತ್ಯಂತ ಸಂಕೀರ್ಣ. ಮೋಡ ಬಿತ್ತನೆಯಿಂದ ಪರಿಸರಕ್ಕೆ ಆಗುವ ಹಾನಿಗಿಂತ ವಾಹನಗಳಿಂದ ಮತ್ತು ಇತರ ವಿಧಾನಗಳಿಂದ ಆಗುವ ಮಾಲಿನ್ಯವೇ ಹೆಚ್ಚು.

ವಿಶ್ವ ಹವಾಮಾನ ಸಂಸ್ಥೆ (ಡಬ್ಲ್ಯುಎಂಒ) ನಡೆಸಿರುವ ಅಧ್ಯಯನದ ಪ್ರಕಾರ, ಸಿಲ್ವರ್‌ ಅಯೋಡೈಡ್‌ ಬಳಸುವುದರಿಂದ ಮನುಷ್ಯರು, ಪ್ರಾಣಿಗಳು ಮತ್ತು  ನಿಸರ್ಗದ ಮೇಲೆ ಹೇಳಿಕೊಳ್ಳುವಷ್ಟು ಪರಿಣಾಮ ಆಗಿಲ್ಲ.  ವಿಶ್ವದ ವಿವಿಧ ದೇಶಗಳಲ್ಲಿ ನಡೆದ ಮೋಡ ಬಿತ್ತನೆಯನ್ನು ಅನುಸರಿಸಿಯೇ ಡಬ್ಲ್ಯುಎಂಒ ಅಧ್ಯಯನ ನಡೆಸಿದ್ದು.

ಸಾಮಾನ್ಯವಾಗಿ ಮೋಡ ಬಿತ್ತನೆಗೆ ಮುನ್ನ ಸಿಲ್ವರ್‌ ಅಯೋಡೈಡ್‌ ಬಳಸುವ ಪ್ರಮಾಣ ಮತ್ತು ಅದರಿಂದ ಮಾನವರು, ಪ್ರಾಣಿಗಳ ಮೇಲೆ ಪರಿಣಾಮ ಬೀರುತ್ತದೆಯೇ  ಎಂಬ ಬಗ್ಗೆ ಮೌಲ್ಯ ಮಾಪನ ನಡೆಸಲಾಗುತ್ತದೆ. ಆದರೂ ಮೋಡ ಬಿತ್ತನೆಯಿಂದ ಪರಿಣಾಮ ಆಗುವುದೇ ಇಲ್ಲ ಎಂದೇನಲ್ಲ.

ಒಂದು ವೇಳೆ ಆದರೂ ಉದ್ದೇಶಪೂರ್ವಕವಂತೂ ಅಲ್ಲ. ಗಾಳಿ ಬೀಸುವ ದಿಕ್ಕಿನಲ್ಲಿ ಅಥವಾ ಮಣ್ಣಿನ ಮೇಲೆ ಬಿದ್ದಾಗ ಅದರ ಪರಿಣಾಮ ಆಗುತ್ತದೆ. ಪರಿಸರ ಮತ್ತು ಹವಾಮಾನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂಬುದು ಈವರೆಗೂ ಸಾಬೀತಾಗಿಲ್ಲ.


-ಡಾ. ತಾರಾ ಪ್ರಭಾಕರನ್‌
ವಿಜ್ಞಾನಿ, ಭಾರತೀಯ ಉಷ್ಣವಲಯದ ಪವನ ವಿಜ್ಞಾನ ಸಂಸ್ಥೆ, ಪುಣೆ

***
‘ಗುಟ್ಟು ಇನ್ನೂ ರಟ್ಟಾಗಿಲ್ಲ’
ಮೋಡ ಬಿತ್ತನೆ ಮಾಡುವುದರಿಂದ ಮಳೆ ಆಗಿಯೇ ತಿರುತ್ತದೆ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿಲ್ಲ. ಕೆಲವೊಮ್ಮೆ ಆಗಬಹುದು. ಬಹುತೇಕ ಸಂದರ್ಭದಲ್ಲಿ ಆಗುವುದಿಲ್ಲ.

ಮೋಡ ಬಿತ್ತನೆ ಮಾಡುವುದರಿಂದ ಎಷ್ಟು ಮಳೆ ಬರುತ್ತೆ, ಎಲ್ಲಿ ಬರುತ್ತೆ ಎಂದು ನಿಖರವಾಗಿ ಹೇಳಲು ಯಾವುದೇ ವಿಜ್ಞಾನಿಗಳಿಂದ ಈವರೆಗೂ ಸಾಧ್ಯ  ಆಗಿಲ್ಲ. ಅಷ್ಟೇ ಅಲ್ಲ, ಮೋಡ ಬಿತ್ತನೆಯಿಂದ ಮಳೆ ಪ್ರಮಾಣ ಹೆಚ್ಚಾಗಿದೆ ಎಂದು ಹೇಳುವುದು ಕಷ್ಟ. ಇದು ಸಾಬೀತೂ ಆಗಿಲ್ಲ. ಮೋಡ ಬಿತ್ತನೆ ಯಶಸ್ವಿ ಆಗಿಲ್ಲ ಎಂದು ವಿಶ್ವದ ಬಹಳಷ್ಟು ವಿಜ್ಞಾನಿಗಳು ಹೇಳುತ್ತಾರೆ. ಒಟ್ಟಿನಲ್ಲಿ ಇದೊಂದು ಸಮಸ್ಯೆ ಆಗಿಯೇ ಉಳಿದಿದೆ.

ಶುಷ್ಕ ಮಂಜು ಮತ್ತು ಸಿಲ್ವರ್‌ ಅಯೋಡೈಡ್‌ ಬಳಸುವುದು ಪರಿಸರಕ್ಕೆ ನಿಶ್ಚಿತವಾಗಿ ಪರಿಣಾಮ ಉಂಟು ಮಾಡುತ್ತದೆ. ಅದು ಭೂಮಿ ಮೇಲೆ ಬಿದ್ದಾಗ ಹಾನಿ ಆಗಿದ್ದೂ ಇದೆ.

ಮೋಡಗಳೊಳಗೆ ಏನು ನಡೆಯುತ್ತದೆ ಎನ್ನುವುದನ್ನು ವಿಜ್ಞಾನಿಗಳಿಗೆ ಈವರೆಗೆ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಸಮುದ್ರದ ನೀರು  ಆವಿಯಾಗಿ  ಆಗಸದಲ್ಲಿ  ಮೋಡದ ರೂಪದಲ್ಲಿ ಹೆಪ್ಪುಗಟ್ಟುತ್ತದೆ ಎಂಬ ತಿಳಿವಳಿಕೆ ಇದೆ.

ಮೋಡಗಳ ಕುರಿತು ಸರಿಯಾದ ತಿಳಿವಳಿಕೆ ಇಲ್ಲದಿರುವುದರಿಂದಲೇ ಹವಾಮಾನ ತಜ್ಞರ ಮಳೆ ಮುನ್ಸೂಚನೆ ಬಹುತೇಕ ಸಂದರ್ಭಗಳಲ್ಲಿ ನಿಜವಾಗುವುದಿಲ್ಲ. ಹವಾಮಾನ ಬದಲಾವಣೆಯ ಬಗ್ಗೆ ಮಾತನಾಡುವುದಕ್ಕೆ ಮೊದಲು ಮೋಡದೊಳಗೆ ಏನಾಗುತ್ತದೆ ಎಂಬದನ್ನು ತಜ್ಞರು ಅರ್ಥೈಸಬೇಕಾಗುತ್ತದೆ. ಮೋಡದ ಗುಟ್ಟು ಇನ್ನೂ ರಟ್ಟಾಗಿಲ್ಲ. ಆ ನಿಟ್ಟಿನಲ್ಲಿ ನಾವು ಸಾಕಷ್ಟು ಅಧ್ಯಯನ ನಡೆಸಿದ್ದೇವೆ. ಒಂದಷ್ಟು ತಿಳಿದುಕೊಳ್ಳಲು
ಮಾತ್ರ ಸಾಧ್ಯವಾಗಿದೆ.


-ಪ್ರೊ. ರೊದ್ದಂ ನರಸಿಂಹ, ವಿಜ್ಞಾನಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT