4
ಪಾಂಡುರಂಗ ಹೆಗಡೆ– ಪರಿಸರ ಸಂರಕ್ಷಣಾ ಕೇಂದ್ರದ ಮುಖ್ಯಸ್ಥ

ಅಂಕೋಲಾ ರೈಲು ಯೋಜನೆಯೇ ಅಪ್ರಾಯೋಗಿಕ

Published:
Updated:
ಅಂಕೋಲಾ ರೈಲು ಯೋಜನೆಯೇ ಅಪ್ರಾಯೋಗಿಕ

ಮೂರೂವರೆ ದಶಕಗಳ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನ ಪುಟ್ಟ ಹಳ್ಳಿ ಗುಬ್ಬಿಗದ್ದೆಯಲ್ಲಿ ಅರಣ್ಯ ಇಲಾಖೆ ಮರಗಳ ಹನನಕ್ಕೆ ಮುಂದಾದಾಗ ನೂರಾರು ಜನರು ಕಾಡಿಗೆ ನುಗ್ಗಿ ಕೊಡಲಿಗೆ ಬಲಿಯಾಗಲಿದ್ದ ಮರಗಳನ್ನು ಅಪ್ಪಿಕೊಂಡು ಅವಕ್ಕೆ ರಕ್ಷಣೆ ನೀಡಿದರು. ವೃಕ್ಷ ಪ್ರೇಮಿ ಸುಂದರಲಾಲ್ ಬಹುಗುಣ ಅವರ ಚಿಪ್ಕೊ ಚಳವಳಿಯಿಂದ ಪ್ರೇರಿತರಾಗಿದ್ದ ಪಾಂಡುರಂಗ ಹೆಗಡೆ ಈ ‘ಅಪ್ಪಿಕೊ ಚಳವಳಿ’ಗೆ ನೇತೃತ್ವ ನೀಡಿದ್ದರು. 

ಪಶ್ಚಿಮಘಟ್ಟ ಉಳಿವಿಗೆ ಕಾವೇರಿ ಮೂಲದಿಂದ ಕಾಳಿ ಮೂಲದವರೆಗೆ ನಾಲ್ಕು ತಿಂಗಳ ಪಾದಯಾತ್ರೆ ಮಾಡಿದ್ದ, ಕಾಳಿ ನದಿ ಮಾಲಿನ್ಯದ ವಿರುದ್ಧ ಹೋರಾಟ ನಡೆಸಿದ್ದ ಅವರು, ಉದ್ದೇಶಿತ ಹುಬ್ಬಳ್ಳಿ– ಅಂಕೋಲಾ ರೈಲು ಮಾರ್ಗ ವಿರುದ್ಧ ಧ್ವನಿ ಎತ್ತಿ ಪರಿಸರ ಸಂರಕ್ಷಣಾ ಕೇಂದ್ರದ ಮೂಲಕ 2006ರಲ್ಲಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ವಿಷಯದಲ್ಲಿ ಜನ ವಿರೋಧ ಇದ್ದರೂ ತಮ್ಮ ನಿಲುವಿಗೆ ಬದ್ಧರಾಗಿರುವುದು ಯಾಕೆ ಎಂಬುದನ್ನು ಅವರು ‘ಪ್ರಜಾವಾಣಿ’ ಜೊತೆ ಹಂಚಿಕೊಂಡಿದ್ದಾರೆ.

*ಉತ್ತರ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು, ಕೆಲವು ಪರಿಸರವಾದಿಗಳು ಸಹ ಹುಬ್ಬಳಿ– ಅಂಕೋಲಾ ರೈಲು ಮಾರ್ಗ ಯೋಜನೆಯ ಪರವಾಗಿದ್ದಾರೆ. ನಿಮ್ಮದು ಮಾತ್ರ ಯಾಕೆ ವಿರೋಧ?

ಈಗಲೂ ಬಹುತೇಕರು ಯೋಜನೆ ಬೆಂಬಲಿಸುತ್ತಿದ್ದಾರೆ. ಜನಪ್ರತಿನಿಧಿಗಳು ಯೋಜನೆ ಪರವಾಗಿದ್ದಾಕ್ಷಣ ನಾವು ಬೆಂಬಲಿಸಬೇಕಾಗಿಲ್ಲ. ‘ಉಳಿಸು, ಬೆಳೆಸು, ಬಳಸು’ ಇದು ಅಪ್ಪಿಕೊ ಚಳವಳಿಯ ಮೂಲ ಆಶಯ. 35 ವರ್ಷಗಳಿಂದ ಈ ನಿಲುವಿಗೆ ಬದ್ಧನಾಗಿದ್ದೇನೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇ 80ರಷ್ಟಿದ್ದ ನೈಸರ್ಗಿಕ ಅರಣ್ಯ ಶೇ 10ಕ್ಕೆ ಇಳಿದಿದೆ ಎಂದು ಪರಿಸರ ತಜ್ಞ ಯಲ್ಲಪ್ಪ ರೆಡ್ಡಿ ಹೇಳಿದ್ದಾರೆ.ಭಾರತೀಯ ವಿಜ್ಞಾನ ಮಂದಿರದ ವಿಜ್ಞಾನಿಗಳು ‘ಜಿಲ್ಲೆಯಲ್ಲಿ ಶೇ 30ರಷ್ಟು  ಕಾಡು ಮಾತ್ರ ಉಳಿದಿದೆ’ ಎಂದು ಇತ್ತೀಚಿನ ಅಧ್ಯಯನ ವರದಿ ಹೇಳಿದೆ. ಅದರಲ್ಲಿ ಅಕೇಸಿಯಾ ನೆಡುತೋಪು ಸಹ ಸೇರಿರಬಹುದು. ವೈಜ್ಞಾನಿಕ ವಿಶ್ಲೇಷಣೆಯ ಪ್ರಕಾರ ಪರಿಸರ ಸೂಕ್ಷ್ಮ ಪ್ರದೇಶಗಳ ಪಟ್ಟಿಯಲ್ಲಿರುವ ಈ ಜಿಲ್ಲೆಯಲ್ಲಿ ಶೇ 66ರಷ್ಟು ಅರಣ್ಯ ಇರಲೇಬೇಕು.

ಈಗ ಉಳಿದುಕೊಂಡಿರುವ ಶೇ 10ರಷ್ಟು ನೈಸರ್ಗಿಕ ಅರಣ್ಯವನ್ನು ಮತ್ತೆ ಹುಬ್ಬಳ್ಳಿ– ಅಂಕೋಲಾ ರೈಲು ಮಾರ್ಗಕ್ಕೆ ಬಲಿಕೊಡುವುದು ಸರಿಯೇ? ಇಂತಹ ಅರಣ್ಯದ ಮರುಸೃಷ್ಟಿ ಸಾಧ್ಯವೇ ಇಲ್ಲ.

*ಪರಿಸರ ನಾಶದ ಬೇರೆ ಯೋಜನೆಗಳು ಜಿಲ್ಲೆಗೆ ಬಂದಾಗ ನಿಮ್ಮ ದನಿ ಇಷ್ಟು ಗಟ್ಟಿ ಇರಲಿಲ್ಲ ಏಕೆ?

ಉಳಿದವರು ಗಟ್ಟಿಯಾಗಿ ಧ್ವನಿ ಎತ್ತದ ಯೋಜನೆ ವಿರುದ್ಧ ನಾನು ಹೋರಾಟ ಮಾಡಿದ್ದೇನೆ. ಸೋಲು–ಗೆಲುವು ಇದ್ದಿದ್ದೇ. ಅದಕ್ಕೆ ಹೆದರಿ ಸುಮ್ಮನಾಗುವುದಿಲ್ಲ.

*ಈ ಯೋಜನೆ ಜಿಲ್ಲೆಗೆ ತೀರಾ ಅಗತ್ಯ ಎನ್ನಿಸುವುದಿಲ್ಲವೇ?

ಅದಿರು ಗಣಿಗಳಿಂದ ಕಬ್ಬಿಣದ ಅದಿರು ಸಾಗಾಟಕ್ಕೆ ಹುಬ್ಬಳ್ಳಿ– ಅಂಕೋಲಾ ರೈಲು ಮಾರ್ಗದ ಯೋಜನೆ ರೂಪಿಸಿದ್ದು. ಈಗ ಅದಿರು ಸಾಗಾಟ ನಿಂತಿದೆ. ಆದರೆ ಜನಪ್ರತಿನಿಧಿಗಳು ಸಂಪರ್ಕ ಸಾಧನಕ್ಕಾಗಿ ಈ ಯೋಜನೆ ಬೇಕು ಎನ್ನುತ್ತಿದ್ದಾರೆ. ಅದಿರು ಹೊರಬಿದ್ದ ಮೇಲೆ ಇನ್ನಾವ ವಸ್ತು ಸಾಗಾಟಕ್ಕೆ ಈ ಮಾರ್ಗ ಬೇಕು? ನಮ್ಮಲ್ಲಿ ಉತ್ಪಾದನೆಯಾಗುವ ಅಡಿಕೆ, ಕಾಳುಮೆಣಸು ಸಾಗಾಟಕ್ಕೆ ಸಾವಿರಾರು ಕೋಟಿ ರೂಪಾಯಿ ವ್ಯಯವಾಗುವ ರೈಲ್ವೆ ಮಾರ್ಗವೇ ಆಗಬೇಕೆಂದಿಲ್ಲ. ಪ್ರವಾಸೋದ್ಯಮದ ದೃಷ್ಟಿಯಿಂದ ಯೋಚಿಸಿದರೂ ಇದು ಲಾಭದಾಯಕವಲ್ಲ.

*ಈಗಾಗಲೇ ಅನೇಕ ರೈಲ್ವೆ ಮಾರ್ಗಗಳು ಅರಣ್ಯದ ನಡುವೆಯೇ ನಿರ್ಮಾಣವಾಗಿಲ್ಲವೇ?

ಸಕಲೇಶಪುರ–ಸುಬ್ರಹ್ಮಣ್ಯ ನಡುವೆ ರೈಲ್ವೆ ಸಂಪರ್ಕದ ಕೊಂಡಿ ಕಟ್ಟಿದ ಮೇಲೆ ಯಾವ ಗಮನಾರ್ಹ ಬದಲಾವಣೆಯಾಗಿದೆ ? ನಮ್ಮೆದುರೇ ಇಂಥದ್ದೊಂದು ಜ್ವಲಂತ ಉದಾಹರಣೆಯಿದ್ದಾಗ ಹುಬ್ಬಳ್ಳಿ– ಅಂಕೋಲಾ ರೈಲು ಮಾರ್ಗದ ಅವಶ್ಯಕತೆ ಖಡಾಖಂಡಿತವಾಗಿ ಇಲ್ಲ.

ಇದು ತೀರಾ ಹಿಂದಿನದಲ್ಲ, ಆರೆಂಟು ವರ್ಷಗಳ ಹಿಂದೆ ನಡೆದಿದ್ದು– ಯಲ್ಲಾಪುರ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಲಾರಿ ಬಡಿದು ಆನೆ ಮರಿಯೊಂದು ಮೃತಪಟ್ಟಿತು. ಆಗ ಆನೆಗಳ ಹಿಂಡು ಬಂದು ಸಂಚಾರ ತಡೆಗಟ್ಟಿದ್ದವು. ಅಪರೂಪದ ವನ್ಯಪ್ರಾಣಿಗಳಿರುವ ಅರಣ್ಯದ ನಡುವೆ ಮಾರ್ಗ ನಿರ್ಮಾಣಕ್ಕೆ ಯೋಚಿಸುವವರು ಒಮ್ಮೆ ಇದನ್ನು ನೆನಪಿಸಿಕೊಳ್ಳಬೇಕು. ಅಣಶಿ ಅಭಯಾರಣ್ಯ, ಕಾಳಿ ಹುಲಿ ಸಂರಕ್ಷಿತ ಪ್ರದೇಶಗಳ ಸಂರಕ್ಷಣೆಯ ದೃಷ್ಟಿಯಿಂದ ಈ ಯೋಜನೆ ಸಾಧುವಲ್ಲ. 

*ಹಸಿರು ನ್ಯಾಯಪೀಠ ಯೋಜನೆ ಅನುಷ್ಠಾನಕ್ಕೆ ಸಮ್ಮತಿ ನೀಡಿದೆ ಎನ್ನುತ್ತಾರಲ್ಲ?

ಹುಬ್ಬಳ್ಳಿ–ಅಂಕೋಲಾ ರೈಲು ಮಾರ್ಗಕ್ಕೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಸಮ್ಮತಿ ನೀಡಿದೆ ಎಂಬುದು ತಪ್ಪು ಕಲ್ಪನೆ. 2006ರಲ್ಲಿ ಯೋಜನೆ ವಿರುದ್ಧ ನಾವು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ ಪರಿಣಾಮ ರಚನೆಯಾಗಿದ್ದ ಕೇಂದ್ರ ಉನ್ನತಾಧಿಕಾರ ಸಮಿತಿಯು (ಸಿಇಸಿ) ಯೋಜನೆಗೆ ಅನುಮೋದನೆ ನೀಡಲು 2015ರಲ್ಲಿ ನಿರಾಕರಿಸಿತ್ತು. ಆಗ ಸರ್ಕಾರ ಹಸಿರು ನ್ಯಾಯಪೀಠದ ಮೊರೆ ಹೋಯಿತು.ಸಂವಿಧಾನ ವ್ಯವಸ್ಥೆಯಲ್ಲಿ ಹಸಿರು ನ್ಯಾಯಪೀಠ ಮೇಲೋ ಅಥವಾ ಸುಪ್ರೀಂ ಕೋರ್ಟ್ ಮೇಲೋ ಎಂಬ ತರ್ಕವನ್ನು ವಿಶ್ಲೇಷಿಸಬೇಕು. ಇಷ್ಟಾಗಿಯೂ ಹಸಿರು ಪೀಠ ಸುಪ್ರೀಂ ಕೋರ್ಟ್‌ ವಿರುದ್ಧವಾದ ನಿಲುವು ಪ್ರಕಟಿಸಿಲ್ಲ. 1980ರ ಅರಣ್ಯ ಕಾಯ್ದೆ ಸೆಕ್ಷನ್ 2ರ ಪ್ರಕಾರ ಪುನಃ ಅರ್ಜಿ ಹಾಕುವಂತೆ ತಿಳಿಸಿದೆಯೇ ವಿನಾ ತನ್ನ ಸಮ್ಮತಿ ನೀಡಿಲ್ಲ. ಜನಪ್ರತಿನಿಧಿಗಳು ಅದನ್ನು ತಪ್ಪಾಗಿ ಅರ್ಥೈಸಿಕೊಂಡು ಅನುಮತಿ ಸಿಕ್ಕಿದೆ ಎಂದು ವಾದಿಸಿದರು ಅಷ್ಟೇ.

*ಒಬ್ಬಂಟಿ ಹೋರಾಟಕ್ಕೆ ವಿರೋಧ ಎದುರಾಗಿಲ್ಲವೇ?

ಹೋರಾಟದ ಪ್ರತಿ ಹಂತದಲ್ಲಿ ವಿರೋಧ ಎದುರಿಸಿದ್ದೇನೆ. ನ್ಯಾಯಾಲಯದ ಪ್ರಕರಣ ಹಿಂಪಡೆಯುವಂತೆ ಕರೆಗಳು ಬರುತ್ತವೆ. ಅಂಕೋಲಾ, ಯಲ್ಲಾಪುರಗಳಲ್ಲಿ ನನಗೆ ಪ್ರವೇಶ ನಿಷೇಧ ಮಾಡಿದ್ದಾರೆ. ಪಾಂಡುರಂಗ ಹೆಗಡೆ ಯಾವುದೇ ಕಾರ್ಯಕ್ರಮದಲ್ಲಿ ಭಾಗಿಯಾಗಲು ಬಂದರೆ ಕಪ್ಪು ಬಾವುಟ ಪ್ರದರ್ಶನ ಮಾಡುವುದಾಗಿ ಹೇಳಿದ್ದಾರೆ. ನನ್ನ ಕಚೇರಿಯ ಮೇಲೆ ದಾಳಿಗಳು ನಡೆದಿವೆ. ಹೋರಾಟದ ನೆಲೆ ಗಟ್ಟಿಯಾಗಿದ್ದಾಗ ಅಂಜುವ ಅಗತ್ಯ ಬರಲಿಲ್ಲ.

ಸಿಇಸಿ ಉದ್ದೇಶಿತ ರೈಲು ಮಾರ್ಗ ನಿರ್ಮಾಣದಿಂದ 2 ಲಕ್ಷ ಮರ ನಾಶವಾಗಬಹುದೆಂದು ವರದಿ ನೀಡಿತ್ತು. ಇದು ಹಳೆಯ ಲೆಕ್ಕಾಚಾರ. ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆಯ ಪ್ರಾದೇಶಿಕ ಉನ್ನತಾಧಿಕಾರ ಸಮಿತಿ ಈಗ (ಆರ್‌ಇಸಿ) ಜಿಪಿಎಸ್ ಮೂಲಕ ಪುನರ್ ಸಮೀಕ್ಷೆಗೆ ಸಲಹೆ ಮಾಡಿದೆ. ಅಂದರೆ ಇನ್ನೂ ಹೆಚ್ಚು ಹಾನಿಯಾಗುವ ಸಾಧ್ಯತೆಯಿದೆ ಎಂಬ ಆರ್‌ಇಸಿ ಅಭಿಪ್ರಾಯವನ್ನು ತಳ್ಳಿಹಾಕುವಂತಿಲ್ಲ.ಬೆಂಗಳೂರಿನಲ್ಲಿ 800 ಮರಗಳ ಕಟಾವಿಗೆ ಮುಂದಾದಾಗ ಬುದ್ಧಿಜೀವಿಗಳು ಎದ್ದುನಿಂತರು. ಆದರೆ 2 ಲಕ್ಷ ಮರಗಳು ಬಲಿಯಾಗುವ ಈ ಯೋಜನೆಯ ವಿರುದ್ಧ ಪರಿಸರ ಸಂರಕ್ಷಣಾ ಕೇಂದ್ರ ಏಕಾಂಗಿಯಾಗಿ ಹೋರಾಡುತ್ತಿದೆ. ರಾಜಕೀಯ, ಧಾರ್ಮಿಕ ನಾಯಕರು ಸಹ ಹೋರಾಟಕ್ಕೆ ಬಲ ನೀಡಿಲ್ಲ.

*ಹುಬ್ಬಳಿ– ಅಂಕೋಲಾ ರೈಲು ಬೇಕೇಬೇಕೆಂದು ಒಕ್ಕೊರಲಿನ ಹೋರಾಟ ನಡೆಯುತ್ತಿದ್ದಾಗ ನಿಮಗೆ ನ್ಯಾಯಾಲಯದ ಮೆಟ್ಟಿಲೇರುವ ಯೋಚನೆ ಬಂದಿದ್ದು ಯಾಕೆ?

ಜನಪರ ಹೋರಾಟದ ಮೂಲಕ ಅರಣ್ಯ ಸಂರಕ್ಷಣೆ ಮಾಡಿಕೊಳ್ಳುವುದು ಕಷ್ಟ. ಹೀಗಾಗಿ ದೇಶದ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯ ಸಿಗಬಹುದೆಂಬ ನಿರೀಕ್ಷೆಯಿಂದ ಹೋಗಿದ್ದೆ. ನನಗೆ ಅಲ್ಲಿ ನ್ಯಾಯ ಸಿಕ್ಕಿದೆ.

*ಅಭಿವೃದ್ಧಿಗೆ ಪರಿಸರವಾದಿಗಳ ಅಡ್ಡಗಾಲು – ಇದು ಸದಾ ಕೇಳಿ ಬರುವ ಆರೋಪ...

ಅಭಿವೃದ್ಧಿಯ ಮಾನದಂಡ ಯಾವುದೆಂದು ಜನರಿಗೆ ಅರ್ಥವಾಗುತ್ತಿಲ್ಲ. ಶೇ 80ರಷ್ಟಿದ್ದ ಕಾಡು ಮೂರ್ನಾಲ್ಕು ದಶಕಗಳಲ್ಲಿ ಶೇ 10ಕ್ಕೆ ಇಳಿದಿದ್ದು ಅಭಿವೃದ್ಧಿಯೇ ? ನೂರು ವರ್ಷಗಳ ಇತಿಹಾಸದಲ್ಲಿ ಇಂತಹ ಬರಗಾಲ ಕಂಡಿರಲಿಲ್ಲ. ಇದು ಅಭಿವೃದ್ಧಿಯೇ? ನಮ್ಮ ಜಿಲ್ಲಾ ಉಸ್ತುವಾರಿ ಸಚಿವರು ಹೊಸ ಬೋರ್‌ವೆಲ್ ಕೊರೆಯಲು ಹೇಳುತ್ತಾರೆ. ನಮ್ಮಲ್ಲಿರುವ ಹಸಿರು ರಕ್ಷಣೆ ಮಾಡಿದರೆ ಜಲಕ್ಷಾಮವನ್ನು ಶಾಶ್ವತವಾಗಿ ಹೊಡೆದೋಡಿಸಬಹುದು ಎನ್ನುವ ಕಲ್ಪನೆ ಅವರಿಗೆ ಯಾಕೆ ಬರುವುದಿಲ್ಲ. ಅಭಿವೃದ್ಧಿಯ ವಾಸ್ತವ ಕಲ್ಪನೆಯ ತಪ್ಪು ತಿಳಿವಳಿಕೆಯಿಂದ ಆಗುತ್ತಿರುವ ಪ್ರಮಾದಕ್ಕೆ ಪರಿಸರವಾದಿಗಳನ್ನು ದೂಷಿಸುವುದರಲ್ಲಿ ಅರ್ಥವಿಲ್ಲ. ನೈಸರ್ಗಿಕ ಸಂಪನ್ಮೂಲದ ಸುಸ್ಥಿರ ಬಳಕೆ ಜಿಲ್ಲೆಯ ರಚನಾತ್ಮಕ ಬೆಳವಣಿಗೆಗೆ ಪೂರಕವಾಗಬಲ್ಲದು.

*ಕೋರ್ಟ್ ಸಮ್ಮತಿಸಿದರೆ ಯೋಜನೆ ಅನುಷ್ಠಾನ ಸಾಧ್ಯವಾಗಬಹುದೇ?

ಇಡೀ ಯೋಜನೆಯೇ ಅಪ್ರಾಯೋಗಿಕ. ಒಂದೊಮ್ಮೆ ಅನುಷ್ಠಾನಕ್ಕೆ ಅನುಮತಿ ಸಿಕ್ಕರೂ ಪೂರ್ಣಗೊಳ್ಳುವುದು ಅನುಮಾನ. ಈಗಿನ ₹4000 ಕೋಟಿ ಅಂದಾಜು ವೆಚ್ಚವನ್ನೇ ಯಾರು ಖರ್ಚು ಭರಿಸಬೇಕು ಎಂದು ಕೇಂದ್ರ–ರಾಜ್ಯ ಸರ್ಕಾರಗಳು ಕಚ್ಚಾಡುತ್ತಿವೆ. ಯೋಜನೆ ಮುಗಿಯುವ ವೇಳೆಗೆ ಈ ಮೊತ್ತ ₹ 8–10ಸಾವಿರ ಕೋಟಿ ತಲುಪುತ್ತದೆ. ಯಾವ ಸರ್ಕಾರ ಕೇವಲ ಒಂದು ರೈಲ್ವೆ ಮಾರ್ಗಕ್ಕೆ ಇಷ್ಟು ಹಣ ಖರ್ಚು ಮಾಡುತ್ತದೆ?. ಅಹಮ್ಮದಾಬಾದ್‌ನ ಬುಲೆಟ್‌ ಟ್ರೇನ್ ಯೋಜನೆಯನ್ನು ಪ್ರಧಾನಮಂತ್ರಿ ಸಮ್ಮತಿಸಬಹುದು. ಆದರೆ ರಾಜಕೀಯ ಲೆಕ್ಕಾಚಾರ ಹಾಕಿದರೆ ಇಲ್ಲಿ ಸಿಗುವ ಮತಗಳೆಷ್ಟು ? ಪ್ರತಿ ಮರಕ್ಕೆ ಓಟು ಹಾಕುವ ಶಕ್ತಿ ಇದ್ದರೆ ರಾಜಕಾರಣಿಗಳು ಈ ನಿರ್ಧಾರಕ್ಕೆ ಬರುತ್ತಿದ್ದರಾ? ರಾಜಕಾರಣಿಗಳಿಗೆ ಇವೆಲ್ಲದರ ಅರಿವಿದೆ. ಆದರೆ ಅವರು ಮಾತಿನಲ್ಲಿ ರೈಲು ಬಿಡುತ್ತಿದ್ದಾರೆ.

*ಇದನ್ನು ವಿರೋಧಿಸುವ ನೀವು ಪರ್ಯಾಯ ಮಾರ್ಗ ಸೂಚಿಸುವಿರಾ?

ಪರ್ಯಾಯ ಎನ್ನುವ ಕಲ್ಪನೆಯೇ ತಪ್ಪು. ಸಿಗರೇಟ್ ಸೇದುವ ವ್ಯಕ್ತಿಗೆ ಪರ್ಯಾಯ ಹೇಳಿ ಎಂದರೆ? ಅಪಾಯಕಾರಿಯಾಗಿರುವ ಈ ಯೋಜನೆಗೆ ಪರ್ಯಾಯವೇ ಇಲ್ಲ.

*ಪರಿಸರ ಹೋರಾಟದ ನಿಮ್ಮ ಅನುಭವ...

ಸಮೃದ್ಧ ಅರಣ್ಯ ಸೀಳುವ ಹೆದ್ದಾರಿ ಯೋಜನೆ ವಿರುದ್ಧ ಜಪಾನ್ ಟೋಕಿಯೊದಲ್ಲಿ ಕೆಲ ವರ್ಷಗಳ ಹಿಂದೆ ನಡೆದ ಹೋರಾಟದಲ್ಲಿ ಭಾಗವಹಿಸಿದ್ದೆ. ಅಲ್ಲಿ ಜನರ ಬೇಡಿಕೆಗೆ ಮನ್ನಣೆ ಸಿಗಲಿಲ್ಲ. ಬೇರೆ ದೇಶಗಳಿಗಿಂತ ಭಾರತದ ವ್ಯವಸ್ಥೆ ಉತ್ತಮವಾಗಿದೆ. ಯೋಜನೆ ಪರವಾದ ಶಕ್ತಿ ಬಲಾಢ್ಯವಾಗಿದ್ದರೂ ನ್ಯಾಯಾಂಗ ನ್ಯಾಯ ಎತ್ತಿಹಿಡಿದಿದೆ.

ದಶಕಗಳ ಹಿಂದೆ ಪಶ್ಚಿಮಘಟ್ಟದ ಆರು ರಾಜ್ಯಗಳಲ್ಲಿ ನಡೆಸಿದ ಪಶ್ಚಿಮಘಟ್ಟ ಉಳಿಸಿ ಅಭಿಯಾನವು ಕೇಂದ್ರ ಸರ್ಕಾರದ ಗಮನ ಸೆಳೆಯುವಲ್ಲಿ ಸಫಲವಾಯಿತು. ಕೇಂದ್ರ ಅರಣ್ಯ ಪರಿಸರ ಸಚಿವಾಲಯವು ಪರಿಸರ ಸೂಕ್ಷ್ಮವಲಯದ ಅಧ್ಯಯನಕ್ಕೆ ಪ್ರೊ. ಮಾಧವ ಗಾಡ್ಗೀಳ್ ಸಮಿತಿ ರಚಿಸಿತು. ನಂತರ ಕಸ್ತೂರಿರಂಗನ್ ಸಮಿತಿಯಿಂದಲೂ ಅಧ್ಯಯನ ನಡೆಯಿತು. ದಕ್ಷಿಣ ಅಮೆರಿಕದ ಅಮೆಝಾನ್ ಕಾಡಿಗೆ ಸರಿಸಮನಾದ ಕಾಡು ಇದ್ದರೆ ಅದು ಪಶ್ಚಿಮಘಟ್ಟದಲ್ಲಿ ಮಾತ್ರ. ಇದನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು.

ಅರಣ್ಯಹಾನಿ ರಹಿತವಾದ ಅಭಿವೃದ್ಧಿಗೆ ಹಲವಾರು ದಾರಿಗಳಿವೆ. ಕನ್ಯಾಕುಮಾರಿಯಿಂದ ಗುಜರಾತ್ ವರೆಗೆ ಹಲವಾರು ಸಂಘ ಸಂಸ್ಥೆಗಳು ಹಸಿರು ಅರ್ಥ ವ್ಯವಸ್ಥೆಯನ್ನು ಸಾಕ್ಷೀಕರಿಸಿವೆ. ಸಾಮುದಾಯಿಕ ಪ್ರವಾಸೋದ್ಯಮ, ಜೇನು ಕೃಷಿ, ಕಿರು ಅರಣ್ಯ ಉತ್ಪನ್ನಗಳ ಸಂಗ್ರಹಣೆ ಮೂಲಕ ಅರಣ್ಯದ ಅಸಲನ್ನು ಉಳಿಸಿಕೊಂಡು ನಡೆಸುವ ಚಟುವಟಿಕೆಯೇ ‘ಅಭಿವೃದ್ಧಿ’ ಎನ್ನುವ ಪ್ರಜ್ಞೆ ಇನ್ನಾದರೂ ಜನರು, ಜನಪ್ರತಿನಿಧಿಗಳಲ್ಲಿ ಜಾಗೃತಗೊಳ್ಳಬೇಕು.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry