ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ: ‘ಅನ್ನ ಖಾತ್ರಿ’ಯ ಉಸುಕು ವಿಮೆ

Last Updated 21 ಮೇ 2017, 19:30 IST
ಅಕ್ಷರ ಗಾತ್ರ
* ಶ್ರೀ ಪಡ್ರೆ
‘ಉಸುಕು ಹೇರಿದ ಹೊಲ ಕೃಷಿಕನನ್ನು ಹಸಿದ ಹೊಟ್ಟೆಯಲ್ಲಿಡುವುದಿಲ್ಲ; ಬಡತನಕ್ಕೆ ತಳ್ಳೋದಿಲ್ಲ. ಬದಲಿಗೆ ಗ್ಯಾರಂಟಿಯಾಗಿ ಅನ್ನ ಕೊಡುತ್ತದೆ. ೨-೩ ಎಕ್ರೆಗೆ ಉಸುಕು ಮುಚ್ಚಿಗೆ ಮಾಡಿಕೊಂಡರೆ ಒಂದು ಕುಟುಂಬದ ಬದುಕಿಗೆ ಎಂದೂ ಅಡ್ಡಿ ಇಲ್ಲ’.
 
ಕೊಪ್ಪಳ ಜಿಲ್ಲೆಯ ಬಿನ್ನಾಳದ ರೈತ ಅಶೋಕ್ ಭೂಸನೂರಮಠರಿಗೆ (38) ಹೀಗೆ ಹೇಳಲು ಆಧಾರ ಏನು ? ತನ್ನದೇ ಕುಟುಂಬಾನುಭವ. ಅಪ್ಪ ಸಂಗಯ್ಯ ಭೂಸನೂರಮಠ (75) ಈ ಭಾಗದಲ್ಲಿ ಹೊಲಕ್ಕೆ ಮರಳು ಮುಚ್ಚಿಗೆ (ಸ್ಯಾಂಡ್ ಮಲ್ಚಿಂಗ್) ಮಾಡಿದವರಲ್ಲಿ ಮೊದಲಿಗರು. ಅವರು ಉಸುಕು ಹೇರಲು ಆರಂಭಿಸಿ ಅಶೋಕರ ವಯಸ್ಸಿನಷ್ಟೇ ವರ್ಷಗಳಾದವು!
 
ಕೊಪ್ಪಳ ಜಿಲ್ಲೆಯ ಸರಿ ಅರ್ಧ ಕಪ್ಪು ಎರೆ ಮಣ್ಣು; ಇನ್ನರ್ಧ ಕೆಂಪಿನ ಮಸಾರಿ. ಕಪ್ಪು ಮಣ್ಣಿನಲ್ಲೂ ಸರಿಸುಮಾರು ನಲುವತ್ತು ಶೇಕಡಾ ಬಿರುಸು ಮಣ್ಣು –‘ಕರ್ಲು’. ಇದರ ಮೇಲೆ ಬಿದ್ದ ಮಳೆನೀರು 2–3 ಇಂಚು ಕೆಳಕ್ಕಿಳಿದರೆ ಹೆಚ್ಚು. ಮಳೆ ಬಂದರೂ ಹೊಲ ‘ಹದ’ವಾಗದು. ಬೆಳೆ ಬರಲು ತೇವಾಂಶದ ಕೊರತೆ.
 
ಒಮ್ಮೆ ಹೊಸ ಯೋಚನೆ ಹುಟ್ಟಿ ಸಂಗಯ್ಯ ಪಕ್ಕದ ಹಳ್ಳದಿಂದ ಉಸುಕು ತರಿಸಿ  ಹೊಲದ ಮೇಲೆ ಚೆಲ್ಲಿಸಿದರು. ನಾಲ್ಕೈದು ಇಂಚಿನ ಪದರ. ಸಣ್ಣ ಮಳೆಗೂ ಹೊಲ ಚೆನ್ನಾಗಿ ಹದ ಆಯಿತು, ಬೆಳೆ ಬೆಳೆಯಿತು. ಬಾಯಿಯಿಂದ ಬಾಯಿಗೆ ಸುದ್ದಿ ನಾಲ್ದೆಸೆಗೂ ಹಬ್ಬಿತು. ‘ಉಸುಕು ಹೇರುವುದು ಖಾತ್ರಿ ಪರಿಣಾಮದ ವಿಧಾನ ಎನಿಸಿಕೊಂಡಿತು.
 
‘ಒಣಗಲು ಹಾಕಿದ ಅಂಗಿ ಒದ್ದೆ ಆಗೋವಷ್ಟು ಮಳೆ ಬಂತೂಂದ್ರೆ ಒಂದು ಪಚ್ಚೆ ಹೆಸರು ಬೆಳೆ ತಗೋತೀವ್ರೀ ಸಾಹೇಬ್ರ’ ಎಂದು ಸಿದ್ನೇಕೊಪ್ಪದ ಒಬ್ಬ ರೈತರು ದಶಕದ ಹಿಂದೆ ಹೇಳಿದ ಮಾತು ಈಗಲೂ ಗುಣಗುಣಿಸುತ್ತಿದೆ. ಕಳೆದ 38 ವರ್ಷಗಳಲ್ಲೂ ಸಂಗಯ್ಯ ತಪ್ಪದೆ ಒಂದಲ್ಲ, ಎರಡು ಬೆಳೆ ತೆಗೆದಿದ್ದಾರೆ!
ಮರಳು ಮುಚ್ಚಿಗೆ ಮಾಡುವುದು ದುಬಾರಿ.
 
 
ಇದರ ವೆಚ್ಚ ಮರಳು ಸಿಗುವ ಜಾಗಕ್ಕೂ ಹೊಲಕ್ಕೂ ಇರುವ ದೂರವನ್ನು ಅವಲಂಬಿಸಿದೆ. ಒಮ್ಮೆ ಮುಚ್ಚಿಗೆ ಮಾಡಿದರೆ ದಶಕದ ವರೆಗೂ ಫಲಿತಾಂಶ ಸಿಗುತ್ತಿರುತ್ತದೆ. ಕೆಲವೆಡೆ ನಾಲ್ಕೈದು ವರ್ಷಕ್ಕೊಮ್ಮೆ ‘ಪ್ಯಾಚ್ ವರ್ಕ್’ ಮಾಡಬೇಕಾಗುತ್ತದೆ.
 
ಯಲಬುರ್ಗ ತಾಲೂಕಿನ ಬಿನ್ನಾಳ, ಎರೆ ಹಂಚಿನಾಳ, ಚಿಕ್ಕೇನಕೊಪ್ಪ, ಸಿದ್ನೇಕೊಪ್ಪ, ಸೋಂಪುರ, ಪಟಪನಹಳ್ಳಿ, ಮಶೇಹಂಚಿನಾಳ, ಬಂಡಿಹಾಳಗಳಲ್ಲೆಲ್ಲಾ ಇಂದು ‘ಉಸುಕು ಹೇರುವುದು; ಬಹು ಜನಪ್ರಿಯ. ಎಷ್ಟರ ಮಟ್ಟಿಗೆ ಅಂದರೆ, ಏಳು ಹಳ್ಳಿಗಳಲ್ಲಿ ಸುಮಾರು ಮೂರೂವರೆ ಸಾವಿರ ಎಕ್ರೆಯೀಗ ಮರಳಿನ ಚಾದರ ಹೊದ್ದುಕೊಂಡಿದೆ.
 
ಸಂಗಯ್ಯ ಕುಟುಂಬದ ಒಟ್ಟು 87 ಎಕ್ರೆಯಲ್ಲಿ ಈಗ 48 ಎಕ್ರೆಗೂ ಉಸುಕಿನ ಮುಸುಕು ಇದೆ. ಇದು ಘಟ್ಟಘಟ್ಟವಾಗಿ ಮಾಡುತ್ತಾ ಬಂದ ಬರನಿರೋಧಕ ಜಾಣ್ಮೆ. 
 
ನೆರೆಯ ಸಿದ್ನೇಕೊಪ್ಪದ ಶಂಕರಣ್ಣ ಗದಗೀನ್ 20 ವರ್ಷದಿಂದ ಹೊಲಕ್ಕೆ ಉಸುಕಿನ ಚಾದರ ಹೊದೆಸುತ್ತಾ ಬಂದಿದ್ದಾರೆ. ಇವರ 16 ಎಕ್ರೆಯಲ್ಲಿ ಅರ್ಧದಷ್ಟಕ್ಕೆ ಈಗ  ‘ಬೆಳೆ ವಿಮೆ’ ಇಳಿಸಿದಂತಾಗಿದೆ. ಐದು ವರ್ಷದ ಹಿಂದೆ ಎರಡೆಕ್ರೆಗೆ ಉಸುಕು ಹರದಲು ₹60,000 ಕೈ ಬಿಟ್ಟಿತ್ತು. ಅನತಿ ದೂರದಲ್ಲಿ ಉಸುಕು ಸಿಕ್ಕಿದ ಕಾರಣ ಕೆಲಸ ಸೋವಿ ಆಯಿತು.
 
ಸಂಗಯ್ಯ ಈಚೆಗೆ ಉಸುಕು ಖಾಲಿ ಆದ ಜಾಗಕ್ಕೆ ಪ್ಯಾಚ್ ವರ್ಕ್ ಮಾಡಿದ್ದರು. ಅದಕ್ಕೇ ಎಕ್ರೆಗೆ ₹ 80,000 ತಗಲಿತು. ಹೊಸದಾಗಿ ಹಾಕಿಸಬೇಕಾದರೆ ಎಕರೆಗೆ  ₹ 1.20 ಲಕ್ಷ ಬೇಕಾದೀತು ಎನ್ನುತ್ತಾರೆ.
 
‘ಹಿಂದೆ ಉಸುಕು ಹೇರದೆ ಇದ್ದಾಗ ಎರಡು ಬರವರ್ಷಗಳಲ್ಲಿ ಗುಳೆ ಹೋದ ಕಹಿ ನೆನಪು ಇನ್ನೂ ಮಾಸಿಲ್ಲ’ ಎಂದು  ಶಂಕರಣ್ಣ ಭಾವುಕರಾಗಿಬಿಟ್ಟರು. “ಉಸುಕಿನ ದಯೆ ಇಲ್ದಿದ್ರೆ ಈ ವರ್ಷನೂ ಇದೇ ಗತಿ ಬಂದಿರೋದು” ಎನ್ನುವಾಗ ಅವರ ಸ್ವರ ನಡುಗುತ್ತದೆ.
 
ಕಡು ಬರದಲ್ಲೂ ಸೋಲಲು ಬಿಡದ, ಗುಳೆ ಹೋಗಲು ಆಸ್ಪದವೇ ಕೊಡದ ಮರಳು ಮುಚ್ಚಿಗೆಗೆ ವೆಚ್ಚ ಮಾತ್ರ ಜಾಸ್ತಿ. ಇದಕ್ಕೆ ಯಾವ ಬ್ಯಾಂಕೂ ಸಾಲ ಕೊಡುತ್ತಿಲ್ಲ. ಗ್ರಾಮೀಣ ಬ್ಯಾಂಕು ಕೆಲವೆಡೆ ಒಬ್ಬರಿಗೆ ₹ 25,000 ಕೊಡುತ್ತಿದ್ದು ಇದು ಎಲ್ಲಿಗೂ ಸಾಕಾಗೋದಿಲ್ಲ.
 
ಹೀಗಾಗಿ ಹಳ್ಳಿಗರು ಹಣ ಹೊಂದಿಸಲು ತಮ್ಮದೇ ದಾರಿ ಕಂಡುಕೊಂಡಿದ್ದಾರೆ. ಅದುವೇ ‘ಕೋರ್ ಮಾಡೋದು’. ಊರಿನ ಸಿರಿವಂತರ ಜತೆ ಬಾಯ್ದೆರೆ ಒಡಂಬಡಿಕೆ ಮಾಡಿ ಈ ಕೆಲಸಕ್ಕೆಂದೇ ಸಾಲ ಪಡೆಯುತ್ತಾರೆ. ಸಾಲ ಹಿಂತಿರುಗಿಸುವ ವರೆಗೆ ಅವರಿಗೆ ಬೆಳೆಯಲ್ಲಿ ಸಮಪಾಲು ಕೊಡುತ್ತಿರಬೇಕು. ಹೀಗೆ ಪಾಲು ಮಾಡಿಕೊಡುವುದನ್ನೇ ‘ಕೋರ್ ಮಾಡೋದು’ ಎನ್ನುತ್ತಾರೆ. ‘ಆದ್ರೂ ಅಡ್ಡಿ ಇಲ್ರೀ, ಒಳ್ಳೆ ಮಳೆ ಸಿಕ್ಕಿದರೆ ಎರಡು-ಮೂರು ವರ್ಷಗಳಲ್ಲಿ ಸಾಲದ ರೊಕ್ಕ ಪೂರ್ತಿ ತೀರಿಸಿಬಿಡಬಹುದು’ ಶಂಕರಣ್ಣ ಬೊಟ್ಟು ಮಾಡುತ್ತಾರೆ. 
 
ದೇಶಮಟ್ಟದಲ್ಲೇ ಕರ್ನಾಟಕ ಅಭಿಮಾನದಿಂದ ಎತ್ತಿ ಹೇಳಬಹುದಾದ ಈ ಬರ ನಿರೋಧಕ ಜಾಣ್ಮೆಯನ್ನು ಏಕೆ ಬ್ಯಾಂಕು ಮತ್ತು ಇಲಾಖೆಗಳು ಕಂಡೂ ಕಾಣದಂತಿವೆ?
 
ಸಂಗಯ್ಯ ಅವರ ಸಂಪರ್ಕ - 9741999202 (ಮಗ ಅಶೋಕರ ನಂಬರ್), ಶಂಕರಣ್ಣ – 9480299845 
(ಸುಳಿವು : ದ್ಯಾಮಣ್ಣ ಜಮಖಂಡಿ)
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT