3
ವಿಜ್ಞಾನ ಲೋಕದಿಂದ

ಆನೆಗಳ ನಿಖರ ಅಂದಾಜಿಗೆ ಹೊಸ ವಿಧಾನ

Published:
Updated:
ಆನೆಗಳ ನಿಖರ ಅಂದಾಜಿಗೆ ಹೊಸ ವಿಧಾನ

ಕರ್ನಾಟಕ ಅರಣ್ಯ ಇಲಾಖೆಯು ಸಾರ್ವಜನಿಕರ ಸಹಕಾರದಲ್ಲಿ  ಆನೆಗಳ ಗಣತಿ ನಡೆಸಲು ಮುಂದಾಗಿದೆ. ಇಲಾಖೆಯು ತಮ್ಮ ಸಿಬ್ಬಂದಿಯಲ್ಲದೆ ಆಸಕ್ತ ಸಾರ್ವಜನಿಕರ ಸಹಯೋಗ ಪಡೆಯುವುದು ಅನಿವಾರ್ಯವೂ ಆಗಿದೆ. ಪ್ರತಿವರ್ಷ ಈ ಕಾರ್ಯಕ್ಕೆ ಸಾಕಷ್ಟು ಶ್ರಮ – ವೆಚ್ಚವೂ ತೊಡಗುತ್ತದೆ. 

ಇದಕ್ಕೆ ಪ್ರತಿಯಾಗಿ ಬೆಂಗಳೂರಿನ ಜವಾಹರಲಾಲ್ ನೆಹರೂ ಉನ್ನತ ವೈಜ್ಞಾನಿಕ ಸಂಶೋಧನಾ ಸಂಸ್ಥೆಯ ಸಂಶೋಧಕರು ಕಂಪ್ಯೂಟರ್ ಸಿಮ್ಯುಲೇಷನ್‌ಗಳನ್ನು ಬಳಸಿ ಕಾಡು ಪ್ರಾಣಿಗಳ ಸಂಖ್ಯೆಯನ್ನು  ಅಂದಾಜಿಸಲು ಮತ್ತು ಅದರ ಸಂರಕ್ಷಣೆಯಲ್ಲಿ ನೆರವಾಗುವಂತೆ ಹೊಸ ವಿಧಾನಗಳನ್ನು ಸೂಚಿಸಿದ್ದಾರೆ.

ವಿವಿಧ ಕಂಪ್ಯೂಟರ್ ಸಿಮ್ಯುಲೇಷನ್‌ಗಳು (simulation) ಬಳಸಿ, ಸಂಶೋಧಕರು ನಿಶ್ಚಿತ ಗುಂಪುಗಳಲ್ಲಿ ಜೀವಿಸದೆ ಇರುವ ಸಾಮಾಜಿಕ ಪ್ರಾಣಿಗಳ ಸಂಖ್ಯೆ ನಿಖರವಾಗಿ ಅಂದಾಜು ಮಾಡಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ. ಇದಕ್ಕೆ ಏಷ್ಯಾದ ಆನೆ (ಎಲಿಫ್ ಮ್ಯಾಕ್ಸಿಮಸ್) ನಂತಹ ಅಳಿವಿನಂಚಿನಲ್ಲಿರುವ ಕಾಡು ಪ್ರಾಣಿಯನ್ನು ಉದಾಹರಣೆಯಾಗಿ ಬಳಸಿದ್ದಾರೆ.‘ಸಾಮಾನ್ಯವಾಗಿ, ಕಂಪ್ಯೂಟರ್ ಸಿಮ್ಯುಲೇಷನ್‌ ವಾಸ್ತವಿಕ ಪ್ರಯೋಗ ನಡೆಸಲು ಸಹಾಯ ಮಾಡುತ್ತದೆ. ಇದರಲ್ಲಿ ಸಂಶೋಧಕರು ವ್ಯವಸ್ಥೆಯ ವಿವಿಧ ಅಂಶ ನಿಯಂತ್ರಿಸಬಹುದು. ಹೀಗಾಗಿ ವಿಭಿನ್ನ ಊಹೆಗಳ ಮತ್ತು ಸನ್ನಿವೇಶಗಳಲ್ಲಿ ನಿಖರವಾದ ಪರಿಣಾಮ ಪಡೆಯಬಹುದು ಎಂದು ಅಧ್ಯಯನದ ಲೇಖಕ ಮನನ್ ಗುಪ್ತ ಹೇಳುತ್ತಾರೆ. ಪರಿಸರ ವಿಜ್ಞಾನದ ಅಧ್ಯಯನದಲ್ಲಿ, ಕಾಡು ಪ್ರಾಣಿಗಳ ಸಂಖ್ಯೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. ಪ್ರಾಣಿಗಳ ಸಂಖ್ಯೆ, ವಯಸ್ಸಿನ-ಲಿಂಗದ ಅನುಪಾತ ಮತ್ತು ಅವುಗಳ ಜನಸಂಖ್ಯಾ ವ್ಯವಸ್ಥೆ ತಿಳಿದುಬಂದರೆ, ಆಯಾ ಪ್ರದೇಶದಲ್ಲಿನ ಪ್ರಾಣಿಯ ಭವಿಷ್ಯದ ಬಗ್ಗೆ ಅನೇಕ ಸುಳಿವುಗಳನ್ನು ಪಡೆಯಬಹುದು.ಪ್ರಾಣಿಯ ಕುಗ್ಗುತ್ತಿರುವ ಸಂಖ್ಯೆಯು ಅಳಿವಿನ ಅಪಾಯವನ್ನು ಸೂಚಿಸುತ್ತದೆ. ಆದರೆ, ಬದಲಾಗುತ್ತಿರುವ ಆಹಾರ ಸಂಪನ್ಮೂಲಗಳು, ಪರಭಕ್ಷಕ-ಬೇಟೆ ಪರಿಣಾಮ ಅಥವಾ ಪರಿಸರ ಅಥವಾ ಹವಾಮಾನ ವ್ಯವಸ್ಥೆಯಲ್ಲಿನ ಬದಲಾಗುತ್ತಿರುವ ಪರಿಸ್ಥಿತಿಗಳಿಂದಲು ಅದರ ಸಂಖ್ಯೆ ತ್ವರಿತವಾಗಿ ಬೆಳೆಯಲೂ ಬಹುದು. ಪ್ರಾಣಿಗಳ ಸಂಖ್ಯೆಯು ನಿರ್ಣಾಯಕವಾಗಿರುವುದರಿಂದ, ಅವುಗಳನ್ನು ಗುರುತಿಸಲು ವಿವಿಧ ತಂತ್ರಗಳು ಅಸ್ತಿತ್ವದಲ್ಲಿವೆ. ಇದರಲ್ಲಿ ‘ಮಾರ್ಕ್-ರಿಕ್ಯಾಪ್ಚರ್’ ಅತ್ಯಂತ ಜನಪ್ರಿಯ ತಂತ್ರಗಳಲ್ಲಿ ಒಂದಾಗಿದೆ.ಈ ವಿಧಾನದಲ್ಲಿ, ಒಟ್ಟು ಸಂಖ್ಯೆಯ ಒಂದು ಭಾಗವನ್ನು ಹಿಡಿದು ಅದಕ್ಕೆ ಒಂದು ವಿಶಿಷ್ಟ ಗುರುತು ಅಥವಾ ಒಂದು ಟ್ಯಾಗ್ ಹಾಕಲಾಗುತ್ತದೆ. ಈ ಪ್ರಾಣಿಗಳು ನಂತರ ಬಿಡುಗಡೆ ಮಾಡಿ ಪೂರ್ವನಿರ್ಧರಿತ ಸಮಯದ ನಂತರ, ಮತ್ತೊಮ್ಮೆ ಒಂದು ಭಾಗವನ್ನು ಹಿಡಿಯಲಾಗುತ್ತದೆ. ಮತ್ತೊಮ್ಮೆ ಹಿಡಿದ ಭಾಗದಲ್ಲಿ ಮೊದಲು ಗುರುತಿಸಿದ/ ಟ್ಯಾಗ್ ಹಾಕಿದ್ದ ಎಷ್ಟು ಸಂಖ್ಯೆಯಲ್ಲಿ ಸಿಕ್ಕಿವೆ ಎನ್ನುವುದನ್ನು ಬಳಸಿ ಆ ಪ್ರಾಣಿಯ ಒಟ್ಟಾರೆ ಸಂಖ್ಯೆಯನ್ನು ಅಂದಾಜಿಸಲಾಗುತ್ತಿತ್ತು. ಸಾಮಾನ್ಯವಾಗಿ, ಆಯಾ ಪ್ರಭೇದಕ್ಕೆ ತಕ್ಕಂತೆ, ಪ್ರಾಣಿಗಳನ್ನು ಹಿಡಿಯಲೇಬೇಕು ಎಂದಿಲ್ಲ. ಹಲವಾರು ಬಾರಿ, ಅವುಗಳ ಸೆಗಣಿ/ಲದ್ದಿಯ ಜೀನೋಟೈಪಿಂಗ್ ಅಥವಾ ಛಾಯಾಚಿತ್ರಗಳಿಂದ ಪ್ರತ್ಯೇಕವಾಗಿ ಗುರುತಿಸಿ ಅದನ್ನೇ ಈ ವಿಧಾನದಲ್ಲಿ ಬಳಸಲಾಗುತ್ತದೆ. ಈ ವಿಧಾನ ಹುಲಿಗಳಂತಹ ಏಕಾಂಗಿ ಪ್ರಾಣಿಯ ಒಟ್ಟು ಸಂಖ್ಯೆಯನ್ನು ಚೆನ್ನಾಗಿ ಅಂದಾಜಿಸಲು ಅನುಕೂಲವಾಗಿದೆ. ಆದರೆ, ಸಾಮಾಜಿಕವಾಗಿ ಇರುವ ಪ್ರಾಣಿಗಳಲ್ಲಿ ಇವುಗಳ ಸಂಖ್ಯೆಯನ್ನು ಅಂದಾಜಿಸಲು ಈ ವಿಧಾನವು ಒಂದು ಪಕ್ಷಪಾತವನ್ನು ಪರಿಚಯಿಸಬಹುದು ಎಂದು ಇತರೆ ಅಧ್ಯಯನಗಳು ಸೂಚಿಸಿವೆ. ಏಷ್ಯಾದ ಆನೆಗಳಲ್ಲಿ, ಸ್ತ್ರೀ ಆನೆಗಳು ಸಾಮಾಜಿಕ ಗುಂಪುಗಳನ್ನು ರೂಪಿಸುತ್ತವೆ. ಇವು ಹಿಂಡುಗಳನ್ನು ಒಡೆಯಲು ಅಥವಾ ಇತರ ಹಿಂಡುಗಳೊಂದಿಗೆ ಸಂಯೋಜಿಸಲು ಮತ್ತು ಮತ್ತೆ ಸೇರಲು, ವಿಭಿನ್ನ ವ್ಯವಸ್ಥೆಯನ್ನು ಅಧ್ಯಯನಗಳಿಂದ ಗಮನಿಸಲಾಗಿದೆ. ವಯಸ್ಕ ಗಂಡು ಏಷ್ಯಾದ ಆನೆಗಳು ಹೆಚ್ಚಾಗಿ ಏಕಾಂಗಿಗಳು.‘ಒಂದೇ ಪ್ರಭೇದದ ಜೀವಿಗಳಲ್ಲಿ ಎರಡು ಲಿಂಗಗಳು ವಿವಿಧ ವಿಧದ ಸಾಮಾಜಿಕ ರಚನೆಯನ್ನು ಪ್ರದರ್ಶಿಸಿದರೆ (ಏಷ್ಯಾದ ಆನೆಗಳಲ್ಲಿ ಇದು ಕಂಡುಬರುತ್ತದೆ), ಲಿಂಗ ಅನುಪಾತದ ಪ್ರಕಾರ ಗಂಡು ಮತ್ತು ಹೆಣ್ಣು ಸಂಖ್ಯೆಯ ಅಂದಾಜು ಹೆಚ್ಚು ಅಥವಾ ಕಡಿಮೆ ಆಗುವ ಸಾಧ್ಯತೆ ಇದೆ. ಹೀಗೆ ಪ್ರಾಣಿಯ ಸಾಮಾಜಿಕ ರಚನೆಯು ಅವುಗಳ ಒಟ್ಟು ಸಂಖ್ಯೆಯನ್ನು ಅಂದಾಜಿಸಲು ಪಕ್ಷಪಾತವನ್ನು ಉಂಟು ಮಾಡುತ್ತದೆ’  ಎಂದು ಅಧ್ಯಯನದ ನೇತೃತ್ವ ವಹಿಸಿದ ಡಾ. ವಿದ್ಯಾ ವಿವರಿಸುತ್ತಾರೆ.ಸಂಶೋಧಕರು ಮ್ಯಾಟ್ಲಾಬ್ ಎಂಬ ಕಂಪ್ಯೂಟರ್ ಪ್ರೋಗ್ರಾಮಿಂಗ್ ಪ್ಲಾಟ್‌ಫಾರಂ ಅನ್ನು ವಿಶೇಷವಾದ ಸಿಮ್ಯುಲೇಷನ್‌ಗಳನ್ನು ಸೃಷ್ಟಿಸಿದರು. ಅವು ಪ್ರಾಣಿಗಳ ವಿಭಿನ್ನ ಸಾಮಾಜಿಕ ಗುಣಲಕ್ಷಣಗಳನ್ನು ಪರಿಗಣಿಸಿವೆ. ’ಮಾರ್ಕ್-ರಿಕ್ಯಾಪ್ಚರ್’ ವಿಧಾನದ ಮೂಲಕ ಸಾಮಾಜಿಕ ಪ್ರಾಣಿಗಳ ಜನಸಂಖ್ಯೆಯ ಅಂದಾಜಿನ ಮೇಲೆ ಈ ಅಂಶಗಳು ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ತಿಳಿಯಲು ವಿವಿಧ ಬಲೆಗಳ ಸಾಂದ್ರತೆ ಮತ್ತು ಜನಸಂಖ್ಯಾ ಸಾಂದ್ರತೆಗಳಿಗೆ ಅವರು ಪರೀಕ್ಷಿಸಿದ್ದಾರೆ. ಕಂಪ್ಯೂಟರ್ ಸಿಮ್ಯುಲೇಷನ್‌ಮೂಲಕ, ಪಕ್ಷಪಾತವನ್ನು ಕಡಿಮೆಗೊಳಿಸಲು ಯಾವ ಮಾನದಂಡ ಪರೀಕ್ಷಿಸಬೇಕು ಎಂಬುದನ್ನು ಅವರು ಗುರುತಿಸಿದ್ದಾರೆ. ‘ನಮ್ಮ ಕೆಲಸ ಆನೆಗಳಿಗೆ ನಿರ್ದಿಷ್ಟವಾಗಿಲ್ಲ, ಮತ್ತು ಯಾವುದೇ ರೀತಿಯ ಸಾಮಾಜಿಕ ಜೀವಿಗಳನ್ನು ಅಧ್ಯಯನ ಮಾಡಲು ಸಿಮ್ಯುಲೇಷನ್ ಫ್ರೇಮ್‌ವರ್ಕ್ ಅನ್ನು ಬಳಸಬಹುದು’ ಎಂದು ವಿದ್ಯಾ ಹೇಳುತ್ತಾರೆ.ಕಂಪ್ಯೂಟರ್ ಆಧಾರಿತ ಸಿಮ್ಯುಲೇಷನ್ಸ್ ಮಾಹಿತಿ ಸಂಗ್ರಹಣೆ ಕಾರ್ಯದಲ್ಲಿ ಮತ್ತು ಅದನ್ನು ನಿಯೋಜಿಸಲು ಮಹತ್ವ ಪಡೆಯುತ್ತದೆ ಏಕೆಂದರೇ, ಕಾಡಿನಲ್ಲಿ ಎಲ್ಲೆಡೆ ಅಲೆದಾಡಿ ಮಾಹಿತಿ ಸಂಗ್ರಹಿಸಲು ಸಾಧ್ಯವಾಗುವುದಿಲ್ಲ. ಇಂತಹ ವಿಧಾನಗಳಿಂದ ಎಲ್ಲಿ-ಎಷ್ಟರ ಮಟ್ಟಿಗೆ ಮಾಹಿತಿ ಸಂಗ್ರಹಣೆ ಮಾಡಿದರೆ ಸೂಕ್ತ ಎಂದು ತಿಳಿಯಬಹುದು. ಈ ವಿಧಾನ ಬಳಸಿ ಆನೆಯಯಲ್ಲದೆ ಇತರೆ ಸಾಮಾಜಿಕ ಜೀವಗಳನ್ನು ಅಧ್ಯಯಿಸಲು ಸಾಧ್ಯ ಎಂದು ವಿದ್ಯಾ ಈ ಅಧ್ಯಯನದ ಪ್ರಾಮುಖ್ಯತೆ ವಿವರಿಸುತ್ತಾರೆ. 

– ಗುಬ್ಬಿ ಲ್ಯಾಬ್ಸ್‌

(ಸಂಶೋಧನಾ ಚಟುವಟಿಕೆಗಳಲ್ಲಿ ತೊಡಗಿರುವ ಸಾಮಾಜಿಕ ಉದ್ಯಮ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry