7

ಉನ್ಮಾದಿ ಟ್ರಂಪ್, ಸಂಯಮಿ ನರೇಂದ್ರ ಮೋದಿ

Published:
Updated:
ಉನ್ಮಾದಿ ಟ್ರಂಪ್, ಸಂಯಮಿ ನರೇಂದ್ರ ಮೋದಿ

ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ ಕಳೆದ ವರ್ಷ ನಡೆದ ಚುನಾವಣೆಯಲ್ಲಿ ಜಯ ಸಾಧಿಸಲು ಡೊನಾಲ್ಡ್ ಟ್ರಂಪ್ ಅವರು ಪ್ರಚಾರದ ವೇಳೆ ಭಾರಿ ಆಶ್ವಾಸನೆಗಳನ್ನು ನೀಡಿದ್ದರು. ‘ಜೌಗು ಪ್ರದೇಶದ ನೀರನ್ನು ಖಾಲಿ ಮಾಡುತ್ತೇನೆ’ ಎಂಬುದು ಅವರ ಭರವಸೆಗಳ ಪೈಕಿ ಅತ್ಯಂತ ಕುತೂಹಲಕಾರಿ ಆಗಿತ್ತು. ಈ ಭರವಸೆಯ ಅರ್ಥ ವಾಷಿಂಗ್ಟನ್‌ಅನ್ನು ಶುದ್ಧ ಮಾಡುವುದು (ಜೌಗು ನೆಲದ ಮೇಲೆ ವಾಷಿಂಗ್ಟನ್ ನಿರ್ಮಾಣವಾಗಿದೆ ಎನ್ನಲಾಗಿದೆ).ಅವರ ಈ ಹೇಳಿಕೆಯು ಇಂದು ಹಾಸ್ಯಾಸ್ಪದವಾಗಿ ಕಾಣುತ್ತಿದೆ. ಏಕೆಂದರೆ ಆಡಳಿತದಲ್ಲಿ ಅಥವಾ ರಾಜಕೀಯದಲ್ಲಿ ಟ್ರಂಪ್‌ ಅವರಿಗೆ ಯಾವ ಸಾಮರ್ಥ್ಯವೂ ಇರುವಂತೆ ಕಾಣುತ್ತಿಲ್ಲ. ಟ್ರಂಪ್‌ ಅವರನ್ನು ದೇವರೆಂಬಂತೆ ಬಿಂಬಿಸಲಾಗಿತ್ತು. ಆದರೆ ಅಧಿಕಾರ ವಹಿಸಿಕೊಂಡ ಆರಂಭದ ತಿಂಗಳಲ್ಲೇ ಅವರು ಕೋಡಂಗಿಯಂತೆ ಚಿತ್ರಿತರಾಗಿದ್ದಾರೆ. ಸಿಟ್ಟು ಮಾಡಿಕೊಳ್ಳುವ ಟ್ರಂಪ್ ಅವರಿಗೆ ಆಡಳಿತದ ಮೇಲೆ ಕನಿಷ್ಠ ನಿಯಂತ್ರಣ ಸಾಧಿಸಲೂ ಆಗುತ್ತಿಲ್ಲ.ಅವರು ಪ್ರತಿನಿತ್ಯ ಮಾಡುತ್ತಿರುವ ಟ್ವೀಟ್‌ಗಳು, ಮನಸೋಇಚ್ಛೆ ವರ್ತನೆಗೆ ಇಂಬು ಕೊಡುತ್ತಿವೆ. ಈ ಟ್ವೀಟ್‌ಗಳು ಇಲ್ಲದಿದ್ದರೆ ಅವರ ವರ್ತನೆಗಳೆಲ್ಲ ಇತರರಿಗೆ ಗೊತ್ತಾಗುತ್ತಿರಲಿಲ್ಲ. ಟ್ರಂಪ್ ಅವರು ತಮ್ಮ ಅಭಿಪ್ರಾಯಗಳನ್ನು ಎಡೆಬಿಡದೆ, ಅತ್ಯುತ್ಸಾಹದಿಂದ ವ್ಯಕ್ತಪಡಿಸುತ್ತಿರುತ್ತಾರೆ (ಆಶ್ಚರ್ಯ ಸೂಚಕ ಚಿಹ್ನೆ ಬಳಸುವುದೆಂದರೆ ಅವರಿಗೆ ಬಲು ಇಷ್ಟ). ಇದರಿಂದಾಗಿ ಟ್ರಂಪ್ ಅವರಿಗೆ ಸಾರ್ವಜನಿಕವಾಗಿ ಒಳ್ಳೆಯ ಹೆಸರು ಸಂಪಾದಿಸಿಕೊಡುವ ಹೊಣೆ ಹೊತ್ತವರ ಕೆಲಸ ಕಷ್ಟಕರವಾಗುತ್ತಿದೆ!ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ಟ್ವಿಟರ್‌ ಬಳಸುವುದನ್ನು ಇಷ್ಟಪಡುತ್ತಾರೆ. ಆದರೆ ಈ ವಿಚಾರದಲ್ಲಿ ಟ್ರಂಪ್‌ ಮತ್ತು ಮೋದಿ ತೀರಾ ಭಿನ್ನ ವ್ಯಕ್ತಿತ್ವ ಹೊಂದಿದ್ದಾರೆ. ಮೋದಿ ಹಾಗೂ ಟ್ರಂಪ್‌ ಅವರು ಟ್ವಿಟರ್‌ನಲ್ಲಿ ತಲಾ ಮೂರು ಕೋಟಿ ಹಿಂಬಾಲಕರನ್ನು ಹೊಂದಿದ್ದಾರೆ. ಇವರಿಬ್ಬರೂ ಪತ್ರಕರ್ತರನ್ನು ನಂಬದ ಕಾರಣ, ತಮ್ಮ ಮತದಾರರ ಜೊತೆ ಸಂವಹನ ನಡೆಸಲು ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಾರೆ. ತಮ್ಮನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ, ತಮ್ಮಲ್ಲಿರುವ ಬುದ್ಧಿಮತ್ತೆಯನ್ನು ವಿರೋಧಿಗಳು ಹಾಗೂ ಮಾಧ್ಯಮಗಳು ಗುರುತಿಸುತ್ತಿಲ್ಲ ಎಂದು ಟ್ರಂಪ್ ಭಾವಿಸಿದ್ದಾರೆ. ತಾವು ತಪ್ಪು ಮಾಡದಿದ್ದರೂ ಕೋಮು ಹಿಂಸಾಚಾರದ ತಮ್ಮ ಇತಿಹಾಸವನ್ನು ತಮ್ಮ ವಿರುದ್ಧ ಬಳಸಿಕೊಳ್ಳಲಾಗುತ್ತಿದೆ ಎಂದು ಮೋದಿ ಭಾವಿಸಿದ್ದಾರೆ.ಮೋದಿ ಅವರು ಗುಜರಾತಿನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರದ ದಿನಗಳಲ್ಲಿ ಪ್ರವರ್ಧಮಾನಕ್ಕೆ ಬಂದ ಸಾಮಾಜಿಕ ಜಾಲತಾಣಗಳು, ಮಾಧ್ಯಮ ಎಂಬ ಪದರವನ್ನು ಮೀರಿ ನಿಲ್ಲುವ ಅವಕಾಶವನ್ನು ಮೋದಿ ಅವರಿಗೆ ನೀಡಿದವು. ಅದನ್ನು ಮೋದಿ ಪರಿಣಾಮಕಾರಿಯಾಗಿ ಬಳಸಿಕೊಂಡರು. ಟ್ವಿಟರ್‌ ಆರಂಭವಾಗುವತನಕ ಮೋದಿ ಅವರು ಪತ್ರಕರ್ತರ ಜೊತೆ ಮತ್ತೆ ಮತ್ತೆ ಜಗಳವಾಡುತ್ತಿದ್ದರು (ಕರಣ್‌ ಥಾಪರ್ ಜೊತೆಗಿನ ಸಂದರ್ಶನ ಪ್ರಸಾರ ಆಗುತ್ತಿದ್ದಾಗಲೇ ಮೋದಿ ಅವರು ಅದರಿಂದ ಹೊರನಡೆದಿದ್ದರು).ಟ್ರಂಪ್‌ ಅವರಿಗೆ ಆಗುವಂತೆಯೇ ಮೋದಿ ಅವರಿಗೂ ಸಿಟ್ಟು ಬರುತ್ತದೆ, ಕಿರಿಕಿರಿ ಆಗುತ್ತದೆ ಎಂಬುದನ್ನು ಇದು ತೋರಿಸುತ್ತದೆ. ಆದರೆ ಅವರು ಅದನ್ನು ಈಗ ವಿಭಿನ್ನವಾಗಿ ನಿಭಾಯಿಸುತ್ತಿದ್ದಾರೆ.ಮೋದಿ ಮತ್ತು ಟ್ರಂಪ್‌ ಟ್ವಿಟರ್‌ನಲ್ಲಿ ಏನನ್ನು ಪ್ರಕಟಿಸುತ್ತಾರೆ ಎಂಬುದೇ ಇವರಿಬ್ಬರೂ ಟ್ವಿಟರ್‌ ಎಂಬ ಮಾಧ್ಯಮವನ್ನು ಹೇಗೆ ವಿಭಿನ್ನವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂಬುದಕ್ಕೆ ಮೊದಲ ಉದಾಹರಣೆ. ಟ್ರಂಪ್ ಅವರು ತಮ್ಮ ಅಭಿಪ್ರಾಯವನ್ನು ಮತ್ತೆ ಮತ್ತೆ ವ್ಯಕ್ತಪಡಿಸುತ್ತಿರುತ್ತಾರೆ, ತಮ್ಮ ಸಿಟ್ಟು, ತಮಗಾದ ಕಿರಿಕಿರಿಯನ್ನು ಹೇಳಿಕೊಳ್ಳಲು ಹಿಂಜರಿಯುವುದಿಲ್ಲ. ಟ್ರಂಪ್ ಅವರ ಚುನಾವಣಾ ಪ್ರಚಾರಕ್ಕೂ ರಷ್ಯಾಕ್ಕೂ ನಂಟು ಇತ್ತು ಎಂಬ ಆರೋಪದ ಬಗ್ಗೆ ಟ್ರಂಪ್ ನೇತೃತ್ವದ ಸರ್ಕಾರದ ನ್ಯಾಯ ಇಲಾಖೆಯು ಮೇ 18ರಂದು ತನಿಖೆ ಆರಂಭಿಸಿತು.ಇದಕ್ಕೆ ಪ್ರತಿಕ್ರಿಯೆ ರೂಪದಲ್ಲಿ ಟ್ರಂಪ್ ಅವರು, ‘ರಾಜಕಾರಣಿಯೊಬ್ಬನನ್ನು ಮುಗಿಸಲು ಅಮೆರಿಕದ ಇತಿಹಾಸದಲ್ಲಿ ನಡೆಸಿರುವ ಅತಿದೊಡ್ಡ ಕಾರ್ಯ ಇದು’ ಎಂದು ಟ್ವೀಟ್ ಮಾಡಿದರು. ತಮ್ಮನ್ನು ಈ ಹಿಂದಿನ ಅಧ್ಯಕ್ಷರ ಜೊತೆ ಹೋಲಿಸಿಕೊಂಡ ಟ್ರಂಪ್‌, ತಮಗೆ ನ್ಯಾಯ ಸಿಗುತ್ತಿಲ್ಲ ಎಂದರು. ‘ಕ್ಲಿಂಟನ್‌ ಚುನಾವಣಾ ಪ್ರಚಾರದಲ್ಲಿನ, ಒಬಾಮ ಆಡಳಿತ ಅವಧಿಯಲ್ಲಿನ ಅಕ್ರಮಗಳ ಪರಿಶೀಲನೆಗೆ ವಿಶೇಷ ಅಧಿಕಾರಿ ನೇಮಕ ಆಗಿರಲಿಲ್ಲ’ ಎಂದು ಟ್ವೀಟ್ ಮಾಡಿದರು.ಟ್ರಂಪ್ ಅವರು ಒರಟಾಗಿ ವರ್ತಿಸುತ್ತಾರೆ. ಪತ್ರಕರ್ತರು ಹಾಗೂ ಇತರರ ಮೇಲೆ ತಮ್ಮ ಟ್ವಿಟರ್ ಖಾತೆ ಮೂಲಕ ದಾಳಿ ನಡೆಸಲು ಅವರು ಹಿಂಜರಿಯುವುದಿಲ್ಲ. ‘ನಕಲಿ ಮಾಧ್ಯಮಗಳು ಇಂದು ಅತಿಯಾಗಿ ಕೆಲಸ ಮಾಡುತ್ತಿವೆ’ ಎಂದು ಮೇ 12ರಂದು ಅವರು ಟ್ವೀಟ್ ಮಾಡಿದರು.ಟ್ರಂಪ್ ಅವರು ಪ್ರಾಮಾಣಿಕವಾಗಿ ಮಾತನಾಡುತ್ತಿದ್ದಾರೆ ಎಂದು ಕೆಲವರು ಹೇಳಬಹುದು. ಆದರೆ ಇಂತಹ ಬಾಲಿಶ ವರ್ತನೆಗಳು ಟ್ರಂಪ್ ಅವರಿಗೆ ಹೇಗೆ ಸಹಾಯ ಮಾಡುತ್ತವೆ ಎನ್ನುವುದನ್ನು ಹೇಳುವುದು ಕಷ್ಟ. ಈ ವಿಚಾರದಲ್ಲಿ ಮೋದಿ ಅವರು ತೀರಾ ಭಿನ್ನವಾಗಿದ್ದಾರೆ. ಟ್ರಂಪ್ ಹಾಗೂ ಮೋದಿ ಮಾಧ್ಯಮಗಳ ಬಗ್ಗೆ ಹೊಂದಿರುವ ಧೋರಣೆ ಒಂದೇ ಬಗೆಯದ್ದು ಎಂದು ಹೇಳಿದ್ದೇನೆ. ಆದರೆ ತಾವು ಹೇಳಬೇಕಿರುವುದನ್ನು ಹೇಳುವಾಗ ಮೋದಿ ಅವರು ಅತ್ಯಂತ ಸಂಯಮ ವಹಿಸುತ್ತಾರೆ. ಅವರು ಪ್ರತಿನಿತ್ಯ ಮಾಡುವ ಕೆಲಸಗಳ ಬಗ್ಗೆ ಮಾತ್ರ ಟ್ವಿಟರ್‌ನಲ್ಲಿ ಬರೆಯುತ್ತಾರೆ.

ಉದಾಹರಣೆಗೆ ಮೋದಿ ಅವರು ಮೇ 19ರಂದು, ‘ನಾಗಾಲ್ಯಾಂಡ್ ಆದಿವಾಸಿ ಪರಿಷತ್ತಿನವರ ಜೊತೆ ಮಾತುಕತೆ ನಡೆಸಿದೆ’ ಎಂದು ಟ್ವೀಟ್ ಮಾಡಿದರು. ಹಾಗೆಯೇ ಮೋದಿ ಅವರು ಜನರಿಗೆ, ಅದರಲ್ಲೂ ಮುಖ್ಯವಾಗಿ ಇತರ ರಾಜಕಾರಣಿಗಳಿಗೆ, ಅವರ ಜನ್ಮದಿನದ ಶುಭಾಶಯ ತಿಳಿಸುತ್ತಾರೆ. ಮೇ 17ರಂದು ಮೋದಿ ಅವರು, ‘ಮಾಜಿ ಪ್ರಧಾನಿ ಮತ್ತು ರೈತರ ನಾಯಕ ಎಚ್.ಡಿ. ದೇವೇಗೌಡ ಅವರಿಗೆ ಜನ್ಮದಿನದ ಶುಭಾಶಯಗಳು. ಅವರಿಗೆ ದೇವರು ಉತ್ತಮ ಆರೋಗ್ಯ ಮತ್ತು ದೀರ್ಘಾಯಸ್ಸು ಕರುಣಿಸಲಿ’ ಎಂದು ಟ್ವೀಟ್ ಮಾಡಿದರು. ಮೇ 19ರಂದು ಮೋದಿ ಅವರು, ‘ಪ್ರಿಯ ಅಧ್ಯಕ್ಷ ಅಶ್ರಫ್ ಘನಿ ಅವರಿಗೆ ಜನ್ಮದಿನದ ಶುಭಾಶಯ. ನಿಮಗೆ ಆರೋಗ್ಯ, ದೀರ್ಘಾಯಸ್ಸು ದೊರೆಯಲಿ’ ಎಂದು ಟ್ವೀಟ್ ಮಾಡಿದರು.ಸರ್ಕಾರದ ನೀತಿಗಳಿಗೆ ಸಂಬಂಧಿಸಿದ ಘೋಷಣೆಗಳನ್ನು ಕೂಡ ಮೋದಿ ಅವರು ಸಾಮಾಜಿಕ ಜಾಲತಾಣಗಳ ಮೂಲಕ ತಿಳಿಸುತ್ತಾರೆ. ಇಂಥ ವಿಚಾರಗಳಿಗೆ ಸಂಬಂಧಿಸಿದ ಟ್ವೀಟ್‌ಗಳನ್ನು ಅವರು ತಮ್ಮ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟವಾದ ವರದಿಗಳ ಜೊತೆ ಸೇರಿಸಿ, ಪ್ರಕಟ ಮಾಡುತ್ತಾರೆ. ಸುದ್ದಿ ಮಾಧ್ಯಮಗಳಲ್ಲಿ ಬಂದ ವರದಿಗಳ ಜೊತೆ ಸೇರಿಸಿ ಟ್ವೀಟ್ ಮಾಡುವುದಿಲ್ಲ ಎಂಬುದನ್ನು ಗಮನಿಸಬೇಕು. ಟ್ವಿಟರ್‌ನಲ್ಲಿ ಬರೆದಿರುವ ಸಾಲುಗಳನ್ನು ಓದಿ ನಮ್ಮ ದೇಶದ ಪ್ರಧಾನಿ ಏನನ್ನು ಆಲೋಚಿಸುತ್ತಿದ್ದಾರೆ ಎಂಬುದನ್ನು ಅಂದಾಜಿಸುವುದು ಸಾಧ್ಯವೇ ಇಲ್ಲ. ಆದರೆ ಅಮೆರಿಕದ ಅಧ್ಯಕ್ಷರ ವಿಚಾರದಲ್ಲಿ ಹೀಗಿಲ್ಲ. ಟ್ರಂಪ್‌ ಅವರು ವೀಕ್ಷಿಸುವ ಟಿ.ವಿ. ವಾಹಿನಿ ಯಾವುದು ಎಂಬುದನ್ನು ಗೊತ್ತು ಮಾಡುವುದು ಕೂಡ ಪತ್ರಕರ್ತರಿಗೆ ಸುಲಭದ ಕೆಲಸ. ಏಕೆಂದರೆ ವಾಹಿನಿ ವೀಕ್ಷಿಸಿದ ತಕ್ಷಣ ಟ್ರಂಪ್ ಅವರು ಪ್ರತಿಕ್ರಿಯೆ ರೂಪದಲ್ಲಿ ಏನಾದರೂ ಟ್ವೀಟ್ ಮಾಡುತ್ತಾರೆ.ಟ್ರಂಪ್ ಹಾಗೂ ಮೋದಿ ಅವರು ವ್ಯವಸ್ಥೆಯನ್ನು ಶುದ್ಧೀಕರಿಸುವ ಭರವಸೆ ನೀಡಿ ಹೊರಗಿನಿಂದ ರಾಜಕೀಯಕ್ಕೆ ಬಂದವರು. ಇಬ್ಬರಲ್ಲಿ ಒಬ್ಬ ವ್ಯಕ್ತಿ ಮೂರು ವರ್ಷಗಳಿಗಿಂತ ತುಸು ಹೆಚ್ಚಿನ ಅವಧಿಯಿಂದ ಅಧಿಕಾರದಲ್ಲಿ ಇದ್ದಾರೆ, ಇನ್ನೊಬ್ಬ ವ್ಯಕ್ತಿ ಮೂರು ತಿಂಗಳಿಗಿಂತ ತುಸು ಹೆಚ್ಚಿನ ಅವಧಿಯಿಂದ ಹುದ್ದೆಯಲ್ಲಿದ್ದಾರೆ. ಆದರೆ ಟ್ರಂಪ್‌ ಅವರ ಹೆಸರನ್ನು ಈಗಾಗಲೇ ‘ವೈಫಲ್ಯ’ದ ಜೊತೆ ಸಮೀಕರಿಸಲಾಗುತ್ತಿದೆ. ಅಷ್ಟೇ ಅಲ್ಲ, ಅವರ ಬೆಂಬಲಿಗರೂ ಸೇರಿದಂತೆ ಹಲವರು ಅವರನ್ನು ಅದಕ್ಷ ಎಂದು ಭಾವಿಸಲು ಆರಂಭಿಸಿದ್ದಾರೆ. ಇತ್ತ ಮೋದಿ ಅವರೂ ತಪ್ಪು ಮಾಡಿದ್ದಾರೆ, ಈಡೇರಿಸಲು ಆಗದಂತಹ ಭರವಸೆಗಳನ್ನು ನೀಡಿದ್ದಾರೆ. ಆದರೆ ಜಾಗರೂಕ ಮತ್ತು ಎಚ್ಚರಿಕೆಯ ನಡೆಗಳು ಮೋದಿ ಅವರನ್ನು ಟೀಕೆಗಳಿಂದ ರಕ್ಷಿಸಿವೆ.ಚಿಕ್ಕ ಮಕ್ಕಳಂತೆ ವರ್ತಿಸುವುದು, ಉನ್ಮಾದಕ್ಕೆ ಒಳಗಾದವರಂತೆ ಆಡುವುದು, ತಮ್ಮನ್ನು ಸರಿಯಾಗಿ ನಡೆಸಿಕೊಳ್ಳಲಾಗುತ್ತಿಲ್ಲ ಎಂದು ಅಲವತ್ತುಕೊಳ್ಳುವುದು ಟ್ರಂಪ್ ಅವರ ವಿರುದ್ಧ ಕೆಲಸ ಮಾಡುತ್ತಿವೆ. ವಿಶ್ವದ ಅತ್ಯಂತ ಶಕ್ತಿಶಾಲಿ ಹುದ್ದೆಯಲ್ಲಿರುವ ವ್ಯಕ್ತಿಯನ್ನು ನೋಡುವುದೇ ಒಂದು ಮುಜುಗರದ ಸಂಗತಿಯಾಗಿದೆ.

(ಲೇಖಕ ಅಂಕಣಕಾರ ಹಾಗೂ ಆಮ್ನೆಸ್ಟಿ ಇಂಟರ್‌ನ್ಯಾಷನಲ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry