ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಬ್ದ-ಅರ್ಥಗಳ ಸಾಂಸ್ಕೃತಿಕ ನೆಲೆಗಳು

ಪದವೊಂದು ಪಡೆದಿರುವ ಅರ್ಥದ ತಿರುವುಗಳೆಲ್ಲ ನಿರಂತರ ಸಾಂಸ್ಕೃತಿಕ ಪ್ರಕ್ರಿಯೆ
Last Updated 22 ಮೇ 2017, 19:30 IST
ಅಕ್ಷರ ಗಾತ್ರ
 *ಜೆ. ಶ್ರೀನಿವಾಸಮೂರ್ತಿ
ಜೀವನ ಬೆಳೆದಂತೆ ಭಾಷೆಯೂ ಬೆಳೆಯುತ್ತದೆ; ಎಂದರೆ ಶಬ್ದಭಂಡಾರವೂ ಶಬ್ದರೂಪಗಳೂ ಅರ್ಥಛಾಯೆಗಳೂ ಬೆಳೆದು ಜೀವನದಷ್ಟೆ ಭಾಷೆಯೂ ಜಟಿಲವಾಗುತ್ತಾ ಹೋಗುತ್ತದೆ. ಈ ಬೆಳವಣಿಗೆ ಏಕಮುಖಿಯಲ್ಲ. ಈ ಬೆಳವಣಿಗೆ ಕಾಲ-ದೇಶದ ಪ್ರಭಾವಕ್ಕೆ ಒಳಗಾಗಿರುತ್ತದೆ.

ಸಾಮಾಜಿಕ–ರಾಜಕೀಯ ಬದಲಾವಣೆಯೂ ಇದರಲ್ಲಿ ಸೇರಿಕೊಂಡಿದೆ. ಅದರೊಂದಿಗೆ ಬಂದ ಜ್ಞಾನ, ನಂಬುಗೆ, ಭಾವನೆಗಳೂ ಪ್ರಭಾವಿಸುತ್ತಿರುತ್ತವೆ; ಎಂದರೆ ಸಾಂಸ್ಕೃತಿಕ ಮತ್ತು ಅದರಿಂದಾದ ದೈನಂದಿನ ಸಂಗತಿಗಳ ಬದಲಾವಣೆಗಳ ಲೆಕ್ಕವನ್ನೂ ಇದು ಒಳಗೊಂಡಿರುತ್ತದೆ.
 
ಒಂದೆರಡು ಉದಾಹರಣೆ: ತಿನ್ನುವುದನ್ನೆಲ್ಲ ಅನ್ನ ಎಂದಿದೆ ‘ಅತ್ತಿ ಇತಿ ಅನ್ನಂ’. ಮುಂದೆ ಇದೇ ಬೇಯಿಸಿದ ಆಹಾರ ಎಂಬರ್ಥ ಪಡೆಯಿತು. ದಕ್ಷಿಣ ಭಾರತದಲ್ಲಿ ಅಕ್ಕಿ ಬೇಯಿಸಿದ್ದನ್ನು ಮಾತ್ರ ಅನ್ನ ಎಂದರು. ಪಿಂಡ ಎಂದರೆ ಮುದ್ದೆಯಾಗಿರುವುದು. ಭಿಕ್ಷುಗಳಿಗೆ ಹಾಕುವ ತುತ್ತನ್ನೂ ಪಿಂಡ ಎನ್ನುತ್ತಾರೆ.
ಹೀಗಾಗಿ ಭಿಕ್ಷೆಯನ್ನು ‘ಪಿಂಡಪಾತ’ ಎಂದರು. 
 
ಗರ್ಭದಲ್ಲಿರುವ ಜೀವಕ್ಕೂ ಇದೇ ಪದ. ಸತ್ತವರಿಗೆ ಇಡುವ–ಕೊಡುವ ಅನ್ನದ ಉಂಡೆಯೂ ‘ಪಿಂಡ’ ಎನಿಸಿಕೊಂಡಿತು. ದಾಕ್ಷಿಣಾತ್ಯರಿಗೆ ಅದು ಅನ್ನದಿಂದಲೇ ಆಗಬೇಕು. ಆದರೆ ಉತ್ತರದವರಿಗೆ ಗೋಧಿಹಿಟ್ಟೂ ಆದೀತು.
 
ಸತ್ತವರಿಗೆ ಇಡುವ ಪಿಂಡ, ಗರ್ಭದಲ್ಲಿನ ಜೀವದ ಸಂಕೇತವೆಂದರು ಕೆಲವರು. ಊಟಕ್ಕೆ ಕೊಟ್ಟದ್ದು ಎಂತಲೂ ವ್ಯಾಖ್ಯಾನಿಸುವುದು ಸಾಧ್ಯ. ಈಗ ಮೂರನೆಯ ಅರ್ಥ  ಪ್ರಮುಖವಾಗಿರುವುದರಿಂದ ಬೌದ್ಧರು ಪಿಂಡಪಾತ ಎಂಬ ಪದ ಬಳಸಬಾರದು ಎಂದರೆ ಹೇಗೆ?  ಗಯಾದಲ್ಲಿ ವಿಷ್ಣುಪಾದಕ್ಕೆ ಪಿಂಡ ಇಡುವವರಿಗೂ, ಬೋಧಗಯಾದಲ್ಲಿ ಭಿಕ್ಕುಗಳಿಗೆ ಪಿಂಡಪಾತ ಹಾಕುವವರಿಗೂ ಈ ನಂಬುಗೆಗಳಲ್ಲಿ ಶ್ರದ್ಧೆಯಿದ್ದರೂ, ಅನ್ಯ ಸಂದರ್ಭದಲ್ಲಿ ಪಿಂಡ ಎಂದರೆ ಅವಮಾನ ಎಂದುಕೊಳ್ಳುತ್ತಾರೆ. 
 
ಗೌರವ ಸೂಚಿಸಲು ನಮಸ್ಕಾರ ಎನ್ನುತ್ತೇವೆ. ‘ನಮತಿ ನಮಃ’ ಎಂದರೆ ಬಾಗುವುದು. ಇದನ್ನು ಹೇಳುವಾಗ ಕೈ ಜೋಡಿಸುತ್ತೇವೆ, ತಲೆ ಬಾಗುತ್ತೇವೆ. ಹೆಚ್ಚು ಗೌರವ ತೋರಿಸಲು ಸೊಂಟ ಬಗ್ಗಿಸುತ್ತಾರೆ, ಕುಳಿತು ತಲೆಯನ್ನು ನೆಲಕ್ಕೆ ಇಡುತ್ತಾರೆ, ಪೂರ್ತಿ ಶರಣಾಗಿದ್ದೇನೆಂದು ತೋರಿಸಲು ದೇಹವನ್ನು ಮಕಾಡೆ ನೆಲದ ಮೇಲೆ ಇಡುತ್ತಾರೆ. ಇದು ಅನೇಕ ಪ್ರಾಣಿಗಳಲ್ಲಿ ಸೋತು ಶರಣಾಗುವ ಸಂಕೇತ. ಇದರಲ್ಲಿ ಲೈಂಗಿಕತೆಯೂ ಇದೆ.

ಇದಕ್ಕೆ ವಿರುದ್ಧವಾಗಿ ಅಭಿಮುಖವಾಗದೆ ಬಾಗಿ ಅಂಡು ತೋರಿಸಿದರೆ ಅದು ವಿರುದ್ಧಾರ್ಥ, ಉದ್ಧಟತನ! ಆದರೆ ನಾವು ನಮಸ್ಕಾರ ಎನ್ನುವಾಗ ಮೂಲಾರ್ಥ ಎಂದು ಯಾವುದನ್ನಾದರೂ ಯೋಚಿಸುತ್ತೇವೆಯೇ? ಹೀಗೆಯೇ ‘ಶರಣಂ’ ಎನ್ನುವುದು ಯುದ್ಧದಲ್ಲಿ ಸೋತಾಗ ಒಪ್ಪಿಸಿಕೊಳ್ಳುವುದು ಅಥವಾ ಹೆದರಿ ಇನ್ನೊಬ್ಬರಲ್ಲಿ ಮೊರೆ ಹೋಗುವುದು. ಅನೇಕ ಯುದ್ಧದ ವಿಷಯ ಹೇಳುವ ವೇದದಲ್ಲಿ ‘ಶರಣಂ ಪ್ರಪದ್ಯೇ’ ಎಂಬ ಮಾತಿದೆ.
 
ಬೌದ್ಧರಲ್ಲಿ ‘ತಿಸರಣ’ವಿದೆ. ಎಂದರೆ ಬುದ್ಧ, ಧರ್ಮ ಮತ್ತು ಸಂಘಕ್ಕೆ ಮೊರೆಹೋಗುವುದು ಮೊದಲ ಕೆಲಸ. ಶರಣು, ಶರಣಾಗತಿ ಎಂಬ ಮಾತುಗಳು ಶೈವ–ವೈಷ್ಣವ ಪಂಥಗಳಲ್ಲಿ ಸಮನಾಗಿ ಭಕ್ತಿದ್ಯೋತಕ, ಭಕ್ತಿಯ ಪರಾಕಾಷ್ಠೆ.  ಶ್ರೀವೈಷ್ಣವರು ಇನ್ನೂ ಮುಂದೆ ಹೋಗಿ, ಪ್ರಪತ್ತಿ ಎನ್ನುವುದನ್ನು ಹೇಳಿದರು.  ಈ ವ್ಯಾಖ್ಯಾನ ಬರುವ ಕಾಲಕ್ಕೆ ಇದನ್ನು ಹೇಳುವವರ ಸ್ಥಿತಿ ಅಸಹಾಯಕವಾಗಿದ್ದಂತೆ ತೋರುತ್ತದೆ.
 
ಒಂದು ನಡೆ ಅಥವಾ ಕ್ರಿಯೆಯ ಹಿಂದಿನ ರಾಜಕೀಯ, ಸಾಮಾಜಿಕ ಪರಿಸ್ಥಿತಿಗಳ ಬೆಳವಣಿಗೆ ಇದರಿಂದ ತಿಳಿಯುತ್ತದೆ. ಕಾಯುವ ರಾಜ ‘ನಾನೇ ದೇವರು’ ಎನ್ನುವುದು ಒಂದು ಕಡೆಗೆ, ‘ದೇವರೇ ಕಾಪಾಡಬೇಕು; ಅವನೇ ರಾಜ’ ಎನ್ನುವುದು ಇನ್ನೊಂದು ಕಡೆಗೆ.
 
ಒಂದೇ ಪರಿಸ್ಥಿತಿಯ ಎರಡು ಮುಖಗಳು. ಮಗಧ ಸಾಮ್ರಾಜ್ಯದ ಹೊಟ್ಟೆಯಲ್ಲಿ ಬೌದ್ಧ ಧರ್ಮ, ಚೋಳ–ಚೇರ ಸಾಮ್ರಾಜ್ಯದಲ್ಲಿ ಆಳ್ವಾರರು, ಚಾಳುಕ್ಯರ ಅವನತಿಯಲ್ಲಿ ಶಿವಶರಣರು, ವಿಜಯನಗರ ಸಾಮ್ರಾಜ್ಯದಲ್ಲಿ ದಾಸರು– ಆಯಾ ಸಾಮ್ರಾಜ್ಯದ ಸಂಕೇತಗಳನ್ನೇ ಬಳಸಿ, ಪಲ್ಲಟಗೊಳಿಸಿದ್ದು ಆಕಸ್ಮಿಕಗಳಲ್ಲ.
 
ಹೀಗೆ ಪಲ್ಲಟಗೊಳಿಸುವಾಗ ಆದಿಮ ರೂಪಗಳಿಗೆ ಸಹ ಹೊಸ ರೂಪ ಕೊಡುತ್ತಾ ಬಂದಿದ್ದಾರೆ. ಈ ಆದಿಮ ರೂಪಗಳನ್ನೇ ಶಕ್ತಿಯುತ ಸಾಧನೆಯ ಮಾರ್ಗವಾಗಿಸಿಕೊಂಡವರು ಜಾನಪದರು. ಅಂದಿನಿಂದ ಇಂದಿನವರೆಗೂ ಪ್ರಭಾವಶಾಲಿಯಾಗಿರುವ ತಂತ್ರದಲ್ಲಿ ಇದನ್ನು ಗಮನಿಸಬಹುದು. ಇದರ ಕಡೆಗೆ ಮೊದಲು ತೀವ್ರವಾಗಿ ಗಮನ ಸೆಳೆದವರು ಶಂಬಾ ಜೋಷಿ.
 
ಇತ್ತೀಚೆಗೆ ‘ಭಗವಾನ್’ ಶಬ್ದದ ಬಗ್ಗೆ ಇಂತಹ ಚರ್ಚೆ ಬಂದಿದೆ. ‘ದೇವರು’ ಎಂಬ ಅರ್ಥ ಅದಕ್ಕಿರುವುದರಿಂದ ‘ಬುದ್ಧ ಭಗವಾನ್‌’ ಎನ್ನುವುದು ಬೇಡ ಎನ್ನುತ್ತಿದ್ದಾರೆ ಚಂಪಾ. ಅದು ವೈದಿಕಪರಂಪರೆ ಶಬ್ದವಲ್ಲ, ಕ್ಲೇಶ ಕಳೆದು ಸಂಸಾರದಿಂದ ಎತ್ತುವ ಸಾಮರ್ಥ್ಯ ‘ಭಗ್ಗ’; ಅದರಿಂದ ಕೂಡಿದವನು ಭಗವಾ(ನ್). ಅದರಿಂದ ಬುದ್ಧನ ಒಂಬತ್ತು ಪ್ರಧಾನಗುಣಗಳಲ್ಲಿ ಅದು ಒಂದು. ಭಗವದ್ಗೀತೆಯಲ್ಲಿ ಅದನ್ನು ತಿರುಚಿದೆ–  ಎಂದಿದ್ದಾರೆ ರಮಾಕಾಂತ ಪುರಾಣಿಕ (ವಾ.ವಾ., ಮೇ 16).
 
ದಯವಿಟ್ಟು ಗಮನಿಸಿ: ಋಗ್ವೇದ 7-41ನೇ ಸೂಕ್ತ, ಯಜುರ್ವೇದ, ವಾಜಸನೇಯಿಸಂಹಿತೆ 38ರಲ್ಲಿನ ಮಂತ್ರಗಳಲ್ಲಿ [ಉತೇದಾನೀಂ ಭಗವಂತಃ ಸ್ಯಾಮ ..., ಭಗ ಏವ ಭಗವಾ । ಅಸತು ದೇವಾಸ್ತೇನ ವಯಂ ಭಗವಂತಃ ಸ್ಯಾಮ...] ‘ಭಗ-ಇರುವ ದೇವತೆಗಳನ್ನು ಪ್ರಾರ್ಥಿಸಿ, ನಾವು ಭಗವಂತರಾಗೋಣ’ ಎಂದಿದೆ. ಸಾವಿರಾರು ವರ್ಷದ ನಂತರದ ಸಾಯಣರ ವ್ಯಾಖ್ಯಾನದಲ್ಲಿ ‘ಭಗ’ ಶಬ್ದಕ್ಕೆ ಜ್ಞಾನ, ಧನವನ್ನು ಹೊಂದಿದವನು, ಕೊಡುವವನು ಭಗವಂತ ಎಂದಿದೆ. ವೇಶೋಯಶ-ಆದೇರ್ಭಗಾದ್ಯತ್ ಎಂದು ಬುದ್ಧನಿಗಿಂತ ಹಿಂದಿನ ಪಾಣಿನಿಯ ಸೂತ್ರದಲ್ಲಿ [4-4-131] ಭಗ ಪದ ಬಳಕೆ ಹೇಳಿದೆ.

ಆದರೆ ‘ಭಗ’ ಎನ್ನುವುದು ವೇದದ ಭಾಷೆಯ ಧಾತುವಿನಿಂದ ಬಂದ ಪದವಲ್ಲ. ಇಂತಹವನ್ನು ಅವ್ಯುತ್ಪನ್ನ ಎಂದು ಗುರುತಿಸಿ ಅವು ಅವೈದಿಕರಿಂದ (ಮ್ಲೇಚ್ಛರಿಂದ) ಬಂದ ಶಬ್ದಗಳೆಂದು ಅದರ ಅರ್ಥನಿರ್ಣಯಕ್ರಮವನ್ನು ವೇದಮೀಮಾಂಸೆಗೆ ಇರುವ ಜೈಮಿನಿ ಸೂತ್ರಗಳಲ್ಲಿ [1-3-2ರಿಂದ 20] + ಶಬರಭಾಷ್ಯದಲ್ಲಿ ಹೇಳಿದೆ. ಎಂದರೆ ಬೇರೆ ಭಾಷೆಯಿಂದ ಬಂದ ಪದಗಳನ್ನು ವೈದಿಕ ಪರಂಪರೆ ಒಪ್ಪಿದೆ. ಇನ್ನು ಭಗ ಶಬ್ದಕ್ಕೆ ‘ಯೋನಿ’ ಎಂಬ ಅರ್ಥವೂ ಪ್ರಸಿದ್ಧವೇ.
 
ಅದು ಹೆಣ್ಣಿನ ಜನನಾಂಗ ಅಲ್ಲದೆ ಎಲ್ಲರಲ್ಲಿಯೂ ಲೈಂಗಿಕ ಶಕ್ತಿಯನ್ನು ಒಳಗೆ ತಿರುಗಿಸಿಕೊಳ್ಳುವ ಕೇಂದ್ರ. ತಂತ್ರಯೋಗದಲ್ಲಿನ ವಿಶೇಷ. ಈ ರೀತಿ ಸಾಧನೆ ವಿಶೇಷ ಅರಿವನ್ನೂ ಶಕ್ತಿಯನ್ನೂ ಕೊಡುತ್ತದೆ ಎಂದು ನಂಬುಗೆ [ಆ ಸೌಲಭ್ಯ ಇರುವುದೇ ‘ಸೌ-ಭಾಗ್ಯ’]. ಶ್ರಮಣ ಮತ್ತು ಬ್ರಾಹ್ಮಣ ಪರಂಪರೆಗಳೆರಡೂ ಇದನ್ನು ಗುರುತಿಸಿ ಬಳಸಿಕೊಂಡಿವೆ; ತಮಗೆ ತಕ್ಕಂತೆ ವ್ಯಾಖ್ಯಾನಿಸಿವೆ.
 
‘ಐಶ್ವರ್ಯಸ್ಯ ಸಮಗ್ರಸ್ಯ ವೀರ್ಯಸ್ಯ ಯಶಸಂ ಬಲಃ ಜ್ಞಾನವಿಜ್ಞಾನಯೋಶ್ಚೈವ ಷಣ್ಣಾಂ ಭಗ ಇತೀರಣೆ’ ಎಂದು ವಿಷ್ಣುಪುರಾಣ ವ್ಯಾಖ್ಯಾನ ಮಾಡಿದೆ. ಜತೆಗೆ ಆ ಸಂಕೇತ–ಲಾಂಛನಗಳನ್ನು ದೇವರಿಗೂ ಹಾಕಿ ತಾವೂ ಹಾಕಿಕೊಳ್ಳುವುದಕ್ಕೂ ಭಾಗವತೋತ್ತಮರು ವ್ಯಾಖ್ಯಾನ ಕೊಟ್ಟಿದ್ದಾರೆ.

ಅತಿಪ್ರಾಚೀನ ಬುದ್ಧವಿಗ್ರಹದಲ್ಲೂ ಹಣೆಯ ಮೇಲೆ ಒಂದು ಬಿಂದುವಿರುತ್ತದೆ! ಇವುಗಳನ್ನು ವಾಚ್ಯಾರ್ಥದಲ್ಲಿ ಗ್ರಹಿಸಿದರೆ ಈಗ ಅವಾಚ್ಯವಾಗುತ್ತದೆ! ‘ಶ್ರೀ’ ಎಂಬ ಸ್ತ್ರೀಲಿಂಗ ಶಬ್ದವೂ ಹೀಗೆ ಈಗ ಮರ್ಯಾದಾವಚನವಾದಂತೆ ಭಗವಾನ್ ಶಬ್ದವನ್ನೂ ತಿಳಿಯುವುದು ಸರಿ. ಅರ್ಥದ ತಿರುವುಗಳನ್ನೆಲ್ಲ ತಿರುಚಿದ್ದು ಎಂದರೆ ಅದು ನಿರಂತರ ಪ್ರಕ್ರಿಯೆ ಎನ್ನುವುದನ್ನು ಗಮನಿಸಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT