6

ಐತಿಹಾಸಿಕ ಋಣ ಸಂದಾಯ ಸಾಧ್ಯವೇ?

ಟಿ.ಕೆ.ತ್ಯಾಗರಾಜ್
Published:
Updated:
ಐತಿಹಾಸಿಕ ಋಣ ಸಂದಾಯ ಸಾಧ್ಯವೇ?

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾತಿನ ಧಾಟಿ ಇತ್ತೀಚೆಗೆ ಬದಲಾಗಿರುವುದನ್ನು ನೀವು ಗಮನಿಸಿರಬಹುದು. ಮೈಸೂರಿನಲ್ಲಿ (ಮೇ 20) ಪತ್ರಕರ್ತರೊಬ್ಬರ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ‘ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವುದನ್ನು ಬಿಟ್ಟು ಬೇರೆ ಯಾವುದೇ ಆಸೆ ಇಲ್ಲ, ಮುಖ್ಯಮಂತ್ರಿ ಸ್ಥಾನದ ಬಗ್ಗೆ ಶಾಸಕಾಂಗ ಪಕ್ಷದ ಆಶಯದಂತೆ ಪಕ್ಷದ ವರಿಷ್ಠರು ನಿರ್ಧಾರ ಕೈಗೊಳ್ಳುತ್ತಾರೆ’ ಎಂದು ಹೇಳಿದ್ದಾರೆ.ಅಷ್ಟೇ ಅಲ್ಲ. ಸದ್ಯ ವರುಣಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಅವರು ಮುಂದಿನ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸುವ ಇಂಗಿತವನ್ನೂ ವ್ಯಕ್ತಪಡಿಸಿದ್ದಾರೆ.

 

ಕಳೆದ ವಿಧಾನಸಭಾ ಚುನಾವಣೆಗೆ ಮುನ್ನ, ‘ಇದೇ ಕೊನೆಯ ಚುನಾವಣೆ. ಇನ್ನು ಮುಂದೆ ಸ್ಪರ್ಧಿಸುವುದಿಲ್ಲ’ ಎಂದು ಹೇಳಿದ್ದವರು, ಈಗ ಮುಂದಿನ ಚುನಾವಣೆಯ ಬಗ್ಗೆ ಮಾತನಾಡುತ್ತಿರುವುದಾದರೂ ಏಕೆ? ಅವರಿಗೆ ಮತ್ತೆ ಮುಖ್ಯಮಂತ್ರಿಯಾಗುವ ಆಸೆ ನಿಜಕ್ಕೂ ಇಲ್ಲವೇ? ಏಕೆ ಹೀಗೆ ಹೇಳುತ್ತಿರಬಹುದು? ತಮ್ಮನ್ನು ಮತ್ತೆ ಮುಖ್ಯಮಂತ್ರಿ ಮಾಡುವುದಕ್ಕೆ ಕಾಂಗ್ರೆಸ್ ಪಕ್ಷವೇ ಅವಕಾಶ ಮಾಡಿಕೊಡುವುದಿಲ್ಲ ಎಂದು ಭಾವಿಸಿರಬಹುದು, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬಹುಮತ ಪಡೆಯುವ ಖಾತ್ರಿ ಇಲ್ಲದಿರಬಹುದು ಅಥವಾ ಶಾಸಕಾಂಗ ಪಕ್ಷದ ಸದಸ್ಯರೇ ತಮ್ಮ ನಾಯಕನನ್ನು ಆಯ್ಕೆ ಮಾಡುವುದು ಸರಿಯಾದ ಕ್ರಮವೆಂದು ಹಾಗೆ ಹೇಳಿರಬಹುದು. ಅಥವಾ ಬೇರೆ ಇನ್ಯಾವುದೋ ಕಾರಣವೂ ಇರಬಹುದು.

 

ಹಾಗಾದರೆ ಅಂಥ ಕಾರಣವಾದರೂ ಯಾವುದು? ಅವರು ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿರುವುದಕ್ಕೂ ಅವರ ಮಾತಿನ ಧಾಟಿ ಬದಲಾಗಿರುವುದಕ್ಕೂ ಸಂಬಂಧ ಇದ್ದಂತಿದೆ. ಅವರು ಐತಿಹಾಸಿಕ ಋಣ ಸಂದಾಯಕ್ಕೆ ಸಿದ್ಧರಾಗಿದ್ದಾರೆಯೇ? ಏನಿದು ಐತಿಹಾಸಿಕ ಋಣ ಸಂದಾಯ? 

 

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಪರವಾಗಿ ರೂಪುಗೊಂಡ ಅಲೆಯಿಂದಾಗಿ ಕಾಂಗ್ರೆಸ್ ಪಕ್ಷ ಬಹುಮತ ಗಳಿಸುತ್ತಿದ್ದಂತೆ, ಹಿಂದೆಂದೂ ಸಾಮಾಜಿಕ ನ್ಯಾಯದ ಮಾತುಗಳನ್ನಾಡದ ಪ್ರಬಲ ಜಾತಿಗೆ ಸೇರಿದ ಕೆಲವು ರಾಜಕೀಯ ಪಂಡಿತರು,  ವಾಸ್ತವವಾಗಿ ಕೆಪಿಸಿಸಿ ಅಧ್ಯಕ್ಷರಾದವರೇ ಮುಖ್ಯಮಂತ್ರಿಯಾಗುತ್ತಾರೆ, ಡಾ.ಜಿ. ಪರಮೇಶ್ವರ್ ತಮ್ಮ ಕ್ಷೇತ್ರದಲ್ಲಿ ಸೋಲನುಭವಿಸಿರುವುದರಿಂದ ಸಾಮಾಜಿಕ ನ್ಯಾಯದ ದೃಷ್ಟಿಯಿಂದ ದಲಿತ ಸಮುದಾಯಕ್ಕೆ ಸೇರಿದ ಪಕ್ಷದ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರು ಮುಖ್ಯಮಂತ್ರಿಯಾಗಬೇಕು ಎಂಬರ್ಥದ ವಾದಗಳನ್ನು ಮುಂದಿಡತೊಡಗಿದ್ದರು.ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಖರ್ಗೆ ಮುಖ್ಯಮಂತ್ರಿಯಾಗಬೇಕೆನ್ನುವ ವಾದ ಕೇಳಲು ಇಂಪಾಗಿದ್ದರೂ ಆ ಸಂದರ್ಭಕ್ಕೆ ಅದು ಸಮರ್ಥನೀಯವಾಗಿರಲಿಲ್ಲ. ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗುತ್ತಾರೆಂಬ ನಂಬಿಕೆ ಮತ್ತು ನಿರೀಕ್ಷೆಯಲ್ಲಿ ಹೊರಹೊಮ್ಮಿದ ಫಲಿತಾಂಶಕ್ಕೆ ದ್ರೋಹ ಬಗೆಯುವುದು ನ್ಯಾಯಸಮ್ಮತ ನಿರ್ಧಾರ ಅನ್ನಿಸಿಕೊಳ್ಳುತ್ತಿರಲಿಲ್ಲ.ಈ ಹುದ್ದೆಗೆ ಹಕ್ಕು ಮಂಡಿಸುವಷ್ಟು ಸಮರ್ಥ ನಾಯಕರ್‍್ಯಾರೂ ತಮ್ಮ ಜಾತಿಯಲ್ಲಿ ಆ ಸಂದರ್ಭದಲ್ಲಿ ಇಲ್ಲದಿದ್ದುದೂ, ಯಾರನ್ನೂ ಕೇರ್ ಮಾಡದ ಸಿದ್ದರಾಮಯ್ಯ ಬಳಿ ತಮ್ಮ ಬೇಳೆ ಬೇಯದು ಎಂಬ ಕಾರಣದಿಂದಷ್ಟೇ ಈ ರಾಜಕೀಯ ಪಂಡಿತರು ಇಂಥ ವಾದ ಮುಂದಿಟ್ಟಿದ್ದರು. ಸಿದ್ದರಾಮಯ್ಯ ಅವರು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗುತ್ತಿದ್ದಂತೆ ಅವರ ವಾದ ಇನ್ನೊಂದು ದಿಕ್ಕಿಗೆ ಹೋಗಿತ್ತು.

 

ಸಿದ್ದರಾಮಯ್ಯ ಹೆಚ್ಚೆಂದರೆ ಎರಡೂವರೆ ತಿಂಗಳು ಮುಖ್ಯಮಂತ್ರಿಯಾಗಿರಬಹುದು, ಕಾಂಗ್ರೆಸ್ಸಿಗರು ಪೂರ್ಣಾವಧಿ ಆಡಳಿತ ನಡೆಸಲು ಅವಕಾಶ ನೀಡುವುದಿಲ್ಲ, ಮುಂದಿನ ದಿನಗಳಲ್ಲಿ ಮೂಲ ಕಾಂಗ್ರೆಸ್ಸಿಗರೇ ಮುಖ್ಯಮಂತ್ರಿಯಾಗುತ್ತಾರೆ ಎಂದು ಹೇಳಲು ಶುರು ಮಾಡಿದ್ದರು. ಅದು ಅವರ ಆಸೆಯಾಗಿತ್ತೇ ಹೊರತು ಅದಕ್ಕೆ ಸಕಾರಣಗಳಿರಲಿಲ್ಲ.

 

ಆದರೆ ಸಿದ್ದರಾಮಯ್ಯ ನಾಲ್ಕು ವರ್ಷಗಳನ್ನು ಪೂರೈಸಿ ಐದನೇ ವರ್ಷದತ್ತ ಮುನ್ನಡೆದಿದ್ದಾರೆ. ಅಚ್ಚರಿಯ ಸಂಗತಿ ಎಂದರೆ ಕೆಲವು ಸುದ್ದಿ ವಾಹಿನಿಗಳು ಸ್ಪರ್ಧೋಪಾದಿಯಲ್ಲಿ ಸಿಕ್ಕಿದ ಸಂದರ್ಭಗಳನ್ನೆಲ್ಲ ಸಿದ್ದರಾಮಯ್ಯ ವಿರುದ್ಧದ ಅಸ್ತ್ರವಾಗಿ ಬಳಸಿಕೊಂಡರೂ ಕಾಂಗ್ರೆಸ್ ಪಕ್ಷದ ಪುರಾತನ ಕಾಯಿಲೆಯಾದ ಭಿನ್ನಮತ ಚಿಗುರೊಡೆಯಲೇ ಇಲ್ಲ. ಆದರೆ ಅಣಬೆಗಳಂತೆ ಹುಟ್ಟಿಕೊಂಡಿದ್ದ ಕೆಲವು ಕೃಪಾಪೋಷಿತ ಗುಂಪುಗಳು ದಲಿತ ಮುಖ್ಯಮಂತ್ರಿಯ ಕೂಗೆಬ್ಬಿಸಿದಾಗಲೂ ಅದು ಎಲ್ಲೆಡೆ ಮಾರ್ದನಿಸಲಿಲ್ಲ.

 

ಒಂದಿಬ್ಬರು ಅಧಿಕಾರಿಗಳ ನಿಗೂಢ ಸಾವಿನ ಪ್ರಕರಣಗಳನ್ನು ವಿಪಕ್ಷಗಳು ಮತ್ತು ಸುದ್ದಿ ವಾಹಿನಿಗಳು ಅನಾರೋಗ್ಯಕರ ರಾಜಕಾರಣದ ದುರ್ನಾತ ಬೀರುವಂತೆ ಬಳಸಿಕೊಂಡರೂ ಸಿದ್ದರಾಮಯ್ಯ ಅವರನ್ನು ಅಲುಗಾಡಿಸಲು ಸಾಧ್ಯವಾಗಿರಲಿಲ್ಲ. ಮೌನ ವಹಿಸಬೇಕಾದ ಸಂದರ್ಭದಲ್ಲಿ ಮೌನಕ್ಕೆ ಶರಣಾಗುತ್ತಿದ್ದರೆ, ಗುಡುಗಬೇಕಾದ ಸಂದರ್ಭಗಳಲ್ಲಿ ಒಂದಿಷ್ಟೂ ಹಿಂಜರಿಕೆ ತೋರದಿದ್ದುದೇ ಸಿದ್ದರಾಮಯ್ಯ ಅವರ ಶಕ್ತಿ. 

 

ಹಾಗೆ ನೋಡಿದರೆ ಸಿದ್ದರಾಮಯ್ಯ ಅವರ ರಾಜಕೀಯ ಬದುಕಿನ ಬಾಗಿಲು ತೆರೆದವರು  ಪ್ರಖರ ವಿಚಾರವಾದಿ, ರೈತ ಸಂಘದ ಮಹಾನ್ ನಾಯಕರಾಗಿದ್ದ ಎಂ.ಡಿ.ನಂಜುಂಡಸ್ವಾಮಿ. ಆನಂತರದ ದಿನಗಳಲ್ಲಿ ಒಂದು ಹಂತದವರೆಗೆ ಮಾರ್ಗದರ್ಶಕರಾಗಿದ್ದವರು ರಾಮಕೃಷ್ಣ ಹೆಗಡೆ, ಜನತಾ ಪರಿವಾರ ಇಬ್ಭಾಗವಾದಾಗ ಗುರುತಿಸಿಕೊಂಡಿದ್ದು ಎಚ್.ಡಿ.ದೇವೇಗೌಡರ ಜತೆ.

 

ಸಾಮಾಜಿಕ ಹೋರಾಟಗಳಲ್ಲಿ ಭಾಗಿಯಾಗಿದ್ದರ ಫಲವಾಗಿ ಸಿದ್ದರಾಮಯ್ಯ ಅವರಿಗೆ ದಲಿತ ಸಂಘರ್ಷ ಸಮಿತಿಯ ಪ್ರಮುಖ ನಾಯಕರ ಜತೆಯಲ್ಲೂ ಆತ್ಮೀಯ ಒಡನಾಟ. ಪ್ರಬಲ, ಪ್ರಭಾವಿ ಜಾತಿಗಳ ನಾಯಕರಲ್ಲದೇ ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರ ನಡುವೆಯೇ ರಾಜಕಾರಣ ಮಾಡಿದ ಸಿದ್ದರಾಮಯ್ಯ ಅವರನ್ನು ಮಾಧ್ಯಮಗಳು ‘ಅಹಿಂದ ನಾಯಕ’ ಎಂದು ಗುರುತಿಸುವುದು ಅವರ ವ್ಯಕ್ತಿತ್ವಕ್ಕೆ ಬಗೆಯುವ ವಂಚನೆ. 

 

ಒಕ್ಕಲಿಗರು ಮತ್ತು ಲಿಂಗಾಯತರು ಪ್ರಬಲರಾಗಿರುವ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಐದು ಸಲ ಆಯ್ಕೆಯಾಗಿದ್ದರೆ, ಎರಡು ಸಲ (ಒಮ್ಮೆ ಪ್ರಬಲ ಲಿಂಗಾಯತ ನಾಯಕ ಎಂ.ರಾಜಶೇಖರಮೂರ್ತಿ ವಿರುದ್ಧ) ಸೋಲನುಭವಿಸಿದ್ದಾರೆ. ಈ ಕ್ಷೇತ್ರದಲ್ಲಿ ನಾಯಕ ಸಮುದಾಯ, ಕುರುಬರು, ದಲಿತರು, ಮುಸ್ಲಿಮರು ಸೇರಿದಂತೆ ಸಣ್ಣಪುಟ್ಟ ಜಾತಿಗಳಿಗೆ ಸೇರಿದ ಜನರೂ ಇದ್ದಾರೆ.

 

1983ರಲ್ಲಿ ಭಾರತೀಯ ಲೋಕದಳದಿಂದ ಮೊದಲ ಸಲ ಸ್ಪರ್ಧಿಸಿದಾಗ ಮತದಾರರ ಸಂಖ್ಯೆ ಇಂದಿಗಿಂತ ಕಡಿಮೆ ಇದ್ದಾಗಲೂ ಅವರು ಮೂರು ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದಲೂ, ವರ್ಷಗಳು ಕಳೆದು ಮತದಾರರ ಸಂಖ್ಯೆ ಹೆಚ್ಚಾದಂತೆ ಕೆಲವು ಚುನಾವಣೆಗಳಲ್ಲಿ 32 ಸಾವಿರಕ್ಕೂ ಹೆಚ್ಚು ಮತಗಳ ಅಂತರದಲ್ಲೂ ಜಯ ದಾಖಲಿಸಿದ್ದರು.

 

ಪ್ರಬಲ ಜಾತಿಗಳು, ದಲಿತರು, ಅಲ್ಪಸಂಖ್ಯಾತರು ಸೇರಿದಂತೆ ಎಲ್ಲ ಜಾತಿ, ಧರ್ಮ, ವರ್ಗಗಳ ನಡುವೆ ಬೆರೆಯುವ ಸಿದ್ದರಾಮಯ್ಯ ಅವರ ಸ್ವಭಾವ ಈ ಅಂತರದ ಗೆಲುವಿಗೆ ಕಾರಣವಾಗಿತ್ತು. ತಮ್ಮ ಸಾಮರ್ಥ್ಯದಿಂದಲೇ ಮುಖ್ಯಮಂತ್ರಿಯಾಗುವ ಎಲ್ಲ ಅರ್ಹತೆಗಳಿದ್ದರೂ 1996 ಮತ್ತು 2004ರಲ್ಲಿ ಈ ಅವಕಾಶದಿಂದ ವಂಚಿತರಾಗಿದ್ದ ಸಿದ್ದರಾಮಯ್ಯ ಅಹಿಂದ ಹೋರಾಟದಲ್ಲಿ ತೊಡಗಿಸಿಕೊಂಡಿದ್ದರು. ಕಾಂಗ್ರೆಸ್ ಪಕ್ಷಕ್ಕೂ ಸಿದ್ದರಾಮಯ್ಯ ಅವರಂಥ ಪ್ರಬಲ ನಾಯಕನೊಬ್ಬನ ಅಗತ್ಯ ಆ ದಿನಗಳಲ್ಲಿ ಅತ್ಯಗತ್ಯವಾಗಿತ್ತು.

 

ದೇವೇಗೌಡರ ಜತೆಗಿನ ಭಿನ್ನಾಭಿಪ್ರಾಯದಿಂದ ಜೆಡಿಎಸ್ ತ್ಯಜಿಸಿ ಕಾಂಗ್ರೆಸ್ ಸೇರ್ಪಡೆಯಾದ ನಂತರ 2006ರ ಡಿಸೆಂಬರ್ ನಾಲ್ಕರಂದು ನಡೆದ ಉಪಚುನಾವಣೆಯಲ್ಲಿ ಅವರು ಕೇವಲ 257 ಮತಗಳ ಅಂತರದಿಂದ ಆಯ್ಕೆಯಾಗಿದ್ದರು. ಈ ಚುನಾವಣೆಯಲ್ಲಿ ಸೋತಿದ್ದರೆ ಸಿದ್ದರಾಮಯ್ಯ ಅವರ ರಾಜಕೀಯ ಜೀವನ ಸಮಾಪ್ತಿಯಾಗುತ್ತಿತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ಇದು ಅವರಿಗೆ ರಾಜಕೀಯವಾಗಿ ಮಹತ್ವದ ತಿರುವು ಮತ್ತು ಪುನರ್ಜನ್ಮ ನೀಡಿದ ಐತಿಹಾಸಿಕ ಚುನಾವಣೆ. ಹೀಗಾಗಿಯೇ ಈ ಚುನಾವಣೆ ವೇಳಾಪಟ್ಟಿ ಪ್ರಕಟವಾಗುವ ಮುನ್ನವೇ ಸದ್ದು ಮಾಡಿತ್ತು.

 

ಆಗ ಜೆಡಿಎಸ್-ಬಿಜೆಪಿ ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಚುನಾವಣೆ ವೇಳಾಪಟ್ಟಿ ಪ್ರಕಟಗೊಳ್ಳುವ ಮುನ್ನವೇ ಕೆಲವು ದಿನಗಳ ಅಂತರದಲ್ಲಿ ಏಳೆಂಟು ಬಾರಿ ಚಾಮುಂಡೇಶ್ವರಿ ದರ್ಶನ ಪಡೆದು ಚಾಮುಂಡೇಶ್ವರಿ ಕ್ಷೇತ್ರಕ್ಕೆ ₹ 200 ಕೋಟಿಗೂ ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ಪ್ರಕಟಿಸಿದ್ದರೂ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಮೈತ್ರಿ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಸೇರಿದಂತೆ ಎರಡೂ ಪಕ್ಷಗಳ ಪ್ರಮುಖ ಮುಖಂಡರು ಕ್ಷೇತ್ರದಲ್ಲೇ ವಾರಗಟ್ಟಲೆ ಜಾಂಡಾ ಹೊಡೆದು ಸಕ್ರಿಯ ಪ್ರಚಾರದಲ್ಲಿ ತೊಡಗಿದ್ದರೂ ಮತದಾರರು ವರ ನೀಡಿದ್ದು ಸಿದ್ದರಾಮಯ್ಯ ಅವರಿಗೇ! ಸಿದ್ದರಾಮಯ್ಯ ಗೆಲುವಿಗೆ ಕಾರಣರಾದ ಮತದಾರರು ಯಾರು ಎಂಬ ಬಗ್ಗೆ ಉತ್ತರ ತಿಳಿದರೆ ನಾನು ಹೇಳಹೊರಟಿರುವ ವಿಷಯ ಸುಲಭವಾಗಿ ಅರ್ಥವಾಗಿಬಿಡುತ್ತದೆ.

 

ಜೆಡಿಎಸ್ ತೊರೆದ ಸಿದ್ದರಾಮಯ್ಯ ಸೋಲಿಗೆ ಪಣ ತೊಟ್ಟಿದ್ದ ದೇವೇಗೌಡರು ಹೇಗಿದ್ದರೂ ಒಕ್ಕಲಿಗರು ಜೆಡಿಎಸ್‌ಗೆ ಮತ ಹಾಕುತ್ತಾರೆಂಬ ನಂಬಿಕೆಯಿಂದಲೇ ತಮ್ಮ ಪಕ್ಷದಿಂದ ಲಿಂಗಾಯತ ಸಮುದಾಯಕ್ಕೆ ಸೇರಿದ ಶಿವಬಸಪ್ಪ ಅವರನ್ನು ಕಣಕ್ಕಿಳಿಸಿದ್ದರು. ಬಿಜೆಪಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿರಲಿಲ್ಲ. ಯಡಿಯೂರಪ್ಪ ಅವರಲ್ಲಿ ಭವಿಷ್ಯದ ಮುಖ್ಯಮಂತ್ರಿಯನ್ನು ಕಂಡಿದ್ದ ಲಿಂಗಾಯತರು ತಮ್ಮ  ಸಮುದಾಯಕ್ಕೆ ಸೇರಿದ ಶಿವಬಸಪ್ಪ ಬೆಂಬಲಕ್ಕೆ ನಿಂತರು.

ಅದು ಸಿದ್ದರಾಮಯ್ಯ ಮತ್ತು ದೇವೇಗೌಡರ ಪ್ರತಿಷ್ಠೆಯನ್ನೇ ಪಣಕ್ಕಿಟ್ಟ ಸ್ಪರ್ಧೆಯಾಗಿತ್ತು.

 

ಕೆಲವು ನಾಯಕರ ತಂತ್ರಗಾರಿಕೆ ಮತ್ತು ಜಾತಿ ವಿಷ ಬಿತ್ತನೆಯಿಂದಾಗಿ ಪ್ರಬಲ ಜಾತಿಗಳ ಮತದಾರರ ಒಲವು ಕಡಿಮೆಯಾದರೂ ಅಹಿಂದ ಹಾಗೂ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಗಳಲ್ಲೂ ಇರುವ ಜಾತಿ ಗೊಡವೆ ಇಲ್ಲದ ಮತದಾರರು ಒಗ್ಗೂಡಿದ ಪರಿಣಾಮ ಸಿದ್ದರಾಮಯ್ಯ ಗೆಲುವು ಸಾಧ್ಯವಾಯಿತು. (ಆನಂತರ ಅವರು ಕ್ಷೇತ್ರ ಬದಲಿಸಿ ವರುಣಾದಲ್ಲಿ 2008 ಮತ್ತು 2013ರಲ್ಲಿ ಸ್ಪರ್ಧಿಸಿದಾಗಲೂ ಉತ್ತಮ ಅಂತರದಿಂದ ಗೆಲುವು ಸಾಧಿಸಿದರು). 

 

ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಇನ್ನೊಂದು ವರ್ಷದಲ್ಲಿ ಮೊದಲ ಅಧಿಕಾರಾವಧಿ ಪೂರ್ಣಗೊಳಿಸಲಿದ್ದಾರೆ. ಬಿಜೆಪಿ ಒಳಜಗಳ, ಜೆಡಿಎಸ್‌ನ ಅತಿ ನಂಬಿಕೆಯ ಹುಸಿ ಲೆಕ್ಕಾಚಾರದ ನಡುವೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಅವಕಾಶ ಇನ್ನೂ ಅಸ್ಪಷ್ಟ. ಇಂಥ ಸಂದರ್ಭದಲ್ಲೇ ಸಿದ್ದರಾಮಯ್ಯ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಬೇಕೆನ್ನುವುದೇ ತಮಗಿರುವ ಏಕೈಕ ಆಸೆ ಎಂದಿದ್ದಾರೆ. ರಾಜಕೀಯ ಪುನರ್ಜನ್ಮ ನೀಡಿದ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.

 

ತಾವು ಮುಖ್ಯಮಂತ್ರಿ ಆದ ನಂತರ ಕೇಳಿಬಂದಿದ್ದ ದಲಿತ ಮುಖ್ಯಮಂತ್ರಿಯ ಕೂಗು ಈಗ ಕ್ಷೀಣಗೊಂಡಿದ್ದರೂ ದಲಿತ ಸಮುದಾಯದ ಈ ಹಕ್ಕನ್ನು ತಳ್ಳಿಹಾಕಬಾರದು ಎಂಬ ಅರಿವೂ ಸಿದ್ದರಾಮಯ್ಯ ಅವರಿಗಿರಬಹುದು. ಕರ್ನಾಟಕದ ಮಟ್ಟಿಗೆ ಕೇವಲ ಜಾತಿ ಮತ್ತು ಧರ್ಮದ ಕಾರಣದಿಂದ ಮುಖ್ಯಮಂತ್ರಿ ಸ್ಥಾನ ವಂಚಿತರಾದವರ ಪಟ್ಟಿಯಲ್ಲಿ ಅಪರೂಪದ ದಿಟ್ಟತನ ಮೆರೆದಿದ್ದ ಬಿ.ಬಸವಲಿಂಗಪ್ಪ, ದಕ್ಷತೆ ಮತ್ತು ಪ್ರಾಮಾಣಿಕತೆಗೆ ಹೆಸರಾಗಿದ್ದ ಕೆ.ಎಚ್.ರಂಗನಾಥ್ ಮಾತ್ರವಲ್ಲ, ರೈಲ್ವೆ ಸಚಿವರಾಗಿ ಮಹತ್ತರ ಸಾಧನೆ ಮಾಡಿದ್ದ ಸಿ.ಕೆ.ಜಾಫರ್ ಷರೀಫ್ ಮತ್ತು ವಿಶಿಷ್ಠ ವ್ಯಕ್ತಿತ್ವದ ಮಲ್ಲಿಕಾರ್ಜುನ ಖರ್ಗೆ ಕೂಡಾ ಇದ್ದಾರೆ.

 

ಷರೀಫ್ ಅವರಿಗೆ ಬರುವ ಡಿಸೆಂಬರ್ 3ಕ್ಕೆ 84 ವರ್ಷ ತುಂಬಲಿದ್ದರೆ, ಬರುವ ಜುಲೈ 21ಕ್ಕೆ ಖರ್ಗೆ ಜನ್ಮದಿನದ ಅಮೃತಮಹೋತ್ಸವ ಅರ್ಥಾತ್ ಅವರಿಗೆ 75 ವರ್ಷ ತುಂಬಲಿದೆ. ಕ್ರಿಯಾಶೀಲತೆ ನಿಟ್ಟಿನಲ್ಲಿ ನೋಡುವುದಾದರೆ ಷರೀಫ್ ವಯಸ್ಸು ಅಧಿಕಾರ ಪಡೆಯುವುದಕ್ಕೆ ಅಡ್ಡಿಯಾಗಿದೆ, ಆದರೆ ಲೋಕಸಭೆಯಲ್ಲಿ ಕಾಂಗ್ರೆಸ್ ಗುಂಪಿನ ನಾಯಕರಾಗಿರುವ ಖರ್ಗೆ ಅವರ ಆರೋಗ್ಯ, ಉತ್ಸಾಹ ಇನ್ನೂ ಕುಂದಿಲ್ಲ ಎನ್ನುವುದನ್ನು ಸಂಸತ್ತಿನಲ್ಲಿ ಸಾಬೀತುಪಡಿಸಿದ್ದಾರೆ. 

 

ಈ ಹಿನ್ನೆಲೆಯಲ್ಲೇ ಒಂದು ಪ್ರಶ್ನೆ ನನ್ನನ್ನು ಕಾಡುತ್ತಿದೆ. 2006ರ ಉಪಚುನಾವಣೆ ಫಲಿತಾಂಶದ ತಳಹದಿಯ ಮೇಲೆ 2016ರಲ್ಲಿ ಮುಖ್ಯಮಂತ್ರಿಯಾಗುವ ತಮ್ಮ ಬಹು ದಿನಗಳ ಕನಸು ಈಡೇರಿಸಲು ಕಾರಣವಾದ ಅಲ್ಪಸಂಖ್ಯಾತರು, ಹಿಂದುಳಿದವರು ಮತ್ತು ದಲಿತ ಸಮುದಾಯಕ್ಕೆ ಐತಿಹಾಸಿಕ ಋಣ ಸಂದಾಯದ ಅಪೂರ್ವ ಕ್ಷಣಕ್ಕೆ ಸಿದ್ದರಾಮಯ್ಯ ಸಿದ್ಧರಾಗುತ್ತಾರಾ?ರಾಜಕೀಯ ಅಧಿಕಾರದ ಅತಿಯಾದ ಹಸಿವಿನ ಈ ದಿನಗಳಲ್ಲಿ ಸಾಮಾಜಿಕ ನ್ಯಾಯದ ಅರಿವಿರುವ ಸಿದ್ದರಾಮಯ್ಯ, ದಲಿತ ಸಮುದಾಯಕ್ಕೆ ಸೇರಿದ  ಖರ್ಗೆ ಅವರನ್ನು ಮುಖ್ಯಮಂತ್ರಿ ಗಾದಿಗೆ ತರುವ ನಿಟ್ಟಿನಲ್ಲಿ ಇಂಗಿತ ವ್ಯಕ್ತಪಡಿಸಿದರೂ ಸಾಕು, ರಾಜ್ಯದ ಇತಿಹಾಸದಲ್ಲಿ ಎಂದೂ ಅಳಿಸಲಾಗದಂತೆ ತಮ್ಮ ಹೆಸರು ದಾಖಲಿಸುವ ಅಪೂರ್ವ ಅವಕಾಶ ಪಡೆಯುತ್ತಾರೆ. ಐತಿಹಾಸಿಕ ಅನ್ಯಾಯ ಸರಿಪಡಿಸುವ ಐತಿಹಾಸಿಕ ಋಣ ಸಂದಾಯಕ್ಕೆ ಅವರು ಸಾಕ್ಷಿಯಾಗುತ್ತಾರೆ.  ಓರ್ವ ಪ್ರಬಲ ನಾಯಕನ ತ್ಯಾಗ ಮಾತ್ರ ಇಂಥ ಒಂದು ಕನಸನ್ನು ಸಾಕಾರಗೊಳಿಸಬಹುದೇ ಹೊರತು ಇನ್ಯಾವುದೇ ಅವಕಾಶ ಸೃಷ್ಟಿಯಾಗುವುದಿಲ್ಲ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry