ನೀರು ನಿಲ್ಲಿಸಿ ಲಕ್ಷಾಂತರ ಆದಾಯ ಗಳಿಕೆ

7

ನೀರು ನಿಲ್ಲಿಸಿ ಲಕ್ಷಾಂತರ ಆದಾಯ ಗಳಿಕೆ

Published:
Updated:
ನೀರು ನಿಲ್ಲಿಸಿ ಲಕ್ಷಾಂತರ ಆದಾಯ ಗಳಿಕೆ

ಬೀದರ್: ತಾಲ್ಲೂಕಿನ ಹೊನ್ನಿಕೇರಿಯ ರೈತರೊಬ್ಬರು ಬರ ಇದ್ದಾಗಲೂ ತೆರೆದ­ಬಾವಿಯಲ್ಲಿ ನೀರು ಬತ್ತದಂತೆ ಜಲ ಸಂರಕ್ಷಣೆಯ ವಿಧಾನ ಅನುಸರಿಸಿದ್ದಾರೆ. ಹೊಲದ ಸುತ್ತಮುತ್ತಲಿನ ಪ್ರದೇಶದಲ್ಲಿ ಅಂತರ್ಜಲಮಟ್ಟ ಆಗಲೇ 700 ಅಡಿ ಆಳಕ್ಕೆ ಕುಸಿದಿದೆ.

ಆದರೆ, ಇವರ ಹೊಲದಲ್ಲಿರುವ ಬಾವಿಯಲ್ಲಿ ಮಾತ್ರ 20 ಅಡಿ ಆಳದಲ್ಲಿ ಸಾಕಷ್ಟು ನೀರು ಲಭ್ಯ ಇದೆ. ಈ ನೀರನ್ನೇ ಕೃಷಿಗೆ ಬಳಸಿ ಬೇಸಿಗೆಯಲ್ಲೂ ಉತ್ತಮ ಫಸಲು ಪಡೆಯುತ್ತಿದ್ದಾರೆ.

ಬಿ.ಎಸ್ಸಿ ಪದವೀಧರರಾಗಿರುವ ರವೀಂದ್ರ ಪಾಟೀಲ ಅವರ ಹೊಲದಲ್ಲಿ ಈವರೆಗೆ 10 ಕೊಳವೆಬಾವಿಗಳನ್ನು ಕೊರೆಸಿದ್ದಾರೆ. ಆದರೆ, ಇವುಗಳಲ್ಲಿ ನೀರು ಬಂದರೂ ಅಲ್ಪಾವಧಿಯಲ್ಲಿಯೇ ಬತ್ತಿ ಹೋಗುತ್ತಿತ್ತು. ಕೊಳವೆಬಾವಿ­ಗಳಲ್ಲಿ ವರ್ಷ ಪೂರ್ತಿ ನೀರು ಬಾರದ ಕಾರಣ ಅಂತರ್ಜಲ ಉಳಿಸಿಕೊಳ್ಳಲು ಮುಂದಾದರು. ಇದಕ್ಕಾಗಿ ಹೊಸ ವಿಧಾನಗಳನ್ನು ಅನುಸರಿಸಿದರು.

ಗುಡ್ಡದ ಇಳಿಜಾರು ಪ್ರದೇಶದಲ್ಲಿ ಕಪ್ಪು ಹಾಗೂ ಕಲ್ಲು ಮಿಶ್ರಿತ ಜಮೀನು ಇದೆ. 25 ಎಕರೆಯಲ್ಲಿ ಅರ್ಧದಷ್ಟು ಜಮೀನು ಬರಡಾಗಿದೆ. ಪಾಟೀಲ ಅವರು ಸ್ವಂತ ಖರ್ಚಿನಲ್ಲಿ ಸಮಪಾತಳಿ­ಗೊಳಿಸಿ ಹೊಲದಲ್ಲಿ ಒಂದಿಷ್ಟು ಕಪ್ಪು ಮಣ್ಣು ಸುರಿದಿದ್ದಾರೆ.

ಬತ್ತಿರುವ ಕೊಳವೆ­ಬಾವಿ ಸುತ್ತ ಇಂಗುಗುಂಡಿ ನಿರ್ಮಾಣ ಮಾಡಿ ನೀರು ಭೂಮಿ­ಯೊಳಗೆ ಸೇರುವಂತೆ ಮಾಡಿದ್ದಾರೆ. ಹೊಲವನ್ನು ಸೀಳಿಕೊಂಡು ಹೋದಂತೆ ಒಂದು ಚಿಕ್ಕ ಹಳ್ಳವೂ ಇದೆ. ತಮ್ಮ ಹೊಲದಲ್ಲಿನ ಹಳ್ಳವನ್ನು ವಿಸ್ತರಿಸಿದ್ದಾರೆ.

ಹಳ್ಳಕ್ಕೆ ಚಿಕ್ಕ ಒಡ್ಡು ಹಾಕಿ ನೀರು ನಿಲುಗಡೆ ಮಾಡಿದ್ದಾರೆ. ಹಳ್ಳದ ಅಂಚಿನಲ್ಲೇ ದೊಡ್ಡದಾದ ಬಾವಿ ಕಟ್ಟಿಸಿ, ವರ್ಷವಿಡೀ ನೀರು ನಿಲ್ಲುವಂತೆ ಮಾಡಿ­ದ್ದಾರೆ. ಕಳೆದ ವರ್ಷ ಅತಿವೃಷ್ಟಿ­ಯಿಂದಾಗಿ ಮಣ್ಣು ಕೊಚ್ಚಿಕೊಂಡು ಹೋಗಿದ್ದರೂ, ಅದನ್ನು ಸರಿಪಡಿಸಿ ದ್ದಾರೆ. ಜೀವಜಲ ಈಗ ರೈತನ ಕೈಹಿಡಿ ದಿದೆ. ಒಂದು ವರ್ಷದಲ್ಲಿ ಮೂರು ಹಂತದಲ್ಲಿ ನಾಲ್ಕು ಬಗೆಯ ತೋಟಗಾರಿಕೆ ಬೆಳೆ ಬೆಳೆದು ಲಕ್ಷಾಂತರ ಆದಾಯ ಪಡೆಯುತ್ತಿದ್ದಾರೆ.

‘ವೈಜ್ಞಾನಿಕ ವಿಧಾನದಲ್ಲಿ ಜಲ ಸಂರಕ್ಷಣೆ ಮಾಡಿದರೆ ಬರಡು ಭೂಮಿ ಯಲ್ಲೂ ಹೊನ್ನು ಬೆಳೆಯಬಹುದು. ಬ್ಯಾಂಕ್‌ನಲ್ಲಿ ಹಣ ಠೇವಣಿ ಇಟ್ಟಂತೆ ಭೂಮಿಯಲ್ಲಿ ನೀರು ಇಂಗಿಸಬೇಕು. ಕೊಳವೆಬಾವಿ ತೋಡಿಸುವವರ ಸಂಖ್ಯೆ ಕಡಿಮೆ ಇಲ್ಲ. ಜಮೀನಿನಲ್ಲಿ ನೀರು ಇಂಗಿಸುವವರು ಮಾತ್ರ ವಿರಳ.  ಹೀಗಾಗಿಯೇ ರೈತರು ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ’ ಎನ್ನುತ್ತಾರೆ ರವೀಂದ್ರ ಪಾಟೀಲ.

‘2015ರಲ್ಲಿ ಹೊಲದಲ್ಲಿನ ಹಳ್ಳಕ್ಕೆ 40 ಅಡಿ ಅಗಲದ ಒಡ್ಡು ಕಟ್ಟಿಸಿದ್ದೇನೆ. ಇದಕ್ಕೆ ₹15 ಲಕ್ಷ ಖರ್ಚಾಗಿದೆ. ಪಕ್ಕದಲ್ಲಿ ದೊಡ್ಡದಾದ ತೆರೆದಬಾವಿಯನ್ನೂ ನಿರ್ಮಿಸಿದ್ದೇನೆ. ಒಡ್ಡಿನಲ್ಲಿ ಏಪ್ರಿಲ್‌­ವರೆಗೂ ನೀರು ಇರುತ್ತದೆ. ನಂತರ ಬಾವಿಯ ನೀರನ್ನು ಕೃಷಿಗೆ ಬಳಸಿಕೊ­ಳ್ಳುತ್ತೇನೆ’ ಎಂದು ವಿವರಿಸುತ್ತಾರೆ.

‘ನಮ್ಮ ಹೊಲದ ಪಕ್ಕದ ಪೋಮಾನಾಯ್ಕ ತಾಂಡಾ ವ್ಯಾಪ್ತಿಯಲ್ಲಿ 10 ಕೊಳವೆಬಾವಿಗಳಿವೆ. ಕುಡಿಯುವ ನೀರಿಗಾಗಿ 700 ಅಡಿ ಆಳದ ವರೆಗೂ ಕೊಳವೆಬಾವಿ ಕೊರೆಯಲಾಗಿದೆ. ನನ್ನ ಹೊಲದಲ್ಲೇ 10 ಕೊಳವೆಬಾವಿ ಕೊರೆ­ಸಿದ್ದು, ಎಲ್ಲವೂ ಬತ್ತಿವೆ. ನೀರು ಇಲ್ಲದಿ­ದ್ದರೆ ಕೃಷಿಕನ ಬದುಕು ಕಷ್ಟ ಎನ್ನುವುದು ಮನವರಿಕೆಯಾದ ಮೇಲೆ ಮಳೆ ನೀರು ಮರುಪೂರಣಕ್ಕೆ ವ್ಯವಸ್ಥೆ ಮಾಡಿದೆ. ಈಗ ನೀರಿನ ಸಮಸ್ಯೆ ಇಲ್ಲ. ಕಳೆದ ಬೇಸಿಗೆಯಲ್ಲಿ  ₹15 ಲಕ್ಷ ಆದಾಯ ಬಂದಿದೆ’ ಎಂದು ಹೇಳುತ್ತಾರೆ.

ಕೃಷಿ ಇಲಾಖೆ 30x30 ಅಳತೆಯ ಕೃಷಿಹೊಂಡ ನಿರ್ಮಾಣಕ್ಕೆ ನೆರವು ಕಲ್ಪಿಸುತ್ತದೆ. ಇಷ್ಟು ಸಣ್ಣ ಹೊಂಡದಿಂದ ನೀರು ಇಂಗಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ತಮ್ಮ ಹೊಲದಲ್ಲಿ 200X500 ಮೀಟರ್‌ ಅಳತೆಯ ಹೊಂಡ ನಿರ್ಮಿಸುವ ಇರಾದೆ ಹೊಂದಿದ್ದಾರೆ.

ಹನಿ ನೀರಾವರಿ ಪದ್ಧತಿಯಡಿ ಬೇಸಾಯ ಮಾಡುತ್ತಿದ್ದಾರೆ. ನೀರು ಉಳಿಸಿಕೊಂಡಿರುವುದರಿಂದ ಟೊಮೆಟೊ, ಹಿರೇಕಾಯಿ, ಹೂಕೋಸು, ಶುಂಠಿ, ಕಡಲೆ ಹಾಗೂ ಸೋಯಾ ಬೆಳೆಯಲು ಸಾಧ್ಯವಾಗಿದೆ. ತಾಜಾ ತರಕಾರಿ ಸಿಗುವ ಕಾರಣಕ್ಕೆ ವ್ಯಾಪಾರಿಗಳು ಹೊಲಕ್ಕೆ ಬಂದು ಖರೀದಿ ಮಾಡುತ್ತಾರೆ. ಬೇಸಿಗೆಯಲ್ಲೂ ಇವರ ಹೊಲದಲ್ಲಿ 25 ಮಂದಿ ಕೃಷಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಅವರ ಮೊ: 94484-22551

* * 

ಮಳೆ ನೀರು ವ್ಯರ್ಥ ಹರಿದು ಹೋಗಲು ಬಿಡಬಾರದು. ಹೊಂಡ ನಿರ್ಮಿಸಿ ನೆಲದಲ್ಲಿ ಇಂಗಿಸಿ ಬೇಸಿಗೆಯಲ್ಲಿ ಬಳಸಿಕೊಳ್ಳಬೇಕು.

ರವೀಂದ್ರ ಪಾಟೀಲ

ಪ್ರಗತಿಪರ ರೈತ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry