7
ನಮ್ಮಲ್ಲಿ ಉತ್ತಮ ಯೋಜನೆಗಳಿವೆ. ಆದರೆ ಅವು ತಲುಪದಂತೆ ವ್ಯವಸ್ಥಿತ ಜಾಲ ಹೆಣೆಯಲಾಗಿರುತ್ತದೆ

ಕಾರ್ಮಿಕಳೆಂದು ಮೊದಲು ಗುರುತಿಸಿ

Published:
Updated:
ಕಾರ್ಮಿಕಳೆಂದು ಮೊದಲು ಗುರುತಿಸಿ

ಉತ್ತರ ಕರ್ನಾಟಕದ ಗ್ರಾಮೀಣ ಭಾಗದಲ್ಲಿ ‘ಹೊತೂಂಟ್ಲೆ’ ಶಬ್ದವನ್ನು ಬಹುವಾಗಿ ಬಳಸುತ್ತಾರೆ. ಹೊತ್ತು ಹುಟ್ಟೂತ್ಲೆ ಅಂದರೆ ಹೊತ್ತು ಹುಟ್ಟುವುದಕ್ಕೆ ಮುಂಚೆ ಅಥವಾ ಹೊತ್ತು ಹೊರಡುವುದಕ್ಕೆ ಮುನ್ನ ಎಂದು ಅದರ ಅರ್ಥ.  ಹಳ್ಳಿಯಲ್ಲಿ ಉಳಿದು ಬೆಳಗಿನ ಜಾವದಿಂದಲೇ ಒಬ್ಬ ಹೆಣ್ಮಗಳ ಕೆಲಸವನ್ನು ನೋಡಿದವರಿಗೆ ಈ ಶಬ್ದದ ನಿಜ ಅರ್ಥ ತಿಳಿಯುತ್ತದೆ.

 

ಎದ್ದು ನೀರೊಲೆಗೆ ಬೆಂಕಿ ಹಾಕಿ, ಅಂಗಳ ಗುಡಿಸಿ, ನೀರು ಚಿಮುಕಿಸಿ, ದನ ಕಟ್ಟಿದ್ದರೆ ಸಗಣಿ, ಗಂಜಲು ಬಾಚಿ, ಅಂದಿನ ಅಡುಗೆಗೆ ತಯಾರಿ ಮಾಡುತ್ತಲೇ ಒಬ್ಬೊಬ್ಬರನ್ನೇ ಎಬ್ಬಿಸಿ ಮುಖ ತೊಳೆಯಲು ಬಿಸಿನೀರು ಕೊಟ್ಟು, ಕುಡಿಯಲು ಚಾ ಕಾಸಿಕೊಟ್ಟು, ಮಧ್ಯೆ ಮಕ್ಕಳಿಗೆ ಜಳಕಕ್ಕೆ ಹಾಕಿ, ಯೂನಿಫಾರಂ ತೊಡಿಸುತ್ತಲೇ ಉಪ್ಪಿಟ್ಟು ಬಾಯಿಗೆ ತುರುಕಿ, ಡಬ್ಬಿ ಕಟ್ಟಿ ಶಾಲೆಗೆ ಕಳಿಸಿ, ಗಂಡನನ್ನು ಕೆಲಸಕ್ಕೆ ಅಟ್ಟಿ, ಮಧ್ಯಾಹ್ನಕ್ಕೆಂದು ಇಬ್ಬರಿಗೂ ಡಬ್ಬಿ ಕಟ್ಟಿಕೊಂಡು, ಸಮಯವಿದ್ದರೆ ತಾನೂ ಏನಾದರೂ ಉಂಡು, ಇಲ್ಲವೆಂದರೆ ಹಾಗೆಯೇ ಕಟ್ಟಿಕೊಂಡು ಓಡಿಯೇ ಓಡುತ್ತಾಳೆ. ಕಾಲಿಗೆ, ಕೈಗೆ ಎಲ್ಲಾ ಕಡೆ ಚಕ್ರ ಕಟ್ಟಿಕೊಂಡವಳ ಹಾಗೆ. 

 

ಸಂಜೆ ಮನೆಗೆ ಬರುವಲ್ಲಿಗೆ ಅವಳ ಅಂದಿನ ದುಡಿಮೆ ಮುಗಿಯುವುದಿಲ್ಲ. ಬೆಳಿಗ್ಗೆ ಗಡಿಬಿಡಿಯಲ್ಲಿ ಅರ್ಧದಲ್ಲಿ ಬಿಟ್ಟುಹೋದದ್ದನ್ನೆಲ್ಲ ಪೂರ್ತಿಗೊಳಿಸಬೇಕು. ಮಕ್ಕಳು ಬಿಚ್ಚಿ ಒಗೆದು ಹೋದ ಬಟ್ಟೆಗಳು, ತಿಂದು ಹೋದ ಊಟದ ತಾಟುಗಳು ನಾ ಮೊದಲು, ತಾ ಮೊದಲು ಎಂದು ಕರೆಯುತ್ತಿರುತ್ತವೆ. ಮತ್ತೆ ಕಸ ಗುಡಿಸು, ನೀರು ಚಿಮುಕಿಸು, ಒಲೆ ಉರಿಹಚ್ಚು, ಅಡುಗೆಗಿಡು . . .  ಪುನರಾವರ್ತನೆ.

 

ಎಷ್ಟು ವರ್ಣನೆ ಮಾಡಿದರೇನು, ಭಾರತದಲ್ಲಿ ಹಳ್ಳಿ ಹೆಣ್ಣುಮಗಳ ಕೆಲಸವು ಗುರುತಿಸಿಲ್ಲದ, ಲೆಕ್ಕಕ್ಕಿಲ್ಲದ ಕೆಲಸ. ಮತ್ತೂ, ‘ಅವಳೇನೂ ಮಾಡಂಗಿಲ್ರೀ, ಮನೀವಳಗೆ ಇರ್ತಾಳ!’ ಬಹುಮಾನ! 

 

ಮಧ್ಯಾಹ್ನದ ಊಟದ ಡಬ್ಬಿಯನ್ನು ಹಿಡಿದು ಓಡುವ ಅವಳು ಕೂಲಿ ಇಲ್ಲದೆ ಗೇಯಲು ತನ್ನದೇ ಹೊಲಕ್ಕೆ ಹೋಗುತ್ತಿರಬಹುದು, ಕೂಲಿ ಪಡೆದು ದುಡಿಯಲು ಬೇರೆಯವರ ಹೊಲಕ್ಕೆ ಹೋಗುತ್ತಿರಬಹುದು, ಉದ್ಯೋಗ ಖಾತರಿ ಕೆಲಸಕ್ಕೆ ಹೋಗುತ್ತಿರಬಹುದು, ಬೀಡಿ ಕಟ್ಟಲು ಓಡುತ್ತಿರಬಹುದು, ವಲಸೆ ಕಾರ್ಮಿಕರ ಮಡದಿಯಾಗಿ ಪಟ್ಟಣ ಸೇರಿದ ಮಹಿಳೆ ಯಾರದೋ ಮನೆಯ ಅಡುಗೆ, ಮುಸುರೆ ಕೆಲಸಕ್ಕೆ ಹೋಗುತ್ತಿರಬಹುದು, ಇನ್ನಾರದ್ದೋ ಮಗುವನ್ನು ನೋಡಿಕೊಳ್ಳಲು, ವಯೋವೃದ್ಧರನ್ನು ನೋಡಿಕೊಳ್ಳಲು ಹೋಗುತ್ತಿರಲೂಬಹುದು. ಒಂದೇ ಕೆಲಸವೆಂದಿಲ್ಲ, ಒಂದೇ ಮನೆಯೆಂಬುದಿಲ್ಲ. ನಿರ್ದಿಷ್ಟ ಕೂಲಿಯೂ ಇಲ್ಲ. ಒಂದೊಂದು ಊರಿನಲ್ಲಿ, ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿಯ ಕೂಲಿ–ಸಂಬಳ, ಉಪಚಾರ. ಅಸಂಘಟಿತ ಕ್ಷೇತ್ರದ ಕೆಲಸಗಾರಳು ಅವಳು. 

 

ಮನೆಯಲ್ಲಿ, ‘ಅವಳೇನೂ ಮಾಡುವುದಿಲ್ಲ’ ಎಂಬ ದೃಷ್ಟಿಕೋನ ಇರುವಂತೇ, ಮನೆಯ ಹೊರಗಿನ ಸಮಾಜ ಕೂಡ ಮಹಿಳೆಯನ್ನು ಕಾರ್ಮಿಕಳೆಂದು ಗುರುತಿಸುವ ಕಾಲ ಇನ್ನೂ ಬಂದಿಲ್ಲ. ಕಾರ್ಮಿಕರಿಗೆ ಸಿಗುವ ಸವಲತ್ತುಗಳನ್ನು ಅವಳು ಪಡೆಯುವ ಕಾಲವೂ ಬಂದಿಲ್ಲ. ಮನೆಗೆಲಸ, ಮನೆಯ ಹೊರಗಿನ ದುಡಿಮೆಯ ಜೊತೆಗೆ ಸ್ತ್ರೀಯಾದ್ದರಿಂದ ಪ್ರಕೃತಿದತ್ತ ಇನ್ನೊಂದು ಕೆಲಸ ಆಕೆಯ ಪಾಲಿಗಿದೆ. ಮಗುವನ್ನು ಹೆರುವ ಕೆಲಸವದು. ಹೆಚ್ಚಿನ ಈ ಜವಾಬ್ದಾರಿಯ ಸಲುವಾಗಿಯೇ ಉಳಿದೆಲ್ಲ ಕೆಲಸಗಳಿಂದ ಕೆಲಕಾಲ ಅವಳಿಗೆ ವಿಶ್ರಾಂತಿ ಬೇಕು. 

 

ತನ್ನೆಲ್ಲ ಕೆಲಸಗಳ ಮಧ್ಯೆಯೇ ಉದರದಲ್ಲಿ ಮಗುವ ಹೊತ್ತು, ಜನ್ಮ ನೀಡಿ, ಹಾಲೂಡಿ ಲಾಲಿಸುವ ತಾಯಿಗೆ ಕೊಡುವ ಗೌರವವೇ ತಾಯ್ತನದ ರಜೆ ಮತ್ತು ತಾಯ್ತನದ ಭತ್ಯೆ. ಆ ಸಮಯದಲ್ಲಿ ವಿಶ್ರಾಂತಿ ಬೇಕು, ಗಳಿಕೆಯ ನಷ್ಟ ಆಗಬಾರದು, ಹೆರಿಗೆಗೆ ಹೋಗುತ್ತಾಳೆಂಬ ಕಾರಣಕ್ಕೆ ಕೆಲಸದಿಂದ ತೆಗೆದುಹಾಕುವ ಭಯವಿರಬಾರದು, ಪ್ರಕೃತಿ ತನಗೆ ವಹಿಸಿರುವ ಈ ಕೆಲಸವನ್ನು ಆಕೆ ನಿಶ್ಚಿಂತೆಯಿಂದ ಮಾಡುವಂತಾಗಬೇಕೆಂದೇ ತಾಯ್ತನದ ಭತ್ಯೆ ಆಕೆಗೆ ಸಿಗಬೇಕೆಂದು ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆಯು ಹೇಳುತ್ತದೆ. ಇದನ್ನು ಒಪ್ಪುವ ನಮ್ಮ ಸಂವಿಧಾನವು 42ನೇ ಪರಿಚ್ಛೇದದಲ್ಲಿ ‘ಮಹಿಳೆಗೆ ಹೆರಿಗೆಗೆಂದು ಮಾನವೀಯ ಸೌಲಭ್ಯಗಳನ್ನೂ, ನ್ಯಾಯಯುತವಾದ ಭತ್ಯೆಯನ್ನೂ ಕೊಡಬೇಕು’ ಎಂದು ಬರೆದಿದೆ.

 

ಭಾರತದಲ್ಲಿ 1961ರ ‘ಮಾತೃತ್ವ ಸೌಲಭ್ಯ ಕಾಯಿದೆ’ಯು ಉದ್ಯೋಗದಲ್ಲಿರುವ ತಾಯಂದಿರಿಗೆ ಹೆರಿಗೆ ರಜೆ ಮತ್ತು ಇತರೆ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿತು. ಆದರೆ ಅಗತ್ಯದಷ್ಟು ರಜೆ, ಶಿಶುವಿಗೆ ಹಾಲೂಡಲು ಬಿಡುವು, ಕುಂದು ಕೊರತೆಗಳನ್ನಾಲಿಸುವ ಸೌಲಭ್ಯಗಳಿಲ್ಲದೆಯೇ ಕಾನೂನು ಅಪೂರ್ಣವಾಗಿತ್ತು.ಇತ್ತೀಚೆಗೆ ಈ ಕಾನೂನಿಗೆ ತಿದ್ದುಪಡಿಯಾಗಿ ಆರು ತಿಂಗಳ ಹೆರಿಗೆ ರಜೆ, ಎರಡು ವರ್ಷಗಳ ಕಾಲ ತಾಯ್ತನದ ರಜೆಗಳು ಮಹಿಳೆಯರಿಗೆ ದೊರಕಿದ್ದು ದೊಡ್ಡ ಮೈಲಿಗಲ್ಲು. ಆದರೇನು, ಸಂಘಟಿತ  ವಲಯದಲ್ಲಿ ದುಡಿಯುವ ಮಹಿಳೆಗೆ ಮಾತ್ರ ಸೌಲಭ್ಯ ದೊರಕಿಸಿಕೊಟ್ಟ ಕಾನೂನು ಅದು.

 

ದೇಶದಲ್ಲಿ ಶೇ 95 ಮಹಿಳೆಯರು ಕೆಲಸ ಮಾಡುವುದು ಗುರುತೇ ಇಲ್ಲದ, ಅಸಂಘಟಿತ ಕ್ಷೇತ್ರಗಳಲ್ಲಿ. ‘2008ರ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಕಾನೂನು’ ದುಡಿಯುವ ಮಹಿಳೆಯರಿಗೂ ಸಾಮಾಜಿಕ ಭದ್ರತೆಯ ಅವಶ್ಯಕತೆ ಇರುವುದನ್ನು ಗುರುತಿಸಿತು. ಆದರೇನು, ಇನ್ನೂವರೆಗೆ ಈ ಕಾನೂನಿಗೆ ನಿಯಮ, ಯೋಜನೆಗಳ ರೆಕ್ಕೆ ಪುಕ್ಕ, ಕೈ ಕಾಲು ಬಂದಿಲ್ಲ. 

 

‘ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ’  ಮೊದಲ ಬಾರಿಗೆ ಎಲ್ಲಾ ಮಹಿಳೆಯರಿಗೂ ತಾಯ್ತನದ ಸುರಕ್ಷೆ  ಮತ್ತು ಭತ್ಯೆ ನೀಡುವ ಅವಶ್ಯಕತೆಯನ್ನು ಗುರುತಿಸಿತು. ಗರ್ಭಿಣಿಯಾಗಿದ್ದಾಗ ಮತ್ತು ಹಾಲೂಡುತ್ತಿರುವ ಎಲ್ಲಾ ತಾಯಂದಿರಿಗೂ ಹಣಕಾಸಿನ ಭದ್ರತೆಯ ಅವಶ್ಯಕತೆಯನ್ನು ಗುರುತಿಸಿದ ಕಾಯಿದೆ ಇದು. ‘ಆರು ತಿಂಗಳ ಕಾಲ ಶಿಶುವಿಗೆ ತಾಯಿ ಹಾಲೇ ಸಂಪೂರ್ಣ ಆಹಾರ’ ಎಂಬ ವಿಶ್ವ ಆರೋಗ್ಯ ಸಂಸ್ಥೆಯ ಆಶಯಕ್ಕೆ ಕೂಡ ಇದು ಬದ್ಧವಾಗಿದೆ. 

 

ಗರ್ಭಿಣಿಯಾಗಿರುವಾಗ ಮಹಿಳೆಯ ತೂಕ ಹೆಚ್ಚಾಗಬೇಕು, ಮಗುವಿನ ತೂಕ ಕೂಡ ಹೆಚ್ಚಾಗಬೇಕು. ಕಡಿಮೆ ತೂಕದ ಮಗು ಜೀವನಪೂರ್ತಿ ಒಂದಿಲ್ಲೊಂದು ನ್ಯೂನತೆಯಿಂದ ಬಳಲುವುದು ಸಾಮಾನ್ಯ. ಆದರೆ ನಮ್ಮ ದೇಶದಲ್ಲಿ ಹೊಟ್ಟೆಪಾಡಿಗಾಗಿ ದುಡಿಯುವ, ವಲಸೆ ಹೋಗುವ ಕೂಲಿಕಾರ ಮಹಿಳೆಯರಲ್ಲಿ ಕಡಿಮೆ ತೂಕ ಮತ್ತು ರಕ್ತಹೀನತೆ ಅತಿ ಸಾಮಾನ್ಯ.

 

ಈ ನಿಟ್ಟಿನಲ್ಲಿ ಆಹಾರ ಭದ್ರತಾ ಕಾನೂನಿನಲ್ಲಿ ಕೊಡಮಾಡಿರುವ ‘ತಾಯಂದಿರಿಗೆ ಅಂಗನವಾಡಿಗಳಲ್ಲಿ ಬಿಸಿಯೂಟ ಮತ್ತು ತಾಯ್ತನ ಭತ್ಯೆಗಳು’ ಕೇವಲ ಅವಳನ್ನು ಗೌರವಿಸುವುದಷ್ಟೇ ಅಲ್ಲ, ಮುಂದಿನ ಪೀಳಿಗೆಯ ಆರೋಗ್ಯವನ್ನೂ ಖಾತರಿಪಡಿಸುತ್ತವೆ. ಅಂಗನವಾಡಿಗಳಲ್ಲಿ ದೊರಕುವ ಉಚಿತ ಊಟದಲ್ಲಿ ಆಕೆಗೆ ನಿತ್ಯ 600 ಕ್ಯಾಲೊರಿ ಮತ್ತು 18–20 ಗ್ರಾಂ ಪ್ರೋಟೀನು ಸಿಗಬೇಕು ಎಂಬ ಅಂಶವೂ ಕಾನೂನಿನಲ್ಲಿ ಇದೆ. 

 

ನಮ್ಮಲ್ಲಿ ಜನನಿ ಸುರಕ್ಷಾ, ತಾಯ್ತನ ಭತ್ಯೆಗಳಂಥ ಯೋಜನೆಗಳು ಬಡ ಮಹಿಳೆಯರಿಗಾಗಿ ಇವೆ. ಬಿಪಿಎಲ್ ಕಾರ್ಡಿನ ಕುಟುಂಬಕ್ಕೆ ಮಾತ್ರ ಅವು ಲಭ್ಯ. ತಾಯಿಯ ವಯಸ್ಸು, ಎಷ್ಟನೇ ಹೆರಿಗೆ, ನೋಂದಣಿ ಆಗಿತ್ತೋ, ಆಸ್ಪತ್ರೆಯಲ್ಲಾದ ಹೆರಿಗೆಯೋ, ಮಗುವಿಗೆ ಚುಚ್ಚುಮದ್ದುಗಳನ್ನು ಹಾಕಿಸಿದೆಯೇ ಮುಂತಾದ ಹತ್ತಾರು ನಿಯಮಗಳನ್ನೊಳಗೊಂಡ ಈ ಯೋಜನೆಗಳು ಮಹಿಳೆಯರನ್ನು ತಲುಪುವುದಕ್ಕಿಂತ ತಲುಪದ ಮಹಿಳೆಯರ ಸಂಖ್ಯೆಯೇ ಹೆಚ್ಚಿದೆ.

 

ಕೊಡುವ ಭತ್ಯೆ ಕೂಡ ಉಪ್ಪು ಮೆಣಸಿನಕಾಯಿಗೆ ಸಾಕಾಗದಷ್ಟು. ಕೇಂದ್ರ ಸರ್ಕಾರವು ‘ಇಂದಿರಾ ಗಾಂಧಿ ಮಾತೃತ್ವ ಸಹಯೋಗ ಯೋಜನೆ’ಯ ಮೂಲಕ ತಾಯಂದಿರಿಗೆ ಹೆರಿಗೆ ಭತ್ಯೆ ನೀಡುವ ಯೋಜನೆಯೊಂದನ್ನು 2010ರಿಂದ ಪ್ರಾಯೋಗಿಕವಾಗಿ 53 ಜಿಲ್ಲೆಗಳಲ್ಲಿ ಆರಂಭಿಸಿತ್ತು. ಆದರೆ ಅದು ತಲುಪಿದ್ದು ಸರ್ಕಾರದ್ದೇ ಅಂಕಿ ಅಂಶಗಳ ಪ್ರಕಾರ ಕೇವಲ ಶೇ  22.9 ತಾಯಂದಿರಿಗೆ. ಅದಕ್ಕಂಟಿಸಿದ್ದ ನಿಯಮಗಳೇ ಇಷ್ಟು ಕಡಿಮೆ ತಾಯಂದಿರಿಗೆ ಯೋಜನೆ ತಲುಪಲಿಕ್ಕೆ ಕಾರಣ ಎಂದು ಅಧ್ಯಯನಗಳು ದೃಢಪಡಿಸಿವೆ. 

 

ಇದನ್ನು ಓದುವಾಗ ದಯವಿಟ್ಟು ಕಟ್ಟಡ ಕಾರ್ಮಿಕಳಾಗಿ ದುಡಿಯುತ್ತಿರುವ ಒಬ್ಬ ಗರ್ಭಿಣಿಯ ಚಿತ್ರವನ್ನು ಕಲ್ಪಿಸಿಕೊಳ್ಳಿ. ಅತ್ಯಂತ ಸೂಕ್ಷ್ಮ ಸ್ಥಿತಿ ಅವಳದ್ದು. ಅವಳ ವಯಸ್ಸು, ಎಷ್ಟನೇ ಮಗು, ಬಿಪಿಎಲ್ ಹೌದೋ ಅಲ್ಲವೋ, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮೊದಲ ಮೂರು ತಿಂಗಳೊಳಗಾಗಿ ನೋಂದಣಿ ಮಾಡಿಸಿದ್ದಾಳೋ ಇಲ್ಲವೋ ಮುಂತಾದ ಪ್ರಶ್ನೆಗಳು ನಿಮ್ಮಲ್ಲಿ ಬರುತ್ತವೆಯೇ? ಈ ನಿಯಮಗಳು ಗರ್ಭಿಣಿಯನ್ನು ಲೆಕ್ಕಕ್ಕೇ ತೆಗೆದುಕೊಳ್ಳುವುದಿಲ್ಲ.

 

ಬದಲಿಗೆ ಅವಳ ಸುತ್ತಮುತ್ತಲಿನ ವಿಚಾರಗಳ ಮೇಲೆ ಗಮನವನ್ನು ಕೇಂದ್ರೀಕರಿಸುತ್ತವೆ. ದುಡಿಯಲು ಆಗುವುದಿಲ್ಲ ಎಂಬ ಕಾರಣಕ್ಕೆ ಕೂಲಿ ನಷ್ಟವಾಗುತ್ತಿರುವುದು ಆಕೆಗೆ. ಕಡಿಮೆ ಕೂಲಿ, ಕಡಿಮೆ ಊಟದಿಂದಾಗಿ ತೂಕ ನಷ್ಟವಾಗುತ್ತಿರುವುದು ಆಕೆಗೆ. ವಿಶ್ರಾಂತಿ ಬೇಕಾಗಿರುವುದು ಆಕೆಯ ದೇಹಕ್ಕೆ. ಹೆರಿಗೆ ಭತ್ಯೆ, ತಾಯ್ತನ ಸೌಲಭ್ಯಗಳನ್ನು ಪಡೆಯಲು ಇಂಥ ನಿಯಮಗಳನ್ನು ಹಾಕಿದಾಗ ನಲುಗುವುದು ಆ ಗರ್ಭಿಣಿಯ ದೇಹ ಮಾತ್ರ. ನಾವು ಗೌರವಿಸದಿರುವುದು ಆ ತಾಯಿಯನ್ನು ಮಾತ್ರ ಎಂಬುದನ್ನು ಮರೆಯಬಾರದು.

 

ವಿಶ್ರಾಂತಿ ಮತ್ತು ನಿಶ್ಚಿಂತಳಾಗಿ ಇರಲು ಅತಿ ಅವಶ್ಯವಾಗಿ ಬೇಕಾದ ರಜೆ ಮತ್ತು ಕೂಲಿ–ಸಂಬಳ  ಆಕೆಗೆ ಆ ಸಮಯದಲ್ಲಿ ದೊರಕಿತೆಂದರೆ ಅದೆಷ್ಟು ತಾಯಂದಿರು ನಿಶ್ಚಿಂತರಾಗಿ ಆರೋಗ್ಯವಂತ ಶಿಶುಗಳನ್ನು ಹಡೆಯಬಹುದೋ!

 

ತಾಯಿಯಾಗುವವಳಿಗೆ ಆಕೆ ಕಳೆದುಕೊಳ್ಳುವ ಕೂಲಿನಷ್ಟದ ಅರ್ಧದಷ್ಟನ್ನು ತುಂಬಿಕೊಡುವ ಆಶಯ ‘ಇಂದಿರಾ ಗಾಂಧಿ ಮಾತೃತ್ವ ಸಹಯೋಗ ಯೋಜನೆ’ಯದ್ದು. ಹೆರಿಗೆಯ ದಿನದವರೆಗೂ ಕೆಲಸ ಮಾಡುವ ಒತ್ತಡ ಆಕೆಯ ಮೇಲೆ ಬೀಳಬಾರದೆಂದು ದಿನಕ್ಕೆ ₹ 100ರಂತೆ 40 ದಿನಗಳಿಗೆ ₹ 4000 ಕೊಡುವ ಯೋಜನೆಯಿದು.

 

ಆದರೆ ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆಯ ಪ್ರಕಾರ ಗರ್ಭಿಣಿಗೆ ವಿಶ್ರಾಂತಿ, ಮಗುವಾದ ನಂತರ ಆರು ತಿಂಗಳು ಹಾಲೂಡುವ ಕ್ರಿಯೆಗಳಿಗಾಗಿ 12 ವಾರಗಳ ತಾಯ್ತನದ ರಜಾ ಇರಬೇಕು. ಯೋಜನೆ ಕೊಡುವುದು ದಿನಕ್ಕೆ ₹ 100 ರಂತೆ ಐದೂ ಮುಕ್ಕಾಲು ವಾರಗಳಿಗೆ (40 ದಿನಗಳ) ₹ 4000. ದಿನಕ್ಕೆ ₹ 100 ರಂತೆ 12 ವಾರಕ್ಕೆ ₹ 8,400 ಆಗಬೇಕು. ಆದರೆ ಅಷ್ಟನ್ನು  ಕೊಡುತ್ತಿಲ್ಲ.

 

ನಮ್ಮ ಬಹುತೇಕ ಕಾನೂನು, ಯೋಜನೆಗಳ ಕತೆ ಇದು. ಅಂತರರಾಷ್ಟ್ರೀಯ ಸಮುದಾಯಕ್ಕೆ ತೋರಿಸಿಕೊಳ್ಳಲು ನಮ್ಮಲ್ಲಿ ಉತ್ತಮೋತ್ತಮ ಕಾನೂನುಗಳನ್ನು ರಚಿಸಲಾಗುತ್ತದೆ. ಅದಕ್ಕೆ ತಕ್ಕಂಥ ರಮ್ಯಾತಿರಮ್ಯ ಆಶಯ ಮಾತುಗಳನ್ನೂ ಬರೆಯಲಾಗುತ್ತದೆ. ಆದರೆ ವಾಸ್ತವದಲ್ಲಿ ತಲುಪಬೇಕಾದವರಿಗೆ ಅವು ತಲುಪದಂತೆ ವ್ಯವಸ್ಥಿತ ಜಾಲ ಹೆಣೆಯಲಾಗಿರುತ್ತದೆ.

 

ತಾಯಿಯಾಗುವವಳಿಗೆ 12 ವಾರಗಳ ರಜೆಯೂ ಇಲ್ಲ, ಕನಿಷ್ಠ ಕೂಲಿಯ ಭತ್ಯೆಯೂ ಇಲ್ಲ. ಅವಶ್ಯ ಇರುವಂಥ ತಾಯಿ ಅರ್ಜಿ ಹಾಕಿದರೆ ಅವಳೇನೋ ಖಜಾನೆಯನ್ನೇ ದೋಚಲು ಬಂದಿದ್ದಾಳೋ ಎನ್ನುವಂತೆ ಆಡಳಿತಗಾರರ ಧೋರಣೆಗಳು! ಕಾನೂನು ಬಂದು ಮೂರು ವರ್ಷವಾಗಿದೆ. ಪ್ರಧಾನ ಮಂತ್ರಿಗಳು ಭಾಷಣದಲ್ಲಿ ಈ ಯೋಜನೆಯನ್ನು ಘೋಷಿಸಿ ನಾಲ್ಕು ತಿಂಗಳಾಗಿವೆ.

 

ಆದರೆ ಇನ್ನೂವರೆಗೆ ದೇಶದಲ್ಲಿ ಒಂದೇ ಒಂದು ತಾಯಿಗೆ ಯೋಜನೆಯ ಲಾಭ ಸಿಕ್ಕಿಲ್ಲವೆಂದರೆ ಅದು ಏನು ತೋರಿಸುತ್ತದೆ? ತಾಯ್ತನಕ್ಕೆ ಗೌರವ, ದೇಶವನ್ನು ಕಟ್ಟುವ ಜನರ ಕೈಗೆ ಇದು ತಲುಪಬೇಕೆಂಬ ಕಳಕಳಿ, ಮುಂದಿನ ಪೀಳಿಗೆ ಸದೃಢವಾಗಿರಬೇಕೆಂಬ ಈ ಮೂರು ಆಶಯಗಳ ಕೀಲೆಣ್ಣೆ ನಮ್ಮ ಆಡಳಿತ ಯಂತ್ರದಲ್ಲಿ ಸೇರಿದರೆ ಮಾತ್ರ ತಾಯಂದಿರು ನೆಮ್ಮದಿಯ ನಿಟ್ಟುಸಿರು ಬಿಟ್ಟಾರು.

 

ಮಾತೃತ್ವ ಸಹಯೋಗ ಯೋಜನೆಗೆ ಸಂಪುಟದ ಒಪ್ಪಿಗೆ ಕೊಟ್ಟ ಸುದ್ದಿ ಬಂತು. ಗರ್ಭಿಣಿಯಾದವಳು ಮೂರು ತಿಂಗಳ ಒಳಗೆ ನೋಂದಣಿ ಮಾಡಿಸಿದರೆ ಮೊದಲ ಕಂತಿನ ₹ 1000, ಆರನೇ ತಿಂಗಳಲ್ಲಿ ಮೊದಲ ತಪಾಸಣೆಗೆ ಬಂದರೆ ₹ 2000, ಹೆರಿಗೆ ನಂತರ ಮಗುವಿನ ಜನನದ ನೋಂದಣಿ ಮಾಡಿಸಿ ಎಲ್ಲಾ ಲಸಿಕೆಗಳನ್ನೂ ಹಾಕಿಸಿದರೆ ಮೂರನೆಯ ಕಂತಿನ ₹ 2000 ಸಿಗುತ್ತದೆ.  ಇನ್ನು ರಾಜ್ಯ ಸರ್ಕಾರದ ಹೆರಿಗೆ ಭತ್ಯೆ, ಜನನಿ ಸುರಕ್ಷಾ ಸೇರಿದರೆ ₹ 6000 ಆಗಿಯೇ ಆಗುತ್ತದೆ. ಆದರೆ ಇದು ಮೊದಲ ಮಗುವಿಗೆ ಮಾತ್ರ.

 


 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry