ರಾಗಿಕಣವಾಗಿತ್ತು ಕಣಾ, ಬೆಂಗಳೂರು ನಗರ!

7

ರಾಗಿಕಣವಾಗಿತ್ತು ಕಣಾ, ಬೆಂಗಳೂರು ನಗರ!

ಪ್ರಸನ್ನ
Published:
Updated:
ರಾಗಿಕಣವಾಗಿತ್ತು ಕಣಾ, ಬೆಂಗಳೂರು ನಗರ!

ಬೆಂಗಳೂರಿನ ಒಡನಾಟ ನನಗೆ ಐವತ್ತು ವರ್ಷಗಳಿಗೂ ಮಿಗಿಲಾದದ್ದು. ಅನೇಕ ಹಳಬರಂತೆ ನಾನೂ ಸಹ ಕರ್ನಾಟಕದ ಮೂಲೆಯೊಂದರಿಂದ ಬಂದು ರಾಜಧಾನಿ ಸೇರಿದವನು. ಓದಲೆಂದು ಬಂದೆ ನಾನು. ರಾಜಾಜಿ, ರಾಮನ್ ಇತ್ಯಾದಿಯಾಗಿ ನೂರಾರು ವಿಖ್ಯಾತರು, ವಿಜ್ಞಾನಿಗಳು, ತತ್ವಜ್ಞಾನಿಗಳು, ಲೇಖಕ– ಕಲಾವಿದರು ಓದಿದ ಸೆಂಟ್ರಲ್ ಕಾಲೇಜಿನಲ್ಲಿ ಓದುವ ಭಾಗ್ಯ ದೊರೆಯಿತು ಎಂದು ಇಲ್ಲಿಗೆ ಬಂದೆ. ತಂದೆ ತಾಯಿಯರನ್ನು ತೊರೆದು, ನನ್ನೂರನ್ನು ತೊರೆದು ಬಂದೆ. ಈಗ ಉಸಿರುಗಟ್ಟಿಸುವ ವಾಹನ ದಟ್ಟಣೆ, ಜನ ದಟ್ಟಣೆ ಹಾಗೂ ವ್ಯಾಪಾರ ದಟ್ಟಣೆಯ ಕ್ಷೇತ್ರಗಳಾಗಿರುವ ಶೇಷಾದ್ರಿ ರಸ್ತೆ, ಗಾಂಧಿನಗರ, ಮೆಜೆಸ್ಟಿಕ್ ಹಾಗೂ ಮೈಸೂರು ಬ್ಯಾಂಕ್ ವೃತ್ತಗಳಲ್ಲಿ ಬದುಕಿದ್ದೆ. ಕಾಲ್ನಡಿಗೆಯಲ್ಲಿ ಓಡಾಡಿಕೊಂಡು, ನನ್ನ ವಿದ್ಯಾರ್ಥಿ ಜೀವನವನ್ನು ಕಳೆದೆ ನಾನು.

ಕಾಲ್ನಡಿಗೆಯ ಓಡಾಟ ಹಾಗೂ ಶುದ್ಧ ಹವೆ ಸೇವಿಸುವುದು ಬೆಂಗಳೂರಿನಲ್ಲಿ ಆಗ ಸಾಧ್ಯವಿತ್ತು. ಶೇಷಾದ್ರಿ ರಸ್ತೆಯಲ್ಲಿದ್ದ, ಈಗಲೂ ಇರುವ, ಒಂದು ವಿದ್ಯಾರ್ಥಿ ನಿಲಯದಲ್ಲಿ ವಾಸವಾಗಿದ್ದೆ. ಅಲ್ಲಿಂದ ನಾವು ಹುಡುಗರು, ಪ್ರತಿದಿನ ಗಾಂಧಿನಗರ ಹಾದು ಮಹಾಬೋಧಿ ಸೊಸೈಟಿಯ ಬೌದ್ಧ ಮಂದಿರ ಹಾದು, ಸೆಂಟ್ರಲ್ ಜೇಲಿನ ಹಿಂಬದಿಯ ಅಗಾಧ ಗೋಡೆಗಳ ಬದಿಗೆ ನಡೆದು, ಸೆಂಟ್ರಲ್ ಕಾಲೇಜಿನ ವಿಶಾಲ ಕ್ರೀಡಾ ಮೈದಾನ ಹಾದು, ಕಾಲೇಜಿನ ಹಿಂಬದಿಯ ಗೇಟಿನ ಮೂಲಕ ಕಾಲೇಜು ತಲುಪುತ್ತಿದ್ದೆವು.

ಗೇಟು ದಾಟಿದ್ದೇ ಕಾಲೇಜಿನ ಪ್ರಾಯೋಗಿಕ ಸಸ್ಯಾಗಾರವು ದಟ್ಟ ಕಾಡಿನಂತೆ ನಮಗೆದುರಾಗುತ್ತಿತ್ತು. ಚಿತ್ರವಿಚಿತ್ರವಾದ ಎಲೆಗಳು, ಬಳ್ಳಿ ಕಾಂಡಗಳು, ಬೃಹತ್ ಮರಗಳು ಹಾಗೂ ಆರ್ಕಿಡ್ಡುಗಳ ಸಂಗ್ರಹವಿದ್ದ ಆ ಸಸ್ಯಾಗಾರವು ಮಲೆನಾಡಿನ ಅಡವಿಯೊಂದರ ನೆನಪು ತರುತ್ತಿತ್ತು ನನಗೆ. ಅಲ್ಲಿಂದಾಚೆಗೆ ಸಾಲುಮರಗಳ ನಡುವೆ, ಕೆಂಪುಗೋಡೆಗಳು ಹಾಗೂ ಬಿಳಿಯ ಕಮಾನುಗಳನ್ನು ಹೊತ್ತ ವಿಶಾಲ ಕಟ್ಟಡ, ವಿಶಾಲ ಅಂಗಳಗಳು ಹಾಗೂ ಹೂತೋಟಗಳ ನಡುವೆ ಹರಡಿಕೊಂಡಿತ್ತು ನನ್ನ ಕಾಲೇಜು. ಊರೂ ಅಷ್ಟೆ. ಊರತುಂಬ ಮರಗಳಿದ್ದವು. ವರ್ಷಕೊಮ್ಮೆ ಅವು ಹೂವು ಸೂಸುತ್ತಿದ್ದವು.

ಈಗ ಗಲೀಜು ಸ್ಲಮ್ಮಿನಂತಾಗಿರುವ ಗಾಂಧಿನಗರವು ಆಗ ವಾಸದ ಮನೆಗಳ ಒಂದು ಸುಂದರ ಕಾಲನಿಯಾಗಿತ್ತು. ಮದರಾಸು ರೂಫಿನ ಒಂದಂತಸ್ತಿನ ಸಾಲು ಸಾಲು ಮನೆಗಳಿದ್ದವು ಅಲ್ಲಿ. ಗುಬ್ಬಿ ವೀರಣ್ಣನವರ ಮನೆ ಇತ್ತು. ಅವರ ಪತ್ನಿ ಬಿ. ಜಯಮ್ಮನವರು ತಮ್ಮ ವಯಸ್ಸಾದ ಕಾಲುಗಳನ್ನು ಬಿಸಿಲಿಗೆ ನೀಡಿಕೊಂಡು ಕಾಯಿಸಿಕೊಳ್ಳುತ್ತ ಮನೆಯಾಚೆ ಕುಳಿತಿರುತ್ತಿದ್ದರು. ಮಕ್ಕಳು ಬೀದಿಗಳಲ್ಲಿ ಗೂಟ ನೆಟ್ಟು ಕ್ರಿಕೆಟ್ ಆಡುತ್ತಿದ್ದರು. ನಾಯಿ, ಬೆಕ್ಕುಗಳು ರಸ್ತೆಯಲ್ಲಿ ಮಲಗಿರುತ್ತಿದ್ದವು.

ಇನ್ನು ಮೆಜೆಸ್ಟಿಕ್: ಈಗ ಬಸ್ಸು ಹಾಗೂ ಮೆಟ್ರೊ ನಿಲ್ದಾಣವಾಗಿ, ಕರ್ಕಶ ಬದುಕಿನ ತಾಣವಾಗಿರುವ ಕೆಂಪಾಂಬುಧಿ ಕೆರೆಯಂಗಳವು ಆಗಿನ್ನೂ ಕೆರೆಯಂಗಳವಾಗಿಯೇ ಇತ್ತು. ಕೆರೆಯಂಗಳದ ಒಂದು ಬದಿಯಲ್ಲಿ ಹಿರಣ್ಣಯ್ಯನವರ ನಾಟಕದ ಕಂಪೆನಿಯ ಜೋಪಡಿ ರಂಗಮಂದಿರವಿತ್ತು. ಅಲ್ಲಿ ‘ಲಂಚಾವತಾರ’ ನಾಟಕ ನೋಡಿದ್ದೆ ನಾನು. ತೋಟದಪ್ಪನವರ ಛತ್ರವು ಛತ್ರವಾಗಿಯೇ ಇತ್ತು. ಬಂಡಿಶೇಷಮ್ಮನವರ ವಿದ್ಯಾರ್ಥಿ ನಿಲಯವು ಮೆಜೆಸ್ಟಿಕ್ ವೃತ್ತದಲ್ಲಿತ್ತು. ನಾಲ್ಕೈದು ಮಠಮಾನ್ಯಗಳು ತಮ್ಮ ವಿಶಾಲವಾದ ತೋಟಗಳನ್ನು ಸುತ್ತಲೂ ಹರಡಿಕೊಂಡು ಮೆಜೆಸ್ಟಿಕ್ಕಿನಲ್ಲಿ ಮಲಗಿರುತ್ತಿದ್ದವು. ಬಸ್ಸುಗಳು ಅಪರೂಪವಾಗಿದ್ದವು. ಆಟೊರಿಕ್ಷಾ ಅಪರೂವಾಗಿತ್ತು. ಟಾಂಗಾಗಾಡಿ ಇನ್ನೂ ಇತ್ತು.

ರೋಗ ಬಡಿದಿದೆ ಬೆಂಗಳೂರಿಗೆ. ತನ್ನ ಸುತ್ತಲ ನೂರಾರು ಹಳ್ಳಿಗಳನ್ನು ಕಬಳಿಸಿಕೊಂಡು ಬೆಳೆದುನಿಂತಿದೆ. ಬೆಳೆಯುತ್ತಿರುವ ಈ ನಗರದ ಯಾವುದೇ ಒಂದು ಹೊರತುದಿಯಿಂದ ಮತ್ತೊಂದು ಹೊರತುದಿಗೆ ಈಗ ಐವತ್ತು ಕಿಲೋಮೀಟರುಗಳಿಗೂ ಮಿಗಿಲಾದ ಅಂತರವಿದೆ. ಒಂದೂ ಕಾಲು ಕೋಟಿ ಜನ ಕಾಲಿಡಲಾಗದೆ ಒಂಟಿಕಾಲಿನ ಮೇಲೆ ನಿಂತಿದ್ದಾರೆ ಈ ಮಹಾನಗರದೊಳಗೆ. ಹಾಗೆ ನಿಂತವರ ಸಂಖ್ಯೆ ಇನ್ನೊಂದು ದಶಕದೊಳಗೆ ನಾಲ್ಕು ಕೋಟಿಯಾಗಲಿದೆ ಎಂದು ನಿರುಮ್ಮಳವಾಗಿ ಹೇಳುತ್ತಿವೆ ಸರ್ಕಾರಗಳು! ಅದೆಷ್ಟು ಕೆರೆಕುಂಟೆಗಳು, ರಾಗಿಕಣಗಳು, ತರಕಾರಿಮಡಿಗಳು, ಹಣ್ಣಿನ ತೋಟಗಳು, ಕಾಡು–ಗುಡ್ಡ, ನದಿಗಳು, ಕೋಟಿ ಕೋಟಿ ಜನಸಂಖ್ಯೆಯ ಈ ಮಹಾನಗರದಡಿಯಲ್ಲಿ ಸತ್ತು ಮಲಗಿವೆಯೋ ದೇವರೇ ಬಲ್ಲ!

ಸತ್ತ ಹಳ್ಳಿಗಳ ಹೆಸರು ತಿಳಿಯಬೇಕೆಂದಿದ್ದರೆ ನೀವು ಒಮ್ಮೆ ಮೆಜೆಸ್ಟಿಕ್ಕಿನ ಸಿಟಿಬಸ್ಸಿನ ನಿಲ್ದಾಣಕ್ಕೆ ಹೋಗಿ, ಅಲ್ಲಿಂದ ಹೊರಡುವ ರೂಟು ಬಸ್ಸುಗಳ ಬೋರ್ಡುಗಳನ್ನು ಗಮನಿಸಿರಿ ಸಾಕು. ಬೆಂಗಳೂರಿನ ಬಡಾವಣೆಗಳ ಹೆಸರಾಗಿ ಮಾತ್ರವೇ ಉಳಿದಿವೆ ಪುಟ್ಟೇನಹಳ್ಳಿ, ಲಗ್ಗೆರೆ, ತಿಪ್ಪಸಂದ್ರ, ಕೆಂಗೇರಿ, ಹಲಸೂರು, ಜಕ್ಕೂರು, ಕೊತ್ತನೂರು ಇತ್ಯಾದಿ ಇತ್ಯಾದಿ. ಹಳ್ಳಿಗಳನ್ನು ಕೊಲ್ಲುವುದು ಎಲ್ಲ ಮಹಾನಗರಗಳ ಚಾಳಿ. ಆದರೆ ಮಿಕ್ಕ ಮಹಾನಗರಗಳಿಗಿಂತ ಕೊಂಚ ಭಿನ್ನವಾದದ್ದು ಬೆಂಗಳೂರು ನಗರ. ಬೆಂಗಳೂರು ನಗರವು ಪ್ರಸ್ಥಭೂಮಿಯೊಂದರ ತುದಿಯೇರಿ ಕುಳಿತಿದೆ. ಈ ನಗರಕ್ಕೆ ನೀರನ್ನು ಪಂಪ್ ಮಾಡಿಯೇ ತರಬೇಕು. ಹತ್ತಿರದಲ್ಲಿ ಹರಿಯುವ ಕಾವೇರಿ ಕೂಡ ನೂರು ಕಿಲೋಮೀಟರು ದೂರದಲ್ಲಿದೆ. ಬೆಂಗಳೂರು ನಗರಕ್ಕೆ ನೀರುಣಿಸಲೆಂದು ಕರ್ನಾಟಕ ಸರ್ಕಾರವು ಏದುಬ್ಬಸಪಡುತ್ತಿದೆ. ಮಾತ್ರವಲ್ಲ, ಇಡೀ ಕರ್ನಾಟಕದ ಎಲ್ಲ ನದಿಗಳ, ಎಲ್ಲ ಜಲಾಶಯಗಳ ನೀರನ್ನೂ ಈ ಗುಡ್ಡಕ್ಕೆ ಪಂಪ್ ಮಾಡಲು ಸಾಧ್ಯವೇ ಎಂದು ಕಳ್ಳ ಸಮಾಲೋಚನೆ ನಡೆಸುತ್ತಿದೆ. ಎತ್ತಿನ ಹೊಳೆ, ತುಂಗೆ, ಭದ್ರೆ, ಶರಾವತಿ ಇತ್ಯಾದಿ ಎಲ್ಲ ನೀರೆಯರ ನೀರನ್ನೂ ನಗರಕ್ಕೇ ಕುಡಿಸಿ, ಕಲುಷಿತಗೊಳಿಸುವ ಬಗೆಯನ್ನು ಹುಡುಕುತ್ತಿದ್ದಾರೆ ಮೂರ್ಖ ಎಂಜಿನಿಯರುಗಳು.

ಕೆರೆಕುಂಟೆಗಳ ಆಸರೆಯಲ್ಲಿ ಬದುಕಿದ್ದ ನಗರ ಇದು. ಇಲ್ಲಿ ಬೀಳುವ ಮಳೆನೀರು, ನೈರುತ್ಯ ದಿಕ್ಕಿನಲ್ಲಿರುವ ಕಾವೇರಿ ಕಣಿವೆಗೆ ಹೆಚ್ಚಾಗಿ ಹರಿಯುತ್ತದೆ. ಒಂದಿಷ್ಟು ನೀರು ಇತರೆ ದಿಕ್ಕಿಗೂ ಹರಿಯುತ್ತದೆ. ಸುತ್ತಲ ರೈತರು, ಹಿಂದೆಲ್ಲ ಬೆಂಗಳೂರಿನ ಮೇಲೆ ಬೀಳುತ್ತಿದ್ದ ಮಳೆ ನೀರನ್ನು ಹನಿಹನಿಯಾಗಿ ಸಂಗ್ರಹಿಸಿ ಕೆರೆಗಳಲ್ಲಿ ಹಿಡಿದಿಡುತ್ತಿದ್ದರು. ಆ ನೀರಿನಿಂದ ರಾಗಿ ಬೆಳೆಯುತ್ತಿದ್ದರು, ತರಕಾರಿ ಬೆಳೆಯುತ್ತಿದ್ದರು. ಕೆರೆಗಳಾಸರೆ ಇಲ್ಲದೆಡೆಗಳಲ್ಲಿ ಸರ್ವೆತೋಪುಗಳನ್ನು ನೆಟ್ಟು, ಸರ್ವೆಮರಗಳನ್ನು ಬೆಳೆದು, ನಗರದ ಕಾರ್ಖಾನೆಗಳಿಗೆ ಹಾಗೂ ನಾಗರಿಕರ ಬಚ್ಚಲೊಲೆಗಳಿಗೆ ಉರುವಲನ್ನು ಒದಗಿಸುತ್ತಿದ್ದರು. ನಗರವು ಗ್ರಾಮದೊಟ್ಟಿಗೆ, ಗ್ರಾಮವು ನಗರದೊಟ್ಟಿಗೆ ಸಹಬಾಳ್ವೆ ನಡೆಸುತ್ತಿತ್ತು. ಮನುಷ್ಯರು ಬದುಕಿದ್ದರು. ಈಗ ಯಂತ್ರಗಳು ಬದುಕಿವೆ ಬೆಂಗಳೂರಿನಲ್ಲಿ.

ನಗರದ ವಿಶಾಲ ಭೂಭಾಗವು ಹಿಂದೊಮ್ಮೆ ಸಮೃದ್ಧವಾದ ರಾಗಿ ಕಣಜವಾಗಿತ್ತು ಎಂದರೆ ನಂಬುವುದೇ ಕಷ್ಟ. ನನಗಿದು ತಿಳಿದದ್ದು ಇತ್ತೀಚೆಗೆ. ನನ್ನ ಸ್ನೇಹಿತರಾದ ಎಂ.ಸಿ. ನರೇಂದ್ರ ಅವರು ತಮ್ಮ ತೋಟವೊಂದಕ್ಕೆ ಕರೆದೊಯ್ದು ತೋರಿಸಿದಾಗ. ಬೆಂಗಳೂರಿನ ದಕ್ಷಿಣ ಭಾಗದಲ್ಲಿರುವ ಹಾಗೂ ಮಹಾನಗರದ ಕಬಂಧಬಾಹುವಿನೊಳಗೆ ಸಿಕ್ಕು ನರಳುತ್ತಿರುವ, ಆ ತೋಟದ ಒಂದು ಭಾಗದಲ್ಲಿ ಈಗಲೂ ಅವರು, ಹಟದಿಂದ ರಾಗಿ ಬೆಳೆಯುತ್ತಿದ್ದಾರೆ. ಈಗಲೂ ಅಲ್ಲಿ ಕಣವಿದೆ, ಹಸುಗಳಿವೆ, ಕೊಟ್ಟಿಗೆಯಿದೆ, ತೆರೆದ ಬಾವಿಯಿದೆ. ಅವೆಲ್ಲ ಕಂಡ ನಾನು ಬೆಂಗಳೂರಿನಲ್ಲಿ ರಾಗಿಕಣ! ಎಂದು ಉದ್ಗರಿಸಿದೆ. ನನ್ನ ಉದ್ಗಾರವು ನರೇಂದ್ರ ಅವರಿಗೆ ಚಳವಳಿಯೊಂದರ ಪ್ರೇರಣೆ ನೀಡಿತು. ಅವರು ಗ್ರಾಮ ಸೇವಾಸಂಘದ ಯುವಕರೊಟ್ಟಿಗೆ ಜೊತೆಯಾಗಿ ಅಲ್ಲೊಂದು ಗ್ರಾಮೀಣ ಸಂತೆ ಶುರು ಮಾಡಿದ್ದಾರೆ. ಗ್ರಾಮೋದ್ಯೋಗ ಹಾಗೂ ಕೃಷಿಯ ಸರಕುಗಳ ಮಾರಾಟ ಮಾಡಲಿಕ್ಕೆ ಹಾಗೂ ನಗರದ ಯುವಕರಿಗೆ ಗ್ರಾಮ ಸ್ವರಾಜ್ಯದ ಪ್ರೇರಣೆ ನೀಡಲಿಕ್ಕೆ ತಮ್ಮ ತೋಟದಲ್ಲಿ ವ್ಯವಸ್ಥೆ ಮಾಡಿದ್ದಾರೆ ನರೇಂದ್ರ.

ನರೇಂದ್ರ ಅವರ ತಂದೆ ದಿವಂಗತ ಎಂ. ಚಂದ್ರಶೇಖರ್ ಒಬ್ಬ ಗಾಂಧಿವಾದಿ. ಕೆಲಕಾಲ ರಾಜ್ಯ ಸರ್ಕಾರದ ಮಂತ್ರಿಗಳೂ ಆಗಿದ್ದರು. ತಮ್ಮ ಕೊನೆಗಾಲದಲ್ಲವರು, ಅಧಿಕಾರ ರಾಜಕಾರಣದ ಹಗ್ಗ ಜಗ್ಗಾಟದಿಂದ ಬೇಸತ್ತು, ಸಾರ್ವಜನಿಕ ಬದುಕನ್ನು ತೊರೆದು, ಈ ತೋಟದಲ್ಲಿ ಕಾಲಕಳೆದರು. ಇಲ್ಲಿ ಬಡ ಹಾಗೂ ವಿಶೇಷ ಮಕ್ಕಳ (ಬುದ್ಧಿಮಾಂದ್ಯರು) ಒಂದು ಶಾಲೆ ತೆರೆದು, ಮಕ್ಕಳು ಹಾಗೂ ಗಿಡಮರಗಳ ಸಂಗದಲ್ಲಿ ಉಳಿದರು.

ಚಂದ್ರಶೇಖರ್ ಅವರ ಕೌಟುಂಬಿಕ ಹಿನ್ನೆಲೆ ವಿಶೇಷವಾದದ್ದು. ಬೆಂಗಳೂರಿನ ವಿಶ್ವವಿಖ್ಯಾತ ನರ್ಸರಿಗಳ ಜನಕರು ಈ ಕುಟುಂಬದ ಮೂಲ ಸದಸ್ಯರು. ಸಸಿ ಬೆಳೆಸಿ ಬದುಕಿದವರು ಇವರು. ಬೆಂಗಳೂರಿನ ಹಲವು ಪ್ರಖ್ಯಾತ ಉದ್ದಿಮೆಗಳಲ್ಲಿ ಸಸಿ ಬೆಳೆಸುವ ಉದ್ದಿಮೆ ಪ್ರಮುಖವಾದದ್ದು. ದೇಶ ವಿದೇಶಗಳಿಗೆ ಸಸಿಗಳನ್ನು ತಲುಪಿಸಿದೆ ಬೆಂಗಳೂರಿನ ಸಸ್ಯೋದ್ಯಮ. ಆದರೆ ಸಾಮಾನ್ಯವಾಗಿ ಬಿಇಎಲ್, ಎಚ್‌ಎಎಲ್, ಎಚ್‌ಎಮ್‌ಟಿ,  ಐಟಿಐ ಇತ್ಯಾದಿ ಲೋಹದುದ್ದಿಮೆಗಳನ್ನು ಮಾತ್ರವೇ ನೆನೆಯಲಾಗುತ್ತದೆ ಬೆಂಗಳೂರೆಂದರೆ. ಇತ್ತೀಚೆಗೆ ಐ.ಟಿ, ಬಿ.ಟಿಗಳನ್ನು ಪಟ್ಟಿಗೆ ಸೇರಿಸಲಾಗಿದೆ. ಚಂದ್ರಶೇಖರ್ ಅವರ ಪೂರ್ವಜರು ಕೋಲಾರದ ಕಡೆಯಿಂದ ಬಂದು ನೆಲೆಸಿದ ರೈತಾಪಿ ಕುಟುಂಬ. ಬೆಂಗಳೂರಿನ ಲಾಲ್‌ಬಾಗಿನ ಸುತ್ತಮುತ್ತ ಸಸಿ ಬೆಳೆಸಿ ಮಾರಿ ಬದುಕಿದವರು. ಆಗ ಬ್ರಿಟಿಷರ ಕಾಲ. ಬ್ರಿಟಿಷರಿಗೆ, ಅದರಲ್ಲೂ ಇಂಗ್ಲಿಷ್ ಮೇಮ್‌ಸಾಬ್‌ಗಳಿಗೆ ಕೈತೋಟಗಳೆಂದರೆ ಪ್ರೀತಿ. ಹೀಗೆ ಹೆಸರಾಯಿತು ಬೆಂಗಳೂರು ಜೀವದುದ್ದಿಮೆಗೆ.

ರಾಗಿಕಣ! ಈ ಪದಕ್ಕೆ ಎಷ್ಟೆಲ್ಲ ಅರ್ಥವಿದೆ! ರಾಗಿಯ ಒಂದು ಕಣ ಎಂಬ ಅರ್ಥವಿದೆ. ರಾಗಿ ಕಣಾ! ಎಂಬ ಉದ್ಗಾರವಿದೆ. ರಾಗಿ ಒಕ್ಕಲು ಮಾಡುವ ಕಣವಂತೂ ಇದ್ದೇ ಇದೆ. ಹೌದು, ಕಣಕ್ಕೆ ಮರಳಬೇಕಿದೆ ನಾವು. ಒಂದೇ ಒಂದು ಕಣ ಸಾಕು ಸಾವಿರ ತೆನೆ ಅರಳಿಸಲಿಕ್ಕೆ. ಒಂದೇ ಒಂದು ಕಣ ಸಾಕು ಸಾವಿರ ಕಣಜ ತುಂಬಿಸಲಿಕ್ಕೆ, ಕೇಂದ್ರೀಕರಣದ ಅಗತ್ಯವಿಲ್ಲ. ಕಣಗಳನ್ನು ಸಿಡಿಸುವ ಅಗತ್ಯವೂ ಇಲ್ಲ. ಶಾಂತ ಸ್ನಿಗ್ಧ ಕಣವಿದು ರಾಗಿಕಣ.

ನಾಲ್ಕು ಕೋಟಿ! ದಿಗಿಲಾಗುತ್ತದೆ ನೆನೆಸಿಕೊಂಡರೆ! ಒಂದೂ ಕಾಲು ಕೋಟಿ ಜನರು ಒಂದೂ ಕಾಲಿಡಲಾಗದ ಈ ಕಿಷ್ಕಿಂಧದ ನಗರದಲ್ಲಿ ನಾಲ್ಕು ಕೋಟಿ ಜನರ ಎಂಟು ಕೋಟಿ ಕಾಲುಗಳು ಕಾಲಿಟ್ಟಾಗ ಏನಾದೀತೆಂದು ಊಹಿಸಿಕೊಳ್ಳಿ. ಜನರನ್ನು ನಗರಕ್ಕೆ ತರುಬುವ ಆಸೆಬುರುಕ ಮಾತನ್ನಾಡುತ್ತಿರುವ ರಾಜಕಾರಣಿಗಳು ಹಾಗೂ ಉದ್ಯಮಪತಿಗಳು ಹಾಗೂ ಅಧಿಕಾರಿವರ್ಗ ಕೂಡ ಇದೇ ನಗರದಲ್ಲಿ ಬದುಕಬೇಕು. ಒಳಗೊಳಗೇ ಅವರೂ ನಡುಗುತ್ತಿದ್ದಾರೆ. ಆದರೆ ದುರಾಸೆ ಬಿಡದು. ಮತ್ತಷ್ಟು ಉತ್ಪಾದನೆ, ಮತ್ತಷ್ಟು ವ್ಯಾಪಾರ, ಮತ್ತಷ್ಟು ವೋಟುಗಳ ಆಸೆ ಬಿಡದು.

ಆಸೆ ಬಿಡಿಸಿರಿ ನೀವು. ಬಡವರು ನಗರಕ್ಕೆ ಗುಳೆ ಬರದಂತೆ ತಡೆಹಿಡಿಯಿರಿ. ಗ್ರಾಮಗಳಿಗೆ ಶ್ರೀಮಂತಿಕೆ ತನ್ನಿ. ನಗರಗಳಿಗೆ ಸರಳ ಬದುಕು ತನ್ನಿ. ಸರ್ಕಾರಗಳು ಮಾತ್ರವೇ ಆದರೆ ಆಗದು ಈ ಕೆಲಸ. ನಿಮ್ಮ ಒತ್ತಡವಿರಲಿ, ಸರ್ಕಾರಗಳ ಮೇಲೆ, ಉದ್ಯಮಪತಿಗಳ ಮೇಲೆ ಹಾಗೂ ವಿಜ್ಞಾನಿಗಳ ಮೇಲೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry