7

ಪರಮಾಣು ಇಂಧನ ವಿವೇಕಯುತ ಆಯ್ಕೆ

Published:
Updated:
ಪರಮಾಣು ಇಂಧನ ವಿವೇಕಯುತ ಆಯ್ಕೆ

– ಪ್ರೊ. ವಿ. ಜಗನ್ನಾಥ

ಮನುಕುಲ ಕಂಡುಕೊಂಡಿರುವ ಇಂಧನ ಮೂಲಗಳಲ್ಲಿ ಅತ್ಯುತ್ತಮವಾಗಿರುವುದು ಪರಮಾಣು ಇಂಧನ. ಆದರೆ ಇದರಲ್ಲಿ ಸುರಕ್ಷತೆ ಮತ್ತು ವಿಕಿರಣದ ಸಮಸ್ಯೆಗಳು ಇವೆ. ಮನುಕುಲವು ಹಲವು ಶಕ್ತಿ ಮೂಲಗಳನ್ನು ಕಂಡಿದೆ. ಈಗಿರುವ ಆಯ್ಕೆ ಪರಮಾಣು ಇಂಧನ. ಇದು ಕೆಲವರಿಗೆ ಸರಿ ಕಾಣಿಸದಿರಬಹುದು, ಆಶ್ಚರ್ಯವನ್ನೂ ಮೂಡಿಸಬಹುದು.

ಆದರೆ ಪರಮಾಣು ಇಂಧನದ ಪರ ಕೆಲವು ವಾದಗಳು ಇಲ್ಲಿವೆ:

ಹವಾಮಾನ ಬದಲಾವಣೆ ಎಂಬುದು ಇಂದಿನ ವಾಸ್ತವ. ಇದು ಮನುಷ್ಯನ ಆರೋಗ್ಯದ ಮೇಲೆ, ನೈಸರ್ಗಿಕ ಸಂಪನ್ಮೂಲಗಳ ಮೇಲೆ ಮತ್ತು ಪರಿಸರದ ಮೇಲೆ ಸರಿಪಡಿಸಲಾಗದ ಪರಿಣಾಮ ಬೀರಿದೆ. ಆದರೆ ಮನುಷ್ಯನ ಜೀವನಕ್ಕೆ ಪೂರಕವಾಗಿರುವ ಸಾಧನಗಳು ಸೀಮಿತ.

1875ರಿಂದ 1975ರ ನಡುವಣ ಅವಧಿಯಲ್ಲಿ ಜನಸಂಖ್ಯೆಯ ಪ್ರಮಾಣದಲ್ಲಿ ಮೂರು ಪಟ್ಟು ಹೆಚ್ಚಳ ಆಗಿದೆ. ಇದೇ ಅವಧಿಯಲ್ಲಿ ಕಂಡುಬಂದಿರುವ ಪ್ರಾಥಮಿಕ ಇಂಧನ ಬಳಕೆಯ ಹೆಚ್ಚಳ 32 ಪಟ್ಟು!ಹವಾಮಾನ ಬದಲಾವಣೆಯ ಪರಿಣಾಮವೆಂಬಂತೆ ನೈಸರ್ಗಿಕ ವಿಕೋಪಗಳ ಸಂಖ್ಯೆ ಹೆಚ್ಚಾಗಿದೆ. 1900ರಲ್ಲಿ ಪ್ರತಿವರ್ಷ 50 ವಿಕೋಪಗಳು ಸಂಭವಿಸುತ್ತಿದ್ದವು. 2000ನೇ ಇಸವಿಯ ವೇಳೆಗೆ ಅವುಗಳ ಸಂಖ್ಯೆ 200ಕ್ಕೆ ಹೆಚ್ಚಳವಾಗಿತ್ತು.

ಜೀವರಕ್ಷಕ ವ್ಯವಸ್ಥೆಯು ಸರಿಪಡಿಸಲಾಗದಷ್ಟು ಹಾಳಾಗಿದೆ. ಇದರಿಂದ ಮನುಷ್ಯನ ಜೀವನಮಟ್ಟ ಹಾಗೂ ಪರಿಸರದ ಗುಣಮಟ್ಟ ಕುಸಿದಿದೆ.

ಯುದ್ಧ ಹಾಗೂ ರಕ್ಷಣಾ ಉದ್ದೇಶಗಳಿಗಾಗಿ ಸಂಪನ್ಮೂಲಗಳನ್ನು ವಿನಿಯೋಗಿಸುವುದರ ಪರ ಇರುವ ನಾಯಕರನ್ನು ಪ್ರಜಾತಂತ್ರ ವ್ಯವಸ್ಥೆಯು ತಿರಸ್ಕರಿಸುತ್ತಿಲ್ಲ.ಇಂದಿನ ವಿಶ್ವದಲ್ಲಿ ಗೌರವ ಸಿಗುವುದು ಶಕ್ತಿವಂತರಿಗೆ ಮಾತ್ರ. ಶಕ್ತಿ ಎಂಬುದು ಜ್ಞಾನ–ಮಾಹಿತಿಯ ರೂಪದಲ್ಲಿರಬಹುದು, ಹಣದ ರೂಪದಲ್ಲಿರಬಹುದು ಅಥವಾ ನೈಸರ್ಗಿಕ ಸಂಪನ್ಮೂಲಗಳ ಮೇಲಿನ ಹಿಡಿತದ ರೂಪದಲ್ಲಿಯೂ ಇರಬಹುದು. ಅಥವಾ ಪರಮಾಣು ಇಂಧನದ ಸಾಮರ್ಥ್ಯವನ್ನು ಆಧರಿಸಿಯೂ  ಇರಬಹುದು. ಬಲಾಢ್ಯರನ್ನು ಮಾತ್ರ ಜಗತ್ತು ಗೌರವಿಸುತ್ತದೆ ಎಂಬುದನ್ನು ಅಬ್ದುಲ್ ಕಲಾಂ ತೋರಿಸಿಕೊಟ್ಟಿದ್ದಾರೆ.ನಮ್ಮ ದೇಶದಲ್ಲಿ ಎಲ್ಲರೂ ತೆರಿಗೆ ಪಾವತಿಸುವುದಿಲ್ಲ. ನಮ್ಮ ಬಹುಪಾಲು ಹಣವನ್ನು ಅಸಾಂಪ್ರದಾಯಿಕ ಇಂಧನ ಮೂಲಗಳಿಗಾಗಿ ವೆಚ್ಚ ಮಾಡಲಾಗುತ್ತಿದೆ. ಸರಳ ಜೀವನ ನಮ್ಮಿಂದ ಸಾಧ್ಯವಿಲ್ಲ. ಹಾಗಾಗಿ ಸದ್ಯದಲ್ಲಿ ಮತ್ತು ಭವಿಷ್ಯದಲ್ಲಿ ಪರಮಾಣು ಇಂಧನದ ಮೇಲಿನ ಅವಲಂಬನೆ ಅನಿವಾರ್ಯವೂ ಹೌದು ವಿವೇಕಯುತವೂ ಹೌದು. ಹಾಗೆಯೇ, ಅಣು ವಿಕಿರಣದಿಂದ ರಕ್ಷಣೆ ಪಡೆಯಲು ತಾಂತ್ರಿಕ ಸಂಶೋಧನೆಗಳು ಆಗಬೇಕು.ಲೇಖಕ ಪರಿಸರ ವಿಜ್ಞಾನಿ, ಇಸ್ರೊ

(ಇಲ್ಲಿ ವ್ಯಕ್ತವಾಗಿರುವುದು ಲೇಖಕರ ವೈಯಕ್ತಿಕ ಅಭಿಪ್ರಾಯ ಮಾತ್ರ)

*

ಸಂವಾದ ನಡೆಯಲಿ


ಕೈಗಾ ಅಣುಸ್ಥಾವರವು ಅಂಗಿ ಕಿಸೆಯಲ್ಲಿ ಇಟ್ಟುಕೊಂಡ ಬೆಂಕಿಕೆಂಡವಿದ್ದಂತೆ. ಅಣು ಸ್ಥಾವರ ಘಟಕ ಸ್ಥಾಪನೆ ವಿಚಾರದಲ್ಲಿ ಪಾರದರ್ಶಕತೆ ಕಾಪಾಡಲಾಗಿಲ್ಲ. ಯಲ್ಲಾಪುರದಲ್ಲಿ 2011ರಲ್ಲಿ ನಡೆದ ಅಣು ಸ್ಥಾವರ ವಿಜ್ಞಾನಿಗಳು, ಪರಿಸರ ತಜ್ಞರ ಜಂಟಿ ಸಭೆಯಲ್ಲಿ ನಾವು ಎತ್ತಿದ ವೈಜ್ಞಾನಿಕ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ದೊರೆತಿಲ್ಲ. ಈಗ 5 ಮತ್ತು 6ನೇ ಘಟಕ ಸ್ಥಾಪನೆಯ ಪೂರ್ವದಲ್ಲಿ ಪುನಃ ಮುಕ್ತ ಸಂವಾದ ನಡೆಸಲಿ.

– ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ,

ಸ್ವರ್ಣವಲ್ಲಿ ಮಠಾಧೀಶ

ಸುರಕ್ಷಾ ಸಮಿತಿ ಬೇಕು

ಅಣು ಸ್ಥಾವರದ ಸುತ್ತಮುತ್ತ ಹಳ್ಳಿಗಳಲ್ಲಿ ನಡೆಸಿರುವ ಆರೋಗ್ಯ ಸಮೀಕ್ಷೆ ಅಧ್ಯಯನದ ಅಂತಿಮ ವರದಿಯನ್ನು ಕೈಗಾ ಘಟಕ ಇನ್ನೂ ಪ್ರಕಟಿಸಿಲ್ಲ. 1 ಲಕ್ಷ ಮರ ಬಲಿ ತೆಗೆದುಕೊಳ್ಳಲಿರುವ 5 ಮತ್ತು 6ನೇ ಘಟಕದ ಯೋಜನೆ ಬೇಡ. ಜಲ, ಜಂಗಲ್, ಜಾನುವಾರು ಮತ್ತು ಜನತೆಯ ಮೇಲೆ ಅಣು ವಿಕಿರಣದಿಂದ ಆಗುವ ದುಷ್ಪರಿಣಾಮದ ಬಗ್ಗೆ ಸ್ವತಂತ್ರ ಅಧ್ಯಯನ ನಡೆಸಬೇಕು.

– ಅನಂತ ಅಶೀಸರ,

ಉತ್ತರ ಕನ್ನಡ ಜಿಲ್ಲಾ ಪರಿಸರ ಸಂರಕ್ಷಣಾ ಸಮಿತಿ ಅಧ್ಯಕ್ಷ

ಕ್ಯಾನ್ಸರ್‌ಗೆ ಆಹ್ವಾನ

30 ವರ್ಷಗಳ ಹಿಂದೆ ‘ಕೈಗಾ ಕೈಗಾ ಎಲ್ಲಿಯವರೆಗೆ? ಕ್ಯಾನ್ಸರ್ ಹತ್ತಿ ಸಾಯುವವರೆಗೆ’ ಎಂದು ಕೈಗಾ ಚಳವಳಿಯಲ್ಲಿ ಘೋಷಣೆ ಹಾಕುತ್ತಿದ್ದೆವು. ಈಗ ಕೈಗಾ ಸುತ್ತ ಇಂತಹುದೇ ರೋಗ ರುಜಿನ ಹೆಚ್ಚಾಗಿದೆ. ಇನ್ನು ಹೊಸ ಘಟಕ ಬೇಡವೇ ಬೇಡ.

– ವಾಸಂತಿ ಹೆಗಡೆ,

ಕೈಗಾ ವಿರೋಧ ಹೋರಾಟಗಾರ್ತಿಪರಿಸರಕ್ಕೆ ಅಪಾಯ

ಪಶ್ಚಿಮಘಟ್ಟದ ಸೂಕ್ಷ್ಮ ಪ್ರದೇಶ ದೇಶದ ದೊಡ್ಡ ಆಸ್ತಿಯಾಗಿದೆ. ಈ ಪ್ರದೇಶದಲ್ಲಿ ಅರಣ್ಯ ನಾಶವಾಗುವ ಯಾವ ಯೋಜನೆಯೂ ಸಾಧುವಲ್ಲ. ಈಗಾಗಲೇ ಬೃಹತ್ ಯೋಜನೆಗಳಿಂದ ಜಿಲ್ಲೆ ನಲುಗಿದೆ. ವಿದ್ಯುತ್ ಉತ್ಪಾದನೆ ಹೆಚ್ಚಳಕ್ಕೆ ಅಣು ವಿದ್ಯುತ್ ಸ್ಥಾವರ ನಿರ್ಮಾಣ ಅನಿವಾರ್ಯವಾದರೆ ಸರ್ಕಾರ ಇನ್ನೆಲ್ಲಾದರೂ ಈ ಯೋಜನೆ ಅನುಷ್ಠಾನಗೊಳಿಸಲಿ. ಪಶ್ಚಿಮಘಟ್ಟದ ಪರಿಸರಕ್ಕೆ ಹಾನಿಯಾಗಿದರೆ ಭವಿಷ್ಯದಲ್ಲಿ ಜಲಕ್ಷಾಮದ ಸಮಸ್ಯೆ ಬಿಗಡಾಯಿಸಬಹುದು.

– ಪ್ರೊ.ಎಂ.ಡಿ. ಸುಭಾಸ್‌ಚಂದ್ರನ್,

ವಿಜ್ಞಾನಿ (ಸಸ್ಯ ವಿಜ್ಞಾನ)ವೈಜ್ಞಾನಿಕ ಅಧ್ಯಯನ ಆಗಿಲ್ಲ

ಅಣು ಸ್ಥಾವರದ ಸುತ್ತಲಿನ ಪ್ರದೇಶದ ಮಣ್ಣು, ಗಾಳಿ, ನೀರಿನಲ್ಲಿರುವ ವಿಕಿರಣದ ಪ್ರಮಾಣವನ್ನು ವೈಜ್ಞಾನಿಕವಾಗಿ ಅಳೆಯಲಾಗುತ್ತಿಲ್ಲ. ಪಶ್ಚಿಮಘಟ್ಟ ಶ್ರೇಣಿಯ ಕೃಷಿಸಸ್ಯ, ಕಾಡು ಹಾಗೂ ವನ್ಯ ಜೀವಿಗಳ ಮೇಲಾಗುವ ದೀರ್ಘಕಾಲೀನ ಪರಿಣಾಮಗಳ ಬಗ್ಗೆ ಸರ್ಕಾರಕ್ಕೆ ಕಾಳಜಿ ಇಲ್ಲ.

– ಕೇಶವ ಕೊರ್ಸೆ,

ಸಸ್ಯಶಾಸ್ತ್ರಜ್ಞ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry