ದೊಡ್ಡ ಮರಗಳಿಂದ ಹೊಸ ಗಿಡಗಳ ಕಸಿ

7

ದೊಡ್ಡ ಮರಗಳಿಂದ ಹೊಸ ಗಿಡಗಳ ಕಸಿ

Published:
Updated:
ದೊಡ್ಡ ಮರಗಳಿಂದ ಹೊಸ ಗಿಡಗಳ ಕಸಿ

ಒಂದೊಂದು ನೆನಪಿಗೂ ಒಂದೊಂದು ವಾಸನೆ

ಲೇ:
ಎಸ್. ದಿವಾಕರ್

ಪ್ರ: ಅಂಕಿತ ಪುಸ್ತಕ, ಗಾಂಧಿ ಬಜಾರ್‌, ಬಸವನಗುಡಿ, ಬೆಂಗಳೂರು – 560004

**

ಕತೆಗಾರ ಎಸ್. ದಿವಾಕರ್ ಅವರ ಪ್ರಬಂಧಗಳ ಸಂಕಲನ ‘ಒಂದೊಂದು ನೆನಪಿಗೂ ಒಂದೊಂದು ವಾಸನೆ’ ತನ್ನ ಇಂದ್ರಿಯಗಮ್ಯ ಬರಹಗಳಿಂದ ವಾಚಕರನ್ನು ಸೆಳೆಯುವಂತೆ ಇದೆ. ದಿವಾಕರ್‌ ಅವರ ಬರವಣಿಗೆ ಕತೆ, ಅನುವಾದ, ವಿಮರ್ಶೆ, ಕಾವ್ಯ ಮತ್ತಿತರ ಸಾಹಿತ್ಯದ ಪ್ರಕಾರಗಳಲ್ಲಿ ಹರಡಿಹೋಗಿದೆಯಷ್ಟೆ. ಇಲ್ಲಿನ ಪ್ರಬಂಧಗಳೂ ವಿಸ್ತಾರ ವ್ಯಾಪ್ತಿಯ ಅವರ ಓದು, ಜಗತ್ತಿನ ಕುರಿತ ತೀವ್ರ ಕುತೂಹಲ, ಆಸಕ್ತಿಯ ಫಲಿತಗಳಾಗಿವೆ. ಕನ್ನಡ ಮತ್ತು ವಿಶ್ವ ಸಾಹಿತ್ಯದ ಓದು, ದೈನಿಕದ ಆಗುಹೋಗುಗಳು ಇಲ್ಲಿನ ಪ್ರಬಂಧಗಳ ದೇಹವನ್ನು ರೂಪಿಸಿವೆ. ಇದಿಷ್ಟೇ ಈ ಪ್ರಬಂಧಗಳ ಸ್ವರೂಪ ಎಂದು ಓದುಗರು ಅಂತಿಮ ತೀರ್ಮಾನಕ್ಕೆ ಬರುವಂತಿಲ್ಲ. ಅವರು ಚಿತ್ರಕಲೆ, ಸಂಗೀತದ ಕಡೆಗೂ ಹೊರಳಿಕೊಳ್ಳುತ್ತಾರೆ. ಪತ್ರಿಕೋದ್ಯಮ, ಭಾಷೆ, ಜನಪದ ಹಾಡು, ಹುಲ್ಲು, ನಗರದ ಮರಗಳು, ರಾಜಕೀಯ ಕೂಡ ಅವರ ಈ ಪ್ರಬಂಧಗಳ ವಸ್ತು.

‘ನನ್ನ ಮಟ್ಟಿಗೆ ಹೇಳುವುದಾದರೆ ಕನ್ನಡದಲ್ಲಿ ಪ್ರಬಂಧಗಳ ಎರಡು ಮಾದರಿಗಳಿವೆ: ಒಂದು ಎ.ಎನ್‌. ಮೂರ್ತಿರಾಯರದು; ಇನ್ನೊಂದು ಪು.ತಿ.ನ. ಅವರದು. ಮೂರ್ತಿರಾಯರ ಪ್ರಬಂಧಗಳ ಸೊಗಸು, ಲಾಲಿತ್ಯ, ಭಾವಗೀತೆಯ ಗುಣ ಪು.ತಿ.ನ. ಪ್ರಬಂಧಗಳಲ್ಲಿಲ್ಲ; ಪು.ತಿ.ನ. ಅವರ ಪ್ರಬಂಧಗಳಲ್ಲಿ ಕಾಣುವ ಗಾಢವಾದ ವಿಚಾರ ಲಹರಿ ಮೂರ್ತಿರಾಯರ ಪ್ರಬಂಧಗಳಲ್ಲಿಲ್ಲ. ಈ ಎರಡೂ ಮಾದರಿಗಳನ್ನು ಒಟ್ಟಿಗೆ ತರುವ ಜೊತೆಜೊತೆಗೇ ನಾನು ಓದಿದ್ದಕ್ಕೂ ಕಂಡದ್ದಕ್ಕೂ ಕೇಳಿದ್ದಕ್ಕೂ ಅರ್ಥಪೂರ್ಣ ಸಂಬಂಧಗಳನ್ನು ಕಲ್ಪಿಸಿ ಬರೆದರೆ ಹೇಗೆ? ಅಂಥ ಚಿಂತನೆಯ ಫಲವೇ ಇತ್ತೀಚಿನ ನನ್ನ ಕೆಲವು’ ಎಂದು ತಮ್ಮ ಪ್ರಬಂಧಗಳ ಸ್ಥೂಲ ಸ್ವರೂಪದ ಬಗ್ಗೆ ಇದೇ ಸಂಕಲನದ ‘ಪ್ರಬಂಧ: ಹಲವು ಪ್ರಕಾರಗಳ ಸಂಕರರೂಪ’ದಲ್ಲಿ ಬರೆದುಕೊಂಡಿದ್ದಾರೆ. ಕನ್ನಡದ್ದೇ ಇಬ್ಬರು ಮುಖ್ಯ ಬರಹಗಾರರ ಪ್ರಬಂಧಗಳು ದಿವಾಕರ್‌ ಅವರ ಪ್ರಬಂಧಗಳ ಹಿನ್ನೆಲೆಯಲ್ಲಿವೆ. ಮಾತ್ರವಲ್ಲ, ಅವು ನಮ್ಮ ಕನ್ನಡದ ದೊಡ್ಡ ಮರಗಳಿಂದಲೇ ಹೊಸ ಗಿಡಗಳ ಕಸಿ ಮಾಡಿ ಫಲ ಪಡೆಯಬಹುದು ಎಂಬುದನ್ನು ತೋರಿವೆ. ಅದನ್ನು ಕನ್ನಡ ಪ್ರಬಂಧಗಳ ಸದ್ಯದ ಚಿಂತನೆ, ಮೀಮಾಂಸೆಯನ್ನಾಗಿಯೂ ಓದಿಕೊಳ್ಳಬಹುದು.

ಇಲ್ಲಿನ ಸಾಹಿತ್ಯ ಸಂಬಂಧಿ ಪ್ರಬಂಧಗಳು ಲೇಖಕ, ಭಾಷೆ, ಮತ್ತು ಕಲೆಯ ಕಸುಬುಗಾರಿಕೆ (ಒಟ್ಟಾರೆ ಕಲೆಗಾರಿಕೆ)ಯ ಬಗ್ಗೆ ಮಾತನಾಡುತ್ತವೆ. ಸಂಕಲನಕ್ಕೆ ಹೆಸರು ಕೊಟ್ಟ ಪ್ರಬಂಧವೂ ಸೇರಿದಂತೆ ಇಲ್ಲಿನ ಬಹುಪಾಲು ಬರಹಗಳು ಸಾಹಿತ್ಯ ಸಂಬಂಧಿ ಇಲ್ಲವೇ ಅದರ ಒಡಲೊಳಗಿನಿಂದ ಹುಟ್ಟಿದವು. ಇಲ್ಲವೇ ಅದರೊಂದಿಗೆ ಸಾವಯವ ಸಂಬಂಧ ಇರಿಸಿಕೊಂಡಂತಹವು. ಎಲ್ಲ ಬರಹಗಳೂ ಅಗಾಧ ಓದಿನ ವಿಸ್ತಾರವಿರುವ, ಬಹುಕಾಲದಿಂದ ಕನ್ನಡ ಮತ್ತು ವಿಶ್ವಸಾಹಿತ್ಯ, ಸಾಹಿತಿಗಳನ್ನು ಗಮನಿಸುತ್ತ, ಗ್ರಹಿಸುತ್ತ ಬಂದ ದಿವಾಕರ್‌ ಅವರು ಸಾಗಿ ಬಂದ ದಾರಿಯ ಚಿತ್ರಣಗಳೇ ಆಗಿವೆ. ಇದನ್ನು ಹೊರಗಿಟ್ಟು ನೋಡಿದರೂ ಸಾಹಿತ್ಯಕ್ಕಾಗಿ ಪ್ರತಿಕ್ಷಣ ಮಿಡಿದ ಪ್ರಜ್ಞಾವಂತ ವ್ಯಕ್ತಿಯೊಬ್ಬನ ಹುಡುಕಾಟವನ್ನಾಗಿ ಕಾಣುವ ಅವಕಾಶವೊಂದು ಓದುಗರಿಗಿದ್ದೇ ಇದೆ.

ಈ ಹುಡುಕಾಟಕ್ಕೆ ತಕ್ಕನಾಗಿ ಅವರು ಅನೇಕ ಕಡೆಗಳಿಂದ ವಿವರಗಳನ್ನು ತಮ್ಮ ಪ್ರಬಂಧಗಳಲ್ಲಿ ಜೋಡಿಸುತ್ತಾರೆ. ಅದು ಹಿಮ್ಮುಖವಾಗಿ ಚಲಿಸುವ ನೆನಪುಗಳಿರಬಹುದು; ಇಲ್ಲವೇ ಅವರು ಓದಿದ ಸಾಹಿತ್ಯ ಕೃತಿಗಳ, ಲೇಖಕರ ಉಲ್ಲೇಖವಿರಬಹುದು, ವರ್ತಮಾನದ ಸಂಗತಿಗಳಿರಬಹುದು, ಸಮಕಾಲೀನ ಸಾಹಿತ್ಯದ ಹಲವು ದಿಕ್ಕುಗಳ ಚಿಂತನೆ ಕೂಡ ಇರಬಹುದು. ಅಂತಿಮವಾಗಿ ಅವರ ಪ್ರಬಂಧಗಳಿಂದ ಹೊರಡುವ ಪ್ರಬಂಧ ಧ್ವನಿ ಹಲವರಾರು ಬಣ್ಣ, ವಾಸನೆ, ರುಚಿಗಳ ಮೂಲಕ ವಿಶಿಷ್ಟವಾದ ಜೀವಂತ ಆಕಾರವೊಂದನ್ನು ಓದುಗನ ಮನಸ್ಸಿನಲ್ಲಿ ಸೃಜಿಸಿರುತ್ತದೆ. ಇಲ್ಲಿನ ‘ತೋರುಬೆರಳು ತೋರಲೇಕೆ?’ ಪ್ರಬಂಧ ನಮ್ಮ ತೋರುಬೆರಳನ ಕುರಿತಾಗಿ ಮಾತ್ರವಿಲ್ಲ; ಅದು ವಿಶ್ವ ತೋರುಬೆರಳೂ ಆಗುತ್ತದೆ; ಅದರ ಹಿಂದೆ ಹೆಣೆದುಕೊಂಡಿರುವ ಅಪರಾಧ, ಭಾಷೆ, ಶಿಕ್ಷಣ, ಕೊನೆಗೆ ನಮ್ಮ ದೇವರ ವರೆಗೆ ತಂದು ನಿಲ್ಲಿಸುತ್ತದೆ. ತೋರುಬೆರಳು ಯಾವೆಲ್ಲ ವಲಯಗಳನ್ನು ತನ್ನ ಮಂದ್ರ ಲಯದಲ್ಲಿ ಮುಟ್ಟಿ ಬರುತ್ತದೆ ಎಂಬುದು ಕೆಲಕಾಲ ಓದುಗರಲ್ಲಿ ಅಚ್ಚರಿ ಮೂಡಿಸುತ್ತದೆ. ಅಚ್ಚರಿಗೊಳಿಸುವುದು ಮಾತ್ರ ಅವರ ಬರವಣಿಗೆಯ ಉದ್ದೇಶವಲ್ಲ. ಅಂತಿಮವಾಗಿ ಅದು ಚಿಂತನೆಗೆ ದಾರಿ ಮಾಡಿಕೊಡುತ್ತದೆ. ಅಲ್ಲದೇ ಈ ಪ್ರಬಂಧಗಳ ಆಕಾರ ಪೂರ್ತಿಯಾಗಿ ಸಣ್ಣಕತೆಯದು. ಹಾಗೆ ತಕ್ಷಣಕ್ಕೆ ಉಲ್ಲೇಖಿಸಬಹುದಾದ ಪ್ರಬಂಧವೆಂದರೆ: ‘ಸಂಬಂಧಗಳು’.

ಮನುಷ್ಯ ಚೈತನ್ಯ ಮುಟ್ಟಲು ಪ್ರಯತ್ನಿಸಿದ ಎಲ್ಲ ಪ್ರಕಟಿತ ಕಲೆ, ವಿಚಾರಗಳನ್ನು ದಿವಾಕರ್‌ ಒಳಗೊಳ್ಳಲು ಪ್ರಯತ್ನಿಸುತ್ತಾರೆ; ಮತ್ತು ಅದು ತಮಗೆ ಕಂಡ ಬಗೆಯನ್ನು ಕಾಣಿಸಲು ಹವಣಿಸುತ್ತಾರೆ. ಇವೆಲ್ಲವೂ ಆಧುನಿಕ ವಿದ್ಯಾಭ್ಯಾಸ ಪಡೆದ, ಬದುಕನ್ನು ಕಂಡ ಮನುಷ್ಯನ ಆಸಕ್ತಿ, ಕುತೂಹಲಗಳನ್ನೇ ವಸ್ತುವನ್ನಾಗಿ ಇಟ್ಟುಕೊಂಡು ನಿರೂಪಿಸುತ್ತವೆ. ಸಹಜವಾಗಿಯೇ ಅತ್ಯಾಧುನಿಕವಾದ ನಗರ ಬದುಕು, ಅದರಿಂದ ರೂಪುಗೊಂಡ ಮನಸ್ಸಿನ ಚಲನೆ ಇಲ್ಲಿ ಹರಿಯುತ್ತದೆ. ಅದು ನಮ್ಮ ವಾಸ್ತವ ಲೋಕದ ಪರಿಧಿಯೊಳಗೇ ಇದೆ. ಆ ಲೋಕದ ಪರಿಧಿಗಳನ್ನು ಸ್ಪರ್ಶಿಸುತ್ತ ದರ್ಶಿಸುವ ಕಾಣ್ಕೆ ಹೊಸದಾಗಿದೆ. ದಿವಾಕರ್‌ ಬರಹಗಳ ಒಟ್ಟಾರೆ ಗುಣವೇ ಇದಾಗಿದೆ.

ಜಗತ್ತಿನ ಸಾಹಿತ್ಯದ ಪಯಣಿಗನ ಅನೇಕ ನೋಟಗಳು ಈ ಪ್ರಬಂಧಗಳಲ್ಲಿದೆ. ಅವರು ತಮ್ಮ ಈ ಬರವಣಿಗೆಯಲ್ಲಿ ಜಗತ್‌ ಸಾಹಿತ್ಯದ ಯಾವ ಮೂಲೆಗೆ ಹೋದರೂ ಅಂತಿಮವಾಗಿ ಮರಳುವುದು ಕನ್ನಡ ಸಾಹಿತ್ಯ, ಸಾಹಿತಿಗಳಿಗೆ. ಕನ್ನಡ ಸಾಹಿತ್ಯವನ್ನು ಬೇರೊಂದು ನೋಟ, ಬೆಳಕಿನಲ್ಲಿ ನೋಡುವಂತೆ ಪ್ರೇರೇಪಿಸುವುದು ಈ ಪ್ರಬಂಧಗಳ ಮಹತ್ವದ ಗುಣವೇ ಆಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry