7

ಹೆಚ್ಚು ಸಂಖ್ಯೆಯಲ್ಲಿ ಇರುವವರನ್ನು ಅಲಕ್ಷಿಸಲು ಆದೀತೇ?...

Published:
Updated:
ಹೆಚ್ಚು ಸಂಖ್ಯೆಯಲ್ಲಿ ಇರುವವರನ್ನು ಅಲಕ್ಷಿಸಲು ಆದೀತೇ?...

ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರ ಬದಲಾವಣೆ ಆಗುತ್ತದೆಯೇ? ಈಗ ರಾಜ್ಯದ ರಾಜಕೀಯ ವಲಯದಲ್ಲಿ ಇದಕ್ಕಿಂತ ಹೆಚ್ಚು ಚರ್ಚೆ ಆಗುತ್ತಿರುವ ಇನ್ನೊಂದು ವಿಚಾರ ಇದ್ದಂತೆ ಇಲ್ಲ. ಏಕೆಂದರೆ ಮುಂದಿನ ವರ್ಷ ಮೇ ತಿಂಗಳಿಗಿಂತ ಮುಂಚೆ ನಡೆಯುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಕಾರ್ಯತಂತ್ರ ಏನಾಗಿರಬಹುದು ಎಂಬುದಕ್ಕೆ ಕೆಪಿಸಿಸಿ ಅಧ್ಯಕ್ಷರು ಯಾರಾಗಿರಬೇಕು ಎಂಬುದು ಒಂದು ದಿಕ್ಸೂಚಿಯಾಗಿದೆ.

ಕಳೆದ ಆರು ವರ್ಷಗಳಿಗಿಂತ ಹೆಚ್ಚು ಅವಧಿಯಿಂದ ಡಾ.ಜಿ.ಪರಮೇಶ್ವರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದಾರೆ. ಅವರು ಈಗ ಗೃಹ ಸಚಿವರೂ ಆಗಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಹುದ್ದೆಯಲ್ಲಿ ಮುಂದುವರಿಯಲು ಪ್ರಬಲ ಆಕಾಂಕ್ಷಿಯಾಗಿರುವ ಅವರು ಅಗತ್ಯ ಬಿದ್ದರೆ ಸಚಿವ ಹುದ್ದೆಯನ್ನು ತೊರೆಯಲು ಸಿದ್ಧ ಎಂದಿದ್ದಾರೆ. ಅವರ ಜಾಗದ  ಮೇಲೆ ಕಣ್ಣು ಇಟ್ಟಿರುವ ಇತರರು ಎಂದರೆ ಒಕ್ಕಲಿಗರಾದ ಡಿ.ಕೆ.ಶಿವಕುಮಾರ್‌,  ಲಿಂಗಾಯತರಾದ ಎಂ.ಬಿ.ಪಾಟೀಲ್‌  ಹಾಗೂ ಎಸ್‌.ಆರ್‌.ಪಾಟೀಲ್. ಎಸ್‌.ಆರ್‌.ಪಾಟೀಲರು ಮುಖ್ಯಮಂತ್ರಿಯವರ ಅಭ್ಯರ್ಥಿ ಎಂದು ಬಹಳ ದಿನಗಳಿಂದ ಹೇಳಲಾಗುತ್ತಿದೆ.

ಹಾಗಾದರೆ ಈಗ ಇರುವ ಒಬ್ಬ ದಲಿತ ಅಧ್ಯಕ್ಷರನ್ನು ಬದಲಿಸಿ ಲಿಂಗಾಯತರನ್ನು ತರುವ ಮೂಲಕ ಮುಂದಿನ ಚುನಾವಣೆಯ ನೇತೃತ್ವವನ್ನು ತಾನೇ ವಹಿಸಿಕೊಳ್ಳುವೆ ಎಂದು ಈಗಾಗಲೇ ಘಂಟಾಘೋಷವಾಗಿ ಸಾರಿರುವ ಮುಖ್ಯಮಂತ್ರಿ ಹಾಗೂ ಹಿಂದುಳಿದ ವರ್ಗದ ನಾಯಕ ಸಿದ್ದರಾಮಯ್ಯ ಏನು ಹೇಳಲು ಬಯಸುತ್ತಾರೆ? ದಲಿತರ ಮತಗಳು ಪಕ್ಷಕ್ಕೆ ಬೇಡ ಎಂತಲೇ? ಅಥವಾ ಅಗತ್ಯ ಅಲ್ಲ ಅಂತಲೇ?

ಪಕ್ಷದ ಅಧ್ಯಕ್ಷನಾಗಿರುವುದು ಎಂದರೆ ಅವರೂ ಮುಖ್ಯಮಂತ್ರಿ ಹುದ್ದೆಗೆ ಸ್ಪರ್ಧಿ ಎಂದೇ ಅರ್ಥ. ಪಕ್ಷವನ್ನು ಗೆಲ್ಲಿಸಿಕೊಂಡು ಬರಬೇಕು ಹಾಗೂ ಶಾಸಕಾಂಗ ಪಕ್ಷದ ಸಭೆಯಲ್ಲಿ ನಾಯಕತ್ವಕ್ಕೆ ಸ್ಪರ್ಧಿಸಬೇಕು. ಬಹುಸಂಖ್ಯಾತ ಶಾಸಕರ ಬೆಂಬಲ ಸಿಕ್ಕರೆ ಅವರೇ ಮುಖ್ಯಮಂತ್ರಿ ಎಂದೂ ಅರ್ಥ. ಇದು ಆಂತರಿಕ ಪ್ರಜಾಪ್ರಭುತ್ವ ಪ್ರಬಲವಾಗಿರುವ ಪಕ್ಷಗಳಲ್ಲಿ ನಡೆದುಕೊಂಡು ಬಂದಿರುವ ರೀತಿ. ಇಲ್ಲವಾದರೆ ಹೈಕಮಾಂಡ್‌ ಹೇಳುವ ಅಭ್ಯರ್ಥಿಗೇ ಶಾಸಕರೂ ಬೆಂಬಲ ಸೂಚಿಸಿ ಅವರನ್ನೇ ನಾಯಕರನ್ನಾಗಿ ಆಯ್ಕೆ ಮಾಡುತ್ತಾರೆ. 2013ರ ಚುನಾವಣೆಯಲ್ಲಿ ಪರಮೇಶ್ವರ್‌ ಅವರು ಗೆದ್ದಿದ್ದರೆ ಅವರೂ ಮುಖ್ಯಮಂತ್ರಿ ಹುದ್ದೆಗೆ ಖಂಡಿತ ಅಭ್ಯರ್ಥಿ ಆಗಿರುತ್ತಿದ್ದರು. ದಲಿತರಲ್ಲಿ ಈಗಲೂ ಇರುವ ಭಾವನೆ ಏನು ಎಂದರೆ, ‘ಅದೇ ಕಾರಣಕ್ಕಾಗಿ ಅವರನ್ನು ಕೊರಟಗೆರೆಯಲ್ಲಿ ಸೋಲಿಸಲಾಯಿತು.’

ಈಗಲೂ ಪರಮೇಶ್ವರ್ ಅವರನ್ನು ಅಧ್ಯಕ್ಷ ಹುದ್ದೆಯಿಂದ ಸರಿಸುವ ಪ್ರಯತ್ನ ಏಕೆ ನಡೆದಿವೆ ಎಂದರೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಮತ್ತೆ ಬಹುಮತ ಸಿಕ್ಕರೆ ಪರಮೇಶ್ವರ್‌ ಖಂಡಿತ ಮುಖ್ಯಮಂತ್ರಿ ಹುದ್ದೆಗೆ ತಮ್ಮ ಹ್ಯಾಟನ್ನು ಎಸೆಯುತ್ತಾರೆ. ಶಿವಕುಮಾರ್‌ ಅಂಥ ಇನ್ನೊಬ್ಬ ಪ್ರತಿಸ್ಪರ್ಧಿ. ಎಸ್‌.ಆರ್‌.ಪಾಟೀಲ್‌ ಅಂಥ ಸ್ಪರ್ಧಿ ಅಲ್ಲ. ಅದಕ್ಕಿಂತ ಮುಖ್ಯವಾಗಿ ಮುಂದಿನ ಚುನಾವಣೆಗೆ ಅಭ್ಯರ್ಥಿಗಳಿಗೆ ಟಿಕೆಟ್‌ ಕೊಡುವಾಗ ತಮ್ಮ ಮಾತು ನಡೆಯಬೇಕು ಎಂದು ಯಾವ ನಾಯಕನಾದರೂ ಬಯಸುತ್ತಾನೆ. ಪರಮೇಶ್ವರ್ ಅಥವಾ ಶಿವಕುಮಾರ್‌ ಅವರು ಅಧ್ಯಕ್ಷರಾದರೆ ತಮ್ಮ ಮಾತು ನಡೆಯದೇ ಇರಬಹುದು ಎಂದು ಸಿದ್ದರಾಮಯ್ಯನವರಿಗೆ ಅನಿಸುತ್ತ ಇದ್ದರೆ ಅದು ಸಹಜ ಅಳುಕು. ಎಸ್‌.ಆರ್‌.ಪಾಟೀಲರನ್ನು ಅಧ್ಯಕ್ಷ ಹುದ್ದೆಗೆ ಅವರು ಮುಂದೆ ಮಾಡುತ್ತಿರುವುದು ಟಿಕೆಟ್‌ ಹಂಚಿಕೆಯಲ್ಲಿ ತಮ್ಮ ಕೈ ಮೇಲಾಗಬೇಕು ಎಂಬ ಕಾರಣಕ್ಕಾಗಿಯೇ ಎನ್ನುವುದು ಪುಟ್ಟ ಮಕ್ಕಳಿಗೂ ಅರ್ಥವಾಗುತ್ತದೆ.

ಟಿಕೆಟ್‌ ಹಂಚಿಕೆಯಲ್ಲಿ ತಮ್ಮ ಕೈ ಮೇಲೆ ಆಗಬೇಕು ಎಂಬ ಕಾರಣಕ್ಕಾಗಿಯೇ ಪರಮೇಶ್ವರ್‌ ಅವರು ಅಧ್ಯಕ್ಷರಾಗಿ ಮುಂದುವರಿಯಲು ಬಯಸಿದ್ದಾರೆ. ಶಿವಕುಮಾರ್‌ ಮತ್ತು ಎಂ.ಬಿ.ಪಾಟೀಲರು ಸಚಿವ ಹುದ್ದೆ ಜೊತೆಗೆ ಅಧ್ಯಕ್ಷಗಿರಿ ಬೇಕು ಎಂದು ಕೇಳಿದ್ದರೆ ಸಚಿವ ಹುದ್ದೆಯನ್ನು ತ್ಯಾಗ ಮಾಡಿಯಾದರೂ ಅಧ್ಯಕ್ಷರಾಗಿ ಉಳಿಯಲು ಪರಮೇಶ್ವರ್‌ ಬಯಸಿದ್ದಾರೆ.

ಪಕ್ಷದ ಅಧ್ಯಕ್ಷರಾಗಿ ಮುಂದುವರಿಯಬೇಕು ಎಂದು ಅವರು ಬಯಸುವುದರಲ್ಲಿ ಮುಖ್ಯಮಂತ್ರಿ ಆಗಬೇಕು ಎಂಬ ವೈಯಕ್ತಿಕ ಆಕಾಂಕ್ಷೆ ಜೊತೆಗೆ ಕಳೆದ ಕೆಲವು ವರ್ಷಗಳಲ್ಲಿ ದಲಿತ ವ್ಯಕ್ತಿಯೊಬ್ಬ ಮುಖ್ಯಮಂತ್ರಿ ಆಗಬೇಕು ಎಂದು ಆ ಸಮುದಾಯದಲ್ಲಿ ಗರಿಗೆದರಿರುವ ಹೊಸ ಹಂಬಲವೂ ಜೊತೆಯಾಗಿ ಸೇರಿಕೊಂಡಿದೆ. ಈಗಿನ ರಾಜಕೀಯ ಸ್ಥಿತಿಯಲ್ಲಿ ದಲಿತರೊಬ್ಬರು ಮುಖ್ಯಮಂತ್ರಿ ಆಗಬಹುದು ಎನ್ನುವುದಾದರೆ ಅದು ಕಾಂಗ್ರೆಸ್ಸಿನಲ್ಲಿ ಮಾತ್ರ ಸಾಧ್ಯ. ಬಿಜೆಪಿಯಲ್ಲಿ ಈ ಸಾರಿ ಲಿಂಗಾಯತ ನಾಯಕನನ್ನೇ ತನ್ನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಶುಕ್ರವಾರ ಮತ್ತೆ ಸಾರಲಾಗಿದೆ. ಜೆ.ಡಿ.(ಎಸ್‌)ನಲ್ಲಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಅಭ್ಯರ್ಥಿ ಎಂದೂ ಪ್ರಕಟಿಸಲಾಗಿದೆ.

ಪರಮೇಶ್ವರ್‌ ಅವರು ಅಧ್ಯಕ್ಷರಾಗಿ ಮುಂದುವರಿಯಬೇಕು ಎಂದು ಬಯಸುವುದರಲ್ಲಿ ಇನ್ನೂ ಒಂದು ಮಹತ್ವದ ಕಾರಣ ಇದೆ. ನಮ್ಮ ಪತ್ರಿಕೆಯಲ್ಲಿಯೇ ಮೇ 13ನೇ ತಾರೀಖು ಪ್ರಕಟವಾದ ಜಾತಿಗಳ ಸಾಮಾಜಿಕ ಸ್ಥಿತಿಗತಿ ವರದಿಯ ಪ್ರಕಾರ, ರಾಜ್ಯದಲ್ಲಿ ದಲಿತರು ಅತಿ ಹೆಚ್ಚು ಅಂದರೆ 1.08 ಕೋಟಿ ಇದ್ದಾರೆ. ಪರಿಶಿಷ್ಟ ಪಂಗಡದ ಜನರು 40 ಲಕ್ಷದಷ್ಟು ಇದ್ದಾರೆ. ಅಂದರೆ ಒಂದೂವರೆ ಕೋಟಿ ಜನರು ಪರಿಶಿಷ್ಟ ಜಾತಿ ಹಾಗೂ ವರ್ಗಕ್ಕೆ ಸೇರಿದವರು ಇದ್ದಾರೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಇರುವ ಅಥವಾ ಇದಕ್ಕೆ ಹತ್ತಿರ ಬರುವಷ್ಟು ಪ್ರಮಾಣದಲ್ಲಿ ಇರುವ ಸಮುದಾಯ ಇನ್ನೊಂದು ಇಲ್ಲ.

‘ಅಲ್ಪಸಂಖ್ಯಾತ, ಹಿಂದುಳಿದ ಮತ್ತು ದಲಿತ ವರ್ಗಗಳ ಬೆಂಬಲದಿಂದ ನಡೆಯುವ’ ಒಂದು ಸರ್ಕಾರದ ಪಕ್ಷ ಇಷ್ಟು ದೊಡ್ಡ ಸಂಖ್ಯೆಯ ಸಮುದಾಯಕ್ಕೆ ಸೇರಿದ ಒಬ್ಬ ನಾಯಕನನ್ನು ಹೇಗೆ ಅಧ್ಯಕ್ಷ ಹುದ್ದೆಯಿಂದ ಕೆಳಗೆ ಇಳಿಸಿ ಮುಖ್ಯಮಂತ್ರಿ ಸ್ಪರ್ಧಿ ಆಗುವ ಸಾಧ್ಯತೆಯನ್ನು ತಪ್ಪಿಸಿ ಚುನಾವಣೆ ಎದುರಿಸುತ್ತದೆ? ಚುನಾವಣೆಯಲ್ಲಿ ಸಮುದಾಯಗಳು ಹೇಗೆ ವರ್ತಿಸುತ್ತವೆ ಎಂಬುದನ್ನು ಕರ್ನಾಟಕದ ಅನೇಕ ಚುನಾವಣೆಗಳು ತೋರಿಸಿವೆ. 1994ರಲ್ಲಿ ದೇವೇಗೌಡರು ಮುಖ್ಯಮಂತ್ರಿ ಆಗಬಹುದು ಎಂದು ಅನಿಸಿದಾಗ ಒಕ್ಕಲಿಗ ಸಮುದಾಯ ಇಡಿಯಾಗಿ ಜನತಾದಳ ಪಕ್ಷದ ಬೆಂಬಲಕ್ಕೆ ನಿಂತ ಹಾಗೆಯೇ ಎಸ್‌.ಎಂ.ಕೃಷ್ಣ ಮುಖ್ಯಮಂತ್ರಿ ಆಗಬಹುದು ಎಂದು ಅನಿಸಿದಾಗ 1999ರಲ್ಲಿ ಕಾಂಗ್ರೆಸ್‌ ಬೆಂಬಲಕ್ಕೂ ನಿಂತಿತ್ತು. 1989ರಲ್ಲಿ ವೀರೇಂದ್ರ ಪಾಟೀಲರು ಮುಖ್ಯಮಂತ್ರಿ ಆಗಬಹುದು ಎನಿಸಿದಾಗ ಲಿಂಗಾಯತ ಸಮುದಾಯ ಕಾಂಗ್ರೆಸ್‌ ಬೆಂಬಲಕ್ಕೆ ನಿಂತಿತ್ತು. 2013ರ ಚುನಾವಣೆಯಲ್ಲಿ  ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಬಹುದು ಎಂದು ಹಿಂದುಳಿದ ವರ್ಗಗಳು, ವಿಶೇಷವಾಗಿ ಕುರುಬ ಸಮುದಾಯ ಕಾಂಗ್ರೆಸ್‌ ಬೆಂಬಲಕ್ಕೆ ಬಂತು.  ಅಂದರೆ, ಪರಮೇಶ್ವರ್ ಅವರು ಅಧ್ಯಕ್ಷರಾಗಿ ಮುಂದುವರಿದರೆ ದಲಿತರೂ ಅದೇ ರೀತಿ ಕಾಂಗ್ರೆಸ್‌ ಪಕ್ಷಕ್ಕೆ ಒಟ್ಟಾಗಿ ಮತ ಹಾಕಬಹುದು ಎಂದು ನಿರೀಕ್ಷಿಸಬಹುದು. ಒಂದು ದಿನ ನಮ್ಮವನೂ  ಒಬ್ಬ ಮುಖ್ಯಮಂತ್ರಿ ಆಗಲಿ ಎಂದು ಆ ಸಮುದಾಯ ಆಶಿಸದೇ ಇರುತ್ತದೆಯೇ?

ಆದರೆ, ಕಾಂಗ್ರೆಸ್‌ ಪಕ್ಷ ದಲಿತ ಅಧ್ಯಕ್ಷನನ್ನು ಬದಲಿಸಬಹುದು ಮತ್ತು ಆ ಕಾರಣಕ್ಕಾಗಿ ಅಸಮಾಧಾನಗೊಳ್ಳುವ ದಲಿತರನ್ನು ಓಲೈಸಬೇಕು ಎಂದು ಬಿಜೆಪಿ ಈಗಾಗಲೇ ದಲಿತರ ಮನೆಯಲ್ಲಿ ಉಪಾಹಾರದ ರಾಜಕೀಯ ತಂತ್ರಕ್ಕೆ ಕೈ ಹಾಕಿದೆ. ಪರಮೇಶ್ವರ್ ಅವರು ಬಲಗೈ ದಲಿತ ಸಮುದಾಯಕ್ಕೆ ಸೇರಿದ್ದು ಬಿಜೆಪಿಯು ಎಡಗೈ ದಲಿತ ಸಮುದಾಯದವರನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ರಾಜಕೀಯ ತಂತ್ರವನ್ನು ಮೊದಲಿನಿಂದಲೂ ಅನುಸರಿಸಿಕೊಂಡು ಬಂದಿದೆ. ರಮೇಶ್‌ ಜಿಗಜಿಣಗಿ ಅವರನ್ನು ಕೇಂದ್ರ ಸಂಪುಟಕ್ಕೆ ತೆಗೆದುಕೊಂಡುದು ಈ ತಂತ್ರದ ಒಂದು ಭಾಗವೇ ಆಗಿದೆ ಮತ್ತು ಎಡಗೈ ದಲಿತ ಸಮುದಾಯದವರು ಉತ್ತರ ಕರ್ನಾಟಕದಲ್ಲಿ ದೊಡ್ಡ  ಸಂಖ್ಯೆಯಲ್ಲಿ ಇದ್ದಾರೆ. ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರ ಪಕ್ಕದಲ್ಲಿಯೇ ಎಡಗೈ ದಲಿತ ಸಮುದಾಯದ ಹಿರಿಯ ನಾಯಕರಲ್ಲಿ ಒಬ್ಬರಾದ ಗೋವಿಂದ ಕಾರಜೋಳರು ಕುಳಿತುಕೊಂಡು ತಿಂಡಿ ತಿನ್ನುವುದು ಕೂಡ ಈ ರಾಜಕೀಯ ತಂತ್ರದ ಒಂದು ಭಾಗವೇ ಆಗಿದೆ!

‘ಇದೆಲ್ಲ ರಾಜಕೀಯ’ ಎಂದು ಕಾಂಗ್ರೆಸ್ಸಿನವರು ಟೀಕಿಸಬಹುದು. ಹಾಗೆ ಟೀಕೆ ಮಾಡುವುದೇ ಬಿಜೆಪಿಗೆ ಬೇಕಾಗಿರುತ್ತದೆ. ‘ವಿವಾದ ಆಗುವಂಥ ಸುದ್ದಿ ಗಮನ ಸೆಳೆಯುತ್ತದೆ’ ಎಂಬುದು ಎಲ್ಲರಿಗೂ ಗೊತ್ತಿರುತ್ತದೆ. ಅಲ್ಲಿಗೆ ಅವರ ಉದ್ದೇಶ ಸಾರ್ಥಕವಾದಂತೆ. ಅಷ್ಟರ ಮಟ್ಟಿಗೆ ಬಿಜೆಪಿ ತನ್ನ ಉದ್ದೇಶದಲ್ಲಿ ಗೆಲುವು ಸಾಧಿಸಿದೆ. ಒಂದು ವೇಳೆ ಕಾಂಗ್ರೆಸ್‌ ಪಕ್ಷ ಪರಮೇಶ್ವರ್‌ ಅವರನ್ನು ಅಧ್ಯಕ್ಷ ಹುದ್ದೆಯಿಂದ ಕೆಳಗೆ ಇಳಿಸಿದರೆ ಅದು ಬಿಜೆಪಿಗೆ ಇನ್ನಷ್ಟು ಅನುಕೂಲ ಮಾಡಿಕೊಡಬಹುದು. ಬಿಜೆಪಿಗೆ ಇರುವಷ್ಟು ‘ರಾಜಕೀಯ ಕಾರಣ’ದ ಸಹಾನುಭೂತಿ ಕೂಡ ಕಾಂಗ್ರೆಸ್ಸಿಗೆ ಇಲ್ಲ ಎಂದು ದಲಿತರಿಗೆ ಅನಿಸಿದರೆ ಅದರಲ್ಲಿ ಏನು ತಪ್ಪಿದೆ?

ಪರಮೇಶ್ವರ್‌ ಅವರು ಕೆಲವು ತಪ್ಪು ಮಾಡಿದ್ದಾರೆ. ಒಂದು, ಅವರು ತಮ್ಮ ಕ್ಷೇತ್ರವನ್ನು ಸುರಕ್ಷಿತವಾಗಿ ಉಳಿಸಿಕೊಂಡಿಲ್ಲ. ಅವರನ್ನು ಕೊರಟಗೆರೆಯಲ್ಲಿ ಸೋಲಿಸಲಾಯಿತೇ ಅಥವಾ ಅವರೇ ಸೋತರೇ ಎಂಬುದು ಚರ್ಚಾಸ್ಪದ. ಕ್ಷೇತ್ರದ ಜನರ ಜೊತೆಗೆ ಸಂಪರ್ಕ ಸರಿಯಾಗಿ ಇಟ್ಟುಕೊಂಡಿರಲಿಲ್ಲ ಎಂಬ ಕಾರಣಕ್ಕಾಗಿಯೇ ಅವರು ಸೋತರು ಎಂಬ ವಾದವನ್ನು ಅಷ್ಟು ಸುಲಭವಾಗಿ ಅಲ್ಲಗಳೆಯಲು ಆಗುವುದಿಲ್ಲ. ಪರಮೇಶ್ವರ್ ಮುಖ್ಯವಾಗಿ ಒಬ್ಬ ಕ್ಷೇತ್ರದ ಶಾಸಕ, ನಂತರ ಪಕ್ಷದ ಅಧ್ಯಕ್ಷ, ನಂತರ ಸಚಿವ... ಇತ್ಯಾದಿ. ಶಾಸಕನಾಗಿರುವುದು ಎಂದರೆ ಜನರಿಗೆ ಸಿಗುತ್ತ ಇರಬೇಕು, ಕಷ್ಟ ಸುಖ ಕೇಳುತ್ತ ಇರಬೇಕು ಎಂಬ ನಿರೀಕ್ಷೆಗಳು ಬಹಳ ಇರುತ್ತವೆ. ಯಾರೋ ಯಾವುದೋ ಹಳ್ಳಿಯಿಂದ ಫೋನ್‌  ಮಾಡಿದರೆ  ಪರಮೇಶ್ವರ್‌ ಅವರೇ ತೆಗೆದುಕೊಳ್ಳಬೇಕು ಎಂದು ಬಯಸುವ ಮಂದಿಗೆ ಈಗಿನ ಕಾಲದಲ್ಲಿ ಕೊರತೆಯೇನೂ ಇಲ್ಲ. ಆದರೆ, ಪೂರ್ವದ ಹೊರದೇಶದಲ್ಲಿ ಶಿಕ್ಷಣ ಪಡೆದಿರುವ ಪರಮೇಶ್ವರ್‌ ಒಂದಿಷ್ಟು ‘ಇಲೈಟ್‌’ ಮನುಷ್ಯ. ದಲಿತ ಪ್ರಜ್ಞೆಯನ್ನು ಗಾಢವಾಗಿ ರೂಢಿಸಿಕೊಂಡವರೂ ಅಲ್ಲ. ದಲಿತ ಹೋರಾಟಗಾರರ ಜೊತೆಗೂ ಅವರ ಒಡನಾಟ ಒಂದಿಷ್ಟು ಕಡಿಮೆ ಎನ್ನುವಂತೆಯೇ ಇದೆ.

ಎರಡನೆಯ ದೊಡ್ಡ  ತಪ್ಪು ಅವರು ಮಾಡಿದ್ದು ಸಿದ್ದರಾಮಯ್ಯನವರ ಸಂಪುಟ ಸೇರಲು ಆತುರ ಮಾಡಿದ್ದು ಅಥವಾ ಆಸೆ ವ್ಯಕ್ತಪಡಿಸಿದ್ದು. ಅವರು ಒಂದು ವೇಳೆ ಇಷ್ಟು ದಿನವೂ ಪಕ್ಷದ ಅಧ್ಯಕ್ಷರಾಗಿಯೇ ಮುಂದುವರಿದಿದ್ದರೆ ಅವರನ್ನು ಈಗ ಬದಲಿಸುವ ಮಾತು ಆಡುವ ಧೈರ್ಯವನ್ನು ಕೂಡ ಯಾರೂ  ಮಾಡುತ್ತಿರಲಿಲ್ಲ.

ಅವರ ವಿರುದ್ಧ ಇರುವ ಮೂರನೇ ಆಕ್ಷೇಪ : ಅವರು ಮುಖ್ಯಮಂತ್ರಿಗೆ ಪ್ರತಿನಾಯಕನಾಗಿ ತಮ್ಮ ಛಾಪನ್ನು ಒತ್ತಲಿಲ್ಲ, ಬದಲಿಗೆ ಎರಡನೇ ಸಾಲಿನ ನಾಯಕ ಎನ್ನುವಂತೆ ನಡೆದುಕೊಂಡರು.

ನಾಲ್ಕನೇ ಆರೋಪ : ಮೂಲ ಕಾಂಗ್ರೆಸ್ಸಿಗರ ಹಕ್ಕುಗಳಿಗಾಗಿ ಅಥವಾ ಕಾರ್ಯಕರ್ತರಿಗೆ ಸಿಗಬೇಕಾದ ಸ್ಥಾನಮಾನಕ್ಕಾಗಿ ಅವರು ಮುಖ್ಯಮಂತ್ರಿ ಜೊತೆಗೆ ಜಗಳಕ್ಕೆ ಇಳಿಯಲಿಲ್ಲ.

ಹಾಗೆ ನೋಡಿದರೆ ಪರಮೇಶ್ವರ್‌ ಅವರ ಸ್ವಭಾವದಲ್ಲಿಯೇ ಆ ಗುಣ ಇಲ್ಲ. ಸರ್ಕಾರದಲ್ಲಿ ಸಿದ್ದರಾಮಯ್ಯ ಮೇಲುಗೈ ಸಾಧಿಸಿದ್ದು ಈ ಕಾರಣಕ್ಕಾಗಿ. ಪ್ರತಿ ನಾಯಕರೇ ಇಲ್ಲದ್ದಕ್ಕಾಗಿ. ಅವರದು ಗಟ್ಟಿ ವ್ಯಕ್ತಿತ್ವ. ಅವರೂ ಮುಖ್ಯಮಂತ್ರಿ ಆಗುವ ವರೆಗೆ ಎರಡನೇ ಸಾಲಿನ ನಾಯಕರೇ ಆಗಿದ್ದರು. ಆದರೆ, ಒಂದು ಸಾರಿ ಮುಖ್ಯಮಂತ್ರಿ ಆಗುತ್ತಿದ್ದಂತೆಯೇ ಒಬ್ಬ ಸಹಜ ನಾಯಕನಾಗಿ ಅವರು ಹೊರ ಹೊಮ್ಮಿದರು. ರಾಜಕೀಯ ಚದುರಂಗದ ಆಟದಲ್ಲಿ ಅವರು ತಮ್ಮ ಕೈ ಮೇಲೆ ಇರುವಂತೆಯೇ ಅವರು ನೋಡಿಕೊಂಡರು. ಪರಮೇಶ್ವರ್‌ ಸಂಪುಟದ ಬಾಗಿಲಲ್ಲಿ ಕಾಯುವಂತೆ ಮಾಡಿದರು. ಅವರು ಕಾಯುತ್ತಿರುವುದಕ್ಕೆ ತಾವು ಹೊಣೆಯಲ್ಲ, ಹೈಕಮಾಂಡ್‌ ಹೊಣೆ ಎಂದು ಅದರ ಕಡೆಗೆ ಬೆರಳು ತೋರಿಸಿದರು. ಕೊನೆಗೆ ಸಂಪುಟಕ್ಕೆ ತೆಗೆದುಕೊಂಡು ಗೃಹ ಸಚಿವ ಹುದ್ದೆ ಕೊಟ್ಟು ಮತ್ತೊಂದು ಪಟ್ಟು ಹಾಕಿದರು. ಅದು ‘ಪಟ್ಟು’ ಏಕೆ ಆಗಿತ್ತು ಎಂದರೆ ಪರಮೇಶ್ವರ್‌ ಅವರು ಸಿದ್ದರಾಮಯ್ಯ ವಿರುದ್ಧ ಧ್ವನಿ ಎತ್ತದಂತೆ ಆಯಿತು. ಅತ್ತ ಪ್ರಿಯಾಂಕ್‌ ಖರ್ಗೆ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡು ಮತ್ತೊಬ್ಬ ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನೂ ಸಿದ್ದರಾಮಯ್ಯ ಸುಮ್ಮನಾಗಿಸಿದರು. ‘ಒಂದೇ ಏಟಿಗೆ ಇಬ್ಬರು ದಲಿತ ನಾಯಕರನ್ನು ಮುಗಿಸುವುದು ಅಥವಾ ಪಕ್ಕಕ್ಕೆ ತೆಗೆದುಕೊಳ್ಳುವುದು ಎಂದರೆ ಇದು’ ಎಂದು ಹಿರಿಯ ಕಾಂಗ್ರೆಸ್‌  ನಾಯಕರೊಬ್ಬರು ನನಗೆ ಹೇಳಿ ಕಣ್ಣು ಮಿಟುಕಿಸಿದ್ದರು!

ಇಷ್ಟಾಗಿಯೂ ಕಾಂಗ್ರೆಸ್ಸಿಗೆ ಪರಮೇಶ್ವರ್‌ ಅವರನ್ನು ಬಿಟ್ಟರೆ ರಾಜ್ಯದಲ್ಲಿ ಇನ್ನೊಬ್ಬ ದಲಿತ ನಾಯಕ ಇಲ್ಲ. ಖರ್ಗೆ ಅವರು ಮಗ ಇಲ್ಲಿ ಸಚಿವನಾಗಿರುವ ಕಾರಣಕ್ಕೋ ಅಥವಾ ಕೇಂದ್ರದಲ್ಲಿ ಅವರ ಸೇವೆ ಬೇಕು ಎಂಬ ಕಾರಣಕ್ಕೋ ರಾಜ್ಯ ರಾಜಕಾರಣಕ್ಕೆ ಬರುವ ಹಾಗೆ ಕಾಣುವುದಿಲ್ಲ. ಇಲ್ಲವಾದರೆ ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂರಲು ಅವರಷ್ಟು ಅರ್ಹರಾದ ಇನ್ನೊಬ್ಬ ನಾಯಕ  ರಾಜ್ಯದಲ್ಲಿ ಇಲ್ಲ. ದಲಿತ ನಾಯಕ ಎಂದು ಬೇಕೆಂದೇ ನಾನು ಬರೆದಿಲ್ಲ. ಒಬ್ಬ ನಾಯಕನಾಗಿಯೇ ಅವರಿಗೆ ಆ ಅರ್ಹತೆ ಇದೆ.

ಈ ಎಲ್ಲ ಹಿನ್ನೆಲೆಯಲ್ಲಿ ಪರಮೇಶ್ವರ್‌ ಅವರನ್ನು ಪಕ್ಷದ ಅಧ್ಯಕ್ಷರಾಗಿ  ಮುಂದುವರಿಸುವುದು ಕಾಂಗ್ರೆಸ್ಸಿಗೆ  ಅನಿವಾರ್ಯ ಆಗಬಹುದು.  ಬಿಜೆಪಿಯವರು ಈಗಾಗಲೇ ಲಿಂಗಾಯತರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿ ಬಿಟ್ಟಿದ್ದಾರೆ. ಜೊತೆಗೆ ಯಡಿಯೂರಪ್ಪ ಅವರ ಜನಪ್ರಿಯತೆ ಜೊತೆಗೆ ಎಸ್‌.ಆರ್. ಪಾಟೀಲರಾಗಲೀ, ಎಂ.ಬಿ.ಪಾಟೀಲರಾಗಲೀ ಪೈಪೋಟಿ ಮಾಡಲಾರರು. ಎಂ.ಬಿ.ಪಾಟೀಲರ ಕೊರಳಿಗೆ ಮಲಪ್ರಭಾ ಕಾಲುವೆ ಗುತ್ತಿಗೆ ಹಗರಣಗಳನ್ನು ಸುತ್ತುವ ಬಿಜೆಪಿ ಹುನ್ನಾರದ ಹಿಂದೆ ಅವರು ಪಕ್ಷದ ಅಧ್ಯಕ್ಷರಾಗುವುದನ್ನು ತಡೆಯುವ ತಂತ್ರವೂ ಇದ್ದಂತೆ ಇದೆ!

ಪ್ರಧಾನವಾಗಿ ಒಕ್ಕಲಿಗರಿಗಾಗಿಯೇ ಜೆ.ಡಿ.ಎಸ್‌ನಂಥ ಒಂದು ಪಕ್ಷ ಇರುವಾಗ ಶಿವಕುಮಾರ್‌ ಅವರನ್ನು ಕಾಂಗ್ರೆಸ್‌ ಪಕ್ಷ ಆಯ್ಕೆ ಮಾಡುತ್ತದೆಯೇ? ಇತ್ತ ಶಿವಕುಮಾರ್‌ ಅವರ ಓಟವನ್ನು ತಡೆಯಲು ಮುಖ್ಯಮಂತ್ರಿಗಳು ಸಚಿವ ಟಿ.ಬಿ.ಜಯಚಂದ್ರ ಅವರ ಹೆಸರನ್ನು ಬೇರೆ ಮುಂದೆ ಮಾಡಿದ್ದಾರೆ.

2018ರ ವಿಧಾನಸಭೆ ಚುನಾವಣೆ ಜಾತಿ ಅಸ್ಮಿತೆಯ ಚುನಾವಣೆ ಆಗಿರುತ್ತದೆ. ಸಿದ್ದರಾಮಯ್ಯನವರು ಅದೇ ಕಾರಣಕ್ಕಾಗಿ ವಿವಿಧ ಜಾತಿಗಳ ಸಾಮಾಜಿಕ ಸ್ಥಿತಿಗತಿ ಅಧ್ಯಯನ ಮಾಡಿಸಿದ್ದಾರೆ. ಇದು ಉದ್ದೇಶಪೂರ್ವಕವಾಗಿ ಮಾಡಿಸಿದ ಗಣತಿ ಎಂಬುದರಲ್ಲಿ ಯಾವ ಅನುಮಾನವೂ ಬೇಡ.

ರಾಜ್ಯದಲ್ಲಿ ಯಾರ ಸಂಖ್ಯೆ ಹೆಚ್ಚು ಎಂದು ಅವರಿಗೆ ಹೇಳಬೇಕಿದೆ. ಒಂದು ರೀತಿ ನ್ಯಾಯವಾಗಿಯೇ ಹೇಳಬೇಕಾಗಿದೆ. ಆ ಅಂಕಿ ಅಂಶಗಳನ್ನು ಇಟ್ಟುಕೊಂಡೇ ಅವರು ಮುಂದಿನ ಚುನಾವಣೆ ಎದುರಿಸಲಿದ್ದಾರೆ. ಹಾಗಾದರೆ  ಹೆಚ್ಚು ಸಂಖ್ಯೆ ಇರುವವರನ್ನು ಕಾಂಗ್ರೆಸ್ ಪಕ್ಷ ಅಲಕ್ಷಿಸಲು ಆಗುತ್ತದೆಯೇ?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry