ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆ ಸ್ಥಿತಿ ಅರಿತು ಸೇರಿಸಿ

Last Updated 28 ಮೇ 2017, 20:17 IST
ಅಕ್ಷರ ಗಾತ್ರ

ಇಂಗ್ಲಿಷ್‌ ಮಾಧ್ಯಮದ ಯಾವ ಶಾಲೆಗಳು ಸೂಕ್ತ ಶೈಕ್ಷಣಿಕ ವಾತಾವರಣ ಹೊಂದಿವೆ, ಕೌಶಲಪೂರ್ಣ ಶಿಕ್ಷಕ ವರ್ಗ ಯಾವ ಶಾಲೆಯಲ್ಲಿ ಇದೆ ಅಥವಾ ಯಾವ ಶಾಲೆಯಲ್ಲಿ ಯಾವ ಪಠ್ಯನೀತಿಯನ್ನು ಅಳವಡಿಸಲಾಗಿದೆ ಎಂಬುದನ್ನು ಬಹುತೇಕ ಪೋಷಕರು ಗಮನಿಸುವುದಿಲ್ಲ. ತಮ್ಮ ಮಗು ಇಂಗ್ಲಿಷ್‌  ಶಾಲೆಯಲ್ಲಿ ಕಲಿಯಲೆಂಬ ಹಂಬಲಕ್ಕೆ ಕಟ್ಟು ಬಿದ್ದು, ಇಂಟರ್‌ನ್ಯಾಷನಲ್‌, ವರ್ಲ್ಡ್ ಸ್ಕೂಲ್‌ ಅಂತ ಹಣೆಪಟ್ಟಿ ಹಚ್ಚಿಕೊಂಡಿರುವ ಶಾಲೆಗಳ ಆಕರ್ಷಣೆಗೆ ಮರುಳಾಗಿ ಮಕ್ಕಳನ್ನು ದಾಖಲಿಸಿ ಬೀಗುತ್ತಾರೆ.

ಆದರೆ ಪಾಲಕರು ಒಂದು ವಿಷಯ  ಗಮನಿಸಬೇಕು. ಅದೇನೆಂದರೆ ಬಹಳಷ್ಟು ಇಂಗ್ಲಿಷ್‌  ಶಾಲೆಗಳು ಸರ್ಕಾರಿ ನಿಯಮಾವಳಿ ಪಾಲಿಸುವುದಿಲ್ಲ ಮತ್ತು ಸಮರ್ಪಕ ಪಠ್ಯ ನೀತಿ ಅಳವಡಿಸಿಕೊಂಡಿರುವುದಿಲ್ಲ. ಈ ವಿಷಯದಲ್ಲಿ ಪೋಷಕರಿಗೆ ತಪ್ಪು ಮಾಹಿತಿ ನೀಡುತ್ತವೆ.

ಎಷ್ಟೋ ಶಾಲೆಗಳಲ್ಲಿ ಮೂಲ ಸೌಕರ್ಯಗಳೇ ಇರುವುದಿಲ್ಲ. ಕೌಶಲಯುಕ್ತ ಶಿಕ್ಷಕರನ್ನು ದುರ್ಬೀನು ಹಿಡಿದು ಹುಡುಕಬೇಕು. ಸಮರ್ಪಕವಾದ ತರಗತಿ ಕೋಣೆ, ಪೀಠೋಪಕರಣ, ಆಟದ ಮೈದಾನ ಇರುವುದಿಲ್ಲ.  ಇಷ್ಟಾಗಿಯೂ ಪಾಲಕರಿಂದ ದುಬಾರಿ ಶುಲ್ಕ, ಅಭಿವೃದ್ಧಿ ಶುಲ್ಕ ವಸೂಲು ಮಾಡುತ್ತಿವೆ.
ಸರ್ಕಾರಿ ನಿಯಮ ಅಥವಾ ಕೇಂದ್ರೀಯ ಪಠ್ಯನೀತಿಯ ಸಬೂಬು ಹೇಳುತ್ತಾ ದುಬಾರಿ ಬೆಲೆಯ (ಅನವಶ್ಯಕ) ಪುಸ್ತಕಗಳನ್ನು ನಿಗದಿಪಡಿಸಿ ಹಣ ದೋಚುತ್ತಿವೆ. ಶಾಲೆಯಲ್ಲಿಯೇ ಪುಸ್ತಕ, ನೋಟ್‌ಪುಸ್ತಕ, ಸಮವಸ್ತ್ರ, ಬೂಟು– ಟೈ ಖರೀದಿಸಬೇಕೆಂದು ಫರ್ಮಾನು ಹೊರಡಿಸುತ್ತವೆ.  ಇದು  ಕಾನೂನಿನ ಸ್ಪಷ್ಟ ಉಲ್ಲಂಘನೆ.

ಖಾಸಗಿ ಶಾಲೆಗಳವರು ರಾಜ್ಯ ಸರ್ಕಾರದ ಪಠ್ಯನೀತಿಗೆ ಸಂಯೋಜನೆಗೊಂಡಿರಲಿ ಅಥವಾ ಸಿ.ಬಿ.ಎಸ್‌.ಇ. ಪಠ್ಯನೀತಿಗೆ ಸಂಯೋಜನೆಗೊಂಡಿರಲಿ ತಮ್ಮ ಶಾಲಾ ಮಕ್ಕಳಿಗೆ ದೆಹಲಿಯಿಂದ ಪ್ರಕಟವಾಗುವ ದುಬಾರಿ ಬೆಲೆಯ ಪುಸ್ತಕಗಳನ್ನೇ ಗೊತ್ತು ಮಾಡಿ ಮಕ್ಕಳ ಶಾಲಾ ಚೀಲದ ಭಾರವನ್ನು ವಿನಾಕಾರಣ ಹೆಚ್ಚು ಮಾಡಿ ಮಕ್ಕಳ ಆರೋಗ್ಯಕ್ಕೆ ಕುತ್ತು ತರುತ್ತಿದ್ದಾರೆ.  ಅತೀ ಭಾರದ ಶಾಲಾಚೀಲಗಳನ್ನು ಹೊರುವುದರಿಂದ ಮಕ್ಕಳ ಆರೋಗ್ಯದ ಮೇಲೆ ಸರಿಪಡಿಸಲಾಗದಂತಹ ಹಾನಿ ಆಗುತ್ತದೆ ಎಂದು ಅಸೋಚಾಂ ವರದಿಯಲ್ಲಿ ತಿಳಿಸಲಾಗಿದೆ. 

ಪ್ರಕಾಶಕರು ಶಾಲೆಗಳಿಗೆ ಹೆಚ್ಚಿನ ಡಿಸ್ಕೌಂಟ್‌ ಕೊಡುತ್ತಿರುವುದೇ ಇದರ ಆಕರ್ಷಣೆಗೆ ಮುಖ್ಯ ಕಾರಣ. ಪಠ್ಯಪುಸ್ತಕ ಗೊತ್ತುಪಡಿಸುವುದು, ಮುದ್ರಿಸುವುದು, ಖರೀದಿಸುವುದು ಮತ್ತು ಸರಬರಾಜು ಮಾಡುವುದು ಒಂದು ದೊಡ್ಡ ದಂಧೆಯಾಗಿ ಮಾರ್ಪಟ್ಟಿದೆ. ಇವುಗಳನ್ನೆಲ್ಲ ಗಮನದಲ್ಲಿರಿಸಿಕೊಂಡು ಸಾರ್ವಜನಿಕರು ತಮ್ಮ ಮಕ್ಕಳನ್ನು ಸರಿಯಾದ ಶಾಲೆಗೆ ದಾಖಲಿಸುವುದು ಒಳಿತು. ಬಣ್ಣದ ಜಾಹೀರಾತಿಗೆ ಮರುಳಾಗಬಾರದು.

-ಅಮರನಾಥಭೂತ, ರಾಣೆಬೆನ್ನೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT