ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾನುವಾರು ಮಾರಾಟ ನಿಯಂತ್ರಣ ಹೆಸರಲ್ಲಿ ಗೊಂದಲ ಸೃಷ್ಟಿ ಬೇಕಿರಲಿಲ್ಲ

Last Updated 28 ಮೇ 2017, 20:01 IST
ಅಕ್ಷರ ಗಾತ್ರ

ಕೊಲ್ಲುವ ಉದ್ದೇಶಕ್ಕಾಗಿ ಆಕಳು, ಎತ್ತು, ಹೋರಿ, ಎಮ್ಮೆ, ಕೋಣ, ಎಳೆಕರು ಮತ್ತು ಒಂಟೆಗಳನ್ನು ಜಾನುವಾರು ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದರ  ಮೇಲೆ ಕೇಂದ್ರ ಸರ್ಕಾರ ಹೇರಿದ ನಿರ್ಬಂಧ ದೊಡ್ಡ ಕೋಲಾಹಲವನ್ನೇ ಸೃಷ್ಟಿಸಿದೆ. ಈ ನಿರ್ಬಂಧ  ಸರಿಯಾದ ಆಲೋಚನೆಯೇ ಅಲ್ಲ. ಗೋರಕ್ಷಣೆಯ ಆರ್‌ಎಸ್‌ಎಸ್‌ ಕಾರ್ಯಸೂಚಿಯನ್ನು ಜಾರಿ ಮಾಡಲು ಮುಂದಾಗಿದೆ ಎಂಬ ಆರೋಪವನ್ನು  ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಹೊರಬೇಕಾಗುತ್ತದೆ. ಇದರಿಂದ ಸರ್ಕಾರಕ್ಕೆ ರಾಜಕೀಯ ಲಾಭ ಸಿಕ್ಕರೂ ಸಿಗಬಹುದು. ಆದರೆ ಭಾರಿ ಹೊಡೆತ ಬೀಳುವುದು ದೇಶದ ಆರ್ಥಿಕತೆಗೆ.

ಮಾಂಸಕ್ಕಾಗಿ ಜಾನುವಾರುಗಳು ಸಿಗದಿದ್ದರೆ ಕಸಾಯಿಖಾನೆಗಳು ಸಂಕಷ್ಟಕ್ಕೆ ಸಿಕ್ಕಿ ಹಾಕಿಕೊಳ್ಳುತ್ತವೆ. ಈ ಉದ್ಯಮವನ್ನು ಅವಲಂಬಿಸಿರುವ ಕೋಟಿಗಟ್ಟಲೆ ಜನ ಬೀದಿಪಾಲಾಗುತ್ತಾರೆ. ಉದ್ಯೋಗಗಳು ನಷ್ಟವಾಗುತ್ತವೆ. ತೊಗಲು ಉದ್ಯಮಕ್ಕೆ ಕಚ್ಚಾ ವಸ್ತುಗಳ ಕೊರತೆ ಬಾಧಿಸಬಹುದು. ಅನೇಕ ವಸ್ತುಗಳಲ್ಲಿ ಮತ್ತು ಉದ್ಯಮಗಳಲ್ಲಿ ಬಳಕೆಯಾಗುವ ದನದ ಕೊಬ್ಬಿನ ಅಭಾವ ಕಾಣಿಸಿಕೊಳ್ಳಬಹುದು. ಎಲ್ಲಕ್ಕಿಂತ ಹೆಚ್ಚಾಗಿ, ಕಸಾಯಿಖಾನೆ ಮತ್ತು ತೊಗಲು ಉದ್ಯಮದಲ್ಲಿ ತೋಡಗಿಸಿಕೊಂಡವರಲ್ಲಿ ದಲಿತರು ಮತ್ತು ಅಲ್ಪಸಂಖ್ಯಾತ ಮುಸ್ಲಿಮರೇ ಹೆಚ್ಚು. ಅವರು ಹೆಚ್ಚು ಸಂಕಷ್ಟ ಅನುಭವಿಸಬೇಕಾಗಬಹುದು. ಅಲ್ಲದೆ ನಮ್ಮ ರಫ್ತು ವಹಿವಾಟಿನಲ್ಲಿ  ಮಾಂಸ ಮತ್ತು ಅದರ ಉತ್ಪನ್ನಗಳ ಪಾಲು ಶೇ 1ರಷ್ಟು. ವಸ್ತುಸ್ಥಿತಿ ಹೀಗಿರುವಾಗ ಇಂತಹ ಆದೇಶ ಹೊರಡಿಸಿರುವುದರ ಹಿಂದೆ ಸರ್ಕಾರಕ್ಕೆ ಇರುವ ನೈಜ ಉದ್ದೇಶವಾದರೂ ಏನು ಎಂಬ ಪ್ರಶ್ನೆ ಉದ್ಭವವಾಗುತ್ತದೆ.


ಜಾನುವಾರುಗಳ ಮಾರಾಟಕ್ಕೂ ಕೃಷಿ ಅರ್ಥವ್ಯವಸ್ಥೆಗೂ ಪರಸ್ಪರ ಸಂಬಂಧ ಇದೆ. ನಿರುಪಯುಕ್ತ ಅಥವಾ ಗೊಡ್ಡು ದನಗಳನ್ನು ಸಾಕುವುದು ರೈತರಿಗೆ ಕಷ್ಟ, ಆರ್ಥಿಕವಾಗಿಯೂ ಅವರಿಗೆ ನಷ್ಟ. ಅದು ವಾಸ್ತವ. ಅಲ್ಲದೆ ಕೌಟುಂಬಿಕ ಖರ್ಚುವೆಚ್ಚಗಳಿಗಾಗಿ ಜಾನುವಾರು ಮಾರುವ ರೈತರಿಗೆ ಆ ಅವಕಾಶವನ್ನೂ ನಿರಾಕರಿಸುವುದು ಸರಿಯಲ್ಲ. ಮಾರಾಟದ ಮೇಲೆ ನಾನಾ ಬಗೆಯ ನಿರ್ಬಂಧಗಳನ್ನು ಹೇರಿದಷ್ಟೂ ಅಧಿಕಾರಶಾಹಿಗೆ ಲಾಭವಾಗುತ್ತದೆ. ಭ್ರಷ್ಟಾಚಾರ ಬೆಳೆಯುತ್ತದೆ. ಈಗಲೇ ದೇಶದ ಅನೇಕ ಕಡೆ ಸಣ್ಣಪುಟ್ಟ ಗುಂಪುಗಳು, ಸಂಘಟನೆಗಳು ಗೋರಕ್ಷಣೆಯ ಹೆಸರಿನಲ್ಲಿ ಕಾನೂನನ್ನು ಕೈಗೆ ತೆಗೆದುಕೊಳ್ಳುತ್ತಿವೆ. ಅವಕ್ಕೆ ಹೊಸ ಅಸ್ತ್ರವೊಂದು ಸಿಕ್ಕಂತಾಗುತ್ತದೆ.  ಅಲ್ಲದೆ ಈಗಾಗಲೇ ಈಶಾನ್ಯ ರಾಜ್ಯಗಳು, ಪಶ್ಚಿಮ ಬಂಗಾಳ, ಕೇರಳ ಬಿಟ್ಟು ಉಳಿದೆಡೆ ಗೋಹತ್ಯೆಗೆ ನಿಷೇಧ ಇದೆ. ಅದರ ಕಟ್ಟುನಿಟ್ಟು ಜಾರಿಯ ಉಸ್ತುವಾರಿ ನೋಡಿಕೊಳ್ಳುವುದು ಬಿಟ್ಟು ಮತ್ತೊಂದು ಹೊಸ ಆದೇಶದ ಅವಶ್ಯಕತೆ ಏನಿತ್ತು?


ಸಾಕಷ್ಟು ಟೀಕೆ ಟಿಪ್ಪಣಿಗಳು ಬಂದ ಬಳಿಕ ಸರ್ಕಾರ ಈಗ ಸ್ಪಷ್ಟನೆಯೊಂದನ್ನು ಕೊಟ್ಟಿದೆ. ಮಾಂಸದ ಉದ್ಯಮ ಅಥವಾ ಮಾಂಸದ ವ್ಯಾಪಾರಿಗಳು ರೈತರಿಂದ ನೇರವಾಗಿ ಜಾನುವಾರು ಖರೀದಿಸಲು ಯಾವುದೇ ನಿಷೇಧ ಇಲ್ಲ ಎಂದು ಹೇಳಿದೆ. ದನಗಳ ಸಂತೆಯಲ್ಲಿ ಅಥವಾ ಜಾನುವಾರು ಮಾರುಕಟ್ಟೆಯಲ್ಲಿ ರೈತರನ್ನು ಹೊರತುಪಡಿಸಿ ಬೇರಾರೂ ಮಾರುವಂತಿಲ್ಲ, ಕೊಳ್ಳುವಂತಿಲ್ಲ;  ಅಷ್ಟಕ್ಕೆ ಮಾತ್ರ ನಿರ್ಬಂಧ ಎಂಬ ವಿವರಣೆ ಕೊಟ್ಟಿದೆ. ಇದರಿಂದ ಗೊಂದಲ ನಿವಾರಣೆ ಆಗುವ ಬದಲು ಮತ್ತಷ್ಟು ಹೆಚ್ಚಿದೆ. ದೇಶದಲ್ಲಿ ಬೇಕಾದಷ್ಟು ಸಮಸ್ಯೆಗಳಿವೆ. ಅವುಗಳ ಬಗ್ಗೆ ಗಮನ ಕೊಡಬೇಕಾಗಿತ್ತು. ಅದನ್ನು ಬಿಟ್ಟು ಅನುಮಾನಕ್ಕೆ ಎಡೆ ಮಾಡುವಂತಹ ಆದೇಶ ಹೊರಡಿಸುವುದು, ಸ್ಪಷ್ಟನೆ ಹೆಸರಿನಲ್ಲಿ ಮತ್ತಷ್ಟು ಅನುಮಾನ ಸೃಷ್ಟಿಸುವುದು ಖಂಡಿತವಾಗಿ ಬೇಕಾಗಿರಲಿಲ್ಲ. ಅಂತಹ ತುರ್ತು ಕೂಡ ಇರಲಿಲ್ಲ. ಆದ್ದರಿಂದ ಇಂತಹ ವಿಷಯಗಳಲ್ಲಿ ಸರ್ಕಾರ ಎಚ್ಚರಿಕೆಯ ಹೆಜ್ಜೆ ಇಡಬೇಕು. ಸಾಮಾಜಿಕ ಶಾಂತಿ ಕದಡುವ, ಅಪನಂಬಿಕೆ ಹೆಚ್ಚಿಸುವ ಕ್ರಮಗಳಿಗೆ ಕೈ ಹಾಕಬಾರದು. ಈಗ ಸೃಷ್ಟಿಯಾಗಿರುವ ಗೊಂದಲಗಳಿಗೆ ಕೂಡಲೇ ತೆರೆ ಎಳೆಯಬೇಕು. ಭಾವನಾತ್ಮಕವಾಗಿ ಆಲೋಚಿಸುವ ಬದಲು ವ್ಯಾವಹಾರಿಕವಾಗಿ ಸರಿಯಾದ ತೀರ್ಮಾನ ತೆಗೆದುಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT