ಪೇಮೆಂಟ್ಸ್‌ ಬ್ಯಾಂಕ್‌ ಪರ್ವ

7

ಪೇಮೆಂಟ್ಸ್‌ ಬ್ಯಾಂಕ್‌ ಪರ್ವ

Published:
Updated:
ಪೇಮೆಂಟ್ಸ್‌ ಬ್ಯಾಂಕ್‌ ಪರ್ವ

ಡಿಜಿಟಲ್‌ ತಂತ್ರಜ್ಞಾನಕ್ಕೆ ತೆರೆದುಕೊಳ್ಳುತ್ತಿರುವುದರಿಂದ ದೇಶಿ ಬ್ಯಾಂಕಿಂಗ್‌ ವಹಿವಾಟಿನ ಸ್ವರೂಪವೇ ಬದಲಾಗಿದೆ.   ಆನ್‌ಲೈನ್‌ ಬ್ಯಾಂಕಿಂಗ್‌, ಮೊಬೈಲ್‌ ಬ್ಯಾಂಕಿಂಗ್‌, ಯುಪಿಐ ಸೌಲಭ್ಯಗಳು ಗ್ರಾಹಕರಿಗೆ ತಾವು ಇರುವಲ್ಲಿಯೇ ಕಡಿಮೆ ಸಮಯದಲ್ಲಿ ಸುಲಭವಾಗಿ ವಹಿವಾಟು ನಡೆಸಲು ಅನುವು ಮಾಡಿಕೊಟ್ಟಿವೆ.

 

ಇದೀಗ ಪೇಮೆಂಟ್ಸ್ ಬ್ಯಾಂಕ್‌  ವ್ಯವಸ್ಥೆ ಸಾಂಪ್ರದಾಯಿಕ ಬ್ಯಾಂಕಿಂಗ್‌ ವ್ಯವಸ್ಥೆಗೆ ಸವಾಲೊಡ್ಡಲು ಸಜ್ಜಾಗಿದೆ.

 

ಏನಿದು ಪೇಮೆಂಟ್ಸ್‌ ಬ್ಯಾಂಕ್‌? 

ಪೇಮೆಂಟ್ಸ್ ಬ್ಯಾಂಕ್ ವ್ಯವಸ್ಥೆಯು, ಹಣ ಪಾವತಿ ಸೇವೆಗಳಿಗೆ ಸಂಬಂಧಿಸಿದಂತೆ ಬ್ಯಾಂಕಿಂಗ್ ಚಟುವಟಿಕೆಗಳನ್ನು ಸೀಮಿತ ಪ್ರಮಾಣದಲ್ಲಿಯಷ್ಟೇ ನಡೆಸುವಂತಹುದು. ಮುಖ್ಯವಾಗಿ ಮೊಬೈಲ್ ಬ್ಯಾಂಕಿಂಗ್ ಸೇವೆ, ಸೂಪರ್ ಮಾರ್ಕೆಟ್‌ಗಳ ಸರಣಿಗೆ ಮತ್ತು ಸಣ್ಣ ಪ್ರಮಾಣದ ವಾಣಿಜ್ಯ ಸಂಸ್ಥೆಗಳ ವಹಿವಾಟಿಗೆ ಹಣ ಪಾವತಿ ಸೌಲಭ್ಯವನ್ನು ಒದಗಿಸುವುದು.

 

ಮೊಬೈಲ್ ಫೋನ್‌ನಲ್ಲಿ ಕರೆ ಮಾಡುವುದು, ಸಂದೇಶ ರವಾನೆ, ಅಂತರ್ಜಾಲ ಸಂಪರ್ಕ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಮೊದಲೇ ಹಣ ಪಾವತಿಸಿ (ಕರೆನ್ಸಿ ರೀಚಾರ್ಜ್) ಬಳಸಿಕೊಳ್ಳುವ ಹಾಗೆಯೇ ಸಣ್ಣ ಪ್ರಮಾಣದ ವಾಣಿಜ್ಯ ವಹಿವಾಟುಗಳಿಗೆ ಹಣ ಪಾವತಿಸುವುದಕ್ಕೆ, ಒಂದು ಮೊಬೈಲ್ ಫೋನ್‌ನಿಂದ ಇನ್ನೊಂದು ಮೊಬೈಲ್ ಫೋನ್‌ಗೆ ಅಥವಾ ಬ್ಯಾಂಕ್ ಖಾತೆಯಿಂದ ಇನ್ನೊಂದು ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಲು ಪೇಮೆಂಟ್ಸ್‌ ಬ್ಯಾಂಕ್‌ನಲ್ಲಿ ಅವಕಾಶವಿದೆ.

 

ದೇಶದಲ್ಲಿ ಇನ್ನೂ ಬ್ಯಾಂಕಿಂಗ್ ವ್ಯವಸ್ಥೆಗೆ ಒಳಪಡದ ಜನರಿಗೆ ಬ್ಯಾಂಕ್‌ಗಳಿಂದ ದೊರೆಯುವ ಸೌಲಭ್ಯಗಳನ್ನು ಕಲ್ಪಿಸುವುದು ಈ ಪೇಮೆಂಟ್ಸ್ ಬ್ಯಾಂಕ್‌ಗಳ ಮುಖ್ಯ ಉದ್ದೇಶ.

 

11ಕಂಪೆನಿಗಳಿಗೆ ಅನುಮತಿ 

ಭಾರತೀಯ ರಿಸರ್ವ್ ಬ್ಯಾಂಕ್ 2015ರಲ್ಲಿ ರಿಲಯನ್ಸ್ ಇಂಡಸ್ಟ್ರೀಸ್, ಆದಿತ್ಯ ಬಿರ್ಲಾ, ಪೇಟಿಎಂ, ಏರ್‌ಟೆಲ್ ಮತ್ತು ವೊಡಾಫೋನ್ ಸೇರಿದಂತೆ 11 ಕಂಪೆನಿಗಳಿಗೆ ಪೇಮೆಂಟ್ಸ್ ಬ್ಯಾಂಕ್ ಆರಂಭಿಸಲು ಅನುಮತಿ ನೀಡಿತ್ತು.

 

ಅವುಗಳಲ್ಲಿ ಸದ್ಯ, ಏರ್‌ಟೆಲ್‌, ಪೇಟಿಎಂ ಮತ್ತು ಅಂಚೆ ಇಲಾಖೆ ಪೇಮೆಂಟ್ಸ್‌ ಬ್ಯಾಂಕ್‌ ಆರಂಭಿಸಿವೆ. ಗ್ರಾಹಕರನ್ನು ಸೆಳೆಯಲು ವಿಶೇಷ ಕೊಡುಗೆಗಳನ್ನೂ ಘೋಷಿಸಿವೆ.

 

ಒಂದಕ್ಕಿಂತ ಒಂದು ಭಿನ್ನ ಪೇಟಿಎಂ

ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್ ಶೂನ್ಯ ಖಾತೆ ಮತ್ತು ಶುಲ್ಕ ರಹಿತ ವರ್ಗಾವಣೆ ಸೌಲಭ್ಯ ನೀಡಿದೆ. ಠೇವಣಿಗಳ ಮೇಲೆ ವಾರ್ಷಿಕ ಶೇ 4ರಷ್ಟು ಬಡ್ಡಿ  ಮತ್ತು ₹ 25 ಸಾವಿರ ಠೇವಣಿ ಇರಿಸಿದರೆ ₹ 250 ಕ್ಯಾಷ್‌ಬ್ಯಾಕ್‌ ಸಹ ನೀಡಲಿದೆ.

 

ಗ್ರಾಹಕರಿಗೆ ವರ್ಚುವಲ್‌ ರೂಪೆ  ಡೆಬಿಟ್‌ ಕಾರ್ಡ್‌  ಮತ್ತು ಗ್ರಾಹಕರ ಕೋರಿಕೆ ಮೇರೆಗೆ ಭೌತಿಕ ಸ್ವರೂಪದ ಕಾರ್ಡ್‌ ವಿತರಿಸಲಿದೆ. ನಗರಗಳಲ್ಲಿ ಡೆಬಿಟ್‌ ಕಾರ್ಡ್‌ ಮೂಲಕ 5 ಬಾರಿ ಹಣ ಪಡೆಯಬಹುದು. ಇದು ಮಹಾನಗರಗಳಲ್ಲಿ 3ಕ್ಕೆ ಸೀಮಿತಗೊಳಿಸಲಾಗಿದೆ. ನಂತರದ ಪ್ರತಿ ವರ್ಗಾವಣೆಗೆ ₹20 ಶುಲ್ಕ ತೆರಬೇಕು. ಐಎಂಪಿಎಸ್‌, ಎನ್‌ಇಎಫ್‌ಟಿ ಮತ್ತು ಆರ್‌ಟಿಜಿಎಸ್‌ ಮೂಲಕ ಹಣ ವರ್ಗಾವಣೆ ಮಾಡಲು ಯಾವುದೇ ಶುಲ್ಕ ಇಲ್ಲ. ಪೇಟಿಎಂ ಈ ವರ್ಷ 31 ಶಾಖೆಗಳು ಮತ್ತು 3 ಸಾವಿರ ಗ್ರಾಹಕ ಸೇವಾ ಕೇಂದ್ರಗಳನ್ನು ತೆರೆಯುವ ನಿರೀಕ್ಷೆ ಇಟ್ಟುಕೊಂಡಿದೆ.

 

ಪೇಟಿಎಂ ವಾಲೆಟ್‌ನಿಂದ ಬ್ಯಾಂಕ್‌ಗೆ:

ಈಗಾಗಲೇ ಗ್ರಾಹಕರು ಬಳಸುತ್ತಿರುವ ಪೇಟಿಎಂ ಮೊಬೈಲ್‌ ಆ್ಯಪ್‌ ಅನ್ನು ಮೇಲ್ದರ್ಜೆಗೆ ಏರಿಸಿ, ಆಧಾರ್‌ ಸಂಖ್ಯೆ ಮತ್ತು ಹೆಸರುಗಳನ್ನು ನಮೂದಿಸಿ ದೃಢೀಕರಿಸಿ ಬ್ಯಾಂಕಿಂಗ್‌ ಸೇವೆ ಬಳಸಬಹುದು.  ಪೇಟಿಎಂ ಗ್ರಾಹಕರು ಈ ಮೊದಲಿನಂತೆಯೇ ತಮ್ಮ ಆ್ಯಪ್‌ ಬಳಕೆ ಮುಂದುವರೆಸಬಹುದು.

 

* ಪೇಟಿಎಂ ವಾಲೆಟ್‌ ಖಾತೆಗಳು ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ಗೆ ಸ್ವಯಂಚಾಲಿತವಾಗಿ ವರ್ಗಾವಣೆಯಾಗಲಿವೆ. ವನ್97 ಕಮ್ಯುನಿಕೇಷನ್ಸ್‌ ಸಂಸ್ಥೆಯು ಪೇಟಿಎಂ ವಾಲೆಟ್‌ ನಿರ್ವಹಣೆ ಮಾಡುತ್ತಿದೆ. ಇದೀಗ ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ ಆರಂಭವಾಗಿರುವುದರಿಂದ ಆರ್‌ಬಿಐ ಮಾರ್ಗಸೂಚಿಯಂತೆ ಸಂಸ್ಥೆಯು ವಾಲೆಟ್‌ನಲ್ಲಿರುವ ಎಲ್ಲಾ ಖಾತೆಗಳನ್ನೂ ಬ್ಯಾಂಕ್‌ಗೆ ವರ್ಗಾಯಿಸಲಿದೆ.

 

ಇದರಿಂದ ಪೇಟಿಎಂ ವಾಲೆಟ್‌ ಗ್ರಾಹಕರು ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ನ ಗ್ರಾಹಕರಾಗಿ ಮುಂದುವರಿಯುತ್ತಾರೆ. ಆದರೆ, ನಿಷ್ಕ್ರಿಯವಾಗಿರುವ ವಾಲೆಟ್‌ ಖಾತೆಗಳು ಸ್ವಯಂಚಾಲಿತವಾಗಿ ವರ್ಗಾವಣೆ ಆಗುವುದಿಲ್ಲ. ಗ್ರಾಹಕರು ಮನವಿ ಮಾಡಬೇಕಾಗುತ್ತದೆ.

 

* ಯಾರು ಪೇಮೆಂಟ್ಸ್‌ ಬ್ಯಾಂಕ್‌ನೊಂದಿಗೆ ವ್ಯವಹರಿಸಲು ಇಚ್ಚಿಸುವುದಿಲ್ಲವೋ ಅಂತಹವರು help@paytm.com ಅಥವಾ paytm.com/care ಗೆ ಇ–ಮೇಲ್‌ ಕಳುಹಿಸಿ, ನೋಂದಣಿ ರದ್ದುಪಡಿಸಿಕೊಳ್ಳಬಹುದು.

 

* ವಾಲೆಟ್‌ನಲ್ಲಿರುವ ಹಣ ಬ್ಯಾಂಕ್‌ ಖಾತೆಗೆ ವರ್ಗಾವಣೆ ಆಗುತ್ತದೆ. ಹೀಗಿದ್ದರೂ ಗ್ರಾಹಕರು ಪೇಮೆಂಟ್ಸ್‌ ಬ್ಯಾಂಕ್‌ ಸೌಲಭ್ಯ ಆಯ್ಕೆ ಮಾಡಿಕೊಳ್ಳದೇ ಇದ್ದರೆ ವಾಲೆಟ್‌ ಖಾತೆಯಾಗಿಯೇ ಮುಂದುವರಿಯಲಿದೆ.

 

ಏರ್‌ಟೆಲ್‌

ಏರ್‌ಟೆಲ್‌ ಮಳಿಗೆಗಳ ಮೂಲಕ ಬ್ಯಾಂಕಿಂಗ್‌ ಸೇವೆಯು ಗ್ರಾಹಕರನ್ನು ತಲುಪಲಿದೆ. ರಾಜ್ಯದಲ್ಲಿ ಸದ್ಯ 12 ಸಾವಿರ ಮಳಿಗೆಗಳಲ್ಲಿ ಏರ್‌ಟೆಲ್‌ ಪೇಮೆಂಟ್ಸ್‌ ಬ್ಯಾಂಕ್‌ ಖಾತೆ ತೆರೆಯುವುದು ಸೇರಿದಂತೆ ಗ್ರಾಹಕರಿಗೆ ಅಗತ್ಯವಿದ್ದಾಗ ಅವರ ಖಾತೆಯಿಂದ ನಗದು ಪಡೆಯುವ ಸೌಲಭ್ಯ ಕಲ್ಪಿಸಲಾಗಿದೆ.

ಆಧಾರ್‌ ಆಧಾರಿತ ವ್ಯವಸ್ಥೆಯಾಗಿದ್ದು,  ಬಯೊಮೆಟ್ರಿಕ್‌ ಮೂಲಕ ಖಾತೆಯನ್ನು ಅಧಿಕೃತಗೊಳಿಸಲಾಗುತ್ತದೆ. ಏರ್‌ಟೆಲ್‌ ಗ್ರಾಹಕರ  ಮೊಬೈಲ್‌ ಸಂಖ್ಯೆಯೇ ಅವರ ಪೇಮೆಂಟ್ಸ್‌ ಬ್ಯಾಂಕ್‌ನ ಖಾತೆ ಸಂಖ್ಯೆಯಾಗಿರುತ್ತದೆ. ಬೇರೆ ಮೊಬೈಲ್‌ ಬಳಸುವವರಿಗೆ ಪ್ರತ್ಯೇಕವಾಗಿ ಖಾತೆ ಸಂಖ್ಯೆ ನೀಡಲಾಗುತ್ತಿದೆ.  

ಏರ್‌ಟೆಲ್ ಮನಿ ಆ್ಯಪ್ ಬಳಸಿ ಪೇಮೆಂಟ್ಸ್‌ ಬ್ಯಾಂಕ್‌ ಖಾತೆಯ ಮಾಹಿತಿ ಸೇರಿಂತೆ ಇನ್ನಿತರ ಸೇವೆಗಳನ್ನು ಪಡೆಯಬಹುದು. 

 

* ಏರ್‌ಟೆಲ್‌ ಮಳಿಗೆಗಳಲ್ಲಿ ಠೇವಣಿ ಇಡುವ ಮತ್ತು ನಗದು ಪಡೆಯುವ ಅವಕಾಶ.  

* ನಗದು ಪಡೆಯಲು ಶೇ 0.6 ರಷ್ಟು ಶುಲ್ಕ

* ಉಳಿತಾಯ ಖಾತೆಗೆ ವರ್ಷಕ್ಕೆ ಶೇ 7.25 ಬಡ್ಡಿದರ

* ಏರ್‌ಟೆಲ್‌ನಿಂದ ಏರ್‌ಟೆಲ್‌ಗೆ ಶುಲ್ಕವಿಲ್ಲದೆ ಹಣ ವರ್ಗಾವಣೆ ಸೌಲಭ್ಯ

* ಪ್ರತಿ ಉಳಿತಾಯ ಖಾತೆಗೆ ₹1 ಲಕ್ಷದ ವೈಯಕ್ತಿಕ ಅಪಘಾತ ವಿಮೆ

* ಏರ್‌ಟೆಲ್‌ ಗ್ರಾಹಕರು ಮೊದಲ ಬಾರಿಗೆ ₹500 ಠೇವಣಿ  ಇಟ್ಟರೆ 500 ನಿಮಿಷ ಉಚಿತ ಕರೆ ಸಿಗಲಿದೆ.

****

ಆರ್‌ಬಿಐ ಮಾರ್ಗಸೂಚಿ

* ಪೇಮೆಂಟ್ಸ್‌ ಬ್ಯಾಂಕ್‌ಗಳು ಠೇವಣಿ ಸಂಗ್ರಹಿಸಬಹುದು. ಸಾಲ ನೀಡುವಂತಿಲ್ಲ

* ಉಳಿತಾಯ, ಚಾಲ್ತಿ ಖಾತೆಯ ಗರಿಷ್ಠ ಠೇವಣಿ ಮಿತಿ ₹1 ಲಕ್ಷ. ಎಟಿಎಂ, ಡೆಬಿಟ್‌ ಕಾರ್ಡ್ ನೀಡಬಹುದು.

* ನೆಟ್‌ ಬ್ಯಾಂಕಿಂಗ್‌, ಮೊಬೈಲ್‌ ಬ್ಯಾಂಕಿಂಗ್‌ ಸೇವೆ ಒದಗಿಸಬಹುದು.


 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry