5

ಒಳ್ಳೆಯದೇ ಆಗುತ್ತದೆ ಎಂಬ ನಿರೀಕ್ಷೆ ಹೊಂದೋಣ!

ಎ.ಸೂರ್ಯ ಪ್ರಕಾಶ್
Published:
Updated:
ಒಳ್ಳೆಯದೇ ಆಗುತ್ತದೆ ಎಂಬ ನಿರೀಕ್ಷೆ ಹೊಂದೋಣ!

ಮೂರು ಬಾರಿ ತಲಾಖ್‌ ಹೇಳಿ ಮುಸ್ಲಿಂ ಮಹಿಳೆಗೆ ವಿವಾಹ ವಿಚ್ಛೇದನ ನೀಡುವ ಪದ್ಧತಿಯ ಸಾಂವಿಧಾನಿಕ ಮಾನ್ಯತೆಯನ್ನು ಪ್ರಶ್ನಿಸಿರುವ ಹಲವು ಅರ್ಜಿಗಳ ವಿಚಾರಣೆ ಯನ್ನು ಸುಪ್ರೀಂ ಕೋರ್ಟ್‌ನ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠ ಹದಿನೈದು ದಿನಗಳ ಹಿಂದೆ ಪೂರ್ಣಗೊಳಿಸಿದೆ. ಈ ಪ್ರಕರಣದ ಕುರಿತು ಸುಪ್ರೀಂ ಕೋರ್ಟ್‌ ನೀಡುವ ತೀರ್ಪಿಗೆ ಇಡೀ ದೇಶ ಕಾಯುತ್ತಿದೆ. ಆದರೆ, ಸಾಂವಿಧಾನಿಕ ರಕ್ಷಣೆಗಳನ್ನು ದೇಶದ ಇತರ ನಾಗರಿಕರಿಗೆ ನೀಡಿರುವಂತೆಯೇ ಮುಸ್ಲಿಂ ಮಹಿಳೆಯರಿಗೂ ಕೊಡಿಸಲು ಅಭಿಯಾನವೊಂದು ಆರಂಭವಾಗುವ ಆಶಾಭಾವನೆಯು ಈ ಪ್ರಕರಣದ ಸುತ್ತ ಸೃಷ್ಟಿಯಾಗಿರುವ ಸಂದರ್ಭಗಳಿಂದಾಗಿ ಮೂಡಿದೆ.

ವಿಶೇಷವಾಗಿ, ಬಹುಕಾಲದ ಕಾಯುವಿಕೆಯ ನಂತರ ಮುಸ್ಲಿಂ ಮಹಿಳೆಯರಿಗೂ ಸಮಾನ ಅವಕಾಶಗಳು ಹಾಗೂ ಸಮಾನತೆಯನ್ನು ಕೊಡಿಸುವ ನಿಟ್ಟಿನಲ್ಲಿ ಪ್ರಕ್ರಿಯೆಗಳು ಆರಂಭವಾಗುವ ನಿರೀಕ್ಷೆಗಳು ಮೂಡಿವೆ.

ಇಂತಹ ನಿರೀಕ್ಷೆಗಳು ಮೂಡಿರಲು ಕಾರಣಗಳು ಹೀಗಿವೆ: ಮುಸ್ಲಿಂ ಮಹಿಳೆಯರು ದಬ್ಬಾಳಿಕೆಯ ಸಾಮಾಜಿಕ ಪರಿಸರದಲ್ಲಿ ಬದುಕುತ್ತಿದ್ದರೂ, ಅವರಲ್ಲಿ ಸಾವಿರಾರು ಮಂದಿ ‘ತ್ರಿವಳಿ ತಲಾಖ್’ ವ್ಯವಸ್ಥೆಯನ್ನು ಈಗ ಬಹಿರಂಗವಾಗಿ ವಿರೋಧಿಸುತ್ತಿದ್ದಾರೆ.

ಏಕಪಕ್ಷೀಯ, ಅನಿಷ್ಟ ವ್ಯವಸ್ಥೆಗೆ ಅಧಿಕೃತವಾಗಿ ಅಂತ್ಯ ಹಾಡಬೇಕು ಎಂದು ಅವರು ಬಯಸುತ್ತಿದ್ದಾರೆ. ವೈಯಕ್ತಿಕ ಕಾನೂನುಗಳಿಗಿಂತ ಸಂವಿಧಾನವೇ ಮೇಲು ಎಂಬುದನ್ನು ಸ್ಪಷ್ಟವಾಗಿ ಹೇಳಲು ಹಿಂದೆ ಆಡಳಿತ ನಡೆಸಿದ ಕಾಂಗ್ರೆಸ್ ಸರ್ಕಾರಗಳಿಗೆ ಇಚ್ಛಾಶಕ್ತಿ ಇರಲಿಲ್ಲ.   ಆದರೆ ಸಂವಿಧಾನದ ಮೂಲ ಮೌಲ್ಯಗಳನ್ನು ಎತ್ತಿಹಿಡಿಯಲು ನರೇಂದ್ರ ಮೋದಿ ನೇತೃತ್ವದ ಸರ್ಕಾರ ದೃಢ ನಿರ್ಧಾರ ಕೈಗೊಂಡಿದೆ.

‘ಲಿಂಗ ಸಮಾನತೆ ಹಾಗೂ ಮಹಿಳೆಯ ಘನತೆಯನ್ನು ಕಾಯುವ ವಿಚಾರದಲ್ಲಿ ರಾಜಿಯಾಗಲು ಸಾಧ್ಯವಿಲ್ಲ. ಈ ಮೌಲ್ಯಗಳು ಎಲ್ಲರಿಗೂ ಅನ್ವಯವಾಗುತ್ತವೆ' ಎಂದು ಇಂದಿನ ಸರ್ಕಾರ ಕೋರ್ಟ್‌ಗೆ ಹೇಳಿದೆ. ಸಂವಿಧಾನವು ಮಹಿಳೆಗೆ ನೀಡಿರುವ ಸಮಾನ ಸ್ಥಾನ ಹಾಗೂ ಘನತೆಯ ಬದುಕನ್ನು ಜಾತ್ಯತೀತ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಧರ್ಮದ ಕಾರಣಕ್ಕೆ ನಿರಾಕರಿಸಲು ಸಾಧ್ಯವಿದೆಯೇ ಎಂದೂ ಕೇಂದ್ರವು ಪ್ರಶ್ನಿಸಿದೆ. ವೈವಿಧ್ಯವನ್ನು ಕಾಪಾಡುವ ಉದ್ದೇಶವನ್ನು ವೈಯಕ್ತಿಕ ಕಾನೂನುಗಳು ಈಡೇರಿಸುತ್ತವೆ ಎಂಬುದು ನಿಜ. ಆದರೆ, ಅತ್ಯಂತ ಮಹತ್ವದ ಹಾಗೂ ಅತ್ಯಂತ ವಿಸ್ತೃತವಾದ ಸಾಂವಿಧಾನಿಕ ಗುರಿಯಾಗಿರುವ ಸ್ತ್ರೀ-ಪುರುಷ ಸಮಾನತೆಯ ತತ್ವವನ್ನು ವೈಯಕ್ತಿಕ ಕಾನೂನುಗಳು ದುರ್ಬಲಗೊಳಿಸಬಹುದೇ ಎಂದೂ ಕೇಂದ್ರ ಸರ್ಕಾರ ಪ್ರಶ್ನಿಸಿದೆ. ಈ ವಾದವು ಪ್ರಧಾನಿ ನರೇಂದ್ರ ಮೋದಿ ಅವರು ಹಲವು ಬಾರಿ ಆಡಿರುವ ’ಸಂವಿಧಾನವೇ ಪರಮೋಚ್ಚ ಗ್ರಂಥ’ ಎಂಬ ಮಾತುಗಳಿಗೆ ಅನುಗುಣವಾಗಿ ಇದೆ.

ಮೂರನೆಯದಾಗಿ, ಸವಕಲು ಆಚರಣೆಗಳನ್ನು ಕೊನೆಗೊಳಿಸಿ, ಸಂವಿಧಾನ ನೀಡಿರುವ ಸ್ವಾತಂತ್ರ್ಯಗಳನ್ನು ಅನುಭವಿಸುವುದರ ಪರ ಭಾವನೆ ದೇಶದೆಲ್ಲೆಡೆ ಗಟ್ಟಿ ಯಾಗುತ್ತಿದೆ. ಮೊಬೈಲ್ ಕ್ರಾಂತಿ (ಭಾರತೀಯರ ಬಳಿ 120 ಕೋಟಿ ಮೊಬೈಲ್‌ ಫೋನ್‌ಗಳಿವೆ), ಸಾಮಾಜಿಕ ಮಾಧ್ಯಮಗಳು ಪ್ರವರ್ಧಮಾನಕ್ಕೆ ಬಂದಿರುವುದು ಮತ್ತು ವಾಟ್ಸ್‌ ಆ್ಯಪ್ ಗ್ರೂಪ್‌ಗಳು ಮಾಹಿತಿ ಕ್ರಾಂತಿಗೆ ನಾಂದಿ ಹಾಡಿವೆ. ಇವನ್ನು ತಡೆಯಲು ಪುರುಷ ಪ್ರಧಾನ ವ್ಯವಸ್ಥೆಯ ಪರ ಇರುವವರಿಂದ ಎಂದಿಗೂ ಸಾಧ್ಯವಿಲ್ಲ. ಇವೆಲ್ಲಕ್ಕಿಂತ ಮುಖ್ಯವಾಗಿ, ಮುಸ್ಲಿಂ ಮಹಿಳೆಯರಲ್ಲಿ ಸಾಕ್ಷರತೆಯ ಮಟ್ಟ ಹೆಚ್ಚುತ್ತಿರುವುದು ಕೂಡ, ಹಿಂದೆ ಸಂಭವಿಸಿರುವ ಘೋರ ತಪ್ಪುಗಳನ್ನು ಸರಿಪಡಿಸಿಕೊಳ್ಳುವ ಸಾಧ್ಯತೆಯ ಹಂತಕ್ಕೆ ಸಮಾಜವನ್ನು ತಂದು ನಿಲ್ಲಿಸಿದೆ.

ಸಂವಿಧಾನ ರಚನೆಯ ಸಂದರ್ಭದಲ್ಲಿ ನೀಡಿದ ಕೆಲವು ವಿನಾಯಿತಿಗಳು, ಕಳೆದ ಎಪ್ಪತ್ತು ವರ್ಷಗಳ ಚುನಾವಣಾ ರಾಜಕೀಯದ ಒತ್ತಡಗಳ ಕಾರಣ ಮುಸ್ಲಿಂ ವೈಯಕ್ತಿಕ ಕಾನೂನಿನ ಕೆಲವು ಅಸಾಂವಿಧಾನಿಕ ಅಂಶಗಳಿಗೆ ‘ಕಾನೂನು’ ಎಂಬ ಮಾನ್ಯತೆ ದೊರೆಯಿತು. ಇಷ್ಟೇ ಅಲ್ಲ, ಸಂವಿಧಾನ ಹೇಳುವ ಲಿಂಗ ಸಮಾನತೆ, ಕಾನೂನಿನ ಎದುರು ಎಲ್ಲರೂ ಸಮಾನರು ಎಂಬ ಅಂಶ ಮತ್ತು ಜೀವಿಸುವ ಸ್ವಾತಂತ್ರ್ಯ, ಘನತೆಯ ಜೀವನ ಹೊಂದುವ ಸ್ವಾತಂತ್ರ್ಯಕ್ಕಿಂತಲೂ ಇವುಗಳಿಗೆ ಹೆಚ್ಚಿನ ಮಾನ್ಯತೆ ಸಿಕ್ಕಿತು. ಅಲ್ಪಸಂಖ್ಯಾತರ ಹಕ್ಕುಗಳನ್ನು ಹಾಗೂ ಧಾರ್ಮಿಕ ಹಕ್ಕುಗಳನ್ನು ಸಂವಿಧಾನದ ಚೌಕಟ್ಟಿನಲ್ಲಿ ಸೇರಿಸುವ ಬಗೆ ಹೇಗೆ ಎಂಬ ವಿಚಾರದಲ್ಲಿ ಎಪ್ಪತ್ತು ವರ್ಷಗಳಿಂದಲೂ ಸ್ಪಷ್ಟತೆ ಇಲ್ಲದ ಕಾರಣ ಇಂತಹ ಸಮಸ್ಯೆಗಳು ಬಹುಕಾಲದಿಂದಲೂ ಹಾಗೇ ಉಳಿದಿವೆ.

ಸಮಸ್ಯೆಗಳು ಆರಂಭವಾಗಿದ್ದು 1946ರಲ್ಲಿ. ದೇಶ ವಿಭಜನೆಗೂ ಎಂಟು ತಿಂಗಳ ಮೊದಲು ಸಂವಿಧಾನ ಕರಡು ರಚನಾ ಸಭೆಯು ಅಖಂಡ ಭಾರತಕ್ಕೆ ಪ್ರಜಾಸತ್ತಾತ್ಮಕ ಸಂವಿಧಾನವೊಂದನ್ನು ರಚಿಸುವ ಕೆಲಸ ಆರಂಭಿಸಿತ್ತು. ಹಿಂದೂಗಳಿಗೆ ಹಾಗೂ ಮುಸ್ಲಿಮರಿಗೆ ಪ್ರತ್ಯೇಕ ಮತ ಕ್ಷೇತ್ರಗಳ ವ್ಯವಸ್ಥೆ ಇರಬೇಕು, ಇದರ ಆಧಾರದಲ್ಲೇ ಚುನಾವಣೆ ನಡೆಯಬೇಕು ಎಂಬ ಆಗ್ರಹವನ್ನು ಮುಸ್ಲಿಂ ಲೀಗ್ ಮುಂದಿಟ್ಟಿತು. ಈ ವಿಚಾರದಲ್ಲಿ ಏನಾದರೂ ನಡೆಯುವ ಮೊದಲೇ ದೇಶವಿಭಜನೆ ಎಂಬುದು ವಾಸ್ತವವಾಯಿತು. ಮುಸ್ಲಿಂ ಲೀಗ್‌ನ ಬಹುತೇಕ ನಾಯಕರು ತಾವು ಬಯಸಿದ ಪ್ರತ್ಯೇಕ ಮುಸ್ಲಿಂ ದೇಶ ಪಾಕಿಸ್ತಾನಕ್ಕೆ ಹೋದರು.  ಕೆಲವರು ಭಾರತದಲ್ಲೇ ಉಳಿದರು.

ಸಂವಿಧಾನ ಕರಡು ರಚನಾ ಸಭೆಯು ತನ್ನ ಕೆಲಸವನ್ನು ಪುನರಾರಂಭ ಮಾಡಿದಾಗ, ಕೆಲಸಗಳು ವಿವೇಕಯುತವಾಗಿ ಆಗುತ್ತವೆ ಎಂದು ಕಾಂಗ್ರೆಸ್ಸಿನ ನಾಯಕರು ನಿರೀಕ್ಷಿಸಿದ್ದರು. ಆದರೆ ತಮಿಳುನಾಡಿನ ಸದಸ್ಯ ಪೋಕರ್ ಸಾಹಿಬ್ ಅವರು, ಕಾಂಗ್ರೆಸ್ ನಾಯಕರಿಗೆ ಆಘಾತ ತಂದಿತ್ತರು. ಶಾಸನಸಭೆಗಳಿಗೆ ಪ್ರತಿನಿಧಿಗಳನ್ನು ಪ್ರತ್ಯೇಕ ಮತ ಕ್ಷೇತ್ರಗಳ ಮೂಲಕ ಆಯ್ಕೆ ಮಾಡುವ ವ್ಯವಸ್ಥೆ ಬೇಕು ಎಂದು ಅವರು ಆಗ್ರಹಿಸಿದರು. ‘ಮುಸ್ಲಿಮರ ಅವಶ್ಯಕತೆಗಳನ್ನು ಅರ್ಥ ಮಾಡಿಕೊಳ್ಳಲು ಮುಸ್ಲಿಮೇತರರಿಗೆ ಸಾಧ್ಯವಿಲ್ಲ. ಹಾಗಾಗಿ, ಮುಸ್ಲಿಮರಿಗೆ ಪ್ರತ್ಯೇಕ ಮತಕ್ಷೇತ್ರಗಳ ವ್ಯವಸ್ಥೆ ಇರಬೇಕು’ ಎಂದು ಸಾಹಿಬ್ ಒತ್ತಾಯಿಸಿದರು.

ಈ ಮಾತು ಕೇಳಿ ಸರ್ದಾರ್ ಪಟೇಲ್, ಗೋವಿಂದ ವಲ್ಲಭ ಪಂತ್ ಅವರಂತಹ ನಾಯಕರಿಗೆ ತಮ್ಮ ಕಿವಿಗಳನ್ನೇ ನಂಬಲು ಆಗಲಿಲ್ಲ. ಪಾಕಿಸ್ತಾನದ ರಚನೆ ಆಗಿ ಹದಿನೈದೇ ದಿನಗಳ ನಂತರ ಪ್ರತ್ಯೇಕ ಮತ ಕ್ಷೇತ್ರಗಳ ವ್ಯವಸ್ಥೆಗೆ ಮತ್ತೆ ಬೇಡಿಕೆ ಕೇಳಿಬಂದಿತ್ತು! 'ಈ ನತದೃಷ್ಟ ದೇಶದಲ್ಲಿ, ದೇಶ ವಿಭಜನೆಯ ನಂತರವೂ ಪ್ರತ್ಯೇಕ ಮತ ಕ್ಷೇತ್ರಗಳ ವ್ಯವಸ್ಥೆಗೆ ಬೇಡಿಕೆ ಮುಂದುವರಿಯುತ್ತದೆ ಎಂದಾದರೆ, ದೇಶಕ್ಕೆ ಒಳ್ಳೆಯದಾಗುವುದಿಲ್ಲ. ಇಂಥ ದೇಶದಲ್ಲಿ ಇರಬೇಕಾಗಿಲ್ಲ' ಎಂದು ಪಟೇಲರು ಹೇಳಿದ್ದರು.

ಆಗ ಗಟ್ಟಿ ನಿಲುವು ತಳೆದ ನಾಯಕರು ಕಿಡಿಗೇಡಿತನದ ಈ ಕೃತ್ಯವನ್ನು ಮೊಳಕೆಯಲ್ಲೇ ಚಿವುಟಿದರು. ಆದರೆ ಏಕರೂಪ ನಾಗರಿಕ ಸಂಹಿತೆಯ ವಿಚಾರದಲ್ಲಿ ನಾಯಕರು ಗಟ್ಟಿ ನಿಲುವು ತಾಳಲಿಲ್ಲ.

ಮುಸ್ಲಿಂ ಸದಸ್ಯರ ನಿರಂತರ ಪ್ರತಿರೋಧದ ಕಾರಣದಿಂದ ಏಕರೂಪ ನಾಗರಿಕ ಸಂಹಿತೆಯ ವಿಚಾರವನ್ನು ಸಂವಿಧಾನದ ರಾಜ್ಯ ನಿರ್ದೇಶನ ತತ್ವಗಳ ಅಧ್ಯಾಯದಲ್ಲಿ ಉಲ್ಲೇಖಿಸಲಾಯಿತು. ಮುಸ್ಲಿಂ ಸದಸ್ಯರಿಂದ ಇದಕ್ಕೂ ವಿರೋಧ ಎದುರಾಗಿತ್ತು. ಆದರೆ ಅವರ ವಿರೋಧಕ್ಕೆ ಮಣಿಯಲು ಡಾ. ಅಂಬೇಡ್ಕರ್ ಒಪ್ಪಲಿಲ್ಲ. ವಿವಾಹ, ಉತ್ತರಾಧಿಕಾರದಂತಹ ವಿಚಾರಗಳ ಬಗ್ಗೆ ಕಾನೂನು ರೂಪಿಸುವ ಅಧಿಕಾರ ಪ್ರಭುತ್ವಕ್ಕೆ ಇದೆ ಎಂದು ಅಂಬೇಡ್ಕರ್ ಹೇಳಿದರು. ಆದರೆ, ಪಾಕಿಸ್ತಾನವನ್ನು ರಚಿಸಿದ ಹೊರತಾಗಿಯೂ ಕಾಂಗ್ರೆಸ್ ಪಕ್ಷದ ನಾಯಕರು, ಮುಸ್ಲಿಂ ನಾಯಕರು ಎಂದು ಕರೆಸಿಕೊಂಡವರ ಒತ್ತಡಕ್ಕೆ ಮಣಿದರು. ಈ ಮುಸ್ಲಿಂ ನಾಯಕರು ಹಿಂದುಳಿಯುವುದನ್ನೇ ಆಯ್ಕೆ ಮಾಡಿಕೊಂಡಿದ್ದರು. ಆ ಮೂಲಕ, ಎಲ್ಲ ವೈಯಕ್ತಿಕ ಕಾನೂನುಗಳನ್ನು ಸಂವಿಧಾನದ ಮೂಲ ತತ್ವಗಳ ಅಡಿಯಲ್ಲಿ ತರಬಹುದಾಗಿದ್ದ ಏಕರೂಪ ನಾಗರಿಕ ಸಂಹಿತೆಯನ್ನು ಹೊಂದಲು ದೇಶಕ್ಕೆ ಆಗಲಿಲ್ಲ.

ಇದಾದ ನಂತರ, ದಶಕಗಳು ಕಳೆಯುವ ಮುನ್ನವೇ, ಸ್ಪರ್ಧಾತ್ಮಕ ಚುನಾವಣಾ ರಾಜಕೀಯವು ಮುಸ್ಲಿಂ ತುಷ್ಟೀಕರಣಕ್ಕೆ ಕಾರಣವಾಯಿತು. ಇದು ವಾಸ್ತವದಲ್ಲಿ ಮುಲ್ಲಾಗಳ ತುಷ್ಟೀಕರಣದ ಮಟ್ಟಕ್ಕೆ ಇಳಿಯಿತು. ತುಷ್ಟೀಕರಣವನ್ನು ನೆಹರೂ ಕಾಲದಿಂದಲೂ ಕರಗತ ಮಾಡಿಕೊಂಡ ಕಾಂಗ್ರೆಸ್ ಪಕ್ಷ ಮುಸ್ಲಿಮರನ್ನು ವೋಟ್ ಬ್ಯಾಂಕ್‌ ರೀತಿಯಲ್ಲೇ ನಡೆಸಿಕೊಂಡಿತು. ವೈಯಕ್ತಿಕ ಕಾನೂನುಗಳನ್ನು ತಾನು ಎಂದಿಗೂ ಮುಟ್ಟಲು ಬರಲಾರೆ ಎಂಬ ಸಂದೇಶ ನೀಡುತ್ತ ಕಾಂಗ್ರೆಸ್ ಪಕ್ಷ ಮುಲ್ಲಾಗಳನ್ನು ನಿರಂತರವಾಗಿ ಓಲೈಸುತ್ತ ಬಂದಿತು. ಏಕರೂಪ ನಾಗರಿಕ ಸಂಹಿತೆಯು ಕನಸಾಗಿಯೇ ಉಳಿಯಿತು.

ನಂತರದ ಕಾಲಘಟ್ಟದಲ್ಲಿ, ಇತರ ರಾಜಕೀಯ ಪಕ್ಷಗಳು ಕೂಡ ಇದೇ ಕೆಲಸಕ್ಕೆ ಇಳಿದವು. ಮುಲ್ಲಾಗಳನ್ನು ಓಲೈಸುವುದನ್ನು ಜೋರಾಗಿಯೇ ಮಾಡಿದವು. ಇದರ ಪರಿಣಾಮವಾಗಿ, ಇಸ್ಲಾಮಿಕ್ ದೇಶಗಳಲ್ಲಿ ಮುಸ್ಲಿಂ ವೈಯಕ್ತಿಕ ಕಾನೂನುಗಳಲ್ಲಿ ಆಗಿರುವ ಬದಲಾವಣೆ ಬಗ್ಗೆ ಪರಿಶೀಲಿಸಲು 1963 ರಲ್ಲಿ ಕೇಂದ್ರ ಸರ್ಕಾರ ಇಚ್ಛೆ ವ್ಯಕ್ತಪಡಿಸಿದಾಗ ಧಾರ್ಮಿಕ ಮುಖಂಡರಿಂದ ತೀವ್ರ ಪ್ರತಿಭಟನೆ ಎದುರಾಯಿತು. ಹಾಗಾಗಿ ಕೇಂದ್ರ ತನ್ನ ಆಲೋಚನೆ ಕೈಬಿಟ್ಟಿತು.

ನಂತರದ ದಶಕಗಳಲ್ಲಿ, ಏಕರೂಪದ ದತ್ತು ಕಾಯ್ದೆ ತರುವ ಆಲೋಚನೆ ಕೈಬಿಡಲು ಮುಲ್ಲಾಗಳು ಇಂದಿರಾ ಗಾಂಧಿ ಸರ್ಕಾರದ ಮೇಲೆ ಒತ್ತಡ ತಂದರು. ವಿಚ್ಛೇದಿತ ಮುಸ್ಲಿಂ ಮಹಿಳೆಯರಿಗೆ ಸಮಾಧಾನ ತರುವಂತಿದ್ದ, ಶಾಬಾನೊ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪನ್ನು ವ್ಯರ್ಥಗೊಳಿಸುವ ಶಾಸನವನ್ನು ಸಂಸತ್ತಿನ ಮೂಲಕ ತರುವಂತೆ ಇವರು ರಾಜೀವ್ ಗಾಂಧಿ ಅವರ ಮೇಲೆ ಒತ್ತಡ ತಂದರು.

ಈಗಾಗಲೇ ಹೇಳಿರುವಂತೆ, ಈಗ ಎದುರಾಗಿರುವ ಸಂದರ್ಭವು ಅನಿರೀಕ್ಷಿತ ಅದೃಷ್ಟದಂತಿದೆ. ಹಾಗಾಗಿ ಈ ಪ್ರಕರಣವು ಬದಲಾವಣೆ ತರುವ ಸಾಧ್ಯತೆ ಇದೆ. ನಾವು ಈಗ, ಒಳ್ಳೆಯದೇ ಆಗುತ್ತದೆ ಎಂಬ ನಿರೀಕ್ಷೆಯಿಂದ ಕಾದು ನೋಡೋಣ!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry