ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2019ರಲ್ಲಿ ವಿಶ್ವ ತುಳು ಸಮ್ಮೇಳನಕ್ಕೆ ನಿರ್ಧಾರ

ಪುತ್ತೂರು: ಪೂರ್ವಭಾವಿ ಸಮಾಲೋಚನಾ ಸಭೆ
Last Updated 1 ಜೂನ್ 2017, 4:25 IST
ಅಕ್ಷರ ಗಾತ್ರ

ಪುತ್ತೂರು: `ನಮ್ಮ ತುಳುನಾಡ್ ಟ್ರಸ್ಟ್ ಕುಡ್ಲ' ಎಂಬ ಸಂಸ್ಥೆಯು ಪುತ್ತೂರಿನಲ್ಲಿ ಮುಂದಿನ 2019ರಲ್ಲಿ ವಿಶ್ವ ತುಳು ಸಮ್ಮೇಳನ ನಡೆಸಲು ಉದ್ದೇಶಿಸಿದೆ.‌

ಟ್ರಸ್ಟ್‌ನ ಗೌರವಾಧ್ಯಕ್ಷ ಹರಿಕೃಷ್ಣ ಪುನರೂರು ಮಂಗಳವಾರ ಪುತ್ತೂರಿನ ಬಂಟರ ಭವನದಲ್ಲಿ ನಡೆದ ಪೂರ್ವ ಭಾವಿ ಸಮಾಲೋಚನಾ ಸಭೆಯಲ್ಲಿ  ಈ ನಿರ್ಣಯ ಕೈಗೊಂಡಿದ್ದು, ಟ್ರಸ್ಟ್‌ ನ ಸ್ಥಾಪಕಾಧ್ಯಕ್ಷ ಜಿ.ವಿ.ಎಸ್. ಉಳ್ಳಾಲ್, ಸಂಚಾಲಕಿ ವಿದ್ಯಾಶ್ರೀ, ಅಧ್ಯಕ್ಷ ಕಡಬ ದಿನೇಶ್ ರೈ ಅವರು ಸಮ್ಮೇಳನದ ರೂಪುರೇಷೆಗಳ  ಮಾಹಿತಿ ನೀಡಿದರು.

ಏಳು ದಿನ ಆಯನ: ಒಂದು ದಿನ ‘ಪೊಂಜೊವೆಲೆನ ಆಯನ’, ಇನ್ನೊಂದು ದಿನ ‘ಜೋಕುಲೆನ ಆಯನ’, ಮತ್ತೊಂದು ದಿನ ಜನಪದ ಕ್ರೀಡಾ ಆಯನ, ಮತ್ತೊಂದು ದಿನ ಜನಪದ ಕಲಾ ಆಯನ ಹೀಗೆ ಒಟ್ಟು ಏಳು ದಿನಗಳ ಹಬ್ಬ ನಡೆಸುವುದು ನಮ್ಮ ಆಶಯವಾಗಿದ್ದು, ಸಮ್ಮೇಳನ ನಡೆಸುವ ನಿಟ್ಟಿನಲ್ಲಿ ಗ್ರಾಮ, ವಲಯ, ತಾಲ್ಲೂಕು, ಜಿಲ್ಲೆ ಮತ್ತು ಹೊರನಾಡು ಮಟ್ಟಗಳಲ್ಲಿ ನಾನಾ ಸಮಿತಿಗಳನ್ನು ರಚಿಸುವ ಉದ್ದೇಶವಿದೆ’ ಎಂದು  ಕಡಬ ದಿನೇಶ್ ರೈ ಅವರು ತಿಳಿಸಿದರು.

ಪುತ್ತೂರು ರಾಮಕೃಷ್ಣ ಪ್ರೌಢ ಶಾಲೆಯ ಆಡಳಿತ ಮಂಡಳಿಯ ಸಂಚಾಲಕ ಹೇಮನಾಥ ಶೆಟ್ಟಿ ಕಾವು ಮಾತನಾಡಿ, ಏಳು ದಿನಗಳ ಸಮ್ಮೇಳನದ ಆಶಯವೇನೋ ಉತ್ತಮ. ಆದರೆ ಈ ಸಭೆಯಲ್ಲಿ ಅದನ್ನು ನಿರ್ಣಯಿಸುವಂತಿಲ್ಲ. 

ಅಷ್ಟು ದೊಡ್ಡ ಮಟ್ಟದ ಸಮ್ಮೇಳನ ನಡೆಸಬೇಕಾದರೆ ಅದಕ್ಕೆ ಅಗಾಧವಾದ ಕೆಲಸಗಳು ನಡೆಯಬೇಕು. ಹೀಗಾಗಿ ಸಮಾವೇಶದ ಬಗ್ಗೆ ಯಾವುದೇ ನಿರ್ಣಯ ಇಂದು ಕೈಗೊಳ್ಳಲು ಸಾಧ್ಯವಿಲ್ಲ. ಅದಕ್ಕೆ ಮೊದಲು ಸಮಾಜದ ಎಲ್ಲ ಸ್ತರದ, ಎಲ್ಲ ಜಾತಿ, ಧರ್ಮಗಳ ತುಳುವರ ಪ್ರಾತಿನಿಧಿಕ ಸಂಸ್ಥೆಗಳನ್ನು ಒಟ್ಟು ಸೇರಿಸಿ ಅವರೆಲ್ಲರ ಅಭಿಪ್ರಾಯ ಪಡೆದು ಮುಂದುವರಿಯಬೇಕು ಎಂದು ಸಲಹೆ ನೀಡಿದರು.

ಏಳು ದಿನಗಳ ಸಮ್ಮೇಳನ ನಡೆಸಲು ಸಾಧ್ಯವೇ ಎಂಬ ಬಗ್ಗೆಯೂ  ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹರಿಕೃಷ್ಣ ಪುನರೂರು ಅವರು ಹೇಳಿದರು.
ಹಿರಿಯ ಯಕ್ಷಗಾನ ಕಲಾವಿದ ಕೆ.ಎಚ್.ದಾಸಪ್ಪ ರೈ,  ವಿದ್ವಾನ್ ಕುದ್ಕಾಡಿ ವಿಶ್ವನಾಥ ರೈ, ಪುತ್ತೂರು ವರ್ತಕ ಸಂಘದ ಅಧ್ಯಕ್ಷ ಭಾಸ್ಕರ ಬಾರ್ಯ, ರಂಗಕರ್ಮಿ ಚಿದಾನಂದ ಕಾಮತ್ ಕಾಸರಗೋಡು,  ಸಾಂಸ್ಕೃತಿಕ ಸಂಘಟಕ ನಿರಂಜನ ರೈ ಮಠಂತಬೆಟ್ಟು, ಕಲಾ ಸಂಘಟಕ ಬೂಡಿಯಾರ್ ರಾಧಾಕೃಷ್ಣ ರೈ, ರವಿಪ್ರಸಾದ್ ಶೆಟ್ಟಿ,  ಸಮಾಜ ಸೇವಾ ಕಾರ್ಯಕರ್ತೆ ಹರಿಣಾಕ್ಷಿ ಜೆ. ಶೆಟ್ಟಿ, ಮಹಾಬಲ ರೈ, ರಾಕೇಶ್ ರೈ ಕೆಡೆಂಜಿ, ಲೋಕೇಶ್ ಹೆಗ್ಡೆ ಮತ್ತಿತರರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ವಿಶ್ವಮಟ್ಟದ ತುಳು ಸಮ್ಮೇಳನ ನಡೆಸುವುದಿದ್ದರೆ ಅದು ಎಲ್ಲ ಜಾತಿ, ಸಮುದಾಯ, ಧರ್ಮಗಳ ಜನರನ್ನು ಸೇರಿಸಿಕೊಂಡು ಮಾಡುವಂತಿರಬೇಕು. ಆ ಮಟ್ಟದಲ್ಲಿ ಮಾಡುವುದಿದ್ದರೆ ಬೃಹತ್ ಮೊತ್ತದ ಹಣಕಾಸಿನ ವ್ಯವಸ್ಥೆಯೂ ಬೇಕು. ಕೇವಲ ಸಮಿತಿಯೊಂದನ್ನು ರಚಿಸಿ ಅದರ ಸದಸ್ಯರೆಲ್ಲರೂ ಒಂದಷ್ಟು ಹಣ ನೀಡಿ ಎಂದು ಹೇಳುವಂತಿರಬಾರದು.

ಎಲ್ಲ ಜಾತಿಗಳ ಸಂಘಟನೆಗಳು, ಸಂಘ ಸಂಸ್ಥೆಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಅದಕ್ಕಾಗಿ ಸರ್ವರನ್ನೂ ಸೇರಿಸಿಕೊಂಡು ಒಂದು ಸಮಾಲೋಚನೆ ನಡೆಸಿ, ಅಲ್ಲಿ ಸಂಗ್ರಹವಾದ ಅಭಿಪ್ರಾಯಗಳನ್ನು ಪಡೆದುಕೊಂಡು ಮುಂದಡಿ ಇಡುವುದು ಉತ್ತಮ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT