ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಿಡ–ಗಂಟಿಗಳೊಳಗೆ ಹಳೇ ಆಸ್ಪತ್ರೆ!

ಚಿಣ್ಯ ಗ್ರಾಮ; ನಾಟಕ ಆಡಿ, ಹಣ ಸಂಗ್ರಹಿಸಿ ಕಟ್ಟಿದ್ದ ಕಟ್ಟಡಕ್ಕೆ ಈ ದುಸ್ಥಿತಿ
Last Updated 1 ಜೂನ್ 2017, 5:36 IST
ಅಕ್ಷರ ಗಾತ್ರ

ನಾಗಮಂಗಲ: ಸಾರ್ವಜನಿಕರ ದೇಣಿಗೆ ಮತ್ತು ಸರ್ಕಾರದ ಹಣದಿಂದ ನಿರ್ಮಾಣ ಗೊಂಡ ಆಸ್ಪತ್ರೆ ಕಟ್ಟಡವೊಂದು ಗಿಡ–ಗಂಟಿಗಳಿಂದ ಆವೃತವಾಗಿ, ಪಾಳು ಬೀಳುವ ಸ್ಥಿತಿ ತಲುಪಿರುವುದು ವಿಪರ್ಯಾಸ.

ಕಿರಿಯ ಆರೋಗ್ಯ ಮಹಿಳಾ ಸಹಾಯಕಿ ವಸತಿಗೃಹ ಹಾಗೂ ಉಪ ಕೇಂದ್ರವು ಶಿಥಿಲಾವಸ್ಥೆಗೆ ಒಳಗಾಗಿರು ವುದು ಆಳುವ ವರ್ಗಕ್ಕೆ ಹಿಡಿದ ಕೈಗನ್ನಡಿಯಂತಿದೆ. ಸೊಳ್ಳೆಗಳ ಉತ್ಪತ್ತಿ ತಡೆಯಬೇಕಾದ ಇಲಾಖೆಯೇ ತನ್ನದೇ ವ್ಯಾಪ್ತಿಗೆ ಬರುವ ಕಟ್ಟಡದ ಸುತ್ತ ಸೊಳ್ಳೆಗಳ ಉತ್ಪತ್ತಿ ತಡೆಯಲು ವಿಫಲವಾಗಿದೆ.

ತಾಲ್ಲೂಕಿನ ಚಾಮರಾಜನಗರ–ಜೇವರ್ಗಿ  ರಾಷ್ಟ್ರೀಯ ಹೆದ್ದಾರಿ 150ಎ ಪಕ್ಕದ ಗ್ರಾಮ, ಮಾಜಿ ಅರೋಗ್ಯ ಸಚಿವ, ಹಾಲಿ ಶಾಸಕ ಎನ್ . ಚಲುವರಾಯ ಸ್ವಾಮಿ ಅವರ  ಹೋಬಳಿ ಕೇಂದ್ರ ಹೊಣಕೆರೆಗೆ ಹೊಂದಿ  ಕೊಂಡಂತಿ  ರುವ  ವಾಣಿಜ್ಯ  ಗ್ರಾಮ  ಚಿಣ್ಯದ  ಪ್ರಾಥಮಿಕ  ಆರೋಗ್ಯ ಕೇಂದ್ರದ ಹಳೆಯ ಕಟ್ಟಡದ ಸ್ಥಿತಿ ಚಿಂತಾಜನಕವಾದುದು.

ಚಿಣ್ಯ ಗ್ರಾಮದಲ್ಲಿ 1960ರ ಸುಮಾರಿನಲ್ಲಿ ಅಂದಿನ ಹಣಕಾಸು ಸಚಿವ ಟಿ.ಮರಿಯಪ್ಪ ಅಧ್ಯಕ್ಷತೆಯಲ್ಲಿ ಗ್ರಾಮಸ್ಥರೇ ಸೇರಿ ಕುರುಕ್ಷೇತ್ರ ನಾಟಕವಾಡಿ ₹ 15 ಸಾವಿರ ಹಣವಂತಿಕೆ ಸಂಗ್ರಹಿಸಿ, ₹ 25 ಸಾವಿರ ಹಣವನ್ನು ಸರ್ಕಾರದಿಂದ ಭರಿಸಿ ಒಟ್ಟು ₹ 40 ಸಾವಿರ ವೆಚ್ಚದಲ್ಲಿ ಈ ಆಸ್ಪತ್ರೆ ಕಟ್ಟಡ ನಿರ್ಮಿಸಲಾಗಿತ್ತು. 

ಕಳೆದ 51 ವರ್ಷಗಳಿಂದ ನಿರಂತರವಾಗಿ ಲಕ್ಷಾಂತರ ರೋಗಿಗಳ ಆರೋಗ್ಯ ಕಾಪಾಡಿದ್ದ ಕಟ್ಟಡ ಇಂದು ಕೇಳುವವರಿಲ್ಲದೆ ಅನಾರೋಗ್ಯಕ್ಕೀಡಾಗಿದೆ. ಕುಡುಕರ, ಅನೈತಿಕ ಚಟುವಟಿಕೆ ನಡೆಸುವವರ ತಾಣವಾಗಿದೆ. 

ಎನ್. ಚಲುವರಾಯಸ್ವಾಮಿ ಆರೋಗ್ಯ ಸಚಿವರಾಗಿದ್ದ ಅವಧಿಯಲ್ಲಿ ತಾಲ್ಲೂಕಿನ ಹಲವು ಕಡೆ ಸಮುದಾಯ ಆರೋಗ್ಯ ಕೇಂದ್ರ ಪ್ರಾರಂಭಿಸಿದರು.  ಅಂತೆಯೇ ಚಿಣ್ಯ ಗ್ರಾಮ  ನೀರಾವರಿ ಇಲಾಖೆ  ಆವರಣದಲ್ಲಿ ಆರೋಗ್ಯ ಕೇಂದ್ರದ ಕಚೇರಿ 2011ರ ಜೂನ್ 6 ರಂದು ಅಧಿಕೃತವಾಗಿ ಫ್ರಾರಂಭವಾಯಿತು.


ಕೆಲವು ದಿನಗಳ ಹಿಂದೆ ಜಿಲ್ಲಾ ಆರೋಗ್ಯಾಧಿಕಾರಿ, ಇದೇ ಹೋಬಳಿಯ  ಡಾ.ಮೋಹನ್ ಮತ್ತು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಟಿ.ಎನ್. ಧನಂಜಯ ಮತ್ತವರ ತಂಡ ಭೇಟಿ ನೀಡಿ ಪರಿಶೀಲಿಸಿದರು. ಆದರೂ ಹಳೆಯ ಆಸ್ಪತ್ರೆ ಕಟ್ಟಡಕ್ಕೆ ಕಾಯಕಲ್ಪ ನೀಡಲು ಸಾಧ್ಯವಾಗಿಲ್ಲ.

‘ಈ ಕಟ್ಟಡವನ್ನು ಈ ಹಿಂದೆಯೇ ಸೆಸ್‌್ಕ ಕಚೇರಿಗೆ ನೀಡುವಂತೆ ಆಗ್ರಹಿಸಿ ದ್ದೇವೆ’ ಎನ್ನುತ್ತಾರೆ ಆದರ ಪಕ್ಕದಲ್ಲಿಯೇ ವಾಸವಿರುವ ಗ್ರಾಮಸ್ಥ ರವಿ.
‘ಬಹಳ ಹಿಂದೆಯೇ ಗ್ರಾಮ ಪಂಚಾಯಿತಿಗೆ ಕಟ್ಟಡದ ಆವರಣವನ್ನು  ಶುಚಿಗೊಳಿಸಲು ಹೇಳಿದ್ದೇನೆ’ ಎಂದು ಶಾಸಕ  ಎನ್.ಚಲುವರಾಯಸ್ವಾಮಿ ಹೇಳುತ್ತಾರೆ.

ನಾಟಕ ತಂಡದಲ್ಲಿ ಭಾಗವಹಿಸಿ ದೇಣಿಗೆ ಸಂಗ್ರಹಿಸಿ ಕಟ್ಟಡ ನಿರ್ಮಾಣವಾಗಲು ಕಾರಣಕರ್ತರಾದ ನಿವೃತ್ತ ಶಿಕ್ಷಕ ಚನ್ನವೀರೇಗೌಡ  ಕಟ್ಟಡದ ಈಗಿನ ಸ್ಥಿತಿಗೆ ಬೇಸರ ವ್ಯಕ್ತಪಡಿಸಿದ್ದಾರೆ. ಹಿಂದಿನವರ ಶ್ರಮ ಮತ್ತು   ದಾನ ಮಾಡುವ ಗುಣ ಈಗಿನ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಅರ್ಥವಾಗುವುದಿಲ್ಲ ಎಂದು ಖೇದ ವ್ಯಕ್ತಪಡಿಸಿದರು.

‘ತಾಲ್ಲೂಕು ಪಂಚಾಯ್ತಿ ಸಭೆಯಲ್ಲಿ ಸೆಸ್‌್ಕನ ಎಇಇ ಗೆ ಕಟ್ಟಡವನ್ನು ತಮ್ಮ ಇಲಾಖೆಯ ಸುಪರ್ದಿಗೆ ತೆಗೆದುಕೊಳ್ಳುವಂತೆ ಸೂಚಿಸಲಾಗಿತ್ತು. ಆದರೆ ಆ ಕೆಲಸ ಆಗಿಲ್ಲ’ ಎನ್ನುತ್ತಾರೆ ತಾಲ್ಲೂಕು ಪಂಚಾತಿಯಿ ಅಧ್ಯಕ್ಷ ಆರ್.ಕೃಷ್ಣೇಗೌಡ.

‘ಹಿರಿಯರ ಶ್ರಮದಿಂದ ಕಟ್ಟಿದ ಕಟ್ಟಡವೊಂದು ಬಳಕೆಯಾಗದೆ ಶಿಥಿಲಾವಸ್ಥೆ ತಲುಪುತ್ತಿರುವುದು ದುರದೃಷ್ಟ’ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಕರೀಗೌಡ ತಿಳಿಸಿದರು.


‘ಚಿಣ್ಣರ ಅಂಗಳ, ಗ್ರಂಥಾಲಯ ಅಥವಾ ಯಾವುದಾದರೂ ಸಾರ್ವಜನಿಕ ಬಳಕೆಗೆ ಈ ಕಟ್ಟಡವನ್ನು ಉಪಯೋಗಿಸಬಹುದು’ ಎಂದು ಸ್ನಾತಕೋತ್ತರ ಪದವೀದರೆ. ಗೃಹಿಣಿ ಜ್ಯೋತಿ. ಸಿ. ತಿಳಿಸಿದರು.
ಬಿ.ಸಿ.ಮೋಹನ್‌ಕುಮಾರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT