ಗುಂಡಿನ ಮಳೆ ಸುರಿಸುವ ‘ಸೈನಿಕ್‌ ರೋಬೊ’

7

ಗುಂಡಿನ ಮಳೆ ಸುರಿಸುವ ‘ಸೈನಿಕ್‌ ರೋಬೊ’

Published:
Updated:
ಗುಂಡಿನ ಮಳೆ ಸುರಿಸುವ ‘ಸೈನಿಕ್‌ ರೋಬೊ’

ಕೆ.ಆರ್.ಪೇಟೆ: ವೈಜ್ಞಾನಿಕ ಸಂಶೋಧನೆಗಳ ಮೂಲಕ ರಾಜ್ಯದ ಗಮನ ಸೆಳೆದಿರುವ ಪಟ್ಟಣದ ರೈತ ವಿಜ್ಞಾನಿ, ರೋಬೊ ಮಂಜೇಗೌಡ ಈ ಬಾರಿ ‘ಸೈನಿಕ್‌ ರೋಬೊ’ ಮೂಲಕ ಹೊಸ ಸಂಶೋಧನೆ ನಡೆಸಿದ್ದಾರೆ.

 

ದೇಶದ ಗಡಿ ಕಾಯುವ ಯೋಧರ ಭದ್ರತೆ ಹಾಗೂ ಶತ್ರು ಸೈನಿಕರ ಧ್ವಂಸಕ್ಕಾಗಿ ಅವರು ‘ಸೈನಿಕ್ ರೋಬೊ’ ಆವಿಷ್ಕಾರ ಮಾಡಿದ್ದು, ಪಟ್ಟಣದ ಗ್ರಾಮಭಾರತಿ ಸಮೂಹ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಪ್ರಾತ್ಯಕ್ಷಿಕೆ ನೀಡಿದರು.

 

ಸದಾ ಗಡಿಯಲ್ಲಿ ಶತ್ರುಗಳ ಚಲನವಲನ ಗಮನಿಸುತ್ತ ಗಡಿಯೊಳಗೆ ನುಸುಳಲು ಯತ್ನಿಸುವ ವೈರಿ ಪಡೆಯ ಮೇಲೆ ಗುಂಡಿನ ಮಳೆಗರೆಯುವ ರೋಬೊ ಅನ್ನು ಮಂಜುನಾಥ ಸೃಷ್ಟಿಸಿದ್ದಾರೆ. ಇದರಲ್ಲಿ ಆರು ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಸುವ ವ್ಯವಸ್ಥೆ ಮಾಡಲಾಗಿದ್ದು, ಸುತ್ತಲೂ ವೈರಿಗಳ ಮೇಲೆ ಕಣ್ಣಿಡಲು ಇದರಿಂದ ಸಾಧ್ಯವಾಗುತ್ತದೆ.

 

‘ಕುಳಿತ ಜಾಗದಲ್ಲೇ ಕಂಪ್ಯೂಟರ್‌ನಲ್ಲಿ ವೈರಿಗಳು ಬರುವ ದೃಶ್ಯವನ್ನು ನೋಡಬಹುದು. ಅದರ ಆಧಾರದ ಮೇಲೆ ರಿಮೋಟ್‌ ಗುಂಡಿ ಒತ್ತಿದರೆ ‘ರೋಬೊ ಸೈನಿಕ್‌’ ವೈರಿಗಳ ಮೇಲೆ ಗುಂಡಿನ ಮಳೆ ಸುರಿಸುತ್ತದೆ. ಸೌರಶಕ್ತಿಯ ಮೂಲಕ ಯಂತ್ರ  ಚಾಲನೆಗೊಳ್ಳುತ್ತದೆ. ಸೋಲಾರ್ ಶಕ್ತಿ ಕಡಿಮೆಯಾದರೆ ಇದರೊಳಗೆ ಅಳವಡಿಸಿರುವ ಪೆಟ್ರೋಲ್ ಯಂತ್ರ ತಂತಾನೇ ಚಾಲನೆಗೊಳ್ಳುತ್ತದೆ.

 

ಈಚೆಗೆ ಗಡಿಯಲ್ಲಿ ಯುದ್ಧದ ಸನ್ನಿವೇಶದಿಂದ ಪ್ರಕ್ಷುಬ್ಧ ಪರಿಸ್ಥಿತಿ ಹೆಚ್ಚಾಗಿದ್ದು ದೇಶದ ಸೈನಿಕರು ಅನಗತ್ಯವಾಗಿ ಸಾವನ್ನಪ್ಪುತ್ತಿದ್ದಾರೆ. ಇದನ್ನು ತಪ್ಪಿಸಲು ಸತತ 15 ದಿನ ಈ ಸಂಶೋಧನೆ ಮಾಡಿದ್ದೇನೆ’ ಎಂದು ಮಂಜೇಗೌಡ ಹೇಳಿದರು.

 

ಮಂಜೇಗೌಡ ಅವರು ಎಂಜಿನಿಯರ್ ಅಲ್ಲ, ವಿಜ್ಞಾನಿಯೂ ಅಲ್ಲ. ಅವರು ಓದಿರುವುದು ಕೇವಲ 8ನೇ ತರಗತಿ. ಆದರೆ, ಸಂಶೋಧನೆ ವಿಷಯದಲ್ಲಿ ಯಾವ ಎಂಜಿನಿಯರಿಂಗ್ ಪದವೀಧರನಿಗೂ ಕಡಿಮೆ ಇಲ್ಲ. ಮಾನವ ರಹಿತ ರೈಲ್ವೆ ಗೇಟ್‌ನಿಂದ ಸಂಭವಿಸುವ ಅಪಘಾತ ತಪ್ಪಿಸಲು ಪರಿಹಾರ ಕಂಡುಹಿಡಿದಿದ್ದು, ಸ್ವಯಂಚಾಲಿತ ‘ಹೈಡ್ರೋಲಿಕ್ ರೈಲ್ವೆ ಗೇಟ್’ ಸಂಶೋಧನೆ ನಡೆಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

 

ಕೆರೆ, ಕಟ್ಟೆ, ಕೊಳವೆ ಬಾವಿಯ ಆಳದ ನೀರಿನಲ್ಲಿ ಮುಳುಗಿದ ಶವವನ್ನು ಸುಲಭವಾಗಿ ಪತ್ತೆ ಹಚ್ಚುವ ಯಂತ್ರ ಸಂಶೋಧಿಸಿದ್ದು, ಪೊಲೀಸ್ ಹಾಗೂ ಅಗ್ನಿಶಾಮಕ ಇಲಾಖೆಯ ಉಪಯೋಗಕ್ಕೆ ಬಂದಿದೆ. ಮಂಜೇಗೌಡ ಅವರು ಕಂಡುಹಿಡಿದ ರೋಬೊದಿಂದ ಸದ್ಯ ಕೊಳವೆ ಬಾವಿಯೊಗೆ ಬಿದ್ದ ಶವ ಮೇಲೆತ್ತಲು ಬಳಸಲಾಗುತ್ತಿದೆ.

 

‘ಏನಾದರೂ ಹೊಸತು ಸಾಧಿಸಬೇಕೆಂಬ ತುಡಿತ ಇಂತಹ ಆವಿಷ್ಕಾರಕ್ಕೆ ಪ್ರಚೋದನೆ ನೀಡುತ್ತಿದೆ. ಸರ್ಕಾರ ಮತ್ತು ಸಂಘ ಸಂಸ್ಥೆಗಳ ಬೆಂಬಲ ನಿರೀಕ್ಷಿಸುತ್ತಿದ್ದೇನೆ. ಆದರೆ, ನಾನು ನಿರೀಕ್ಷಿಸಿದ ಮಟ್ಟಕ್ಕೆ ಬೆಂಬಲ ಸಿಗುತ್ತಿಲ್ಲ’ ಎಂದು ಮಂಜೇಗೌಡ ತಿಳಿಸಿದರು.

 

‘ರೋಬೋ ಮಂಜೇಗೌಡ ಅವರ ಸಂಶೋಧನೆ ಅದ್ಭುತವಾದುದು. ಅವರ ಈ ಸಂಶೋಧನೆ ಬಗ್ಗೆ ಭಾರತ ಸರ್ಕಾರ ಗಮನಹರಿಸಬೇಕು. ಭಾರತೀಯ ಸೇನೆಯು ಸೈನಿಕ್ ರೋಬೊ ಸದ್ಭಳಕೆ ಮಾಡಿಕೊಳ್ಳಬೇಕಿದೆ. ಸಂಸದರ ಜತೆ ದೆಹಲಿಗೆ ತೆರಳಿ ಈ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಗಮನಕ್ಕೆ ತರಲಾಗುವುದು’ ಎಂದು ಶಾಸಕ ಕೆ.ಸಿ.ನಾರಾಯಣಗೌಡ ತಿಳಿಸಿದರು.

ಬಲ್ಲೇನಹಳ್ಳಿ ಮಂಜುನಾಥ್

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry