₹ 508 ಕೋಟಿ ಮೊತ್ತದ ಕಾಮಗಾರಿಗಳಿಗೆ ಚಾಲನೆ

7
150 ಕೆರೆಗಳಿಗೆ ನೀರು ತುಂಬಿಸುವ ಯೋಜನೆ, ಹಾರಂಗಿ ಬಲದಂಡೆ ನಾಲೆ ಆಧುನೀಕರಣ

₹ 508 ಕೋಟಿ ಮೊತ್ತದ ಕಾಮಗಾರಿಗಳಿಗೆ ಚಾಲನೆ

Published:
Updated:
₹ 508 ಕೋಟಿ ಮೊತ್ತದ ಕಾಮಗಾರಿಗಳಿಗೆ ಚಾಲನೆ

ಪಿರಿಯಾಪಟ್ಟಣ: ತಾಲ್ಲೂಕಿನ 150 ಕೆರೆಗಳಿಗೆ ನೀರು ತುಂಬಿಸುವುದರಿಂದ ಅಂತರ್ಜಲದ ಮಟ್ಟ ಏರಿಕೆಯಾಗಿ, ರೈತರಿಗೆ ಅನುಕೂಲವಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.ತಾಲ್ಲೂಕಿನ ಮುತ್ತಿನಮುಳಸೋಗೆ ಗ್ರಾಮದಲ್ಲಿ ಬುಧವಾರ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಈ ಕಾರ್ಯಕ್ಕೆ ಶಾಸಕ ವೆಂಕಟೇಶ್ ಒಂದು ವರ್ಷದಿಂದ ಹೇಳುತ್ತಲೇ ಇದ್ದರು. ಈಗ ಇದು ಕಾರ್ಯರೂಪಕ್ಕೆ ಬರುತ್ತಿದೆ. ಈ ಯೋಜನೆ ಮೂಲಕ ಅವರ ಹೆಸರು ತಾಲ್ಲೂಕಿನ ಇತಿಹಾಸದಲ್ಲಿ ಶಾಶ್ವತವಾಗಿ ಸೇರ್ಪಡೆಯಾಗುತ್ತದೆ ಎಂದು ತಿಳಿಸಿದರು.ಮಂತ್ರಿಗಿರಿ ಸಿಕ್ಕರೂ ಇಷ್ಟು ಸಂತಸವಾಗುತ್ತಿರಲಿಲ್ಲ: ಪ್ರಾಸ್ತಾವಿಕವಾಗಿ ಮಾತನಾಡಿದ ಶಾಸಕ ಕೆ.ವೆಂಕಟೇಶ್, ‘ನನಗೆ ಸಚಿವ ಸ್ಥಾನ ನೀಡಿದ್ದರೂ ಇಷ್ಟು ಸಂತಸವಾಗುತ್ತಿರಲಿಲ್ಲ. ಅದಕ್ಕಿಂತಲೂ ಮಿಗಲಾಗಿ 150 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಅನುಮೋದನೆ ದೊರೆತಿರುವುದಕ್ಕೆ ಸಂತೋಷ­ವಾಗುತ್ತಿದೆ’ ಎಂದು ತಿಳಿಸಿದರು.

ಚುನಾವಣೆಯೊಳಗೆ ನೀರು ತುಂಬಿಸುವ ಕಾರ್ಯ ಪೂರ್ಣ­ಗೊಳ್ಳುತ್ತದೆ. ಆದರೆ, ರೈತರು ಪೈಪ್‌ಲೈನ್ ಕಾಮಗಾರಿಗಾಗಿ ತಮ್ಮ ಭೂಮಿಯನ್ನು ಬಿಟ್ಟುಕೊಡಬೇಕು. ಅರೆಮಲೆನಾಡು ಈಗ ಬರದ ನಾಡಾಗಿದೆ. ಇದನ್ನು ಮತ್ತೆ ಅರೆಮಲೆನಾಡು ಮಾಡಲು ಎಲ್ಲರ ಸಹಕಾರ ಅಗತ್ಯ ಎಂದು ಮನವಿ ಮಾಡಿದರು.ಸಭೆಯಲ್ಲಿ ಮತಯಾಚನೆ: ‘ವೆಂಕಟೇಶ್ ಅವರಿಂದ ತಾಲ್ಲೂಕಿನ 150 ಕೆರೆಗಳಿಗೂ ನೀರು ತುಂಬುವಂತಾಗಿದೆ. ಇವರನ್ನು 50 ಸಾವಿರ ಮತಗಳಿಂದ ಚುನಾಯಿಸಬೇಕು’ ಎಂದು ಭಾರಿ ನೀರಾವರಿ ಸಚಿವ ಎಂ.ಬಿ.ಪಾಟೀಲ ಮನವಿ ಮಾಡಿದರು.

‘ವಿವಿಧ ಭವನಗಳ ನಿರ್ಮಾಣ ಕಾರ್ಯಕ್ಕೆ ಹೆಚ್ಚುವರಿ ಹಣ ನೀಡುತ್ತೇನೆ. ಆದರೆ, ವೆಂಕಟೇಶ್ ಅವರನ್ನು ಗೆಲ್ಲಿಸುವುದನ್ನು ಮರೆಯಬಾರದು’ ಎಂದು ಸಮಾಜ ಕಲ್ಯಾಣ ಖಾತೆ ಸಚಿವ ಎಚ್.ಆಂಜನೇಯ ಹೇಳಿದರು. ಜತೆಗೆ, ‘2ನೇ ದೇವರಾಜ ಅರಸು ಸಿದ್ದರಾಮಯ್ಯ ಅವರನ್ನೂ ಬೆಂಬಲಿಸಬೇಕು’ ಎಂದು ಹೇಳುವ ಮೂಲಕ ಜನರ ಭಾರಿ ಕರತಾಡನಕ್ಕೆ ಕಾರಣರಾದರು.

‘ವೆಂಕಟೇಶ್ ಬಹಳ ಜಾಣರು. ಅವರ ಕಡೆಗೆ ಮುಂದಿನ ಚುನಾವಣೆ­ಯಲ್ಲಿ ಪ್ರೀತಿ ಇರಲಿ’ ಎಂದು ಆರೋಗ್ಯ ಖಾತೆ ಸಚಿವ ಕೆ.ಆರ್.ರಮೇಶ್‌ಕುಮಾರ್ ಹೇಳಿದರು.ಇದಕ್ಕೂ ಮುನ್ನ ಹೆಲಿಕಾಪ್ಟರ್ ಮೂಲಕ ಬೈಲಕುಪ್ಪೆಗೆ ಬಂದ ಸಿದ್ದರಾಮಯ್ಯ ಅವರನ್ನು ಟಿಬೇಟನ್ ನಿರಾಶ್ರಿತರು ಸ್ವಾಗತಿಸಿದರು. ಜತೆಗೆ, ವೇದಿಕೆಯಲ್ಲೂ ವಿನೂತನವಾಗಿ ಸನ್ಮಾನಿಸಿದರು. ‘ಸ್ಯಾನ್ ಸಿಟಿ’ ಗ್ರೂಪ್‌ ಅಧ್ಯಕ್ಷ ಸಹ ಸಿದ್ದರಾಮಯ್ಯ ಅವರನ್ನು ಸನ್ಮಾನಿಸಿದರು. ವಿಧಾನಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ,  ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಜೆ.ವಿಜಯಕುಮಾರ್ ಇದ್ದರು.

****

ಸಮುದ್ರ ನೀರು ಶುದ್ಧೀಕರಿಸಲು ₹ 1,500 ಕೋಟಿ; ಸಚಿವ

ಮೈಸೂರು
: ಸಮುದ್ರದ ನೀರನ್ನು ಶುದ್ಧೀಕರಿಸಿ ಮಂಗಳೂರು ನಗರಕ್ಕೆ ಸರಬರಾಜು ಮಾಡುವ ಯೋಜನೆಗೆ ₹ 1,500 ಕೋಟಿ ಮೀಸಲಿಡಲಾ ಗಿದೆ ಎಂದು ನಗರಾಭಿವೃದ್ಧಿ ಸಚಿವ ರೋಷನ್‌ಬೇಗ್ ತಿಳಿಸಿದರು.

ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವ (ಪಿಪಿಪಿ) ಯೋಜನೆ ಯಾಗಿದ್ದು, ಇದರಿಂದ ನಿತ್ಯ 200 ಎಂಎಲ್‌ಡಿ ನೀರು ಪೂರೈಸುವ ಗುರಿ ಹೊಂದಲಾಗಿದೆ. ಮುಂಬರುವ ಚುನಾವಣೆಯಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಯೋಜನೆಯನ್ನು ರಾಜ್ಯದಾದ್ಯಂತ ವಿಸ್ತರಿಸಲಾಗುವುದು ಎಂದು ಭರವಸೆ ನೀಡಿದರು.ಪಿರಿಯಾಪಟ್ಟಣದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ ಕಾರ್ಯಕ್ರಮದಲ್ಲಿ ಮಾತನಾಡಿದರು. ಭಾರಿ ನೀರಾವರಿ ಸಚಿವ ಎಂ.ಬಿ. ಪಾಟೀಲ ಮಾತನಾಡಿ, ‘ರಾಜ್ಯದ ಎಲ್ಲ ಕೆರೆಗಳಿಗೂ ನೀರು ತುಂಬಿಸುವ ಯೋಜನೆ ರೂಪಿಸಲಾಗುವುದು’ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry