ಹದಿನೈದೇ ನಿಮಿಷದಲ್ಲಿ ಮುಗಿದ ಸಭೆ

7
ಕುಂದುಕೊರತೆ ಆಲಿಕೆ; ಸಮಸ್ಯೆ ಇತ್ಯರ್ಥಕ್ಕೆ ಅಧಿಕಾರಿಗಳಿಗೆ ಸಚಿವ ಖಾದರ್ ಸೂಚನೆ

ಹದಿನೈದೇ ನಿಮಿಷದಲ್ಲಿ ಮುಗಿದ ಸಭೆ

Published:
Updated:
ಹದಿನೈದೇ ನಿಮಿಷದಲ್ಲಿ ಮುಗಿದ ಸಭೆ

ಚಾಮರಾಜನಗರ:  ಸಾರ್ವಜನಿಕರ ಕುಂದುಕೊರತೆ ಅಹವಾಲು ಸ್ವೀಕರಿಸಲು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರು ಬುಧವಾರ ನಡೆಸಿದ ಸಭೆಗೆ ಬಂದ ಅರ್ಜಿದಾರರ ಸಂಖ್ಯೆ ಕೇವಲ ಐದು!ಬೆಳಿಗ್ಗೆ 9.30ಕ್ಕೆ ಸಭೆ ನಿಗದಿಪಡಿಸಲಾಗಿತ್ತು. ಆದರೆ ಸಚಿವರು ಬಂದಿದ್ದು 10.45ಕ್ಕೆ. ಒಂದೂ ಕಾಲು ಗಂಟೆ ವಿಳಂಬವಾಗಿ ಆರಂಭವಾದ ಕಾರ್ಯಕ್ರಮ, ಹೆಚ್ಚು ಜನರು ಬಾರದ ಕಾರಣ ಹದಿನೈದೇ ನಿಮಿಷದಲ್ಲಿ ಮುಗಿದು ಹೋಯಿತು.‘ತನ್ನನ್ನು ಕೆಎಸ್‌ಆರ್‌ಟಿಸಿಯ ಭದ್ರತಾ ಸಿಬ್ಬಂದಿ ಕೆಲಸದಿಂದ ಸೂಚನೆ ನೀಡದೆ ತೆಗೆದುಹಾಕಲಾಗಿದೆ. ಅದಕ್ಕಾಗಿ ಸೂಕ್ತ ಪರಿಹಾರ ನೀಡಬೇಕು. ತಮ್ಮ ಮಗನಿಗೆ ಆ ಕೆಲಸ ನೀಡಬೇಕು’ ಎಂದು ವ್ಯಕ್ತಿಯೊಬ್ಬರು ಮನವಿ ಮಾಡಿದರು.

‘ಕೆಲಸದಿಂದ ತೆಗೆದುಹಾಕಿದ ವಿಚಾರ ಪರಿಶೀಲಿಸಬಹುದು. ಆದರೆ, ಬದುಕಿರುವವರ ಕುಟುಂಬಕ್ಕೆ ಅನುಕಂಪದ ಆಧಾರದಲ್ಲಿ ಕೆಲಸ ನೀಡಲು ಸಾಧ್ಯವಿಲ್ಲ. ಇಂತಹ ಕಾನೂನು ದೇಶದಲ್ಲಿ ಬಂದಿಲ್ಲ’ ಎಂದು ಸಚಿವರು ಹೇಳಿದರು.ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಲ್ಲಿ (ಕೆಎಸ್‌ಒಯು) ಪದವಿ ಪಡೆದ ಯುವಕರೊಬ್ಬರಿಗೆ ಪ್ರಥಮ ದರ್ಜೆ ಸಹಾಯಕರ ಹುದ್ದೆಗೆ (ಎಫ್‌ಡಿಸಿ) ಸೇರಿಕೊಳ್ಳಲು ತೊಂದರೆ ಉಂಟಾಗಿರುವುದರ ಕುರಿತು ಕೆಲಹೊತ್ತು ಚರ್ಚೆ ನಡೆಯಿತು.

‘ಕೆಎಸ್‌ಒಯುದಲ್ಲಿ 2012–13ರವರೆಗೆ ಪದವಿ ಪಡೆದವರ ಪ್ರಮಾಣಪತ್ರಕ್ಕೆ ಮಾತ್ರ ಮಾನ್ಯತೆ ಇದೆ. ಇವರು 2013–14ಲ್ಲಿ ಪದವಿ ಪಡೆದಿದ್ದಾರೆ. ಅವರಿಗೆ ಅಂಕಪಟ್ಟಿ ನೀಡಲಾಗುತ್ತಿದೆಯೇ ವಿನಾ, ಘಟಿಕೋತ್ಸವ ಪ್ರಮಾಣಪತ್ರ ನೀಡಲಾಗುತ್ತಿಲ್ಲ. ಆದರೆ, ಅವರ  ಪದವಿಗೆ ಮಾನ್ಯತೆ ನೀಡುವ ವಿಚಾರವನ್ನು ನಮ್ಮ ವಿವೇಚನೆಗೆ ಬಿಡಲಾಗಿದೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ.ಗಾಯತ್ರಿ ತಿಳಿಸಿದರು.ದ್ವಿತೀಯ ದರ್ಜೆ ಸಹಾಯಕ ಹುದ್ದೆಗೆ ಸೇರಿಕೊಂಡು ಬಳಿಕ, ಎಫ್‌ಡಿಸಿಗೆ ಹೋಗಬಹುದು ಎಂದು ಯುವಕನಿಗೆ ಸಚಿವರು ಸಲಹೆ ನೀಡಿದರು.ತಂದೆಯ ಹೆಸರಿನಲ್ಲಿದ್ದ ನಿವೇಶನ ಏಳು ವರ್ಷವಾದರೂ ತಮ್ಮ ಹೆಸರಿಗೆ ವರ್ಗಾವಣೆಯಾಗಿಲ್ಲ ಎಂದು ವ್ಯಕ್ತಿಯೊಬ್ಬರು ಅಹವಾಲು ಸಲ್ಲಿಸಿದರು. ಬಿದಾಯಿ ಯೋಜನೆಯನ್ನು ಹಿಂದುಳಿದ ವರ್ಗದವರಿಗೂ ನೀಡಬೇಕು ಎಂದು ವೃದ್ಧರೊಬ್ಬರು ಮನವಿ ಮಾಡಿದರು. ಪಿಂಚಣಿ ಬರುತ್ತಿಲ್ಲ ಎಂದು ನೋವು ತೋಡಿಕೊಂಡ ವ್ಯಕ್ತಿಯೊಬ್ಬರ ಸಮಸ್ಯೆಯನ್ನು ಕೂಡಲೇ ಪರಿಹರಿಸುವಂತೆ ಸಚಿವರು ಅಧಿಕಾರಿಗಳಿಗೆ ನಿರ್ದೇಶಿಸಿದರು.

ಸಭೆ ಆರಂಭಕ್ಕೂ ಮೊದಲು, ಜಮೀನಿಗೆ ಸಂಬಂಧಿಸಿದ ದೂರು ತಂದಿದ್ದ ವೃದ್ಧರೊಬ್ಬರ ಅರ್ಜಿಯನ್ನು ಪರಿಶೀಲಿಸಿದ ಅಧಿಕಾರಿಯೊಬ್ಬರು, ಸಾಗುವಳಿ ಚೀಟಿಯೇ ಇಲ್ಲದೆ ನಿಮ್ಮ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ಅವರನ್ನು ಕಳುಹಿಸಿದರು. ಸಚಿವರನ್ನು ಖುದ್ದಾಗಿ ಭೇಟಿ ಮಾಡಲು ಸಾಧ್ಯವಾಗದೆ ಅವರು ಬೇಸರದಿಂದ ತೆರಳಿದರು.ಮಹದೇವಪ್ರಸಾದ್‌ ಅವರು ಉಸ್ತುವಾರಿ ಸಚಿವರಾಗಿದ್ದಾಗ ನೂರಾರು ಮಂದಿ ಅರ್ಜಿ ಹಿಡಿದು ಕಾದಿರುತ್ತಿದ್ದರು. ಎಲ್ಲರ ಕುಂದುಕೊರತೆ ವಿಚಾರಿಸಲು ಸಮಯ ಸಾಲುತ್ತಿರಲಿಲ್ಲ. ಆದರೆ, ಬುಧವಾರ ಹೆಚ್ಚು ಜನರು ಬಂದಿರಲಿಲ್ಲ. ಸಭೆ ಕುರಿತು ಸರಿಯಾಗಿ ಮಾಹಿತಿ ನೀಡದೆ ಇರುವುದೇ ಇದಕ್ಕೆ ಕಾರಣ ಎಂದು ಕೆಲವರು ದೂರಿದರು.ಕುಂದುಕೊರತೆ ಸಭೆ ಇದ್ದಾಗ, ಕೆಲವು ದಿನ ಮುಂಚಿತವಾಗಿ ಮಾಹಿತಿ ನೀಡಬೇಕು. ಆದರೆ ಸಭೆಯ ದಿನವೇ ಪತ್ರಿಕೆಗಳಲ್ಲಿ ಮಾಹಿತಿ ಬಂದಿದೆ. ಬೆಳಿಗ್ಗೆ ಇಷ್ಟು ಬೇಗ ದೂರದ ಊರುಗಳಿಂದ ಬರುವುದು ಸಾಧ್ಯವಾಗುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

****

ಮೈಸೂರಿನಲ್ಲಿ ಸವಲತ್ತು ವಿತರಣೆ

ಚಾಮರಾಜನಗರ:
‘ಜೂನ್‌ 3ರಂದು ರಾಜ್ಯ ಸರ್ಕಾರದ ಸವಲತ್ತು ವಿತರಣೆ ಕಾರ್ಯಕ್ರಮ ಮೈಸೂರಿನಲ್ಲಿ ನಡೆಯುತ್ತಿದ್ದು, ಜಿಲ್ಲೆಯಿಂದ 1,000 ಫಲಾನುಭವಿಗಳನ್ನು ಕರೆದೊಯ್ಯಲಾಗುತ್ತದೆ’ ಎಂದು ಸಚಿವ ಯು.ಟಿ. ಖಾದರ್‌ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ‘ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ‘ಕೊಟ್ಟ ಮಾತು ದಿಟ್ಟ ಸಾಧನೆ’ ಘೋಷಣೆಯಡಿ ಸಾಂಕೇತಿಕವಾಗಿ 80 ಫಲಾನುಭವಿಗಳಿಗೆ ವೇದಿಕೆಯಲ್ಲಿ ಸವಲತ್ತು ವಿತರಣೆ ಮಾಡಲಾಗುತ್ತದೆ’ ಎಂದರು.‘ಜಿಲ್ಲೆಯಲ್ಲಿ ಇತ್ತೀಚೆಗೆ ಉತ್ತಮ ಮಳೆಯಾಗುತ್ತಿದ್ದು, ಬಹಳಷ್ಟು ಕೆರೆಕಟ್ಟೆಗಳು ತುಂಬಿವೆ. ರೈತರಿಗೆ ಅಗತ್ಯ ಬಿತ್ತನೆ ಬೀಜ ಮತ್ತು ಗೊಬ್ಬರಗಳನ್ನು ವಿತರಿಸಲು ಸಿದ್ಧತೆ ಮಾಡಲಾಗಿದೆ. ಜಿಲ್ಲೆಯಲ್ಲಿರುವ 20 ಗೋಶಾಲೆ ಮತ್ತು 19 ಮೇವು ಬ್ಯಾಂಕ್‌ಗಳನ್ನು ಹಂತಹಂತವಾಗಿ ಮುಚ್ಚಲಾಗುವುದು’ ಎಂದು ತಿಳಿಸಿದರು.‘ಮಳೆ ನೀರು ಸಂಗ್ರಹವಾಗುವುದರಿಂದ ರೋಗರುಜಿನಗಳು ಹೆಚ್ಚಾಗುವ ಅಪಾಯವಿದೆ. ಜನರ ಆರೋಗ್ಯ ರಕ್ಷಣೆ ದೃಷ್ಟಿಯಿಂದ ಚರಂಡಿ ಸ್ವಚ್ಛತೆ, ಕೀಟನಾಶಕ ಸಿಂಪಡಣೆ, ಕಸ ವಿಲೇವಾರಿಯಂತಹ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ನಗರದ ಜನರಲ್ಲಿ ಮಾಲಿನ್ಯದ ಕಾರಣ ಸಮಸ್ಯೆ ಕಂಡುಬಂದರೆ ಅದಕ್ಕೆ ನಗರಸಭೆಯೇ ಹೊಣೆಯಾಗಲಿದೆ’ ಎಂದರು. ಶಾಸಕರಾದ ಸಿ. ಪುಟ್ಟರಂಗಶೆಟ್ಟಿ, ಎಸ್‌. ಜಯಣ್ಣ, ಜಿಲ್ಲಾಧಿಕಾರಿ ಬಿ. ರಾಮು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry