ಅಧಿವೇಶನದಲ್ಲಿ ಧ್ವನಿ ಎತ್ತುವಂತೆ ಆಗ್ರಹ

7
ಶಾಶ್ವತ ನೀರಾವರಿ ಹೋರಾಟ ಸಮಿತಿಯಿಂದ ಶಾಸಕ ಸುಧಾಕರ್‌ಗೆ ಮನವಿ

ಅಧಿವೇಶನದಲ್ಲಿ ಧ್ವನಿ ಎತ್ತುವಂತೆ ಆಗ್ರಹ

Published:
Updated:
ಅಧಿವೇಶನದಲ್ಲಿ ಧ್ವನಿ ಎತ್ತುವಂತೆ ಆಗ್ರಹ

ಚಿಕ್ಕಬಳ್ಳಾಪುರ: ‘ಬಯಲು ಸೀಮೆಯ ಬರಪೀಡಿತ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಯೋಜನೆಗಳ ಜಾರಿ ವಿಚಾರದಲ್ಲಿ ಸರ್ಕಾರದ ನಿಲುವು ಮತ್ತು ಮುಂದಿರುವ ಯೋಜನೆಗಳ ಕುರಿತು ಜೂನ್‌ 5 ರಂದು ನಡೆಯುವ ವಿಧಾನಸಭೆ ಅಧಿವೇಶನದಲ್ಲಿ ನಿಖರವಾದ ಮಾಹಿತಿಗಳನ್ನು ಪಡೆಯಬೇಕು’ ಎಂದು ಒತ್ತಾಯಿಸಿ ಶಾಶ್ವತ ನೀರಾವರಿ ಹೋರಾಟ ಸಮಿತಿ ಸದಸ್ಯರು ಬುಧವಾರ ಶಾಸಕ ಡಾ.ಕೆ.ಸುಧಾಕರ್ ಅವರಿಗೆ ಮನವಿ ಸಲ್ಲಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್.ಆಂಜನೇಯರೆಡ್ಡಿ, ‘ಬರಪೀಡಿತ ಗಡಿ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಅಂತರ್ಜಲ ಪಾತಾಳ ಸೇರಿ, ಕೆರೆ-ಕುಂಟೆ, ಬಾವಿಗಳೆಲ್ಲಾ ಬತ್ತಿ, ಕಾಲುವೆಗಳೆಲ್ಲಾ ಮಾಯವಾಗಿವೆ.ಕೃಷಿ, ತೋಟಗಾರಿಕೆ ಮತ್ತು ಹೈನೋದ್ಯಮ ತೀವ್ರ ಸಂಕಷ್ಟಕ್ಕೆ ಸಿಲುಕುತ್ತಿದ್ದು, ಶುದ್ಧ ಕುಡಿಯುವ ನೀರಿಲ್ಲದೆ ಜನರು ಮಾರಣಾಂತಿಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಉದ್ಯೋಗವಿಲ್ಲದೆ ಕೃಷಿ ಕಾರ್ಮಿಕರು ವಲಸೆ ಹೋಗುತ್ತಿದ್ದಾರೆ. ರೈತರು ಸಾಲದ ಸುಳಿಗೆ ಸಿಲುಕಿ ಕಂಗೆಟ್ಟಿದ್ದಾರೆ’ ಎಂದು ಹೇಳಿದರು.‘ಶಾಶ್ವತ ನೀರಾವರಿ ವಿಚಾರದಲ್ಲಿ ಶಾಸಕರು ಸರ್ಕಾರ ಪ್ರಸ್ತಾಪಿಸಿರುವ ಯೋಜನೆಗಳ ಕುರಿತು ವಿಧಾನಸಭೆ ಅಧಿವೇಶನದಲ್ಲಿ ವಿಶೇಷ ಚರ್ಚೆ ಮಾಡಿ, ಸರ್ಕಾರದಿಂದ ಸಮರ್ಪಕ ಮತ್ತು ನಿಖರವಾದ ಮಾಹಿತಿಗಳನ್ನು ಪಡೆದು ಜನಸಾಮಾನ್ಯರಲ್ಲಿರುವ ಗೊಂದಲಗಳನ್ನು ನಿವಾರಣೆ ಮಾಡಬೇಕು’ ಎಂದು ಒತ್ತಾಯಿಸಿದರು.

‘ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿರುವ ಕೃಷಿ ಯೋಗ್ಯ ಭೂಮಿ ಎಷ್ಟು? ಈ ಜಿಲ್ಲೆಗಳ ಕೆರೆಗಳನ್ನು ಭರ್ತಿ ಮಾಡಿ ಅಂತರ್ಜಲ ಮರುಪೂರಣಕ್ಕೆ ಅಗತ್ಯವಾದ ನೀರಿನ ಪ್ರಮಾಣವೆಷ್ಟು? ಜನ-ಜಾನುವಾರುಗಳಿಗೆ ಶುದ್ಧ ಕುಡಿಯುವ ನೀರು ಒದಗಿಸಲು ಮತ್ತು ವ್ಯವಸಾಯ ಯೋಗ್ಯ ಭೂಮಿಗೆ ನೀರಿನ ಭದ್ರತೆ ಒದಗಿಸಲು ಬೇಕಾಗುವ ನೀರಿನ ಪ್ರಮಾಣವೆಷ್ಟು? ಹೀಗೆ ಅನೇಕ ಪ್ರಶ್ನೆಗಳಿಗೆ ಸರ್ಕಾರದಿಂದ ಉತ್ತರ ಬೇಕಿದೆ’ ಎಂದು ತಿಳಿಸಿದರು.‘ಅನೇಕ ಆಯಾಮಗಳಲ್ಲಿ ನೀರಾವರಿ ಚಳವಳಿಗಳನ್ನು ನಡೆಸಿ, ಬೇಸತ್ತ ಬರಪೀಡಿತ ಈ ಜಿಲ್ಲೆಗಳ ಜನ ಸಾಮಾನ್ಯರು, ವಿವಿಧ  ಸಂಘಟನೆಗಳ ನೇತೃತ್ವದಲ್ಲಿ ಕಳೆದ ವರ್ಷದ ಮಾರ್ಚ್‌ನಲ್ಲಿ ವಿಧಾನಸೌಧಕ್ಕೆ ನಡೆಸಿದ ಟ್ರ್ಯಾಕ್ಟರ್ ಚಳವಳಿ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹ ಕಚೇರಿಯಲ್ಲಿ ನಡೆಸಿದ ವಿಶೇಷ ಸಭೆಯಲ್ಲಿ ಕೊಟ್ಟ ಭರವಸೆಗಳು ಈವರೆಗೆ ಏಕೆ ಪ್ರಗತಿ ಕಂಡಿಲ್ಲ ಎನ್ನುವ ಪ್ರಶ್ನೆಗಳಿಗೆ ಶಾಸಕರು ಸರ್ಕಾರದಿಂದ ಉತ್ತರ ಪಡೆಯಬೇಕು’ ಎಂದರು.

‘ಬೇರೆ ಬೇರೆ ಮೂಲಗಳಿಂದ ದೊರಕಬಹುದಾದ ಪರ್ಯಾಯ ನೀರಿನ ಲಭ್ಯತೆಯ ಬಗ್ಗೆ ವಿವರವಾದ ಅಧ್ಯಯನ ನಡೆಸಿ ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳ ಬರಪೀಡಿತ ಪ್ರದೇಶಗಳಿಗೆ ಶಾಶ್ವತ ನೀರಾವರಿ ಯೋಜನೆ ಕಲ್ಪಿಸುವ ಬಗ್ಗೆ 6 ತಿಂಗಳೊಳಗೆ ವರದಿ ಪಡೆಯಲಾಗುತ್ತದೆ ಎಂದು ಮುಖ್ಯಮಂತ್ರಿ ಅವರೇ ಕಾಲಮಿತಿ ನಿಗದಿಪಡಿಸಿದ್ದರು. ಆದರೆ ಈವರೆಗೆ ತಜ್ಞರ ಸಮಿತಿಯು ಯಾವುದೇ ವರದಿ ನೀಡಿಲ್ಲ. ಇದಕ್ಕೆ ಕಾರಣವೇನು’ ಎಂದು ಪ್ರಶ್ನಿಸಿದರು.‘ಬರಪೀಡಿತ ಜಿಲ್ಲೆಗಳ ನೀರಿನ ಬವಣೆ ನೀಗಬೇಕಾದರೆ ರಾಜ್ಯದ ಜಲ ಸಂಪನ್ಮೂಲದ ಸಮಗ್ರವಾದ ವೈಜ್ಞಾನಿಕ ಅಧ್ಯಯನ ನಡೆಸುವ ಅಗತ್ಯವಿದೆ. ನೆರೆ ಪ್ರದೇಶಗಳ ಪ್ರವಾಹದ ನೀರನ್ನು ಬರಪೀಡಿತ ಪ್ರದೇಶಗಳಿಗೆ ಹರಿಸಬೇಕು.  ಬರಪೀಡಿತ ಪ್ರದೇಶವನ್ನು ಅಂತರ್ಜಲ ಸಂಕಷ್ಟದ ವಲಯವೆಂದು ಪರಿಗಣಿಸಿ ವಿಶೇಷ ಪ್ಯಾಕೇಜ್‌ನೊಂದಿಗೆ ಅಂತರ್ಜಲ ಅಭಿವೃದ್ಧಿಗಾಗಿ ಕಾಲುವೆ-. ರಾಜಕಾಲುವೆ, ಕೆರೆ- ಕುಂಟೆಗಳ ಪುನಶ್ಚೇತನಕ್ಕೆ ಒತ್ತು ನೀಡಬೇಕು’ ಎಂದು ಪ್ರತಿಪಾದಿಸಿದರು.‘ಬಯಲು ಸೀಮೆ ಜಿಲ್ಲೆಗಳಲ್ಲಿ ಪರಿಣಾಮಕಾರಿಯಾಗಿ ಜಲ ಮರುಪೂರಣ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಬೇಕು. ಕಲ್ಲು ಮತ್ತು ಮರಳು ಗಣಿಗಾರಿಕೆ ನಿಷೇಧಿಸಬೇಕು. ಅಂತರ್ಜಲಕ್ಕೆ ಮಾರಕವಾದ ನೀಲಗಿರಿ ಮತ್ತು ಅಕೇಶಿಯಾ ಮರಗಳನ್ನು ತೆರವುಗೊಳಿಸಲು ಸರ್ಕಾರ ಮುಂದಾಗಬೇಕು’ ಎಂದು ಆಗ್ರಹಿಸಿದರು. ಸಮಿತಿಯ ಪದಾಧಿಕಾರಿಗಳಾದ ಮಳ್ಳೂರು ಹರೀಶ್, ಲಕ್ಷ್ಮಯ್ಯ, ಅಗಲಗುರ್ಕಿ ಚಲಪತಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry