ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ ಪಕ್ಷದ ಸಹವಾಸವೇ ಬೇಡ

ಜೆಡಿಎಸ್‌ ಕಾರ್ಯಕರ್ತರ ಸಭೆಯಲ್ಲಿ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟಶಿವಾರೆಡ್ಡಿ ಅನಿಸಿಕೆ
Last Updated 1 ಜೂನ್ 2017, 8:12 IST
ಅಕ್ಷರ ಗಾತ್ರ

ಕೋಲಾರ: ‘ರಾಜ್ಯದಲ್ಲಿ ಈ ಹಿಂದೆ ಆಡಳಿತ ನಡೆಸಿದ ಬಿಜೆಪಿ ಹಾಗೂ ಈಗಿನ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಮತ್ತು ರೈತ ವಿರೋಧಿ ನೀತಿ ಕಂಡು ಜನ ಜೆಡಿಎಸ್‌ನ ಎಚ್‌.ಡಿ. ಕುಮಾರಸ್ವಾಮಿ ಅವರ ಆಡಳಿತವೇ ಚೆನ್ನಾಗಿತ್ತು ಎಂಬ ನಿರ್ಧಾರಕ್ಕೆ ಬಂದಿದ್ದಾರೆ’ ಎಂದು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.

ತಾಲ್ಲೂಕಿನ ಮೂರಂಡಹಳ್ಳಿ ಸಮೀಪ ಬುಧವಾರ ನಡೆದ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ‘ಕುಮಾರಸ್ವಾಮಿ ಅವರು ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಬೇಕು. ಈ ನಿಟ್ಟಿನಲ್ಲಿ ಜನರ ವಿಶ್ವಾಸ ಗಳಿಸುವ ಜವಾಬ್ದಾರಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಮೇಲಿದೆ’ ಎಂದರು.

‘ಹಿಂದಿನ ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿ, ಸಚಿವರು, ಶಾಸಕರು ಜೈಲಿಗೆ ಹೋಗಿದ್ದರು. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ. ಈ ಎರಡೂ ಪಕ್ಷಗಳ ದುರಾಡಳಿತದಿಂದ ಬೇಸತ್ತಿರುವ ಜನ ಕುಮಾರಸ್ವಾಮಿ ಅವರಿಗೆ ಮತ್ತೆ ಯಾಕೆ ಅಧಿಕಾರ ನೀಡಬಾರದು ಎಂದು ಚಿಂತಿಸುತ್ತಿದ್ದಾರೆ’ ಎಂದು ತಿಳಿಸಿದರು.

‘ಶ್ರೀನಿವಾಸಪುರ ಕ್ಷೇತ್ರದಿಂದ 9ನೇ ಬಾರಿಗೆ ಸ್ಪರ್ಧಿಸುತ್ತಿದ್ದೇನೆ. ನನ್ನ ಭವಿಷ್ಯ ತಿಳಿದಿದೆ. ಕಾಂಗ್ರೆಸ್- ಜೆಡಿಎಸ್ ನಡುವೆ ಹೊಂದಾಣಿಕೆಯಾಗಿದೆ ಎಂದು ಕೆಲವರು ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಸಹವಾಸವೇ ಬೇಡ. ನಮಗೆ ದೇವರ ಆಶೀರ್ವಾದವಿದೆ. ಈ ಬಾರಿ ಅತಿ ಹೆಚ್ಚು ಮತಗಳ ಅಂತರದಿಂದ ಗೆಲ್ಲುತ್ತೇನೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಪಕ್ಷದ ಜಿಲ್ಲಾ, ತಾಲ್ಲೂಕು ಹಾಗೂ ಬೂತ್ ಮಟ್ಟದ ಘಟಕಗಳಿಗೆ ಪದಾಧಿಕಾರಿಗಳನ್ನು ಪಾರದರ್ಶಕವಾಗಿ ಆಯ್ಕೆ ಮಾಡಿ ವರಿಷ್ಠರ ಒಪ್ಪಿಗೆ ಪಡೆದ ನಂತರ ಜಿಲ್ಲಾ ಮಟ್ಟದ ಸಮಾವೇಶದಲ್ಲಿ ಪದಾಧಿಕಾರಿಗಳ ಪಟ್ಟಿ ಪ್ರಕಟಿಸಲಾಗುತ್ತದೆ’ ಎಂದು ಪಕ್ಷದ ವೀಕ್ಷಕ ಲೋಕೇಶ್ ವಿವರಿಸಿದರು.

ಅಧಿಕಾರ ಕೈತಪ್ಪಿದೆ: ನಗರಸಭೆ ಸದಸ್ಯ ಬಿ.ಎಂ. ಮುಬಾರಕ್ ಮಾತನಾಡಿ, ‘ಕೋಲಾರ ನಗರಸಭೆ ಮತ್ತು ತಾಲ್ಲೂಕು ಪಂಚಾಯಿತಿಯಲ್ಲಿ ಅಧಿಕಾರ ನಡೆಸಿ ಎಂದು ಜನ ಪಕ್ಷಕ್ಕೆ ಆಶೀರ್ವಾದ ಮಾಡಿದರು. ಆದರೆ, ನಮ್ಮ ವೈಫಲ್ಯ ಹಾಗೂ ಬೇರೆ ಕಾರಣಗಳಿಂದ ನಗರಸಭೆ ಮತ್ತು ತಾಲ್ಲೂಕು ಪಂಚಾಯಿತಿಯಲ್ಲಿ ಅಧಿಕಾರ ಕೈತಪ್ಪಿದೆ. ಈ ಬಗ್ಗೆ ಹೆಚ್ಚು ಮಾತನಾಡಲು ನನಗೆ ನೈತಿಕತೆ ಇಲ್ಲ. ನಗರಸಭೆಯಲ್ಲಿ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರುವವರೆಗೆ ವೇದಿಕೆಯಲ್ಲಿ ಮಾತನಾಡಲ್ಲ ಎಂದು ಬಾಯಿಗೆ ಬೀಗ ಹಾಕಿಕೊಂಡಿದ್ದೇನೆ’ ಎಂದರು.

‘ಬೇರೆ ಜಿಲ್ಲೆಗಳ ನಗರಸಭೆಗಳಲ್ಲಿ ಪಕ್ಷದ ವಿಪ್ ಉಲ್ಲಂಘಿಸಿದವರು ಸದಸ್ಯತ್ವ ಕಳೆದುಕೊಂಡಿದ್ದಾರೆ. ಆದರೆ, ಕೋಲಾರ ನಗರಸಭೆಯಲ್ಲಿ ಪಕ್ಷದ ವಿಪ್‌ ಉಲ್ಲಂಘಿಸಿದವರು ಸದಸ್ಯರಾಗಿ ರಾಜಾರೋಷವಾಗಿ ಓಡಾಡುತ್ತಿದ್ದಾರೆ. ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷರು ಇಂತಹ ಪಕ್ಷದ್ರೋಹಿಗಳ ವಿರುದ್ಧ ಕ್ರಮ ಜರುಗಿಸಬೇಕಿತ್ತು’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೋಲಾರಕ್ಕೆ ಭೇಟಿ: ‘ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರು ಜೂನ್‌ 8ರಂದು ಕೋಲಾರಕ್ಕೆ ಭೇಟಿ ನೀಡುತ್ತಿದ್ದಾರೆ. ಅವರನ್ನು ತಾಲ್ಲೂಕಿನ ಗಡಿ ಭಾಗದ ರಾಮಸಂದ್ರದಿಂದ ಬೆಳ್ಳಿ ಪಲ್ಲಕ್ಕಿ ಅಥವಾ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ 2,000 ಬೈಕ್‌ ರ್‌್ಯಾಲಿಯೊಂದಿಗೆ ನಗರಕ್ಕೆ ಸ್ವಾಗತಿಸಲಾಗುತ್ತದೆ’ ಎಂದು ಸಿ. ಬೈರೇಗೌಡ ತಾಂತ್ರಿಕ ಕಾಲೇಜಿನ ಕಾರ್ಯದರ್ಶಿ ಕೃಷ್ಣಾರೆಡ್ಡಿ ಹೇಳಿದರು.

ಮಾಜಿ ಶಾಸಕ ಎಂ.ಭಕ್ತವತ್ಸಲಂ, ಜಿಲ್ಲಾ ಪಂಚಾಯಿತಿ ಸದಸ್ಯ ಆರ್. ನಾರಾಯಣಸ್ವಾಮಿ, ಜೆಡಿಎಸ್ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ನಟರಾಜ್, ತಾಲ್ಲೂಕು ಘಟಕದ ಅಧ್ಯಕ್ಷ ಗೋಪಾಲಪ್ಪ, ಕೋಚಿಮುಲ್ ನಿರ್ದೇಶಕ ರಾಮಕೃಷ್ಣೇಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಮಂಗಮ್ಮ ಮುನಿಸ್ವಾಮಿ, ಪಕ್ಷದ ಮುಖಂಡರಾದ ಜಿ. ರಾಮರಾಜು, ರಾಮು, ಅನ್ವರ್‌ಷಾಷಾ ಸಭೆಯಲ್ಲಿ ಪಾಲ್ಗೊಂಡಿದ್ದರು.

****
ಕ್ರೈಸ್ತರ ಬೆಂಬಲ: ಕಾಂಗ್ರೆಸ್‌ಗೆ ಭ್ರಮೆ
‘ಕ್ರೈಸ್ತ ಸಮುದಾಯ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತದೆ ಎಂಬ ಭ್ರಮೆ ಆ ಪಕ್ಷಕ್ಕಿದೆ. ಆದರೆ, ಕಾಂಗ್ರೆಸ್ ಮುಕ್ತ ಕ್ರೈಸ್ತ ಸಮುದಾಯ ನಿರ್ಮಾಣ ಮಾಡುವುದು ನನ್ನ ಗುರಿ. ಕುಮಾರಸ್ವಾಮಿ ಅವರು ರಾಜಕೀಯ ಪಕ್ಷದಲ್ಲಿ ದೇಶದಲ್ಲೇ ಪ್ರಥಮ ಬಾರಿಗೆ ಕ್ರಿಶ್ಚಿಯನ್ ಘಟಕ ಸ್ಥಾಪಿಸಿ ಸಮುದಾಯ ಸಂಘಟನೆಯ ಜವಾಬ್ದಾರಿ ವಹಿಸಿದ್ದಾರೆ. ಈ ದಿಸೆಯಲ್ಲಿ ರಾಜ್ಯದೆಲ್ಲೆಡೆ ಪ್ರವಾಸ ಮಾಡುತ್ತಿದ್ದೇನೆ’ ಎಂದು ರಾಜ್ಯ ಜೆಡಿಎಸ್ ಕ್ರಿಶ್ಚಿಯನ್ ಘಟಕದ ಅಧ್ಯಕ್ಷ ವಿಲ್ಸನ್‌ ರೆಡ್ಡಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT